ದೈವನಿಂದೆ ಮುಂದೆ ಮುಂದೆ, ಮಾನವತೆ ಹಿಂದೆ ಹಿಂದೆ..

Column F 1
Published on
ಭಾರತ ಸಂಜಾತ ಬ್ರಿಟಿಷ್ ಲೇಖಕ ಸಲ್ಮಾನ್ ರಶ್ದಿಯವರ ಖಚಠಿಚ್ಞಜ್ಚಿ ್ಖ್ಟಛಿಠ ಕಾದಂಬರಿ 1988ರಲ್ಲಿ ಭಾರತದಲ್ಲಿ ಬಹಿಷ್ಕಾರಕ್ಕೊಳಗಾದಾಗ ದೊಡ್ಡದಾಗಿ ಕೇಳಿಬಂದ ಪದ ‘ದೈವನಿಂದೆ.’ ಮೂವತ್ತನಾಲ್ಕು ವರ್ಷಗಳ ನಂತರ ಅದು ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ ಆಂಗ್ಲ ಸುದ್ದಿವಾಹಿನಿಯಲ್ಲಿ ಪ್ರವಾದಿ ಮಹಮದ್ ಬಗ್ಗೆ ಆಡಿದ ಮಾತುಗಳಿಂದಾಗಿ ಮತ್ತೊಮ್ಮೆ ಸುದ್ದಿಯಾಗುತ್ತಿದೆ. ನಮ್ಮಲ್ಲಿನ ಈ ಎರಡು ಪ್ರಕರಣಗಳ ನಡುವಿನ ಅವಧಿಯಲ್ಲಿ ಅದು ಯೂರೋಪ್​ನಲ್ಲಿ ಇನ್ನಷ್ಟು ದೊಡ್ಡದಾಗಿ ಕೇಳಿಬಂದು ರಕ್ತಪಾತಕ್ಕೂ ಕಾರಣವಾಗಿದೆ. ಅಷ್ಟಕ್ಕೂ ಈ ದೈವನಿಂದೆ ಅನ್ನುವುದಾದರೂ ಏನು? ಅದೇಕೆ ಒಂದಷ್ಟು ಜನರನ್ನು ತೀವ್ರವಾಗಿ ಪ್ರಚೋದಿಸುತ್ತದೆ? ದೈವನಿಂದೆ ಎನ್ನುವುದು ಮೂಲತಃ ಪಶ್ಚಿಮ ಏಷಿಯನ್ ಪರಿಕಲ್ಪನೆ. ಆ ಪ್ರದೇಶದಲ್ಲಿ ಜನ್ಮತಾಳಿದ ಯೆಹೂದಿ, ಕ್ರಿಶ್ಚಿಯನ್ ಮತ್ತು ಇಸ್ಲಾಂ ಧರ್ಮಗಳಲ್ಲಿ ಪ್ರಚಲಿತವಿರುವ ಈ ಪರಿಕಲ್ಪನೆಯ ವ್ಯಾಪ್ತಿಯಲ್ಲಿ ದೈವ, ಧಾರ್ವಿುಕ ಮಹಾ ಪುರುಷರು/ಸ್ತ್ರೀಯರು, ಧಾರ್ವಿುಕ ನಂಬಿಕೆಗಳು, ಆಚರಣೆಗಳು ಮತ್ತು ಸಂಕೇತಗಳನ್ನು ಮಾತು, ಬರಹ ಮತ್ತು ಚಿತ್ರಗಳ ಮೂಲಕ ಅವಮಾನಿಸುವುದನ್ನು ಒಳಗೊಂಡಿದೆ. ಈ ದೈವನಿಂದೆಯ ಕೃತ್ಯಗಳಿಗೆ ಶಿಕ್ಷೆಯೂ ಇದೆ. ಆದರೆ ಶಿಕ್ಷೆಯ ಸ್ವರೂಪ ಮತ್ತು ಪ್ರಮಾಣ ವಿಭಿನ್ನ ಧರ್ಮಗಳಲ್ಲಿ ವಿಭಿನ್ನವಾಗಿಯೇ ಇದೆ. ಗಮನಿಸಬೇಕಾದ್ದೆಂದರೆ, ದೈವನಿಂದೆಯ ನಿಯಮಗಳನ್ನು ಈ ಪಶ್ಚಿಮ ಏಷಿಯನ್ ಧರ್ಮಗಳ ಅನುಯಾಯಿಗಳು ತಂತಮ್ಮ ಧರ್ಮಗಳಿಗೆ ಮಾತ್ರ ಅನ್ವಯಿಸಿಕೊಳ್ಳುತ್ತಾರೆ. ಹೀಗಾಗಿ ಆ ಧರ್ಮಗಳ, ಮುಖ್ಯವಾಗಿ ಕ್ರಿಶ್ಚಿಯನ್ ಮತ್ತು ಇಸ್ಲಾಂ ಧರ್ವನುಯಾಯಿಗಳು ಪರಸ್ಪರರ ವಿರುದ್ಧ ದೈವನಿಂದೆ ಎಸಗಲು ಹಿಂಜರಿಯುವುದಿಲ್ಲ. ಅಲ್ಲದೇ ಜಗತ್ತಿನ ಇತರ ಧರ್ಮಗಳ ವಿರುದ್ಧವೂ ಉತ್ಸಾಹ ದಿಂದಲೇ ಎಸಗುತ್ತಾರೆ. ‘ಇತರರು ನಿನಗೆ ಏನು ಮಾಡಬಾರದೆಂದು ನೀನು ಬಯಸುತ್ತೀಯೋ ಅದನ್ನು ಇತರರಿಗೆ ನೀನು ಮಾಡಬೇಡ’ ಎಂದು ಮಹಾಪುರುಷ ಜೀಸಸ್ ಕ್ರೖೆಸ್ಥ್ ಹೇಳಿದರೂ ಅದನ್ನು ಅವರ ಅನುಯಾಯಿಗಳಾಗಲೀ, ನಂತರ ಬಂದ ಮಹಮದ್​ರ ಅನುಯಾಯಿಗಳಾಗಲೀ ಪಾಲಿಸದಿರುವುದನ್ನು ಜಗತ್ತು ನೋಡುತ್ತಲೇ ಇದೆ.

ಪೌರ್ವಾತ್ಯ ಧರ್ಮಗಳಾದ ಹಿಂದೂ, ಬೌದ್ಧ, ಜೈನ, ಶಿಂತೋ, ಸಿಖ್ ಮುಂತಾದ ಧರ್ಮಗಳಲ್ಲಿ ಈ ದೈವನಿಂದೆಯ ಪರಿಕಲ್ಪನೆ ಕಾಣಸಿಗದು. ಹೀಗಾಗಿಯೇ ಈ ಧರ್ಮಗಳ ಅನುಯಾಯಿಗಳು ತಮ್ಮ ದೈವಗಳು, ಧಾರ್ವಿುಕ ವ್ಯಕ್ತಿಗಳು ಹಾಗೂ ನಂಬಿಕೆಗಳನ್ನು ಗೌರವಿಸಿ ಪೂಜಿಸುವಂತೆಯೇ ಅವುಗಳನ್ನು ಟೀಕಿಸುತ್ತಾರೆ, ವಿಮಶಿಸುತ್ತಾರೆ. ಇದಾವುದೂ ದೈವನಿಂದೆ ಎನಿಸಿಕೊಳ್ಳುವುದಿಲ್ಲ. ಟೀಕಾಕಾರರಿಗೂ ಅವಕಾಶ ನೀಡುತ್ತಾರೆ. ಅಷ್ಟೇ ಅಲ್ಲ, ತಮ್ಮ ಸುತ್ತಲಿನ ಹಾಗೂ ಪಶ್ಚಿಮ ಏಷಿಯನ್ ಧರ್ಮಗಳ ದೈವಗಳಿಗೂ ತಮ್ಮ ದೈವಗಳಷ್ಟೇ ಮಹತ್ವ, ಗೌರವ ನೀಡುತ್ತಾರೆ. ಈ ಪರಂಪರಾಗತ ಸ್ವಭಾವ ಹಾಗೂ ನೀತಿನಡವಳಿಕೆಗಳೇ ಪೌರ್ವಾತ್ಯ ಸಮಾಜಗಳಲ್ಲಿ ಬಹುತ್ವ ಪಸರಿಸಲು, ಬೆಳೆಯಲು ಕಾರಣವಾಗಿದೆ. ಕ್ರಿಶ್ಚಿಯಾನಿಟಿ ಹಾಗೂ ಇಸ್ಲಾಂಗೆ ಮೊದಲೇ ಆ ಪ್ರದೇಶದಲ್ಲಿ ಮುಖ್ಯವಾಗಿ ಇಂದಿನ ಇರಾನ್​ನಲ್ಲಿ ವ್ಯಾಪಕವಾಗಿ ಪ್ರಚಲಿತವಿದ್ದ ಝೊರಾಷ್ಟ್ರಿಯನ್ ಅಥವಾ ಪಾರ್ಸಿ ಧರ್ಮವೂ ಇಂತಹದೇ ನೀತಿನಡವಳಿಕೆಗಳನ್ನು ಹೊಂದಿದ್ದನ್ನು ನೋಡಬಹುದು. ಈ ಎಲ್ಲಾ ಧರ್ಮಗಳು ಆಚರಣೆಯಲ್ಲಿ ಬದಲಾವಣೆ ತೋರದಿದ್ದರೂ ಪರಸ್ಪರರ ದೈವಗಳನ್ನು ತಮ್ಮ ದೈವಗಳೆಂದೇ ಸ್ವೀಕರಿಸಿ ಪೂಜಾರ್ಹ ಸ್ಥಾನದಲ್ಲಿಸಿಕೊಂಡಿವೆ. ಒಂದು ಉದಾಹರಣೆಯೆಂದರೆ ಪಶ್ಚಿಮದ ಪರ್ಷಿಯಾದ ಅಹುರ ಮಜ್ದನಿಂದ ಹಿಡಿದು ಪೂರ್ವದ ಥಾಯ್ಲ್ಯಾಂಡ್​ನ ನಕಲೆಡ್ ಮತ್ತು ಉತ್ತರದ ಮಂಗೋಲಿಯಾದ ಕಾಂಗಿನೇನ್​ನಿಂದ ಹಿಡಿದು ದಕ್ಷಿಣದ ಶ್ರೀಲಂಕಾದ ಗಣೇಶ/ಪಿಳ್ಳೈಯಾರ್ ಎಲ್ಲರೂ ಒಬ್ಬನೇ! ಕ್ರಿಶ್ಚಿಯಾನಿಟಿ ಮತ್ತು ಇಸ್ಲಾಂಗಳಲ್ಲಿ ದೈವನಿಂದೆಯ ಪರಿಕಲ್ಪನೆಗೆ ಧಾರ್ವಿುಕ ಆಧಾರವಿದೆಯೇ ಎಂದು ಹುಡುಕಹೊರಟರೆ ಸಿಗುವುದು ಬೈಬಲ್​ನ ಒಂದು ಉಕ್ತಿ. ಮಾರ್ಕ್ 3:29 ಹೇಳುವುದು ‘ಮನುಷ್ಯನ ಮಕ್ಕಳ ಎಲ್ಲ ಪಾಪಗಳನ್ನೂ ಮನ್ನಿಸಲಾಗುವುದು, ಆದರೆ ಪವಿತ್ರಾತ್ಮನ ಬಗೆಗಿನ ನಿಂದನೆಗಳಿಗೆ ಕ್ಷಮೆಯಿಲ್ಲ.’ ಈ ಬಗೆಯ ಬೈಬಲ್ ಸೂಕ್ತಿಗಳನ್ನು ವಿವಿಧ ಪ್ರಭುತ್ವಗಳು ಶಿಕ್ಷಾರ್ಹವೆಂದು ತೀರ್ವನಿಸಿ ಶಿಕ್ಷೆಯ ಪರಿಮಾಣವನ್ನೂ ನಿರ್ಧರಿಸಿ ಕಾನೂನುಕಟ್ಟಳೆಗಳನ್ನೂ ಜಾರಿಗೆ ತಂದದ್ದನ್ನು ಇತಿಹಾಸ ದಾಖಲಿಸಿದೆ. ಈ ಕುರಿತಾಗಿ ಆಧುನಿಕ ಯುಗದಲ್ಲೇ ಕಾಣಸಿಗುವ ಕೆಲವು ಉದಾಹರಣೆಗಳನ್ನು ನೋಡೋಣ.

ಬ್ರಿಟನ್​ನಲ್ಲಿ 1661 ಮತ್ತು 1695ರಲ್ಲಿ ದೈವನಿಂದೆಯ ವಿರುದ್ಧದ ಕಾನೂನುಗಳು ಜಾರಿಯಾಗಿದ್ದವು ಮತ್ತು ದೈವನಿಂದೆ ಎಸಗಿದವರಿಗೆ ಮರಣದಂಡನೆ ವಿಧಿಸಲಾಗುತ್ತಿತ್ತು. ಅಂತಹ ಶಿಕ್ಷೆಗೆ ಗುರಿಯಾದ ಕೊನೆಯ ವ್ಯಕ್ತಿ ಇಪ್ಪತ್ತು ವರ್ಷದ ಥಾಮಸ್ ಆಯ್ಕೆನ್​ಹೆಡ್, 1697ರಲ್ಲಿ. ಅದೇ ವರ್ಷ ಅದೇ ಬ್ರಿಟನ್​ನ ವಸಾಹತುವಾಗಿದ್ದ ಮಸಾಚ್ಯುಸೆಟ್ಸ್ ಹೊರಡಿಸಿದ ಕಾಯಿದೆಯೊಂದು ದೈವನಿಂದೆ ಹಾಗೂ ನಾಸ್ತಿಕತೆಯನ್ನು ಅಪರಾಧವೆಂದು ಪರಿಗಣಿಸುತ್ತದೆ. ಕಾದ ಲೋಹದ ಸರಳನ್ನು ನಾಲಿಗೆಗೆ ಚುಚ್ಚುವುದು ಮತ್ತು ಹಗ್ಗದಿಂದ ಕೊರಳನ್ನು ಬಿಗಿಯುವುದು ಆ ‘ಅಪರಾಧ’ಕ್ಕೆ ಶಿಕ್ಷೆಗಳು. ಇಂತಹುದೇ ಕಾನೂನುಗಳು ಮತ್ತು ಶಿಕ್ಷೆಗಳು ಯೂರೋಪ್ ಮತ್ತು ಅಮೆರಿಕಾದಾದ್ಯಂತ ಪ್ರಚಲಿತವಿದ್ದವು. ಮಧ್ಯ ಯೂರೋಪ್​ನಲ್ಲಂತೂ ಮರಣದಂಡನೆ ಸಾಮಾನ್ಯವಾಗಿತ್ತು.

ಆದರೆ ಪಶ್ಚಿಮ ಜಗತ್ತಿನಲ್ಲಿ ಶಿಕ್ಷಣ ಮತ್ತು ಔದ್ಯೋಗೀಕರಣ ದೊಂದಿಗೆ ಪ್ರಜಾಪ್ರಭುತ್ವೀಯ ಮೌಲ್ಯಗಳು ವಿಕಸಿಸತೊಡಗಿದಂತೆ ಈ ಕಾನೂನುಗಳು ಮರೆಯಾಗ ತೊಡಗಿದವು. ಫ್ರಾನ್ಸ್ ದೈವನಿಂದೆ ಕಾನೂನುಗಳನ್ನು 2016ರಲ್ಲಿ ರದ್ದು ಮಾಡಿದರೆ ಡೆನ್​ವಾರ್ಕ್ 334 ವರ್ಷಗಳಿಂದ ಜಾರಿಯಲ್ಲಿದ್ದ ದೈವನಿಂದೆ ಕಾನೂನುಗಳನ್ನು 2017ರಲ್ಲಿ ರದ್ದುಮಾಡಿತು. ಕೆನಡಾ, ಐರ್ಲೆಂಡ್​ನಲ್ಲಿ ಡಿಸೆಂಬರ್ 2018ರಲ್ಲಿ ರದ್ದು ಮಾಡಲಾಯಿತು. ಜರ್ಮನಿಯಲ್ಲಿ ಜೈಲು ಶಿಕ್ಷೆ ಇದ್ದರೆ ಫಿನ್​ಲ್ಯಾಂಡ್​ನಲ್ಲಿ ಪುಟ್ಟ ಜೈಲುವಾಸ ಅಥವಾ ದಂಡ. ಬ್ರೆಜಿಲ್​ನಲ್ಲಿ ಒಂದು ತಿಂಗಳ ಕಾರಾವಾಸ. ಇಟಲಿಯಲ್ಲಂತೂ ದಂಡ ಮಾತ್ರ. ಆಸ್ತ್ರೇಲಿಯಾದಲ್ಲಿ ದೈವನಿಂದೆಯ ಕಾನೂನಿನಡಿಯಲ್ಲಿ ಕೊನೆಯ ಶಿಕ್ಷೆಗೊಳಗಾದದ್ದು 1919ರಲ್ಲಿ. ಈಗಲ್ಲಿ ಕೆಲವು ರಾಜ್ಯಗಳಲ್ಲಿ ಮಾತ್ರ ದೈವನಿಂದೆಯ ಕಾನೂನುಗಳಿವೆ. ಇನ್ನು ಇಸ್ಲಾಂನತ್ತ ಹೊರಳೋಣ. ಪ್ರವಾದಿಯವರ ಸಮಕಾಲೀನನೇ ಆದ ನದ್ರ ಇಬ್ನ್ ಅಲ್-ಹಾರಿತ್ ಎಂಬಾತ ಪ್ರವಾದಿಯವರು ಮತ್ತು ಇಸ್ಲಾಂ ಅನ್ನು ಅವಹೇಳನ ಮಾಡಿದ ಅಪರಾಧಕ್ಕಾಗಿ ಶಿರಚ್ಛೇದಕ್ಕೊಳಗಾದದ್ದು ಕುರಾನ್​ನ ಸುರಾಹ್ ಅಲ್ ತೌಬಾದಲ್ಲಿದೆ. ಕುರಾನ್​ನಲ್ಲಿನ ಇಂತಹ ವಿವರಗಳೇ ಮುಂದೆ ಇಸ್ಲಾಮಿಕ್ ಪ್ರಭುತ್ವಗಳು ಮತ್ತು ಧರ್ಮಗುರುಗಳು ದೈವನಿಂದೆಯ ಕಾನೂನುಗಳು ಮತ್ತು ನಿಯಮಗಳನ್ನು ರೂಪಿಸಲು ಕಾರಣವಾದವು. ಆ ಪ್ರಕ್ರಿಯೆ ಇನ್ನೂ ನಿಂತಿಲ್ಲ. ಬಹುತೇಕ ಎಲ್ಲ ಮುಸ್ಲಿಂ ದೇಶಗಳಲ್ಲಿ ಈ ಬಗೆಯ ಕಾನೂನುಗಳಿವೆ ಮತ್ತು ಕೇವಲ ಜೈಲು ಶಿಕ್ಷೆ ವಿಧಿಸುವ ಅಲ್ಜೀರಿಯಾದ ಹೊರತಾಗಿ ಉಳಿದೆಡೆ ಮರಣದಂಡನೆಯ ಶಿಕ್ಷೆಯಿದೆ. ಹೆಚ್ಚಿನ ದೇಶಗಳಲ್ಲಿ ಸರ್ಕಾರ ಮತ್ತು ನ್ಯಾಯಾಲಯದ ಬದಲಾಗಿ ಉದ್ರಿಕ್ತ ಜನರೇ ದೈವನಿಂದೆಯ ಆರೋಪದ ಮೇಲೆ ಹೆಣ್ಣುಗಂಡೆಂಬ ಭೇದವಿಲ್ಲದೇ ವ್ಯಕ್ತಿಗಳನ್ನು ಕೊಲ್ಲುತ್ತಾರೆ. ಈ ಪ್ರವೃತ್ತಿಗೆ, ನೈಜೀರಿಯಾದಲ್ಲಿ ಇದೇ ಮೇ ತಿಂಗಳಲ್ಲಿ ಡೆಬೋರಾ ಸ್ಯಾಮ್ಯುಯೆಲ್ ಎಂಬ ಕ್ರಿಶ್ಚಿಯನ್ ಶಾಲಾಬಾಲಕಿಯನ್ನು ಆಕೆಯ ಮುಸ್ಲಿಂ ಸಹಪಾಠಿಗಳೇ ಕೊಂದದ್ದನ್ನು ಒಂದು ಉದಾಹರಣೆಯಾಗಿ ತೆಗೆದುಕೊಳ್ಳಬಹುದು. ದೈವನಿಂದೆಯ ಬಗ್ಗೆ ಮಾತಾಡುವಾಗ ಪಾಕಿಸ್ತಾನವನ್ನು ಮರೆಯಲಾಗುವುದಿಲ್ಲ. ತನ್ನನ್ನು ತಾನು ‘ಇಸ್ಲಾಂನ ಸೈನಿಕ’ ಎಂದು ಕರೆದುಕೊಂಡ ಸೇನಾ ಸರ್ವಾಧಿಕಾರಿ ಜಿಯಾ-ಉಲ್-ಹಖ್ 1980ರ ದಶಕದಲ್ಲಿ ಜಾರಿಗೆ ತಂದ ದೈವನಿಂದೆಯ ಕಾನೂನುಗಳಿಗನುಗುಣವಾಗಿ ನೂರಾರು ವ್ಯಕ್ತಿಗಳು ದೀರ್ಘಕಾಲದಿಂದ ಕಾರಾಗೃಹದಲ್ಲಿ ಕೊಳೆಯುತ್ತಿದ್ದಾರೆ. ವೈಯಕ್ತಿಕ ದ್ವೇಷಸಾಧನೆ ಗಾಗಿ ಈ ಕಾನೂನುಗಳು ದುರುಪಯೋಗವಾಗುವುದೂ ಉಂಟು. ಕ್ರಿಶ್ಚಿಯನ್ ಕೂಲಿಕಾರ ಮಹಿಳೆ ಆಸಿಯಾ ಬೀಬಿ ಪ್ರಕರಣ ಇದಕ್ಕೊಂದು ಉತ್ತಮ ಉದಾಹರಣೆ.

ಪಾಕಿಸ್ತಾನದ ದುರಂತವೆಂದರೆ ದೈವನಿಂದೆಯ ವ್ಯಾಖ್ಯೆಯನ್ನು ಜನರೇ ನೀಡಿ, ಶಿಕ್ಷೆಯನ್ನೂ ನೀಡಿಬಿಡುವುದು. ಆ ಶಿಕ್ಷೆ ಹತ್ಯೆಯೇ ಆಗಿರುತ್ತದೆ ಎನ್ನುವುದು ಇನ್ನೂ ದೊಡ್ಡ ದುರಂತ. ತಾನು ಕೆಲಸ ಮಾಡುತ್ತಿದ್ದ ಕಾರ್ಖಾನೆಯ ಗೋಡೆಯ ಮೇಲಿದ್ದ ಪ್ರವಾದಿಯವರ ಉಕ್ತಿಗಳಿದ್ದ ಹಾಳೆಗಳನ್ನು ಹರಿದುಹಾಕಿದ ಎಂಬ ಆರೋಪದ ಮೇಲೆ ಉದ್ರಿಕ್ತ ಗುಂಪು ವ್ಯಕ್ತಿಯನ್ನು ಹೊರಗೆಳೆದು ಹೊಡೆದು ಕೊಂದು ಬೆಂಕಿ ಹಚ್ಚಿದ್ದು, ಎಂಟು ವರ್ಷದ ಹಿಂದೂ ಬಾಲಕನೊಬ್ಬ ಮಸೀದಿಯಲ್ಲಿ ಮೂತ್ರ ವಿಸರ್ಜಿಸಿದ ಎಂಬ ಆಪಾದನೆಯ ಮೇಲೆ ದಾರುಣ ಹಲ್ಲೆಗೊಳಗಾದದ್ದು ಇತ್ತೀಚಿನ ಉದಾಹರಣೆಗಳು. ಇನ್ನೂ ಹೃದಯವಿದ್ರಾವಕವಾದ ಘಟನೆಯೊಂದು ಇತ್ತೀಚೆಗೆ ಖೈಬರ್-ಪಕ್ತೂನ್​ಖ್ವಾ ಪ್ರಾಂತ್ಯದಲ್ಲಿ ನಡೆದುಹೋಯಿತು. ಮದ್ರಸಾ ಒಂದರ ಅಧ್ಯಾಪಕಿಯು ಸಹೋದ್ಯೋಗಿ ಮತ್ತು ಇಬ್ಬರು ವಿದ್ಯಾರ್ಥಿಗಳಿಂದ ಶಾಲೆ ಪ್ರವೇಶದ್ವಾರದ ಬಳಿಯೇ ಹಲ್ಲೆಗೊಳಗಾಗಿ ಪ್ರಾಣ ಕಳೆದುಕೊಂಡಳು. ಆಕೆಯ ಅಪರಾಧ? ಆ ಬಡಪಾಯಿ ಹೆಣ್ಣುಮಗಳು ದೈವನಿಂದೆ ಎಸಗುವುದನ್ನು ಹತ್ಯಾಕಾರಿಗಳ ಸಂಬಂಧಿಯೊಬ್ಬ ಕನಸಿನಲ್ಲಿ ಕಂಡಿದ್ದನಂತೆ! ದೇವರೇ, ನಿನ್ನ ಈ ಜಗತ್ತಿನಲ್ಲಿ, ಹೀಗೂ ನಡೆಯಬಹುದೇ?

ಕೊನೆಯಲ್ಲಿ ನಮ್ಮ ಭಾರತದ ಬಗ್ಗೆ ಕೆಲಮಾತುಗಳನ್ನು ಹೇಳುತ್ತೇನೆ. ದೈವನಿಂದೆ ಈ ದೇಶದಲ್ಲಿ ದೊಡ್ಡದಾಗಿ ಸುದ್ದಿಯಾದದ್ದು ನೂರು ವರ್ಷಗಳ ಹಿಂದೆ, 1920ರ ದಶಕದಲ್ಲಿ. ಮೊದಲಿಗೆ ಅನಾಮಧೇಯ ಮುಸ್ಲಿಂ ಲೇಖಕರು ‘ಕೃಷ್ಣ, ತೇರಿ ಗೀತಾ ಕೊ ಜಲ್ನಾ ಹೋಗಾ’ ಮತ್ತು ‘ಸೀತಾ ಕಾ ಛಿನಾಲಾ’ ಎಂಬ ಪುಸ್ತಕಗಳನ್ನು ಪ್ರಕಟಿಸಿ ಹಂಚತೊಡಗಿದರು. ಹಿಂದೂ ದೇವದೇವಿಯರಾದ ಶ್ರೀಕೃಷ್ಣ ಮತ್ತು ಸೀತಾಮಾತೆಯ ಕುರಿತಾಗಿ ಕೆಟ್ಟ ಭಾಷೆಯಲ್ಲಿ ರಚಿತವಾಗಿದ್ದ ಈ ಪುಸ್ತಕಗಳ ಜತೆಗೇ ಆರ್ಯಸಮಾಜದ ಸ್ಥಾಪಕರಾದ ದಯಾನಂದ ಸರಸ್ವತಿ ಅವರನ್ನು ‘ಲಂಪಟ’ ಎಂದು ಹೇಳುವ ಪುಸ್ತಕವೂ ಹೊರಬಂತು. ಇದಕ್ಕೆ ಪ್ರತಿಯಾಗಿ ಆರ್ಯಸಮಾಜದ ಕಾರ್ಯಕರ್ತರಾದ ಮಹಾಶಯ್ ರಾಜ್​ಪಾಲ್ ‘ರಂಗೀಲಾ ರಸೂಲ್’ ಎಂಬ ಕೃತಿಯನ್ನು ತಮ್ಮ ಪ್ರಕಾಶನದಲ್ಲಿ ಪ್ರಕಟಿಸಿದರು. ಇದನ್ನು ದೈವನಿಂದೆ ಎಂದು ವರ್ಣಿಸಿದ ಕೆಲವು ಮುಸ್ಲಿಂ ನಾಯಕರು, ಆ ಪುಸ್ತಕದಲ್ಲಿ ಲೇಖಕರ ಹೆಸರಿಲ್ಲದ ಕಾರಣ ಪ್ರಕಾಶಕ ರಾಜ್​ಪಾಲ್ ಮೇಲೇ ದಾವೆ ಹೂಡಿದರು, 1927ರಲ್ಲಿ ಲಾಹೋರ್ ಹೈಕೋರ್ಟ್, ವಿವಾದಿತ ಕೃತಿ ಇಸ್ಲಾಮಿಕ್ ಗ್ರಂಥಗಳಲ್ಲಿನ ವಿವರಗಳ ಆಧಾರದಲ್ಲೇ ರಚಿತವಾಗಿದೆಯೆಂದು ಹೇಳಿ ದಾವೆಯನ್ನು ವಜಾಗೊಳಿಸಿತು. ಕಾರಾಗೃಹದಿಂದ ಬಿಡುಗಡೆಯಾದ ರಾಜ್​ಪಾಲ್ ಮೇಲೆ ಹಲ್ಲೆಗಳು ಆರಂಭವಾದವು. ಅಂತಿಮವಾಗಿ ಅವರನ್ನು ಇಲ್ಮ್-ಉದ್-ದೀನ್ ಎಂಬ ಹತ್ತೊಂಬತ್ತು ವರ್ಷದ ಬಡಗಿ ಹತ್ಯೆಗೈದ.

ಈ ಪ್ರಕರಣದಲ್ಲಿ ನಾವು ಗಮನಿಸಬೇಕಾದ ಅಂಶವೆಂದರೆ ಹಿಂದೂ ದೇವದೇವಿಯರನ್ನು ಅವಹೇಳನ ಮಾಡಿದ ಕೃತಿಗಳನ್ನು ದೈವನಿಂದೆಯ ಪ್ರಕರಣ ಎಂದು ಹಿಂದೂಗಳು ಭಾವಿಸಲಿಲ್ಲ, ಉದ್ರೇಕಗೊಳ್ಳಲಿಲ್ಲ ಮತ್ತು ಕಾನೂನನ್ನು ಕೈಗೆ ತೆಗೆದುಕೊಳ್ಳಲಿಲ್ಲ. ಆದರೆ ಇಸ್ಲಾಮಿಕ್ ಆಕರಗಳನ್ನೇ ಆಧರಿಸಿ ಬರೆದ ಕೃತಿಯನ್ನು ಮುಸ್ಲಿಮರು ದೈವನಿಂದೆ ಎಂದು ಬಗೆದರು. ಈ ಭಾವನೆಗೆ ದೊಡ್ಡದಾಗಿ ಪ್ರಚೋದನೆ ನೀಡಿದವರಲ್ಲಿ ಮಹಮದ್ ಆಲಿ ಜೋಹರ್ ಒಬ್ಬರು. ಇವರು ಖಿಲಾಫತ್ ಚಳವಳಿಯ ರೂವಾರಿಗಳಲ್ಲೊಬ್ಬರು ಮತ್ತು ಕಾಂಗ್ರೆಸ್ ಹಾಗೂ ಮುಸ್ಲಿಂ ಲೀಗ್​ಗಳೆರಡರ ಅಧ್ಯಕ್ಷರಾಗಿಯೂ ಆಯ್ಕೆಯಾಗಿದ್ದವರು. ಇದು ಇಲ್ಲಿಗೇ ನಿಲ್ಲುವುದಿಲ್ಲ. ಹತ್ಯಾಕಾರಿ ಇಲ್ಮ್-ಉದ್-ದೀನ್​ನನ್ನು ಗಲ್ಲಿಗೇರಿಸಿದಾಗ ಆತನ ಅಂತ್ಯಸಂಸ್ಕಾರಕ್ಕೆ ಮಹಮದ್ ಆಲಿ ಜಿನ್ನಾ ಮತ್ತು ಕವಿ ಮಹಮದ್ ಇಕ್ಬಾಲ್ ಹಾಜರಾದರು. ಇಲ್ಮ್-ಉದ್-ದೀನ್​ಗೆ ‘ಘಾಜಿ’ ಅಂದರೆ ‘ಇಸ್ಲಾಂನ ರಕ್ಷಕ’ ಎಂಬ ಹೆಸರನ್ನೂ ನೀಡಲಾಯಿತು.

ಈ ಪರಿಸ್ಥಿತಿ ಇಂದಿಗೂ ಬದಲಾಗಿಲ್ಲ. ಹಿಂದೂ ದೇವದೇವಿಯರ, ಧಾರ್ವಿುಕ ಸಂಕೇತಗಳ ಅವಹೇಳನ ಅವ್ಯಾಹತವಾಗಿ ನಡೆಯುತ್ತಲೇ ಇದೆ. ರಾಮ ದಲಿತನೊಬ್ಬನನ್ನು ಕೊಲ್ಲುತ್ತಿರುವಂತೆ ತೋರಿಸಿದ ಆರ್ಫಾ ಖಾನಂ ಶೇರ್ವಾನಿ, ರಾಮ ಸ್ತ್ರೀದ್ವೇಷಿ ಎಂದು ಬರೆದ ರಾಣಾ ಅಯೂಬ್, ಗಣಪತಿಯ ಬಗ್ಗೆ ಅವಹೇಳನಕಾರಿ ಮಾತು ಬರೆದ ಪ್ರತೀಕ್ ಸಿನ್ನಾ, ಶಿವಲಿಂಗವನ್ನು ಲೇವಡಿ ಮಾಡಿದ ಮಹುವಾ ಮೊಯಿತ್ರಾ, ಲಕ್ಷ್ಮಿಯ ಹೆಸರೆತ್ತಿ ಲೇವಡಿ ಮಾಡಿದ ಅಕ್ಬರುದ್ದೀನ್ ಒವೈಸಿ, ಕೃಷ್ಣನನ್ನು ‘ಈವ್ ಟೀಸರ್’ ಎಂದ ಪ್ರಶಾಂತ್ ಭೂಷಣ್- ಪಟ್ಟಿ ಉದ್ದವಾಗುತ್ತಾ ಹೋಗುತ್ತದೆ. ಇದಾವುದನ್ನೂ ಹಿಂದೂಗಳು ದೈವನಿಂದೆ ಎಂದು ಪರಿಗಣಿಸಿಲ್ಲ. ಆದರೆ ಶಿವಲಿಂಗದ ಬಗೆಗಿನ ಅವಹೇಳನಕಾರಿ ಮಾತಿಗೆ ಪ್ರತಿಯಾಗಿ ನೂಪುರ್ ಶರ್ಮಾ ಆಡಿದ ಮಾತುಗಳು ದೈವನಿಂದೆ ಎಂದು ಕೆಲವು ಮುಸ್ಲಿಮರು ಬಗೆಯುತ್ತಿದ್ದಾರೆ. ಇವರಿಂದ ಹಿಂದೂಗಳೂ ಅಸಹಿಷ್ಣುತೆಯನ್ನು ಕಲಿಯುತ್ತಿದ್ದಾರೆಯೇ? ಹಾಗೆಯೇ ಕಾಣುತ್ತಿದೆ. ರಾಮಸೀತೆಯರನ್ನು ಲೇವಡಿ ಮಾಡಿದ ವಿದೂಷಕ ಮುನಾವರ್ ಫಾರೂಕಿಯ ಕಾರ್ಯಕ್ರಮವನ್ನು ವಿರೋಧಿಸಿ ತಡೆದಿದ್ದಾರೆ, ಯಾರೂ ಲೆಕ್ಕಕ್ಕೆ ತೆಗೆದುಕೊಂಡಿಲ್ಲದಿದ್ದ ನೂಪುರ್ ಶರ್ಮಾ ಮಾತನ್ನು ಐದು ದಿನಗಳ ನಂತರ ತನ್ನ ಟ್ವೀಟ್ ಮೂಲಕ ಜಗತ್ತಿಗೆ ಹರಡಿದ ಆಲ್ಟ್ ನ್ಯೂಸ್​ನ ಮಹಮದ್ ಜುಬೇರ್ ಹಿಂದೆ ತಾನೇ ಹಿಂದೂ ದೇವರುಗಳ ಬಗ್ಗೆ ಲೇವಡಿ ಮಾಡಿದ್ದನ್ನು ಪತ್ತೆಹಚ್ಚಿ ಕೇಸ್ ದಾಖಲಿಸುತ್ತಿದ್ದಾರೆ.

ಇದು ಎಲ್ಲಿಗೆ ತಲುಪಬಹುದು?

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net