ದೇಶಗಳ ದುರ್​ನಾಯಕತ್ವ ದುರ್ವಿಧಿಗಳು

Column F
ಗೋತಬಯ ರಾಜಪಕ್ಷ, ಸದ್ದಾಂ ಹುಸೇನ್, ಅಡಾಲ್ಫ್​ ಹಿಟ್ಲರ್.
Published on
ಒಂದು ರಾಷ್ಟ್ರಕ್ಕೆ ಏನೆಲ್ಲಾ ಅನುಕೂಲಗಳಿದ್ದರೂ ವಿವೇಕಿ ನಾಯಕತ್ವವೊಂದಿಲ್ಲದಿದ್ದರೆ ಅದು ಹಾಳುಗೆಟ್ಟುಹೋಗುತ್ತದೆ ಎನ್ನುವುದಕ್ಕೆ ಇತಿಹಾಸದಲ್ಲಿ ಹಲವಾರು ಉದಾಹರಣೆಗಳು ಸಿಗುತ್ತವೆ. ಪ್ರಾಕೃತಿಕ ಸಂಪತ್ತು ಮತ್ತು ಪರಿಶ್ರಮಿ ಜನತೆಯಿಂದ ಕೂಡಿದ ಜರ್ಮನಿ, ಅಗಾಧ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಕ್ಷೇಪ ಹೊಂದಿದ ಇರಾಕ್​ನ ಕಥೆ-ವ್ಯಥೆ ಉಲ್ಲೇಖನೀಯ.

ಈ ವರ್ಷದ ಮೇ 9 ಮತ್ತು ಜುಲೈ 9ರಂದು ಕೊಲಂಬೋದಲ್ಲಿ ಕಂಡುಬಂದ ಘಟನೆಗಳು ಶ್ರೀಲಂಕನ್ನರಷ್ಟೇ ಏಕೆ ಜಗತ್ತಿನ ಜನಸಮುದಾಯದ ನೆನಪಿನಿಂದ ಬಹುಶಃ ಎಂದಿಗೂ ಮರೆಯಾಗಲಾರವು. ಮೊದಲಿಗೆ ಮೇ 9ರಂದು ಮಹಿಂದ ರಾಜಪಕ್ಷ ಶ್ರೀಲಂಕನ್ನರ ಆಕ್ರೋಶಕ್ಕೆ ಗುರಿಯಾಗಿ ಪ್ರಧಾನಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದರು. ಆಗಲೂ ಶಾಂತಗೊಳ್ಳದ ಜನರು ಮಹಿಂದರನ್ನೇ ಗುರಿಯಾಗಿಸಿಕೊಂಡು ಅವರ ನಿವಾಸಕ್ಕೇ ದಾಳಿಯಿಟ್ಟರು. ಆಗ ಮಹಿಂದರೇನಾದರೂ ಅವರ ಕೈಗೆ ಸಿಕ್ಕಿದ್ದರೆ ಅಂದು ಜೀವದಿಂದ ಉಳಿಯುತ್ತಿರಲಿಲ್ಲ. ಸೈನಿಕರು ಅವರನ್ನು ತರಾತುರಿಯಲ್ಲಿ ಹೆಲಿಕಾಪ್ಟರ್​ಗೇರಿಸಿ ಪೂರ್ವ ತೀರದ ಟ್ರಿಂಕಾಮಲೀ ಬಂದರಿನಲ್ಲಿರುವ ನೌಕಾನೆಲೆಗೆ ಕೊಂಡೊಯ್ಯತೊಡಗಿದರು. ಜನರ ಸಿಟ್ಟು ತಾರಕಕ್ಕೇರಿತು. ಆಗ ಕೊಲಂಬೋದಲ್ಲಿ ಘಟಿಸಿದ್ದು ಅಕ್ಷರಶಃ ಲಂಕಾದಹನ. ಮಹಿಂದರ ಮೂರು ಮತ್ತು ಇತರ ರಾಜಪಕ್ಷರುಗಳ ಹತ್ತು ನಿವಾಸಗಳು ರೋಷತಪ್ತ ಜನರಿಂದ ಬೆಂಕಿಗಾಹುತಿಯಾಗಿ ಉರಿದುಹೋದವು.

ಅಷ್ಟಾಗಿಯೂ ಜನಾಕ್ರೋಶ ಕುಗ್ಗಲಿಲ್ಲ. ವ್ಯಗ್ರ ಜನತೆ ‘ಗೋ ಗೋಟಾ ಗೋ!’ ಎಂದು ಕೂಗುತ್ತಾ ಅಧ್ಯಕ್ಷ ಗೋತಬಯ ರಾಜಪಕ್ಷರ ರಾಜಿನಾಮೆಗೆ ಆಗ್ರಹಿಸಿ ಅವರ ಅಧಿಕೃತ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ ಕೂತರು. ಗೋತಬಯ ಸೈನಿಕರ ಬಿಗಿಭದ್ರತೆಯಲ್ಲಿ ತಮ್ಮ ಅಧಿಕೃತ ನಿವಾಸದಿಂದಲೇ ಕಾರ್ಯ ನಿರ್ವಹಿಸತೊಡಗಿದರು. ಇದೇ ಜುಲೈ 9ರಂದು ಅದೂ ಅಂತ್ಯಗೊಂಡಿತು. ತಾಳ್ಮೆ ಕಳೆದುಕೊಂಡ ಸಹಸ್ರಾರು ಜನ ಸೇನಾ ಭದ್ರತೆಯನ್ನು ಮುರಿದು ಅಧ್ಯಕ್ಷರ ನಿವಾಸಕ್ಕೆ ನುಗ್ಗಿದರು. ಸರಿಯಾಗಿ ಎರಡು ತಿಂಗಳ ಹಿಂದೆ ಅಣ್ಣ ರಾಜಪಕ್ಷರನ್ನು ಸೇನೆ ಕಾಪಾಡಿದರೆ ಈಗ ತಮ್ಮ ರಾಜಪಕ್ಷರನ್ನು ನೌಕಾಪಡೆ ರಕ್ಷಿಸಿ ಕರೆದೊಯ್ದಿತು. ಉದ್ರಿಕ್ತ ಜನತೆ ಒಳನುಗ್ಗಿದರು, ಒಂದಷ್ಟು ಜನ ಅಧ್ಯಕ್ಷರ ಪಿಯಾನೋ ನುಡಿಸಿ, ಮ್ಯೂಸಿಕ್ ಸಿಸ್ಟಂ ಬಳಸಿ ಸಂಗೀತ ಕೇಳುತ್ತಾ ಕುಣಿದು ಕುಪ್ಪಳಿಸಿದರೆ ಇನ್ನೊಂದಿಷ್ಟು ಜನ ಈಜುಕೊಳಕ್ಕೆ ಜಿಗಿದರು... ಅಂದು ಅಧ್ಯಕ್ಷರ ನಿವಾಸದಲ್ಲಿ ನಡೆದದದ್ದನ್ನು ಇಡೀ ಜಗತ್ತೇ ನೋಡಿದೆ, ಹೀಗೂ ಆಗಬಹುದೇ ಎಂದು ಬೆರಗಿನಲ್ಲಿ ಮತ್ತೆಮತ್ತೆ ನೋಡುತ್ತಿದೆ.

‘ದ್ವೀಪಸ್ವರ್ಗ’ ಎಂದು ಜಗತ್ತಿನಾದ್ಯಂತ ಹೆಸರಾಗಿ ವರ್ಷವರ್ಷವೂ ಲಕ್ಷಾಂತರ ವಿದೇಶೀ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದ್ದ ಶ್ರೀಲಂಕಾ ಇಂತಹ ದುಃಸ್ಥಿತಿಗೆ ಇಳಿಯಬಹುದೆಂದು ಕೇವಲ ಹತ್ತು, ಅಷ್ಟೇಕೆ ಐದು ವರ್ಷಗಳ ಹಿಂದೆಯೂ ಯಾರೂ ಕನಸಿನಲ್ಲಿಯೂ ಕಂಡಿರಲಾರರು. ಪರಿಸ್ಥಿತಿ ಹದಗೆಡುತ್ತಿದೆಯೆಂಬ ಸೂಚನೆ ಮೂರು ವರ್ಷಗಳ ಹಿಂದೆ ಕಾಣತೊಡಗಿದರೂ ಒಂದು ಕಾಲದ ಯುದ್ಧವೀರರಾದ ಅಣ್ಣ - ತಮ್ಮ ರಾಜಪಕ್ಷರುಗಳು ತಮ್ಮ ಭವಿಷ್ಯವನ್ನು ಉಜ್ವಲಗೊಳಿಸುತ್ತಾರೆ ಎಂದು ಅವರಿಬ್ಬರ ಮೇಲೆ ವಿಶ್ವಾಸವಿಟ್ಟು ಜನತೆ ಒಬ್ಬರನ್ನು ಅಧ್ಯಕ್ಷರನ್ನಾಗಿ ಆರಿಸಿತು, ಇನ್ನೊಬ್ಬರ ಪ್ರಧಾನಮಂತ್ರಿತ್ವವನ್ನು ಸಂತೋಷದಿಂದ ಒಪ್ಪಿಕೊಂಡಿತು. ಜಗತ್ತೂ ಸಹ ರಾಜಪಕ್ಷರುಗಳ ಆಳ್ವಿಕೆ ದೇಶವನ್ನು ಸರಿದಾರಿಯಲ್ಲಿ ಕೊಂಡೊಯ್ಯುತ್ತದೆ ಎಂದು ಭಾವಿಸಿತ್ತು, ಆದರೆ ಎಲ್ಲರ ನಿರೀಕ್ಷೆ ನೀರ್ಗಳ್ಳೆಯಾಗಿ, ಆಶಾವಾದ ಹಳವಂಡವಾಗಿ ಇಂದು ಶ್ರೀಲಂಕಾ ಅದೆಂತಹ ಬಗೆಯ ಆರ್ಥಿಕ ಹೀನಾಯ ಸ್ಥಿತಿಗೆ ತಲುಪಿದೆಯೆಂದರೆ ಅದಕ್ಕೆ ಹೋಲಿಸಬಹುದಾದ ಇನ್ನೊಂದು ಉದಾಹರಣೆ ಸಮಕಾಲೀನ ಇತಿಹಾಸದಲ್ಲಿ ನಮಗೆ ಕಾಣಸಿಗುತ್ತಿಲ್ಲ.

‘ಹಿಂದೂ ಮಹಾಸಾಗರದ ಪಚ್ಚೆ’ ಎಂದು ಹೆಸರಾದ ಹಚ್ಚಹಸುರಿನ ಶ್ರೀಲಂಕಾ ಅಗಾಧ ಪ್ರಾಕೃತಿಕ ಸಂಪತ್ತುಗಳ ಅಗರ. ಈ ನಾಡು ಪುರಾತನ ಕಾಲದಿಂದಲೂ ಏಶಿಯಾ ಮತ್ತು ಯೂರೋಪ್​ನ ವಿವಿಧ ನಾಡುಗಳೊಂದಿಗೆ ವ್ಯಾಪಾರವಹಿವಾಟಿನ ಸಂಬಂಧಗಳನ್ನು ಹೊಂದಿತ್ತು. ಪಶ್ಚಿಮದ ರೋಮನ್ ಸಾಮ್ರಾಜ್ಯ ಮತ್ತು ಅರಬ್ಬರು ಹಾಗೂ ಪೂರ್ವದ ಚೀನಾ ಮತ್ತು ಆಗ್ನೇಯ ಏಶಿಯಾದ ಸಾಂಬಾರ ದ್ವೀಪಗಳ ನಡುವಿನ ವ್ಯಾಪಾರದ ಪ್ರಮುಖ ಕೊಂಡಿ ಶ್ರೀಲಂಕಾ ಆಗಿತ್ತು. ತಮ್ಮ ದೀರ್ಘ ಸಮುದ್ರಯಾನದಲ್ಲಿ ಸುಂದರ, ಸಮೃದ್ಧ ತಂಗುದಾಣವಾಗಿ ಸಿಕ್ಕಿದ ಶ್ರೀಲಂಕಾವನ್ನು ಅರಬ್ ಮತ್ತು ಪರ್ಶಿಯನ್ ವರ್ತಕರು ‘ಸೆರೆಂದೀಬ್’ ಎಂದು ಕರೆದರು. ಈ ಸೆರೆಂದೀಬ್ ಪದದಿಂದಲೇ ‘ಬಯಸದೇ ಬಂದ ಭಾಗ್ಯ’ ಎಂಬ ಅರ್ಥವನ್ನು ಸೂಚಿಸುವ ಇಂಗ್ಲಿಷ್​ನ Serendipity ಎಂಬ ಪದ ಉತ್ಪತ್ತಿಯಾದದ್ದು. ಆದರಿಂದು ಶ್ರೀಲಂಕಾ ಬಯಸದೇ ಬಂದ ಭಾಗ್ಯವಾಗಿ ಉಳಿದಿಲ್ಲ. ಬದಲಾಗಿ ನಕ್ಷೆಯಲ್ಲಿ ಒಂದು ಕಣ್ಣೀರಿನ ಹನಿಯಂತೆ ಕಾಣುವ ಅದು ಇಂದು ಅಕ್ಷರಶಃ ಒಂದು ದೊಡ್ಡ ಕಣ್ಣೀರಿನ ಹನಿಯಾಗಿಯೇ ಜಗತ್ತಿಗೆ ಕಾಣುತ್ತಿದೆ.

ಹೀಗೇಕಾಯಿತು ಎಂದರೆ ಸಿಗುವ ಉತ್ತರ ದುರ್​ನಾಯಕತ್ವವಲ್ಲದೇ ಬೇರೇನಲ್ಲ. ಒಂದು ರಾಷ್ಟ್ರಕ್ಕೆ ಏನೆಲ್ಲಾ ಅನುಕೂಲಗಳಿದ್ದರೂ ವಿವೇಕಿ ನಾಯಕತ್ವವೊಂದಿಲ್ಲದಿದ್ದರೆ ಅದು ಹಾಳುಗೆಟ್ಟುಹೋಗುತ್ತದೆ ಎನ್ನುವುದಕ್ಕೆ ಇತಿಹಾಸದಲ್ಲಿ ಹಲವಾರು ಉದಾಹರಣೆಗಳು ಸಿಗುತ್ತವೆ. ಶ್ರೀಲಂಕಾದ ಸ್ಥಿತಿಯ ಮೇಲೆ ನಮ್ಮ ಗಮನ ಕೇಂದ್ರೀಕರಿಸುವ ಮೊದಲು ಅದರಂತೆ ದುರ್​ನಾಯಕತ್ವದಿಂದ ಹಾಳಾದ ಕೆಲವು ಸಂಪದ್ಭರಿತ ನಾಡುಗಳ ಉದಾಹರಣೆಗಳನ್ನು ನೋಡೋಣ. ಪ್ರಾಕೃತಿಕ ಸಂಪತ್ತು ಮತ್ತು ಪರಿಶ್ರಮಿ ಜನತೆಯಿಂದ ಕೂಡಿದ ವಿಶಾಲ ಜರ್ಮನಿಯನ್ನು ಮೊದಲಿಗೆ ಕೈಸರ್ ಎರಡನೆಯ ವಿಲಿಯಂ, ನಂತರ ಅಡಾಲ್ಪ್ ಹಿಟ್ಲರ್​ನಂತಹ ಶಾಂತಿಕಂಟಕ ನಾಯಕರು ಯುದ್ಧಗಳ ಕೂಪಕ್ಕೆ ನೂಕಿ ಹಾಳುಗೆಡವಿದ್ದನ್ನು ಕಳೆದ ಶತಮಾನದಲ್ಲಿ ಕಂಡಿದ್ದೇವೆ. ನಮ್ಮ ಸಮಕಾಲೀನ ಇತಿಹಾಸಕ್ಕೇ ಬಂದರೆ ಸಿಗುವ ದಾರುಣ ಉದಾಹರಣೆ ಇರಾಕ್.

ಇಡೀ ಅರಬ್ ಜಗತ್ತಿನಲ್ಲಿ ಅಗಾಧ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಕ್ಷೇಪಗಳ ಜತೆಗೆ ಎರಡು ಜೀವನದಿಗಳನ್ನೂ, ವಿಶಾಲ ಫಲವತ್ತು ನೆಲವನ್ನೂ ಹೊಂದಿರುವ ಏಕೈಕ ದೇಶ ಇರಾಕ್. ಸಹಜವಾಗಿಯೇ ಅದು ಸುಖೀ ಜನರ ಸಂಪದ್ಭರಿತ ನಾಡಾಗಿತ್ತು ನಾಲ್ಕು ದಶಕಗಳ ಹಿಂದಿನವರೆಗೂ. ಅದೆಲ್ಲವನ್ನೂ ಹಾಳುಗೆಡವಿದ್ದು ಸದ್ದಾಂ ಹುಸೇನ್.

ವಾಸ್ತವವಾಗಿ ತನ್ನ ದೇಶವನ್ನು ಇನ್ನಷ್ಟು ಸಮೃದ್ಧಗೊಳಿಸುವ, ಎಲ್ಲ ಬಗೆಯಲ್ಲೂ ಸಶಕ್ತಗೊಳಿಸುವ ಸುವರ್ಣಾವಕಾಶಗಳನ್ನು ಪಡೆದೆ ಕೆಲವೇ ಕೆಲವು ಜಾಗತಿಕ ನಾಯಕರಲ್ಲಿ ಸದ್ದಾಂ ಒಬ್ಬರು. ಪ್ರಾರಂಭದಲ್ಲಿ ಅವರ ಆಳ್ವಿಕೆ ಸರಿದಾರಿಯಲ್ಲೇ ಇತ್ತು. ಆರ್ಥಿಕ ಅಭಿವೃದ್ಧಿಯ ಜತೆಗೆ ಸಾಮಾಜಿಕ ಕ್ಷೇತ್ರದಲ್ಲೂ ಹಲವಾರು ಸುಧಾರಣೆಗಳನ್ನವರು ತಂದಿದ್ದರು. ಸುತ್ತಲ ಮುಸ್ಲಿಂ ರಾಷ್ಟ್ರಗಳಲ್ಲಿ ಮಹಿಳೆಯರು ಎರಡನೆಯ ದರ್ಜೆಯ ಪ್ರಜೆಗಳಾಗಿ ಪರದೆಯೊಳಗಿದ್ದರೆ ಇರಾಕಿ ಮಹಿಳೆಯರು ಸ್ವಾತಂತ್ರ್ಯದ ಗಾಳಿಯನ್ನು ಉಸಿರಾಡುತ್ತಾ ರಾಷ್ಟ್ರದ ಬದುಕಿನಲ್ಲಿ ಪುರುಷರಿಗೆ ಸರಿಸಮಾನವಾದ ಪಾತ್ರ ನಿರ್ವಹಿಸುತ್ತಿದ್ದರು. ದೇಶ ಸಂಪದ್ಭರಿತವಾಗಿ ಮುಂದುವರಿಯುತ್ತಿತ್ತು. ಸದ್ದಾಂ ಅದೆಲ್ಲವನ್ನೂ ಹಾಳುಮಾಡಿದ್ದು ನಲವತ್ತೆರಡು ವರ್ಷಗಳ ಹಿಂದಿನ ಒಂದು ನಿರ್ಣಾಯಕ ಬೆಳಿಗ್ಗೆ.

ಇರಾಕ್ ಮತ್ತು ಇರಾನ್ ಪರಂಪರಾಗತ ಶತ್ರುಗಳು. ಅವೆರಡು ನಾಡುಗಳ ವೈಮನಸ್ಯವನ್ನು ಜೀವಂತವಾಗಿಟ್ಟಿದ್ದ ಪ್ರಮುಖ ಕಾರಣಗಳಲ್ಲೊಂದು ಷತ್-ಅಲ್-ಅರಬ್ ಜಲಗಡಿ. ಇರಾನನ್ನು ಏಶಿಯಾದಲ್ಲೇ ಅತ್ಯಂತ ಬಲಿಷ್ಠ ಸೇನಾಶಕ್ತಿಯಾಗಿ ಮಾಡುವ ಬಯಕೆಯಿಟ್ಟುಕೊಂಡ ಅರಸ ರೆಜಾ ಶಾ ಪಹ್ಲವಿ ವರ್ಷವರ್ಷವೂ ಅಗಾಧ ಪೆಟ್ರೋ-ಡಾಲರ್​ಗಳನ್ನು ವ್ಯಯಿಸಿ ಸಶಕ್ತ ರಕ್ಷಣಾಪಡೆಯನ್ನು ಕಟ್ಟಿ ಅದರ ಕೈಗೆ ವಿಶ್ವದ ಎಲ್ಲೆಡೆಗಳಿಂದ ಅತ್ಯಾಧುನಿಕ ಶಸ್ತಾಸ್ತ್ರಗಳನ್ನು ಅಪಾರ ಪ್ರಮಾಣದಲ್ಲಿ ಕೊಂಡುತಂದು ಹಾಕಿದ್ದರಿಂದಾಗಿ ಅದನ್ನು ಕೆಣಕುವ ಧೈರ್ಯ ಯಾವುದೇ ಇರಾಕಿ ನಾಯಕರಿಗಿರಲಿಲ್ಲ. ಆದರೆ ಆ ದೇಶ ಫೆಬ್ರವರಿ 1979ರಲ್ಲಿ ಅನಿರೀಕ್ಷಿತ ಇಸ್ಲಾಮಿಕ್ ಕ್ರಾಂತಿ ಕಂಡು, ಮೂಲಭೂತವಾದಿಗಳ ಕಪಿಮುಷ್ಟಿಗೆ ಸಿಲುಕಿ ಮುಂದಿನ ಒಂದೂವರೆ ವರ್ಷದಲ್ಲಿ ಮಧ್ಯಯುಗದತ್ತ ಸಾಗತೊಡಗಿದಾಗ ಸದ್ದಾಂ ಹುಸೇನ್ ಕನಸು ಕಾಣತೊಡಗಿದರು. ಷತ್-ಅಲ್-ಅರಬ್ ಜಲಗಡಿಯನ್ನು ತನ್ನ ದೇಶಕ್ಕೆ ಅನುಕೂಲವಾಗುವಂತೆ ಬದಲಾಯಿಸಿಕೊಳ್ಳಲು ಇದೇ ಸುಸಮಯವೆಂದು ಭಾವಿಸಿದ ಅವರು ಸೆಪ್ಟೆಂಬರ್ 1980ರಲ್ಲಿ ಇರಾನ್ ಮೇಲೆ ದಾಳಿಯೆಸಗಿದರು.

ಬ’ಆತ್ ಸೋಷಿಯಲಿಸ್ಟ್ ಪಾರ್ಟಿಯ ನಾಯಕನಾಗಿದ್ದುಕೊಂಡು ಸದ್ದಾಂ ಅದಾಗಲೇ ಘನಿಷ್ಟ ಸೋವಿಯೆತ್ ಸಖ್ಯವನ್ನು ಗಳಿಸಿದ್ದರು. ಇಸ್ಲಾಮಿಕ್ ಕ್ರಾಂತಿಯ ನಂತರ ಇರಾನ್ ಪಾಶ್ಚಿಮಾತ್ಯ ನಾಗರಿಕತೆಯ ವಿರುದ್ದ ದಿನಬೆಳಗಾದರೆ ಕೆಟ್ಟ ನಾಲಿಗೆ ಹರಿಯಬಿಡತೊಡಗಿದ್ದನ್ನು ಮತ್ತು ಮುಸ್ಲಿಂ ಜಗತ್ತನ್ನು ತಮ್ಮ ವಿರುದ್ಧ ಎತ್ತಿ ಕಟ್ಟಲು ಆಯತೊಲ್ಲಾ ಖೊಮೇನಿ ವಿವಿಧ ಕಸರತ್ತುಗಳಲ್ಲಿ ತೊಡಗಿದ್ದುದನ್ನೂ ಕಂಡು ರೋಸಿದ್ದ ಅಮೆರಿಕಾ ಮತ್ತದರ ಯೂರೋಪಿಯನ್ ಮಿತ್ರದೇಶಗಳು ಸದ್ದಾಂ ಹುಸೇನ್ ಮೂಲಕ ಇರಾನನ್ನು ಮಣಿಸಿ ಅದರ ಇಸ್ಲಾಮಿಕ್ ಮೂಲಭೂತವಾದವನ್ನೂ ಮೊಳಕೆಯಲ್ಲೇ ಚಿವುಟಿಹಾಕಬಹುದೆಂದು ರ್ತಸಿದವು. ಪರಿಣಾಮವಾಗಿ ಸದ್ದಾಂ ಹುಸೇನ್ ಸೋವಿಯೆತ್ ಯೂನಿಯನ್ ಮತ್ತು ಅಮೆರಿಕಾಗಳೆರಡಕ್ಕೂ ಏಕಕಾಲದಲ್ಲಿ ಪ್ರಿಯನಾಗಿಬಿಟ್ಟ. ಶೀತಲ ಸಮರದ ಅತಿದೊಡ್ಡ ಅಚ್ಚರಿ ಇದು.

ಇಷ್ಟಾಗಿಯೂ, ಇರಾನ್ ಉಗ್ರವಾಗಿ ಪ್ರತಿಕ್ರಿಯಿಸತೊಡಗಿದ ಕಾರಣ ಯುದ್ಧ ಸದ್ದಾಂರ ಎಣಿಕೆಗೆ ವಿರುದ್ಧವಾಗಿ ಎಂಟು ವರ್ಷಗಳಿಗೂ ಅಧಿಕ ಕಾಲ ಎಳೆದುಕೊಂಡು ಹೋಯಿತು. ಇರಾಕ್​ನ ಪೆಟ್ರೋ-ಡಾಲರ್​ನ ಬಹುದೊಡ್ಡ ಭಾಗ ಯುದ್ಧದ ಖರ್ಚಿಗಾಗಿ ಸೋರಿಹೋಗತೊಡಗಿತು, ಸಂಪದ್ಭರಿತ ಇರಾಕ್ ಬಡವಾಗುತ್ತಾ ಸಾಗಿತು. ತನ್ನ ಆದಾಯವೂ ಸಾಲದೇ ಆ ದೇಶ ನೆರೆಯ ಪುಟಾಣಿ ಕುವೈತ್​ನಿಂದಲೂ ಒಂದು ಬಿಲಿಯನ್ ಡಾಲರ್ ಸಾಲವೆತ್ತಿತ್ತು ಅಂದರೆ ಅದರ ಆದಾಯ ಅದೆಷ್ಟು ಕುಗ್ಗಿರಬಹುದು ಎಂದು ಯೋಚಿಸಿ! ಸರಿ, ವಿಶ್ವಸಂಸ್ಥೆಯ ಮಧ್ಯಸ್ಥಿಕೆಯಿಂದ ಯುದ್ಧವೇನೋ ಕೊನೆಗೂ ನಿಲುಗಡೆಗೆ ಬಂತು. ಆಮೇಲಾದರೂ ಸದ್ದಾಂಗೆ ವಿವೇಕ ಬರಬೇಡವೇ? ಉಹ್ಞುಂ, ತಪ್ಪಿನಿಂದ ಪಾಠ ಕಲಿತು ದೇಶವನ್ನು ಆರ್ಥಿಕವಾಗಿ ಸರಿದಾರಿಗೆ ತರುವ ಸಕಾರಾತ್ಮಕ ಮಾರ್ಗ ಹಿಡಿಯುವ ಬದಲು ಅವರು ಆರಂಭಿಸಿದ್ದು ಇನ್ನೊಂದು ಸ್ವವಿನಾಶಕಾರಿ ಯುದ್ಧ. ಕುವೈತ್​ನ ಸಾಲ ತೀರಿಸುವ ಬದಲು ಆ ದೇಶವನ್ನೇ ಇಡಿಯಾಗಿ ಆಕ್ರಮಿಸಿಕೊಂಡುಬಿಟ್ಟರು! ಆಗ ಜಾಗತಿಕ ರಾಜಕಾರಣ ವೇಗವಾಗಿ ಬದಲಾಗುತ್ತಿತ್ತು. ಪೂರ್ವ ಯೂರೋಪ್​ನಲ್ಲಿ ಕಮ್ಯೂನಿಸಂ ವೇಗವಾಗಿ ಕುಸಿಯುತ್ತಿತ್ತು ಮತ್ತು ಶೀತಲ ಸಮರ ಅಂತ್ಯಗೊಳ್ಳುತ್ತಿತ್ತು. ಹೀಗಾಗಿ ಸದ್ದಾಂರ ಕುವೈತ್ ಆಕ್ರಮಣವನ್ನು ಅನಗತ್ಯ ಕಂಟಕವೆಂದೂ, ಸದ್ದಾಂ ಪಶ್ಚಿಮ ಏಶಿಯಾದ ಹಿಟ್ಲರ್ ಆಗಿ ಬೆಳೆಯುತ್ತಿದ್ದಾನೆಂದೂ ಭಾವಿಸಿದ ಅಮೆರಿಕಾ ಮತ್ತದರ ನ್ಯಾಟೋ ಮಿತ್ರರು ಇರಾಕ್ ಮೇಲೇ ದಾಳಿಯೆಸಗಿ ಕುವೈತನ್ನು ವಿಮೋಚನೆಗೊಳಿಸಿದರು. ಜತೆಗೆ ಇರಾಕ್ ಮೇಲೆ ಅವು ವಿಧಿಸಿದ ಆರ್ಥಿಕ ದಿಗ್ಬಂಧನಗಳಿಂದ ಇರಾಕ್​ನ ಆದಾಯ ಬತ್ತಿಹೋಯಿತು, ಆ ದೇಶ ಬಡತನದ ಕೊನೆಯ ಮೆಟ್ಟಿಲಿಗಿಳಿದು ನಿಂತಿತು. ಇಷ್ಟೆಲ್ಲಾ ಅಧಃಪತನ ಸಂಭವಿಸಿದ್ದು ಕೇವಲ ಹನ್ನೊಂದು ವರ್ಷಗಳಲ್ಲಿ! ಮುಂದಿನ ಒಂದು ದಶಕದಲ್ಲಿ ಪರಿಸ್ಥಿತಿ ಇನ್ನೂ ಹದಗೆಟ್ಟು, ಒಂದುಕಾಲದ ಶ್ರೀಮಂತ ಇರಾಕಿಗಳು ಅಮೆರಿಕನ್ನರ ಆಹಾರಪದಾರ್ಥಗಳ ಟ್ರಕ್​ಗಳಿಗಾಗಿ ಕಾದುನಿಂತು ಅವು ಕಂಡಕೂಡಲೇ ಓಡಿಹೋಗಿ ಸುತ್ತುಗಟ್ಟಿ ನಿಲ್ಲುವಂತಾಯಿತು! ಅವರಿಗಾದ ಗತಿ ಇನ್ನಾರಿಗೂ ಆಗುವುದು ಬೇಡ. ಹೀಗೆ ಸದ್ದಾಂ ಹುಸೇನ್ ತನ್ನ ಯುದ್ಧಕೋರ ನೀತಿಗಳಿಂದ ಇರಾಕನ್ನು ನಿರಂತರ ಯುದ್ಧಗಳ ಸುಳಿಯಲ್ಲಿ ಸಿಲುಕಿಸಿ

ದೇಶವನ್ನೂ ಹಾಳುಗೆಡವಿದರು, ತಾವೂ ಹಾಳಾದರು.

ಹೀಗೆ ನಾಯಕರೇ ಅವಿವೇಕದಿಂದ ತಮ್ಮ ಸಂಪದ್ಭರಿತ ನಾಡುಗಳನ್ನು ಬಡವಾಗಿಸಿ, ಜನರನ್ನು ಕಷ್ಟಕೋಟಲೆಗಳಿಗೆ ನೂಕಿದ ಉದಾಹರಣೆಗಳಲ್ಲಿ ಕೆಲವು ಉಗಾಂಡಾ, ರವಾಂಡಾ, ಅಲ್ಬೇನಿಯಾ, ಸರ್ಬಿಯಾ, ರಶಿಯಾ, ಲಿಬಿಯಾ, ಯೆಮೆನ್, ಅಫ್ಘಾನಿಸ್ತಾನ, ಯೂಕ್ರೇನ್​ಗಳಲ್ಲಿ ದೊರೆಯುತ್ತವೆ. ಸದ್ಯ ಇವುಗಳಲ್ಲಿ ಮೊದಲ ಐದು ದೇಶಗಳು ನಂತರ ಒಳ್ಳೆಯ ನಾಯಕರನ್ನು ಪಡೆದು ಶಾಂತಿ ಮತ್ತು ಅಭಿವೃದ್ಧಿಯ ಹಾದಿಗೇರಿದವು. ಆದರೆ ಕೊನೆಯ ನಾಲ್ಕಕ್ಕೆ ಅಂತಹ ಅದೃಷ್ಟವಿನ್ನೂ ಒದಗಿಲ್ಲ. ಅವು ಇನ್ನೂ ಅಧಃಪತನದತ್ತ ಜಾರುತ್ತಲೇ ಇವೆ.

ಈ ಸಂದರ್ಭದಲ್ಲಿ ಪಾಕಿಸ್ತಾನದ ಉದಾಹರಣೆ ನಮಗೆ ಹೆಚ್ಚು ಪ್ರಸ್ತುತವೆನಿಸುತ್ತದೆ. ಯಾಕೆಂದರೆ ಆ ದೇಶದಲ್ಲಿ ನಾವು ಸದ್ದಾಂ ಹುಸೇನ್​ರ ಇರಾಕನ್ನೂ, ರಾಜಪಕ್ಷರ ಶ್ರೀಲಂಕಾವನ್ನೂ ಒಟ್ಟಿಗೇ ಕಾಣಬಹುದು! ಹೀಗಾಗಿ ಲೇಖನದ ಎರಡನೆಯ ಹಾಗೂ ಅಂತಿಮ ಭಾಗದಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾದ ಅಧಃಪತನದ ಹಾದಿಗಳ ಮೇಲೆ ಕ್ಷಕಿರಣ ಬೀರಿ, ಆ ಮೂಲಕ ಶ್ರೀಲಂಕಾ ಉರುಳಿರುವ ಮತ್ತು ಪಾಕಿಸ್ತಾನ ಉರುಳಲಿರುವ ಕಮರಿಯತ್ತ ಇಣುಕುನೋಟ ಹರಿಸಲು ನಿಮಗೆ ಅನುಕೂಲವಾಗುವಂತೆ ಮಾಡುತ್ತೇನೆ.

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net