

‘ಬದಲಿ ಕಾವಲುಗಾರನಿರಲಿಲ್ಲವೇ?’ ಎಂದು ಪ್ರಶ್ನಿಸಿದರು ಇನ್ಸ್ಪೆಕ್ಟರ್. ‘ಇದ್ದಾನೆ, ಆದರೆ ಬಸಣ್ಣ ನನಗೂ ಹೇಳದೆ, ಅವನಿಗೂ ತಿಳಿಸದೆ ಚಕ್ಕರ್ ಹಾಕಿದ ಕಾರಣ ನಿನ್ನೆ ರಾತ್ರಿ ಯಾವುದೇ ಕಾವಲುಗಾರನಿರಲಿಲ್ಲ. ಬ್ಯಾಂಕಿನ ತಿಜೋರಿ ಖಾಲಿಯಾದಂತೆ ಮೇಲ್ನೋಟಕ್ಕೆ ಕಾಣುತ್ತಿದೆ, ಅದರಲ್ಲಿ ಸುಮಾರು ನಾಲ್ಕು ಕೋಟಿ ರೂ ನಗದಿದ್ದಿರಬಹುದು, ಇದಲ್ಲದೆ ಸುಮಾರು ಮೂರು ಕಿಲೋ ಬಂಗಾರದ ಆಭರಣಗಳಿದ್ದವು’ ಎಂದರು ಪ್ರಕಾಶ್.
ನಾಲ್ಕು ಕೋಟಿ ಎಂದಕೂಡಲೇ ಬೆವೆತುಹೋದ ಮನೀಶ್, ಠಾಣೆಯಲ್ಲಿದ್ದ ಪೊಲೀಸ್ ಸಿಬ್ಬಂದಿಯನ್ನು ಜತೆಮಾಡಿಕೊಂಡು ಬ್ಯಾಂಕಿಗೆ ಧಾವಿಸಿದರು. ಪೇಟೆ ಬೀದಿಯಲ್ಲಿದ್ದ ಬ್ಯಾಂಕ್ನ ಮುಂಬಾಗಿಲಿನ ಷಟರ್ ತೆರೆದಿತ್ತು. ಬ್ಯಾಂಕಿನ ತಿಜೋರಿಯಿದ್ದ ರೂಮಿನ ಕೋಣೆಯೂ ತೆರೆದಿತ್ತು. ತಿಜೋರಿ ಪೂರ್ತಿ ಖಾಲಿಯಾಗಿರಲಿಲ್ಲ. ಅದರಲ್ಲಿ ಸ್ವಲ್ಪ ನಗದು ಹಣ ಇತ್ತು. ಬಂಗಾರದ ಆಭರಣಗಳನ್ನಿಟ್ಟಿದ್ದ ಕಪಾಟು ಸಂಪೂರ್ಣವಾಗಿ ಖಾಲಿಯಾಗಿತ್ತು. ಎಲ್ಲ ಬೀಗಗಳನ್ನೂ ನಕಲಿ ಕೀಲಿಕೈಗಳನ್ನು ಬಳಸಿ ತೆಗೆದದ್ದು ವಿದಿತವಾಯಿತು.
ಏತನ್ಮಧ್ಯೆ ಮನೀಶ್ ಬ್ಯಾಂಕಿನ ಇತರ ಸಿಬ್ಬಂದಿಯನ್ನು ಕರೆಸಲು ಮ್ಯಾನೇಜರ್ಗೆ ಸೂಚಿಸಿ ಏನೇನು ಕಳವಾಗಿದೆ ಎಂದು ಪಟ್ಟಿಮಾಡಲು ತಿಳಿಸಿದರು. ಮೂರೂ ಮುಕ್ಕಾಲು ಕೋಟಿ ರೂ. ನಗದು ಕಳವಾಗಿದ್ದು 6 ಲಕ್ಷ ರೂಗಳು ತಿಜೋರಿಯಲ್ಲಿಯೇ ಇದ್ದವು ಎಂದು ತಿಳಿಯಿತು. 3 ಕಿಲೋ ತೂಕದ ಬಂಗಾರದ ಆಭರಣಗಳು ಕಳವಾಗಿದ್ದವು. ಡಿ.ಎಸ್.ಪಿ, ‘ಇಷ್ಟೊಂದು ಹಣವನ್ನು ಸೂಕ್ತ ಭದ್ರತೆಯಿರದ ನಿಮ್ಮ ಬ್ಯಾಂಕಿನಲ್ಲಿ ಹೇಗಿಟ್ಟುಕೊಂಡಿರಿ?’ ಎಂದಾಗ, ‘ಈಗ ಆರ್ಥಿಕ ವರ್ಷದ ಅಂತ್ಯ ಸಮೀಪಿಸುತ್ತಿರುವುದರಿಂದ ಬಹುತೇಕ ಸಾಲಗಾರರು ಸಾಲವನ್ನು ಹಿಂದಿರುಗಿಸಿದ್ದರು. ಇದನ್ನು ಕೇಂದ್ರ ಕಚೇರಿಗೆ ರವಾನಿಸಲು ನಾನು ವಿನಂತಿಸಿದ್ದೆ. ಆದರೆ ನಗದು ಒಯ್ಯುವ ವ್ಯಾನ್ ಲಭ್ಯವಾಗದ ಕಾರಣ ನಾಳೆ, ಸೋಮವಾರ ಅದನ್ನು ಸಾಗಿಸಲಾಗುವುದೆಂದು ಮೇಲಧಿಕಾರಿಗಳು ತಿಳಿಸಿದ್ದರು’ ಎಂದು ಪ್ರಕಾಶ್ ತಿಳಿಸಿದರು.
‘ಇದು ಬ್ಯಾಂಕಿನ ನೌಕರರ ಕರಾಮತ್ತೇ ಎನ್ನುವುದರಲ್ಲಿ ಸಂಶಯವಿಲ್ಲ. ಇವರೆಲ್ಲರನ್ನೂ ಠಾಣೆಗೆ ಕರೆದೊಯ್ದು ಟೈಟ್ ಮಾಡಿ’ ಎಂದು ಸ್ಥಳಕ್ಕೆ ಬಂದಿದ್ದ ಜಿಲ್ಲಾ ಎಸ್ಪಿ ಅಧಿಕಾರಿಗಳಿಗೆ ಆದೇಶಿಸಿದರು. ಮ್ಯಾನೇಜರ್ ನಡುಗತೊಡಗಿ, ‘ಸರ್ ನನ್ನದೇನೂ ತಪ್ಪಿಲ್ಲ’ ಎನ್ನುತ್ತಾ ಎಸ್ಪಿ ಕಾಲುಹಿಡಿದ. ಏತನ್ಮಧ್ಯೆ ಶ್ವಾನವು ತಿಜೋರಿಯ ಬಳಿ ಹೋಗಿ ವಾಸನೆ ಹಿಡಿದು ಬ್ಯಾಂಕಿನ ಹೊರಗೆ ಹೋಗಿ ನಿಂತುಬಿಟ್ಟಿತು. ಆರೋಪಿಗಳು ಯಾವುದೋ ವಾಹನದಲ್ಲಿ ಹೋದಂತೆ ಕಾಣುತ್ತದೆ ಎಂದ ಶ್ವಾನದ ಹ್ಯಾಂಡ್ಲರ್. ತಿಜೋರಿ ಹಾಗೂ ತೆರೆದ ಬೀಗಗಳ ಮೇಲೆ ಒಂದು ಬೆರಳಚ್ಚು ಗುರುತೂ ಸಿಗಲಿಲ್ಲ, ಆರೋಪಿಗಳು ಕೈಗಳಿಗೆ ಗ್ಲೌಸ್ ಹಾಕಿಕೊಂಡಿರಬೇಕು, ಇಲ್ಲವೇ ಬಟ್ಟೆಯಿಂದ ಅಳಿಸಿರಬೇಕು, ಎಂದರು ಫಿಂಗರ್ ಪ್ರಿಂಟ್ ಅಧಿಕಾರಿ.
‘ಯಾವುದೇ ಬ್ಯಾಂಕುಗಳಲ್ಲಿ ಮ್ಯಾನೇಜರ್ ಅಥವಾ ಕ್ಯಾಷಿಯರ್ ತಮ್ಮ ತಮ್ಮ ಕೀಲಿಕೈಗಳನ್ನು ಬಳಸಿಯೇ ತಿಜೋರಿ ತೆಗೆಯಬೇಕು, ನಿಮ್ಮಲ್ಲಿ ಯಾವ ವ್ಯವಸ್ಥೆಯಿತ್ತು?’ ಎಂದು ಎಸ್ಪಿ ಕೇಳಿದರು. ‘ನಮ್ಮಲ್ಲೂ ಹಾಗೆಯೇ ಸರ್. ಆದರೆ ಕೆಲವೊಮ್ಮೆ ಮ್ಯಾನೇಜರ್ ಸಾಹೇಬರು ಹೊರಗೆ ಹೋಗಬೇಕಾದರೆ ನಮ್ಮಲ್ಲಿ ಯಾರಿಗಾದರೂ ತಮ್ಮ ಕೀಲಿಕೈ ಕೊಡುತ್ತಿದ್ದರು’ ಎಂದ ಕ್ಯಾಷಿಯರ್. ಎರಡೂ ಕೀಲಿಕೈಗಳೆಲ್ಲಿವೆ? ಎಂದಾಗ ಮ್ಯಾನೇಜರ್ ಅವನ್ನು ಹಾಜರುಪಡಿಸುತ್ತಾ, ನಮ್ಮ ತಿಜೋರಿ ಬ್ರಿಟಿಷರ ಕಾಲದ್ದು ಎಂದ.
ಭಾನುವಾರವಾದ್ದರಿಂದ ಬ್ಯಾಂಕಿನ ಅಕ್ಕಪಕ್ಕದಲ್ಲಿದ್ದ ಅಂಗಡಿಗಳು ಮುಚ್ಚಿದ್ದವು. ಅವುಗಳ ಮಾಲೀಕರನ್ನು ಸಂರ್ಪಸಿದಾಗ ಬ್ಯಾಂಕನ್ನು ಸಂಜೆ ಆರೂವರೆಯಿಂದ ಏಳರೊಳಗೆ ಮುಚ್ಚಲಾಗುತ್ತಿದ್ದು ಶನಿವಾರವೂ ಅದೇ ಸಮಯಕ್ಕೆ ಮುಚ್ಚಿದ್ದನ್ನು ಕಂಡೆವೆಂದರು. ಯಾವುದೇ ಅಪರಿಚಿತರು ಅಲ್ಲಿ ಕಾಣಲಿಲ್ಲವೆಂದರು. ಬ್ಯಾಂಕಿನ ಹೊರಗಡೆ ಕ್ಯಾಮರಾಗಳು ಇರಲಿಲ್ಲ. ಬ್ಯಾಂಕಿನೊಳಗಿದ್ದ ಸಿಸಿಟಿವಿ ರೆಕಾರ್ಡರನ್ನು ಹಾಳುಮಾಡಲಾಗಿತ್ತು. ಇದೊಂದು ಪೂರ್ವನಿಯೋಜಿತ ಕೃತ್ಯ ಎಂಬುದರಲ್ಲಿ ಸಂಶಯವಿರಲಿಲ್ಲ.
ಬ್ಯಾಂಕಿನ ನೌಕರರ ಕೈವಾಡವಿದ್ದ ಸಂಶಯ ಬಲವಾದಾಗ ಅವರೆಲ್ಲರನ್ನೂ ಪೊಲೀಸ್ ಠಾಣೆಗೆ ಕರೆಸಿ ಅವರೆಲ್ಲರ ಮೊಬೈಲ್ಗಳ ಹಿಂದಿನ ಎರಡು ದಿನಗಳ ಲೊಕೇಷನ್ ಪಡೆಯಲಾಯಿತು. ಅವರಲ್ಲಿ ಸಹಾಯಕ ರಾಮಕೃಷ್ಣನೊಬ್ಬನ ಮೊಬೈಲ್ ಮಾತ್ರ ಶನಿವಾರ ಸಂಜೆ 7ರಿಂದ ಬೆಳಗಿನ 7ರವರೆಗೆ ಸ್ವಿಚ್ ಆಫ್ ಆಗಿದ್ದ ಕಾರಣ ಅವನನ್ನು ತೀಕ್ಷ್ಣವಾಗಿ ಪ್ರಶ್ನಿಸಲಾಯಿತು. ಆಗ ಈ ಕೃತ್ಯ ಮಾಡಿದ್ದು ತಾನೇ ಎಂದೊಪ್ಪಿ ರಾಮಕೃಷ್ಣ (30 ವರ್ಷ) ಹೀಗೆಂದ: ‘ನಾನು ಸಮೀಪದ ಗ್ರಾಮದವನಾಗಿದ್ದು ನನಗೆ 15 ಎಕರೆ ಕಬ್ಬಿನ ಗದ್ದೆಯಿದೆ. ಬಿಕಾಂ ಬಳಿಕ ಬ್ಯಾಂಕ್ ಕೆಲಸಕ್ಕೆ ಸೇರಿದೆ. ನನಗೆ ಚಿಕ್ಕಂದಿನಿಂದಲೂ ರಾಜಕಾರಣಿಯಾಗಬೇಕು ಎನ್ನುವ ಬಯಕೆಯಿತ್ತು, ಇದಕ್ಕಾಗಿ ಕೋಟ್ಯಾನುಗಟ್ಟಲೇ ಹಣ ಬೇಕಾಗುತ್ತದೆ ಎಂದೂ ತಿಳಿದಿತ್ತು. ಇಷ್ಟು ಹಣ ಗಳಿಸುವುದು ಹೇಗೆಂದು ಯೋಚಿಸುತ್ತಿದ್ದಾಗ ವರ್ಷಾಂತ್ಯದಲ್ಲಿ ಬ್ಯಾಂಕಿನಲ್ಲಿ ಕೋಟಿಗಟ್ಟಲೆ ಹಣ ಸಂಗ್ರಹವಾಗುವುದರಿಂದ ಅದನ್ನು ಲಪಟಾಯಿಸಿದರೆ ಬಯಕೆ ಈಡೇರುತ್ತದೆ ಎಂದು ಯೋಚಿಸಿದೆ,
ಬ್ಯಾಂಕಿನ ತಿಜೋರಿಯನ್ನು ಲೂಟಿ ಮಾಡಿ ಸಿಕ್ಕಿಹಾಕಿಕೊಳ್ಳದಿರುವುದು ಹೇಗೆಂಬುದರ ಬಗ್ಗೆ ತಿಳಿಯಲು ಹಲವಾರು ಪತ್ತೆದಾರಿ ಪುಸ್ತಕಗಳನ್ನೂ ಓದಿದೆ. ಸಿನಿಮಾಗಳನ್ನು ನೋಡಿದೆ. ನಮ್ಮ ಮ್ಯಾನೇಜರ್ ವೈಯಕ್ತಿಕ ಕೆಲಸಗಳಿಗಾಗಿ ಪದೆಪದೆ ಹೊರಗೆ ಹೋಗುತ್ತಿದ್ದುದರಿಂದ ತುರ್ತು ಸಂದರ್ಭದಲ್ಲಿ ಉಪಯೋಗಿಸಲು ತಮ್ಮ ಕೀಲಿಕೈಯನ್ನು ನಮ್ಮಲ್ಲಿ ಯಾರಿಗಾದರೂ ನೀಡುತ್ತಿದ್ದರು. ಎಂಟು ತಿಂಗಳ ಹಿಂದೆ ಅದನ್ನು ಅವರು ನನಗೆ ನೀಡಿದಾಗ ಅದನ್ನು ಸೋಪಿನ ತುಂಡಿನ ಮೇಲೆ ಒತ್ತಿ ಹಿಡಿದು ಅದರ ಮುದ್ರೆಯನ್ನು ಮಾಡಿಕೊಂಡೆ. ನಂತರ ಆ ಸೋಪನ್ನು ನನ್ನ ಪರಿಚಯದ ಬಡಗಿಗೆ ಕೊಟ್ಟು ದೂರದೊಂದು ಪಟ್ಟಣದಲ್ಲಿ ಅದರ ಡೂಪ್ಲಿಕೇಟ್ ಕೀಲಿಕೈ ಮಾಡಿಸಿಕೊಂಡೆ. ಕ್ಯಾಷಿಯರ್ ಕೆಲಸವನ್ನು ನಾವೆಲ್ಲರೂ ಸರತಿಯ ಮೇಲೆ ಮಾಡಬೇಕಾಗಿರುವುದರಿಂದ ಎರಡನೆಯ ಕೀಲಿಕೈ ನಮ್ಮಲ್ಲಿ ಯಾರಿಗಾದರೂ ಸಿಕ್ಕೇ ಸಿಗುತ್ತಿತ್ತು.
4 ತಿಂಗಳ ಹಿಂದೆ ನಾನು ಕ್ಯಾಷಿಯರ್ ಕೆಲಸ ಮಾಡುವಾಗ, ಅದರ ಡೂಪ್ಲಿಕೇಟ್ ಕೀಲಿಕೈಯನ್ನೂ ಅದೇ ಬಡಗಿಯ ಮೂಲಕ ಇನ್ನೊಂದು ರಾಜ್ಯದಲ್ಲಿ ಮಾಡಿಸಿದೆ. ತಿಜೋರಿಯ ಎರಡೂ ಕೀಲಿಕೈಗಳು ಲಭ್ಯವಾದ ಕೂಡಲೇ ನಗದು ಹಣ ಮತ್ತು ಬಂಗಾರವನ್ನು ಒಯ್ಯಲು ಐದು ಗಟ್ಟಿಯಾದ ಚೀಲಗಳನ್ನು ಖರೀದಿಸಿಟ್ಟೆ. ಬ್ಯಾಂಕಿನ ತಿಜೋರಿಯಲ್ಲಿ ನಾಲ್ಕು ಕೋಟಿ ರೂ ಇದ್ದು ಅದನ್ನು ಸೋಮವಾರ ಜಿಲ್ಲಾ ಕೇಂದ್ರಕ್ಕೆ ಸಾಗಿಸಲಾಗುತ್ತದೆ ಎಂದು ನನಗೆ ಶುಕ್ರವಾರವೇ ತಿಳಿಯಿತು. ಹೀಗಾಗಿ ಶನಿವಾರವೇ ಲೂಟಿ ಮಾಡಲು ನಿರ್ಧರಿಸಿದೆ.
ಕಳವಿನ ಹಣವನ್ನು ಕೂಡಲೇ ಖರ್ಚುಮಾಡತೊಡಗಿದರೆ ಸಿಕ್ಕಿಬೀಳುವೆ ಎಂದು ಅದನ್ನು ಅಡಗಿಸಲು ಶುಕ್ರವಾರ ರಾತ್ರಿ ನನ್ನ ಕಬ್ಬಿನ ತೋಟದಲ್ಲಿ ಒಂದು ದೊಡ್ಡ ಗುಂಡಿಯನ್ನು ತೋಡಿದೆ. ಶನಿವಾರ ಬೆಳಿಗ್ಗೆ ಅದೇ ಬಡಗಿ ಮತ್ತೊಬ್ಬ ಸ್ನೇಹಿತನನ್ನು ಸಂರ್ಪಸಿ ತುರ್ತಾಗಿ ಬ್ಯಾಂಕಿನ ಕೆಲವು ದಾಖಲೆಗಳನ್ನು ಸಾಗಿಸಬೇಕಾಗಿದೆ ಎಂದು ತಿಳಿಸಿ ಸಂಜೆ 7 ಗಂಟೆಗೆ ಬ್ಯಾಂಕಿಗೆ ಕಾರೊಂದನ್ನು ತರಲು ಸೂಚಿಸಿದೆ. ಬ್ಯಾಂಕ್ನ ಸಿಬ್ಬಂದಿ ಮನೆಗೆ ಹೋಗತೊಡಗಿದಾಗ ನನಗೆ ಕೆಲಸವಿದೆಯೆಂದು ಹೇಳಿ ಅಲ್ಲಿಯೇ ಉಳಿದೆ. ನನ್ನ ಮೊಬೈಲ್ ಸ್ವಿಚ್ ಆಫ್ ಮಾಡಿದೆ. ನಂತರ ಕೈಗಳಿಗೆ ಗ್ಲೌಸ್ ಧರಿಸಿ ಬ್ಯಾಂಕಿನೊಳಗಿದ್ದ ಸಿಸಿಟಿವಿ ರೆಕಾರ್ಡರ್ ಹಾಳುಮಾಡಿ ನಕಲಿ ಕೀಲಿಕೈಗಳ ಮೂಲಕ ತಿಜೋರಿಯಲ್ಲಿದ್ದ ಹಣ ಮತ್ತು ಆಭರಣಗಳನ್ನು ಚೀಲಗಳಲ್ಲಿ ತುಂಬಿಕೊಂಡೆ. ಅದರೆ ಅಲ್ಲಿದ್ದ 6 ಲಕ್ಷರೂಗಳು ದೇಗುಲವೊಂದರ ಹಣವಾದ್ದರಿಂದ ಅದನ್ನು ಕದಿಯಲು ಮನಸ್ಸಾಗಲಿಲ್ಲ.
ಸ್ನೇಹಿತರು 7 ಗಂಟೆಗೆ ಕಾರನ್ನು ತೆಗೆದುಕೊಂಡು ಬಂದರು. ಅವರ ಸಹಾಯದಿಂದ ಎಲ್ಲ ಚೀಲಗಳನ್ನೂ ಕಾರಿನ ಡಿಕ್ಕಿಯಲ್ಲಿಟ್ಟೆ. ಆನಂತರ ಕಾರನ್ನು ನನ್ನ ತೋಟಕ್ಕೆ ತೆಗೆದುಕೊಂಡು ಅಲ್ಲಿ ಚೀಲಗಳನ್ನು ಇಳಿಸಿ ಗೆಳೆಯರನ್ನು ಬೀಳ್ಕೊಟ್ಟೆ. ನಂತರ ಹಣವಿದ್ದ ಚೀಲಗಳ ಮೇಲೆ ಪ್ಲಾಸ್ಟಿಕ್ ಹಾಳೆಗಳನ್ನು ಸುತ್ತಿ ಅವನ್ನು ಗುಂಡಿಯಲ್ಲಿಟ್ಟು ಮುಚ್ಚಿದೆ.
‘ನೀನು ಮಾಡಿದ ತಪ್ಪುಗಳೇನು ಗೊತ್ತೇ?’ ಎಂದು ಮನೀಶ್ ಕೇಳಿದಾಗ, ‘ತೆರೆದಿದ್ದ ತಿಜೋರಿಯ ಮತ್ತು ಬ್ಯಾಂಕಿನ ಬಾಗಿಲುಗಳನ್ನು ಮುಚ್ಚದಿದ್ದುದು ಮತ್ತು ಕೃತ್ಯಮಾಡಲು ಮತ್ತಿಬ್ಬರ ಸಹಾಯ ಪಡೆದಿದ್ದು ನನ್ನ ತಪ್ಪು’ ಎಂದ. ಪೊಲೀಸರು ಅವನ ತೋಟದ ಗುಂಡಿಯಲ್ಲಿ ಮುಚ್ಚಿಟ್ಟಿದ್ದ ಅಷ್ಟೂ ಹಣ ಮತ್ತು ಬಂಗಾರವನ್ನು ಮತ್ತು ಬಾವಿಯೊಂದರಲ್ಲೆಸೆದಿದ್ದ ಕೀಲಿಕೈಗಳನ್ನು ಜಪ್ತಿ ಮಾಡಿದರು. ‘ಜತೆಗಾರರಿಗೆ ಏನೂ ಹಣ ಕೊಡಲಿಲ್ಲವೇ?’ ಎಂದಾಗ ರಾಮಕೃಷ್ಣ, ತನ್ನದೇ ಹಣದಿಂದ ಅವರಿಗೆ 5 ಲಕ್ಷ ರೂ ಕೊಟ್ಟೆನೆಂದ. ಮೂವರನ್ನೂ ಬಂಧಿಸಿ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದು ಪ್ರಕರಣ ವಿಚಾರಣೆಯಲ್ಲಿದೆ. ‘ಅಕ್ಕಿಯುಂ ತೆಂಗು ಜಾನಕ್ಕಿಯುಂ ಲಂಕೆಯು ಮೆಕ್ಕೆಯಿಂ ಕಣಿಕ ಕೆಡುವಂತೆ ದುರ್ಬುದ್ಧಿ ಹೊಕ್ಕವಂ ಕೆಡುವ ಸರ್ವಜ್ಞ’ ಎಂದಂತೆ ಸಾಕಷ್ಟು ಆಸ್ತಿ, ಉತ್ತಮ ನೌಕರಿಯಿದ್ದೂ ಹೇಗಾದರೂ ಅಧಿಕಾರಗಳಿಸಬೇಕೆಂಬ ದುರ್ಬುದ್ಧಿ ಹೊಕ್ಕ ರಾಮಕೃಷ್ಣ ಕೆಟ್ಟ.
(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)