ಮೂಕಪ್ರಾಣಿಗಳಿಗೆ ದನಿಯಾಗುವುದಕ್ಕೆ ಇದು ಸಕಾಲ: ವಿಜಯವಾಣಿ ಸೆಲೆಬ್ರಿಟಿ ಕಾರ್ನರ್​ನಲ್ಲಿ ಐಂದ್ರಿತಾ ರೇ..

Aindritha f
Published on
ಕರೊನಾ ನಂತರ ನಮ್ಮ ಜನರಿಗೆ ಸ್ವಲ್ಪ ಬುದ್ಧಿ ಬರಬಹುದು ಎಂಬ ನಿರೀಕ್ಷೆ ಇತ್ತು. ಇನ್ನಾದರೂ ಎಲ್ಲರೂ ಪರಸ್ಪರ ಪ್ರೀತಿಯಿಂದ ಬದುಕಬಹುದು, ಸಾಮರಸ್ಯದಿಂದ ಇರಬಹುದು ಎಂಬ ಆಸೆ ಇತ್ತು. ಆದರೆ, ದಿನೇದಿನೇ ಆ ಆಸೆ ಕಮರುತ್ತಿದೆ. ಇತ್ತೀಚೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ನೂರಾರು ನಾಯಿಗಳನ್ನು ದೊಡ್ಡ ಗುಂಡಿ ತೋಡಿ ಹೂತು ಹಾಕಲಾಯಿತು. ಇದನ್ನು ಕೇಳಿ ಪ್ರಾಣ ಹಿಂಡಿದಂತಾಯಿತು. ಈ ರೀತಿ ಆಗುತ್ತಿರುವುದು ಇದೇ ಮೊದಲೇನಲ್ಲ. ಕೆಲವು ವರ್ಷಗಳ ಹಿಂದೆ ‘ದಿ ವಿಲನ್’ ಚಿತ್ರ ಬಿಡುಗಡೆಯಾದ ಸಂದರ್ಭದಲ್ಲಿ ಅಭಿಮಾನಿಗಳು ಒಂದು ಕೋಣವನ್ನು ಬಲಿಕೊಟ್ಟಿದ್ದು ದೊಡ್ಡ ಸುದ್ದಿಯಾಗಿತ್ತು. ಕೆಲವು ದಿನಗಳ ಹಿಂದೆ ರಜನಿಕಾಂತ್ ಅವರ ಹೊಸ ಚಿತ್ರದ ಪೋಸ್ಟರ್ ಬಿಡುಗಡೆಯಾದ ಸಂದರ್ಭದಲ್ಲಿ ಕುರಿಯನ್ನು ಬಲಿಕೊಡಲಾಯಿತು. ಚೀನಾದಲ್ಲಿ ಪ್ರಾಣಿಗಳಿಗೆ ಎಷ್ಟು ಹಿಂಸೆ ಕೊಡಲಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತೇ ಇದೆ. ಇಲ್ಲೂ ಅದೇ ತರಹ ಮುಂದುವರಿಯುವುದು ಬೇಸರದ ಸಂಗತಿ.

ಯಾವುದೇ ಪ್ರಾಣಿಗೂ ತೊಂದರೆ ಕೊಡುವ ಹಕ್ಕು ಮನುಷ್ಯರಿಗಿಲ್ಲ. ಈ ಕುರಿತು ಜಾಗೃತಿ ಬರಬೇಕು. ಜನರ ಮನಸ್ಥಿತಿ ಬದಲಾಗಬೇಕು. ಮನುಷ್ಯರು ಎಲ್ಲ ಪ್ರಾಣಿಗಳ ಜತೆಗೆ ಸಾಮರಸ್ಯದಿಂದ ಇರಬೇಕು. ಈ ಪೃಥ್ವಿಯಲ್ಲಿ ಮನುಷ್ಯರಿಗೆ ಬದುಕುವ ಹಕ್ಕು ಹೇಗಿದೆಯೋ, ಅದೇ ರೀತಿ ಪ್ರಾಣಿಗಳಿಗೂ ಇದೆ. ಆದರೂ ಪ್ರಾಣಿಗಳ ಮೇಲೆ ನಿರಂತರವಾಗಿ ಶೋಷಣೆ ನಡೆಯುತ್ತಲೇ ಇದೆ. ಪ್ರಾಣಿಗಳಿಗೂ ಭಾವನೆಗಳಿರುತ್ತವೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.

ನಾನು ಮತ್ತು ದಿಗಂತ್ ಪರಿಸರವಾದಿಗಳು, ಪ್ರಾಣಿಪ್ರಿಯರು. ಅಷ್ಟೇ ಅಲ್ಲ, ಶುದ್ಧ ಸಸ್ಯಹಾರಿಗಳು. ನಾವು ಹಾಲು ಸಹ ಕುಡಿಯುವುದಿಲ್ಲ. ಹಾಲು ಕುಡಿಯದಿದ್ದರೆ ಸ್ಟ್ರಾಂಗ್ ಆಗುವುದಿಲ್ಲ, ಉದ್ದ ಆಗುವುದಿಲ್ಲ ಅಂತ ಚಿಕ್ಕ ವಯಸ್ಸಿನಿಂದಲೇ ಎಲ್ಲರಿಗೂ ತಲೆಗೆ ತುಂಬಲಾಗುತ್ತದೆ. ಆ ಪರಿಕಲ್ಪನೆಯೇ ತಪ್ಪು. ಹಸುವಿನ ಹಾಲು, ತುಪ್ಪ ನಮ್ಮ ಆರೋಗ್ಯಕ್ಕೆ ಅಗತ್ಯ ಅಂತ ಕೇಳಿಕೊಂಡೇ ಬಂದಿದ್ದೇವೆ. ಇದು ನಿಜವಲ್ಲ. ಹಸುವಿನ ಹಾಲು ಅದರ ಕರುಗೆ ಮಾತ್ರ ಸೀಮಿತ. ನಾವದನ್ನು ಕಿತ್ತುಕೊಳ್ಳುತ್ತಿದ್ದೇವೆ. ಅದರಿಂದ ಹಸಗುಳಿಗೆ ಆಗುವ ನೋವು ಅಷ್ಟಿಷ್ಟಲ್ಲ. ಒಂದು ಕಡೆ ನಾವು ಹಸುಗಳನ್ನು ಪೂಜೆ ಮಾಡುತ್ತೇವೆ. ಇನ್ನೊಂದು ಕಡೆ ಅದರ ಹಾಲು ಕಿತ್ತುಕೊಳ್ಳುತ್ತಿದ್ದೇವೆ. ಜಪಾನ್​ನಲ್ಲಿ ಯಾರೂ ಹಾಲು ಕುಡಿಯುವುದಿಲ್ಲ. ನಮ್ಮ ಮೂಳೆಗಳಿಗಿಂತ ಅವರ ಮೂಳೆ ಬಹಳ ಗಟ್ಟಿಯಾಗಿರುತ್ತದೆ.

ಶಿವಮೊಗ್ಗದಲ್ಲಿ ಆಗಿರುವ ಘಟನೆ ಬಗ್ಗೆ ಹೇಳುವುದಾದರೆ, ಶ್ವಾನಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂಬ ಕಾರಣಕ್ಕೆ ನಿರ್ದಾಕ್ಷಿಣ್ಯವಾಗಿ ಸಾಯಿಸಲಾಗಿದೆ. ಶ್ವಾನಗಳ ಸಂತಾನೋತ್ಪತ್ತಿಯನ್ನು ತಡೆಯಬೇಕೆಂದರೆ, ಅವುಗಳಿಗೆ ಆಪರೇಷನ್ ಮಾಡಿಸಬೇಕು. ಆಗ ಸಂಖ್ಯೆ ಸಹಜವಾಗಿಯೇ ಕಡಿಮೆಯಾಗುತ್ತದೆ. ಅದುಬಿಟ್ಟು ಹೀಗೆ ಕೊಲ್ಲುವುದು ಸರಿಯಲ್ಲ. ಶ್ವಾನಗಳಿಗೆ ಆಪರೇಷನ್ ಮಾಡಿಸುವುದಕ್ಕೆ ಸರ್ಕಾರದಿಂದ ಪಂಚಾಯ್ತಿ ಮತ್ತು ಬಿಬಿಎಂಪಿಗೆ ಅನುದಾನ ಸಹ ಸಿಗುತ್ತದೆ. ಶ್ವಾನಗಳನ್ನು ದತ್ತು ತೆಗೆದುಕೊಳ್ಳುವ ಪರಿಪಾಠ ಹೆಚ್ಚಬೇಕು. ಬೆಂಗಳೂರಿನಲ್ಲಿ ಮೂರು ಲಕ್ಷಕ್ಕೂ ಹೆಚ್ಚು ನಾಯಿಗಳಿವೆ. 30 ಜನರಲ್ಲಿ ಒಬ್ಬರಾದರೂ ನಾಯಿ ದತ್ತು ತೆಗೆದುಕೊಂಡರೆ, ಬೀದಿನಾಯಿಗಳ ಸಮಸ್ಯೆಯೇ ಇರುವುದಿಲ್ಲ. ಆದರೆ, ಯಾರೂ ದತ್ತು ತೆಗೆದುಕೊಳ್ಳುವುದಿಲ್ಲ. ಏಕೆಂದರೆ, ಎಲ್ಲರಿಗೂ ಬ್ರೀಡ್ ಶ್ವಾನಗಳೇ ಬೇಕು. ಲ್ಯಾಬ್ರಾಡಾರ್, ಗೋಲ್ಡನ್ ರಿಟ್ರೀವರ್, ಹಸ್ಕಿ ಮುಂತಾದ ದುಬಾರಿ ಬೆಲೆಯ, ಬ್ರಾಂಡೆಡ್ ಶ್ವಾನಗಳೇ ಬೇಕು. ಹಸ್ಕಿ ಶ್ವಾನ ಈ ಹವಾಮಾನಕ್ಕೆ ಒಗ್ಗುವುದಿಲ್ಲ. ಅದು ತಣ್ಣನೆಯ ಪ್ರದೇಶದ ಪ್ರಾಣಿ. ಆದರೂ, ಅದನ್ನು ಬ್ರೀಡ್ ಮಾಡುವುದು ಒಂದು ಬಿಜಿನೆಸ್ ಆಗಿದೆ. ನಿಜಕ್ಕೂ ಶ್ವಾನಗಳನ್ನು ಇಷ್ಟಪಡುವುದಾದರೆ ಬೀದಿನಾಯಿಗಳನ್ನು ದತ್ತು ಪಡೆದುಕೊಳ್ಳಿ. ನಾನು ಸಹ ಒಂದು ಬೀದಿನಾಯಿಯನ್ನು ದತ್ತು ಪಡೆದಿದ್ದೇನೆ.

ಇನ್ನು, ಪಂಚಾಯ್ತಿಗಳಿಗೆ ಈ ಬಗ್ಗೆ ಜಾಗೃತಿಯೇ ಇಲ್ಲ. ಹಲವು ವರ್ಷಗಳಿಂದ ಹೀಗಾಗುತ್ತಿದೆ ಎಂದು ಕೇಳಿದ್ದೇನೆ. ಈಗ ಒಂದು ಕೇಸ್ ನಮ್ಮ ಮುಂದೆ ಬಂದಿದೆ ಅಷ್ಟೇ. 100 ಶ್ವಾನಗಳನ್ನು ಕೊಂದಿದ್ದಾರೆ ಎಂದರೆ, ನೂರು ಜೀವಗಳು ಬಲಿಯಾದಂತೆ. ಜೆಸಿಬಿಯಿಂದ ಗುಂಡಿ ತೆಗೆದು, ಅಲ್ಲಿ ಹಾಕಿ ಕೊಂದಿದ್ದಾರೆ. ಕೇರಳದಲ್ಲಿ ಕೆಲವು ವರ್ಷಗಳ ಹಿಂದೆ ನಾಯಿಯನ್ನು ನೇಣಿಗೇರಿಸಲಾಗಿತ್ತು. ಈ ಸಂದರ್ಭದಲ್ಲಿ ಹಲವರು ದನಿ ಎತ್ತಿದರು. ಬಾಲಿವುಡ್​ನ ಹಲವು ಸೆಲೆಬ್ರಿಟಿಗಳು ಇದರ ವಿರುದ್ಧ ಮಾತಾಡಿದ್ದರು. ಕೊನೆಗೆ ಕೇರಳದಲ್ಲಿ ಆ ಶ್ವಾನದ ಹೆಸರಿನಲ್ಲಿ ಒಂದು ಕಾನೂನು ಬಂತು. ತಪ್ಪಿತಸ್ಥರಿಗೆ ಶಿಕ್ಷೆಯೂ ಆಯಿತು. ಆದರೆ, ಕರ್ನಾಟಕದಲ್ಲಿ ಈ ತರಹ ಘಟನೆ ಹೇಗಾಯಿತು ಎಂದು ಅರ್ಥ ಮಾಡಿಕೊಳ್ಳುವುದಕ್ಕೇ ಸಾಧ್ಯವಿಲ್ಲ. ಶ್ವಾನಗಳು ಮನುಷ್ಯರ ಬೆಸ್ಟ್ ಫ್ರೆಂಡ್ ಎಂದು ಹೇಳುತ್ತಿರುತ್ತೇವೆ. ಈಗ ಅವುಗಳನ್ನೇ ಹೀಗೆ ತುಚ್ಛವಾಗಿ ಕೊಲ್ಲುವುದು ಎಷ್ಟು ಸರಿ? ಶ್ವಾನಗಳಿಗೆ ಒಂದು ಇತಿಹಾಸವಿದೆ. ಅಸಲಿಗೆ, ಶ್ವಾನ ಎಂಬ ಪ್ರಾಣಿಯೇ ಇಲ್ಲ. ಈಗಿರುವುದು ತೋಳದ ತಳಿ ಅಷ್ಟೇ. ಸಾವಿರಾರು ವರ್ಷಗಳ ಹಿಂದೆ ಕಾಡಿನಂಚಿನಲ್ಲಿದ್ದ ಮನುಷ್ಯ, ತೋಳಗಳೊಂದಿಗೆ ಸ್ನೇಹ ಸಂಪಾದಿಸಿ, ಅದನ್ನೇ ಸಾಕುಪ್ರಾಣಿಯನ್ನಾಗಿ ಮಾಡಿಕೊಂಡ.

ಮನುಷ್ಯನಿಗೆ ಒಂದು ಶ್ವಾನ ಕಚ್ಚಿದರೆ, ಅದನ್ನು ಹೊಡೆದು ಕೊಲ್ಲುತ್ತಾರೆ. ಅದೇ ಒಬ್ಬ ಮನುಷ್ಯ ಶ್ವಾನದ ಕೊಲೆ ಮಾಡಿದರೆ, ಅವನಿಗೆ ಅದೇ ಶಿಕ್ಷೆ ಸಿಗುತ್ತದಾ? ಖಂಡಿತ ಇಲ್ಲ. ಇದೆಲ್ಲ ಯಾಕಾಗುತ್ತಿದೆ ಎಂದರೆ ಅದು ಮೂಕಪ್ರಾಣಿ, ಅದಕ್ಕೆ ದನಿ ಇಲ್ಲ, ನಾವು ಏನು ಬೇಕಾದರೂ ಮಾಡಿಕೊಳ್ಳಬಹುದು ಎಂಬ ಪ್ರವೃತ್ತಿಯಿಂದ. ಹಾಗಾಗಿ, ಸಾಕುಪ್ರಾಣಿಗಳನ್ನು ಮತ್ತು ಮೂಕಪ್ರಾಣಿಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಸಾಕಷ್ಟು ಸೆಲೆಬ್ರಿಟಿಗಳಲ್ಲಿ ಮನವಿ ಮಾಡಿಕೊಂಡಿದ್ದೇನೆ. ಏಕೆಂದರೆ, ಅವಕ್ಕೂ ಜೀವ ಇದೆ.

ಇಲ್ಲಿ ಬರೀ ಶ್ವಾನಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂಬುದೊಂದೇ ವಿಷಯವಲ್ಲ, ಜನಸಂಖ್ಯೆಯೂ ಹೆಚ್ಚಾಗುತ್ತಿದೆ. ಜಗತ್ತಿನ ದೊಡ್ಡ ಸಮಸ್ಯೆ ಎಂದರೆ ಅದು ಜನಸಂಖ್ಯೆ. ನಾವು ಮೊದಲು ಅದನ್ನು ನಿಯಂತ್ರಣ ಮಾಡಬೇಕು. ಅದರ ಬಗ್ಗೆ ಗಮನಹರಿಸುವುದನ್ನು ಬಿಟ್ಟು, ಪ್ರಾಣಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ತಲೆ ಕೆಡಿಸಿಕೊಂಡಿದ್ದೇವೆ. ಬರೀ ಪ್ರಾಣಿಗಳಷ್ಟೇ ಅಲ್ಲ, ನಮ್ಮ ಭೂಮಿಯ ಬಗ್ಗೆ ಯೋಚಿಸುವುದಕ್ಕೆ ಇದು ಸಕಾಲ. ಜಗತ್ತಿನಾದ್ಯಂತ ಮಾಲಿನ್ಯ ಹೆಚ್ಚುತ್ತಿದೆ. ಪ್ಲಾಸ್ಟಿಕ್ ಬಳಕೆ ಜಾಸ್ತಿಯಾಗಿ, ಸಮುದ್ರದ ಪ್ರಾಣಿಗಳೆಲ್ಲ ಪ್ಲಾಸ್ಟಿಕ್​ಗೆ ಬಲಿಯಾಗುತ್ತಿವೆ. ಒಮ್ಮೆ ಅಸಮತೋಲನ ಆದರೆ, ಬಹಳ ಕಷ್ಟ. ಜಗತ್ತಿನ ಶೇಕಡ 90ರಷ್ಟು ಭಾಗ ನೀರಿನಿಂದ ಆವೃತವಾಗಿದೆ. ಅಲ್ಲಿ ಸಮಸ್ಯೆಯಾಗುತ್ತಿರುವುದರಿಂದಲೇ ಸುನಾಮಿ, ಚಂಡಮಾರುತಗಳು ಆಗಾಗ ಅಪ್ಪಳಿಸುತ್ತಿರುತ್ತವೆ. ಇದು ಹೀಗೆಯೇ ಮುಂದುವರಿದರೆ, ಜಗತ್ತು ಹೆಚ್ಚು ಕಾಲ ಇರುವುದಿಲ್ಲ. ಹಾಗಾಗಿ, ನಮ್ಮ ಕೈಯಲ್ಲಿ ಎಷ್ಟು ಸಾಧ್ಯವೋ ಅಷ್ಟನ್ನು ನಾವು ನಿಯಂತ್ರಿಸಬೇಕು.

ಈ ಕೆಲಸ ಒಬ್ಬರಿಂದ ಸಾಧ್ಯವಿಲ್ಲ ಮತ್ತು ಈ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕು. ಒಬ್ಬರ ಯೋಚನೆ ಬದಲಾದರೆ, ಇನ್ನೊಂದಿಷ್ಟು ಜನ ಅದನ್ನು ನೋಡಿ ಕಲಿಯುತ್ತಾರೆ. ನಾನು ಹಾಲು ಕುಡಿಯುವುದನ್ನು ಬಿಟ್ಟ ಮೇಲೆ, ಈಗ ನಮ್ಮ ಸ್ನೇಹಿತರ ಗುಂಪಿನಲ್ಲಿ ಕೆಲವರು ಹಾಲು ಕುಡಿಯುವುದನ್ನು ಬಿಟ್ಟಿದ್ದಾರೆ. ಮಾಂಸಾಹಾರದಿಂದ ದೂರವಾಗಿದ್ದಾರೆ. ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿದ್ದಾರೆ. ಹೀಗೆ ಎಲ್ಲರೂ ಕಾಳಜಿ ಬೆಳೆಸಿಕೊಂಡು ಬದಲಾದರೆ, ಸಮಸ್ಯೆಗೆ ತನ್ನಿಂತಾನೇ ಉತ್ತರ ಸಿಗುತ್ತದೆ.

(ಲೇಖಕಿ ಖ್ಯಾತ ನಟಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net