

ಅಂತಾರಾಷ್ಟ್ರೀಯ ಬುಕರ್ ಪ್ರಶಸ್ತಿ ಪುರಸ್ಕೃತ ಲೇಖಕಿ ಬಾನು ಮುಷ್ತಾಕ್ ಇತ್ತೀಚೆಗೆ ‘ವಿಜಯವಾಣಿ’ ಕಚೇರಿಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ನಡೆದ ‘ಸಂವಾದ’ ಕಾರ್ಯಕ್ರಮದಲ್ಲಿ ಅವರು, ದಶಕಗಳ ತಮ್ಮ ಸಾಹಿತ್ಯಯಾನದ ಸಂದರ್ಭದಲ್ಲಿ ಕಂಡುಂಡ ಅನುಭವಗಳು, ಕೃತಿಗಳಲ್ಲಿನ ವಸ್ತು, ಮುಂದೆ ಬರಲಿರುವ ಕೃತಿ ಸರಣಿ ಮುಂತಾದ ವಿಷಯಗಳ ಬಗ್ಗೆ ಮುಕ್ತವಾಗಿ ಮಾತನಾಡಿದರು.
ನಮ್ಮ ದೇಶದಲ್ಲಿ ಬರವಣಿಗೆ ಒಂದು ವೃತ್ತಿ ಆಗಲು ಸಾಧ್ಯವೇ ಇಲ್ಲ. ಕೇವಲ ಬರವಣಿಗೆಯಿಂದ ಯಾರ ಹೊಟ್ಟೆಯೂ ತುಂಬುವುದಿಲ್ಲ. ಹಾಗಾಗಿ ಇಲ್ಲಿ ಹವ್ಯಾಸಕ್ಕಾಗಿ, ಆತ್ಮಸಂತೋಷಕ್ಕಾಗಿ ಬರವಣಿಗೆ ಮಾಡಬಹುದೇ ಹೊರತು ಅದನ್ನೇ ಒಂದು ವೃತ್ತಿಯಾಗಿ ತೆಗೆದುಕೊಂಡು ಜೀವನ ನಡೆಸುವುದು ಅಸಾಧ್ಯ... ಇದು ಅಂತಾರಾಷ್ಟ್ರೀಯ ಬುಕರ್ ಪ್ರಶಸ್ತಿ ಪುರಸ್ಕೃತ ಲೇಖಕಿ ಬಾನು ಮುಷ್ತಾಕ್ ಅವರ ಸ್ಪಷ್ಟ ಅಭಿಪ್ರಾಯ. ‘ವಿಜಯವಾಣಿ’ಯ ಬೆಂಗಳೂರು ಕಚೇರಿಗೆ ಇತ್ತೀಚೆಗೆ ಆಗಮಿಸಿ ‘ಸಂವಾದ’ದಲ್ಲಿ ಪಾಲ್ಗೊಂಡ ಅವರು ವಿವಿಧ ವಿಷಯಗಳ ಬಗ್ಗೆ ತಮ್ಮ ಮನದಾಳ ತೆರೆದಿಟ್ಟರು. ಅದನ್ನು ಅವರ ಮಾತುಗಳಲ್ಲೇ ಕೇಳೋಣ.
"ಇದುವರೆಗೂ ನಾನು ಎಷ್ಟೋ ಪುಸ್ತಕಗಳನ್ನು ಬರೆದಿದ್ದೇನೆ. ಮುದ್ರಿಸಿದ ಒಂದೇ ವರ್ಷದಲ್ಲಿ ಸಾವಿರಾರು ಪ್ರತಿಗಳು ಖರ್ಚಾಗಿವೆ. ನನ್ನ 5 ಕಥಾ ಸಂಕಲನಗಳ ಪೈಕಿ ‘ಹಸೀನಾ ಮತ್ತು ಇತರ ಕಥೆಗಳು’ ಸಂಕಲದ ಎಲ್ಲ ಪ್ರತಿಗಳು ಒಂದೇ ವರ್ಷದಲ್ಲಿ ಖಾಲಿಯಾಗಿದ್ದವು. ಈಗ 6 ಕಥಾ ಸಂಕಲನಗಳನ್ನು ಸೇರಿಸಿ ಮಾಡಿರುವ ಪರಿಷ್ಕೃತ ಮುದ್ರಣದ ಐದು ಸಾವಿರ ಪ್ರತಿಗಳು ಸಂಪೂರ್ಣ ಖರ್ಚಾಗಿವೆ. ಹೀಗೆ ಕನ್ನಡದಲ್ಲಿ ಸಾಕಷ್ಟು ಪರಿಚಿತ ಬರಹಗಾರ್ತಿಯಾಗಿರುವ ನನಗೇ ನನ್ನ ಬರವಣಿಗೆಯಿಂದ ಬಂದಿರುವ ಈವರೆಗಿನ ಆದಾಯದಿಂದ ಬದುಕು ನಡೆಸಲು ಸಾಧ್ಯವಾಗಿಲ್ಲ" ಎಂದರು.
ಲಂಡನ್ನಲ್ಲಿ ಒಂದೊಂದು ಪುಸ್ತಕ ಮಳಿಗೆಯೂ 200*200 ಅಡಿ ಅಳಕೆಯ 4-5 ಅಂತಸ್ತಿನ ಕಟ್ಟಡವನ್ನು ಹೊಂದಿವೆ. ಅಲ್ಲಿ ಲಿಫ್ಟ್ ಸೌಲಭ್ಯದ ಜತೆಗೆ ಕಾಫಿ ಶಾಪ್ ಕೂಡ ಇರುತ್ತದೆ. ಅಲ್ಲಿನ ಲೇಖಕರ ಯಾವುದೇ ಕಾರ್ಯಕ್ರಮಗಳು ನಡೆದರೂ ಸುಮಾರು 500 ಜನರು ಹಣ ಕೊಟ್ಟು ಟಿಕೆಟ್ ಪಡೆದು ಭಾಗವಹಿಸುತ್ತಾರೆ. ಆದರೆ ಅಂತಹ ಪರಿಸ್ಥಿತಿ ನಮ್ಮ ದೇಶದಲ್ಲಿ ಇದೆಯೇ? ಹಾಗಾಗಿ ನಮ್ಮಲ್ಲಿ ಕೇವಲ ಬರವಣಿಗೆಯಿಂದ ಹಣ ಗಳಿಸಲು ಸಾಧ್ಯವಿಲ್ಲ. ಇನ್ನು ಅದನ್ನೇ ವೃತ್ತಿಯಾಗಿ ಮಾಡಿಕೊಳ್ಳುವುದು ದೂರದ ಮಾತು. ಈಗಿರುವ ನಮ್ಮ ಬರಹಗಾರರನ್ನೇ ನೋಡಿ. ಅಧ್ಯಾಪಕ, ವೈದ್ಯ, ಪತ್ರಕರ್ತ ಹೀಗೆ ಬೇರೆ ಬೇರೆ ವೃತ್ತಿಯಲ್ಲಿ ಇದ್ದುಕೊಂಡು ಹವ್ಯಾಸಕ್ಕಾಗಿ, ಆತ್ಮಸಂತೋಷಕ್ಕಾಗಿ ಬರವಣಿಗೆ ಮಾಡುತ್ತಿರುವವರೇ ಹೆಚ್ಚು.
ಸಾಹಿತ್ಯದಲ್ಲಿ ಆಸಕ್ತಿ ಇದ್ದವರು ಬರವಣಿಗೆಯನ್ನು ರೂಢಿಸಿಕೊಳ್ಳಬೇಕು. ಬರೆಯಬೇಕು, ಬರೆಯಬೇಕು, ಬರೆಯುತ್ತಲೇ ಇರಬೇಕು- ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ. ಮುಂದೆ ಯಾವತ್ತೋ ಒಂದು ದಿನ ಅದರ ಫಲ ಸಿಗಬಹುದು. ಸಿಗದೆಯೂ ಇರಬಹುದು. ನಾನು ಪ್ರಶಸ್ತಿಗಾಗಿ ಯಾವತ್ತೂ ಬರೆಯಲಿಲ್ಲ, ನನ್ನ ಖುಷಿಗಾಗಿ ಬರೆದೆ. ಆಸಕ್ತರು ಪ್ರಕಟಿಸಿದರು. ಬರವಣಿಗೆಯಲ್ಲಿ ಸ್ವಂತಿಕೆ ಹಾಗೂ ಪ್ರಾಮಾಣಿಕತೆ ಇರಬೇಕು. ಬರೆಯುವುದರಲ್ಲಿ ಆಸಕ್ತಿ ಇರುವವರು ಕಾಲ ತಳ್ಳದೆ ಬರೆಯಲು ಪ್ರಾರಂಭಿಸಿ.
"ಮನುಷ್ಯ ಸದಾ ಸಕಾರಾತ್ಮಕ ಚಿಂತನೆ ರೂಢಿಸಿಕೊಂಡರೆ ಗುರಿಯನ್ನು ಬಹುಬೇಗ ಮುಟ್ಟಬಹುದು. ವಿರೋಧ, ಒತ್ತಡ, ಅನಾರೋಗ್ಯ ಇತ್ಯಾದಿ ಕಾರಣಗಳಿಂದ ನೆಗೆಟಿವ್ ಚಿಂತನೆಗಳಿಗೆ ನಾನೂ ತುತ್ತಾಗಿದ್ದೆ. ಒಂದು ಹಂತದಲ್ಲಿ ಪ್ರಯತ್ನಪೂರ್ವಕವಾಗಿ ನೆಗೆಟಿವ್ ಚಿಂತನೆಗಳನ್ನು ಸಂಪೂರ್ಣ ದೂರ ಇಟ್ಟೆ. ಸಕಾರಾತ್ಮಕ ಚಿಂತನೆ ರೂಢಿಸಿಕೊಂಡೆ. ಎಷ್ಟರ ಮಟ್ಟಿಗೆ ನಾನು ಸಕಾರಾತ್ಮಕವಾಗಿರುತ್ತೇನೆ ಎಂದರೆ, ಮೊನ್ನೆ ನಡೆದ ಬುಕರ್ ಪ್ರಶಸ್ತಿ ಆಯ್ಕೆ ಸಂದರ್ಭದಲ್ಲಿ ‘ಖಡಾಖಂಡಿತವಾಗಿ ನಾನೇ ಆಯ್ಕೆಯಾಗುತ್ತೇನೆ’ ಎಂಬ ನಿರ್ಣಯಕ್ಕೆ ಬಂದಿದ್ದೆ. ಪ್ರಶಸ್ತಿ ಘೋಷಣೆಯಾದ ಬಳಿಕ ಮಾಡಬೇಕಾದ ಭಾಷಣವನ್ನೂ ಮೊದಲೇ ಬರೆದಿಟ್ಟುಕೊಂಡಿದ್ದೆ! ನನ್ನ ಕೆಲವು ಕಥೆಗಳನ್ನು ಇಂಗ್ಲಿಷ್ಗೆ ದೀಪಾ ಭಾಸ್ತಿ ಸಮರ್ಥವಾಗಿ ಅನುವಾದಿಸಿದ್ದಾರೆ. ಹಾಗಾಗಿ ‘ಹಾರ್ಟ್ ಲ್ಯಾಂಪ್’ಗೆ ಪ್ರಶಸ್ತಿ ಖಚಿತ ಎಂಬುದು ನನ್ನ ಭಾವನೆಯಾಗಿತ್ತು".
- ದೀಪಾ ಭಾಸ್ತಿ
"ಮುಸ್ಲಿಂ ಸಮುದಾಯದಲ್ಲಿ ಮಕ್ಕಳ ಜಾತಕ ಬರೆಸುವ ಪದ್ಧತಿ ಇಲ್ಲ. ಆದರೆ ನನ್ನ ತಂದೆಗೆ ಬ್ರಾಹ್ಮಣ ಸ್ನೇಹಿತರಿದ್ದರು. ಅವರಿಂದ ನನ್ನ ಜಾತಕ ಬರೆಸಿದ್ದರು. ಅದರಲ್ಲಿ ‘ಈಕೆ ವಿಶ್ವ ಮಟ್ಟದಲ್ಲಿ ಖ್ಯಾತಿ ಪಡೆಯುತ್ತಾಳೆ’ ಎಂಬ ಭವಿಷ್ಯ ಇತ್ತು. ಅದನ್ನು ನಾನೂ ಓದಿದ್ದೇನೆ. ನನ್ನನ್ನು ತಂದೆ ಉರ್ದು ಶಾಲೆಗೆ ಸೇರಿಸಿದ್ದರು. ಎರಡು ವರ್ಷಗಳಾದರೂ ನಾನು ಒಂದಕ್ಷರವನ್ನೂ ಕಲಿಯಲಿಲ್ಲ. ಏಕೆಂದರೆ ನನಗೆ ಕನ್ನಡ ಇಷ್ಟ. ಹೆಲ್ತ್ ಇನ್ಸ್ಪೆಕ್ಟರ್ ಆಗಿದ್ದ ತಂದೆಗೆ ಶಿವಮೊಗ್ಗಕ್ಕೆ ವರ್ಗಾವಣೆ ಆಯಿತು. ಆಗ ನನ್ನನ್ನು ಕನ್ನಡ ಶಾಲೆಗೆ ಸೇರಿಸಲು ಕರೆದೊಯ್ದರು. ಅಲ್ಲಿ ಶಿಕ್ಷಕರು ‘ಸೇರಿಸಿಕೊಳ್ಳುತ್ತೇವೆ, ಆದರೆ 6 ತಿಂಗಳಲ್ಲಿ ಕನ್ನಡವನ್ನು ಚೆನ್ನಾಗಿ ಕಲಿತರೆ ಸರಿ, ಇಲ್ಲದಿದ್ದರೆ ಬೇರೆ ಶಾಲೆ ನೋಡಿಕೊಳ್ಳಿ’ ಎಂದರು. ಸರಿ, ಈ ಒಪ್ಪಂದದ ಮೇರೆಗೆ ಶಾಲೆ ಸೇರಿದ್ದಾಯ್ತು. ಶಿಕ್ಷಕರಿಗೇ ಅಚ್ಚರಿಯಾಗುವಂತೆ ಕೆಲವೇ ದಿನಗಳಲ್ಲಿ ನಾನು ಕನ್ನಡ ವರ್ಣಮಾಲೆ, ಕಾಗುಣಿತ, ಓದುವುದು, ಬರೆಯುವುದನ್ನು ಚೆನ್ನಾಗಿ ಕಲಿತೆ. ಹಾಗಾಗಿ ನಂತರ ನನಗೆ ಕನ್ನಡದಲ್ಲಿ ಇಷ್ಟೆಲ್ಲಾ ಬರವಣಿಗೆ ಮಾಡುವುದು ಸಾಧ್ಯವಾಯಿತು" ಎಂದರು.
"ಮುಸ್ಲಿಂ ಸಮುದಾಯದೊಳಗಿನ ಜೀವನಶೈಲಿಯೂ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ನಾನು ಸಾಹಿತ್ಯ ರಚಿಸುತ್ತಿದ್ದುದು, ಪತ್ರಿಕೆಗಳಲ್ಲಿ ಬರೆಯುತ್ತಿದ್ದುದು ನಮ್ಮ ಸಮುದಾಯದಲ್ಲೇ ಇದ್ದ ಕೆಲವರಿಗೆ ಇಷ್ಟವಿರಲಿಲ್ಲ. ಅದನ್ನು ನಿಲ್ಲಿಸುವಂತೆ ಅವಕಾಶ ಸಿಕ್ಕಾಗಲೆಲ್ಲ ಒತ್ತಾಯಿಸುತ್ತಿದ್ದರು. ಸಮುದಾಯದ ಒಳವಿಷಯಗಳನ್ನು ಬಹಿರಂಗಪಡಿಸಿ ನಾನು ಶಹಬ್ಬಾಶ್ಗಿರಿ ಪಡೆದುಕೊಳ್ಳುತ್ತಿದ್ದೇನೆಂಬ ಭಾವನೆ ಅವರಿಗಿತ್ತು. ಒಮ್ಮೆ ಕೆಲವರು ಮಧ್ಯರಾತ್ರಿಯಲ್ಲಿ ನಮ್ಮ ಮನೆಗೆ ಬಂದರು. ‘ಇನ್ನು ಮುಂದೆ ಮುಸ್ಲಿಂ ಸಮುದಾಯಕ್ಕೆ ಸಂಬಂಧಪಟ್ಟಂತೆ ಯಾವುದೇ ಕತೆ, ಕಾದಂಬರಿ, ಕವನ, ಲೇಖನಗಳನ್ನು ಬರೆಯುವುದಿಲ್ಲ’ ಎಂಬ ಪ್ರಮಾಣಪತ್ರವನ್ನು ತಾವೇ ರೆಡಿ ಮಾಡಿಕೊಂಡು ತಂದಿದ್ದರು. ಅದಕ್ಕೆ ಸಹಿ ಹಾಕುವಂತೆ ನನ್ನ ಮೇಲೆ ಒತ್ತಡ ಹೇರಿದರು. ಆದರೆ ನಾನು, ‘ನನ್ನನ್ನು ನೇಣಿಗೇರಿಸಿದರೂ ಸರಿ, ನಾನು ಸಹಿ ಹಾಕುವುದಿಲ್ಲ’ ಎಂದು ಸ್ಪಷ್ಟವಾಗಿ ಹೇಳಿದೆ. ಇಷ್ಟೆಲ್ಲ ನಿಯಂತ್ರಣಗಳು, ನಿರ್ಬಂಧಗಳ ಜೊತೆಗೆ, ಕುಟುಂಬದ ಕಾರ್ಯದೊತ್ತಡವೂ ಇತ್ತು. ಹಾಗಾಗಿ ನಾನು ಬರೆಯುವುದನ್ನು ಕೆಲ ಕಾಲ ನಿಲ್ಲಿಸಬೇಕಾಯಿತು" ಎಂದರು.
"ಕೆಲವು ವರ್ಷಗಳ ನಂತರ ಮತ್ತೆ ಬರೆಯುವುದನ್ನು ಆರಂಭಿಸಿದೆ. ಸಮಾಜದಲ್ಲಿ ಎದುರಾಗುವ ವಿರೋಧದ ನಡುವೆ ಸೃಜನಶೀಲತೆ ಉಳಿಸಿಕೊಳ್ಳುವುದು ಬರಹಗಾರರಿಗೆ ದೊಡ್ಡ ಸವಾಲು. ಯಾರೂ ಊಹಿಸಲಾಗದ, ಬಹಿರಂಗವಾಗಿ ಹೇಳಲೂ ಆಗದಂತಹ ಅಸಭ್ಯ, ಅಶ್ಲೀಲ ಪದ ಬಳಸಿ ನನ್ನನ್ನು ಟೀಕಿಸಿದವರಿದ್ದಾರೆ. ಸಾಕಷ್ಟು ಮಾನಸಿಕವಾಗಿ ಹಿಂಸೆ ಅನುಭವಿಸಿದ್ದೇನೆ. ಖಿನ್ನತೆಗೆ ಒಳಗಾಗಿ ದೈಹಿಕ ಸಮಸ್ಯೆಯನ್ನೂ ಎದುರಿಸಿದ್ದೇನೆ. ಮನೋವೈದ್ಯರಿಂದ ಚಿಕಿತ್ಸೆಯನ್ನೂ ಪಡೆದ ಉದಾಹರಣೆಗಳಿವೆ. ನನ್ನ ಬರವಣಿಗೆಯನ್ನು ಹಿಂದೆ ವಿರೋಧಿಸಿದ್ದ ಸಮುದಾಯದ ಮುಖಂಡರೇ ಇಂದು ಬುಕರ್ ಪ್ರಶಸ್ತಿ ಬಂದ ನಂತರ ನನ್ನ ಈ ಸಾಧನೆಗಾಗಿ ಖುಷಿ ಪಟ್ಟಿದ್ದಾರೆ, ಅಭಿನಂದನಾ ಸಮಾರಂಭಗಳಿಗೂ ಆಹ್ವಾನಿಸುತ್ತಿದ್ದಾರೆ.
"ಒಬ್ಬ ತಾಯಿ ತನ್ನ ಮಗುವಿಗೆ ಹಾಲುಣಿಸಲು ಸಾಧ್ಯವಿಲ್ಲದ ಸಂದರ್ಭದಲ್ಲಿ ಆ ಮಗುವಿಗೆ ಬೇರೊಬ್ಬ ತಾಯಿ ಹಾಲುಣಿಸಿದರೆ ಆ ಮಗು ಸಹ ಅವಳ ಮಗುವಿನಂತೆಯೇ. ಇದಕ್ಕೆ ಮುಸ್ಲಿಮರು ‘ದೂಧ್ ಕಿ ರಿಷ್ತಾ’ ಎನ್ನುತ್ತಾರೆ. ಆ ತಾಯಿ ಮತ್ತು ಈ ತಾಯಿಯ ಮಕ್ಕಳು ವಿವಾಹ ಸಂಬಂಧ ಬೆಳೆಸುವಂತಿಲ್ಲ. ಏಕೆಂದರೆ ಅವರ ಮಧ್ಯೆ ತಾಯಿಹಾಲಿನ ಸಂಬಂಧ ಇರುವುದರಿಂದ ಸೋದರ- ಸೋದರಿಯಾಗುತ್ತಾರೆ. ನನ್ನ ಮುಂದಿನ ಕಾದಂಬರಿಯಲ್ಲಿ ಈ ಅಂಶವೂ ಬರುತ್ತದೆ" ಎಂದರು.
"ಬದಲಾಗುತ್ತಿರುವ ಜಗತ್ತಿನಲ್ಲಿ ರಾಕ್ಷಸೀ ಪ್ರವೃತ್ತಿ ಕಡಿಮೆಯಾಗಬೇಕಾದರೆ ಸಾಹಿತ್ಯ, ಕಲೆ ಇತ್ಯಾದಿ ಅತ್ಯಗತ್ಯ. ಸಾಹಿತ್ಯವು ಕೇವಲ ಬಾಯಿಯಿಂದ ಬರುವ ಶಬ್ದವಲ್ಲ. ಅದು ಹೃದಯದ ಭಾಷೆ. ಸಾಹಿತ್ಯವು ಮನುಷ್ಯನನ್ನು ಮನುಷ್ಯನನ್ನಾಗಿ ಉಳಿಸುತ್ತದೆ. ಸಾಹಿತ್ಯದ ಗಂಧ ಗಾಳಿ ಇಲ್ಲದವರು ಜನಪರ, ಜೀವಪರ ಆಗಿರಲು ಸಾಧ್ಯವಿಲ್ಲ. ಅಂಥವರು ಸಮಾಜ ವಿರೋಧಿಗಳಾಗುವ ಸಾಧ್ಯತೆಯೇ ಹೆಚ್ಚು" ಎಂದು ಹೇಳಿದರು.
ಸದ್ಯ ನನ್ನ ಏಳನೇ ಕಥಾ ಸಂಗ್ರಹ ಸಿದ್ಧಗೊಳ್ಳುತ್ತಿದೆ. ಈಗಾಗಲೇ ಕಾದಂಬರಿಯೊಂದನ್ನು ಅರ್ಧ ಬರೆದಿದ್ದೇನೆ. ಜತೆಗೆ ಆತ್ಮಕಥೆ ಕೂಡ ಬರೆಯುತ್ತಿದ್ದೇನೆ. ಈ ಮೂರೂ ಕೆಲಸಗಳು ಒಟ್ಟೊಟ್ಟಿಗೇ ಆಗುತ್ತಿವೆ ಎಂದರು.
"ಮುಸ್ಲಿಮರಲ್ಲಿ ಹಾಲಿನ ಋಣ ಎಂಬುದೊಂದಿದೆ. ಅದನ್ನು ತಾಯಿ ಬದುಕಿರುವಾಗಲೇ ಮಕ್ಕಳನ್ನು ಕರೆದು ಮಾಫ್ ಮಾಡಬೇಕು. ಹಾಗೆ ಮಾಡದೆ ತಾಯಿ ಸತ್ತರೆ ಮಕ್ಕಳಿಗೆ ಮುಕ್ತಿ ಸಿಗುವುದಿಲ್ಲ ಎಂಬ ನಂಬಿಕೆ ಇದೆ. ಮಕ್ಕಳೆಲ್ಲ ಸೇರಿ ಪುಟ್ಟ ಕಾರ್ಯಕ್ರಮ ಮಾಡಿ ತಾಯಿಗೆ ಇಷ್ಟವಾಗುವ ಉಡುಗೊರೆ ನೀಡಿ ಸಂತೋಷಪಡಿಸಿ, ಹಾಲಿನ ಋಣ ಮಾಫ್ ಮಾಡುವಂತೆ ಕೋರುತ್ತಾರೆ. ಈ ರೀತಿಯ ಪದ್ಧತಿ ಇರುವುದರಿಂದ ಮುಸ್ಲಿಂ ಸಮುದಾಯದಲ್ಲಿ ವೃದ್ಧಾಶ್ರಮಗಳು ಕಡಿಮೆ. ಏಕೆಂದರೆ ಹಾಲಿನ ಋಣದ ಮಾಫಿಗಾಗಿಯಾದರೂ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ" ಎಂದು ಹೇಳಿದರು.
"ಪ್ರತಿಯೊಬ್ಬ ಬರಹಗಾರನ ಬರಹಗಳಲ್ಲಿಯೂ ಸ್ವಂತ ಬದುಕಿನ ಘಟನೆಗಳ ಪ್ರಭಾವವಿರುತ್ತದೆ. ನಾನು ಒಮ್ಮೆ ಸಕಾರಣವಿಲ್ಲದೆ ಗಂಡನೊಂದಿಗೆ ಜಗಳವಾಡಿ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಮುಂದಾಗಿದ್ದೆ. ಆಗ ನನ್ನ ಪತಿಯೇ ಧಾವಿಸಿ ಬಂದು, ಪುಟ್ಟ ಮಗುವನ್ನು ಕಾಲ ಬಳಿ ಇಟ್ಟು ನನ್ನನ್ನು ಸಮಾಧಾನಪಡಿಸಿ ಅನಾಹುತ ತಪ್ಪಿಸಿದರು. ಹೆರಿಗೆ ನಂತರ ಆವರಿಸಿಕೊಳ್ಳುವ ಖಿನ್ನತೆಯೂ ನನ್ನ ಆಗಿನ ಮನಸ್ಥಿತಿಗೆ ಕಾರಣವಿರಬಹುದು. ಅಂತಹುದೇ ಘಟನೆ ನನ್ನ ‘ಎದೆಯ ಹಣತೆ’ ಕೃತಿಯಲ್ಲೂ ಬಂದಿದೆ. ಬರಹಗಾರನ ಆಲೋಚನೆಗೆ ಸಾಮಗ್ರಿಗಳು ಎಲ್ಲಿಂದಲಾದರೂ ದೊರೆಯಬಹುದು. ನನ್ನ ಹೋರಾಟಗಳು ಕೂಡ ಬರಹದ ಭಾಗವಾಗಿವೆ" ಎಂದರು.
"ವಿದೇಶಗಳಲ್ಲಿ ಸೃಜನಶೀಲತೆಯ ಬಗ್ಗೆ ಬಿ.ಎ., ಎಂ.ಎ. ಕೋರ್ಸ್ಗಳಿವೆ. ಆದರೆ ಭಾರತದಲ್ಲಿ ಸೃಜನಶೀಲತೆ ರಸ್ತೆ ಬದಿಯ ಪಂಚರ್ ಶಾಪ್ನ ಮೆಕ್ಯಾನಿಸಂ ಇದ್ದಂತೆ. ನನ್ನ ಪತಿ ಕನ್ನಡಕ ಮತ್ತು ವಾಚ್ ಅಂಗಡಿ ನಡೆಸುತ್ತಿದ್ದರು. ಒಮ್ಮೆ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಅಂಗಡಿಗೆ ಬಂದಾಗ, ಅವರಿಗೆ ‘ನನ್ನ ಪತ್ನಿಯೂ ಸಾಹಿತ್ಯದಲ್ಲಿ ಆಸಕ್ತಿ ಇರುವವಳು’ ಎಂದು ಹೇಳಿ, ಅವರನ್ನು ನಮ್ಮ ಮನೆಗೆ ಕರೆದುಕೊಂಡು ಬಂದಿದ್ದರು. ನನ್ನ ಬರವಣಿಗೆಗೆ ಪತಿಯ ಪ್ರೋತ್ಸಾಹ ಇದ್ದೇ ಇತ್ತು" ಎಂದರು.