

ಒಂದು ಕಾಲಕ್ಕೆ ಮೊಬೈಲ್ ಎಂದರೆ, ಯಾರನ್ನಾದರೂ ತುರ್ತಾಗಿ ಸಂರ್ಪಸಬೇಕೆಂದರೆ ಬಳಸಲಾಗುತ್ತಿತ್ತು. ಆದರೆ, ಈಗ ಮೊಬೈಲ್ ಪರಿಕಲ್ಪನೆಯೇ ಬದಲಾಗಿದೆ. ಈಗ ಅದು ಬರೀ ಸಂಪರ್ಕ ಸಾಧನವಾಗಿ ಉಳಿದಿಲ್ಲ. ಅದನ್ನು ಮೀರಿ ಬೆಳೆದಿದೆ. ಅದರಲ್ಲೂ ಇಂಟರ್ನೆಟ್ ಕ್ರಾಂತಿ ಹೆಚ್ಚಾದಂತೆ, ಮೊಬೈಲ್ ಬರೀ ಮಾತನಾಡುವುದಕ್ಕೆ ಮಾತ್ರ ಸೀಮಿತವಲ್ಲ, ಅದರ ವ್ಯಾಪ್ತಿ ಇನ್ನಷ್ಟು ವಿಸ್ತಾರವಾಗಿದೆ ಎಂದು ಅರಿವಿಗೆ ಬಂದಿದೆ. ಸೋಷಿಯಲ್ ಮೀಡಿಯಾ ದೊಡ್ಡದಾಗುತ್ತಿದ್ದಂತೆಯೇ ಮಾಹಿತಿಗೆ ವಿಪರೀತ ಬೇಡಿಕೆ ಬಂದಿದೆ. ಮಾಹಿತಿ ಹೆಚ್ಚಾಗುತ್ತಿದ್ದಂತೆಯೇ ನಾವು ಹೆಚ್ಚುಹೆಚ್ಚು ಅಶಾಂತರಾಗುತ್ತಿದ್ದೇವೆ. ಲೈಕ್ ಮತ್ತು ಕಾಮೆಂಟ್ಗಳಿಗೆ ಹಾತೊರೆಯುತ್ತಿದ್ದೇವೆ. ಹಾಗಂತ ಸೋಷಿಯಲ್ ಮೀಡಿಯಾ ಕೆಟ್ಟದ್ದು ಎಂದು ನಾನು ಹೇಳುತ್ತಿಲ್ಲ. ಕೆಲವರು ಅದನ್ನು ಅದ್ಭುತವಾಗಿ ಬಳಸಿಕೊಳ್ಳುತ್ತಾರೆ. ಬಹಳ ಸೃಜನಶೀಲವಾಗಿ ಬಳಸಿಕೊಳ್ಳುತ್ತಾರೆ. ಆದರೆ, ಎಲ್ಲರಿಗೂ ಹಾಗಾಗುವುದಿಲ್ಲ.
ಇಷ್ಟಕ್ಕೂ ಈ ಲೈಕ್ ಮತ್ತು ಕಾಮೆಂಟ್ಗಳೆಂದರೇನು? ನಮ್ಮನ್ನು ನಾವು ಪ್ರೀತಿಸಿಕೊಳ್ಳುವುದು ಅಷ್ಟೇ. ಲೈಕ್ ಅಥವಾ ಕಾಮೆಂಟ್ ಎಂದರೆ, ಯಾರೋ ನಮ್ಮನ್ನು ಗಮನಿಸುತ್ತಿದ್ದಾರೆ ಎಂದರ್ಥ. ಅದರ ಮೂಲಕ ನಮ್ಮನ್ನು ನಾವೇ ನೋಡಿಕೊಳ್ಳುವ ಪ್ರಯತ್ನ ನಿರಂತರವಾಗಿ ಮಾಡುತ್ತಿರುತ್ತೇವೆ. ಯಾರು ನಮ್ಮನ್ನು ಮೆಚ್ಚಿಕೊಂಡಿದ್ದಾರೆ, ಯಾರು ನಮ್ಮ ಬಗ್ಗೆ ಏನು ಮಾತನಾಡಿದ್ದಾರೆ ಎಂದು ಸದಾ ತಲೆ ಕೆಡಿಸಿಕೊಳ್ಳುತ್ತಿರುತ್ತೇವೆ. ಇಲ್ಲಿ ಸಂಖ್ಯೆ ಮುಖ್ಯವಾಗುತ್ತದೆ. ಆ ಸಂಖ್ಯೆಯ ಮೂಲಕ ನಾವೆಷ್ಟು ಜನಪ್ರಿಯ ಎಂಬುದು ಗೊತ್ತಾಗುತ್ತ ಹೋಗುತ್ತದೆ. ಸರಳವಾಗಿ ಹೇಳಬೇಕು ಎಂದರೆ, ನಾವೆಲ್ಲರೂ ಮಾಗ್ಲೋಮೇನಿಯಾಕ್ಗಳಾಗುತ್ತಿದ್ದೇವೆ.
ಒಬ್ಬ ರಾಜ ತಾನು ಹೆಚ್ಚು ಶಕ್ತಿಶಾಲಿಯಾಗಬೇಕು ಎಂದು ಬಯಸುತ್ತಾನೆ. ಹೆಚ್ಚು ಜನ ತನ್ನನ್ನು ಪೂಜಿಸಿದಂತೆ, ತನ್ನ ಪವರ್ ಹೆಚ್ಚಾಗುತ್ತದೆ ಎಂದು ಕಾಯುತ್ತಾನೆ. ತಾನು ಬರೀ ರಾಜನಾಗಷ್ಟೇ ಇರಬಾರದು, ಚಕ್ರವರ್ತಿಯಾಗಬೇಕು, ಸಾಮ್ರಾಟನಾಗಬೇಕು ಎಂದು ಬಯಸುತ್ತಾನೆ. ಅದೇ ಕಾರಣಕ್ಕೆ ಸಮಯ ಸಿಕ್ಕಾಗಲೆಲ್ಲ ಅವನು ತನ್ನ ಪಕ್ಕದ ಗಡಿಗಳನ್ನು ವಿಸ್ತರಿಸುತ್ತಿರುತ್ತಾನೆ, ತನ್ನ ಸಾಮ್ರಾಜ್ಯ ಇನ್ನಷ್ಟು ದೊಡ್ಡದಾಗಬೇಕು ಎಂದು ಬಯಸುತ್ತಿರುತ್ತಾನೆ. ನಾವು ಸಹ ಅಷ್ಟೇ. ಒಂದಲ್ಲ ಒಂದು ರೀತಿಯಲ್ಲಿ ನಮ್ಮನ್ನು ನಾವು ವಿಸ್ತಿರಿಸಿಕೊಳ್ಳುತ್ತ ಹೋಗುತ್ತೇವೆ. ಇನ್ನಷ್ಟು ಜನಪ್ರಿಯವಾಗಬೇಕು ಎಂದು ಹಾತೊರೆಯುತ್ತಿರುತ್ತೇವೆ.
ದಾಸ್ತೋವಸ್ಕಿ ಬರೆದಿರುವ ‘ಕ್ರೖೆಮ್ ಆಂಡ್ ಪನಿಶ್ವೆುಂಟ್’ ಕಾದಂಬರಿಯನ್ನು ನೀವು ಓದಿರಬಹುದು. ಅಲ್ಲಿ ನಾಯಕ ಕಾರಣಾಂತರಗಳಿಂದ ಒಬ್ಬರನ್ನು ಸಾಯಿಸಿಬಿಟ್ಟಿರುತ್ತಾನೆ. ಅದು ಯಾರಿಗೂ ಗೊತ್ತಿರುವುದಿಲ್ಲ. ಹಾಗಂತ ಅವನು ನೆಮ್ಮದಿಯಿಂದ ಇರುವುದಕ್ಕೂ ಸಾಧ್ಯವಾಗುವುದಿಲ್ಲ. ಹೊರಗಿನ ಶಿಕ್ಷೆಯಿಂದ ಅವನು ತಪ್ಪಿಸಿಕೊಂಡರೂ ಒಳಗೊಳಗೇ ಶಿಕ್ಷೆ ಅನುಭವಿಸುತ್ತಿರುತ್ತಾನೆ. ತಾನು ಮಾಡಿದ ಕೊಲೆ ಗೊತ್ತಾಗಿಬಿಟ್ಟರೆ ಎಂಬ ಭಯದಲ್ಲೇ ಬದುಕುತ್ತಿರುತ್ತಾನೆ. ಅವನ ಯೋಚನೆಗಳೇ ಅವನಿಗೆ ಶಿಕ್ಷೆಯಾಗಿಬಿಡುತ್ತದೆ. ನಾವು ಸಹ ಆದೇ ತರಹ ಆಗುತ್ತಿದ್ದೇವೆ. ನನ್ನ ಬಗ್ಗೆ ಯಾರು ಏನು ಹೇಳುತ್ತಿದ್ದಾರೆ ಎಂಬ ಯೋಚನೆಯಲ್ಲೇ ಕಳೆದು ಹೋಗುತ್ತಿದ್ದೇವೆ. ಅದನ್ನು ಮೀರಿದರೆ ಮಾತ್ರ ಮನುಷ್ಯನಿಗೆ ಸುಖ ಸಿಗುತ್ತದೆ. ಮೀರದಿದ್ದರೆ ಇದೇ ಆತಂಕ ಹೆಚ್ಚಾಗುತ್ತದೆ. ಫೇಸ್ಬುಕ್ನಲ್ಲಿ ಯಾರು ಯಾರಿಗೆ ಬಯ್ದಿದ್ದಾರೆ? ಯಾರದೋ ಬಗ್ಗೆ ಇನ್ನೊಬ್ಬರ ಅಭಿಪ್ರಾಯವೇನು? ಇಂಥವೇ ವಿಷಯಗಳು ನಮಗೆ ಹೆಚ್ಚು ಖುಷಿಕೊಡುತ್ತವೆ. ಸೂಕ್ಷ್ಮವಾಗಿ ಗಮನಿಸಿ ನೋಡಿ, ಸೋಷಿಯಲ್ ಮೀಡಿಯಾದಲ್ಲಿ, ಯಾರಾದರೂ ಇನ್ನೊಬ್ಬರಿಗೆ ಬೈದರೆ, ಆ ಪೋಸ್ಟ್ನ್ನು ಹೆಚ್ಚು ಜನ ನೋಡುತ್ತಾರೆ. ವಿವೇಕದ ಮಾತುಗಳಿಗಿಂತ, ಬೈಗುಳದ ಬಗ್ಗೆ ಗಮನಹೋಗುತ್ತದೆ. ಈ ಮೂಲಕ ನಾವು ಸೆನ್ಸೇಷನಲಿಸಮ್ೆ ಕ್ರಮೇಣ ಈಡಾಗುತ್ತಿದ್ದೇವೆ.
ಹಿಂದೆ ಈ ಮೊಬೈಲ್, ಇಂಟರ್ನೆಟ್, ಸೋಷಿಯಲ್ ಮೀಡಿಯಾ ಯಾವುದೂ ಇರಲಿಲ್ಲ. ಆಗ ನಾವು ನಿಜಕ್ಕೂ ಬಹಳ ನೆಮ್ಮದಿಯಾಗಿದ್ದೆವು. ಇತ್ತೀಚಿನ ವರ್ಷಗಳಲ್ಲಿ ಆಧುನಿಕ ಜೀವನದ ಆವಿಷ್ಕಾರಗಳು ನಮ್ಮ ಸಂತೋಷವನ್ನು ಕ್ರಮೇಣ ಕಸಿದುಕೊಳ್ಳುತ್ತಿದೆ. ಈಗ ನಾವು ಹೆಚ್ಚು ಪ್ರಜ್ಞೆಯಿಂದ ಯೋಚಿಸಬೇಕಿದೆ. ಇದು ಕೆಟ್ಟದ್ದು ಎಂಬ ಅರಿವು ಎಲ್ಲರಿಗೂ ಇದೆ. ಆದರೆ, ಅರಿವಿಗೆ ಬರುವುದಷ್ಟೇ ಅಲ್ಲ, ನಮ್ಮ ಪ್ರಜ್ಞೆಗೂ ಬರುವುದು ಬಹಳ ಮುಖ್ಯ. ಮೊದಲು ನಾವು ಅದನ್ನು ಗೆಲ್ಲುವುದಕ್ಕೆ ಕಲಿಯಬೇಕು. ಇದರ ಜತೆಗೆ ನಮ್ಮ ಮೆಗ್ಲೋಮೇನಿಯಾಕ್ ಮನಸ್ಥಿತಿಯಿಂದ ಹೊರಬರುವುದಕ್ಕೆ ಪ್ರಯತ್ನಿಸಬೇಕು. ಒಳಗಿನ ತೃಷೆಯನ್ನು ತೀರಿಸಬೇಕು. ನಾವು ಸತ್ತಾಗ ಏನನ್ನೂ ತೆಗೆದುಕೊಂಡು ಹೋಗುವುದಿಲ್ಲ, ಹೇಗೆ ಬರಿಗೈಯಲ್ಲಿ ಬರುತ್ತೇವೋ ಅದೇ ರೀತಿ ಬರಿಗೈಯಲ್ಲಿ ಹಿಂದಿರುಗುತ್ತೇವೆ ಎಂಬ ವಿಷಯ ಮಾಹಿತಿ ಲೆವೆಲ್ನಲ್ಲಿ ಸ್ಪಷ್ಟವಾಗಿ ಗೊತ್ತಿರುತ್ತದೆ. ಅದನ್ನು ಆಗಾಗ ಹೇಳುತ್ತಲೂ ಇರುತ್ತೇವೆ. ಆದರೆ, ಜ್ಞಾನದ ಲೆವೆಲ್ನಲ್ಲಿ ಅದು ಗೊತ್ತಿರುವುದಿಲ್ಲ. ಅದಕ್ಕೊಂದು ದೊಡ್ಡ ಪರದೆಯನ್ನು ಹಾಕಿಕೊಂಡು ಬಿಟ್ಟಿರುತ್ತೇವೆ. ಸಾಯೋದು ಬೇರೆಯವರು, ನಾವು ಚಿರಂಜೀವಿಗಳು ಅಂತ ಅಂದುಕೊಂಡುಬಿಟ್ಟಿರುತ್ತೇವೆ. ಹಾಗಾಗಿ, ಹೆಚ್ಚೆಚ್ಚು ಬೆಳೆಯಬೇಕು, ಜನಪ್ರಿಯನಾಗಬೇಕು, ಚಪ್ಪಾಳೆಗಳನ್ನು ಗಿಟ್ಟಿಸಿಕೊಳ್ಳಬೇಕು ಎಂದು ಮನಸ್ಸು ಹಾತೊರೆಯುತ್ತಿರುತ್ತದೆ. ಮನಸ್ಸಿನೊಳಗೆ ಸಂಯಮ ತಂದುಕೊಳ್ಳದಿದ್ದರೆ, ಅದು ನಮ್ಮನ್ನು ತಿಂದು ಹಾಕಿಬಿಡುತ್ತದೆ.
ಇವತ್ತು ಪರಿಸ್ಥಿತಿ ಹೇಗಾಗಿದೆಯೆಂದರೆ, ಬೇರೆಯವರ ಜಗತ್ತಿನಲ್ಲೂ ನಮ್ಮನ್ನು ನಾವು ನೋಡಿಕೊಳ್ಳುವುದಕ್ಕೆ ಪ್ರಯತ್ನಿಸುತ್ತೇವೆ. ಅಲ್ಲೂ ನಾವೇ ಇರಬೇಕು ಎಂದು ಬಯಸುತ್ತೇವೆ. ಪರರ ಜಗತ್ತಿನಲ್ಲಿ ಇಲ್ಲದಿದ್ದರೇನಂತೆ? ಆದರೆ, ಅದಕ್ಕೆ ಮನಸ್ಸು ಒಪು್ಪವುದಿಲ್ಲ. ಅಲ್ಲಿ ನಮ್ಮ ಬಗ್ಗೆ ಏನು ಮಾತಾಡುತ್ತಿದ್ದಾರೆ, ಅಲ್ಲಿ ಏನು ಚರ್ಚೆಯಾಗುತ್ತಿದೆ ಎಂದು ತಿಳಿಯಬಯಸುತ್ತೇವೆ. ಇದರಿಂದ ಕಳಚಿಕೊಳ್ಳುವುದಕ್ಕೆ ಮೊದಲು ನಾವು ಪ್ರಯತ್ನಿಸಬೇಕು. ಸರಿ ಇದರಿಂದ ಆಚೆ ಬರುವುದು ಹೇಗೆ? ಅದಕ್ಕೆ ಪ್ರತಿಯೊಬ್ಬರಿಗೂ ಒಂದೊಂದು ಮಾರ್ಗವಿರುತ್ತದೆ. ನನಗೆ ಔಟ್ಲೆಟ್ ಎಂದರೆ ಅದು ಬರವಣಿಗೆ. ನನ್ನ ಯೋಚನೆಗಳನ್ನು ನನ್ನ ಪಾತ್ರಗಳ ಮೂಲಕ ಹೇಳಿಸಿ ಸಂತೋಷಪಡುತ್ತೇನೆ. ಬರೆಯುತ್ತ ಬರೆಯುತ್ತ ನನ್ನನ್ನು ನಾನು ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತೇನೆ. ಅದರಿಂದ ನನಗೊಂದು ತೃಪ್ತಿ ಸಿಗುತ್ತದೆ. ನೋವಿನಿಂದ ಮುಕ್ತಿ ಸಿಗುತ್ತದೆ. ಒಳಗಿನ ನೋವುಗಳನ್ನು, ಸಣ್ಣತನಗಳನ್ನು ಮೀರುವುದಕ್ಕೆ ಬರವಣಿಗೆಯೊಂದೇ ಮಾರ್ಗ ಎಂದು ಲಂಕೇಶ್ ಹೇಳುತ್ತಿದ್ದರು.
ಬರೆಯುವುದರಿಂದ, ಓದುವುದರಿಂದ ನಮ್ಮ ದೃಷ್ಟಿಕೋನ ಬದಲಾಗುತ್ತ ಹೋಗುತ್ತದೆ. ಖ್ಯಾತ ತತ್ತ್ವಜ್ಞಾನಿ ಕನ್ಪ್ಯೂಷಿಯಸ್ನ ಈ ಕಥೆಯನ್ನು ನೀವು ಕೇಳಿರಬಹುದು. ಒಮ್ಮೆ ಆತ, ರಾಜನೊಬ್ಬನಿಗೆ, ‘ನಿನ್ನ ಪ್ರಕಾರ, ಸಂತೋಷವೆಂದರೆ ಏನು ಎನ್ನುತ್ತಾನೆ. ಅದಕ್ಕೆ ರಾಜ, ‘ನಮ್ಮ ರಾಜ್ಯ ವಿಸ್ತಾರವಾಗಬೇಕು, ಪ್ರಜೆಗಳಿಗೆ ಎರಡು ಹೊತ್ತಿನ ಊಟ ಕೊಡುವಂತಾಗಬೇಕು, ಅದೇ ನಿಜವಾದ ಸಂತೋಷ’ ಎಂದು ಹೇಳುತ್ತಾನೆ. ಇದನ್ನು ಕೇಳಿ ನಗುವ ಕನ್ಪ್ಯೂಷಿಯಸ್, ಅವನಿಗೆ ಅರ್ಥ ಮಾಡಿಸುತ್ತಾನೆ. ಸಂತೋಷ ಎನ್ನುವುದು ಯಾರಿಗೂ ಕೊಡುವುದಕ್ಕೆ ಸಾಧ್ಯವಿಲ್ಲ. ಯಾರಿಂದ ಪಡೆಯುವುದಕ್ಕೆ ಸಾಧ್ಯವಿಲ್ಲ. ಅದು ನಮ್ಮೊಳಗೇ ಇರುವಂಥದ್ದು. ಅದು ಒಳಗಿನಿಂದ ಬರಬೇಕು ಮತ್ತು ಅದು ಬರುವುದು ಜ್ಞಾನದಿಂದ ಮಾತ್ರ ಸಾಧ್ಯ. ಹಾಗಾಗಿ, ಮೊದಲು ಗ್ರಂಥಾಲಯಗಳನ್ನು ಕಟ್ಟು. ಜನ ಓದಲಿ, ಹೆಚ್ಚುಹೆಚ್ಚು ಜ್ಞಾನ ಸಂಪಾದಿಸಲಿ. ತಮಗೆಷ್ಟು ಸಂತೋಷ ಬೇಕು ಎಂಬುದನ್ನು ಅವರೇ ತೀರ್ವನಿಸಲಿ’ ಎನ್ನುತ್ತಾನೆ.
ಓದು ಮತ್ತು ಬರವಣಿಗೆ ಬಹಳಷ್ಟು ಜನರ ಸಂತೋಷವನ್ನು ಹೆಚ್ಚಿಸುತ್ತದೆ. ಇದರಿಂದ ಅವರ ಸಣ್ಣತನ, ನೋವು ಕಡಿಮೆಯಾಗುತ್ತದೆ. ಇದಕ್ಕೆ ಬರೀ ಓದು ಅಥವಾ ಬರವಣಿಗೆಯೇ ಆಗಬೇಕೆಂದೇನಿಲ್ಲ. ಪ್ರತಿಯೊಬ್ಬರಿಗೂ ಅವರದ್ದೇ ಆದ ಮೀಡಿಯಂ ಇರುತ್ತದೆ. ನನಗೆ ಬರವಣಿಗೆ ಇರಬಹುದು. ಇನ್ನೊಬ್ಬರಿಗೆ ಗಾಯನ, ಮತ್ತೊಬ್ಬರಿಗೆ ಚಿತ್ರಕಲೆ, ಸಚಿನ್ ತೆಂಡುಲ್ಕರ್ಗೆ ಕ್ರಿಕೆಟ್ ಇರಬಹುದು, ಇನ್ಯಾರಿಗೋ ಇನ್ನೇನೋ ಇರಬಹುದು... ಹೀಗೆ ಪ್ರತಿಯೊಬ್ಬರೂ ತಮ್ಮ ಸೃಜನಶೀಲತೆಗೆ ಒಂದು ಮೀಡಿಯಂ ಕಂಡುಕೊಂಡಿರುತ್ತಾರೆ. ಸಮಾಜ ಸ್ವಾಸ್ಥ್ಯವಾಗುವುದು, ಎಲ್ಲದರಿಂದ ಬಿಡುಗಡೆ ಸಿಗುವುದು ಸಹ ಇದರಿಂದಲೇ.
(ಲೇಖಕರು ಖ್ಯಾತ ನಟ, ನಿರ್ದೇಶಕ)