

1949ರಲ್ಲಿ ಚೀನೀ ಮುಖ್ಯ ಭೂಭಾಗ ಕಮ್ಯೂನಿಸ್ಟರ ವಶವಾದ ಪರಿಣಾಮವಾಗಿ ಅದರಿಂದ ಹೊರಜಾರಿದ ತೈವಾನ್ನ ಪ್ರತ್ಯೇಕ ಅಸ್ತಿತ್ವಕ್ಕೆ ಮೊದಲ ದಿನದಿಂದಲೂ ಅಪಾಯವಿದ್ದೇ ಇತ್ತು. ಅದನ್ನು ಆಕ್ರಮಿಸಿಕೊಳ್ಳುವುದನ್ನು ಕಮ್ಯೂನಿಸ್ಟ್ ಸರ್ಕಾರ ತನ್ನ ಸುರಕ್ಷಾನೀತಿಯ ಪ್ರಮುಖ ಸ್ತಂಭವನ್ನಾಗಿಸಿಕೊಂಡಿದೆ. ಒಂದಕ್ಕಿಂತ ಹೆಚ್ಚು ಬಾರಿ ಅದು ಸೇನಾ ಕಾರ್ಯಾಚರಣೆಗೆ ಇಳಿಯಹೋದದ್ದೂ ಉಂಟು. 1958ರಲ್ಲಿ ಅಂತಹ ಒಂದು ಪ್ರಯತ್ನವನ್ನು ಅಣ್ವಸ್ತ್ರ ಬೆದರಿಕೆಯೊಡ್ದಿ ಅಮೆರಿಕ ತಡೆದಿತ್ತು. ಅಮೆರಿಕ ಮತ್ತು ಚೀನಾಗಳ ನಡುವಿನ ಅತಿದೊಡ್ಡ ವಿವಾದವಾಗಿತ್ತು ತೈವಾನ್. ಕೊನೆಗೆ ತಮ್ಮತಮ್ಮದೇ ಕಾರಣಗಳಿಗಾಗಿ ಪರಸ್ಪರ ಮೈತ್ರಿಗಾಗಿ ಎರಡೂ ದೇಶಗಳು ಮುಂದಾದಾಗಲೂ ತಡೆಯಾಗಿ ನಿಂತದ್ದು ತೈವಾನ್. ‘ತೈವಾನ್ ದ್ವೀಪ ಚೀನೀ ಮುಖ್ಯ ಭೂಭಾಗದ ಅವಿಭಾಜ್ಯ ಅಂಗ’ ಎಂಬ ಕಮ್ಯೂನಿಸ್ಟರ ನಿಲುವನ್ನು ಅಮೆರಿಕ ಒಪ್ಪಿಕೊಂಡಿತು, ತೈವಾನ್ ಸಮಸ್ಯೆಯ ಪರಿಹಾರಕ್ಕೆ ಸೇನಾಕ್ರಮದ ಮಾರ್ಗ ಅನುಸರಿಸಕೂಡದು ಎಂಬ ಅಮೆರಿಕದ ನಿಬಂಧನೆಯನ್ನು ಚೀನೀ ಸರ್ಕಾರ ಒಪ್ಪಿಕೊಂಡಿತು.
ನಂತರ ಚೀನೀ ಆರ್ಥಿಕ ಅಭ್ಯುದಯದ ಹರಿಕಾರ ದೆಂಗ್ ಷಿಯಾವೋಪಿಂಗ್ ಹೇಳಿಕೊಟ್ಟ ಱಏಜಿಛಛಿ ಢಟ್ಠ್ಟ ಠಠ್ಟಿಛ್ಞಿಜಠಿಜ, ಚಿಜಿಛಛಿ ಢಟ್ಠ್ಟ ಠಿಜಿಞಛಿಱ ಎಂಬ ಬುದ್ಧಿಮಾತನ್ನು ಕಿವಿಗೊಟ್ಟು ಕೇಳಿದ ನಂತರದ ಚೀನೀ ನೇತಾರರು ದೇಶದ ಆರ್ಥಿಕ ಸಾಮರ್ಥ್ಯವನ್ನು ಜಗತ್ತಿಗೇ ಕಾಣುವಂತೆ ವೃದ್ಧಿಸಿಕೊಳ್ಳುತ್ತ, ಜಗತ್ತಿನ ಕಣ್ಣಿಗೆ ಮರೆಯಾಗಿ ಸೇನಾ ಸಾಮರ್ಥ್ಯವನ್ನೂ ವುದ್ಧಿಸಿಕೊಳ್ಳುತ್ತ ದಶಕಗಳನ್ನು ಕಳೆದರು. ಕೊನೆಗೆ ಅವರು ಕಾಯುತ್ತಿದ್ದ ಸಮಯ ಬಂದದ್ದು ಎರಡು ವರ್ಷಗಳ ಹಿಂದೆ. ಅಷ್ಟರಹೊತ್ತಿಗೆ ಚೀನಾ ಜಗತ್ತಿನ ಎರಡನೆಯ ಅತಿದೊಡ್ಡ ಅರ್ಥವ್ಯವಸ್ಥೆಯಾಗಿ ಬೆಳೆದುನಿಂತಿತ್ತು. ಚೀನಾ ಒದಗಿಸುತ್ತಿದ್ದ ಉತ್ಪಾದನಾನುಕೂಲಿ ವ್ಯವಸ್ಥೆಗೆ ಮಾರುಹೋದ ಪಶ್ಚಿಮ ಜಗತ್ತಿನ ಬಂಡವಾಳಶಾಹಿಗಳು ಔಷಧಗಳಿಂದ ಹಿಡಿದು ವಿಮಾನಗಳವರೆಗೆ ಸಕಲ ವಸ್ತುಗಳನ್ನೂ ತಯಾರಿಸುವ ತಮ್ಮ ಕಾರ್ಖಾನೆಗಳನ್ನು ಚೀನಾಗೆ ವರ್ಗಾಯಿಸಿಬಿಟ್ಟಿದ್ದರು. ಆ ಕಾರ್ಖಾನೆಗಳನ್ನು ಮುಚ್ಚಿಬಿಡುವ ಬೆದರಿಕೆಯೊಡ್ಡುವುದರ ಮೂಲಕ ಅಥವಾ ಉತ್ಪಾದಿತ ಸಾಮಗ್ರಿಗಳು ಚೀನಾದಿಂದ ಹೊರಹೋಗದಂತೆ ತಡೆಯುವ ಮೂಲಕ ಪಶ್ಚಿಮ ಜಗತ್ತಿನ ಆರ್ಥಿಕ ಕೊರಳನ್ನು ಹಿಚುಕಿಬಿಡುವ ಸಾಮರ್ಥ್ಯವನ್ನು ಚೀನಾ ಗಳಿಸಿಕೊಂಡಾಗಿತ್ತು. ತನ್ನೀ ಸಾಮರ್ಥ್ಯದಿಂದಾಗಿಯೇ ತಾನು ತೈವಾನ್ ಬಗ್ಗೆ ಏನು ಮಾಡಿದರೂ ಅಮೆರಿಕ ತನ್ನ ವಿರುದ್ಧ ತೀವ್ರಕ್ರಮ ತೆಗೆದುಕೊಳ್ಳಲಾರದು ಎಂದು ಚೀನೀ ಸರ್ಕಾರ ಅಂದುಕೊಳ್ಳತೊಡಗಿತು.
ಕರೊನಾ ಸಂಕಟದಿಂದಾಗಿ ಜಗತ್ತಿನ ಜತೆ ಚೀನಾ ಸಹಾ ನಲುಗತೊಡಗಿದ್ದೇನೋ ನಿಜ. ಆದರೆ ಜಗತ್ತಿನ ಕಾರ್ಖಾನೆಯಾದ ಚೀನಾದಲ್ಲಿ ಯಾವುದೇ ಅಗತ್ಯವಸ್ತುವಿಗೂ ಕೊರತೆಯಿರಲಿಲ್ಲ. ಜತೆಗೆ, ಇಂದು ಅಮೆರಿಕಕ್ಕೆ ಮತ್ತು ಜಾಗತಿಕ ಶಾಂತಿಗೆ ಬಹುದೊಡ್ಡ ಕಂಟಕ ಚೀನಾ ಎಂದು ನಂಬಿದ್ದ ರಿಪಬ್ಲಿಕನ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ರ ಜಾಗದಲ್ಲಿ ರಷ್ಯಾವೇ ಎಲ್ಲ ಕೇಡುಗಳಿಗೂ ಮೂಲ ಎಂಬ ಶೀತಲಸಮರದ ತುಕ್ಕುಹಿಡಿದ ನಿಲುವನ್ನೇ ಇಂದೂ ತಲೆಯೊಳಗೆ ತುಂಬಿಕೊಂಡಿರುವ ಡೆಮೋಕ್ರಾಟಿಕ್ ಪಕ್ಷದ ಜೋ ಬೈಡೆನ್ ಬಂದುಕೂತದ್ದು ಚೀನಾಗೆ ವರದಾನವಾಯಿತು. ತೈವಾನ್ ವಿಷಯದಲ್ಲಿ ಚೀನಾದ ಹುಮ್ಮಸ್ಸನ್ನು ಹೆಚ್ಚಿಸಿದ್ದು ಇದು. ಹೀಗಾಗಿ ಜಗತ್ತು ಕರೊನಾಮಾರಿಯ ಅಲೆಗಳ ಸೆಳವಿನಲ್ಲಿ ಸಿಲುಕಿ ಹೆಣಗಾಡತೊಡಗಿದಾಗ ಚೀನಾ ತೈವಾನ್ನತ್ತ ತಿರುಗಿತು. ಆ ದ್ವೀಪರಾಷ್ಟ್ರದ ವಿರುದ್ಧದ ಎಂದಿನ ಮಾತಿನ ದಾಳಿಯನ್ನು ತಾರಕಕ್ಕೇರಿಸಿದ್ದಲ್ಲದೆ ಸೇನಾ ಚಟುವಟಿಕೆಯನ್ನೂ ಹೆಚ್ಚಿಸಿತು. ಆಗ ಜಗತ್ತು ಉಸಿರು ಬಿಗಿಹಿಡಿದು ನೋಡಿದ ಕೆಲವು ಭಯಾನಕ ನೋಟಗಳಲ್ಲಿ ಕೆಲವು- ತೈವಾನ್ನ ಸಮುದ್ರತೀರದಲ್ಲಿಳಿದ ಚೀನೀ ಸೈನಿಕರು ದ್ವೀಪವನ್ನು ಆಕ್ರಮಿಸಿಕೊಳ್ಳಬಹುದಾದ ವಿಧಾನದ ರಿಹರ್ಸಲ್ ತೈವಾನ್ಗೆದುರಾಗಿನ ಚೀನೀ ತೀರದಲ್ಲಿ ಜರುಗಿದ್ದು, ಒಂದೇ ದಿನದಲ್ಲಿ 152 ಚೀನೀ ಯುದ್ಧವಿಮಾನಗಳು ತೈವಾನ್ ವಾಯುಪ್ರದೇಶವನ್ನು ಉಲ್ಲಂಘಿಸಿದ್ದು, ಯುದ್ಧಕ್ಕೆ ತಯಾರಾಗಿ ಎಂದು ಅಧ್ಯಕ್ಷ ಷಿ ಜಿನ್ಪಿಂಗ್ ಚೀನೀ ಸೇನೆಗೆ ಹೇಳಿದ್ದು.
ಆದರೆ ಏಕಾಏಕಿ ಒಂದುದಿನ ತೈವಾನ್ ಹಿಂದಕ್ಕೆ ಸರಿದು ಯೂಕ್ರೇನ್ ಜಗತ್ತಿನ ಮಾಧ್ಯಮಗಳಲ್ಲಿ ಎದ್ದುನಿಂತಿತು. ಮೂರನೆಯ ಮಹಾಯುದ್ಧ ಪಶ್ಚಿಮ ಪೆಸಿಫಿಕ್ನಲ್ಲಿ ಆರಂಭವಾಗುತ್ತದೆಂದು ಆತಂಕದಿಂದ ಎದುರುನೋಡುತ್ತಿದ್ದವರು ಮಹಾಯುದ್ಧ ಆರಂಭಿಸುವುದು ಯುರೋಪ್ನದೇ ಏಕಸ್ವಾಮ್ಯವೇನೋ ಎಂದು ಅಚ್ಚರಿಪಡತೊಡಗಿದರು. ಅಮೆರಿಕದಿಂದ ಹಿಡಿದು ಫಿನ್ಲ್ಯಾಂಡ್ವರೆಗೆ ಪಶ್ಚಿಮ ದೇಶಗಳು ರಷ್ಯಾ ನಾ ಮುಂದು ತಾ ಮುಂದು ಎಂದು ಎಗರಾಡತೊಡಗಿದವು. 1914!, 1939!, 2022? ಎಂದು ಕೆಲ ಮಾಧ್ಯಮಗಳು ಕಥೆ ಕಟ್ಟತೊಡಗಿದವು. ಆದರೆ ನಿಜವಾಗಿ ನಡೆಯುತ್ತಿರುವುದೇನು?
ಯೂಕ್ರೇನ್ಗೆ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತ ಅದು ಬಲಿಷ್ಠ ರಷ್ಯಾ ಸೇನೆಯನ್ನು ನಿಧಾನವಾಗಿ ಬಲಹೀನಗೊಳಿಸುವಂತೆ ಮಾಡುವುದು ಮತ್ತು ಐದುಸಾವಿರಕ್ಕೂ ಹೆಚ್ಚಿನ ಆರ್ಥಿಕ ದಿಗ್ಬಂಧನಗಳನ್ನು ರಷ್ಯಾ ಮತ್ತು ರಷ್ಯನ್ನರ ಮೇಲೆ ವಿಧಿಸಿ ಆ ದೇಶವನ್ನು ಆರ್ಥಿಕವಾಗಿಯೂ ಬಲಹೀನಗೊಳಿಸುವುದಕ್ಕಿಂತ ಮಹತ್ತರ ಗುರಿ ಪಶ್ಚಿಮ ಜಗತ್ತಿಗಿರುವಂತಿಲ್ಲ. ತಮ್ಮ ಒಬ್ಬ ಸೈನಿಕ ಯೂಕ್ರೇನ್ನಲ್ಲಿ ಬಹಿರಂಗವಾಗಿ ಕಾಣಿಸಿಕೊಂಡರೂ, ತಮ್ಮ ಒಂದು ಯುದ್ಧವಿಮಾನ ಯೂಕ್ರೇನ್ ವಾಯುಪ್ರದೇಶದಲ್ಲಿ ಕಾಣಿಸಿಕೊಂಡರೂ ರಷ್ಯಾದಿಂದ ಮಾರಣಾಂತಿಕ ದಾಳಿ ಎದುರಿಸಬೇಕಾಗುತ್ತದೆ ಎಂದು ಅಮೆರಿಕ ಮತ್ತು ಪಶ್ಚಿಮ ಯುರೋಪ್ಗೆ ಗೊತ್ತು. ಹಾಗಂತ ಅಧ್ಯಕ್ಷ ವ್ಲಾದಿಮಿರ್ ಪೂತಿನ್ ಒಂದಕ್ಕಿಂತ ಹೆಚ್ಚು ಬಾರಿ ಎಚ್ಚರಿಸಿದ್ದಾರೆ. ಆ ಎಚ್ಚರಿಕೆ ನಿಜವೇ ಎಂದು ತಿಳಿಯಲು ತಾನೊಂದು ಬಾಲಾಕೋಟ್ ನಡೆಸುವ ಗುಂಡಿಗೆಯೂ ಬೈಡೆನ್ರಿಗಿಲ್ಲ.
ಇನ್ನು ಫಿನ್ಲ್ಯಾಂಡ್ ವಿಷಯಕ್ಕೆ ಬರುವುದಾದರೆ, ‘ನ್ಯಾಟೋ ಸೇರಿದರೆ ಗತಿ ನೆಟ್ಟಗಿರುವುದಿಲ್ಲ’ ಎಂದು ಪೂತಿನ್ ಆ ನಾರ್ಡಿಕ್ ದೇಶಕ್ಕೆ ಎಚ್ಚರಿಕೆ ಕೊಟ್ಟಾಗಿದೆ. ಅದನ್ನು ಮೀರಿಯೂ ಫಿನ್ಲ್ಯಾಂಡ್ ನ್ಯಾಟೋ ಸೇರಲು ಹೋದರೂ ಆ ಪ್ರಕ್ರಿಯೆ ವಿಧ್ಯುಕ್ತವಾಗಿ ಪೂರ್ಣಗೊಳ್ಳಲು ಕನಿಷ್ಟ ಒಂದುವರ್ಷ ಹಿಡಿಯುತ್ತದೆ. ಅಷ್ಟರೊಳಗೆ ಪೂತಿನ್ ಯೂಕ್ರೇನ್ನಲ್ಲಿ ರಷ್ಯನ್ ಪ್ರದೇಶಗಳನ್ನು ಆಕ್ರಮಿಸಿಕೊಳ್ಳುವ, ಕ್ರಿಮಿಯಾಗೆ ಭೂಸಂಪರ್ಕ ಏರ್ಪಡಿಸುವ, ಒದೆಸ್ಸಾ ಬಂದರಿನವರೆಗೂ ಹೋಗಿ ಯೂಕ್ರೇನ್ ಅನ್ನು ಕಪ್ಪುಸಮುದ್ರದಿಂದ ದೂರಕ್ಕೆ ತಳ್ಳುವ ಸೀಮಿತ ಗುರಿಯನ್ನು ಸಾಧಿಸಿ ಯುದ್ಧ ನಿಲ್ಲಿಸಿ ಫಿನ್ಲ್ಯಾಂಡ್ನತ್ತ ತಿರುಗಲೂಬಹುದು. ಅಥವಾ ತನ್ನ ಗಡಿಗೆ ಅಂಟಿಕೊಂಡಿರುವ ನಾರ್ವೆ, ಲಿಥುವೇನಿಯಾ, ಲಾತ್ವಿವಾ ಮತ್ತು ಎಸ್ತೋನಿಯಾಗಳು ಈಗಾಗಲೇ ನ್ಯಾಟೋ ಸದಸ್ಯರಾಗಿರುವುದರಿಂದ ಅವುಗಳ ಜತೆಗೆ ಫಿನ್ಲ್ಯಾಂಡ್ ಸಹ ಸೇರಿದರೆ ಆಕಾಶವೇನೂ ಕಳಚಿ ತಲೆಮೇಲೆ ಬೀಳುವುದಿಲ್ಲ ಎಂದು ಅಧ್ಯಕ್ಷ ಪೂತಿನ್ ಸುಮ್ಮನಿದ್ದುಬಿಡಲೂಬಹುದು. ಫಿನ್ಲ್ಯಾಂಡ್ ಅನ್ನು ಯೂಕ್ರೇನ್ಗೆ ಹೋಲಿಸಲಾಗುವುದಿಲ್ಲ. ಯೂಕ್ರೇನ್ ನ್ಯಾಟೋಗೆ ಸೇರಿದ್ದರೆ ಅದರಿಂದ ರಷ್ಯಾದ ಆರ್ಥಿಕ ಹಿತಾಸಕ್ತಿಗಳಿಗೆ ದೊಡ್ಡ ಹೊಡೆತ ಬೀಳುತ್ತಿತ್ತು. ಫಿನ್ಲ್ಯಾಂಡ್ನಲ್ಲಿ ಅಂತಹ ಯಾವ ಆರ್ಥಿಕ ಅಪಾಯವೂ ರಷ್ಯಾಗೆ ಎದುರಾಗುವುದಿಲ್ಲ. ಸೈಂಟ್ ಪೀಟರ್ಸ್ ಬರ್ಗ್ (ಲೆನಿನ್ಗ್ರಾದ್) ಬಂದರುನಗರಕ್ಕೆ ತಟ್ಟಬಹುದಾಗಿದ್ದ ಅಪಾಯವನ್ನು ರಷ್ಯನ್ನರು 1940-43ರಲ್ಲೇ ಫಿನ್ಲ್ಯಾಂಡ್ನ ಕರೇಲಿಯಾ ಪ್ರದೇಶವನ್ನು ವಶಕ್ಕೆ ತೆಗೆದುಕೊಳ್ಳುವ ಮೂಲಕ ದೂರಮಾಡಿಕೊಂಡಾಗಿದೆ. ಅದರಾಚೆಗೆ ಫಿನ್ಲ್ಯಾಂಡ್ನಲ್ಲಿ ರಷ್ಯಾಗೆ ಮಹತ್ವವಾದ ಆಸಕ್ತಿಯೇನೂ ಇಲ್ಲ.
ಆದಾಗ್ಯೂ ಪಶ್ಚಿಮದ ಮಾಧ್ಯಮಗಳು ಮತ್ತು ರಾಜಕೀಯ ನೇತಾರರದಿಂದಾಗಿ ಜಗತ್ತಿನ ಗಮನ ಯುರೋಪ್ ಕಡೆಗೆ ಕೇಂದ್ರೀಕತವಾಗಿರುವ ಸನ್ನಿವೇಶವನ್ನು ತನಗನುಕೂಲವಾಗುವಂತೆ ಬಳಸಿಕೊಳ್ಳಲು ಚೀನಾ ಕಾರ್ಯಪ್ರವತ್ತವಾಗಿದೆ. ತೈವಾನ್ ಆಕ್ರಮಿಸಿಕೊಳ್ಳುವ ತಯಾರಿಯಾಗಿ, ಯೂಕ್ರೇನ್ನಿಂದ ಅಮೆರಿಕವನ್ನು ರಷ್ಯಾ ದೂರ ಇಟ್ಟಂತೆ ತಾನೂ ಅದನ್ನು ತೈವಾನ್ನಿಂದ ದೂರ ಇಡಲು ಚೀನಾ ವ್ಯಾಪಕ ಯೋಜನೆಗಳನ್ನೇ ರೂಪಿಸುತ್ತಿದೆ.
ತೈವಾನ್ನ ಪ್ರಮುಖ ಸೇನಾನೆಲೆಯ ಪ್ರತಿಕೃತಿಯೊಂದನ್ನು ಉಯ್ಘರ್ ಷಿನ್ಜಿಯಾಂಗ್ ಪ್ರಾಂತ್ಯದ ಮರುಭೂಮಿಯಲ್ಲಿ ಚೀನಾ ಕಳೆದ ಡಿಸೆಂಬರ್ನಲ್ಲಿ ನಿರ್ವಿುಸಿತು. ಇತ್ತೀಚೆಗೆ ಅದನ್ನು ಕ್ಷಿಪಣಿ ದಾಳಿ ಮೂಲಕ ನಾಶಮಾಡುವ ಅಭ್ಯಾಸವನ್ನು ಚೀನೀ ಸೇನೆ ನಡೆಸಿತು! ಮೊದಲ ದಾಳಿಯಲ್ಲೇ ತೈವಾನ್ನ ಬೆನ್ನುಮೂಳೆ ಮುರಿಯುವ ಕೌಶಲವನ್ನು ಕರಗತ ಮಾಡಿಕೊಳ್ಳುವ ತಂತ್ರವಿದು.
ಸರಿ, ಅಷ್ಟಾದರೆ ತೈವಾನ್ ದಕ್ಕಿಬಿಡುತ್ತದೆಯೇ? ಆ ದ್ವೀಪರಾಷ್ಟ್ರದ ನೆರವಿಗೆ ಅಮೆರಿಕ ಬಂದರೆ? ಯೂಕ್ರೇನ್ ಬಗ್ಗೆ ಇಲ್ಲದ ನಿಷ್ಠೆ ಅಮೆರಿಕಕ್ಕೆ ತೈವಾನ್ನ ಸುರಕ್ಷೆ ಮತ್ತದರ ಸ್ವತಂತ್ರ ಅಸ್ತಿತ್ವದ ಬಗ್ಗೆ ಇದೆ. ಈ ನಿಷ್ಠೆಗೆ ಏಳು ದಶಕಗಳ ಇತಿಹಾಸವಿದೆ. ಅದನ್ನು ಪ್ರತಿಯೊಬ್ಬ ಅಮೆರಿಕನ್ ಅಧ್ಯಕ್ಷರೂ ಪುನರುಚ್ಚರಿಸಿದ್ದಾರೆ. ತೈವಾನ್ನ ರಕ್ಷಣೆಗೆ ಧಾವಿಸಲು ಅಮೆರಿಕ ಲಿಖಿತ ಒಪ್ಪಂದಗಳ ಮೂಲಕ ಬದ್ಧವಾಗಿದೆ. ಇದಕ್ಕೆ ಚೀನಾದ ಉತ್ತರ ಏನು?
ಷಿನ್ಜಿಯಾಂಗ್ನ ಜನವಿಹೀನ ಮರುಭೂಮಿಯಲ್ಲಿ ಚೀನಾ ನಿರ್ವಿುಸಿದ್ದು ಕೇವಲ ತೈವಾನ್ನ ಸೇನಾನೆಲೆಯ ಪ್ರತಿಕೃತಿಯಲ್ಲ, ಜಪಾನ್ನ ಒಕಿನಾವಾ ಮತ್ತು ಪಶ್ಚಿಮ ಪೆಸಿಫಿಕ್ನಲ್ಲಿರುವ ಅಮೆರಿಕದ್ದೇ ಗುವಾಮ್ ದ್ವೀಪದಲ್ಲಿರುವ ಅಮೆರಿಕನ್ ನೆಲೆಗಳದ್ದನ್ನೂ ಸಹ. ಚೀನಾ ಜತೆಗೆ ಯುದ್ಧವಾದರೆ ಅಮೆರಿಕ ಎರಗುವುದು ಇವೆರಡರಿಂದಲೇ. ಅವುಗಳ ಪ್ರತಿಕೃತಿಗಳನ್ನೂ ರಚಿಸಿ, ಅವುಗಳನ್ನು ನಾಶಪಡಿಸುವ ಅಭ್ಯಾಸದಲ್ಲಿ ಚೀನೀ ಸೇನೆ ತೊಡಗುತ್ತದೆಂದರೆ ತೈವಾನ್ನಲ್ಲಿ ತಾನು ಎದುರಿಸಬೇಕಾಗಿರುವುದು ಅಮೆರಿಕವನ್ನು ಎಂದು ಅಧ್ಯಕ್ಷ ಜಿನ್ಪಿಂಗ್ಗೆ ಸ್ಪಷ್ಟವಾಗಿ ಗೊತ್ತಿದೆ ಮತ್ತು ಅದಕ್ಕೆ ಬೇಕಾದ ತಯಾರಿಯನ್ನು ಅವರು ಲೆಕ್ಕಾಚಾರವಿಟ್ಟು ಮಾಡಿಕೊಳ್ಳುತ್ತಿದ್ದಾರೆ ಎಂದರ್ಥ. ಆ ತಯಾರಿಯ ವಿವರಗಳು ಬೆಚ್ಚಿಬೀಳಿಸುವಂತಿವೆ.
ಕಳೆದ ವರ್ಷಾಂತ್ಯದಲ್ಲಿ ಚೀನಾ ಎರಡು ಹೈಪರ್ಸಾನಿಕ್ ಮಿಸೈಲ್ಗಳನ್ನು ಅಭಿವೃದ್ಧಿಪಡಿಸುವಲ್ಲಿ ಯಶಸ್ವಿಯಾಗಿದೆ. ಒಂದರ ಹೆಸರು ಗುವಾಮ್ ಕಿಲ್ಲರ್, ಇನ್ನೊಂದರದು ಕ್ಯಾರಿಯರ್ ಕಿಲ್ಲರ್! ಹೆಸರೇ ಹೇಳುವಂತೆ ಗುವಾಮ್ ಕಿಲ್ಲರ್ನ ಗುರಿ ಗುವಾಮ್ಲ್ಲಿರುವ ಅಮೆರಿಕನ್ ನೆಲೆ, ಕ್ಯಾರಿಯರ್ ಕಿಲ್ಲರ್ಹದು ಒಕಿನಾವಾ ಇರಬಹುದು. ಅಲ್ಲದೆ ಅಮೆರಿಕದ ನೆಲವನ್ನೂ ತಲುಪಬಲ್ಲ ಹೈಪರ್ಸಾನಿಕ್ ಕ್ಷಿಪಣಿಗಳನ್ನೂ ಚೀನಾ ಅಭಿವೃದ್ಧಿಪಡಿಸಿದೆಯಂತೆ. ಇತರ ಬ್ಯಾಲಿಸ್ಟಿಕ್ ಹಾಗೂ ಕ್ರೂಯಿಸ್ ಮಿಸೈಲ್ಗಳಂತೆ ಇವು ರೆಡಾರ್ಗಳಿಗೆ ಪತ್ತೆಯಾಗುವುದಿಲ್ಲ. ಒಂದುವೇಳೆ ಪತ್ತೆಯಾಗುವಂತಿದ್ದರೂ, ಉಡಾಯಿಸಿದ ನಂತರವೂ ಇವುಗಳ ಪಥವನ್ನು ಬದಲಿಸಬಹುದಾದ್ದರಿಂದ ಇಂತಹದೊಂದು ಬ್ರಹ್ಮಾಸ್ತ್ರ ತನ್ನತ್ತ ಬರುತ್ತಿದೆಯೆಂದು ಅಮೆರಿಕಕ್ಕೆ (ಅಥವಾ ಯಾವುದೇ ದೇಶಕ್ಕೆ) ಸ್ಪಷ್ಟವಾಗಿ ತಿಳಿಯುವ ಹೊತ್ತಿಗೆ ಕಾಲ ಮಿಂಚಿಹೋಗಿರುತ್ತದೆ, ಅದನ್ನು ಮಾರ್ಗಮಧ್ಯದಲ್ಲೇ ಹೊಡೆದುರುಳಿಸಲು ಸೂಕ್ತ ಸಮಯಾವಕಾಶ ಇರುವುದಿಲ್ಲ. ಚೀನಾದ ಈ ಪ್ರಳಯಾಂತಕ ಸಾಮರ್ಥ್ಯಕ್ಕೆ ಸೂಕ್ತ ಪ್ರತಿಸಾಮರ್ಥ್ಯ ಸದ್ಯಕ್ಕೆ ಅಮೆರಿಕಕ್ಕೆ ಇಲ್ಲ.
ಇದೆಲ್ಲದರ ಅರ್ಥ ಇವುಗಳನ್ನು ಝುಳಪಿಸಿಯೇ ಚೀನಾ ಅಮೆರಿಕವನ್ನು ತೈವಾನ್ನಿಂದ ದೂರ ಇಡಬಹುದು. ಇನ್ನೊಂದು ಮಗ್ಗುಲಿಂದ ನೋಡಿದರೆ ರಷ್ಯಾದ ಯುಕ್ರೇನ್ ಆಕ್ರಮಣ ಮತ್ತು ಚೀನಾದ ತೈವಾನ್ ಆಕ್ರಮಣ ಯೋಜನೆ ಒಂದಕ್ಕೊಂದು ಪೂರಕವಾಗಿರಬಹುದೇ ಎಂಬ ಅನುಮಾನವೂ ಆಗುತ್ತದೆ. ಫೆಬ್ರವರಿ ಮೊದಲವಾರಕ್ಕೇ ನಿಗದಿಯಾಗಿದ್ದ ಯೂಕ್ರೇನ್ ಆಕ್ರಮಣವನ್ನು ರಷ್ಯಾ ಕೊನೆಯವಾರಕ್ಕೆ ಮುಂದೂಡಿದ್ದು ಚೀನಾದ ವಿನಂತಿಯ ಮೇರೆಗೆ ಎಂಬ ಮಾತಿದೆ. ಬೀಜಿಂಗ್ನಲ್ಲಿ ನಡೆಯುತ್ತಿದ್ದ ಚಳಿಗಾಲದ ಒಲಿಂಪಿಕ್ಸ್ಗೆ ಧಕ್ಕೆಯಾಗದಿರಲಿ ಎಂಬುದು ಚೀನೀ ವಿನಂತಿಯು ಹಿಂದಿದ್ದ ಕಾರಣ. ಆಮೇಲೆ ಯುದ್ಧ ಆರಂಭವಾದಾಗ ತನ್ನ ವಾಯುಸೇನೆಯನ್ನು ಮೊದಲಿಗೇ ಬಳಸಿ ಯೂಕ್ರೇನ್ ಅನ್ನು ಧರಾಶಾಯಿಯಾಗಿಸಿ ನಂತರ ಟ್ಯಾಂಕ್ ಪಡೆ ಮತ್ತು ಸೈನಿಕರಿಂದ ಆಕ್ರಮಣವೆಸಗುವ ಸುಲಭದ ಸಮರತಂತ್ರ ಅನುಸರಿಸಬಹುದಾಗಿದ್ದ ರಷ್ಯಾ ಆ ಮಾರ್ಗವನ್ನು ಬಿಟ್ಟು ಯುದ್ಧವನ್ನು ಎಳೆದುಕೊಂಡು ಹೋಗುತ್ತಿರುವುದು ಚೀನಾಗೆ ತೈವಾನ್ ಆಕ್ರಮಣದ ತಯಾರಿಯ ಸಮಯ ಒದಗಿಸುವ ಉದ್ದೇಶದಿಂದಿರಬಹುದೇ? ಇದರಿಂದಾಗಿ ಅಮೆರಿಕದ ಪ್ರತಿಕ್ರಿಯಾಸಾಮರ್ಥ್ಯವನ್ನು ಅಳೆಯಲೂ ಚೀನಾಗೆ ಅವಕಾಶವಾಗಿದೆ.
ಈಗ ತೈವಾನ್ ನೆಲೆಯ ಮೇಲಿನ ದಾಳಿಯ ಅಭ್ಯಾಸವನ್ನು ಚೀನಾ ಮುಗಿಸಿದೆ. ಅಮೆರಿಕದ ನೆಲೆಗಳ ಮೇಲಿನ ದಾಳಿಯ ಅಭ್ಯಾಸವೂ ಸದ್ಯದಲ್ಲೇ ನಡೆಯಬಹುದು. ಅವುಗಳ ಪ್ರತಿಕೃತಿಗಳೂ ತಯಾರಾಗಿವೆ ಎಂದು ಉಪಗ್ರಹಗಳು ಸಾರಿವೆ. ಅದು ನಡೆದಾಗ ಅದೇ ಉಪಗ್ರಹಗಳು ನಮಗದನ್ನು ಹೇಳುತ್ತವೆ. ಆ ಬಗ್ಗೆ ಸಂಶಯ ಬೇಡ. ಸದ್ಯಕ್ಕೆ ನಮಗೆ ಸ್ಪಷ್ಜ ಉತ್ತರ ಸಿಗದ ಪ್ರಶ್ನೆಯೆಂದರೆ-ಬೈಡೆನ್ ಕೇವಲ ಬೆದರುಗೊಂಬೆ ಎಂಬ ಅಮೆರಿಕದ ಸರ್ಕಾರಿ ರಹಸ್ಯವನ್ನು ಜಗತ್ತಿಗೇ ಸಾರಲು ರಷ್ಯಾ ಆರಂಭಿಸಿದ ಕಾರ್ಯಯೋಜನೆಯನ್ನು ಚೀನಾ ಸದ್ಯದಲ್ಲೇ ಪೂರ್ಣಗೊಳಿಸಬಹುದೇ?
(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)