

ಕೆಲವು ದಿನಗಳ ಹಿಂದೆ ಡೆನ್ಮಾರ್ಕ್ ತಾಂತ್ರಿಕ ವಿಶ್ವವಿದ್ಯಾಲಯವು ತಾನು ತಯಾರಿಸಿದ ಧ್ವನಿಸುರುಳಿಯೊಂದನ್ನು ಬಿಡುಗಡೆ ಮಾಡಿತು. ಈ ಧ್ವನಿಸುರುಳಿಯ ತಯಾರಿಕೆಗೆ ಯೂರೋಪಿಯನ್ ಬಾಹ್ಯಾಕಾಶ ಸಂಸ್ಥೆ , ಜರ್ಮನ್ ಭೂವಿಜ್ಞಾನ ಸಂಶೋಧನಾ ಕೇಂದ್ರಗಳೂ ಕೈಜೋಡಿಸಿದ್ದವು.
ಭೂವಿಜ್ಞಾನಕ್ಕೆ ಸಂಬಂಧಪಟ್ಟ ಲಾಸ್ ಚಾಂಪ್ಸ್ ಎಕ್ಸ್ಕರ್ಶನ್ ಘಟನೆಯ ವಿವರಗಳನ್ನು ತಿಳಿದುಕೊಳ್ಳುವ ಮುನ್ನ ಭೂಮಿಯ ಅಯಸ್ಕಾಂತೀಯ ಕ್ಷೇತ್ರಗಳ ಕುರಿತು ಅರಿತುಕೊಳ್ಳುವುದು ಸೂಕ್ತ. ಸೌರಮಂಡಲದಲ್ಲಿ ಸುತ್ತುತ್ತಿರುವ ಅನೇಕ ಗ್ರಹಗಳು ತಮ್ಮ ಸುತ್ತಲೂ ಅಯಸ್ಕಾಂತೀಯ ಕ್ಷೇತ್ರಗಳನ್ನು ಸೃಷ್ಟಿಸಿಕೊಂಡಿರುತ್ತವೆ. ಇದಕ್ಕೆ ಕಾರಣ ಆ ಗ್ರಹಗಳ ಒಡಲಿನಲ್ಲಿ ಸುತ್ತುತ್ತಿರುವ ವಿದ್ಯುತ್ತನ್ನು ಪ್ರವಹಿಸಬಲ್ಲ ದ್ರವ್ಯಗಳು. ನಮ್ಮ ಭೂಮಿಯೂ ಇಂತಹುದೇ ರಚನೆಯನ್ನು ಹೊಂದಿದೆ. ಭೂಮಿಯನ್ನು ಅಡ್ಡಲಾಗಿ ಕತ್ತರಿಸಿ ಅದರ ಸೀಳುನೋಟವನ್ನು ನೋಡುವುದಾದರೆ ಭೂಮಿಯ ಕೇಂದ್ರ ಭಾಗದಿಂದ ಸುಮಾರು ಒಂದು ಸಾವಿರದ ಇನ್ನೂರು ಕಿಮೀನಷ್ಟು ವ್ಯಾಸದ ಘನಸ್ಥಿತಿಯಲ್ಲಿರುವ ಕಬ್ಬಿಣ ಮತ್ತು ನಿಕ್ಕಲ್ ಧಾತುವಿನಿಂದ ರಚಿತವಾಗಿರುವ ಚೆಂಡು ನಮಗೆ ಕಾಣಸಿಗುತ್ತದೆ.
ಈ ಗೋಲವನ್ನು ಅಲ್ಲಿಂದ ಎರಡೂಕಾಲು ಸಾವಿರ ಕಿಮೀ ಸುತ್ತಳತೆಯವರೆಗೆ ನಿಕ್ಕಲ್, ಕಬ್ಬಿಣದ ಜೊತೆಗೆ ಇತರ ಕೆಲವು ಮೂಲಧಾತುಗಳನ್ನು ಹೊಂದಿರುವ ದ್ರವ್ಯರಾಶಿಯು ಸುತ್ತುವರೆದಿದೆ. ತದನಂತರ ಈ ದ್ರವ್ಯರಾಶಿಯನ್ನು ಇತರ ಮೂಲಧಾತುಗಳಿರುವ ಪದರಗಳು ಆವರಿಸಿಕೊಂಡಿವೆ. ಕೇಂದ್ರಸ್ಥಾನದಲ್ಲಿರುವ ಕಬ್ಬಿಣದ ಚೆಂಡನ್ನು ಸುತ್ತುವರೆದಿರುವ ಸುಮಾರು 5-6 ಸಾವಿರ ಡಿಗ್ರಿಯಷ್ಟು ತಾಪಮಾನವನ್ನು ಹೊಂದಿರುವ ದ್ರವ್ಯರೂಪದಲ್ಲಿರುವ ಮೂಲಧಾತುಗಳು ಆ ಚೆಂಡಿನ ಸುತ್ತಲೂ ಸುತ್ತುತ್ತವೆ. ಇದಕ್ಕೆ ಎರಡು ಪ್ರಮುಖ ಕಾರಣಗಳಿವೆ. ಮೊದಲನೆಯದು ಭೂಮಿಯ ಪ್ರದಕ್ಷಿಣೆ ಮತ್ತು ಎರಡನೆಯದು ಬಿಸಿ ಧಾತುದ್ರವ್ಯದಲ್ಲಿ ಜರುಗುವ ಸಂವಹನ ಕ್ರಿಯೆ.
ಈ ಸುತ್ತುವಿಕೆ ಆ ಬಿಸಿ ಧಾತುದ್ರವ್ಯದಲ್ಲಿ ವಿದ್ಯುತ್ ಪ್ರವಹಿಸುವಂತೆ ಮಾಡುತ್ತದೆ. ಈ ಪ್ರಕ್ರಿಯೆಯ ಕಾರಣಕ್ಕೆ ಸುತ್ತುತ್ತಿರುವ ವಿದ್ಯುತ್ ಕ್ಷೇತ್ರದ ಸಂಪರ್ಕದಲ್ಲಿರುವ ಭೂಮಿಯ ಮಧ್ಯದಲ್ಲಿರುವ ಕಬ್ಬಿಣದ ಚೆಂಡು ಅಯಸ್ಕಾಂತವಾಗಿ ಪರಿವರ್ತನೆಯಾಗುತ್ತದೆ. ಜಿಯೋ ಜನರೇಟರ್ ಯಾನೆ ಭೌಗೋಳಿಕ ಉತ್ಪಾದನಾ ಯಂತ್ರವೆಂದೇ ಹೇಳಲಾಗುವ ಈ ವ್ಯವಸ್ಥೆಯ ಕಾರಣ ಭೂಮಿಯ ಸುತ್ತಲೂ ಅಯಸ್ಕಾಂತೀಯ ಕ್ಷೇತ್ರಗಳು ಆವರಿಸಿಕೊಳ್ಳುವ ಜೊತೆಗೆ ಅಯಸ್ಕಾಂತೀಯ ಧ್ರುವಗಳೂ ಸೃಷ್ಟಿಯಾಗುತ್ತವೆ.
ಭೂಮಿಯನ್ನು ಸುತ್ತುವರೆದಿರುವ ಅಯಸ್ಕಾಂತೀಯ ಕ್ಷೇತ್ರಗಳಿಂದ ನಮಗೆ ಹಲವು ಪ್ರಯೋಜನಗಳಿವೆ. ಸೂರ್ಯನಿಂದ ಭೂಮಿಯತ್ತ ಹರಿದು ಬರುವ ವಿಕಿರಣಗಳನ್ನು ತಡೆದು ಭೂಜೀವಿಗಳಿಗೆ ಅವುಗಳ ಅಪಾಯದಿಂದ ರಕ್ಷಿಸುತ್ತವೆ. ಅಂದರೆ ಒಂದರ್ಥದಲ್ಲಿ ಇಡೀ ಭೂಮಿಗೆ ಲೇಪಿಸಿದ ಸನ್ಸ್ಕ್ರೀನ್ ತರಹ ಇವು ಕೆಲಸ ಮಾಡುತ್ತವೆ. ಸೂರ್ಯನ ಹೊರಮೇಲ್ಮೈಯ ಜ್ವಾಲೆಗಳು ಉಗುಳುವ ಸೂರ್ಯಮಾರುತಗಳ ಜೊತೆಗಂತೂ ಅಯಸ್ಕಾಂತೀಯ ಕ್ಷೇತ್ರಗಳ ಜಟಾಪಟಿ ಬಿಡದೇ ನಡೆಯುತ್ತಲೇ ಇರುತ್ತದೆ. ಹೀಗಾಗಿ ಸೂರ್ಯನನ್ನು ಎದುರಿಸುತ್ತಿರುವ ಭೂಮಿಯ ಅರ್ಧ ಭಾಗದ ಆಯಸ್ಕಾಂತೀಯ ಕ್ಷೇತ್ರವು ಯಾವತ್ತೂ ಯುದ್ಧದ ಬರಿಗಾಲಿನ ಸೈನಿಕರ ಥರ ಮುಂಚೂಣಿಯಲ್ಲಿ ನಿಂತು ಈ ಒತ್ತಡವನ್ನು ಎದುರಿಸುತ್ತಾ ಆಗಾಗ ಹಿನ್ನಡೆಯನ್ನು ಕಂಡರೂ ಮತ್ತೆ ಎದ್ದು ನಿಂತು ತನ್ನ ಮೂಲಸ್ಥಾನಕ್ಕೆ ಬರುವ ಪ್ರಯತ್ನವನ್ನು ಮಾಡುತ್ತಲೇ ಇರುತ್ತವೆ.
ಸಾಮಾನ್ಯವಾಗಿ ಅಯಸ್ಕಾಂತೀಯ ಧ್ರುವಗಳು ಭೂಮಿಯ ಭೌಗೋಳಿಕ ಉತ್ತರ ಮತ್ತು ದಕ್ಷಿಣ ಧ್ರುವಗಳ ಆಸುಪಾಸಿನಲ್ಲೇ ಆದರೆ ವಿರುದ್ಧ ದಿಕ್ಕಿನಲ್ಲಿರುತ್ತವೆ. ಅಂದರೆ ಭೌಗೋಳಿಕ ಉತ್ತರದ ಬಳಿ ಅಯಸ್ಕಾಂತೀಯ ದಕ್ಷಿಣ ಮತ್ತು ಭೌಗೋಳಿಕ ದಕ್ಷಿಣದ ಬಳಿ ಅಯಸ್ಕಾಂತೀಯ ಉತ್ತರ ಧ್ರುವವು ಸ್ಥಿತವಾಗಿರುತ್ತದೆ. ಧ್ರುವಗಳ ವ್ಯವಸ್ಥೆ ಹೀಗಿದ್ದರೂ ಜೊತೆಯಾಗಿಯಂತೂ ಇವು ಖಂಡಿತ ಇರುವುದಿಲ್ಲ. ಸೂರ್ಯನಿಂದ ಬರುವ ಮಾರುತಗಳೊಡನೆ ದಿನನಿತ್ಯ ನಡೆಯುವ ಜಂಗೀಕುಸ್ತಿಯಲ್ಲಿ ಭೂಮಿಯ ಅಯಸ್ಕಾಂತೀಯ ಕ್ಷೇತ್ರದ ವ್ಯಾಪ್ತಿ ಮತ್ತು ಶಕ್ತಿ ಕುಗ್ಗುವುದು, ಮತ್ತೆ ಮಾಮೂಲಾಗುವುದು ನಡೆಯುತ್ತಲೇ ಇರುವುದರಿಂದ ಕೆಲವೊಮ್ಮೆ ಈ ಪ್ರಕ್ರಿಯೆಯಲ್ಲಿ ಅಯಸ್ಕಾಂತೀಯ ಧ್ರುವಗಳು ತಮ್ಮ ಮೂಲಸ್ಥಾನದಿಂದ ಅತ್ತಿತ್ತ ಸರಿಯುತ್ತಲೇ ಇರುತ್ತವೆ.
ಈ ಸರಿಯುವಿಕೆಯಿಂದ ಜಿಪಿಎಸ್ ಮತ್ತು ಅಯಸ್ಕಾಂತಿಯ ದಿಕ್ಕುಗಳಲ್ಲಿ ಕೊಂಚ ಏರುಪೇರಾಗುವುದು ಹೌದಾದರೂ ಇಂದಿನ ತಾಂತ್ರಿಕತೆ ಈ ಸಣ್ಣಪುಟ್ಟ ಸರಿಯುವಿಕೆಯನ್ನು ಸಹಿಸಿಕೊಂಡು ತಾನೇ ಸರಿಪಡಿಸಿಕೊಳ್ಳುವಷ್ಟು ಸಮರ್ಥವಾಗಿದೆ. ಆದರೆ ಈ ಸರಿಯುವಿಕೆ ಮಿತಿ ಮೀರಿ ಪೂರ್ತಿ ಅಯಸ್ಕಾಂತೀಯ ಉತ್ತರ ಮತ್ತು ದಕ್ಷಿಣ ಧ್ರುವಗಳೇ ಪಲ್ಟಿ ಹೊಡೆದು ಅದಲು ಬದಲಾಗಿ ಬಿಟ್ಟರೆ? 42 ಸಾವಿರ ವರ್ಷಗಳ ಹಿಂದೆ ಈ ಭೂಮಿಯಲ್ಲಿ ನಡೆದ ಘಟನೆಯೂ ಇದೇ.
ವಿಜ್ಞಾನಿಗಳ ಪ್ರಕಾರ ಲಾಸ್ ಚಾಂಪ್ಸ್ ಎಕ್ಸ್ಕರ್ಶನ್ ಯಾನೆ ಭೂಮಿಯ ಅಯಸ್ಕಾಂತೀಯ ಧ್ರುವಗಳು ಪಲ್ಟಿ ಹೊಡೆದು ಅದಲುಬದಲಾಗುವ ಪ್ರಕ್ರಿಯೆ ಜರುಗುವ ಸಾಧ್ಯತೆಯಿರುವುದು 2-3 ಲಕ್ಷ ವರ್ಷಗಳಿಗೊಮ್ಮೆ. ಕಳೆದ ಬಾರಿ ಇದು ಜರುಗಿದ್ದು 42 ಸಾವಿರ ವರ್ಷಗಳ ಹಿಂದೆ. ಆ ಸಮಯದಲ್ಲಿ ಅಯಸ್ಕಾಂತೀಯ ಧ್ರುವಗಳು ಅದಲುಬದಲಾಗುವ ಜೊತೆಗೆ ಭೂಮಿಯ ಅಯಸ್ಕಾಂತೀಯ ಕ್ಷೇತ್ರವು ಸಂಪೂರ್ಣ ಬಲಹೀನವಾಯಿತು.
ಈ ಕುಂದಿದ ಶಕ್ತಿಯ ಕಾರಣ ಭೂಮಿಯ ನೈಸರ್ಗಿಕ ಸನ್ಸ್ಕ್ರೀನ್ ತನ್ನ ಅಸ್ತಿತ್ವ ಕಳೆದುಕೊಂಡು ಸೂರ್ಯನಿಂದ ಬರುವ ವಿಕಿರಣಗಳು ಯಾವ ಅಡೆತಡೆಯೂ ಇಲ್ಲದೇ ಧರೆಗಪ್ಪಳಿಸಿದವು. ಹೀಗೆ ಅಯಸ್ಕಾಂತೀಯ ಧ್ರುವಗಳು ಅದಲು ಬದಲಾಗುವ ಸಾಧ್ಯತೆಯ ಕುರಿತು ವಿಜ್ಞಾನಿಗಳಿಗೆ ಅಂದಾಜಿದ್ದರೂ ಕೊನೆಯ ಬಾರಿ ಅದು ಜರುಗಿದ್ದು ಯಾವಾಗ ಎಂಬುದರ ಕುರಿತು ನಿಖರ ಸಾಕ್ಷ್ಯಗಳು ಲಭಿಸಿರಲಿಲ್ಲ. ಈ ನಿಟ್ಟಿನಲ್ಲಿ ಹಲವು ವರ್ಷಗಳಿಂದ ಸಂಶೋಧನೆ ನಡೆಯುತ್ತಲೇ ಇತ್ತು. ಈ ಹುಡುಕಾಟಕ್ಕೊಂದು ರ್ತಾಕ ಅಂತ್ಯ ಸಿಕ್ಕಿದ್ದು ನ್ಯೂಜಿಲೆಂಡ್ನ ಕಾಡೊಂದರಲ್ಲಿ ಸಿಕ್ಕ ಕೌರಿ ಮರದ ಪಳೆಯುಳಿಕೆಯ ಮೂಲಕ.
ನ್ಯೂಜಿಲೆಂಡ್ ಮೂಲದ ಕೌರಿ ಮರಗಳು ತಮ್ಮ ಗಾತ್ರ ಮತ್ತು ದೀರ್ಘಾಯುಷ್ಯಕ್ಕೆ ಹೆಸರುವಾಸಿಯಾಗಿವೆ. ಸರಾಸರಿ 50 ಮೀಟರ್ ಉದ್ದ, 5 ಮೀಟರ್ ಅಗಲ ಬೆಳೆಯುವ ಈ ವೃಕ್ಷಗಳು ದೀರ್ಘಾಯುಷಿಗಳೂ ಹೌದು. ಒಂದೂವರೆ ಸಾವಿರ ವರ್ಷ ಬಾಳುತ್ತವೆ. ಮರಮುಟ್ಟುಗಳಿಗಾಗಿ ಇವುಗಳನ್ನು ಇತ್ತೀಚೆಗೆ ಭಾರತದಲ್ಲೂ ಬೆಳೆಸಲಾಗುತ್ತಿದೆ. ಲಾಸ್ ಚಾಂಪ್ಸ್ ಎಕ್ಸ್ಕರ್ಶನ್ನಿಂದ ಭೂಮಿಯ ಮೇಲೆ ಆದ ಪರಿಣಾಮಗಳನ್ನು ಅರಿಯಲು ಸಂಶೋಧಕರು ಸೂಕ್ತ ದಾಖಲೆಯನ್ನು ಹುಡುಕುವಾಗ ಅವರಿಗೆ ಆಕಸ್ಮಾತ್ ನ್ಯೂಜಿಲೆಂಡ್ನ ನದಿತೀರದ ಕೊಚ್ಚೆಯಲ್ಲಿ ಹೂತುಹೋಗಿದ್ದ ಸುಮಾರು 45-50 ಸಾವಿರ ವರ್ಷದಷ್ಟು ಹಳೆಯ ಮರದ ಪಳೆಯುಳಿಕೆಯೊಂದು ಸಿಕ್ಕಿತು.
ಅದನ್ನು ಹೊರತೆಗೆದು ಮರದ ಕಾಂಡದ ವರ್ತಲಗಳನ್ನು ಪರೀಕ್ಷಿಸಿದಾಗ 42 ಸಾವಿರ ವರ್ಷಗಳ ಆಸುಪಾಸಿನಲ್ಲಿ ಭೂಮಿಯಲ್ಲಿ ವಿಕಿರಣದ ಪ್ರಮಾಣ ಗಣನೀಯವಾಗಿ ಏರಿದ್ದು ಕಂಡುಬಂತು. 45 ಸಾವಿರ ವರ್ಷಗಳ ಹಿಂದಿನ ಭೂಮಿ ಬರೆದಿಟ್ಟ ಡೈರಿಯಂತಿದ್ದ ಆ ಪಳೆಯುಳಿಕೆಯು ಸಂಶೋಧಕರ ವರ್ಷಗಳ ಕಾಯುವಿಕೆಗೆ ಅಂತ್ಯ ಹಾಡಿ ಹಲವು ಪ್ರಶ್ನೆಗಳಿಗೆ ಉತ್ತರ ಹೇಳಿತು. ಕೌರಿ ಮರದ ಕಾಂಡವು ಲಾಸ್ ಚಾಂಪ್ಸ್ ಎಕ್ಸ್ಕರ್ಶನ್ ಕಾಂಡದ ಬಗ್ಗೆ ನಾನಾ ವಿವರಗಳನ್ನು ಹೊರಗೆಡವಿದೆ. ಪಲ್ಟಿ ಹೊಡೆದ ಅಯಸ್ಕಾಂತೀಯ ಧ್ರುವಗಳು ಮತ್ತೆ ತಮ್ಮ ಮೂಲಸ್ಥಾನವನ್ನು ಆಕ್ರಮಿಸಲು ತೆಗೆದುಕೊಂಡಿದ್ದು ಸುಮಾರು 800 ವರ್ಷ. ಈ ಸಮಯದಲ್ಲಿ ಭೂಮಿಯ ಅಯಸ್ಕಾಂತೀಯ ಶಕ್ತಿ ತನ್ನ ಮೂಲಸಾಮರ್ಥ್ಯದ ಶೇಕಡಾ ಐದರಷ್ಟು ಕುಗ್ಗಿತ್ತು.
ಅಯಸ್ಕಾಂತೀಯ ಧ್ರುವಗಳ ಪಲ್ಟಿಯಿಂದ ಭೂಮಿಯ ಮೇಲೆ ನಡೆದ ಭಾನಗಡಿಗಳ ಕುರಿತು ವಿವಿಧ ರೀತಿಯ ವಾದಗಳಿವೆ. ವಿಕಿರಣದ ಹೆಚ್ಚುವಿಕೆ, ಓಝೆೊನ್ ವಲಯಕ್ಕೆ ಹಾನಿ, ತಾಪಮಾನ ಹೆಚ್ಚಳ ಈ ಎಲ್ಲದರ ಪರಿಣಾಮದಿಂದ ಭೂಮಿಯ ಮೇಲಿನ ಜೀವಿಗಳು ಮತ್ತು ಜಲಚರಗಳ ಜೀವನ ನರಕಸದೃಶವಾಗಿತ್ತು ಎಂಬುದು ಎಲ್ಲರೂ ಒಪ್ಪುವ ಮಾತು. ಆದರೆ ಜಾಗತಿಕ ಇತಿಹಾಸದ 42 ಸಾವಿರ ವರ್ಷಗಳ ಆಸುಪಾಸಿನ ಪುಟಗಳನ್ನು ತಿರುವಿದರೆ ಆ ಸಮಯದಲ್ಲಿ ಜರುಗಿದ ಮತ್ತೂ ಕೆಲವು ಘಟನೆಗಳಿಗೆ ಈ ಧ್ರುವಗಳ ಪಲ್ಟಿಯ ಘಟನೆ ಕಾರಣವಾಯಿತೇ ಎಂಬುದೊಂದು ಜಿಜ್ಞಾಸೆ ಕೂಡ ನಡೆಯುತ್ತಿದೆ.
ಸಂಶೋಧಕರು ಗಮನಿಸಿದಂತೆ ಆಧುನಿಕ ಮಾನವನ ಸೋದರ ಸಂಬಂಧಿಗಳಾದ ನಿಯಾಂಡರ್ತಲಗಳು ಈ ಭೂಮಿಯಿಂದ ಕಣ್ಮರೆಯಾದದ್ದು ಹೆಚ್ಚೂಕಮ್ಮಿ ಇದೇ ಸಮಯದಲ್ಲಿ. ಆಧುನಿಕ ಮಾನವ ಮತ್ತು ನಿಯಾಂಡರ್ತಲಗಳು ಸ್ವಲ್ಪ ಸಮಯದ ಕಾಲ ಈ ಭೂಮಿಯ ಮೇಲೆ ಒಟ್ಟಿಗೆ ಜೀವಿಸುತ್ತಿದ್ದರು. ಭೂಮಿಯಲ್ಲಿ ಕಂಡುಬಂದ ಗುಹಾಂತರ ಚಿತ್ರಗಳ ಪೈಕಿ ಹೆಚ್ಚಿನವು ಇದೇ ಸಮಯದಲ್ಲಿ ರಚಿತವಾಗಿವೆ. ಇವುಗಳನ್ನೆಲ್ಲ ಒಟ್ಟುಗೂಡಿಸಿ ಕೆಲ ಮೇಧಾವಿಗಳು ಹೇಳುವ ಕಥೆಯ ಸಾರವೆಂದರೆ ಆ ಸಮಯದಲ್ಲಿ ಆಧುನಿಕ ಮಾನವನು ಭೂಮಿಯ ಮೇಲೆ ಹೆಚ್ಚಿದ ಅತಿನೇರಳೆ ಕಿರಣಗಳು ಮತ್ತು ವಿಕಿರಣದ ಪ್ರಭಾವದಿಂದ ಬಚಾವ್ ಆಗಲು ಗುಹೆಗಳಲ್ಲಿ ಆಸರೆ ಪಡೆದ, ಚರ್ಮದ ಬಟ್ಟೆಗಳನ್ನು ಧರಿಸಲು ಕಲಿತ, ಮೈಮೇಲೆ ಮಣ್ಣಿನ ಲೇಪವನ್ನು ಮೆತ್ತಿಕೊಂಡ. ಕೊನೆಗೆ ಈ ಎಲ್ಲ ತಂತ್ರಗಳನ್ನು ಬಳಸಿ ಲಾಸ್ ಚಾಂಪ್ಸ್ ಎಕ್ಸ್ಕರ್ಶನ್ ಎಂಬ ದೊಡ್ಡ ಆಪತ್ತಿನಿಂದ ಬಚಾವಾದ.
ಆದರೆ ಇದ್ಯಾವುದನ್ನೂ ಬಳಸದೆ ಬೆತ್ತಲೆ ಓಡಾಡುತ್ತಿದ್ದ ಮುಗ್ಧ ನಿಯಾಂಡರ್ತಲಗಳು ನಿರ್ನಾಮವಾದರು. 40 ಸಾವಿರ ವರ್ಷಗಳ ಹಿಂದೆ ಆಸ್ಟ್ರೇಲಿಯಾದಲ್ಲಿ ಸ್ತನಿಗಳ ಸಂತತಿ ನಿರ್ನಾಮವಾಗಿರುವುದರ ಹಿಂದಿನ ಕಾರಣಗಳ ಬಗ್ಗೆ ಇನ್ನೂ ವಿಜ್ಞಾನಿಗಳಿಗೆ ಗೊಂದಲವಿದೆ. ಅಯಸ್ಕಾಂತೀಯ ಧ್ರುವಗಳ ಪಲ್ಟಿಯೂ ಅದೇ ಸಮಯದಲ್ಲಿ ಜರುಗಿದ್ದುದರಿಂದ ಇದೀಗ ಈ ಎರಡು ಘಟನೆಗಳಿಗೆ ತಳುಕು ಹಾಕುವ ವಾದಗಳೂ ಶುರುವಾಗಿವೆ.
ಈ ಪಲ್ಟಿಯು ಮುಂದೆಯೂ ಆಗಬಲ್ಲದೇ? ಇದು ಎಲ್ಲರ ಮನದಲ್ಲಿ ಮೂಡುವ ಪ್ರಶ್ನೆ. ಇದಕ್ಕುತ್ತರ- ಖಂಡಿತ ಹೌದು. ಕಳೆದ ಇನ್ನೂರು ವರ್ಷಗಳ ಇತಿಹಾಸವನ್ನು ಗಮನಿಸಿದಲ್ಲಿ ಭೂಮಿಯ ಅಯಸ್ಕಾಂತೀಯ ಶಕ್ತಿ ಶೇಕಡ 9ರಷ್ಟು ಕುಗ್ಗಿದೆ. ಈ ಕುಗ್ಗುವಿಕೆ ಒಂದು ನಿರಂತರ ಪ್ರಕ್ರಿಯೆ. ಹಾಗೆಯೇ ಆ ಪಲ್ಟಿಯೂ ಸಹ. ಆದರೆ ಇಂದಿನ ಜಮಾನಾದಲ್ಲಿ ಅಯಸ್ಕಾಂತೀಯ ಪಲ್ಟಿ ಜರುಗಿದಲ್ಲಿ ಹಿಂದಿದ್ದ ಎಲ್ಲ ಅಪಾಯಗಳ ಜೊತೆಗೆ ನಮ್ಮ ಉಪಗ್ರಹಗಳ ಮತ್ತು ದೂರಸಂಪರ್ಕ ವ್ಯವಸ್ಥೆಯ ಕಾರ್ಯಕ್ಷಮತೆಯ ಮುಂದೆ ಒಂದು ದೊಡ್ಡ ಪ್ರಶ್ನಾರ್ಥಕ ಚಿಹ್ನೆ ಮೂಡಲಿದೆ. ಆದರೆ ಇವೆಲ್ಲ ಸದ್ಯದ ಮಾತಲ್ಲ, ಲಾಸ್ ಚಾಂಪ್ಸ್ ಎಕ್ಸ್ಕರ್ಶನ್ ನೋಡಲು ಇನ್ನೂ ಅದೆಷ್ಟು ಪೀಳಿಗೆಗಳು ಕಾಯಬೇಕೋ! ಹೋಗ್ಲಿ ಬಿಡಿ, ಮಳೆ ಶುರುವಾಗಿದೆ. ಬಿಸಿಬಿಸಿ ಕಾಫಿ ಕುಡಿದು ಚಿಲ್ ಆಗಿ.
(ಲೇಖಕರು ವಿಜ್ಞಾನ, ತಂತ್ರಜ್ಞಾನ ಬರಹಗಾರರು)