ಪ್ರತಿಭೆಗಳನ್ನು ಸ್ಥಾಪಿಸಿದರೆ ಸಾಕೆ?; ಪ್ರತಿಮಾಲೋಕದಲ್ಲಿ ಹೀಗೊಂದು ಸುತ್ತು...

Vijaya Vihara
Published on
ಸಾರ್ವಜನಿಕ ಬದುಕಿನಲ್ಲಿ ಆದರ್ಶರೆನಿಸಿಕೊಂಡವರ ಪ್ರತಿಮೆ ಸ್ಥಾಪಿಸಿ ಗೌರವ ಸಲ್ಲಿಸುವ ರೂಢಿ ಇದೆ. ಆದರೆ ಎಷ್ಟೋ ಪ್ರತಿಮೆಗಳ ನಿರ್ವಹಣೆ ಸರಿಯಾಗಿ ನಡೆಯುವುದಿಲ್ಲ. ಇದಲ್ಲದೆ, ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಮೆ ನಿರ್ವಣಕ್ಕೆ ಅನುಮತಿ ನೀಡಬಾರದೆಂದು ಸುಪ್ರೀಂ ಕೋರ್ಟ್ ಆದೇಶ ಸಹ ಇದೆ. ಪ್ರತಿಮಾಲೋಕದಲ್ಲಿ ಹೀಗೊಂದು ಸುತ್ತು...

| ರಮೇಶ ದೊಡ್ಡಪುರ

ಬೆಂಗಳೂರಲ್ಲಿ ತೆರವಿಗೆ ಸಿದ್ಧತೆ

ವಿಧಾನಸೌಧದ ಆವರಣದಲ್ಲಿ ಗಾಂಧೀಜಿ ಸೇರಿ ಅನೇಕ ಪ್ರತಿಮೆಗಳು ನಗರದ ಸೌಂದರ್ಯ ಹಾಗೂ ಮೌಲ್ಯವನ್ನು ಹೆಚ್ಚಿಸಿವೆ. ಸಂಸತ್ ಭವನದ ಸುತ್ತ ಮಹಾಪುರುಷರ ಪ್ರತಿಮೆಗಳಿವೆ. ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತ ನಿರ್ಮಾಣ ಕುರಿತಂತೆ ಇತ್ತೀಚೆಗೆ ಹೈಕೋರ್ಟ್ ನೀಡಿರುವ ಸೂಚನೆ ಮೇರೆಗೆ ಬೆಂಗಳೂರಿನ 21 ಕಡೆಗಳಲ್ಲಿ ವಿವಿಧ ಪ್ರತಿಮೆಗಳನ್ನು ತೆರವುಗೊಳಿಸಲು ಬಿಬಿಎಂಪಿ ಮುಂದಾಗಿದೆ. ಪ್ರತಿಮೆಗಳನ್ನು ತೆರವುಗೊಳಿಸುವುದು ಅಭಿಮಾನಿಗಳ ಭಾವನೆಗೆ ಧಕ್ಕೆ ತರುತ್ತದೆ ಎಂದು ಕೆಲ ಸಂಘ ಸಂಸ್ಥೆಗಳು ಆಕ್ಷೇಪವೆತ್ತಿವೆ. ಈ ಪ್ರಕರಣ ನ್ಯಾಯಾಲಯದಲ್ಲಿರುವ ಕಾರಣ ಅಲ್ಲೇ ಅಂತಿಮ ತೀರ್ವನವಾಗುತ್ತದೆ. ಆದರೆ ಇನ್ನು ಮುಂದೆ ಸ್ಥಾಪನೆಯಾಗುವ ಪ್ರತಿಮೆಗಳ ವಿಚಾರದಲ್ಲಾದರೂ ಸರ್ಕಾರ ಕಾಳಜಿ ವಹಿಸಬೇಕು. ಇದರಲ್ಲಿ ಸಾರ್ವಜನಿಕರ ಹೊಣೆಗಾರಿಕೆಯೂ ಇದೆ. ಕೇವಲ ಪ್ರತಿಮೆ ಸ್ಥಾಪಿಸಿದರೆ ಸಾಕೇ? ಅಥವಾ ಮಹಾಪುರುಷರ ನೆನಪಿಗೆ ನಿಜವಾಗಿಯೂ ಪ್ರತಿಮೆಯೇ ಬೇಕೆ? ಆಯಾ ಮಹಾಪುರುಷರ ಜೀವನ-ಆದರ್ಶ-ಸಾಧನೆಯನ್ನು ಪ್ರಚುರಪಡಿಸುವುದು ನಿಜಕ್ಕೂ ಸಾರ್ಥಕ ಕಾರ್ಯವಲ್ಲವೆ? ಇತ್ಯಾದಿ ಚಿಂತನಮಂಥನ ನಡೆಯಬೇಕು.

ಅನುಭವ ಮಂಟಪ ಸಾಕಾರಗೊಳಿಸಿದ ಬಸವಣ್ಣನವರ ಪುತ್ಥಳಿ ಲಂಡನ್ನಿನ ಲ್ಯಾಂಬೆತ್ ನಗರದ ಥೇಮ್್ಸ ನದಿ ದಂಡೆಯ ಮೇಲೆ ಪ್ರಧಾನಿ ನರೇಂದ್ರ ಮೋದಿಯವರಿಂದ 2015ರ ನವೆಂಬರ್ 14ರಂದು ಅನಾವರಣಗೊಂಡಿತು. ಈ ಪುತ್ಥಳಿಯನ್ನು ಸ್ಥಾಪಿಸಲು ಕನ್ನಡಿಗ ಡಾ. ನೀರಜ್ ಪಾಟೀಲರು ತೆಗೆದುಕೊಂಡಿದ್ದು ಬರೋಬ್ಬರಿ 5 ವರ್ಷಗಳು. ಮಹಾತ್ಮರೊಬ್ಬರ ವಿಗ್ರಹ ಸ್ಥಾಪನೆಗೆ ಈ ರಾಷ್ಟ್ರಗಳಲ್ಲಿ ಅನೇಕ ನಿಯಮಗಳಿದ್ದು, ವಿವಿಧ ಅನುಮತಿಗಳನ್ನು ಪಡೆಯಬೇಕು. ನದಿಯ ದಂಡೆ ಮೇಲೆ ಪುತ್ಥಳಿಯನ್ನು ಸ್ಥಾಪಿಸಲು ಮೊದಲಿಗೆ ಲ್ಯಾಂಬೆತ್ ಬಸವೇಶ್ವರ ಫೌಂಡೇಷನ್ ಎಂಬ ಲಾಭ ಅಪೇಕ್ಷಿಸದ(ನಾನ್ ಪ್ರಾಫಿಟ್) ಸಂಸ್ಥೆಯನ್ನು ಸ್ಥಾಪಿಸಲಾಯಿತು. ಸಾರ್ವಜನಿಕ ಪ್ರತಿಮೆಗಳ ಕಾಯಿದೆ-1854ರ ಅನ್ವಯ, ಪ್ರತಿಮೆ ಸ್ಥಾಪಿಸಬೇಕೆಂದಿರುವ ಮಹಾಪುರುಷರ ವಿವರ, ಸಾಧನೆ, ಬ್ರಿಟನ್ನಿನ ನೆಲದಲ್ಲಿ ಅದನ್ನು ಸ್ಥಾಪಿಸುವ ಉದ್ದೇಶ, ಪ್ರತಿಮೆಯ ಸ್ವರೂಪ ಸೇರಿ ಯೋಜನೆಯ ಸಂಪೂರ್ಣ ವಿವರಗಳನ್ನು ಲ್ಯಾಂಬೆತ್​ನ ಯೋಜನಾ ಇಲಾಖೆಗೆ ಸಲ್ಲಿಸಲಾಯಿತು. ಇದು ತನ್ನ ಯೋಜನಾ ನೀತಿಗೆ, ನಗರದ ಸೌಂದಯೀಕರಣ ನೀತಿಗೆ ಅನುಗುಣವಾಗಿದೆಯೇ? ಎಂಬ ಅಂಶಗಳನ್ನು ಗಮನಿಸಿ ಯೋಜನಾ ಇಲಾಖೆ ಒಪ್ಪಿಗೆ ನೀಡಿತು. ಇದರ ಆಧಾರದಲ್ಲಿ ಬ್ರಿಟನ್ನಿನ ಸಂಸ್ಕೃತಿ, ವಾರ್ತಾ ಮತ್ತು ಕ್ರೀಡಾ ಸಚಿವಾಲಯದಿಂದ ಯೋಜನೆಗೆ ಒಪ್ಪಿಗೆ ಸಿಕ್ಕಿತು. ಆನಂತರದಲ್ಲಿ ಪ್ರತಿಮೆ ಸ್ಥಾಪಿಸಿ ಉದ್ಘಾಟನೆ ಮಾಡಿಸಲಾಯಿತು. ಕೇರಳದ ತಿರುವನಂತಪುರ-ಕನ್ಯಾಕುಮಾರಿ ಹೆದ್ದಾರಿಯಲ್ಲಿ ನೆಯ್ಯಾತಿನಕರದಲ್ಲಿ ಪ್ರತಿಮೆ ಸ್ಥಾಪಿಸುವ ಸಂಬಂಧದ ಪ್ರಕರಣ ಸುಪ್ರೀಂಕೋರ್ಟ್ ಮೆಟ್ಟಿಲೇರಿತು. ಸರ್ಕಾರಿ ಸೇವೆಯಲ್ಲಿದ್ದು, 1960ರಲ್ಲಿ ರಾಜೀನಾಮೆ ನೀಡಿ ಕಮ್ಯೂನಿಸ್ಟ್ ಪಕ್ಷ ಸೇರಿ, ನಂತರ 1964ರಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿ ಕೇರಳ ಸರ್ಕಾರದಲ್ಲಿ ಸಚಿವರಾಗಿದ್ದವರು ಎನ್. ಸುಂದರನ್ ನಾಡಾರ್. ಅವರ ಪ್ರತಿಮೆ ಸ್ಥಾಪಿಸುವ ಕುರಿತ ಪ್ರಕರಣದಲ್ಲಿ 2013ರಲ್ಲಿ ಸುಪ್ರೀಂಕೋರ್ಟ್, ‘ಸಾರ್ವಜನಿಕ ಸ್ಥಳಗಳು, ರಸ್ತೆಗಳು ಹಾಗೂ ಸಾರ್ವಜನಿಕ ಬಳಕೆಯ ಸ್ಥಳಗಳಲ್ಲಿ ಪ್ರತಿಮೆ ಸ್ಥಾಪನೆಗೆ ಸರ್ಕಾರಗಳು ಅನುಮತಿ ನೀಡಬಾರದು. ಸಾರ್ವಜನಿಕ ಸ್ಥಳಗಳ ಮೇಲೆ ಪ್ರತಿಯೊಬ್ಬ ನಾಗರಿಕನಿಗೂ ಅಧಿಕಾರವಿದೆ. ಬೇರೆ ರಾಜ್ಯಗಳಲ್ಲಿ ಪ್ರತಿಮೆಗಳನ್ನು ಸ್ಥಾಪಿಸಿದ್ದಾರೆ ಎಂದಾಕ್ಷಣ ಅಂಥದ್ದೇ ಅಭ್ಯಾಸವನ್ನು ಇತರರೂ ಅನುಸರಿಸಬೇಕೆಂದಿಲ್ಲ. ಈ ಆದೇಶ ಎಲ್ಲ ರಾಜ್ಯಗಳಿಗೂ ಅನ್ವಯಿಸುತ್ತದೆ’ ಎಂದು ತೀರ್ಪು ನೀಡಿತು. ಇದರ ನಂತರ ಅನೇಕ ರಾಜ್ಯಗಳಲ್ಲಿ ಪ್ರತಿಮೆ ಕುರಿತು ಪ್ರಕರಣಗಳ ವಿಚಾರಣೆ ನಡೆದಿದ್ದು, 2018ರಲ್ಲಿ ಗುಜರಾತ್​ಗೆ ಸಂಬಂಧಿಸಿದ ಪ್ರಕರಣವೊಂದರಲ್ಲೂ ಸುಪ್ರೀಂಕೋರ್ಟ್ ಇದೇ ಧ್ವನಿಯನ್ನು ಪುನರುಚ್ಚರಿಸಿದೆ.

ಭಾರತೀಯ ಸಂವಿಧಾನದ ಏಳನೇ ಅನುಸೂಚಿಯಲ್ಲಿ ಕೇಂದ್ರ ಪಟ್ಟಿ, ರಾಜ್ಯ ಪಟ್ಟಿ ಹಾಗೂ ಸಮವರ್ತಿ ಪಟ್ಟಿಗಳ ಮೂಲಕ ಹೊಣೆಗಾರಿಕೆಗಳು ಹಾಗೂ ಹಕ್ಕುಗಳನ್ನು ರಾಜ್ಯ ಹಾಗೂ ಕೇಂದ್ರದ ನಡುವೆ ಹಂಚಿಕೆ ಮಾಡಲಾಗಿದೆ. ರಾಜ್ಯ ಪಟ್ಟಿಯ 18ನೇ ಅಂಶವು, ‘ಭೂಮಿ ಎಂದರೆ, ಭೂಮಿಯಲ್ಲಿನ ಅಥವಾ ಅದರ ಮೇಲಿನ ಹಕ್ಕುಗಳು, ಭೂ ಒಡೆಯನ ಮತ್ತು ಗೇಣಿದಾರನ ಸಂಬಂಧವನ್ನೊಳಗೊಂಡು ಭೂ ಹಿಡುವಳಿಗಳು ಮತ್ತು ಗೇಣಿವಸೂಲಿ; ಕೃಷಿ ಭೂಮಿಯ ವರ್ಗಾವಣೆ ಮತ್ತು ಪರಭಾರೆ; ಭೂ ಮೇಲ್ಪಾಟು; ಮತ್ತು ಕೃಷಿ ಸಾಲಗಳು, ಕಾಲನಿ ಸ್ಥಾಪನೆ’ ಎಂದು ತಿಳಿಸಲಾಗಿದೆ. ಅಂದರೆ ಭೂಮಿಯ ಮೇಲಿನ ಸಂಪೂರ್ಣ ಹಕ್ಕು ರಾಜ್ಯ ಸರ್ಕಾರಗಳದ್ದು. ಅವುಗಳಲ್ಲಿ ಸಾರ್ವಜನಿಕ ಹಿತಾಸಕ್ತಿಯ ಕಾರ್ಯಗಳನ್ನು ಕೈಗೊಳ್ಳಲು ರಾಜ್ಯ ಸ್ವತಂತ್ರ. ಈ ಭೂಮಿಯಲ್ಲಿ ಸರ್ಕಾರದ ಅನುಮತಿ ಇಲ್ಲದೆ ರೂಪುಗೊಳ್ಳುವ ಯಾವುದೇ ನಿರ್ಮಾಣ ಅಕ್ರಮ ಎಂದಾಗುತ್ತದೆ. ಇಂತಹ ಅಂಶಗಳ ಆಧಾರದಲ್ಲಿ ಸುಪ್ರೀಂಕೋರ್ಟ್ ಆದೇಶ ನೀಡಿರುವ ಸಾಧ್ಯತೆ ಇದೆ.

ಆಂಧ್ರ ಮಾದರಿ: ನೆರೆಯ ಆಂಧ್ರಪ್ರದೇಶದಲ್ಲಿ ವೈ.ಎಸ್. ರಾಜಶೇಖರ ರೆಡ್ಡಿ ಸೇರಿ ಅನೇಕ ರಾಜಕೀಯ ನಾಯಕರ ಪ್ರತಿಮೆಗಳು ರಸ್ತೆ ಬದಿಯಲ್ಲಿ ನಿರ್ವಣಗೊಂಡಿವೆ. ಆದರೆ 2003ರಲ್ಲಿ ಆಂಧ್ರಪ್ರದೇಶದಲ್ಲಿ ಪ್ರತಿಮೆ ಸ್ಥಾಪನೆ ಕುರಿತು ಸ್ಪಷ್ಟ ನಿಯಮಾವಳಿ ರೂಪಿಸಲಾಗಿದೆ. (ಸರ್ಕಾರಿ ಆದೇಶ ಎಂಎಸ್. ನಂ.55 ದಿ. 8-4-2003). ಪ್ರತಿಮೆ ನಿರ್ಮಾಣ ಹಾಗೂ ಅನುಮತಿ ನೀಡುವಿಕೆಯನ್ನು ಸಾರಿಗೆ, ರಸ್ತೆ ಹಾಗೂ ಕಟ್ಟಡ ಇಲಾಖೆಗೆ ವಹಿಸಲಾಗಿದೆ. ಪ್ರತಿಮೆ ಸ್ಥಾಪನೆಗೆ ‘ಪ್ರತಿಮೆ ಸಮಿತಿ’ ಒಪ್ಪಿಗೆ ನೀಡಬೇಕು. ಅನಧಿಕೃತ ಪ್ರತಿಮೆಗಳನ್ನು ತೆರವುಗೊಳಿಸಿ, ಸ್ಥಾಪಿಸಿರುವ ಸಂಘ ಸಂಸ್ಥೆಗೆ 10 ಸಾವಿರ ರೂ. ದಂಡ ವಿಧಿಸಬೇಕು. ಪ್ರತಿಮೆ ಸ್ಥಾಪಿಸುವ ಸಂಘ ಸಂಸ್ಥೆಗಳು ಹಣ ಪಾವತಿಸಿ ಸ್ಥಳವನ್ನು ಸರ್ಕಾರದಿಂದ ಗುತ್ತಿಗೆ ಪಡೆಯಬೇಕು. ಪ್ರತಿಮೆಯ ನಿರ್ವಹಣೆ ಖರ್ಚನ್ನು ಭರಿಸಬೇಕು; ಪ್ರತಿಮೆಗೆ ಹಾನಿಯಾದರೆ ಒಂದು ತಿಂಗಳೊಳಗೆ ರಿಪೇರಿ ಮಾಡಬೇಕು. ಇಲ್ಲದಿದ್ದಲ್ಲಿ ತಿಂಗಳಿಗೆ 10 ಸಾವಿರ ರೂ.ನಂತೆ ದಂಡ ವಿಧಿಸಲು ಅವಕಾಶವಿದೆ.

ಆದರೆ ಕರ್ನಾಟಕದಲ್ಲಿ ಪ್ರತಿಮೆ ಸ್ಥಾಪನೆಗೆ ಯಾವುದೇ ನಿಯಮ ಇಲ್ಲ. ಅಭಿಮಾನಿಗಳು ತಮ್ಮ ಕಣ್ಮಣಿಯ ಪ್ರತಿಮೆಯನ್ನು ಸ್ಥಾಪಿಸಲು ಸಂಕಲ್ಪಿಸುತ್ತಾರೆ. ನಂತರ ಬಹಳಷ್ಟು ಕಡೆಗಳಲ್ಲಿ ಪ್ರತಿಮೆಗಳ ಕಡೆಗೆ ನೋಡುವವರೂ ಇರುವುದಿಲ್ಲ. ಪ್ರತಿಮೆ ಪಕ್ಕದಲ್ಲೆ ಕಸ ಕಡ್ಡಿ ಸುರಿಯಲಾಗಿರುತ್ತದೆ. ಇದಕ್ಕೆ ಅಪವಾದ ಇಲ್ಲದಿಲ್ಲ. ಆದರೆ ಸಂಖ್ಯೆ ವಿರಳ. ಮತ್ತೊಂದು ಸಮಸ್ಯೆಯೆಂದರೆ, ಕಿಡಿಗೇಡಿಗಳ ಕುಕೃತ್ಯ. ಕರ್ನಾಟಕದಲ್ಲಿ ಅನೇಕ ಸಂದರ್ಭದಲ್ಲಿ ‘ಪ್ರತಿಮೆಗೆ ಅವಮಾನ’, ‘ಪ್ರತಿಮೆ ಭಗ್ನ’ ಸುದ್ದಿಗಳು ಕಣ್ಣಿಗೆ ಬಿದ್ದಿವೆ. ಪ್ರತಿಮೆಗಳ ನಿರ್ಮಾಣ ಕೆಲವೊಮ್ಮೆ ಜಾತಿ-ಸಮುದಾಯಗಳ ನಡುವಿನ ಸಂಘರ್ಷಕ್ಕೂ ಕಾರಣವಾಗಿದ್ದಿದೆ.

ಯಾರ ಸುಪರ್ದಿ?: ಅಚ್ಚರಿಯೆಂದರೆ, ಸಾರ್ವಜನಿಕ ಸ್ಥಳಗಳಲ್ಲಿರುವ ಪ್ರತಿಮೆಗಳು ಸರ್ಕಾರದ ಯಾವ ಇಲಾಖೆಗೆ ಸೇರಿದ್ದು ಎಂಬ ಪ್ರಶ್ನೆಗೆ ಉತ್ತರವೇ ಇಲ್ಲ! ರಸ್ತೆ ಬದಿ, ಪಾದಚಾರಿ ಮಾರ್ಗ, ವೃತ್ತಗಳು, ಉದ್ಯಾನದಂತಹ ಸಾರ್ವಜನಿಕ ಸ್ಥಳಗಳಲ್ಲಿ ಪುತ್ಥಳಿ ಸ್ಥಾಪನೆಗೆ ಯಾರ ಅನುಮತಿ ಪಡೆಯಬೇಕೆಂಬುದೇ ಗೊಂದಲ. ರಾಜ್ಯದಲ್ಲಿ ಸ್ಥಾಪನೆಯಾಗಿರುವ ಅಧಿಕೃತ ಹಾಗೂ ಅನಧಿಕೃತ ಪ್ರತಿಮೆಗಳ ಬಗ್ಗೆ 2015ರ ಜೂನ್ 25ರಂದು ಮಾಹಿತಿ ಹಕ್ಕು ಕಾಯ್ದೆಯಡಿ ಗೃಹ ಸಚಿವಾಲಯಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ನಮ್ಮದೇನಿದ್ದರೂ ಭದ್ರತೆ ನೀಡುವ ಕೆಲಸ, ಇದು ನಗರಾಭಿವೃದ್ಧಿ ಇಲಾಖೆಯ ಕೆಲಸ ಎಂದು ಅಲ್ಲಿಗೆ ಅರ್ಜಿಯನ್ನು ವರ್ಗಾವಣೆ ಮಾಡಲಾಯಿತು. ಅಲ್ಲಿಂದ ಅರ್ಜಿ ತೋಟಗಾರಿಕೆ ಇಲಾಖೆಗೆ ತೆರಳಿತು. ಇದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಕೆಲಸ ಎಂದು ಅಲ್ಲಿಗೆ ಹಸ್ತಾಂತರವಾಯಿತು. ಅಲ್ಲಿಂದ ಪಂಚಾಯತ್ ರಾಜ್ ಇಲಾಖೆಗೆ ವರ್ಗಾಯಿಸಿತು. ಈ ಇಲಾಖೆಯವರೋ, ಪತ್ರವನ್ನು ರಾಜ್ಯದ ಎಲ್ಲ ಆರು ಸಾವಿರ ಗ್ರಾಮ ಪಂಚಾಯಿತಿಗಳಿಗೆ ವರ್ಗಾಯಿಸಿಬಿಟ್ಟರು. ದಿನಬೆಳಗಾದರೆ ನಾಲ್ಕೈದು ಪತ್ರಗಳು ಬಂದು ಬೀಳುತ್ತಿದ್ದವು. ಇಷ್ಟಾದರೂ ಉತ್ತರ ಸಿಕ್ಕಿತೇ? ‘ನಮ್ಮಲ್ಲಿ ಅಂತಹ ಪ್ರತಿಮೆಗಳ ಯಾವುದೇ ಮಾಹಿತಿ ಇಲ್ಲ’ ಎಂಬ ಬಹುತೇಕ ಸಮಾನ ಉತ್ತರ.

ಇನ್ನೊಂದು ಸಮಸ್ಯೆಯೆಂದರೆ ಪ್ರತಿಮೆಯ ರೂಪ, ವಿನ್ಯಾಸ, ಗಾತ್ರದ ಕುರಿತದ್ದು. ಬೆಂಗಳೂರಿನ ಪ್ರಮುಖ ವೃತ್ತವೊಂದರಲ್ಲಿ ಇತ್ತೀಚೆಗೆ ಸ್ಥಾಪನೆಯಾದ ಮಹಾಪುರುಷರೊಬ್ಬರ ಪ್ರತಿಮೆ, ಅವರದ್ದೇ ಎಂದು ಗೊತ್ತಾಗುವುದೇ ಇಲ್ಲ. ಯಾವುದೇ ಹೋಲಿಕೆಯಿಲ್ಲದೆ, ಪ್ರಮಾಣವಿಲ್ಲದೆ ಪ್ರತಿಮೆ ನಿರ್ಮಾಣ ಮಾಡಿ ಕೈತೊಳೆದುಕೊಂಡವರಿದ್ದಾರೆ. ಪ್ರತಿಮೆ ಎತ್ತರ, ಬಣ್ಣ, ಭಂಗಿ, ಎಂಬೆಲ್ಲ ಅಂಶಗಳನ್ನು ಪರಿಗಣಿಸಿದಾಗ ಮಾತ್ರ ಅದರ ಸೌಂದರ್ಯ ಹೆಚ್ಚುತ್ತದೆ. ಬೆಂಗಳೂರಿನ ಚಾಲುಕ್ಯ ವೃತ್ತದಲ್ಲಿ ಅಶ್ವಾರೂಢ ಬಸವೇಶ್ವರರ ಪ್ರತಿಮೆ ಸುತ್ತ ಇತ್ತೀಚೆಗೆ ಸುಂದರವಾಗಿ ನವೀಕರಣ ಕಾಮಗಾರಿ ಕೈಗೊಳ್ಳಲಾಗಿರುವುದು ಇದಕ್ಕೊಂದು ನಿದರ್ಶನ.

ಸಮಿತಿ ನಿರ್ಣಯ: ಬೆಂಗಳೂರಿನಲ್ಲಿ ಪ್ರತಿಮೆ ಸ್ಥಾಪನೆಯನ್ನು ಸೂಕ್ತವಾಗಿ ನಡೆಸುವಂತಾಗಲು ಈ ಹಿಂದೆ ಸರ್ಕಾರದಿಂದ ಪ್ರಯತ್ನ ನಡೆದಿದೆ. ಎ.ರವೀಂದ್ರ ಅವರು ಆಯುಕ್ತರಾಗಿದ್ದಾಗ ಬಿಬಿಎಂಪಿಯಲ್ಲಿ ನಗರ ಸೌಂದಯೀಕರಣ ಸಮಿತಿ ರಚಿಸಲಾಗಿತ್ತು. ಈ ಸಮಿತಿ ಒಪ್ಪಿಗೆ ಪಡೆದು ಪ್ರತಿಮೆ ನಿರ್ವಿುಸಬೇಕಿತ್ತು. ಆನಂತರದಲ್ಲಿ ಸಮಿತಿ ಅಸ್ತಿತ್ವ ಕಳೆದುಕೊಂಡಿದೆ. ಸರ್ಕಾರವೇ ಸ್ಥಾಪಿಸಿರುವ ಕರ್ನಾಟಕ ಲಲಿತಕಲಾ ಅಕಾಡೆಮಿಯನ್ನಾದರೂ ಬಳಸಿಕೊಂಡು ಪ್ರತಿಮೆಗಳ ಸ್ಥಾಪನೆ, ವಿನ್ಯಾಸ, ಒಪ್ಪಿಗೆ ಕುರಿತು ಸರ್ಕಾರ ಆಲೋಚಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net