

ನೀಳು ಗೆರೆ ಬಳುಬಳುಕೆ ಕಡಲತೆರೆಯೊಯ್ಯಾರ| ತಾಳಲಯ ಸೇರೆ ರಾಗದ ನಾಟ್ಯ ಧಾಟಿ|| ಗೋಳದ ಜ್ವಾಲೆಯಿಂ ಗಗನಪಟಸಿಂಗಾರ| ವೈಲಕ್ಷಣದೊಲಿಂಬು-ಮಂಕುತಿಮ್ಮ||452||
ಕಡಲಿನಲ್ಲಿ ನೀಳವಾದ ಗೆರೆಯಂತೆ ಕಾಣುವ ಅಲೆಯು ಒಯ್ಯಾರದಿಂದ ಬಳುಬಳುಕುತ್ತಾ ಬಂದು ತೀರವನ್ನು ಸವರುತ್ತದೆ. ತಾಳ ಲಯಗಳು ಜೊತೆಗೂಡಿ ವಿವಿಧ ರಾಗಗಳ ಪ್ರಸ್ತುತಿ. ಆಕಾಶದಲ್ಲಿರುವ ಸೂರ್ಯನ ಜ್ವಾಲೆಯು ಗಗನಪಟಕ್ಕೆ ಸಿಂಗಾರ. ಹೀಗೆ ವಿಲಕ್ಷಣವಾದವುಗಳು ಜೊತೆಗೂಡಿದರೆ ಇಂಬು ಎನ್ನುತ್ತದೆ ಈ ಕಗ್ಗ.
ವಿಶಾಲವಾಗಿ ಹರಡಿರುವ ಹಸಿರ ಬಯಲಿನ ನಡುವೆ ಗಗನ ಮುಟ್ಟುವ ತೆರದಿ ಬೆಳೆದು ನಿಂತ ಬೆಟ್ಟ. ಮೈದುಂಬಿ ಹರಿಯುವ ನದಿಯಲ್ಲಿ ಆಳ ಸುಳಿಗಳಿರುವ ಮಡುಗಳು. ಸುಂದರವಾಗಿ ಅರಳಿರುವ ಬೇಲಿಯ ಹೂವಿನಲ್ಲಿ ಮೂರ್ಛೆ ತಪ್ಪುವಂಥ ದುರ್ವಾಸನೆ, ಮನಮೋಹಕ ಗರಿಗಳುಳ್ಳ ನವಿಲಿಗೆ ಕೋಗಿಲೆಯ ದನಿಯಿಲ್ಲ. ಕೋಗಿಲೆಗಾದರೋ ನವಿಲಿನ ಲಾಸ್ಯವಿಲ್ಲ. ಹೀಗೆ ಪ್ರಕೃತಿಯ ತುಂಬಾ ಹತ್ತು ಹಲವು ವೈಲಕ್ಷಣಗಳಿವೆ.
ಪ್ರಕೃತಿಯಲ್ಲಿ ಒಂದಕ್ಕೊಂದು ವಿರೋಧವಾಗಿರುವ ಮತ್ತು ಆ ವಿರೋಧವೇ ಪೂರಕವೂ ಆಗಿರುವ ವಿಶೇಷತೆಯನ್ನು ಕಾಣುತ್ತೇವೆ. ಈ ಇಂಬು ಸೊಬಗೂ ಹೌದು ಮಿತಿಯೂ ಹೌದು. ಬಿಂದು ಮತ್ತು ಹರಹು, ಎತ್ತರದ ಬೆಟ್ಟ- ಆಳ ಕಣಿವೆ, ಬಿಸಿ-ತಂಪು, ಹೂವು-ಮುಳ್ಳು, ಕತ್ತಲು-ಬೆಳಕು, ರಾಗ-ತಾಳ ಮುಂತಾದವು ಜೊತೆಜೊತೆಗಿದ್ದರೆ ಚೆಲುವು. ಅಡುಗೆಯಲ್ಲಿ ಉಪ್ಪು, ಹುಳಿ, ಖಾರ, ಸಿಹಿಗಳು ಸಮರಸಗೊಂಡರೆ ಸುಗ್ರಾಸ ಭೋಜನ.
ಅನಂತ ಸಾಗರದ ತೀರದಲ್ಲಿ ನಿಂತು ದಿಗಂತವನ್ನು ವೀಕ್ಷಿಸಿದರೆ ಅದು ಸರಳ ರೇಖೆಯಂತೆ ಗೋಚರವಾಗುತ್ತದೆ. ಅದೇ ನೀಳವಾದ ಗೆರೆಯು ಒಂದನ್ನೊಂದು ದೂಡುತ್ತಾ , ಲಂಘಿಸುತ್ತಾ, ಬಳುಕುತ್ತಾ, ಒಯ್ಯಾರದಿಂದ ಸಾಗಿ ಬಂದು ತೀರವನ್ನು ಸವರುತ್ತದೆ. ನೀಳ ಗೆರೆಯಂತಿದ್ದ ಅಲೆಯು ಹೀಗೆ ಬಳುಬಳುಕುತ್ತಾ ಸಾಗಿ ಬರುವ ಚೆಲುವಿಗೆ ಸಾಟಿಯೇ ಇಲ್ಲ. ಕಾಣುವ ಕಂಗಳಿಗೆ, ಗ್ರಹಿಸುವ ಹೃದಯಕ್ಕೆ ಇದರಿಂದ ವಿಸ್ಮಯಾನಂದ.
ಪ್ರಕೃತಿಯಿಂದಲೇ ಪ್ರೇರಣೆಗೊಂಡು ಸೃಜಿಸಲ್ಪಟ್ಟ ವಿವಿಧ ರಾಗಗಳು ತಾಳಲಯದ ಜೊತೆಗೂಡಿ ಮಧುರಾನು ಭೂತಿ ಯನ್ನುಂಟು ಮಾಡುತ್ತವೆ. ಒಂದಕ್ಕೊಂದು ಸಂಬಂಧವಿರದ, ವಿರೋಧವೇ ಆಗಿರುವವುಗಳು ಪೂರಕವಾಗಿದ್ದುಕೊಂಡು ಆನಂದಾನುಭವವನ್ನೀಯುತ್ತದೆ. ಇದು ಪ್ರಕೃತಿ ಪ್ರೇರಿತವಾದ ಸಂಸ್ಕೃತಿಯ ಸೌಂದರ್ಯ. ವಿಶಾಲವಾದ ಗಗನಾಂಗಣದಲ್ಲಿ ಉರಿಯುವ ಸೂರ್ಯನೆಂಬ ನಕ್ಷತ್ರದ ಜ್ವಾಲೆಯಿಂದಾಗಿ ಗಗನಕ್ಕೂ, ಭೂಮಿಗೂ ಸಿಂಗಾರ.
ಸೂರ್ಯನು ಜಗತ್ತಿನ ಕಣ್ಣು. ಎಲ್ಲಾ ತೆರನಾದ ಸೌಂದರ್ಯದ ಅಭಿವ್ಯಕ್ತಿಗೂ ಸೂರ್ಯನೆ ಆಧಾರ. ಸಮಾಜದಲ್ಲಿ ಹಲವು ಬಗೆಯ ಜನರಿದ್ದಾರೆ. ಆಚಾರ-ವಿಚಾರ, ಭಾಷೆ, ಜೀವನ ದೃಷ್ಟಿ, ನಂಬಿಕೆಗಳೆಲ್ಲವೂ ವಿಭಿನ್ನ. ಪ್ರಕೃತಿಯಲ್ಲಿರುವ ವೈರುಧ್ಯಗಳನ್ನು ಜಗತ್ತು ಸಹಜವೆಂದು ಒಪ್ಪಿಕೊಳ್ಳುತ್ತದೆ. ಹಾಗಿರಬೇಕಾದದ್ದೇ ಸರಿ ಎನ್ನುತ್ತದೆ. ಆದರೆ ಸಮಾಜದಲ್ಲಿರುವ ವೈವಿಧ್ಯವನ್ನು, ವೈರುದ್ಧ್ಯಗಳನ್ನು ಸಹಜವೆಂದು ಸ್ವೀಕರಿಸುವುದಿಲ್ಲ. ಅನೇಕತೆಯಲ್ಲಿ ಏಕತೆ ಎನ್ನುವ ಆದರ್ಶವು ಹೃದಯದಿಂದ ಬರುವುದಿಲ್ಲ. ವಿವಿಧ ಸಂಸ್ಕೃತಿಗಳು ಒಟ್ಟು ಸೇರಿ, ಪರಸ್ಪರ ಸಹಕಾರ-ಸೌಹಾರ್ದದಿಂದ ಬಾಳಿದರೆ ಸಾಮಾಜಿಕ ಸ್ವಾಸ್ಥ್ಯವು ಕೆಡುವುದಿಲ್ಲ. ಬದಲಾಗಿ ಜನಜೀವನದ ಒಲವು-ಚೆಲುವು ಇಮ್ಮಡಿಯಾಗುತ್ತದೆ. ಜಾತಿ- ಮತ- ಧರ್ಮ- ಭಾಷೆ ಮುಂತಾದವುಗಳನ್ನು ಮೀರಿ ಪ್ರೀತಿ-ವಿಶ್ವಾಸದಿಂದ ಒಡನಾಡಿದರೆ ಜೀವನವು ಸ್ವಾರಸ್ಯಪೂರ್ಣ. ವಿರೋಧಿಸುವ, ನಾಶಕ್ಕೆಳೆಸುವ ಪ್ರವೃತ್ತಿಯಿಂದಲೇ ಅಶಾಂತಿ, ಅಸಹನೆ.
ಪ್ರತಿಯೊಬ್ಬ ವ್ಯಕ್ತಿಯಲ್ಲೂ ವಿವಿಧ ಬಗೆಯ ಗುಣ-ಸ್ವಭಾವಗಳಿವೆ. ಪ್ರೀತಿ-ದ್ವೇಷ, ಸ್ನೇಹ-ಈರ್ಷ್ಯೆ, ಕರುಣೆ-ತಿರಸ್ಕಾರ ಹೀಗೆ ಹಲವು ಬಗೆಯ ಭಾವಗಳು, ಗುಣಗಳು ಸಾಮರಸ್ಯಗೊಂಡು ವ್ಯಕ್ತಿಯನ್ನು ಜೀವನ್ಮುಖಿಯಾಗಿಸುತ್ತವೆ. ಇದು ಜೀವನದ ಸೌಂದರ್ಯ. ಪ್ರಕೃತಿಯು ಹೆಜ್ಜೆಹೆಜ್ಜೆಗೂ ಬದುಕಿನ ಪಾಠವನ್ನು ಬೋಧಿಸುತ್ತದೆ, ತೆರೆದ ಪುಸ್ತಕದಂತೆ ಸಹಜ ಬದುಕನ್ನು ಬದುಕಿ ತೋರಿಸುತ್ತದೆ. ನಿಸರ್ಗದಲ್ಲಿ ಸಹಜವಾದುದು ಯಾವುದೂ ಅತಿಯಾಗಲಾರದು. ಎಲ್ಲದಕ್ಕೂ ಒಂದು ಮಿತಿ ಇದೆ, ಸೊಗಸಿದೆ, ದ್ವಂದ್ವವೂ ಪೂರಕವಾಗಿದೆ. ಈ ಸಂಯೋಜನೆ ಮತ್ತು ಸಮನ್ವಯದ ನಿಯಮಕ್ಕೆ ಎಲ್ಲವೂ ಒಳಪಡುತ್ತವೆ.
ಆದರೆ ಮನುಜ ಮಾತ್ರ ನಿಸರ್ಗವನ್ನು ಅತಿಕ್ರಮಿಸುತ್ತಾನೆ. ಸ್ವಕೇಂದ್ರಿತವಾಗಿ ಎಲ್ಲವನ್ನೂ ಬದಲಾಯಿಸುತ್ತಾನೆ. ಹಾಗಾಗಿಯೇ ಸೃಷ್ಟಿಯ ಸಹಜ ಸೌಂದರ್ಯವನ್ನು ಕಂಡು ಆನಂದಿಸಲಾಗದಷ್ಟು ಆತನು ಕೃತಕವಾಗಿದ್ದಾನೆ. ನಿಸರ್ಗವನ್ನು ಹೃದಯದಿಂದ ಕಾಣುವುದು ಸಾಧ್ಯವಾದರೆ ದ್ವಂದ್ವಗಳು, ವೈಲಕ್ಷಣ, ವಿಭಿನ್ನತೆಗಳೆಲ್ಲವೂ ಬರಿ ಬೆರಗು. ಭಾವದುಗಮಕ್ಕೆ ಆಸ್ಪದವೇ ಇರದಂಥ ದಿವ್ಯಾನುಭವ.
(ಲೇಖಕರು ಉಪನ್ಯಾಸಕರು, ಕವಯತ್ರಿ) (ಪ್ರತಿಕ್ರಿಯಿಸಿ: vvsudina@gmail.com, kaviadoor@gmail.com)