ಪಂಚ್ ಕಾ JOY| ನಾನು ಹೋದಾಗಲೂ ಮಾವನ ಮನೆಗೆ ರಾತ್ರಿಯಾಗಿತ್ತು

Dundiraj 24 Jan 20
Published on
ಜನವರಿ 26 ಜನತಂತ್ರ ದಿನ ಎನ್ನುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಅದು ಕನ್ನಡದ ಜನಪ್ರಿಯ ಕವಿಗಳಲ್ಲಿ ಒಬ್ಬರಾದ ಕೆ.ಎಸ್. ನರಸಿಂಹಸ್ವಾಮಿಯವರ ಜನ್ಮದಿನವೂ ಹೌದು. ಮಲ್ಲಿಗೆಯ ಕವಿಯೆಂದೇ ಕನ್ನಡಿಗರ ಮನದಲ್ಲಿ ಮನೆಮಾಡಿರುವ ಕೆ.ಎಸ್.ನ 1915ರ ಜನವರಿ 26ರಂದು ಮಂಡ್ಯ ಜಿಲ್ಲೆಯ ಕಿಕ್ಕೇರಿಯಲ್ಲಿ ಜನಿಸಿದರು. ಕವಿ 27ರ ಹರಯದಲ್ಲಿದ್ದಾಗ ಪ್ರಕಟವಾದ ಅವರ ಮೊದಲ ಕವನ ಸಂಕಲನ ‘ಮೈಸೂರ ಮಲ್ಲಿಗೆ’ಯ ಕವನಗಳ ಕಂಪು ನಾಡಿನಾದ್ಯಂತ ಕಾವ್ಯ ಪ್ರಿಯರಿಗೆ ಕಿಕ್ಕೇರಿಸಿತು. ತಮ್ಮ 21ನೆ ವಯಸ್ಸಿನಲ್ಲಿ ವೆಂಕಮ್ಮನವರ ಕೈ ಹಿಡಿದ ಈ ಕವಿ ಮೈಸೂರ ಮಲ್ಲಿಗೆಯ ಕವಿತೆಗಳನ್ನು ರಚಿಸುವಾಗ ಗೃಹಸ್ಥರಾಗಿದ್ದರು. ಹೀಗಾಗಿ ‘ಗೆ’ ಅನ್ನುವ ಕವನದಲ್ಲಿ ಅವರು ‘ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ/ನಿನ್ನೊಳಿದೆ ನನ್ನ ಮನಸು’ ಎಂದು ಹೇಳಿರುವುದು ತಮ್ಮ ಮಡದಿಗೆ ಅಂದುಕೊಳ್ಳಬಹುದು. ವಿಮರ್ಶಕರೂ ಸಹಾ ಮೈಸೂರ ಮಲ್ಲಿಗೆಯ ಕವಿತೆಗಳನ್ನು ಪ್ರೇಮ ಕವನಗಳು ಅನ್ನುವುದಕ್ಕಿಂತ ದಾಂಪತ್ಯ ಕವನಗಳು ಅನ್ನುವುದೇ ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದೇನೇ ಇರಲಿ. ಮೈಸೂರ ಮಲ್ಲಿಗೆಯ ಗೀತೆಗಳು ಮತ್ತು ಕೆ.ಎಸ್.ನ ಅವರ ಅನೇಕ ಕವಿತೆಗಳು ಈಗಲೂ, ಕವಿ ಕಾಲವಾಗಿ 16 ವರ್ಷ ಕಳೆದ ಬಳಿಕವೂ ಕಾವ್ಯ ಪ್ರಿಯರ ನಾಲಿಗೆಯ ಮೇಲೆ ನಲಿದಾಡುತ್ತಿವೆ.

ಜನಪ್ರಿಯತೆಯನ್ನು ವಿಮರ್ಶಕರು ಕೊಂಚ ಅನುಮಾನದಿಂದಲೇ ನೋಡುತ್ತಾರೆ. ನವ್ಯ ಸಾಹಿತ್ಯದ ಉಬ್ಬರದ ದಿನಗಳಲ್ಲಿ ಜನಪ್ರಿಯ ಸಾಹಿತ್ಯ ಶ್ರೇಷ್ಠವಾಗಲು ಸಾಧ್ಯವಿಲ್ಲವೆಂಬ ಅಭಿಪ್ರಾಯ ವಿಮರ್ಶಕರ ವಲಯದಲ್ಲಿತ್ತು. ಇದರ ಪರಿಣಾಮವಾಗಿ ಕೆ.ಎಸ್.ನ ರಂಥ ಶ್ರೇಷ್ಠ ಕವಿಗಳೂ ಪುಷ್ಪ ಕವಿ ಎಂಬ ಕುಹಕವನ್ನು ಎದುರಿಸಬೇಕಾಯಿತು. ನರಸಿಂಹಸ್ವಾಮಿಯವರ ಅನುಭವ ತುಂಬಾ ತೆಳು ಅನ್ನುವ ಅಭಿಪ್ರಾಯವನ್ನು ಕವಿ ಅಡಿಗರು ವ್ಯಕ್ತಪಡಿಸಿದ್ದರು. ಆದರೆ ಕೆ.ಎಸ್.ನ ಇಂಥ ಟೀಕೆಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಲಿಲ್ಲ.

‘ಇವನ ಅನುಭವ ತೆಳುವು’ ಎಂಬ ಟೀಕೆಗೆ ನಕ್ಕೆ

ಎಂಟು ಮಕ್ಕಳು ನನಗೆ. ಉತ್ತರಿಸಿದೆ:

‘ಅಂದವರ ಬಾಯಿಗಿದೊ ನಾನು ಬೇವಿನ ಚಕ್ಕೆ’

ನನ್ನ ದನಿಯನೂ ಕೂಡಾ ಎತ್ತರಿಸಿದೆ ಎಂದು ಕವನದಲ್ಲೇ ಪರೋಕ್ಷವಾಗಿ ಅಡಿಗರಿಗೆ ಉತ್ತರ ಕೊಟ್ಟರು. ನವ್ಯರು ಭಾವಗೀತೆಗಳನ್ನು ಬರೆಯುವವರನ್ನು ದಾಸ ಪಂಥದವರು, ಕ್ಯಾಸೆಟ್ ಕವಿಗಳು ಎಂದೆಲ್ಲ ಗೇಲಿ ಮಾಡಿದ್ದರು. ಕೆಲವು ನವ್ಯ ವಿಮರ್ಶಕರ ಪ್ರಕಾರ ಡಿವಿಜಿಯವರ ಮಂಕುತಿಮ್ಮನ ಕಗ್ಗ ಮತ್ತು ದಿನಕರ ದೇಸಾಯಿಯವರ ಚುಟುಕುಗಳು ಕಾವ್ಯವೇ ಅಲ್ಲ. ‘ಹನಿಗವನಗಳಲ್ಲಿ ಆಳವಿರುವುದಿಲ್ಲ; ಅವು ತುಂಬಾ ತೆಳು’ ಅಂದವರಿಗೆ ನಾನು ಹೇಳಿದ್ದು:

ಹನಿಗವನಗಳು

ಕಾವ್ಯವಲ್ಲ ತೆಳು

ಎರಡನೆ ಓದಿಗೆ ಸಪ್ಪೆ

ಎಂದನು ಗೆಳೆಯ

ಎರಡನೆ ಸಲವೂ

ಅವನು ತಿಂದದ್ದು ಸಿಪ್ಪೆ!

‘ನಿಮ್ಮ ಮೇಲೆ ತುಂಬಾ ಪ್ರಭಾವ ಬೀರಿದ ಕವಿಗಳು ಯಾರು?’ ಇದು ಕವಿಗಳನ್ನು ಸಂದರ್ಶಿಸುವಾಗ ಸಂದರ್ಶಕರು ಸಾಮಾನ್ಯವಾಗಿ ಕೇಳುವ ಒಂದು ಪ್ರಶ್ನೆ. ನನಗೆ ಈ ಪ್ರಶ್ನೆ ಕೇಳಿದವರಿಗೆ ಕುವೆಂಪು, ಬೇಂದ್ರೆ, ಕೆ.ಎಸ್.ನ., ಅಡಿಗ, ನಿಸಾರ್... ಎಂದು ದೊಡ್ಡ ಪಟ್ಟಿಯನ್ನೇ ಕೊಡುತ್ತೇನೆ. ಎಲ್ಲ ಒಳ್ಳೆಯ ಕವಿಗಳೂ ನನ್ನ ಮೇಲೆ ಪ್ರಭಾವ ಬೀರಿದ್ದಾರೆ. ಕೆಟ್ಟ ಕವಿಗಳೂ ನನಗೆ ಗುರು ಸಮಾನರು. ಏಕೆಂದರೆ ಕವಿತೆ ಹೇಗೆ ಬರೆಯಬಾರದು ಎಂದು ಕಲಿಸುವವರು ಅವರೇ! ಕವಿ ಕೆ.ಎಸ್.ನ ಜನರ ಆಡು ಮಾತಿನಲ್ಲಿ, ದಿನ ನಿತ್ಯದ ಬದುಕಿನಲ್ಲಿ ಕಾಣುವ ವಸ್ತುಗಳನ್ನು ಬಳಸಿ ಕವಿತೆಗಳನ್ನು ಕಟ್ಟಿದ ರೀತಿ ನನ್ನ ಮೇಲೆ ತುಂಬಾ ಪ್ರಭಾವ ಬೀರಿದೆ. ಈ ಕಾರಣದಿಂದ ಅವರ ಅನೇಕ ಪ್ರಸಿದ್ಧ ಕವನಗಳ ಧಾಟಿಯನ್ನು ಅನುಸರಿಸಿ ಇಂದಿನ ಕಾಲಕ್ಕೆ ಹೊಂದುವಂಥ ಅಣಕವಾಡುಗಳನ್ನು ನಾನು ರಚಿಸಿದ್ದೇನೆ. ಕವಿಯ ಜನ್ಮ ದಿನದಂದು ಅವುಗಳಲ್ಲಿ ಕೆಲವನ್ನು ನಿಮ್ಮೊಂದಿಗೆ ಹಂಚಿಕೊಳ್ಳುವೆ.

‘ರಾಯರು ಬಂದರು ಮಾವನ ಮನೆಗೆ ರಾತ್ರಿಯಾಗಿತ್ತು/ಹುಣ್ಣಿಮೆ ಹರಸಿದ ಬಾನಿನ ನಡುವೆ ಚಂದಿರ ಬಂದಿತ್ತು’ ಎಂಬ ಕೆ.ಎಸ್.ನ ರ ಗೀತೆಯನ್ನು ಕೇಳದವರಾರು? ಮಾವನ ಮನೆಗೆ ಹೋದಾಗ ಅಳಿಯ ದೇವರಿಗೆ ಎಷ್ಟೊಂದು ಭವ್ಯವಾದ ಸ್ವಾಗತ ಸಿಗುತ್ತಿತ್ತು ಅನ್ನುವುದನ್ನು ಕವಿಗಳು ಆ ಕವನದಲ್ಲಿ ವರ್ಣಿಸಿದ್ದಾರೆ. ಮಲ್ಲಿಗೆ ಹೂಗಳ ಪರಿಮಳ, ಕಾಲು ತೊಳೆಯಲು ಬಿಸಿನೀರಿನ ತಂಬಿಗೆ, ಬೆಳ್ಳಿಯ ಬಟ್ಟಲಲ್ಲಿ ಗಸಗಸೆ ಪಾಯಸ ಇತ್ಯಾದಿ ಎಲ್ಲವೂ ಮಾವನ ಮನೆಯಲ್ಲಿ ಉಂಟು. ಆದರೆ ರಾಯರು ಯಾರಿಗಾಗಿ ಬಂದಿದ್ದರೋ ಆ ಮಡದಿ ಪದುಮಳೇ ‘ಒಳಗಿಲ್ಲದೆ’ ರಾಯರಿಗೆ ನಿದ್ದೆಯೇ ಬರುವುದಿಲ್ಲ. ಮರುದಿನ ಮುಂಜಾನೆ ರಾಯರು ಸಿಟ್ಟಲ್ಲಿ ‘ಸರಿ, ಹೊರಡುವೆ’ ಎಂದಾಗ ಒಳಮನೆಯಲ್ಲಿ ನಾದಿನಿ ‘ನೀರಾಯಿತು’ ಅನ್ನುತ್ತಾಳೆ. ಹೂ ಮುಡಿಯುತ್ತ ಪದುಮಳು ರಾಯರ ಕೋಣೆಗೆ ಬರುವುದರೊಂದಿಗೆ ಕವಿತೆ ಸುಖಾಂತ್ಯ ಕಾಣುತ್ತದೆ. ಕವನ ತುಂಬಾ ಸೊಗಸಾಗಿದೆ, ನಿಜ. ಆದರೆ ಇದು ಕೆ.ಎಸ್.ನ ಅವರು ಮಾವನ ಮನೆಗೆ ಹೋದಾಗ ಅಂದರೆ ಎಂಟು ದಶಕಗಳ ಹಿಂದಿನ ಕತೆ. ಈಗ ಪರಿಸ್ಥಿತಿ ಬದಲಾಗಿದೆ. ಈಗಿನ ಕಾಲದಲ್ಲಿ ಅಳಿಯಂದಿರೊಬ್ಬರು ಮಾವನ ಮನೆಗೆ ಹೋದಾಗ ಏನಾಯಿತು ಎಂಬುದನ್ನು ನಾನು ಹೀಗೆ ವರ್ಣಿಸಿದ್ದೇನೆ.

ನಾನು ಹೋದಾಗಲೂ ಮಾವನ ಮನೆಗೆ ರಾತ್ರಿಯಾಗಿತ್ತು

ಎಂದಿನ ಹಾಗೆ ಅಂದೂ ಕೂಡಾ ಕರೆಂಟು ಹೋಗಿತ್ತು

ಹೆಣಭಾರದ ಸೂಟ್​ಕೇಸನು ಹೊತ್ತು ಮೆಟ್ಟಿಲು ಹತ್ತಿದೆನು

ಮೂರನೆ ಮಹಡಿ ಮಾವನ ಫ್ಲಾಟಿನ ಗುಂಡಿಯ ಒತ್ತಿದೆನು

ಎಷ್ಟು ಕಾದರೂ ತೆರೆಯದು ಬಾಗಿಲು ಕೆಂಪಾಯಿತು ಕಣ್ಣು

ಕಾಯಿಸಬಹುದೆ ಬಾಗಿಲ ಹೊರಗೆ ಅಳಿಯ ದೇವರನ್ನು?

ನೆನಪಾಯಿತು ಛೆ ಕರೆಂಟು ಹೋಗಿದೆ ಬೆಲ್ಲಾಗುವುದಿಲ್ಲ

ಬಾಗಿಲು ಬಡಿದೆನು ಗೆಜ್ಜೆದನಿಗೆ ಕಿವಿಯಾಗಿಸಿ ಮೈಯೆಲ್ಲ

‘ಯಾರು’ ಎಂದಿತು ಅತ್ತ ಕಡೆಯಿಂದ ಕರ್ಕಶ ದನಿಯೊಂದು

ದನಿಯ ಮೂಲಕವೆ ಗೊತ್ತಾಯಿತು ಅದು ಅತ್ತೆಯದೇ ಎಂದು

ಎಂಜಲು ನುಂಗಿ ರಾಜ ಠೀವಿಯಲಿ ನಾನು ಎಂದೆನು ನಾನು

ಬಾಗಿಲು ತೆರೆದವ ಎದೆಗೆ ಹಿಡಿದ ಜೋಡುನಳಿಗೆ ಗನ್ನು!

ಆದದ್ದಿಷ್ಟೆ ಕತ್ತಲಿನಲ್ಲಿ ದಾರಿ ತಪ್ಪಿದ್ದೆ

ಪಕ್ಕದ ಸಬ್ ಇನ್ಸ್​ಪೆಕ್ಟರ ಫ್ಲಾಟಿನ ಬಾಗಿಲು ತಟ್ಟಿದ್ದೆ

ವಿಷಯ ತಿಳಿದಾಗ ಅವರು ನಕ್ಕರು- ‘ಪರವಾಗಿಲ್ಲ ಬಿಡಿ

ಇದೂ ಮಾವನ ಮನೆಯೇ’ ಎಂದರು ಮೀಸೆ ಹುರಿಮಾಡಿ!

ಆಡು ಭಾಷೆಯಲ್ಲಿ ಮಾವನ ಮನೆಗೆ ಪೊಲೀಸ್ ಠಾಣೆ ಎಂಬ ಅರ್ಥವೂ ಇದೆ.

ನಮ್ಮ ಕೆಲವು ಕವಿಗಳಿಗೆ ಯಾರಾದರೂ ತಮ್ಮನ್ನು ಜನಪ್ರಿಯ ಕವಿ ಅಂತ ಕರೆದರೆ ಇಷ್ಟವಾಗುವುದಿಲ್ಲ. ಜನಪ್ರೀತಿಯ ಕವಿ, ಜನಪರ ಕವಿ ಅನ್ನಿ ಅನ್ನುತ್ತಾರೆ. ಅವರಿಗೆ ಜನಪ್ರಿಯ ಅಂದರೆ ಎಲ್ಲಿ ಅಗ್ಗವಾಗಿ ಬಿಡುತ್ತೇವೆಯೋ ಎಂಬ ಭಯ. ಕವಿ ಕೆ.ಎಸ್.ನ. ಅವರಿಗೆ ತಮ್ಮ ಜನಪ್ರಿಯತೆಯ ಬಗ್ಗೆ ಮುಜುಗರವಿರಲಿಲ್ಲ. ‘ಬಳೆಪೇಟೆಯಲ್ಲಿ ನನ್ನನ್ನು ಕಂಡು ಕಿರುನಗೆ ಬೀರುವ ನವ ದಂಪತಿಗಳಿದ್ದಾರೆ. ಸಿಟಿ ಬಸ್ಸಿನಲ್ಲಿ ನನ್ನನ್ನು ಗುರುತಿಸಿ ಸ್ಥಳ ಮಾಡಿಕೊಡುವ ತರುಣ ತರುಣಿಯರಿದ್ದಾರೆ’ ಎಂದು ಅವರು ತಮ್ಮ ಸಮಗ್ರ ಕಾವ್ಯಕ್ಕೆ ಬರೆದ ಕವಿಯ ಮಾತುಗಳಲ್ಲಿ ಸಂತೋಷದಿಂದ ಹೇಳಿಕೊಂಡಿದ್ದಾರೆ. ತಾವು ಜನಪ್ರಿಯ ಕವಿ ಎಂಬ ಕಾರಣಕ್ಕೆ ಟೀಕೆ ಮಾಡುವ ವಿಮರ್ಶಕರನ್ನು ಕೆ.ಎಸ್.ನ. ಅವರು ಇಕ್ಕಳ ಎಂಬ ಕವನದಲ್ಲಿ

ಚಳಿಗಾಲ ಬಂದಾಗ ‘ಎಷ್ಟು ಚಳಿ?’ ಎಂದರು

ಬಂತಲ್ಲ ಬೇಸಿಗೆ ‘ಕೆಟ್ಟಬಿಸಿಲೆಂದರು;

ಮಳೆ ಬಿತ್ತೊ, ‘ಬಿಡದಲ್ಲ ಶನಿ!’ ಎಂಬ ಟೀಕೆ

ಇವರು ಮೆಚ್ಚುವ ವಸ್ತು ಇಲ್ಲಿಲ್ಲ, ಜೋಕೆ!

ಎಂದು ವಿಡಂಬನೆಗೆ ಈಡು ಮಾಡಿದ್ದಾರೆ. ಏನು ಮಾಡಿದರೂ ಟೀಕಿಸುವವರು ಸಾಹಿತ್ಯ ಲೋಕದಲ್ಲಿ ಮಾತ್ರವಲ್ಲ ನಮ್ಮ ಮನೆಯೊಳಗೂ ಇರುತ್ತಾರೆ. ಅವರ ಬಗ್ಗೆ ನಾನು ರಚಿಸಿದ ಅಣಕವಾಡು ಇಗೊಳ್ಳಿ ಇಲ್ಲಿದೆ. ಇದು ಎಲ್ಲ ಗಂಡಂದಿರ

ಹಾ(ಪಾ)ಡು ಅನ್ನಬಹುದು.

ತರಕಾರಿ ತಂದರೆ ಸರಿಯಿಲ್ಲ ಅನುವಳು

ಬರಿಗೈಲಿ ಬಂದರೆ ತರಲಿಲ್ಲ ಎನುವಳು

ಹಣ್ಣು ಒಯ್ದರೆ ರೇಟು ಹೆಚ್ಚೆಂಬ ಟೀಕೆ

ಇವಳು ಮೆಚ್ಚುವ ಗಂಡ ಹುಟ್ಟಿಲ್ಲ ಜೋಕೆ!

ಬೇಗ ಬಂದರೆ ಮನೆಗೆ ಕೇಳುವಳು ಏಕೆ?

ತಡವಾಗಿ ಹೋದರೆ ಸಿಬಿಐ ತನಿಖೆ

ಕುಡಿಯದಿದ್ದರೂ ಮೂಸಿ ಹೇಳುವಳು ನಾತ

ಇವಳು ಮೆಚ್ಚುವ ನಾಥ, ಎಲ್ಲಿರುವನಾತ?

ಬರೆಯುತ್ತ ಕುಳಿತರೆ ಅನ್ನುವಳು ಮಲಗಿರಿ

ಮಲಗಿದರೂ ದೂರು ಗೊರಕೆ ಹೊಡೆಯುವಿರಿ

ಬೇಗ ಎದ್ದರೆ ಅದಕೂ ಇವಳ ತಕರಾರು

ಇವಳು ಮೆಚ್ಚುವ ಗಂಡ ಯಾರು? ಅವನಾರು?

ದೂರವಿದ್ದರೆ ‘ನಾನು ಬೇಡವೆ?’ ಅನುವಳು

ಬಳಿ ಸಾರಿ ತಬ್ಬಿದರೆ ದೂರ ತಳ್ಳುವಳು

ಮನದೊಳಗೆ ಏನುಂಟೊ ದೇವರೇ ಬಲ್ಲ

ಇವಳು ಮೆಚ್ಚುವ ನಲ್ಲ ನಾನಲ್ಲ ಅಲ್ಲ!

ನಾನು ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದಾಗ ಎರಡು ವರ್ಷ ನನ್ನ ಮಡದಿ, ಮಕ್ಕಳು ಬೆಂಗಳೂರಿನಲ್ಲಿದ್ದರು. ನಾನೊಬ್ಬನೇ ಮಂಗಳೂರಿನಲ್ಲಿ ವಾಸವಾಗಿದ್ದೆ. ಸ್ಮಾರ್ಟ್ ಫೋನುಗಳು ಇಲ್ಲದ ಆ ಕಾಲದಲ್ಲಿ ದೂರದ ಊರಿನಲ್ಲಿರುವ ದಂಪತಿ ಸ್ಥಿರ ದೂರವಾಣಿಯ ಮೂಲಕವೇ ಸರಸ ಸಲ್ಲಾಪ ನಡೆಸಬೇಕಾಗಿತ್ತು. ಆಗ ನನಗೆ ಕೆ.ಎಸ್.ನ. ಅವರ ಸುಪ್ರಸಿದ್ಧವಾದ

ಒಂದಿರುಳು ಕನಸಿನಲಿ ನನ್ನವಳ ಕೇಳಿದೆನು

ಚೆಂದ ನಿನಗಾವುದೆಂದು-

ನಮ್ಮೂರು ಹೊನ್ನೂರೊ, ನಿಮ್ಮೂರು ನವಿಲೂರೊ

ಚೆಂದ ನಿನಗಾವುದೆಂದು

ಎಂಬ ಗೀತೆಯ ನೆನಪಾಗಿ ಅದೇ ಧಾಟಿಯಲ್ಲಿ ಹೀಗೆ ಕೇಳಿದ್ದೆ.

ಒಂದಿರುಳು ಫೋನಿನಲಿ ನನ್ನವಳ ಕೇಳಿದೆನು

ಚೆಂದ ನಿನಗಾವುದೆಂದು

ನಮ್ಮೂರು ಮಂಗ್ಳೂರೊ ನಿಮ್ಮೂರು ಬೆಂಗ್ಳೂರೊ

ಚೆಂದ ನಿನಗಾವುದೆಂದು

ನನ್ನ ಪ್ರಶ್ನೆಗೆ ನನ್ನಾಕೆಯ ಉತ್ತರವೂ ಅದೇ ಧಾಟಿಯಲ್ಲಿತ್ತು:

ಮಂಗ್ಳೂರು ಚೆಂದವೊ ಬೆಂಗ್ಳೂರು ಚೆಂದವೊ

ಎಂದೆನ್ನ ಕೇಳಲೇಕೆ?

ಬೆಂಗ್ಳೂರಿನಲ್ಲೀಗ ವಿಪರೀತ ಚಳಿ ಉಂಟು

ವಿಸ್ತರಿಸಿ ಹೇಳಬೇಕೆ?

ಮಂಗ್ಳೂರು ಚೆಂದವೊ ಬೆಂಗ್ಳೂರು ಚೆಂದವೊ

ಫೋನಲ್ಲಿ ಚರ್ಚೆ ಏಕೆ?

ರಜೆ ಹಾಕಿ ಬಂದು ಬಿಡಿ ಎಂದಳಾಕೆ!

ನರಸಿಂಹಸ್ವಾಮಿಯವರ ಕವನಗಳು ನನಗೆ ಅದೆಷ್ಟು ಪ್ರಿಯವೆಂದರೆ ಅವರ ಮೈಸೂರ ಮಲ್ಲಿಗೆಯ ಇನ್ನಷ್ಟು ಕವನಗಳಿಗೆ ಅಣಕವಾಡುಗಳನ್ನು ಬರೆದು ‘ಡುಂಡಿ ಮಲ್ಲಿಗೆ’ ಎಂಬ ಸಂಕಲನವನ್ನು ತರುವ ಆಸೆ ಇದೆ.

ಮುಗಿಸುವ ಮುನ್ನ:

ಭಾಷೆ ಬೇರೆ, ವೇಷ ಬೇರೆ

ಬೇರೆಯಲ್ಲ ದೇಶ

ಎಲ್ಲರನ್ನೂ ಪ್ರೀತಿಸೋಣ

ಬೇಡ ರೋಷ ದ್ವೇಷ

ಒಂದೆ ಒಂದೆ ಅನ್ನಲಿಕ್ಕೆ

ಏಕೆ ಮೀನ ಮೇಷ?

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net