ಅಪರಾಧ, ಶಿಕ್ಷೆ ಅವರವರ ಭಾವದ ಬಂದಿಯಾಗದಿರಲಿ

Column F 1
Published on

ಇಸ್ಲಾಂ ಧರ್ಮದ ಸಂಸ್ಥಾಪಕರಾದ ಪ್ರವಾದಿ ಮಹಮದ್​ರ ಬದುಕಿನ ಒಂದು ಪ್ರಕರಣವನ್ನು ಭಾರತೀಯ ಜನತಾ ಪಕ್ಷದ ಮಾಜಿ ವಕ್ತಾರೆ ನೂಪುರ್ ಶರ್ಮಾ ಆಂಗ್ಲ ವಾರ್ತಾವಾಹಿನಿಯೊಂದರ ಚರ್ಚೆಯೊಂದರಲ್ಲಿ ಪ್ರಸ್ತಾಪಿಸಿ ಮೂರು ವಾರಗಳಾಗುತ್ತಿವೆ. ಈ ಬಗ್ಗೆ ಕತಾರ್​ನಿಂದ ಆರಂಭಗೊಂಡು ಮುಸ್ಲಿಂ ಜಗತ್ತಿನ ನಾಯಕ ಸೌದಿ ಅರೇಬಿಯಾ ಸೇರಿದಂತೆ ಹದಿನಾರು ಮುಸ್ಲಿಂ ರಾಷ್ಟ್ರಗಳು ಭಾರತ ಸರ್ಕಾರಕ್ಕೆ ತಮ್ಮ ಅಸಮ್ಮತಿ ಹಾಗೂ ಆಕ್ರೋಶವನ್ನು ಅಧಿಕೃತವಾಗಿ ವ್ಯಕ್ತಪಡಿಸಿವೆ, ಭಾರತದಲ್ಲಿ ಮುಸ್ಲಿಂ ಸಮುದಾಯದ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ ಮತ್ತು ಆ ಪ್ರತಿಭಟನೆಗಳು ಹಿಂಸಾತ್ಮಕವಾಗುತ್ತಿವೆ.

ನೂಪುರ್ ಶರ್ಮಾ ಪ್ರಸ್ತಾಪಿಸಿದ ಸಂಗತಿ ಹದೀತ್ ಅಲ್ ಬುಖಾರಿಯಲ್ಲೇ ಉಲ್ಲೇಖಿತವಾಗಿದೆ ಎಂದು ಝುಕೀರ್ ನಾಯಕ್ ಸೇರಿದಂತೆ ಹಲವಾರು ಇಸ್ಲಾಮಿಕ್ ವಿದ್ವಾಂಸರು ಸಾರ್ವಜನಿಕವಾಗಿಯೇ ಹೇಳುತ್ತಾರೆ. ಪಾಕಿಸ್ತಾನೀ ವಿದ್ವಾಂಸ ಅನ್ವರ್ ಶೇಖ್ ಅವರಂತೂ ಈ ಬಗ್ಗೆ ತಮ್ಮ ಕೃತಿಗಳಲ್ಲಿ ಟೀಕಾತ್ಮಕ ವಿಶ್ಲೇಷಣೆಯನ್ನೇ ಮಾಡಿದ್ದಾರೆ. ಆದರೆ, ಈ ವಿಷಯವನ್ನು ಹೇಳುವಲ್ಲಿ ನೂಪುರ್ ಶರ್ಮಾ ಮಾಡಿದ ಪದಪ್ರಯೋಗ ಅನುಚಿತವಾಗಿತ್ತು ಎಂಬುದರಲ್ಲಿ ಎರಡು ಮಾತಿಲ್ಲ. ಹೀಗಾಗಿ ಮುಸ್ಲಿಂ ರಾಷ್ಟ್ರಗಳ ಆಕ್ರೋಶವನ್ನು ಅರ್ಥ ಮಾಡಿಕೊಳ್ಳಬಹುದಾದರೂ, ತನ್ನ ತಾಯಿ ಮತ್ತು ಮುಸ್ಲಿಂ ಅರಸರನ್ನು ಪೂರ್ಣ ಉಡುಪಿನಲ್ಲಿ ಚಿತ್ರಿಸುತ್ತಲೇ ಹಿಂದೂ ದೇವ-ದೇವಿಯರನ್ನು ನಗ್ನವಾಗಿ ಚಿತ್ರಿಸಿದ ಚಿತ್ರಕಾರ ಎಂ.ಎಫ್ ಹುಸೇನ್​ರಿಗೆ ಪೌರತ್ವ ನೀಡಬಂದ ಕತಾರ್ ಇಂದು ನೂಪುರ್ ಶರ್ಮಾ ವಿಷಯದಲ್ಲಿ ತೋರಿದ ನೀತಿ ಆಷಾಢಭೂತಿತನದ್ದೆಂದೇ ಹೇಳಬೇಕು. ಇದೇ ಮಾತನ್ನು ಮುಸ್ಲಿಮೇತರರಿಗೆ ಧಾರ್ವಿುಕ ಸ್ವಾತಂತ್ರ್ಯವನ್ನೇ ನೀಡದ ಇತರ ಮುಸ್ಲಿಂ ದೇಶಗಳ ಬಗೆಗೂ ಹೇಳಬಹುದು.

ನಂತರ ನೂಪುರ್ ಶರ್ವರ ಹೇಳಿಕೆಯಿಂದ ಬಿಜೆಪಿ ತನ್ನನ್ನು ದೂರವಿರಿಸಿಕೊಂಡದ್ದಲ್ಲದೆ, ಅವರ ಸದಸ್ಯತ್ವವನ್ನು ಅಮಾನತ್ತಿನಲ್ಲಿರಿಸಿತು. ಇಂತಹದೇ ವಿಷಯವನ್ನು ಟ್ವೀಟ್ ಮಾಡಿದ ನವೀನ್ ಜಿಂದಾಲ್ ಅವರನ್ನು ಪಕ್ಷದಿಂದ ಉಚ್ಚಾಟಿಸಿದ್ದೂ ಆಯಿತು. ಹದಿನಾರು ಮುಸ್ಲಿಂ ರಾಷ್ಟ್ರಗಳ ಆಕ್ಷೇಪಣೆಗಳಿಗೆ ಸ್ಪಂದಿಸಿದ ಕೇಂದ್ರ ಸರ್ಕಾರ ನೂಪುರ್ ಶರ್ಮಾ ಮತ್ತು ನವೀನ್ ಜಿಂದಾಲ್​ರ ಮಾತುಗಳು ಭಾರತ ಸರ್ಕಾರದ ನೀತಿಗಳನ್ನು ಪ್ರತಿಬಿಂಬಿಸುವುದಿಲ್ಲ ಎಂದೂ ಸ್ಪಷ್ಟಪಡಿಸಿತು. ನೂಪುರ್ ಶರ್ಮಾ ಸಹ ತಮ್ಮ ಮಾತಿನಿಂದ ಯಾರಿಗಾದರೂ ನೋವಾಗಿದ್ದಲ್ಲಿ ವಿಷಾದಿಸುವುದಾಗಿ ಮತ್ತು ಹೇಳಿಕೆಯನ್ನು ಹಿಂತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಇಷ್ಟೆಲ್ಲದರಿಂದ ವಿವಾದ ತಣ್ಣಗಾಗಬೇಕಾಗಿತ್ತು. ಹೊರದೇಶಗಳಲ್ಲಿ ಆದದ್ದು ಅದೇ. ವಿಷಯವನ್ನು ತುಸು ಅತಿರೇಕಕ್ಕೆ ಕೊಂಡೊಯ್ದದ್ದು ಇರಾನ್. ತನ್ನ ದೇಶದ ವಿದೇಶಮಂತ್ರಿ ಭಾರತ ಭೇಟಿಯಲ್ಲಿ ಈ ವಿಷಯವನ್ನು ಭಾರತದ ಪ್ರಧಾನಮಂತ್ರಿಗಳ ರಾಷ್ಟ್ರೀಯ ಸುರಕ್ಷಾ ಸಲಹೆಗಾರ ಅಜಿತ್ ದೋವಲ್​ರೊಂದಿಗೆ ಪ್ರಸ್ತಾಪಿಸಿದರೆಂದು ಸುಳ್ಳು ಪ್ರಕಟಣೆ ನೀಡಿದ ಇರಾನ್, ಅಂತಹ ಯಾವ ಚರ್ಚೆಯೂ ನಡೆಯಲಿಲ್ಲವೆಂದು ಭಾರತ ಸರ್ಕಾರ ಹೇಳಿಕೆ ನೀಡಿದಾಗ ತನ್ನ ಹೇಳಿಕೆಯನ್ನು ಸದ್ದಿಲ್ಲದೆ ಹಿಂತೆಗೆದುಕೊಂಡಿತು. ಇಸ್ಲಾಮಿಕ್ ಜಗತ್ತಿನ ನಾಯಕತ್ವಕ್ಕಾಗಿ ಸೌದಿ ಅರೇಬಿಯಾದೊಂದಿಗೆ ಸ್ಪರ್ಧೆಗಳಿಯುವ ಹುಚ್ಚಿನ ಇರಾನ್ ತಾನೇ ಇಸ್ಲಾಂನ ನಿಜವಾದ ರಕ್ಷಕ ಎಂದು ಬಿಂಬಿಸಲು ಪ್ರಕರಣವನ್ನು ಹೀಗೆ ದುರುಪಯೋಗಪಡಿಸಿಕೊಂಡಿತ್ತು ಮತ್ತು ಅದರಲ್ಲಿ ಮುಖಭಂಗ ಅನುಭವಿಸಿತು. ಒಟ್ಟಿನಲ್ಲಿ ಮುಸ್ಲಿಂ ದೇಶಗಳಲ್ಲಿ ಸರ್ಕಾರಿ ಸ್ತರದಲ್ಲಿ ಎದ್ದಿದ್ದ ಆಕ್ಷೇಪಣೆ ದೂರವಾಯಿತು. ಇದಕ್ಕೆ ಭಾರತದೊಂದಿಗೆ ಆ ದೇಶಗಳು ಹೊಂದಿರುವ ಆರ್ಥಿಕ ಸಂಬಂಧಗಳು ಮತ್ತು ಕಳೆದ ಆರೇಳು ವರ್ಷಗಳಲ್ಲಿ ಮೋದಿ ಸರ್ಕಾರ ಆ ದೇಶಗಳ ಜತೆ ಸಾಧಿಸಿರುವ ಅಭೂತಪೂರ್ವ ಸ್ನೇಹ ಮತ್ತು ಸದ್ಭಾವನೆಗಳು ಒಂದು ಕಾರಣವಾದರೆ, ಅಂತಾರಾಷ್ಟ್ರೀಯ ರಂಗದಲ್ಲಿ ನೂಪುರ್ ಶರ್ವರಿಗೆ ಸಿಗತೊಡಗಿದ ಬೆಂಬಲ ಮತ್ತದು ಇಸ್ಲಾಂ ಅನ್ನು ವಿಮರ್ಶಾತ್ಮಕವಾಗಿ ನೋಡಲು ಜಗತ್ತನ್ನು ಪ್ರೇರೇಪಿಸುವಂತೆ ಕಾಣತೊಡಗಿದ್ದು ಇನ್ನೊಂದು ಕಾರಣ. ಈ ಸಂಬಂಧದಲ್ಲಿ ನೂಪುರ್ ಶರ್ಮಾ ಪರವಾಗಿ ಬಂದ ಕೆಲವು ಪ್ರಮುಖ ಹೇಳಿಕೆಗಳನ್ನು ಪರಿಶೀಲಿಸೋಣ. ನೆದರ್​ಲ್ಯಾಂಡ್​ನ ಪ್ರಮುಖ ವಿರೋಧ ಪಕ್ಷದ ನಾಯಕ ಗೀರ್ತ್ ವೈಲ್ಡರ್, ‘ಧರ್ಮಗ್ರಂಥದಲ್ಲೇ ಇರುವುದನ್ನು ಉಲ್ಲೇಖಿಸಿದ ನೂಪುರ್ ಶರ್ವರನ್ನು ನಿಂದಿಸುವ ಯಾವ ಹಕ್ಕೂ ಮುಸ್ಲಿಂ ರಾಷ್ಟ್ರಗಳಿಗಿಲ್ಲ, ಭಾರತ ಅವುಗಳಿಗೆ ತಪ್ಪೊಪ್ಪಿಗೆ ನೀಡುವ ಅಗತ್ಯವೂ ಇಲ್ಲ. ಬದಲಿಗೆ ಪ್ರಜಾಪ್ರಭುತ್ವವಾಗಲೀ, ಅಭಿವ್ಯಕ್ತಿ ಸ್ವಾತಂತ್ರ್ಯವಾಗಲೀ ಇಲ್ಲದ ಮತ್ತು ಮಾನವ ಹಕ್ಕುಗಳಿಗೆ ಮತ್ತು ಮಹಿಳಾ ಹಕ್ಕುಗಳಿಗೆ ಲವಲೇಶದ ಬೆಲೆಯನ್ನೂ ನೀಡದ ಮುಸ್ಲಿಂ ರಾಷ್ಟ್ರಗಳನ್ನೇ ನಾವೀಗ ಟೀಕಿಸಬೇಕಾಗಿದೆ’ ಎಂದರು. ಕೆನಡಾದಲ್ಲಿ ನೆಲೆಸಿರುವ ಹಾಗೂ ವಿಶಾಲ ಓದುಗ ಸಮುದಾಯವನ್ನು ಹೊಂದಿರುವ ಪಾಕಿಸ್ತಾನೀ ಲೇಖಕ ತಾರಿಖ್ ಫತೇ ಅವರೂ ನೂಪುರ್ ಪರವಾಗಿ ದನಿಯೆತ್ತಿದರು. ಇಲ್ಲಿ ಪಾಕಿಸ್ತಾನಿ ಪತ್ರಕರ್ತ ತಹಾ ಸಿದ್ಧಿಕಿ ಅವರ ಮಾತನ್ನು ಉಲ್ಲೇಖಿಸಬೇಕು. ‘ಪ್ರಮಾಣಿತ’ ವಿಷಯವನ್ನು ಪ್ರಸ್ತಾಪಿಸಿದ್ದಕ್ಕಾಗಿ ನೂಪುರ್ ಶರ್ಮಾ ಮತ್ತು ಬಿಜೆಪಿಯ ಮೇಲೆ ದಾಳಿಯೆಸಗುವ ಬದಲಾಗಿ, ಆ ವಿಷಯಗಳು ತಪ್ಪಾಗಿದ್ದಲ್ಲಿ ಅವುಗಳನ್ನು ಹದೀತ್​ಗಳಿಂದ ತೆಗೆದುಹಾಕಲು ಮುಸ್ಲಿಂ ನಾಯಕರು ಮುಂದಾಗಬೇಕು ಎಂದು ಸಿದ್ಧಿಕಿ ಹೇಳುತ್ತಾರೆ. ಇಂತಹ ಹೇಳಿಕೆಗಳು ಮುಸ್ಲಿಮರಿಂದಲೇ ಹೆಚ್ಚುಹೆಚ್ವು ಬರತೊಡಗಿದರೆ, ಅವುಗಳಿಗೆ ಮುಸ್ಲಿಂ ಜಗತ್ತಿನಲ್ಲೇ ಬೆಂಬಲ ಸಿಗತೊಡಗಿದರೆ ಮತ್ತು ಧರ್ಮಗ್ರಂಥಗಳ ಪರಿಷ್ಕರಣೆಗಾಗಿ ಬೇಡಿಕೆ ಏಳತೊಡಗಿದರೆ ಅದು ಮುಸ್ಲಿಂ ಜಗತ್ತಿನ ಧಾರ್ವಿುಕ ಮತ್ತು ರಾಜಕೀಯ ನಾಯಕರನ್ನೇ ಇಕ್ಕಟ್ಟಿಗೆ ಸಿಲುಕಿಸಿಬಿಡುತ್ತದೆ. ಪ್ರವಾದಿಯವರ ಕುರಿತಾಗಿ ಹೇಳುವುದರ ಜತೆಗೇ, ಭೂಮಿ ಚಪ್ಪಟೆಯಾಗಿದೆ ಎಂದು ಗ್ರಂಥದಲ್ಲಿದೆ. ಆದರೆ, ಅದು ಅವೈಜ್ಞಾನಿಕ ಎಂದೂ ನೂಪುರ್ ಶರ್ಮಾ ಮಾತಿನ ನಡುವೆ ಹೇಳಿದ್ದನ್ನೂ ಲೆಕ್ಕಕ್ಕೆ ತೆಗೆದುಕೊಂಡರೆ, ಧರ್ಮಗ್ರಂಥಗಳ ಪರಿಷ್ಕರಣೆಗೆ ಒಮ್ಮೆ ಚಾಲನೆ ನೀಡಿಬಿಟ್ಟರೆ ಅದು ಒಂದು ವಿಷಯಕ್ಕೇ ನಿಲ್ಲದ ಮಟ್ಟಕ್ಕೆ ಹೋಗಿಬಿಡುತ್ತದೆ. ಅಂತಿಮವಾಗಿ ಅದು ಇಸ್ಲಾಂನ ಪ್ರಸಕ್ತ ಆಚರಣೀಯ ಸ್ವರೂಪವನ್ನೇ ಬದಲಾಯಿಸುವ ಮಟ್ಟಕ್ಕೆ ಹೋಗಬಹುದು. ಅದರ ಜತೆಗೆ ಅರಬ್ ಜಗತ್ತಿನಲ್ಲಿ ಈಗ ಅಸ್ತಿತ್ವದಲ್ಲಿರುವ ಧರ್ವಧಾರಿತ ನಿರಂಕುಶಾಧಿಕಾರಿ ಆಳ್ವಿಕೆಗಳಿಗೆ ವಿರೋಧವೂ ಮೊಳೆತು ಬೆಳೆಯಬಹುದು. ಹೀಗಾಗಿ, ಧರ್ಮಗ್ರಂಥಗಳ ಪರಿಷ್ಕರಣೆ ಮುಸ್ಲಿಂ ಜಗತ್ತಿನ ನಾಯಕರು ಬಯಸುವ ಕೊನೆಯ ಕೃತ್ಯ, ಅದನ್ನವರು ಶತಾಯಗತಾಯ ಮಾಡಲಾರರು. ಹೀಗಾಗಿ, ನೂಪುರ್ ಶರ್ಮಾ ವಿವಾದವನ್ನು ಇಲ್ಲಿಗೇ ನಿಲ್ಲಿಸುವುದು ತಮಗೇ ವಿಹಿತ ಎಂದು ಮುಸ್ಲಿಂ ರಾಷ್ಟ್ರಗಳ ಸರ್ಕಾರಗಳು ಅರಿತುಕೊಂಡವು. ಇದನ್ನು ಮೊದಲೇ ಅರಿತಿದ್ದ ಬಹುತೇಕ ಮುಸ್ಲಿಂ ದೇಶಗಳು ಈ ವಿಷಯದಲ್ಲಿ ಮೌನ ವಹಿಸಿದ್ದವು ಎನ್ನುವುದೂ ಈ ಹದಿನಾರು ದೇಶಗಳಿಗೊಂದು ಪಾಠವಾಯಿತು. ಒಟ್ಟಿನಲ್ಲಿ ಒಂದು ಟಿವಿ ಚರ್ಚೆಯಲ್ಲಿ, ಆ ಕ್ಷಣದ ಪ್ರಚೋದನೆಗೊಳಗಾಗಿ ಆಡಿದ ಮಾತುಗಳ ಬಗ್ಗೆ ಅರಬ್ ಜಗತ್ತು ಮೌನವಾಗತೊಡಗಿತು.

ಆದರೆ, ಮುಸ್ಲಿಂ ರಾಷ್ಟ್ರಗಳ ನೇತಾರರಿಗೆ ತಟ್ಟಿದ ಅರಿವು ಭಾರತೀಯ ಮುಸ್ಲಿಮರಿಗೆ ಆದಂತಿಲ್ಲ. ಹೀಗಾಗಿ, ಇಲ್ಲಿನ್ನೂ ವಿವಾದವಾಗಿಯೇ ಮುಂದುವರಿಯುತ್ತಿದೆ. ನೂಪುರ್ ಶರ್ವರ ಮಾತನ್ನು ದೈವನಿಂದೆ ಎಂದು ಪರಿಗಣಿಸಿ ಅದಕ್ಕಾಗಿ ಅವರನ್ನು ಶಿಕ್ಷೆಗೊಳಪಡಿಸಬೇಕೆಂದು ಒತ್ತಾಯಿಸಿ ರಾಜಧಾನಿ ದೆಹಲಿ ಸೇರಿದಂತೆ ದೇಶಾದ್ಯಂತ ಮುಖ್ಯವಾಗಿ ಶುಕ್ರವಾರಗಳಂದು ಮತ್ತೆಮತ್ತೆ ಪ್ರದರ್ಶನ ನಡೆಯುತ್ತಿವೆ. ದೈವನಿಂದೆಗಿರುವ ಶಿಕ್ಷೆಯೆಂದರೆ ತಲೆದಂಡ ಎಂದು ವಾದಿಸಿ ಕೆಲವರು ನೂಪುರ್ ಶರ್ವರನ್ನು ಕೊಲ್ಲುವ ಬೆದರಿಕೆಯನ್ನೂ ಒಡ್ಡಿದ್ದಾರೆ.

ಈ ಹಿನ್ನೆಲೆಯಲ್ಲಿ ನೂಪುರ್ ಶರ್ವರ ಮಾತನ್ನು ದೈವನಿಂದೆ ಎಂದು ಪರಿಗಣಿಸಿ ಅದಕ್ಕನುಗುಣವಾಗಿ ಅವರಿಗೆ ಶಿಕ್ಷೆ ನೀಡುವ ವ್ಯವಸ್ಥೆ ಭಾರತದಲ್ಲಿದೆಯೇ ಎಂದು ಪರಿಶೀಲಿಸುವುದು ಅಗತ್ಯವಾಗುತ್ತದೆ. ನಮ್ಮ ಸಂವಿಧಾನ ಹಾಗೂ ಸರ್ಕಾರಗಳು ಕಾಲಕಾಲಕ್ಕೆ ಜಾರಿಗೆ ತಂದ ಕಾನೂನುಗಳಲ್ಲಿ ‘ದೈವನಿಂದೆ’ ಎಂಬ ಪದ ಅಥವಾ ಪದಪುಂಜದ ಉಲ್ಲೇಖ ಕಾಣಸಿಗದಿದ್ದರೂ, ಆ ಪದಕ್ಕೆ ಇಸ್ಲಾಮಿಕ್ ಜಗತ್ತು ಅಧಿಕೃತವಾಗಿ ಅಥವಾ ಅನಧಿಕೃತವಾಗಿ ನೀಡುವ ಅರ್ಥವನ್ನು ಸೂಚಿಸುವ ಅಪರಾಧಗಳ ಪಟ್ಟಿ ಮತ್ತು ಅವುಗಳಿಗೆ ಸೂಕ್ತ ಶಿಕ್ಷೆಯ ಪ್ರಕಾರಗಳು ಹಾಗೂ ಪ್ರಮಾಣಗಳು ಇಂಡಿಯನ್ ಪೀನಲ್ ಕೋಡ್​ನಲ್ಲಿವೆ. ‘ಯಾರದೇ ಧರ್ಮ ಅಥವಾ ವರ್ಗವನ್ನು ಅವಮಾನಿಸುವ ಉದ್ದೇಶದಿಂದ ಯಾವುದೇ ಸಮುದಾಯ ಪವಿತ್ರವೆಂದು ನಂಬುವ ಪೂಜಾಸ್ಥಳ ಹಾಗೂ ವಸ್ತುಗಳನ್ನು ಉದ್ದೇಶಪೂರ್ವಕವಾಗಿ ಹಾಗೂ ಅರಿವಿನೊಂದಿಗೆ ನಾಶಪಡಿಸುವ, ಹಾನಿಗೊಳಗಾಗಿಸುವ, ಅಪವಿತ್ರಗೊಳಿಸುವ ಯಾವುದೇ ವ್ಯಕ್ತಿಯ ವಿರುದ್ಧ ಮೊಕದ್ದಮೆ ನಡೆಸಬಹುದು’ ಎಂದು ಐಪಿಸಿಯ 295ನೇ ಕಲಮು ಹೇಳುತ್ತದೆ. ಭಾರತ ಒಂದು ಬಹುಧರ್ವಿುಯ, ಬಹುವರ್ಗೀಯ ದೇಶ, ಇದರಲ್ಲಿ ಧರ್ಮಕಲಹ ಹಾಗೂ ವರ್ಗಕಲಹಗಳನ್ನು ನಿಯಂತ್ರಿಸುವುದು ತಮ್ಮ ಆಡಳಿತಕ್ಕೆ ಅಗತ್ಯ ಎಂದು ತಿಳಿದು ಬ್ರಿಟಿಷ್ ವಸಾಹತುಶಾಹಿ ಸರ್ಕಾರ 1860ರಲ್ಲಿ ಈ ಕಲಮನ್ನು ಐಪಿಸಿಗೆ ಸೇರಿಸಿತು. ಈ ಕಲಮಿಗೆ 1927ರಲ್ಲಿ ಅನುಚ್ಛೇದವೊಂದನ್ನು ಸೇರಿಸಲಾಯಿತು. ಈ ಐಪಿಸಿ 295 (ಎ)ಗೆ ಕಾರಣವಾದದ್ದು 1920ರ ದಶಕದಲ್ಲಿ ಘಟಿಸಿದ ಕೆಲವು ಅಹಿತಕರ ಘಟನೆಗಳು. ಮೊದಲಿಗೆ ಇಬ್ಬರು ಮುಸ್ಲಿಂ ಲೇಖಕರು ಹಿಂದೂ ಧರ್ಮ ಮತ್ತು ಹಿಂದೂ ದೇವ-ದೇವಿಯರನ್ನು ಅವಮಾನಿಸುವ ಎರಡು ಪುಸ್ತಕಗಳನ್ನು ಪ್ರಕಟಿಸಿದರು. ಇದಕ್ಕೆ ಪ್ರತಿಯಾಗಿ ಆರ್ಯ ಸಮಾಜದ ಕಾರ್ಯಕರ್ತರೊಬ್ಬರು ಪ್ರವಾದಿ ಮಹಮದ್​ರನ್ನು ಹೀಗಳೆಯುವ ಕೃತಿಯೊಂದನ್ನು ಪ್ರಕಟಿಸಿದರು. ಇದನ್ನು ದೈವನಿಂದೆ ಎಂದು ಪರಿಗಣಿಸಿ ಮುಸ್ಲಿಂ ಸಮುದಾಯದ ಹಲವರು ವಿರೋಧಿಸಿದರು. ಅದು ಅತಿರೇಕಕ್ಕೆ ಹೋಗಿ ಆ ಕೃತಿಯ ಲೇಖಕ ಹತ್ಯೆಗೊಳಗಾದರು. ಈ ಬಗೆಯ ಕೃತಿಗಳ ಪ್ರಕಟಣೆ ಮತ್ತದರ ಪರಿಣಾಮವಾದ ಹಿಂಸಾತ್ಮಕ ಕೃತ್ಯಗಳನ್ನು ತಡೆಗಟ್ಟುವ ಉದ್ದೇಶದಿಂದ, ಯಾರೂ ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದೆಂದು ಎಚ್ಚರಿಸುವ ಉದ್ದೇಶದಿಂದ ಸರ್ಕಾರ ಸೇರಿಸಿದ ಈ ಅನುಚ್ಛೇದ ಹೇಳಿದ್ದೇನೆಂದರೆ ‘ಮಾತು, ಬರಹ, ಸಂಕೇತ ಅಥವಾ ದೃಷ್ಟಿಗೋಚರ ಸನ್ನೆಗಳ ಮೂಲಕ ಯಾವುದೇ ಸಮುದಾಯದ ಧಾರ್ವಿುಕ ನಂಬಿಕೆಗಳನ್ನು ಅವಮಾನಿಸುವ ಕೃತ್ಯಗಳೂ ಅಪರಾಧವಾಗುತ್ತವೆ ಮತ್ತು ಅವುಗಳನ್ನು ಎಸಗಿದ ವ್ಯಕ್ತಿ ಅಥವಾ ವ್ಯಕ್ತಿಗಳ ವಿರುದ್ಧ ಮೊಕದ್ದಮೆ ನಡೆಸಬಹುದಾಗಿದೆ.’

ಸ್ವತಂತ್ರ ಭಾರತ ಈ ಐಪಿಸಿಯನ್ನು ಉಳಿಸಿಕೊಂಡ ಕಾರಣ 295, 295 (ಎ) ಕಲಮು ಈಗಲೂ ನಮ್ಮಲ್ಲಿ ಧಾರ್ವಿುಕ ಸಾಮರಸ್ಯವನ್ನು ಕಾಪಾಡುವ ಕ್ರಮವಾಗಿದೆ. 295 (ಎ) ವಿರುದ್ಧ ಸವೋಚ್ಚ ನ್ಯಾಯಾಲಯದಲ್ಲಿ ಯಾಚನೆ ದಾಖಲಾದದ್ದೂ ಉಂಟು. ಆದರೆ, ಅದನ್ನು ನ್ಯಾಯಾಲಯ 1957ರಲ್ಲಿ ತಳ್ಳಿಹಾಕಿತು. ಇಲ್ಲಿ ನಮ್ಮ ಸಂವಿಧಾನದ 19ನೇ ವಿಧಿಯನ್ನು ಉಲ್ಲೇಖಿಸಬೇಕು. ಈ ವಿಧಿ ಭಾರತದ ನಾಗರಿಕರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡುತ್ತದೆ. ನಂತರ ಈ ವಿಧಿ ದುರುಪಯೋಗವಾಗಬಹುದೆಂದು ಬಗೆದು ಅದಕ್ಕೆ ತಿದ್ದುಪಡಿ ತಂದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಕೆಲವು ಮಿತಿಗಳನ್ನು ಹೇರಲಾಯಿತು.

ಹೀಗೆ ಐಪಿಸಿ 295 ಹಾಗೂ 295 (ಎ) ಮತ್ತು ಸಂವಿಧಾನದ 19ನೇ ವಿಧಿಗೆ ತಂದ ತಿದ್ದುಪಡಿ ಇಂದು ನಮ್ಮಲ್ಲಿ ‘ದೈವನಿಂದೆ’ ಎಂದು ಪರಿಗಣಿಸಬಹುದಾದ ಅಪರಾಧಗಳನ್ನು ನಿಯಂತ್ರಿಸಿ ದೇಶದಲ್ಲಿ ಧಾರ್ವಿುಕ ಸಾಮರಸ್ಯವನ್ನು ಕಾಪಾಡುವ ಕ್ರಮಗಳಾಗಿವೆ. ಇಷ್ಟಾಗಿಯೂ ಧಾರ್ವಿುಕ ಕಾರಣಗಳಿಗಾಗಿ ಹಿಂಸಾತ್ಮಕ ಕೃತ್ಯಗಳು ನಡೆಯುವುದು, ‘ದೈವನಿಂದೆ’ಯ ಆಪಾದನೆಯ ಮೇಲೆ ಹತ್ಯೆಗಳಾಗುವುದು ಆಗಾಗ ಘಟಿಸುತ್ತಲೇ ಇವೆ. ಈ ಸಂಬಂಧದಲ್ಲಿ ಅಕ್ಟೋಬರ್ 2019ರಲ್ಲಿ ಘಟಿಸಿದ ಕಮಲೇಶ್ ತಿವಾರಿ ಭೀಕರ ಹತ್ಯೆ ಇಲ್ಲಿ ಉಲ್ಲೇಖನೀಯ.

ಈ ನಿಟ್ಟಿನಲ್ಲಿ ನೂಪುರ್ ಶರ್ಮಾ ಮಾತನ್ನು ‘ದೈವನಿಂದೆ’ ಎಂದು ವರ್ಣಿಸಿ ಹಿಂಸಾತ್ಮಕ ಪ್ರತಿಭಟನೆಗೆ ಇಳಿದಿರುವವರು ಅರಿಯಬೇಕಾದ್ದೆಂದರೆ, ನೂಪುರ್ ಕೃತ್ಯ ಅಪರಾಧವೇ ಅಲ್ಲವೇ ಎಂದು ಗುರುತಿಸಲು ಅಗತ್ಯವಾದ ಕಾನೂನುಗಳು ನಮ್ಮಲ್ಲಿವೆ ಮತ್ತು ಅವುಗಳಿಗನುಗುಣವಾಗಿ ಅವರನ್ನು ವಿಚಾರಣೆಗೊಳಪಡಿಸಿ, ಅಪರಾಧ ಸಾಬೀತಾದರೆ ಸೂಕ್ತ ಶಿಕ್ಷೆ ವಿಧಿಸಬಲ್ಲ ನ್ಯಾಯಿಕ ವ್ಯವಸ್ಥೆಯೂ ನಮ್ಮಲ್ಲಿದೆ.

ಮೇಲೆ ಉಲ್ಲೇಖಿಸಿದ ಐಪಿಸಿಯ ಕಲಮುಗಳು ಬ್ರಿಟಿಷರ ಕಾಲದಿಂದ ಇಂದಿನವರೆಗೂ ಯಾವುದೇ ಒಂದು ಧರ್ಮಕ್ಕೆ ಸೀಮಿತವಾಗದೇ ಸಾರ್ವತ್ರಿಕವಾಗಿವೆ, ಧರ್ಮನಿರಪೇಕ್ಷವಾಗಿವೆ. ಪಾಕಿಸ್ತಾನ ಸಹ ಐಪಿಸಿಯನ್ನು ಉಳಿಸಿಕೊಂಡಿದೆ. ಆದರೆ, ಅದರ ಹೆಸರು ‘ಪಿಪಿಸಿ’ ಎಂದು ಬದಲಾಗಿದೆ. ಅದರಲ್ಲೂ 295, 295 (ಎ) ಕಲಮುಗಳಿವೆ. ಆದರೆ, ಇಸ್ಲಾಮಿಕ್ ರಿಪಬ್ಲಿಕ್ ಆಗಿರುವ ಆ ದೇಶದಲ್ಲಿ ಈ ಕಲಮುಗಳು ಕೇವಲ ಮುಸ್ಲಿಂ ಧರ್ವನುಯಾಯಿಗಳ ಧಾರ್ವಿುಕ ನಂಬಿಕೆಗಳನ್ನು ಗೌರವಿಸುತ್ತದೆ. ಅದು ಬೇರೆಯೇ ಕಥೆ.

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net