ಕಾರ್ಪೊರೇಟ್ ಪ್ರಪಂಚದಲ್ಲಿ ಆಧ್ಯಾತ್ಮಿಕತೆ ಅಗತ್ಯವಿದೆಯೇ?

ವಿಜಯವಾಣಿ (5)
Published on
ಅನೇಕಾನೇಕ ಆರ್ಥಿಕ ಚಟುವಟಿಕೆಗಳು ಇಂದು ವಿಶ್ವದಲ್ಲಿ ನಡೆಯುತ್ತಿವೆ. ಆರ್ಥಿಕತೆ ಅಗಾಧವಾಗಿ ಬೆಳೆದಿದೆ; ಸಂಬಂಧಪಟ್ಟ ಎಲ್ಲರಿಗೂ ಇವನ್ನು ಸುಸ್ಥಿತಿಯಲ್ಲಿಡುವುದೇ ಸರ್ಕಸ್ ಆಗಿದೆ. ಯಾರು ಹೇಗೆ ಈ ಪರಿಸ್ಥಿತಿಯನ್ನು ನಿಭಾಯಿಸುತ್ತಾರೋ ಅದರ ಮೇಲೆ ಇದು ಒಂದೋ ಪ್ರಪಂಚದ ಬಹುತೇಕ ಜನರಿಗೆ ಒಳಿತು ಮಾಡಬಹುದು, ಇಲ್ಲವೆ ಇಡೀ ಪ್ರಪಂಚವನ್ನು ವಿನಾಶದತ್ತ ತಳ್ಳಬಹುದು.

ಜನರ ಜೀವನದ ಗುಣಮಟ್ಟವನ್ನು ಬಹುಮಟ್ಟಿಗೆ ನಿರ್ಧರಿಸುವ ನಾಲ್ಕು ಪ್ರಮುಖ ಶಕ್ತಿಗಳಾದ ರಾಜಕೀಯ, ಮಿಲಿಟರಿ, ಮತಧರ್ಮ ಮತ್ತು ಆರ್ಥಿಕತೆ ಇವುಗಳಲ್ಲಿ ನನಗೆ ಅನ್ನಿಸುವ ಹಾಗೆ ಸ್ವಲ್ಪ ಮಟ್ಟಿಗೆ ಒಗ್ಗಟ್ಟು ತರುವ ಹಾಗೂ ಪ್ರಜ್ಞಾವಂತಿಕೆಯ ಕಾರ್ಯವನ್ನು ಮಾಡುವ ಬಹು ದೊಡ್ಡ ಸಾಧ್ಯತೆ ಇರುವುದು ಆರ್ಥಿಕ ಶಕ್ತಿಗೆ. ಉಳಿದ ಶಕ್ತಿಗಳು ಕೇವಲ ನಂಬಿಕೆಯಿಂದ ನಿರ್ದೇಶಿಸಲ್ಪಡುತ್ತವೆ. ಎರಡು ವಿಭಿನ್ನ ಮತದ ಜನರನ್ನೋ ಅಥವಾ ಎರಡು ಬೇರೆ ಬೇರೆ ಸಿದ್ಧಾಂತದ ರಾಜಕಾರಣಿಗಳನ್ನೋ ತೆಗೆದುಕೊಂಡರೆ ಅವರು ಯಾವತ್ತೂ ಒಮ್ಮತಕ್ಕೆ ಬರುವುದಿಲ್ಲ. ಸಹಜವಾಗಿಯೇ ಇಬ್ಬರು ಮಿಲಿಟರಿ ನಾಯಕರು ಸಹಬಾಳ್ವೆ ಕೂಡ ಮಾಡಲು ಸಾಧ್ಯವಿಲ್ಲ. ವ್ಯವಹಾರಸ್ಥ ಮಾತ್ರ ಯಾರೊಂದಿಗೆ ಬೇಕಾದರೂ ಒಪ್ಪಂದ ಮಾಡಿಕೊಳ್ಳಲು ಸಿದ್ಧ, ದೆವ್ವದೊಂದಿಗೆ ಕೂಡ, ಅದು ಲಾಭದಾಯಕವಾಗಿದ್ದಲ್ಲಿ. ವಾಸ್ತವದ ಬದುಕಿನಲ್ಲಿ ಯಾವುದು ಕೆಲಸ ಮಾಡುತ್ತದೆ, ಮಾಡುವುದಿಲ್ಲ ಎನ್ನುವ ವ್ಯವಹಾರ ಪ್ರಜ್ಞೆ ಅವರಿಗೆ ಇರುತ್ತದೆ.

ಮುಂದಿನ 10-15 ವರ್ಷಗಳಲ್ಲಿ, ಜಗತ್ತಿನ ಆಗುಹೋಗುಗಳಲ್ಲಿ, ಆರ್ಥಿಕ ಕ್ಷೇತ್ರದ ನಾಯಕತ್ವವು ರಾಜಕೀಯ ಹಾಗೂ ಮಿಲಿಟರಿ ನಾಯಕತ್ವಕ್ಕಿಂತಲೂ ಅತಿ ಪ್ರಧಾನ ಪಾತ್ರ ವಹಿಸಲಿದೆ. ಆದ್ದರಿಂದ ದೊಡ್ಡ ಪ್ರಮಾಣದ ಬದಲಾವಣೆಗೆ ನಮಗೊಂದು ಉತ್ತಮ ಅವಕಾಶವಿದೆ. ಜಗತ್ತಿನ ಶೇಕಡ 80ಕ್ಕೂ ಅಧಿಕ ಸಂಪತ್ತನ್ನು ಕೇವಲ ಕೆಲವೇ ಸಾವಿರ ಜನ ನಿಯಂತ್ರಿಸುತ್ತಾರೆ. ಅವರ ಹೃದಯದಲ್ಲಿ ಕೇವಲ ಶೇ.10ರಷ್ಟು ಪರಿವರ್ತನೆಯಾದಲ್ಲಿ ಜಗತ್ತು ಬದಲಾಗುತ್ತದೆ. ಪ್ರಪಂಚದಲ್ಲಿ ಜನರು ಹಸಿವಿನಿಂದ ಬಳಲುತ್ತಿದ್ದಾರೆ ಎಂದರೆ ಅದು ಆಹಾರ ಇಲ್ಲವೆಂಬ ಕಾರಣಕ್ಕೆ ಅಲ್ಲ. ಭೂಮಿಯ ಮೇಲಿನ 700 ಕೋಟಿ ಜನರಿಗೆ ಬೇಕಾದುದಕ್ಕಿಂತ ಹೆಚ್ಚಿನ ಆಹಾರ ಇದೆ. ಆದರೆ ಯಾರಿಗೆ ಅಗತ್ಯವಿದೆಯೋ ಅವರಿಗೆ ಸಿಗುತ್ತಿಲ್ಲ ಅಷ್ಟೆ, ಏಕೆಂದರೆ ಸಾಮರ್ಥ್ಯವುಳ್ಳವರು ಮತ್ತು ಸಾಧನ ಇದ್ದವರು ಇದಕ್ಕೆ ಪರಿಹಾರ ಹುಡುಕುವ ಬಗ್ಗೆ ಸಾಕಷ್ಟು ಗಮನ ಕೊಡಲಿಲ್ಲ.

ಇಂದಿನ ಬೃಹತ್ ಉದ್ಯಮಗಳು ಸರ್ಕಾರಗಳಷ್ಟೇ ದೊಡ್ಡದಾಗಿ ಬೆಳೆದಿವೆ. ಮುಂಬರುವ ವರ್ಷಗಳಲ್ಲಿ ಜಗತ್ತಿನ ವಿದ್ಯಮಾನಗಳು ಹಲವು ರೀತಿಯಲ್ಲಿ ದೊಡ್ಡ ಕಾರ್ಪೆರೇಟ್ ಕಂಪನಿಗಳಿಂದ ನಿರ್ಣಯಿಸಲ್ಪಡುತ್ತವೆ. ಅವುಗಳ ಗುರಿ ಈಗ ಲಾಭ ಮಾತ್ರ ಅಲ್ಲ, ಬದಲಾಗಿ ವಿಸ್ತರಣೆಯೂ ಪ್ರಮುಖ ಗುರಿಯಾಗಿದೆ. ಈಗ ಬೃಹತ್ತಾಗಿ ಬೆಳೆದಿರುವುದರಿಂದ ಒಂದಷ್ಟು ಹೆಚ್ಚಿಗೆ ಹಣ ಮಾಡುವುದು ಮಾತ್ರ ಉದ್ದೇಶವಲ್ಲ, ಬದಲಾಗಿ ಅವರು ಪ್ರಪಂಚದಾದ್ಯಂತ ತಮ್ಮ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಲು ಬಯಸುತ್ತಾರೆ. ಆ ಕಾರಣಕ್ಕೆ ಇಂದು ಉದ್ಯಮದ ನಾಯಕರು ವ್ಯಾಪಕವಾಗಿ ಪ್ರಯಾಣ ಮಾಡಬೇಕಾಗುತ್ತದೆ, ಅನೇಕ ಸಂಕೀರ್ಣ ವಿಷಯಗಳನ್ನು ನಿಭಾಯಿಸಬೇಕಾಗುತ್ತದೆ, ಅಲ್ಲದೆ, ವಿಭಿನ್ನ ಹಿನ್ನೆಲೆ ಹಾಗೂ ಸಂಸ್ಕೃತಿಯಿಂದ ಬಂದ ಜನರೊಂದಿಗೆ ವ್ಯವಹರಿಸಬೇಕಾಗುತ್ತದೆ.

ಎಲ್ಲ ವರ್ಗದ ಜನರೂ ಅರ್ಥಿಕ ಬೆಳವಣಿಗೆಗೆ ಕೊಡುಗೆ ನೀಡುವ ಕಾರಣಕ್ಕೆ, ಇಂದು ಕಾರ್ಪೊರೇಟ್ ಸಂಸ್ಕೃತಿ ಒಂದೇ ರೀತಿಯ ಮನಸ್ಥಿತಿಗೆ ಸೀಮಿತವಾಗಿಲ್ಲ. ಆದ್ದರಿಂದ ಯಶಸ್ವಿ ಕಾರ್ಪೊರೇಟ್ ನಾಯಕನಾದವನು ನಿಜಕ್ಕೂ ಬಹುಮುಖ ಪ್ರತಿಭೆಯುಳ್ಳವನೂ, ಸಂಕೀರ್ಣ ಪರಿಸ್ಥಿತಿಯಲ್ಲಿ ಮಲ್ಟಿಟಾಸ್ಕ್ ಮಾಡಬಲ್ಲವನೂ ಆಗಿರಬೇಕು. ಯಾವುದೇ ಮನುಷ್ಯ, ವಿಷಮ ಪರಿಸ್ಥಿತಿಯಲ್ಲೂ ಅಧೀರನಾಗದೆ, ದಿನನಿತ್ಯ ಅತಿ ಸಂಕೀರ್ಣ ವಿಷಯಗಳನ್ನು ನಿಭಾಯಿಸಬೇಕೆಂದರೆ, ಆ ಮನುಷ್ಯ ಆಧ್ಯಾತ್ಮಿಕವಾಗಿ ಸಜ್ಜಾಗಿರಬೇಕಾದುದು ಅತ್ಯಂತ ಅವಶ್ಯಕ. ನಾವು ಆಧ್ಯಾತ್ಮಿಕವೆಂದು ಹೇಳುವುದು ಆಂತರಿಕ ಯೋಗಕ್ಷೇಮಕ್ಕಾಗಿ ಇರುವ ತಂತ್ರಜ್ಞಾನವಷ್ಟೆ. ದುರದೃಷ್ಟವಶಾತ್ ತಲೆತಲಾಂತರದಿಂದ ಆಧ್ಯಾತ್ಮಿಕ ಪ್ರಕ್ರಿಯೆಗಳನ್ನು ಉಪದೇಶಿಸುವಾಗ ಸಹಜವಾಗಿ ಸಾಂಸ್ಕೃತಿಕ ಹಾಗೂ ಮತೀಯ ಪ್ರಭಾವಗಳು ಅದರ ಅಂಗವಾಗಿ ಬಿಡುತ್ತವೆ. ಆಧ್ಯಾತ್ಮಿಕ ವಿಜ್ಞಾನಕ್ಕೆ ಅಂಟಿಕೊಂಡ ಈ ಮತೀಯ ಮತ್ತು ಸಾಂಸ್ಕೃತಿಕ ಲೇಪಗಳು, ಕಾರ್ಪೊರೇಟ್ ಜಗತ್ತಿನಲ್ಲಿ ಆಧ್ಯಾತ್ಮಿಕ ವಿಜ್ಞಾನದ ಸ್ವೀಕಾರಕ್ಕೆ ತಡೆಗೋಡೆಯಾಗಿವೆ. ಈ ಸಾಂಸ್ಕೃತಿಕ ಹಾಗೂ ಮತೀಯ ಬಲೆಗಳಿಂದ ಮುಕ್ತವಾದ ಆಧ್ಯಾತ್ಮಿಕ ಪ್ರಕ್ರಿಯೆಯೊಂದು ಇಂದು ಅವಶ್ಯವಿದೆ. ಆಧ್ಯಾತ್ಮಿಕ ಪ್ರಕ್ರಿಯೆಯನ್ನು ಒಂದು ವೇದಾಂತವಾಗಿಯೋ ಅಥವಾ ನಂಬಿಕೆ ವ್ಯವಸ್ಥೆಯಂತೆಯೋ ಕಲಿಸಬೇಕಾಗಿಲ್ಲ. ಸರಳ ವಿಧಾನವಾಗಿ ಅದನ್ನು ನೀಡಬಹುದು, ಅದು ಸಹಜವಾಗಿ ಜೀವನವನ್ನು ಹೆಚ್ಚು ಆಳವಾಗಿ ಎಲ್ಲವನ್ನೂ ಮತ್ತು ಎಲ್ಲರನ್ನೂ ಒಳಗೊಳ್ಳುವಂತೆ ಅನುಭವಿಸಲು ಸಹಕಾರಿ.

ಇದಕ್ಕಾಗಿ ಉದ್ಯಮಗಳು ಸಕ್ರಿಯವಾಗಿ ಅನುಕೂಲಕರ ವಾತಾವರಣ ನಿರ್ಮಾಣ ಮಾಡಬೇಕು. ಪ್ರತಿಯೊಂದು ಕಂಪನಿ ಕೇಂದ್ರದಲ್ಲಿ ಬೇರೆ ಸೌಕರ್ಯಗಳಿರುವಂತೆ ಧ್ಯಾನ ಮಾಡಲು ಸೂಕ್ತ ಸ್ಥಳಾವಕಾಶ ಇರಬೇಕು. ವಿಶೇಷವಾಗಿ ರಚಿಸಿದ ಧ್ಯಾನ ಮತ್ತು ಇತರ ಸರಳ ಸಾಧನಗಳ ಉಪಯೋಗ ವ್ಯಕ್ತಿಗೂ ಮತ್ತು ಸಂಸ್ಥೆಗೂ ಉತ್ತಮ ಸಾಮರಸ್ಯ ಹಾಗೂ ಯೋಗಕ್ಷೇಮದ ಅನುಭವ ಕೊಡುತ್ತದೆ. ಇದು ದೊಡ್ಡ ರೀತಿಯಲ್ಲಿ ಪ್ರತಿಫಲ ನೀಡುತ್ತದೆ. ಎಲ್ಲ ಜನರಿಗಾಗಿ ನಿರ್ಧಾರ ತೆಗೆದುಕೊಳ್ಳುವ ವ್ಯಕ್ತಿಗಳು ಉತ್ತಮ ಮನಸ್ಥಿತಿಯಲ್ಲಿರಬೇಕು, ಏಕೆಂದರೆ ಅವರ ನಿರ್ಣಯಗಳು ಕೇವಲ ಅವರ ಮೇಲಷ್ಟೆ ಅಲ್ಲದೆ ಬಹಳ ಜನರ ಮೇಲೆ ಪರಿಣಾಮ ಬೀರುತ್ತವೆ. ಉದ್ಯಮಿಗಳ ತಂಡ ಸಂಕುಚಿತ ಮಹತ್ವಾಕಾಂಕ್ಷೆಯಿಂದ ವ್ಯವಹರಿಸುವುದನ್ನು ಬಿಟ್ಟು ವಿಶಾಲ ದೃಷ್ಟಿಕೋನ ಹೊಂದುವುದು ಅವಶ್ಯವಿದೆ. ಅವರು ಹೆಚ್ಚು ಸಂತೋಷವಾಗಿರುವುದನ್ನು ನೋಡಲು ನಾನು ಬಯಸುತ್ತೇನೆ, ಕಾರಣ ಸಂತೋಷವಾಗಿರುವವರು ಹೆಚ್ಚು ಉದಾರಿಗಳೂ, ಹೊಂದಾಣಿಕೆ ಗುಣದವರೂ, ಅರ್ಥ ಮಾಡಿಕೊಳ್ಳಬಲ್ಲವರೂ ಹಾಗೂ ಹೆಚ್ಚು ಜೀವನ್ಮುಖಿಯಾಗಿಯೂ ಇರುತ್ತಾರೆ. ಅವರು ತ್ರೖೆಮಾಸಿಕ ಬ್ಯಾಲೆನ್ಸ್​ಶೀಟ್​ನಿಂದ ಅಲ್ಲದೆ, ಸ್ವಭಾವತಃ ತಮ್ಮೊಳಗೆ ಉತ್ತಮ ಶಾಂತಿ ಹಾಗೂ ಸಂತೋಷದಿಂದ ಇರಬೇಕಾದುದು ತೀರಾ ಅವಶ್ಯ.

ಅವರು ಸಂತೋಷವಾಗಿಲ್ಲದಿದ್ದಲ್ಲಿ, ಆರ್ಥಿಕ ಶಕ್ತಿ ಮತ್ತು ಅಧಿಕಾರ ಭಯಂಕರ ಅಪಾಯಕಾರಿ. ಪ್ರಸ್ತುತ ನಾವು ಆರ್ಥಿಕತೆಯನ್ನು ನಮ್ಮ ಜೀವನದ ಪ್ರಮುಖ ಅಂಶ ಮಾಡಿಕೊಂಡಿದ್ದೇವೆ. ಯಾವಾಗ ಆರ್ಥಿಕ ಇಂಜಿನ್ ಎಲ್ಲವನ್ನೂ ಚಾಲನೆಯಲ್ಲಿಡುತ್ತದೆಯೋ ಆಗ ಸ್ವಾಭಾವಿಕವಾಗಿ ನಾವು ಅಸಹ್ಯವಾಗಿ ಬಿಡುತ್ತೇವೆ, ಏಕೆಂದರೆ ಅದು ಒಟ್ಟಿನಲ್ಲಿ ಹಗ್ಗ ಜಗ್ಗಾಡುವುದು, ಹೇಗಾದರೂ ಸರಿ ಎಲ್ಲರಿಗಿಂತ ಮೇಲೆ ಇರುವುದು. ಸ್ಪರ್ಧೆಯೇ ಎಲ್ಲ ಎಂದಾದಾಗ ಅಲ್ಲಿ ಸೂಕ್ಷ್ಮತೆಗೆ ಅಥವಾ ಮೃದುತ್ವಕ್ಕೆ ಅಥವಾ ಬೇರೆಯವರ ಬಗ್ಗೆ ಕಾಳಜಿಗೆ ಅವಕಾಶವೇ ಇರುವುದಿಲ್ಲ. ಹಿಂದೆ ತುಂಬ ಮಹತ್ವಾಕಾಂಕ್ಷಿ, ದಯೆಯಿಲ್ಲದ ಜನರಷ್ಟೇ ಆರ್ಥಿಕ ಕ್ಷೇತ್ರದ ಮುಂದಾಳುಗಳಾಗಿದ್ದರು. ಅದು ಯಾವಾಗಲೂ ಹಾಗೇ. ಹಾಗಾಗಿ ತೀರಾ ದಯೆಯೇ ಇಲ್ಲದ ಮತ್ತು ಮಹತ್ವಾಕಾಂಕ್ಷಿ ಜನರಷ್ಟೇ ಶಿಖರ ತಲುಪಿದರು. ಆದರೆ ಈಗ ನಿಜವಾಗಿಯೂ ಹಿಂದೆಂದೂ ಇಲ್ಲದ ಸೂಕ್ಷ್ಮ ಮನಸ್ಸಿನ ಅದ್ಭುತ ವ್ಯಕ್ತಿಗಳಿದ್ದಾರೆ. ಆದರೆ ಅವರು ಸಹ ಈಗಲೂ ಒಳ್ಳೆಯತನ ಅಥವಾ ಬೇರೆ ಮಾತಿನಲ್ಲಿ ಹೇಳುವುದಾದರೆ ಅವರೂ ತುಂಬ ಹಣ ಮಾಡಬಯಸುತ್ತಾರೆ ಮತ್ತು ಕೊನೆಗೆ ದಾನ ಮಾಡುತ್ತಾರೆ. ದಾನ ಸ್ಥಿರವೂ ಅಲ್ಲ, ಪರಿಹಾರವೂ ಅಲ್ಲ.

ಆಧುನಿಕ ಆರ್ಥಿಕತೆ ಚಾಲ್ತಿಯಲ್ಲಿ ಇರಬೇಕಾದರೆ ಜನರು ಕೊಂಡುಕೊಳ್ಳುತ್ತಲೇ ಇರಬೇಕು. ಈ ತರಹದ ಆರ್ಥಿಕತೆ ಇರುವಾಗ ನಮ್ಮ ಗ್ರಾಹಕರ ಪಟ್ಟಿಗೆ ಹೆಚ್ಚು ಹೆಚ್ಚು ಜನರನ್ನು ಸೇರಿಸುವ ಪ್ರಯತ್ನ ಮಾಡುತ್ತೇವೆ. ವಿಚಾರವೇನೆಂದರೆ ಇಡೀ ಭೂಮಂಡಲದ 700 ಕೋಟಿ ಜನರನ್ನೂ ಸೇರಿಸುವುದು. ಸದ್ಯಕ್ಕೆ, ಪ್ರಪಂಚದ ಕೇವಲ ಸುಮಾರು ಶೇ. 40ರಷ್ಟು ಜನಸಂಖ್ಯೆ ಅರ್ಥಪೂರ್ಣವಾಗಿ ಆರ್ಥಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದೆ. ಶೇ. 60ರಷ್ಟು ಜನಸಂಖ್ಯೆಯನ್ನು ಹೊರತುಪಡಿಸಿ ವ್ಯವಹಾರ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ- ನಿಮ್ಮ ಮಾರುಕಟ್ಟೆ, ಮಾನವ ಸಂಪನ್ಮೂಲ ಬೆಳವಣಿಗೆಯಾಗಲಿಲ್ಲ (ವಿಸ್ತರಣೆಯಾಗಲಿಲ್ಲ). ವಿಸ್ತರಣೆಯೆಂದರೆ ಒಳಗೊಳ್ಳುವುದು. ನೀವು ಒಂದೋ ಬೇರೆಯವರ ಮೇಲೆ ಜಯ ಸಾಧಿಸಿ ವಿಸ್ತರಿಸಬಹುದು ಇಲ್ಲವೇ ಬೇರೆಯವರನ್ನು ಒಳಗೂಡಿಸಿಕೊಂಡು ವಿಸ್ತರಿಸಬಹುದು. ಜಯ ಸಾಧಿಸುವುದು ಎಂದರೆ ಹಿಂಸೆಯ ಹಾದಿಯಿಂದ ಕೆಲಸ ಮಾಡುವುದು. ಆದ್ದರಿಂದ ಎಲ್ಲ ವ್ಯವಹಾರಗಳು ಹೆಚ್ಚು ಒಳಗೂಡಿಸಿಕೊಂಡು ಕೆಲಸ ಮಾಡುವಂಥ ಮಾದರಿ ನಮಗೆ ಬೇಕಾಗಿದೆ. ಅದು ಸೌಮ್ಯವಾಗಿ ವ್ಯವಹಾರ ಮಾಡುವ ಪರಿ.

ನನ್ನನ್ನು ಮೊದಲ ಬಾರಿಗೆ ವರ್ಲ್ಡ್ ಎಕನಾಮಿಕ್ ಫೋರಂಗೆ ಆಹ್ವಾನಿಸಿದಾಗ ಜನರು ‘ಗುರುವೊಬ್ಬರು ಆರ್ಥಿಕ ಸಮ್ಮೇಳನದಲ್ಲಿ ಏನು ಮಾಡುತ್ತಿದ್ದಾರೆ? ಏನೋ ತಪ್ಪಾಗಿದೆಯಾ?’ ಎಂದು ಕೇಳುತ್ತಿದ್ದರು. ಒಬ್ಬ ಸಿಇಒ ಸಿಡಿಮಿಡಿಗೊಳ್ಳುತ್ತ ನನ್ನ ಬಳಿ ಬಂದು ‘ನೀವೇನು ಮಾಡುತ್ತಿದ್ದೀರಿ ಇಲ್ಲಿ?’ ಎಂದು ಕೇಳಿದರು. ನನಗೆ ಗೊತ್ತಿತ್ತು, ಅವರಿಗೆ ಅವರ ಪರಿಭಾಷೆಯಲ್ಲದೆ ಬೇರೇನೂ ಅರ್ಥವಾಗದು ಎಂದು. ನಾನು ಹೇಳಿದೆ, ‘ನೋಡಿ, ಸದ್ಯಕ್ಕೆ ಪ್ರಪಂಚದ ಜನಸಂಖ್ಯೆಯ ಅರ್ಧಭಾಗದಷ್ಟು ಜನರು ಇನ್ನೂ ಹಸಿವೆಯಿಂದ ಬಳಲುತ್ತಿದ್ದಾರೆ. ಜನ ಸರಿಯಾಗಿ ತಿನ್ನದೇ ಇದ್ದಾಗ ಅವರೊಂದಿಗೆ ಅಧ್ಯಾತ್ಮ ಮಾತನಾಡಲಿಕ್ಕೆ ಆಗದು ಅಥವಾ ಧ್ಯಾನ ಕಲಿಸಲಾಗದು, ಏಕೆಂದರೆ ಮನುಷ್ಯರು ಹಸಿದಿರುವಾಗ ಅವರಲ್ಲಿ ಆಧ್ಯಾತ್ಮಿಕ ಮತ್ತು ಧ್ಯಾನದ ಬಗ್ಗೆ ಮಾತನಾಡುವುದು ಅಸಭ್ಯ. ಆದ್ದರಿಂದ ನಾನು ನನ್ನ ಮಾರುಕಟ್ಟೆಯನ್ನು ವಿಸ್ತರಿಸುತ್ತಿದ್ದೇನೆ!’

ನಮಗೆ ಸೌಮ್ಯವಾದ ಮತ್ತು ಸಹಾನುಭೂತಿಯ ಆರ್ಥಿಕ ಪ್ರಕ್ರಿಯೆ ಬೇಕೆಂದಾದರೆ, ಅದಕ್ಕೆ ದಾನ ಅಗತ್ಯವಲ್ಲ, ಒಳಗೊಳ್ಳುವಿಕೆ ಅಗತ್ಯ. ಮನುಷ್ಯರಲ್ಲಿ ಒಳಗೂಡಿಸಿಕೊಳ್ಳುವ ಮನೋಭಾವ ಇಲ್ಲದಿದ್ದಲ್ಲಿ, ಅವರು ನಿರ್ವಿುಸುವ ವ್ಯವಸ್ಥೆ ಅಥವಾ ಅವರು ಮಾಡುವ ಕಾರ್ಯ ಒಳಗೂಡಿಕೊಂಡು ಇರಲು ಸಾಧ್ಯವೇ ಇಲ್ಲ. ವ್ಯಕ್ತಿಗಳು ಈ ಒಳಗೂಡುವಿಕೆಯನ್ನು ಅನುಭವಿಸದೆ ಇದ್ದಲ್ಲಿ ಅವರು ಪ್ರತ್ಯೇಕತೆಯ ಪ್ರಕ್ರಿಯೆಯನ್ನು ನಿರ್ವಿುಸುತ್ತಾರೆ. ಸಿರಿವಂತರ ಪ್ರತ್ಯೇಕತೆ ಈ ಜಗತ್ತನ್ನು ಅಮಾನವೀಯ ಆಗುವಂತೆ ಮಾಡಿದೆ.

ಆಧ್ಯಾತ್ಮಿಕತೆಯೆಂದರೆ ದೇವಸ್ಥಾನಕ್ಕೆ ಹೋಗುವುದು ಅಥವಾ ಅಲ್ಲಿ ತೆಂಗಿನಕಾಯಿ ಒಡೆಯುವುದು ಅಲ್ಲ. ಆಧ್ಯಾತ್ಮಿಕತೆಯೆಂದರೆ ಇಲ್ಲಿ ಎಲ್ಲವನ್ನೂ ಮತ್ತು ಎಲ್ಲರನ್ನೂ ಸೇರಿಸಿಕೊಂಡು ಬದುಕುವುದು, ಎಲ್ಲವನ್ನೂ ನಿಮ್ಮದೇ ಒಂದು ಭಾಗವಾಗಿ ಅನುಭವಿಸುವುದು. ಜೀವಿಯನ್ನು ಜೀವಿಯಾಗಿ ತಿಳಿಯುವುದು ಮತ್ತು ಅನುಭವಿಸುವುದು, ವೈಯಕ್ತಿಕ ವ್ಯಕ್ತಿಗಳಾಗಿ ಅಲ್ಲ. ಆಧ್ಯಾತ್ಮಿಕ ಪ್ರಕ್ರಿಯೆಯ ಒಂದು ಮೂಲ ಅಂಶವೆಂದರೆ ಮನುಷ್ಯರನ್ನು ಅದು ಎಲ್ಲರನ್ನೂ ಒಳಗೊಳ್ಳುವವರನ್ನಾಗಿ ಮಾಡುತ್ತದೆ. ಅದೇ ಸಮಯದಲ್ಲಿ ಅದು ವ್ಯಕ್ತಿಯೊಬ್ಬ ಹೆಚ್ಚು ದಕ್ಷ, ಹೆಚ್ಚು ಸಮರ್ಥ, ಹೆಚ್ಚು ಸಮತೋಲನ ಉಳ್ಳವ ಮತ್ತು ಪರಿಣಾಮವಾಗಿ ಹೆಚ್ಚು ಉತ್ಪಾದನಶೀಲ ಆಗುವಂತೆ ಮಾಡುತ್ತದೆ. ಇದು ವ್ಯವಹಾರಕ್ಕೆ ಒಳ್ಳೆಯದು. ಜಗತ್ತಿಗೂ ಒಳ್ಳೆಯದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net