ಅಧಿಕಾರ ಕಳೆದುಕೊಳ್ಳಲಿದ್ದಾರೆಯೇ ಕ್ಸಿ ಜಿನ್​ಪಿಂಗ್?

Xijin
Published on

ಅಂತಾರಾಷ್ಟ್ರೀಯ ಸಂಬಂಧಗಳ ಮೇಲೆ ಲೇಖನಗಳನ್ನು ಬರೆಯುವ, ಮುಲಾಜಿಲ್ಲದೆ ನರೇಂದ್ರ ಮೋದಿಯವರ ನೀತಿಯನ್ನು ಟೀಕಿಸುವ ಬ್ರಹ್ಮ ಚಲನಿ ಇತ್ತೀಚೆಗೆ ಟ್ವೀಟ್ ಮಾಡಿದ್ದರು. ಒಂದು ವರ್ಷ ಒಂಬತ್ತು ತಿಂಗಳುಗಳಿಂದ ಚೀನಾದ ಅಧ್ಯಕ್ಷ ಕ್ಸಿ ಜಿನ್​ಪಿಂಗ್ ತನ್ನ ದೇಶದಿಂದ ಹೊರಗೆ ಕಾಲಿಟ್ಟಿಲ್ಲ ಮತ್ತು ರೋಮ್ ಜಿ-20 ಶೃಂಗಸಭೆಯನ್ನೂ ಅವರು ತಪ್ಪಿಸಿಕೊಳ್ಳಲಿದ್ದಾರೆ ಎಂದಿದ್ದರು. ಅಷ್ಟು ಸಾಲದೆಂಬಂತೆ ಚೀನಾದೊಳಗೆ ಗಲಭೆಯೊಂದರ ಮುನ್ಸೂಚನೆ ಇದೆ ಎಂಬ ಅನುಮಾನವನ್ನೂ ಅವರು ವ್ಯಕ್ತಪಡಿಸಿದ್ದರು. ಈ ಟ್ವೀಟ್ ಅನೇಕ ಸಂಗತಿಗಳ ಒಳಹೊಕ್ಕಲು ನಿಸ್ಸಂಶಯವಾಗಿ

ಪ್ರೇರೇಪಿಸಿದೆ. ಜಿನ್​ಪಿಂಗ್ ನಿಜಕ್ಕೂ ತಮ್ಮ ಅಧಿಕಾರವನ್ನು ಚೀನಿಯರು ಕಸಿಯುತ್ತಾರೆ ಎಂಬ ಹೆದರಿಕೆಯಲ್ಲಿ ಬದುಕುತ್ತಿದ್ದಾರಾ? ಪ್ರತಿಯೊಬ್ಬ ಸರ್ವಾಧಿಕಾರಿಗೂ ಈ ರೀತಿಯ ಹೆದರಿಕೆ ಸಹಜವಾ? ಹಿಟ್ಲರ್, ಮುಸಲೋನಿ, ಈದೀ ಅಮೀನ, ಸದ್ದಾಂ ಹುಸೇನ್ ಬದುಕನ್ನು ಅರ್ಥೈಸಿಕೊಂಡವರಿಗೆಲ್ಲ ಇದು ಸತ್ಯವೆನಿಸಲು ಸಾಕು. ತನ್ನ ನಂತರ ಯಾರೂ ಇಲ್ಲ ಎಂಬಂತಹ ವಾತಾವರಣವನ್ನು ನಿರ್ವಿುಸಿ ಹೋದ ನೆಹರು ಮತ್ತು ಇಂದಿರಾರ ಬದುಕೂ ಇದಕ್ಕೆ ಹತ್ತಿರವಾದದ್ದೇ. ಹೀಗಾಗಿಯೇ ನೆಹರು ನಂತರ ಜನರ ಆಶೋತ್ತರಗಳನ್ನು ಈಡೇರಿಸಿದ ಲಾಲ್ ಬಹದ್ದೂರ್ ಶಾಸ್ತ್ರಿ ಬಹಳ ಕಾಲ ಬದುಕಲೇ ಇಲ್ಲ. ಇಂದಿರಾ ನಂತರ ಅನಿವಾರ್ಯವಾಗಿ ರಾಜೀವರನ್ನೇ ಮುಂಚೂಣಿಗೆ ಕರೆತರಬೇಕಾಯ್ತು.

ಇರಲಿ, ಕಳೆದ ಕೆಲವಾರು ತಿಂಗಳುಗಳಿಂದ ಜಿನ್​ಪಿಂಗ್ ಧಾವಂತಕ್ಕೆ ಬಿದ್ದು ನಡೆಸುತ್ತಿರುವ ಕೆಲಸಗಳನ್ನು ನೋಡಿದರೆ ಬ್ರಹ್ಮ ಚಲನಿ ಹೇಳಿರುವುದು ಸತ್ಯವೆನಿಸುತ್ತದೆ. ಜಾಗತಿಕವಾಗಿ ಕ್ಸಿಯ ಈ ಕೆಲಸಗಳು ಸುದ್ದಿಯಾಗಿದ್ದು ಜ್ಯಾಕ್ ಮಾ ಕಾಣೆಯಾಗುವುದರೊಂದಿಗೆ. ಕಮ್ಯುನಿಸ್ಟ್ ಪಾರ್ಟಿಯ ನಿಷ್ಠಾವಂತ ಸದಸ್ಯರಾಗಿದ್ದ ಜ್ಯಾಕ್ ಒಂದು ರೀತಿಯಲ್ಲಿ ನೋಡುವುದಾದರೆ ಕ್ಸಿಯ ಬಲಗೈ. ಅವರ ಕಂಪನಿ ಅಲಿಬಾಬಾ ಜಗದ್ವಿಖ್ಯಾತಿ ಗಳಿಸಲು ಚೀನಾ ಸರ್ಕಾರದ ಅಘೊಷಿತ ಬೆಂಬಲವೇ ಕಾರಣ ಎಂಬುದು ಅನುಮಾನವಾಗೇನೂ ಉಳಿದಿಲ್ಲ. ಆದರೆ ಒಮ್ಮೆ ಅವರು ಜಿನ್​ಪಿಂಗ್ ಸರ್ಕಾರವನ್ನು ಟೀಕಿಸಿದರು ಎಂಬಷ್ಟೇ ಕಾರಣಕ್ಕೆ ಅವರನ್ನು ಮಾಯ ಮಾಡಲಾಯ್ತು. ಮೂರೇ ತಿಂಗಳಲ್ಲಿ ಅಲಿಬಾಬಾ ಕಂಪನಿಯನ್ನು ಸ್ಟಾಕ್ ಮಾರ್ಕೆಟ್​ನಿಂದ ಕಿತ್ತೆಸೆದು ಬಿಲಿಯನ್​ಗಟ್ಟಲೆ ನಷ್ಟವಾಗುವಂತೆ ಮಾಡಲಾಯ್ತು. ಅದಾದ ಮೂರೇ ತಿಂಗಳಲ್ಲಿ ಹೊಸ ಕಾನೂನುಗಳನ್ನು ಜಾರಿಗೆ ತಂದು ಟೆಕ್ನಿಕಲ್ ಸ್ಟಾಕ್ ಮಾರ್ಕೆಟ್ ಒಂದು ಟ್ರಿಲಿಯನ್​ನಷ್ಟು ನಷ್ಟ ಅನುಭವಿಸುವಂತೆ ಮಾಡಲಾಯ್ತು. ಚೀನಾದ ಮನೆ ಮಾತಾಗಿದ್ದ ಆಪ್​ವೊಂದರ ಮೇಲೆ ಜುಲೈ ತಿಂಗಳಲ್ಲಿ ಏಕಾಏಕಿ ನಿರ್ಬಂಧ ಹೇರಲಾಯ್ತು. ಇಷ್ಟಕ್ಕೇ ನಿಲ್ಲದೆ ಅಲ್ಲಿನ ಬಿಲಿಯನ್​ಗಟ್ಟಲೆ ವ್ಯವಹಾರಕ್ಕೆ ಕಾರಣವಾಗಿದ್ದ ಖಾಸಗಿ ಟ್ಯೂಷನ್​ಗಳನ್ನು ಜಿನ್​ಪಿಂಗ್ ನಿಷೇಧಿಸಿಬಿಟ್ಟರು. ಈ ಮೂಲಕ ದೊಡ್ಡ ಪ್ರಮಾಣದಲ್ಲಿ ಹಣ ಮಾಡಿಕೊಂಡಿದ್ದ ಉದ್ಯಮಿಗಳು ನೆಲಕಚ್ಚುವಂತಾಯ್ತು.

ಮೂರು ವಾರಗಳ ಹಿಂದೆ ಇದೇ ಅಂಕಣದಲ್ಲಿ ಉಲ್ಲೇಖಿಸಿದಂತೆ ಮುಂದಿನ ಸರದಿ ಎವರ್​ಗ್ರ್ಯಾಂಡಿನದಾಗಿತ್ತು. ಈ ರಿಯಲ್ ಎಸ್ಟೇಟ್ ಕಂಪನಿ ಹೇಗೆ ಮುರಿದು ಬಿತ್ತೆಂದರೆ ಜಗತ್ತನ್ನೇ ಆರ್ಥಿಕ ಪ್ರಪಾತಕ್ಕೆ ತಳ್ಳಿಬಿಡುವುದೇನೋ ಎಂದು ಹೆದರಿಕೆ ಆಗುವಷ್ಟು. ಇದರ ಹಿಂದೆಯೇ ಕ್ಸಿ ಚೀನಾದಲ್ಲಿ ಪಶ್ಚಿಮದಿಂದ ಪ್ರಭಾವಗೊಂಡಿದ್ದ ರಿಯಾಲಿಟಿ ಶೋಗಳನ್ನು ನಿಷೇಧಿಸಿದರು. ಜನರನ್ನು ಪ್ರಭಾವಿಸಬಲ್ಲಂಥ ಖ್ಯಾತನಾಮರನ್ನು ಹೇಳ ಹೆಸರಿಲ್ಲದಂತೆ ನಾಮಾವಶೇಷಗೊಳಿಸಿದರು. ಖ್ಯಾತನಾಮರನೇಕರ ವಿಡಿಯೋಗಳು ಏಕಾಏಕಿ ಯೂಟ್ಯೂಬ್​ಗಳಿಂದ ಕಾಣೆಯಾಗಿಬಿಟ್ಟವು. ಮಕ್ಕಳು ಆಡುವ ವಿಡಿಯೋ ಗೇಮ್ಳ ಮೇಲೂ ಚೌಕಟ್ಟು ಹಾಕಿ ಅದು ಚೀನಾದ ಮೌಲ್ಯಗಳನ್ನೇ ಬಿಂಬಿಸುವಂಥದ್ದಾಗಿರಬೇಕು ಎಂದುಬಿಟ್ಟರು. ಒಂದೆರಡಲ್ಲ ಹೆಚ್ಚು-ಕಡಿಮೆ ದಿನಕ್ಕೊಬ್ಬ ಸಿರಿವಂತ ಅಥವಾ ಒಂದು ಕಂಪನಿಯ ಮೇಲೆ ಜಿನ್​ಪಿಂಗ್ ತಂಡ ಮುಗಿಬೀಳುತ್ತಿದೆ. ಟೆನ್​ಸೆಂಟ್, ಎವರ್​ಗ್ರಾ್ಯಂಡ್, ಮೇಟ್ವಾನ್, ಫುಲ್​ಟ್ರಕ್ ಅಲಯನ್ಸ್, ಕಾಂಟ್ರೂಸ್... ಸಾಲುಸಾಲಾಗಿ ಅನೇಕ ಕಂಪನಿಗಳು ಬಾಗಿಲು ಮುಚ್ಚಿವೆ.

ಏಕೆ ಹೀಗೆ? 2022ಕ್ಕೆ ಕ್ಸಿ ಅವಧಿ ಮುಗಿಯಲಿದೆ. ಕಮ್ಯುನಿಸ್ಟ್ ಪಾರ್ಟಿಯ ನಿಯಮ ಒಬ್ಬರಿಗೆ ಎರಡು ಅವಧಿ ಮಾತ್ರ. ಕ್ಸಿ ಅದನ್ನು ಬದಲಾಯಿಸಿಯಾಗಿದೆ. ಜೀವಿತಾವಧಿಯ ಉದ್ದಕ್ಕೂ ಒಬ್ಬ ವ್ಯಕ್ತಿ ಈಗ ಅಧ್ಯಕ್ಷನಾಗಿರಬಹುದು ನಿಜ. ಆದರೆ 2022ರಲ್ಲಿ ಪಾಲಿಟ್ ಬ್ಯೂರೋ ಅವಧಿ ಮುಗಿಯಲಿರುವುದರಿಂದ ಹೊಸ ಸದಸ್ಯರ ಆಯ್ಕೆಯಾಗುತ್ತದೆ. ಆಗ ಜಿನ್​ಪಿಂಗ್ ಭವಿಷ್ಯ ಡೋಲಾಯಮಾನವಾಗುವ ಸಾಧ್ಯತೆಯಿದೆ. ಈಗಿನಿಂದಲೇ ತನ್ನ ವಿರುದ್ಧ ಪಿತೂರಿ ನಡೆಸಬಹುದಾದವರ, ಜನರ ಮೇಲೆ ಪ್ರಭಾವ ಬೀರಬಹುದಾದವರ ಪಟ್ಟಿ ಮಾಡಿ ಮಟ್ಟ ಹಾಕುತ್ತಿದ್ದಾರೆ.

ಇಷ್ಟಕ್ಕೂ ಕ್ಸಿ ಸುಲಭವಾಗಿ ಈ ಜಾಗಕ್ಕೆ ಬಂದವರೇನಲ್ಲ. ತಂದೆ ಕಮ್ಯುನಿಸ್ಟ್ ಪಾರ್ಟಿಯ ಸದಸ್ಯರಾಗಿದ್ದರು. ಆದರೆ ಭಿನ್ನ ಭಿನ್ನ ಕಾರಣಗಳಿಗೆ ಅವರನ್ನು ಕ್ರಾಂತಿ ವಿರೋಧಿ ಎಂದು ಕರೆದು ಹೊರದಬ್ಬಲಾಗಿತ್ತು. ಕ್ಸಿ ಚಿಕ್ಕ ವಯಸ್ಸಿನಲ್ಲೇ ಪಕ್ಷದ ಸಂಪರ್ಕಕ್ಕೆ ಬಂದರಾದರೂ ನಿಯಮಗಳಿಗೆ ಬದ್ಧರಾಗಿ ನಡೆದುಕೊಳ್ಳಲಾಗದೆ ಕೊಟ್ಟ ಜವಾಬ್ದಾರಿಯಿಂದ ನುಣುಚಿಕೊಂಡಿದ್ದರು. ಹೀಗಾಗಿಯೇ ಕ್ಸಿಗೆ ಹಳ್ಳಿಗಳಲ್ಲಿ ರೈತರೊಂದಿಗೆ ಬದುಕುವ ಶಿಕ್ಷೆ ನೀಡಲಾಗಿತ್ತು. ಅಲ್ಲಿ ಕೆಲಸ ಮಾಡುತ್ತ ನಿಧಾನವಾಗಿ ಮೇಲೇರುತ್ತ ಬಂದ ಕ್ಸಿ ಪಕ್ಷದಲ್ಲಿ ಸ್ಥಾನ ಗಿಟ್ಟಿಸಿಕೊಂಡರು. ಕಾರ್ಯಕ್ಷಮತೆಯಿಂದ ಮೇಲೇರುತ್ತ ಹೋದರು. 2012ರಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗುವ ವೇಳೆಗೆ ಕ್ಸಿಗೆ ಅವರ ಅಧಿಕಾರಾವಧಿಯ ಉದ್ದೇಶ ಸ್ಪಷ್ಟವಾಗಿತ್ತು. ಚೀನಾದ ಜನರ ಪ್ರೇಮವನ್ನು ಗಳಿಸಿ ಮಾವೋನಂತೆ ಶಾಶ್ವತವಾದ ಸ್ಥಾನವನ್ನು ಗಿಟ್ಟಿಸಬೇಕು ಎಂದು ನಿಶ್ಚಯಿಸಿಬಿಟ್ಟಿದ್ದರು. ರಷ್ಯಾದಲ್ಲಿ ಗೋರ್​ಬಚೇವ್ ಸರ್ಕಾರಿ ಸಂಸ್ಥೆಗಳಲ್ಲಿ ಪಾರದರ್ಶಕತೆಯನ್ನು ತಂದು ಸರ್ಕಾರದ ತಪು್ಪಗಳನ್ನು ಟೀಕಿಸುವ ಅಧಿಕಾರವನ್ನು ಜನರಿಗೆ ಕೊಟ್ಟರಲ್ಲ, ಆ ತಪು್ಪ ಮಾಡಲೇಬಾರದೆಂದು ಜಿನ್​ಪಿಂಗ್ ನಿಶ್ಚಯಿಸಿದರು. ಜೊತೆಗೆ ಮಾವೋ ಜನರೊಂದಿಗೆ ಬೆಳೆಸಿಕೊಂಡಿದ್ದ ಭಾವನಾತ್ಮಕ ಸಂಬಂಧವನ್ನು ಬೆಳೆಸಿಕೊಳ್ಳುವ ಮತ್ತು ರಾಷ್ಟ್ರೀಯತೆಯ ಚೈತನ್ಯವನ್ನು ಜಾಗೃತಗೊಳಿಸುವ ಮಾರ್ಗವನ್ನು ಆರಿಸಿಕೊಂಡರು. ಅದಕ್ಕೆಂದೇ ಆರಂಭದಲ್ಲಿಯೇ ಭ್ರಷ್ಟ ಅಧಿಕಾರಿಗಳನ್ನು ಗುರುತಿಸಿ ಹೊರದಬ್ಬುವ ಕೆಲಸ ಆರಂಭಿಸಿದ್ದು. ಕ್ಸಿ ಉದ್ದೇಶ ಸ್ಪಷ್ಟವಾಗಿತ್ತು. ಸರ್ಕಾರ ಕಮ್ಯುನಿಸ್ಟ್ ಪಾರ್ಟಿಯ ಕೈಲಿರಬೇಕು. ಅದಕ್ಕೆ ಕಮ್ಯುನಿಸ್ಟ್ ಪಾರ್ಟಿ ಬಲವಾಗಿರಬೇಕು. ಪಕ್ಷದ ವ್ಯಕ್ತಿಗಳಲ್ಲಿರಬಹುದಾದ ನ್ಯೂನತೆಗಳು ಸರ್ಕಾರದ ಹಿಡಿತ ತಪ್ಪಲು ಕಾರಣವಾಗಬಾರದು. ಹೀಗಾಗಿಯೇ 2019ರ ವೇಳೆಗೆ ಐದೂವರೆ ಲಕ್ಷ ಪಕ್ಷದ ಸದಸ್ಯರ ಮತ್ತು ಸರ್ಕಾರಿ ನೌಕರರ ವಿಚಾರಣೆ ನಡೆಸಿ ಹೆಚ್ಚು-ಕಡಿಮೆ ಐದು ಲಕ್ಷ ಜನರಿಗೆ ಭಿನ್ನ-ಭಿನ್ನ ಸ್ವರೂಪದ ಶಿಕ್ಷೆ ವಿಧಿಸಲಾಗಿತ್ತು. ಹೊರದೇಶಗಳಲ್ಲಿದ್ದ ಸುಮಾರು 800 ಮಂದಿಯನ್ನು ಎಳಕೊಂಡು ಬರಲಾಗಿತ್ತು. ಬಲು ಪ್ರಭಾವಿಯಾಗಿರುವ ಪಾಲಿಟ್ ಬ್ಯೂರೊ ಸದಸ್ಯರನ್ನೂ, ಅವರ ಮಕ್ಕಳನ್ನೂ ಬಿಟ್ಟಿರಲಿಲ್ಲ. ಇದು ಸಹಜವಾಗಿಯೇ ಜನಸಾಮಾನ್ಯರಲ್ಲಿ ಕ್ಸಿ ಬಗೆಗಿನ ಗೌರವವನ್ನು ಹೆಚ್ಚಿಸಿಬಿಟ್ಟಿತು. ಇದರಿಂದಾಗಿಯೇ ಕ್ಸಿ ಹೇರಿದ ಕಠಿಣ ಚೌಕಟ್ಟುಗಳನ್ನು ಜನ ಪ್ರೀತಿಯಿಂದಲೇ ಒಪ್ಪಿಕೊಳ್ಳುವಂತಾಯ್ತು. ಅಧಿಕಾರಕ್ಕೆ ಬರುವ ಮುನ್ನವೇ ತಮ್ಮ ಆಲೋಚನೆ ಸ್ಪಷ್ಟಪಡಿಸಿದ್ದರು ಜಿನ್​ಪಿಂಗ್. ನಾಗರಿಕ ಹಕ್ಕುಗಳು, ನ್ಯಾಯ ಸ್ವಾತಂತ್ರ್ಯ, ವೈಯಕ್ತಿಕ ಸ್ವಾತಂತ್ರ್ಯಗಳ ಕುರಿತಂತೆ ಯಾರೂ ಮಾತನಾಡಬಾರದು ಅಂತ. ಅಧ್ಯಕ್ಷರಾದ ಮೇಲೆ ಅದನ್ನು ಬಲವಾಗಿ ಜಾರಿಗೊಳಿಸಿದರು. ಅದಾಗಲೇ ಇಂಟರ್​ನೆಟ್​ನ ಯುಗ ಬಲಗೊಂಡಿತ್ತು. ಕಮ್ಯುನಿಸ್ಟ್ ಪಕ್ಷ ಗೂಗಲ್, ಫೇಸ್​ಬುಕ್, ಇತ್ಯಾದಿಗಳು ಒಳ ಕಾಲಿಡದಂತೆ ನೋಡಿಕೊಂಡಿತು. ಕ್ಸಿ ಅದನ್ನು ಇನ್ನೂ ಹೆಚ್ಚು ಬಲಗೊಳ್ಳುವಂತೆ ಮಾಡಿದರು.

ಆರಂಭದಲ್ಲಿ ರಾಷ್ಟ್ರವನ್ನು ‘ಸೂಪರ್ ಪವರ್’ ಮಾಡುವ ಕನಸಿನಿಂದಲೇ ಚಟುವಟಿಕೆ ಗರಿಗೆದರಿದವಾದರೂ ಬರುಬರುತ್ತ ಕ್ಸಿ ಅಧಿಕಾರಕ್ಕಾಗಿ ಹಪಹಪಿಸತೊಡಗಿದರು. ಎಲ್ಲ ಅಧಿಕಾರವನ್ನು ತಮ್ಮ ಬಳಿಗೆ ಕೇಂದ್ರೀಕರಿಸಿಕೊಂಡರು. ಈಗ ಜಿನ್​ಪಿಂಗ್ ಪಕ್ಷದ ಮುಖ್ಯಸ್ಥ, ಸರ್ಕಾರದ ಮುಖ್ಯಸ್ಥ, ರಾಷ್ಟ್ರೀಯ ಸುರಕ್ಷತೆಯ ಮುಖ್ಯಸ್ಥ ಮತ್ತು ಸೈನ್ಯದ ಮುಖ್ಯಸ್ಥರು ಕೂಡ. ಅವರ ನೀತಿಗಳಿಂದಾಗಿಯೇ ಚೀನಾದ ಎಲ್ಲ ಖಾಸಗಿ ಉದ್ಯಮಿಗಳ ಮುಖ್ಯಸ್ಥರೂ ಪಕ್ಷದ ಪ್ರಮುಖರೇ ಆಗಿಬಿಟ್ಟಿದ್ದಾರೆ. ಅಧಿಕಾರವನ್ನು ಬಲವಾಗಿ ಉಳಿಸಿಕೊಳ್ಳಲು ಅವರು ಎಲ್ಲ ಪ್ರತ್ಯೇಕತೆಯ ಭಾವನೆಗಳನ್ನು ಹುಟ್ಟಿಸಬಹುದಾದವರನ್ನು ಗುರುತಿಸಿ ಮುಂಚಿತವಾಗಿಯೇ ಮಟ್ಟಹಾಕುತ್ತಿದ್ದಾರೆ. ಟಿಬೆಟ್​ನ ಜನರನ್ನು ಒಕ್ಕಲೆಬ್ಬಿಸಿ ಚೀನಾದ ಮುಖ್ಯಭೂಮಿಗೆ ಹಂಚಿಬಿಡುವ ಯೋಜನೆ ರೂಪಿಸಿಕೊಂಡಿದ್ದಾರೆ. ಉಯ್ಘುರ್ ಮುಸಲ್ಮಾನರ ಕಥೆಯಂತೂ ಕೇಳಿ ಕೇಳಿ ಸಾಕಾಗಿ ಹೋಗಿದೆ. ಮದರಸಾದಿಂದ ಹೊರತಂದು, ಮಸೀದಿಗಳನ್ನು ಧ್ವಂಸಗೊಳಿಸಿ, ಕುರಾನನ್ನು ಕಮ್ಯುನಿಸ್ಟ್ ಪಕ್ಷಕ್ಕೆ ಪೂರಕವಾಗಿ ಪುನರ್​ರಚಿಸಿ ಮುಸಲ್ಮಾನನನ್ನು ಮುಸಲ್ಮಾನನೇ ಆಗಿಲ್ಲದಂತೆ ಮಾಡಿಬಿಡುವ ಪ್ರಯತ್ನವೂ ನಡೆದಿದೆ!

ಮಂಗೋಲಿಯನ್ ಪ್ರಾಂತದವರು ಖುಷಿಯಾಗಿಲ್ಲ. ಚೀನೀ ಭಾಷೆ ಮ್ಯಾಂಡರಿನ್​ನನ್ನು ಎಲ್ಲರ ಮೇಲೆ ಹೇರುವ ಪ್ರಯತ್ನ ಕ್ಸಿ ಆರಂಭಿಸಿದಾಗ ಜೋರಾಗಿ ಪ್ರತಿಭಟಿಸಿದ್ದು ಈ ಪ್ರಾಂತವೇ. ಕೊನೆಗೆ ಅಲ್ಲಿ ದ್ವಿಭಾಷಾ ಸೂತ್ರಕ್ಕೆ ಒಪ್ಪಿಗೆ ನೀಡಲಾಯ್ತು. ಈ ಸೂತ್ರದ ಸಮರ್ಥಕರನ್ನು ಕ್ಸಿ ರಾಷ್ಟ್ರವಿರೋಧಿಗಳು ಎಂದೇ ಭಾವಿಸುತ್ತಾರೆ. ನಮ್ಮಲ್ಲಿ ತ್ರಿಭಾಷಾ ಸೂತ್ರವಿದ್ದಾಗಲೂ ಭಾಷೆಯೊಂದರ ಹೇರಿಕೆ ಎಂದು ಕರೆಯುವ ಜನ ಸ್ವಲ್ಪ ಕಾಲ ಚೀನಾದ ಈ ಪ್ರಾಂತ್ಯಗಳಿಗೆ ಹೋಗಿಬಂದರೆ ಪರಿಸ್ಥಿತಿ ಅರಿವಾದೀತು. ಚೀನಾದ ವಿಶ್ವವಿದ್ಯಾಲಯಗಳು ಮತ್ತು ಎಲ್ಲ ಕಾಲೇಜುಗಳು ಕಮ್ಯುನಿಸ್ಟ್ ಪಕ್ಷದ ವಿರುದ್ಧ ಸೊಲ್ಲೆತ್ತುವಂತಿಲ್ಲ. ಅಪ್ಪಿ-ತಪ್ಪಿ ಮಾತನಾಡಿದರೆ ಅಂತಹ ವಿಶ್ವವಿದ್ಯಾಲಯವೇ ಇರುವುದಿಲ್ಲ. 2019ರಲ್ಲಿ ಅರ್ಥಶಾಸ್ತ್ರಕ್ಕೆ ಸಂಬಂಧಪಟ್ಟ ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಬ್ಬರು ಕ್ಸಿ ಆಡಳಿತಕ್ಕೆ ವಿರುದ್ಧವಾಗಿ ಮಾತನಾಡಿದರೆಂಬ ಒಂದೇ ಕಾರಣಕ್ಕೆ ಆ ವಿವಿಯನ್ನು ಮುಚ್ಚಿಯೇಬಿಡಲಾಗಿತ್ತು. ಈಗಂತೂ ಅನೇಕ ವಿಶ್ವವಿದ್ಯಾಲಯಗಳ ಪ್ರಮುಖರು ಕಮ್ಯುನಿಸ್ಟ್ ಪಾರ್ಟಿಯ ಸದಸ್ಯರೇ ಆಗಿಬಿಟ್ಟಿದ್ದಾರೆ. ಹೀಗಾಗಿ ಕಾಲೇಜುಗಳ ಶಿಕ್ಷಣವೂ ಪಕ್ಷದ ಸಿದ್ಧಾಂತದ ವಿಸõತ ಭಾಗವಾಗಿ ಉಳಿದುಬಿಟ್ಟಿದೆ. ಈ ರೀತಿಯ ಶಿಕ್ಷಣ ಪಡೆದು ವಿದೇಶಗಳಿಗೆ ಹೋಗುವ ವಿದ್ಯಾರ್ಥಿಗಳು ಆಯಾ ರಾಷ್ಟ್ರಗಳ ವಿರುದ್ಧವಾಗಿ ಕೆಲಸ ಮಾಡುವ ಪ್ರಜೆಗಳಾಗಿಯೋ ಅಥವಾ ಚೀನಾದ ಪರ ದುಡಿಯುವ ಏಜೆಂಟುಗಳಾಗಿಯೋ ಕೆಲಸ ಮಾಡುತ್ತಾರೆ. ಟ್ರಂಪ್ ಅವಧಿಯ ಕಾಲಕ್ಕೆ ಅಮೆರಿಕ ಈ ಬಗೆಯ ಅನೇಕ ವರದಿಗಳನ್ನು ಪ್ರಕಟಿಸಿತು. ಆಸ್ಟ್ರೇಲಿಯಾದಲ್ಲೂ ಚೀನೀ ವಿದ್ಯಾರ್ಥಿಗಳ ಕುರಿತ ಅಭಿಪ್ರಾಯ ಒಳ್ಳೆಯದ್ದಿಲ್ಲ!

ಕ್ಸಿ ಅವಧಿಯ ಕಾಲಕ್ಕೆ ಆರ್ಥಿಕವಾಗಿ ಸಾಕಷ್ಟು ಬೆಳೆದಿರುವ ಚೀನಾ ತನ್ನ ಸಿದ್ಧಾಂತವನ್ನು ಬಲಿಕೊಟ್ಟಿದೆ. ಸಮಾನ ಸಂಪತ್ತಿನ ವಕೀಲಿಬಾಜಿ ಮಾಡುವ ಕಮ್ಯುನಿಸ್ಟರು ಚೀನಾದಲ್ಲಿ ಸಂಪತ್ತಿನ ಧ್ರುವೀಕರಣದ ಕುರಿತಂತೆ ಒಮ್ಮೆ ಅಧ್ಯಯನ ಮಾಡಿದರೊಳಿತು. ಕೆನೆಪದರದಲ್ಲಿರುವ ಶೇಕಡ ಒಂದರಷ್ಟು ಸಿರಿವಂತರು ಚೀನಾದ ಶೇಕಡ 30ರಷ್ಟು ಸಂಪತ್ತಿನ ಒಡೆಯರಾಗಿದ್ದಾರೆ. ಅದೇ ವೇಳೆಗೆ ತಳಮಟ್ಟದ ಶೇ.25 ಮಂದಿ ಚೀನಾದ ಒಟ್ಟೂ ಸಂಪತ್ತಿನ ಶೇಕಡ ಒಂದರಷ್ಟನ್ನು ಮಾತ್ರ ಅನುಭವಿಸುತ್ತಿದ್ದಾರೆ. ಈ ವೈರುಧ್ಯ ಚೀನಿಯರನ್ನು ಸಾಕಷ್ಟು ಕಾಡುತ್ತಿದೆ. ಮೇಲ್ನೋಟಕ್ಕೆ ಖಾಸಗಿ ಟ್ಯೂಷನ್​ಗಳನ್ನು ನಿಷೇಧಿಸಿ ಬಡವರಿಗೆ ಒಳಿತು ಮಾಡಿದ್ದೇನೆ ಎಂದು ಕ್ಸಿ ಹೇಳಿಕೊಳ್ಳಬಹುದೇನೋ. ಆದರೆ ಒಳ್ಳೆಯ ಶಿಕ್ಷಣಕ್ಕಾಗಿ ಉಪಾಧ್ಯಾಯರನ್ನು ಮನೆಗೇ ಕರೆಸಿಕೊಳ್ಳಬಲ್ಲಷ್ಟು ಸಿರಿವಂತಿಕೆ ಇರದಿರುವುದರಿಂದ ಜನರು ಹೆಚ್ಚು ಸಂಕಷ್ಟಕ್ಕೆ ಒಳಗಾಗಲಿದ್ದಾರೆ. ಸಂಪತ್ತನ್ನು ಒಟ್ಟುಮಾಡುವ ಧಾವಂತದಲ್ಲಿ ಪರಿಸರ ಹದಗೆಟ್ಟಿದೆ. ಕಾರ್ಬನ್ ಎಮಿಷನ್ ಲೆಕ್ಕವಿಲ್ಲದಷ್ಟು ನಡೆಯುತ್ತಿದೆ. ಚೀನಾದ ಗಾಳಿ, ನೀರು, ನೆಲ ಯಾವುದೂ ಸ್ವಚ್ಛವಾಗಿ ಉಳಿದಿಲ್ಲ.

ಇಷ್ಟೇ ಅಲ್ಲ, ಕ್ಸಿಯ ಮಹತ್ವಾಕಾಂಕ್ಷೆಯಾದ ‘ಬೆಲ್ಟ್ ಅಂಡ್ ರೋಡ್’ ಯೋಜನೆ ಹಾದಿ ತಪು್ಪತ್ತಿದೆ. ಸಾಕಷ್ಟು ಎಲೆಕ್ಟ್ರಾನಿಕ್ ಚಿಪು್ಪಗಳು ಸಿಗದೇ ಅವರ ಆರ್ಥಿಕತೆಯ ಕೇಂದ್ರಬಿಂದು ಕುಸಿಯುವಂತೆ ಕಾಣುತ್ತಿದೆ. ವುಹಾನ್ ವೈರಸ್ ಹಬ್ಬಿದ ನಂತರ ಆರ್ಥಿಕತೆ ಕುಸಿದು ಜನರು ಬೀದಿಗೆ ಬರಲಾರಂಭಿಸಿದ್ದಾರೆ. ಕೋವಿಡ್ ನಿರ್ವಹಣೆಯಲ್ಲಿ ತಾನು ಸೋತಿರುವುದಲ್ಲದೆ ಜಗತ್ತಿನಲ್ಲಿ ತನಗಿದ್ದ ಗೌರವವನ್ನೂ ಚೀನಾ ಕಳೆದುಕೊಂಡಿದೆ. ಈ ಎಲ್ಲ ತಪು್ಪಗಳನ್ನು ಮುಚ್ಚಿಕೊಳ್ಳಲು ಕ್ಸಿ ಸಿರಿವಂತರ ಮೇಲೆ ದಾಳಿ ಮಾಡುತ್ತಿದ್ದಾರೆ. ಆ ಮೂಲಕವಾದರೂ ಜನರ ಪ್ರೀತಿಯನ್ನು ಉಳಿಸಿಕೊಳ್ಳುವ ಪ್ರಯತ್ನ ಅವರದ್ದು. ಹೀಗಾಗಿಯೇ ಜನರ ಗಮನವನ್ನು ತೈವಾನಿನತ್ತ, ದಕ್ಷಿಣ ಚೀನಾ ಸಮುದ್ರದತ್ತ, ಭಾರತದ ಗಡಿ ಸಮಸ್ಯೆಯತ್ತ, ಇಂಡೋ-ಪೆಸಿಫಿಕ್ ಪ್ರದೇಶದತ್ತ ತಿರುಗಿಸಲು ಯತ್ನಿಸುತ್ತಿದ್ದಾರೆ. ಅವರ ವಿರುದ್ಧ ಒಟ್ಟಾಗುತ್ತಿರುವ ಜನರ ಭಾವನೆಯನ್ನು ಇತ್ತ ತಿರುಗಿಸಿ ತಾವು ಉಳಿದುಕೊಳ್ಳುವ ಪ್ರಯತ್ನ. ಈ ಬಾರಿ ಇದು ಸಾಧ್ಯವಾಗುವಂತೆ ಕಾಣುತ್ತಿಲ್ಲ. ಜಿನ್​ಪಿಂಗ್ ಸಾಕಷ್ಟು ಹೆದರಿದ್ದಾರೆ. ಒಂದು ದಿನವೂ ಚೀನಾ ಬಿಟ್ಟಿರುವ ಧೈರ್ಯವನ್ನು ಅವರು ಈಗ ಮಾಡುತ್ತಿಲ್ಲ!

ಇತ್ತ ಭಾರತ ಬೆಳವಣಿಗೆಯತ್ತ ದಾಪುಗಾಲಿಡುತ್ತಿದೆ. ಜನಸಾಮಾನ್ಯರ ಬದುಕನ್ನು ಸರಳಗೊಳಿಸುವ ಪ್ರಯತ್ನ ಒಂದೆಡೆ ನಡೆಯುತ್ತಿದ್ದರೆ ಮತ್ತೊಂದೆಡೆ ಅಂತಾರಾಷ್ಟ್ರೀಯ ಉದ್ದಿಮೆಗಳನ್ನು ಭಾರತಕ್ಕೆ ಸೆಳೆದು ಆರ್ಥಿಕ ಶಕ್ತಿಯಾಗಿಸುವ ಪ್ರಯತ್ನವೂ ಇದೆ. ಜೊತೆಗೆ ಭಾರತೀಯತೆಯನ್ನು ಉಳಿಸಿ, ಬೆಳೆಸುವ ಪ್ರಯತ್ನವೂ ಜೋರಾಗಿ ನಡೆಯುತ್ತಿದೆ. ಬರಲಿರುವ ಕಾಲಘಟ್ಟ ಭಾರತದ್ದೇ ಎಂದು ಎಲ್ಲರೂ ಕಣ್ಣಗಲಿಸಿಕೊಂಡು ಕಾಯುತ್ತಿರುವುದು ಈ ಕಾರಣಕ್ಕಾಗಿಯೇ.

(ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net