ವ್ಯಾಪಾರ ಅಂದ್ರೆ ಯುದ್ಧ ಇದ್ದಂತೆ, ಸದಾ ಜಾಗರೂಕರಾಗಿರಬೇಕು : ಜಾದೂಗಾರ್ ಅಂಕಣ ಹಣ ಝಣ

Indicative image
Published on
ಕರೊನಾದಿಂದಾಗಿ ಅನೇಕ ಹೋಟೆಲ್​ಗಳು, ವ್ಯಾಪಾರಗಳು ಮುಚ್ಚಿವೆ. ಇದಕ್ಕೆ ವ್ಯಾಪಾರವನ್ನೇ ಮುಚ್ಚೋದು ಉತ್ತರ ಅಲ್ಲ. ಮೊದಲಿಗೆ ಸಿಬ್ಬಂದಿ ಸಂಖ್ಯೆ ಕಡಿಮೆ ಮಾಡಬೇಕು, ಬಾಡಿಗೆ ಜಾಗವಾದರೆ ಬಾಡಿಗೆ ಕಡಿಮೆ ತೆಗೆದುಕೊಳ್ಳುವಂತೆ ವಿನಂತಿಸಿ. ಒಂದಕ್ಕಿಂತ ಹೆಚ್ಚು ಮಳಿಗೆಗಳು ಇದ್ದಲ್ಲಿ ಕೆಲವನ್ನು ಬಿಡಿ. ಸಾಧ್ಯವಾದಷ್ಟು ಅನವಶ್ಯಕ ಖರ್ಚು ಕಡಿಮೆ ಮಾಡಿ. ಸಣ್ಣ ರೀತಿಯಲ್ಲಿ ಮುಂದುವರಿಸಿಕೊಂಡು ಹೋಗಿ. ಅನಿರೀಕ್ಷಿತ ಸಂದರ್ಭ ನಿಭಾಯಿಸಲು ಉಳಿತಾಯ ಹಣ ಇರಬೇಕು. ಇರುವ ಬಂಡವಾಳವನ್ನೆಲ್ಲ ಸುರಿದು ಕೈ ಖಾಲಿ ಮಾಡಿಕೊಂಡರೆ ಮುಂದೆ ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳಬೇಕಾಗುತ್ತದೆ. ಇದಕ್ಕೆ ಉದಾಹರಣೆ-ಟಿಬಿ ರೋಗಾಣುಗಳು ಆರೋಗ್ಯವಂತ ಮನುಷ್ಯನ ಶ್ವಾಸಕೋಶದ ಮೇಲೆ ಕ್ಯಾಲ್ಷಿಯಂ ಪದರವನ್ನು ನಿರ್ವಿುಸಿ ಆಹಾರವಿಲ್ಲದೆ ತಿಂಗಳುಗಟ್ಟಲೆ ಕೂತಿರುತ್ತವೆ. ಯಾವಾಗ ದುಶ್ಚಟಗಳಿಂದಾಗಿಯೋ, ಅಪಥ್ಯದಿಂದಾಗಿಯೋ ದೇಹದ ಶಕ್ತಿ ಕುಂದುತ್ತೋ ಆಗ ರೋಗಾಣುಗಳು ಪದರದಿಂದ ಹೊರಬಂದು ಇಡೀ ಶರೀರವನ್ನು ಆವರಿಸಿಕೊಂಡು ಬಾಧಿಸುತ್ತವೆ. ಹೀಗೆ ಪ್ರತಿಕೂಲ ಪರಿಸ್ಥಿತಿಗಳನ್ನು ಎದುರಿಸುವ ನಿಟ್ಟಿನಲ್ಲಿ ಪೂರ್ವತಯಾರಿ ಮಾಡಿಟ್ಟುಕೊಂಡು ಪರಿಸ್ಥಿತಿ ಸರಿಯಾದ ಕೂಡಲೇ ಮತ್ತೆ ಕಾರ್ಯೂೕನ್ಮುಖರಾಗಬೇಕು. ವ್ಯಾಪಾರ ಅಂದ್ರೆ ಯುದ್ಧವಿದ್ದಂತೆ. ಸದಾ ಸನ್ನದ್ಧರಾಗಿರಬೇಕು. ಹೀಗೇ ನಡೆಯುತ್ತೆ ಅಂದುಕೊಳ್ಳಬಾರದು.

ಬಿಜಿನೆಸ್​ನಲ್ಲಿ ಯಾರಿಂದಲಾದ್ರೂ ಕೆಲಸ ಆಗಬೇಕಾದ್ರೆ ಅವರಿಗೆ ಬೇಜಾರಾಗದ ಹಾಗೆ ಅವರ ಹಿಂದೆನೇ ಬೀಳಬೇಕು. ನೀವೇನಾದರೂ ಜಾಸ್ತಿ ಒತ್ತಡ ಹಾಕಿದ್ರೆ ಕೈ ಎತ್ತಿಬಿಡುತ್ತಾರೆ. ಹಿಂದೊಮ್ಮೆ ಹಿಂದಿಯಲ್ಲಿ ಶೇಖರ್ ಸುಮನ್​ರ ಹಾಸ್ಯ ಕಾರ್ಯಕ್ರಮ ನಡೀತಾ ಇದ್ದ ಕಾರಣ ಚಾನೆಲ್​ನವರು ಕನ್ನಡದಲ್ಲಿ ಅಂಥ ಕಾರ್ಯಕ್ರಮಕ್ಕೆ ನಾನೇ ಸೂಕ್ತ ಅಂತ ನಿರ್ಧರಿಸಿದರು. ಶೂಟಿಂಗಿಗಾಗಿ ನನ್ನ ಫ್ಯಾಕ್ಟರಿಯ ಒಂದು ಮಹಡಿಯಲ್ಲಿ ಸೆಟ್ ಕೂಡ ಹಾಕಿ ಆಗಿತ್ತು. ಗ್ರಹಚಾರಕ್ಕೆ ಆಗಲೇ ವೀರಪ್ಪನ್ ಡಾ.ರಾಜ್​ರನ್ನು ಅಪಹರಿಸಬೇಕೇ? ಚಾನೆಲ್​ನವರು ಶೂಟಿಂಗ್ ನಿಲ್ಲಿಸಲು ಹೇಳಿದರು. ನಾನು ಹೇಗೂ ನನ್ನ ಜಾಗದಲ್ಲೇ ಶೂಟ್ ಮಾಡುವ ಕಾರಣ ಯಾರಿಗೂ ತಿಳಿಯುವುದಿಲ್ಲ ಅನ್ನೋ ಐಡಿಯಾದ ಮೇಲೆ ಚಾನೆಲ್​ನವರಿಗೆ ಮೇಲಿಂದ ಮೇಲೆ ಫೋನ್ ಮಾಡಿದೆ. ಅವರು ಕರೆ ಸ್ವೀಕರಿಸುವುದನ್ನೇ ನಿಲ್ಲಿಸಿದರು. ಹಾಗಾಗಿ ಮತ್ತೆ ಮತ್ತೆ ಫ್ಯಾಕ್ಸ್ ಮಾಡಿದೆ. ಅವರಿಗೆ ಬೇಸರ ಬಂದು ಪ್ರೋಗ್ರಾಮನ್ನೇ ಕ್ಯಾನ್ಸಲ್ ಮಾಡಿದರು. ಹೀಗೆ ಅತಿಯಾದ ಒತ್ತಡ ಹಾಕಿದರೆ, ‘ಅದು ನೋಡಿದೆ, ನಮ್ಮಿಂದ ಆಗೊಲ್ಲಾ ಸರ್’ ಅಂತಾನೋ, ‘ಆ ಕ್ವಾಲಿಟಿ ನಮ್ಮಲ್ಲಿ ಇಲ್ಲ’ ಅಂತಾನೋ ಏನೋ ಒಂದು ಕಾರಣ ಕೊಟ್ಟು ಕೈ ತೊಳೆದುಕೊಳ್ಳುತ್ತಾರೆ.

ಬಿಜಿನೆಸ್​ನಲ್ಲಿ ಎರಡು ಥರ. ಜಾಸ್ತಿ ಲಾಭ-ಕಡಿಮೆ ವ್ಯಾಪಾರ ಮತ್ತು ಕಡಿಮೆ ಲಾಭ-ಜಾಸ್ತಿ ವ್ಯಾಪಾರ. ಕಡಿಮೆ ಲಾಭದಲ್ಲಿ ಬಿಜಿನೆಸ್ ಮಾಡುವಾಗ ಬಾಯಿಪ್ರಚಾರದಲ್ಲೇ ಹೆಚ್ಚು ವ್ಯಾಪಾರವಾಗುತ್ತದೆ. ಹೆಚ್ಚು ಲಾಭ ಇಟ್ಟು ಮಾಡಿದಲ್ಲಿ ವ್ಯಾಪಾರ ನಿಧಾನವಾಗುತ್ತದೆ ಮತ್ತು ಅದು ಹೆಚ್ಚಾಗಲು ತುಂಬ ಸಮಯ ತೆಗೆದುಕೊಳ್ಳುತ್ತದೆ. ಬಿಸಿನೆಸ್ ಶುರುವಿನಲ್ಲಿ ಒಟ್ಟು ಖರ್ಚಿನ ಮೇಲೆ ಬಹಳ ಕಡಿಮೆ ಲಾಭ ಇಡಬೇಕು. ಸಾಧ್ಯವಾದರೆ ಲಾಭವನ್ನೇ ಇಡದೆ ಮಾರಿದರೆ ಬಹಳ ಉತ್ತಮ. ಯಾಕೆಂದರೆ ಈಗಾಗಲೇ ಆ ವ್ಯಾಪಾರದಲ್ಲಿರುವವರು ನಿಮಗಿಂತ ಕಡಿಮೆ ದರಕ್ಕೆ ನೀಡುತ್ತಿರಬಹುದು. ಆಗ ನಿಮ್ಮ ವ್ಯಾಪಾರ ಟೇಕಾಫ್ ಆಗದೆ ಹೋಗಬಹುದು. ಕಾಲಕ್ರಮೇಣ ಠ್ಠಿr ಟಡಛ್ಟಿ ಹೆಚ್ಚಾದಂತೆ ನಿಮಗೆ ಹೆಚ್ಚು ಹೆಚ್ಚು ಕೊಳ್ಳುವ ಸಾಮರ್ಥ್ಯ ಬಂದು ಕಚ್ಚಾವಸ್ತುಗಳನ್ನು ಹೋಲ್​ಸೇಲ್​ನಲ್ಲಿ ಪೂರೈಸುವವರನ್ನು ಹುಡುಕಿ ಮಾರುಕಟ್ಟೆಯಲ್ಲಿ ಪೈಪೋಟಿ ನೀಡಬಹುದು. ಕಡಿಮೆ ಬೆಲೆಯಲ್ಲಿ ಕಚ್ಚಾವಸ್ತುಗಳು ಸಿಕ್ಕರೂ ಇನ್ನೂ ಚೌಕಾಸಿ ಮಾಡಬಹುದು. ವ್ಯಾಪಾರಿ 150 ರೂಪಾಯಿ ಅಂತ ಹೇಳಿದ ವಸ್ತುವನ್ನು 110ಕ್ಕೋ, 120ಕ್ಕೋ ಕೇಳಬೇಡಿ. ಬದಲಾಗಿ ‘ಸರ್, ಈ ರೇಟ್ ನಮಗೆ ಗಿಟ್ಟೋಲ್ಲಾ’ ಅನ್ನಿ. ಆಗ ವ್ಯಾಪಾರಿ 120ಕ್ಕೊ, 110ಕ್ಕೊ ತಂದು ನಿಲ್ಲಿಸುತ್ತಾನೆ. ಆಗ ನೀವು ‘ಇದೂ ಜಾಸ್ತಿ ಆಯ್ತು, ಯಾರೋ ಕಡಿಮೆಗೆ ಕೊಡ್ತೀನಿ ಅಂದಿದ್ದಾರೆ, ಆಗುತ್ತಾದರೆ ನನಗೆ ಮೆಸೇಜ್ ಮಾಡಿ, ಅಪ್ಪನ ಹತ್ರ ಕೇಳಿ ತೀರ್ಮಾನ ಮಾಡ್ತೀನಿ’ ಅಂತ ಹೇಳಿ. ಯಾಕೆಂದರೆ ನೀವು ನೇರವಾಗಿ ನಿಷ್ಠುರ ಕಟ್ಟಿಕೊಳ್ಳಬೇಡಿ. ‘ಅಂತಿಮ ತೀರ್ಮಾನ ನನ್ನದಲ್ಲ’ ಅಂದಾಗ ನಿರೀಕ್ಷೆಗಿಂತ ಕಡಿಮೆ ಬೆಲೆಗೆ ಸಿಗುವುದೂ ಇದೆ. ಬೆಲೆ ಕಡಿಮೆ ಇಷ್ಟಟ್ಟು ವ್ಯಾಪಾರ ಜಾಸ್ತಿ ಆಗುತ್ತದೆ. ಗುಣಮಟ್ಟದ ಕಚ್ಚಾವಸ್ತುಗಳನ್ನು ಕಡಿಮೆ ಬೆಲೆಯಲ್ಲಿ ಪಡೆದರೆ ವ್ಯವಹಾರದಲ್ಲಿ ಅರ್ಧ ಗೆದ್ದಂತೆ.

ಲಾಭವೇ ಇಲ್ಲದೆ ವ್ಯಾಪಾರ ಮಾಡಬೇಕು ಅಂದೆ. ಇದಕ್ಕೆ ಯಾರು ಒಪು್ಪತ್ತಾರೆ ಅಲ್ವೆ? ಉದಾಹರಣೆಗೆ, ಯಾರಿಗೋ ಲಾಭ ಇಲ್ಲದೆ ಎಣ್ಣೆ ಅಳೆದು ಕೊಡಲು ಒಪ್ಪಿದ್ದೀರಿ ಎಂದು ಭಾವಿಸೋಣ. ಆಗ ಎಣ್ಣೆ ಅಳೆದು ಸುರಿಯುವಾಗ ಕೈಗೆ ಅಂಟಿದ ಎಣ್ಣೆಯನ್ನು ತಲೆಗೋ, ಮೈ-ಕೈಗೋ ಉಜ್ಜಿಕೊಂಡರೆ ಲಾಭವಾಗುತ್ತದಲ್ಲಾ? ಇಷ್ಟು ಲಾಭ ಆದ್ರೆ ಸಾಕಲ್ವಾ?

ಯಾವುದೇ ಸೇವೆಗೆ ಹಣ ತೆಗೆದುಕೊಂಡಲ್ಲಿ ಅದಕ್ಕೆ ಸರಿಯಾದ ನ್ಯಾಯ ಒದಗಿಸಿ. ಹೋಟೆಲ್​ನಲ್ಲಿ ಜಾಸ್ತಿ ದರ ಇಟ್ಟು, ಕಳಪೆ ಆಹಾರ ಒದಗಿಸಿದರೆ ಮುಂದೆ ಗ್ರಾಹಕ ಬರುವುದಿಲ್ಲ. ಕಾಸಿಗೆ ತಕ್ಕಷ್ಟು ಕಜ್ಜಾಯ ಕೊಡಲೇಬೇಕು. ಈ ಸೂತ್ರ ವ್ಯಾಪಾರಕ್ಕೆ ಮಾತ್ರವಲ್ಲ ಬದುಕಿನ ಎಲ್ಲ ವಿಚಾರಗಳಿಗೂ ಅನ್ವಯಿಸುತ್ತದೆ. ಕೊಡು-ಕೊಳ್ಳುವಿಕೆ ಸಮವಾಗಿದ್ದರೆ ಬದುಕು ನಿರಾಳ.

ಬರೀ ಬಿಜಿನೆಸ್ ಬಗ್ಗೆ ಬರೆದರೆ ಬೇಸರ ಬರಬಹುದು. ನನ್ನ ಕಥೆನೂ ಸ್ವಲ್ಪ ಹೇಳ್ತಿನಿ ಕೇಳಿ.

ನಾನು ಮೊದಲ ವರ್ಷದ ಬಿ.ಕಾಂ.ನಲ್ಲಿ ಫೇಲಾಗಿದ್ದೆ. ಅಪ್ಪನಿಗೆ ಹೆದರಿ ಕಣ್ತಪ್ಪಿಸಿ ಓಡಾಡ್ತಾ ಇದ್ದೆ. ಸ್ನೇಹಿತ ವಿರೂಪಾಕ್ಷನಿಗೂ ಮತ್ತು ನನಗೂ ಯಾವುದೋ ಕಾರಣಕ್ಕೆ ಜಗಳ ಆಯ್ತು. ಅದರ ಸಿಟ್ಟನ್ನು ತೀರಿಸಲು ನನ್ನನ್ನು ಎಳೆದುಕೊಂಡು ಹೋಗಿ ಅಪ್ಪನ ಎದುರು ನಿಲ್ಲಿಸಿ, ‘ಅಂಕಲ್, ನಿಮ್ ಮಗ ಎಕ್ಸಾಂನಲ್ಲಿ ಫೇಲಾಗಿದ್ದಾನೆ, ಗೊತ್ತಾ?’ ಅಂದ. ಅದಕ್ಕೆ ಅಪ್ಪ ‘ಅದೇನು ಎಕ್ಸಾಂ ಅಂದ್ರೆ 12 ವರ್ಷಕ್ಕೊಮ್ಮೆ ಬರೋ ಕುಂಭಮೇಳಾನಾ? ಪ್ರತಿ ವರ್ಷ ಬರುತ್ತೆ. ಮುಂದಿನ ವರ್ಷ ಪಾಸಾಗ್ತಾನೆ ಬಿಡು’ ಅಂದ್ರು. ಹೆತ್ತವರ ಮನಸ್ಥಿತಿ ಹೀಗೆ ಇದ್ದರೆ ಮಕ್ಕಳ ಮೇಲೆ ಒತ್ತಡ ಬೀಳೋಲ್ಲ. ಯಾವಾಗಲೂ 99, 100 ಪರ್ಸೆಂಟ್ ಅಂಕ ತಗೋಬೇಕು ಅಂತ ಒತ್ತಡ ಹಾಕ್ತಿದ್ರೆ ಮಕ್ಕಳು ಮಾನಸಿಕ ಕಾಯಿಲೆಗೆ ತುತ್ತಾಗುತ್ತಾರೆ. ನಾನು ನನ್ನ ಮಕ್ಕಳಿಗೆ 50 ಪರ್ಸೆಂಟ್​ಗಿಂತ ಜಾಸ್ತಿ ಅಂಕ ತಗೋಬೇಡಿ ಅಂತ ಹೇಳ್ತಿದ್ದೆ. ಯಾಕಂದ್ರೆ ನಾನು ಯಾವತ್ತೂ 48 ದಾಟಿಲ್ಲ್ಲ ಅವ್ರೇನಾದ್ರೂ ಜಾಸ್ತಿ ತಗೊಂಡ್ರೆ ಜೀವಮಾನ ಇಡೀ ನನ್ಗೆ ತಮಾಷೆ ಮಾಡೊಲ್ವಾ?

ನಮ್ಮೂರಲ್ಲಿ ಒಬ್ರು ಹೇಳ್ತಾ ಇದ್ರು-‘ನನ್ ಆಸೆ ಇರೋದು ನನ್ ಮಗ ದೊಡ್ಡ ಡಿಗ್ರಿ ಮಾಡಿ ಅಮೆರಿಕದಲ್ಲಿ ತಿಂಗಳಿಗೆ ಐದು ಲಕ್ಷ ದುಡೀಬೇಕು ಅನ್ನೋದಲ್ಲಾ, ಐವತ್ತು ಸಾವಿರಾನೇ ದುಡಿದ್ರೂ ರಾತ್ರಿ ನನ್ ಜತೆನೇ ಊಟ ಮಾಡ್ಬೇಕು ಅಂತ’. ನಿಜ, ಸಂಬಂಧಗಳಿಗೆ ದುಡ್ಡಿಗಿಂತಲೂ ಜಾಸ್ತಿ ಬೆಲೆ ಅಲ್ವಾ?

ಜೋಕು: ಒಂದು ಸುಳ್ಳು ಹೇಳಿದ್ರೆ 5 ನಿಮಿಷ ಆಯಸ್ಸು ಕಮ್ಮಿ ಆಗುತ್ತಂತೆ, ನಗ್ತಾ ಇದ್ರೆ 10 ನಿಮಿಷ ಆಯಸ್ಸು ಜಾಸ್ತಿ ಆಗುತ್ತಂತೆ. ಒಬ್ಬ ವ್ಯಾಪಾರಿ ಲೆಕ್ಕ ಹಾಕಿದ್ನಂತೆ, ನಗ್ತಾ ನಗ್ತಾ ಒಂದು ಸುಳ್ಳು ಹೇಳಿದ್ರೆ 5 ನಿಮಿಷ ಆಯಸ್ಸು ಜಾಸ್ತಿ ಆಗುತ್ತೆ, ಸಾಕು ಅಂತ.

(ಲೇಖಕರು ಖ್ಯಾತ ಜಾದೂಗಾರರು, ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net