ಆನುವಂಶಿಕ ನೆನಪಿನಿಂದ ಹೊರಬರಲು ಸಾಧ್ಯವೇ?: ಸದ್ಗುರು

Sadhguru
Published on
ಪಾಶ್ಚಿಮಾತ್ಯ ಪ್ರಪಂಚದಲ್ಲಿ ಜನರು ಅರಿತಿರುವ, ಇದನ್ನು ವ್ಯಕ್ತಪಡಿಸುವ ಅತಿ ಸಮೀಪದ ವಾಕ್ಯವೆಂದರೆ- ‘ಸತ್ತವರನ್ನು ಸತ್ತವರೊಂದಿಗೆ ಬಿಟ್ಟುಬಿಡಿ’. ಇದು ಅಷ್ಟು ಸುಲಭವಲ್ಲ, ಏಕೆಂದರೆ, ಸತ್ತವರು ನಮ್ಮೊಳಗೇ ಜೀವಿಸುತ್ತಿದ್ದಾರೆ. ಆನುವಂಶಿಕ ನೆನಪೆಂದರೆ ಇದೇ ಆಗಿದೆ.

ಯೋಗಾಭ್ಯಾಸ ಪ್ರಾರಂಭಿಸಿದ ನಂತರ ಕೆಲವರಿಗೆ ಭೌತಿಕ ಶರೀರದಲ್ಲಿ ಸಾಕಷ್ಟು ಬದಲಾವಣೆ ಕಂಡುಬರುತ್ತವೆ. ಭೌತಿಕ ಶರೀರ ಯಾವ ರೀತಿ ಪರಿವರ್ತನೆ ಹೊಂದುತ್ತದೆ ಅಥವಾ ಹೊಸ ಶಕ್ತಿಗಳನ್ನು ಪಡೆದುಕೊಂಡಾಗ ಏನಾಗುತ್ತದೆ ಎಂಬುದನ್ನು ವಿವರಿಸಲು ಸಾಧ್ಯವೇ ಎಂಬುದು ಹಲವರ ಪ್ರಶ್ನೆ. ಅವರ ಆಂತರ್ಯದಲ್ಲಿ ಏನಾಗುತ್ತಿರಬಹುದು ಎಂಬುದನ್ನು ವ್ಯಕ್ತಿಗತವಾಗೇ ನೋಡಬೇಕು. ಆದರೆ ಭೌತಿಕ ಶರೀರದೊಳಗೆ ಗಮನ ಸೆಳೆಯುವಂಥ ಬದಲಾವಣೆಗಳು ಸಂಭವಿಸುವ ಸಾಧ್ಯತೆಗಳಿವೆ. ಕೆಲವರು ಯಾವುದಾದರೂ ಶಕ್ತಿಯುತವಾದ ದೀಕ್ಷೆಗಳಿಗೆ ಒಳಪಟ್ಟಾಗ, 24 ಗಂಟೆೆಗಳೊಳಗೆ ಅವರ ಮುಖಚರ್ಯುಯೇ ಬದಲಾಗುತ್ತದೆ. ಅವರು ಹಿಂದಿನ 24 ಗಂಟೆಗಳಲ್ಲಿ ಹೇಗೆ ಕಾಣಿಸುತ್ತಿದ್ದರೋ ಒಮ್ಮಿಂದೊಮ್ಮೆಲೇ ಅದಕ್ಕಿಂತಲೂ ವಿಭಿನ್ನವಾಗಿ ಕಾಣಿಸುತ್ತಾರೆ. ಅವರ ದೈಹಿಕ ಕ್ರಿಯೆಯಲ್ಲಿ ಅಷ್ಟೊಂದು ಬದಲಾವಣೆ ಕಂಡುಬರುತ್ತದೆ.

ನಾನು ನನ್ನ ಅನುಭವದಿಂದಲೇ ಹೆಚ್ಚಾಗಿ ತಿಳಿದುಕೊಂಡಿದ್ದೇನೆ. 35 ವರ್ಷಗಳ ಹಿಂದೆ ನನ್ನೊಳಗೆ ಏನೇನೋ ಸಂಭವಿಸಿದಾಗ, ಶರೀರದೊಳಗೆ ಪ್ರತಿಯೊಂದೂ ಬದಲಾವಣೆ ಹೊಂದಿದವು. ಬೇರೆ ಜನರ ಕಣ್ಣಿಗೆ ಎದ್ದು ಕಾಣಿಸುವ ರೀತಿಯಲ್ಲಿ ಬದಲಾವಣೆಗಳು ಗೋಚರವಾದವು. ನನ್ನ ಧ್ವನಿ- ಬದಲಾವಣೆಯ ವಯಸ್ಸನ್ನು ದಾಟಿದ್ದರೂ- ವಿಭಿನ್ನ ರೀತಿಯಲ್ಲಿ ಬದಲಾಯಿತು. ಕಣ್ಣುಗಳ ರೂಪ ಬದಲಾಯಿತು. ನಡಿಗೆ ಎಷ್ಟು ಬದಲಾಯಿತೆಂದರೆ, ನನ್ನ ಹಿಂದಿನ ನಡೆಯುವ ಭಂಗಿಯನ್ನು ಮರಳಿ ಪಡೆಯಲು ಮಾಡಿದ ಪ್ರಯತ್ನವೆಲ್ಲ ವಿಫಲವಾಯಿತು. ಮಿದುಳಿನ ರೂಪವೂ ಬದಲಾಯಿತು.

ಹಿಂದಿನ ಪೀಳಿಗೆಗಳ ನೆನಪುಗಳು: ಪ್ರಾಣಶಕ್ತಿಯ ಹಸ್ತಕ್ಷೇಪವು ನಮ್ಮೊಳಗಿನ ಆನುವಂಶಿಕ ಮತ್ತು ವಿಕಾಸಾತ್ಮಕ ನೆನಪುಗಳ ಪ್ರಭಾವವನ್ನು ಬದಲಾಯಿಸಬಹುದು. ಈ ಎರಡು ನೆನಪಿನ ಆಯಾಮಗಳು ನಮ್ಮನ್ನು ಪರಿಮಿತಗೊಳಿಸಿ ನಾವು ಪ್ರಜ್ಞಾಯುತವಾಗಿ ಊಹಿಸಲಾಗದ ರೀತಿಯಲ್ಲಿ ಪ್ರಭಾವ ಬೀರುತ್ತವೆ. ಅದರಿಂದ ಮುಕ್ತರಾಗಬೇಕಾದರೆ ಅಥವಾ ಅದರಿಂದ ಪ್ರತ್ಯೇಕಿಸಿಕೊಳ್ಳಬೇಕಾದರೆ, ಅದೊಂದು ಯೋಗಾಭ್ಯಾಸದ ಬಹಳ ಪ್ರಮುಖವಾದ ಅಂಶವಾಗಿರುತ್ತದೆ.

ಜನರು ಸಾಮಾನ್ಯವಾಗಿ ‘ಸಂಸ್ಕಾರ’ ಎಂಬ ಪದವನ್ನು ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ. ಇದನ್ನು ಎರಡು ಭಾವಾರ್ಥಗಳಲ್ಲಿ ಬಳಸಲಾಗುತ್ತದೆ. ಸಂಸ್ಕಾರವೆಂದರೆ ನಮಗೆ ಹಿಂದಿನ ಪೀಳಿಗೆಯವರಿಂದ ಬಂದಿರುವ ಆನುವಂಶಿಕ ನೆನಪು. ಉದಾಹರಣೆಗೆ, ಒಂದು ಮಗು ವಯಸ್ಸಿಗೆ ಮೀರಿದ ಪ್ರೌಢಿಮೆಯಿಂದ ಅದ್ಭುತವಾಗಿ ಹಾಡುತ್ತಿದ್ದರೆ, ಅದಕ್ಕೆ ಜನರು, ‘ಓಹ್! ಇದು ಮಗುವಿನ ಸಂಸ್ಕಾರದಿಂದಾಗಿ’ ಎನ್ನುತ್ತಾರೆ. ಅದರರ್ಥವೆಂದರೆ ಮಗುವಿಗೆ ಅಂತಹ ಅಸಾಧಾರಣ ಸಾಮರ್ಥ್ಯ ಎಲ್ಲಿಂದಲೋ ಬಂದಿದೆ ಎಂದಾಗುತ್ತದೆ. ಅದೇ ಸಮಯದಲ್ಲಿ ವ್ಯಕ್ತಿಯ ಮರಣಾನಂತರದ ಆಚರಣೆಗಳನ್ನೂ ಸಂಸ್ಕಾರಗಳೆಂದು ಕರೆಯುತ್ತಾರೆ.

ಈ ಎರಡು ಅಂಶಗಳು ಬೇರೆ-ಬೇರೆಯಾಗಿ ಕಂಡರೂ ಒಂದೇ ಪದವನ್ನು ಏಕೆ ಬಳಸುತ್ತಾರೆ? ಏಕೆಂದರೆ, ವಾಸ್ತವದಲ್ಲಿ ಅವು ಭಿನ್ನವಾಗಿಲ್ಲ. ನಮ್ಮ ಹಿಂದಿನವರ ಹಲವಾರು ನೆನಪುಗಳು ಮತ್ತು ಅನುಭವಗಳು ನಮ್ಮೊಳಗೇ ಸೇರಿವೆ. ಅದೇ ಸಮಯದಲ್ಲಿ, ಪಾರಂಪರ್ಯವಾಗಿ ಗಳಿಸಿಕೊಂಡಿರುವ ನೆನಪು ಬಂಧನದ ಸಾಧನವಾಗುತ್ತದೆಯೇ ಅಥವಾ ಬದುಕಿನಲ್ಲಿ ಪ್ರಯೋಜನಕಾರಿಯೇ ಎನ್ನುವುದು, ಈ ನೆನಪಿನೊಂದಿಗೆ ನಾವೆಷ್ಟು ಸ್ವತಂತ್ರ ಅಥವಾ ಅಂತರವನ್ನು ಸೃಷ್ಟಿಸಲು ಸಮರ್ಥರೆಂಬುದರ ಮೇಲೆ ಆಧಾರಗೊಂಡಿರುತ್ತದೆ.

ನಮಗೇ ಅರಿವಿಲ್ಲದ ನೆನಪಿನೊಂದಿಗೆ ಹೇಗೆ ಅಂತರವನ್ನು ಸೃಷ್ಟಿಸಬಹುದು ಎನ್ನುವುದು ಪ್ರಶ್ನೆಯಾಗಿ ಕಾಡುತ್ತದೆ. ಇಲ್ಲಿಯೇ ಯೋಗಾಭ್ಯಾಸದ ದೀಕ್ಷೆ ಮಹತ್ವದ್ದಾಗುತ್ತದೆ ಏಕೆಂದರೆ, ದೀಕ್ಷೆ ಒಂದು ಶಕ್ತಿಯ ಮಧ್ಯಸ್ಥಿಕೆಯಾಗುತ್ತದೆ, ಅಲ್ಲಿ ನೀವು ಮತ್ತು ನಿಮ್ಮ ಆನುವಂಶಿಕ ನೆನಪು ನಿರ್ದಿಷ್ಟ ರೀತಿಯಲ್ಲಿ ಬೇರ್ಪಡುತ್ತವೆ.

ಹೊಸ ಬದುಕಿಗಾಗಿ: ಜನರು ಮರಣ ಹೊಂದಿದಾಗ ಅಥವಾ ಮರಣ ಹೊಂದದೆ ಇರುವಾಗಲೂ, ಸಂಸ್ಕಾರವೆಂಬುದನ್ನು ಅಚರಿಸುತ್ತೇವೆ. ಅ ಆಚರಣೆ ನಮ್ಮನ್ನು ನಮ್ಮ ಅಜ್ಜ-ಅಜ್ಜಿ ಮತ್ತು ತಂದೆ-ತಾಯಿಯರ ಆನುವಂಶಿಕ ನೆನಪಿನಿಂದ ದೂರವಾಗಿಸುವ ಒಂದು ವಿಧವಾಗಿದೆ. ಇದು ನೀವು ಕಂಡಿರುವ ನಿಮ್ಮ ತಾಯಿ-ತಂದೆ ಅಥವಾ ಅಜ್ಜ-ಅಜ್ಜಿಯರ ತಲೆಮಾರಿಗೇ ಅಲ್ಲದೆ ಅವರಿಗೂ ಹಿಂದಿನ ಹಲವು ಪೀಳಿಗೆಯವರಿಗಾಗಿ ಮಾಡುವ ಸಂಸ್ಕಾರವಾಗಿದೆ. ಹಲವು ನಿರ್ದಿಷ್ಟ ರೀತಿಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಇಚ್ಛಿಸುವ ಕೆಲವರು ತಮ್ಮ ನೆನಪನ್ನು ಹಿಂದಿನ ಏಳು ಅಥವಾ ಹನ್ನೆರಡು ತಲೆಮಾರಿನವರೆಗೆ ಶುದ್ಧೀಕರಣಗೊಳಿಸುವರು. ಸಾಮಾನ್ಯವಾಗಿ ಪ್ರತಿಯೋರ್ವರೂ ಈ ಪ್ರಕ್ರಿಯೆಯನ್ನು ಹಿಂದಿನ ಮೂರು ತಲೆಮಾರಿನವರೆಗೆ ಆಚರಿಸುವರು. ಇದು ಭಾರತದ ಪರಂಪರೆಯಾಗಿದೆ. ಈ ಆಚರಣೆಗಳು ನಮ್ಮ ತಾಯಿ-ತಂದೆ ಅಥವಾ ಅಜ್ಜ-ಅಜ್ಜಿಯರ ನೆನಪಾಗಿ ಅಲ್ಲ. ಈ ಆಚರಣೆಗಳು ನಮ್ಮನ್ನು ನಾವು ನಮ್ಮ ವಂಶಾವಳಿಯ ಆನುವಂಶಿಕ ನೆನಪಿನಿಂದ ದೂರ ಮಾಡಿಕೊಳ್ಳುವ ಪ್ರಯತ್ನವಾಗಿದೆ.

ಏಕೆಂದರೆ, ನಾವೊಂದು ಹೊಸ ಬದುಕಾಗಲು ಇಚ್ಛಿಸುತ್ತೇವೆ. ಹಿಂದಿನ ಜನ್ಮಗಳ ಪುನರ್ಬಳಕೆಯಾಗುವುದಕ್ಕೆ ಇಚ್ಛಿಸುವುದಿಲ್ಲ. ವಿಧಿ/ಅದೃಷ್ಟವನ್ನು ರೂಪಿಸಿಕೊಳ್ಳಲು ಬಯಸುತ್ತೇವೆ. ಸಂಸ್ಕಾರಗಳನ್ನು ಈ ಪ್ರಯತ್ನದಲ್ಲಿ ಮಾಡುತ್ತೇವೆ. ಅದರಿಂದಾಗಿ ಅದೇ ಪರಿಭಾಷೆಯನ್ನು ಆನುವಂಶಿಕ ನೆನಪು ಮತ್ತು ಆನುವಂಶಿಕ ನೆನಪುಗಳಿಂದ ದೂರವಾಗಿಸಿಕೊಳ್ಳಲು ನೆರವಾಗುವಂತಹ ಆಚರಣೆಗಳಾದುದರಿಂದ ಇವೆರಡಕ್ಕೂ ಬಳಸಿಕೊಳ್ಳುತ್ತೇವೆ.

ಪಾಶ್ಚಿಮಾತ್ಯ ಪ್ರಪಂಚದಲ್ಲಿ ಜನರು ಅರಿತಿರುವ, ಇದನ್ನು ವ್ಯಕ್ತಪಡಿಸುವ ಅತಿ ಸಮೀಪದ ವಾಕ್ಯವೆಂದರೆ- ‘ಸತ್ತವರನ್ನು ಸತ್ತವರೊಂದಿಗೆ ಬಿಟ್ಟುಬಿಡಿ’. ಇದು ಅಷ್ಟು ಸುಲಭವಲ್ಲ, ಏಕೆಂದರೆ, ಸತ್ತವರು ನಮ್ಮೊಳಗೇ ಜೀವಿಸುತ್ತಿದ್ದಾರೆ. ಆನುವಂಶಿಕ ನೆನಪೆಂದರೆ ಇದೇ ಆಗಿದೆ. ನಿಮಗೆ ನೀವು ಬಹು ಮುಖ್ಯರೆಂದೆನಿಸಿದರೆ, ಆಗ ಮಕ್ಕಳನ್ನು ಹೊಂದುವುದೂ ಹೆಚ್ಚು ಮುಖ್ಯವಾಗುತ್ತದೆ. ಏಕೆಂದರೆ, ಅದು ಪರಂಪರೆಯಾಗಿ ಪಡೆದ ಗುಣ. ಆನುವಂಶಿಕ ವಸ್ತುವನ್ನು, ನಿಮ್ಮ ನಂತರ ಬಹಳಷ್ಟು ಜನಗಳಲ್ಲಿ ಇರಿಸಲು ಬಯಸುವಿರಿ, ಅದರಿಂದ ಯಾವುದೋ ರೀತಿಯಲ್ಲಿ ಜೀವಿಸುವಿರಿ. ಆದ್ದರಿಂದ ಮರಣ ಹೊಂದಿದವರನ್ನು ಕೀಳಂದಾಜು ಮಾಡಬೇಡಿ. ಅವರು ನಿಮ್ಮ ಮೂಲಕ ಬದುಕಲು ಪ್ರಯತ್ನಿಸುತ್ತಾರೆ.

ಬಂಧನದ ನರಳಾಟ: ಆದರೆ ನೀವೊಂದು ‘ಶಾಂಭವಿಮಹಾಮುದ್ರಾ’ ಕ್ರಿಯೆಯಂತಹ ಶಕ್ತಿಯುತವಾದ ಪ್ರಕ್ರಿಯೆಗೆ ದೀಕ್ಷೆ ಪಡೆದವರಾದರೆ- ಅದಕ್ಕೆ ಸಮರ್ಪಿಸಿಕೊಂಡರೆ, ಆ ಶಕ್ತಿಯುತವಾದ ಪ್ರಭಾವವು ನೀವು ಆನುವಂಶಿಕ ನೆನಪಿನಿಂದ ದೂರವಾಗಿಸಿಕೊಳ್ಳಲು ಒಂದು ಮಧ್ಯಸ್ಥಿಕೆಯಂತೆ ಕಾರ್ಯನಿರ್ವಹಿಸುತ್ತದೆ. ನೀವೊಂದು ಬದುಕಿನ ಪ್ರಜ್ಞಾಯುತ ಪ್ರಕ್ರಿಯೆಯಾಗುವಿರಿ. ಒತ್ತಾಯದ ಆವರ್ತನಗಳ ವಸ್ತುವಾಗುವುದಿಲ್ಲ. ಅದು ಮಾನವನಿಗೆ ಬಹುಮುಖ್ಯ. ಏಕೆಂದರೆ, ಬದುಕಿನಲ್ಲಿ ಮುಕ್ತವಾಗಿರುವುದು ಮುಖ್ಯವಾದ ಲಕ್ಷ್ಯ. ಸ್ವಾತಂತ್ರ್ಯ ಹರಣಗೊಂಡಾಗ ಹೆಚ್ಚು ವ್ಯಥೆ ಅನುಭವಿಸುತ್ತಾರೆ. ಬದುಕಿನಲ್ಲಿ ಸವಲತ್ತು ಅಥವಾ ಮತ್ತಾವುದನ್ನೋ ನಿರಾಕರಿಸಿದಾಗಲೂ ಮನುಷ್ಯರು ಅದನ್ನು ಹೇಗೋ ನಿಭಾಯಿಸುತ್ತಾರೆ ಹಾಗೂ ಸಹಿಸಿಕೊಳ್ಳುತ್ತಾರೆ. ವಾಸ್ತವದಲ್ಲಿ ಅವರು ಬಲಶಾಲಿಗಳಾಗುತ್ತಾರೆ; ಆದರೆ ಅವರ ಸ್ವಾತಂತ್ರ್ಯಹರಣ ಮಾಡಿದರೆ, ಆಗ ಅವರ ನೋವು ಅತ್ಯಧಿಕವಾಗಿರುತ್ತದೆ.

ನಾನು ಇದನ್ನು ವೈಯಕ್ತಿಕವಾಗಿ ಕಂಡಿದ್ದೇನೆ ಹಾಗೂ ಅದು ನಂಬಲಸಾಧ್ಯವಾಗಿತ್ತು. ಈಶಾ ಸಂಸ್ಥೆಯ 20 ಪ್ರತಿಶತ ಸಮಯ ಮತ್ತು ಸಾಧನಸಂಪತ್ತು ಕಾರಾಗೃಹಗಳಲ್ಲಿ ನಡೆಯುವ ಈಶಾ ಕಾರ್ಯಕ್ರಮಗಳಿಗೆ ವಿನಿಯೋಗವಾಗುತ್ತದೆ. ತಮಿಳುನಾಡಿನ ಎಲ್ಲ ಕಾರಾಗೃಹಗಳಲ್ಲಿ ಹಾಗೂ ಅಮೆರಿಕದ ಕೆಲವು ಕಾರಾಗೃಹಗಳಲ್ಲಿ ಕಾರ್ಯಕ್ರಮ ನಡೆಸುತ್ತೇವೆ. ಕಾರಾಗೃಹ ಎಂತಹ ಸ್ಥಳವೆಂದರೆ ಅಲ್ಲಿ ಎಲ್ಲವೂ ವ್ಯವಸ್ಥಿತವಾಗಿರುತ್ತದೆ. ಆಹಾರ ಸಮಯಕ್ಕೆ ಸರಿಯಾಗಿ ಬರುತ್ತದೆ. ಜನರು ನಿಮಗಾಗಿ ಬಾಗಿಲನ್ನು ತೆಗೆಯುತ್ತಾರೆ, ಮುಚ್ಚುತ್ತಾರೆ. ಅವರು ನಿಮಗಾಗಿ ದೀಪಗಳನ್ನು ಹಚ್ಚುತ್ತಾರೆ ಮತ್ತು ಆರಿಸುತ್ತಾರೆ. ವಾಸ್ತವದಲ್ಲಿ ಅದೊಂದು ಒಳ್ಳೆಯ ಬದುಕಾಗಿರುತ್ತದೆ. ಬಹಳ ಕೆಟ್ಟವರ್ತನೆಯೊಂದಿಗೆ ಆಚೆ ಬದುಕುವ ಜನರಿಗೆ ಕಾರಾಗೃಹ ಒಳ್ಳೆಯ ಸ್ಥಳವಾಗಿದೆ. ಆದರೆ ಕಾರಾಗೃಹವನ್ನು ಪ್ರವೇಶಿಸಿದಾಗ, ಅಲ್ಲಿನ ವಾತಾವರಣದಲ್ಲಿ ಒಂದು ರೀತಿಯ ವಿವರಿಸಲಾಗದಂಥ ನೋವಿರುತ್ತದೆ. ಅಲ್ಲಿ ಎಲ್ಲೆಲ್ಲಿಯೂ ನೋವಿರುತ್ತದೆ, ಏಕೆಂದರೆ ನಿಮ್ಮಿಂದ ಒಂದನ್ನು ಕಸಿದುಕೊಳ್ಳಲಾಗಿದೆ. ನಿಮಗೆ ಆಹಾರ, ಬಟ್ಟೆ, ರಕ್ಷಣೆ ಎಲ್ಲವನ್ನೂ ಕೊಟ್ಟು ನಿಮ್ಮಿಂದ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲಾಗುತ್ತದೆ. ಮನುಷ್ಯನಿಗೆ ಅದೊಂದು ಬಹಳ ಆಳವಾದ ನೋವು. ನಿಮ್ಮಿಂದ ಸ್ವಾತಂತ್ರ್ಯವನ್ನು ಏಕೆ ಕಿತ್ತುಕೊಳ್ಳಲಾಗಿದೆ ಎನ್ನುವುದು ಗಣನೆಗೆ ಬರುವುದಿಲ್ಲ. ಅದು ಯಾರಿಂದಲೋ ಆಗಿರಬಹುದು, ನಿಮ್ಮದೇ ನಡತೆ, ಆನುವಂಶಿಕ ವಸ್ತು ಅಥವಾ ನಿಮ್ಮ ವಿಕಸನದ ನೆನಪುಗಳಿಂದ ಆಗಿರಬಹುದು- ಜೋಲುಮೋರೆ ಹಾಕಿಕೊಂಡು ನೋವನ್ನು ಅನುಭವಿಸುವಿರಿ. ನಿಮಗೆ ಇನ್ಯಾವುದೇ ಕಾರಣದ ಅಗತ್ಯವಿಲ್ಲ. ಏಕೆಂದು ಅರಿಯದೆ ನೋವನ್ನು ಅನುಭವಿಸುವಿರಿ. ದೀಕ್ಷೆಗಳ ಶಕ್ತಿಯ ಮಧ್ಯಸ್ತಿಕೆಗೆ ಇದೇ ಕಾರಣ; ಅದರಿಂದ ನಿಮ್ಮ ನೆನಪುಗಳಿಂದ ದೂರವಾಗಿಸಿಕೊಳ್ಳಲು ಸಮರ್ಥರಾಗುವಿರಿ.

(ಸದ್ಗುರು ಅವರು ಯೋಗಿ, ದಾರ್ಶನಿಕ, ಆಧ್ಯಾತ್ಮಿಕ ನಾಯಕ. www.isha.sadhguru.org)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net