ಮಾಕ್​ಟೇಲ್ ಸೀಕ್ವೆಲ್​ನಲ್ಲಿ ರಚನಾ ಇರ್ತಾರಾ?

Rachit a29 May 20
Published on

ಬೆಂಗಳೂರು: ಲಾಕ್​ಡೌನ್ ಆರಂಭಕ್ಕೂ ಮುನ್ನ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದು, ಬಳಿಕ ಅಮೆಜಾನ್ ಪ್ರೖೆಮ್ಲ್ಲೂ ಅಷ್ಟೇ ಹವಾ ಸೃಷ್ಟಿಸಿತ್ತು ‘ಡಾರ್ಲಿಂಗ್’ ಕೃಷ್ಣ ಅಭಿನಯದ ಮತ್ತು ನಿರ್ದೇಶನದ ‘ಲವ್ ಮಾಕ್​ಟೇಲ್’. ಈ ಚಿತ್ರದಲ್ಲಿ ಮಿಲನಾ ನಾಗರಾಜ್ ಮತ್ತು ಅಮೃತಾ ಅಯ್ಯಂಗಾರ್​ಗೆ ಸಿಕ್ಕಷ್ಟು ಖ್ಯಾತಿ, ‘ಹೆಂಗೆ ನಾವು ...’ ಹುಡುಗಿ ರಚನಾ ಇಂದರ್​ಗೂ ಸಿಕ್ಕಿತ್ತು. ಇದೀಗ ಇದೇ ನಟಿ, ‘ಲವ್ ಮಾಕ್​ಟೇಲ್’ ಸೀಕ್ವೆಲ್​ನಲ್ಲಿ ಇರ್ತಾರಾ ಇಲ್ವಾ ಎಂಬುದು ಸ್ವತಃ ಅವರಿಗೇ ಗೊತ್ತಿಲ್ಲವಂತೆ!

‘ಲವ್ ಮಾಕ್​ಟೇಲ್’ ಚಿತ್ರದಲ್ಲಿ ನಾಯಕನ ಜೀವನದ ಕಥೆಯನ್ನು ಪಯಣದ ಜತೆಗೆ ಹಂಚಿಕೊಳ್ಳುವ ಹುಡುಗಿಯಾಗಿ ರಚನಾ ಕಾಣಿಸಿಕೊಂಡಿದ್ದಾರೆ. ಮೊದಮೊದಲು ಸಿನಿಮಾ ನೋಡುಗರಿಗೆ, ಕ್ಲೈಮ್ಯಾಕ್ಸ್​ನಲ್ಲಿ ನಾಯಕ ‘ಹೆಂಗೆ ನಾವು ...’ ಹುಡುಗಿಯನ್ನೇ ಮದುವೆಯಾಗಬಹುದು ಎಂದು ಊಹಿಸಿದ್ದರು. ಆದರೆ, ಅಲ್ಲಿ ಅದೆಲ್ಲವೂ ಉಲ್ಟಾ ಆಗಿತ್ತು. ಇದೀಗ ಅದೇ ಚಿತ್ರದ ಮುಂದುವರಿದ ಭಾಗವನ್ನು ಬರೆಯಲು ಕುಳಿತಿದ್ದಾರೆ ಕೃಷ್ಣ. ಈ ಸೀಕ್ವೆಲ್​ನಲ್ಲೂ ರಚನಾ ಪಾತ್ರ ಮುಂದುವರೆಯುತ್ತದಾ? ಎಂಬ ಪ್ರಶ್ನೆ ಸಹಜವಾಗಿಯೇ ಬರುತ್ತದೆ. ಈ ಪ್ರಶ್ನೆಯನ್ನು ರಚನಾ ಮುಂದಿಟ್ಟರೆ, ಸದ್ಯಕ್ಕೆ ಗೊತ್ತಿಲ್ಲ ಎಂಬ ಉತ್ತರ ಅವರಿಂದ ಬರುತ್ತದೆ.

‘‘ಲವ್ ಮಾಕ್​ಟೇಲ್’ ಸೀಕ್ವೆಲ್​ನ ಕೆಲಸ ಶುರುವಾಗಿದೆ. ಆದರೆ, ಅದರಲ್ಲಿ ನಾನು ಇದೀನಾ ಇಲ್ಲವಾ ಎಂಬುದು ನನಗೇ ಗೊತ್ತಿಲ್ಲ. ಕಥೆಯನ್ನು ಯಾವ ರೀತಿ ಹೇಳುತ್ತಾರೆ ಎಂಬುದರ ಮೇಲೆ ನನ್ನ ಪಾತ್ರ ನಿರ್ಧಾರವಾಗಲಿದೆ’ ಎಂದು ಹೇಳಿಕೊಳ್ಳುತ್ತಾರೆ ರಚನಾ.

ಮೊದಲ ಸಿನಿಮಾದಲ್ಲೇ ಒಳ್ಳೇ ರೆಸ್ಪಾನ್ಸ್ ಸಿಕ್ಕಿದ್ದಕ್ಕೆ ಮತ್ತು ಪಾತ್ರದ ಮೂಲಕವೇ ಹೆಚ್ಚು ಗುರುತಿಸಿಕೊಂಡಿದಕ್ಕೆ ತುಂಬು ಖುಷಿಯಲ್ಲಿದ್ದಾರೆ ರಚನಾ. ‘ಸಿನಿಮಾ ಶೂಟಿಂಗ್ ಶುರುವಾದಾಗ, ಎಲ್ಲ ಡೈಲಾಗ್​ಗಳಂತೆ, ‘ಹೆಂಗೆ ನಾವು’ ಡೈಲಾಗ್ ಇದೆ ಎಂದುಕೊಂಡು ಸುಮ್ಮನಾಗಿದ್ದೆ. ಸಿನಿಮಾ ಬಿಡುಗಡೆ ಆದಮೇಲೂ ಅಷ್ಟಾಗಿ ಅದರ ಬಗ್ಗೆ ವಿಚಾರಿಸಿರಲಿಲ್ಲ. ಯಾವಾಗ ಅಮೆಜಾನ್​ನಲ್ಲಿ ಪ್ರಸಾರವಾಯಿತೋ, ಬಗೆಬಗೆ ಮೀಮ್ಳು ಹರಿದಾಡಲಾರಂಭಿಸಿದವು. ಒಬ್ಬ ನಟಿಯಾದವಳಿಗೆ ಆರಂಭದಲ್ಲೇ ಇಂಥ ಅವಕಾಶ ಯಾರಿಗೆ ಸಿಗುತ್ತೇ ಹೇಳಿ?’ ಎಂದು ಅಂದಿನ ಆ ಖುಷಿಯನ್ನು ಈಗಲೂ ಸವಿಯುತ್ತಿದ್ದಾರೆ ರಚನಾ.

ಇನ್ನು ಲಾಕ್​ಡೌನ್ ಹಿನ್ನೆಲೆಯಲ್ಲಿ ಹುಟ್ಟೂರು ಮಡಿಕೇರಿಯಲ್ಲಿ ಲಾಕ್ ಆಗಿರುವ ರಚನಾ, ಆ ಅವಧಿಯನ್ನು ಸದುಪಯೋಗ ಮಾಡಿಕೊಳ್ಳುತ್ತಿದ್ದಾರಂತೆ. ‘ಈ ಮೊದಲು ಅಡುಗೆ ಮನೆಯತ್ತ ಸುಳಿಯದ ನಾನು, ಯೂಟ್ಯೂಬ್​ನಲ್ಲಿ ವಿಡಿಯೋ ನೋಡಿ ಬಗೆಬಗೆ ಪಾಸ್ಟ್ ಫುಡ್ ಮಾಡುವುದನ್ನು ಕಲಿತಿದ್ದೇನೆ. ಮನೆ ಕೆಲಸ, ಸಿನಿಮಾ, ಓದು ಹೀಗೆ ಹಲವು ಕೆಲಸಗಳಲ್ಲಿಯೂ ತೊಡಗಿಸಿಕೊಂಡಿದ್ದೇನೆ’ ಎನ್ನುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net