ಪ್ರೇಮಶೇಖರ ಅವರ ಜಗದಗಲ ಅಂಕಣ| ದೇವರ ಶಾಪವೋ, ಮನುಷ್ಯನ ಅವಿವೇಕವೋ?

Column lead
Published on
ಸುನ್ನಿ-ಪ್ರಧಾನ ಅರಬ್ ಜಗತ್ತು ಪ್ಯಾಲೆಸ್ತೈನ್ ಪರವಾಗಿದ್ದರೂ ಅದು ಹಮಾಸ್ ಪರವಾಗಿ ಅಲ್ಲ. ಇದನ್ನು ಎರಡನೆಯ ಅತಿ ಬಲಾಢ್ಯ ಅರಬ್ ರಾಷ್ಟ್ರ ಯುಎಇ ಬಹಿರಂಗವಾಗಿಯೇ ವ್ಯಕ್ತಪಡಿಸಿದೆ ಮತ್ತು ಹಮಾಸ್​ಗೆೆ ಎಚ್ಚರಿಕೆಯನ್ನೂ ನೀಡಿದೆ, ಅದೂ ಹಮಾಸ್ ಇಸ್ರೇಲ್ ವಿರುದ್ಧ ಕಾದಾಡುತ್ತಿದ್ದಾಗಲೇ!

ಹಮಾಸ್ ಮತ್ತು ಇಸ್ರೇಲ್ ನಡುವಿನ ಹನ್ನೊಂದು ದಿನಗಳ ಘರ್ಷಣೆಗೆ ಮೇ 21ರಂದು ಕದನವಿರಾಮದ ತೆರೆ ಬಿದ್ದರೂ ಆ ಪ್ರದೇಶದ ಉರಿ ಪೂರ್ಣವಾಗಿ ಆರಿಲ್ಲ. ಪಶ್ಚಿಮ ಏಷ್ಯಾದ ಈ ಶತಶತಮಾನಗಳ ಉರಿ ಸದ್ಯಕ್ಕಂತೂ ಆರುವುದಿಲ್ಲ, ಬದಲಾಗಿ ಅದು ಉಲ್ಬಣಗೊಳ್ಳುವ ಸೂಚನೆಗಳು ಗೋಡೆಯ ಮೇಲಿನ ಬರಹದಷ್ಟೇ ಸ್ಪಷ್ಟ. ಅದು ಪ್ರಸಕ್ತ ಕದನವಿರಾಮಕ್ಕೆ ಕಾರಣವಾದ ಈಜಿಪ್ತ್​ಗೂ ಗೊತ್ತಿದೆ, ಅದರ ಹಿಂದೆ ಶ್ರಮಿಸಿದ ಅಮೆರಿಕಕ್ಕೂ ಗೊತ್ತಿದೆ.

ವಿಶ್ವದ ಮೂರು ಪ್ರಮುಖ ಧರ್ಮಗಳ ತವರು ಪಶ್ಚಿಮ ಏಷ್ಯಾ. ಆ ಮೂರೂ ಧರ್ಮಗಳು ಸಾರುವುದು ಕರುಣೆ, ಪ್ರೀತಿ, ಸಹನೆ, ಸಹೋದರತೆ, ಸಹಬಾಳ್ವೆ. ಆದರೆ ಈ ಪಂಚಮೌಲ್ಯಗಳನ್ನು ಪಶ್ಚಿಮ ಏಷ್ಯಾದ ರಾಜಕೀಯ ಮತ್ತು ಧಾರ್ವಿುಕ ನಾಯಕರು ಬರೀ ಪುಸ್ತಕದ ಬದನೇಕಾಯಿಯಾಗಷ್ಟೇ ಇಟ್ಟುಕೊಂಡಿರುವುದು ಒಂದು ದುರಂತ. ಪಶ್ಚಿಮ ಏಷ್ಯಾದಲ್ಲಿನ ನಿಲ್ಲದ ಅಶಾಂತಿಗೆ ಹಲವು ಮಗ್ಗುಲುಗಳಿವೆ. ತಮ್ಮ ಹಿತಸಾಧನೆಗೆ ತಾವು ಮಾಡಬೇಕಾಗಿರುವುದೇನು ಎಂದು ಅರಿಯದ ನಾಯಕವರ್ಗ ಪ್ಯಾಲೆಸ್ತೀನಿ ಪಾಳಯದಲ್ಲಿರುವುದು ಸಮಸ್ಯೆಯ ಒಂದು ಆಯಾಮವಾದರೆ, ಅವರನ್ನು ಸಂಕುಚಿತ ಹಿತಾಸಕ್ತಿ ಸಾಧನೆಗಾಗಿ ಬಳಸಿಕೊಳ್ಳುವ ವಿದೇಶಗಳು ಅವರ ಹತ್ತಿರದಲ್ಲೇ ಇರುವುದು ನಿರಂತರ ರಕ್ತದೋಕುಳಿಯ ಇನ್ನೊಂದು ಆಯಾಮ. ಜತೆಗೆ, ಇವರಿಗೆ ಸರಿದಾರಿ ತೋರಿಸದ, ತಪು್ಪ ಮಾರ್ಗವೇ ಶ್ರೇಯಸ್ಕರ ಎಂದು ಪ್ರೋತ್ಸಾಹಿಸುವ ಭಾಗಶಃ ವಿಶ್ವ ಸಮುದಾಯ ಇನ್ನೊಂದು ಕಡೆ. ಪಶ್ಚಿಮ ಏಷ್ಯಾವನ್ನು ಅಶಾಂತಿಯ ಕಡಲಿನಲ್ಲಿ ಕೆಡವಿಬಿಟ್ಟಿರುವ ಈ ಮೂರು ಪ್ರಮುಖ ಅಂಶಗಳನ್ನು ಒಂದೊಂದಾಗಿ ವಿಶ್ಲೇಷಿಸೋಣ.

1. ಪ್ಯಾಲೆಸ್ತೀನಿಯರಲ್ಲಿ ವಿವೇಕಿ ನಾಯಕತ್ವದ ಕೊರತೆ

ಪ್ಯಾಲೆಸೆôನ್ ನೆಲವನ್ನು ಯೆಹೂದಿಯರೊಂದಿಗೆ ಹಂಚಿಕೊಳ್ಳದೇ ಬೇರೆ ದಾರಿಯೇ ಇಲ್ಲ ಎಂಬ ವಸ್ತುಸ್ಥಿತಿಯನ್ನು ಗುರುತಿಸದ ಪ್ಯಾಲೆಸ್ತೀನೀ ಅರಬ್ ನಾಯಕರು ವಿಶ್ವಸಂಸ್ಥೆಯ ‘ವಿಭಜನಾ ಯೋಜನೆ’ಯನ್ನು ಮೂರು ಸಲ ತಿರಸ್ಕರಿಸಿದರು. ನಂತರ ಯೆಹೂದಿ ನಾಯಕರು ವಿಶ್ವಸಂಸ್ಥೆ ತಮಗಾಗಿ ನೀಡಿದ್ದ ನೆಲದಲ್ಲಿ ಇಸ್ರೇಲನ್ನು ಸ್ಥಾಪಿಸಿಕೊಂಡಾಗ ಅದನ್ನು ಸುತ್ತಲ ಅರಬ್ ದೇಶಗಳ ಸಹಾಯದಿಂದ ಮೊಳಕೆಯಲ್ಲೇ ಚಿವುಟಿಹಾಕಿಬಿಡಬಹುದು ಎಂದೂ ಅವರು ಭಾವಿಸಿ ಸ್ಥಳೀಯ ಹಾಗೂ ಅಂತಾರಾಷ್ಟ್ರೀಯ ರಾಜಕಾರಣ ಸಾಗುತ್ತಿದ್ದ ದಿಕ್ಕನ್ನು ಅರಿಯುವಲ್ಲಿ ವಿಫಲರಾದರು. ಇಸ್ರೇಲ್ ನಿರ್ನಾಮವಾಗಲು ಅಮೆರಿಕ ಮತ್ತು ಪಶ್ಚಿಮ ಯುರೋಪ್ ಬಿಡುವ ಸಾಧ್ಯತೆಯೇ ಇರಲಿಲ್ಲ ಮತ್ತು ಅವುಗಳಿಗೆದುರಾಗಿ ಹೋರಾಡಿ ಗೆಲ್ಲುವ ಸೇನಾ-ರಾಜತಾಂತ್ರಿಕ-ಆರ್ಥಿಕ ಸಾಮರ್ಥ್ಯ ಅರಬ್ ರಾಷ್ಟ್ರಗಳಿಗಿರಲೇ ಇಲ್ಲ ಮತ್ತು ಆ ಅಗತ್ಯಗಳಿಗಾಗಿ ಅವು ಅಮೆರಿಕ ಮತ್ತು ಪಶ್ಚಿಮ ಯುರೋಪನ್ನೇ ಅವಲಂಬಿಸಿದ್ದವು! ಆ ಅವಲಂಬನೆ ಯಾವ ಮಟ್ಟಕ್ಕಿತ್ತೆಂದರೆ 1956ರಲ್ಲಿ ಸುಯೆಜ್ ಕಾಲುವೆ ಮಾಲಿಕತ್ವದ ಸಂಬಂಧವಾಗಿ ಬ್ರಿಟನ್ ಮತ್ತು ಫ್ರಾನ್ಸ್ ಒಟ್ಟುಗೂಡಿ ಪ್ರಮುಖ ಅರಬ್ ರಾಷ್ಟ್ರವಾದ ಈಜಿಪ್ತ್ ಮೇಲೆ ದಾಳಿಯೆಸಗಿದಾಗ ಅದನ್ನು ಏಕಮತದಿಂದ ಪರಿಣಾಮಕಾರಿ ದನಿಯಲ್ಲಿ ಖಂಡಿಸಲೂ ಅರಬ್ ಜಗತ್ತು ಸೋತಿತು. ಅವುಗಳ ಈ ಬಲಹೀನತೆಯನ್ನು ಅಂದಿನ ಪಾಕಿಸ್ತಾನಿ ಪ್ರಧಾನಮಂತ್ರಿ ಹುಸೇನ್ ಶಾಹೀದ್ ಸುಹ್ರವರ್ದಿ ಬಲು ಸೊಗಸಾಗಿ ವರ್ಣಿಸಿದ್ದು ಹೀಗೆ- ‘0+0+0=0!’ ಈ ‘0’ ಅನ್ನು ನಂಬಿಕೊಂಡು ತಮ್ಮ ಗುರಿಯನ್ನು ಸಾಧಿಸಿಕೊಳ್ಳಲಾಗದು ಎಂದು ಪ್ಯಾಲೆಸ್ತೀನ್ ಅರಬ್ ನಾಯಕರಿಗೆ 1988ರವರೆಗೆ ಅರ್ಥವಾಗಲೇ ಇಲ್ಲ, ಅಷ್ಟರೊಳಗೆ ಅವರು ಮಾಡಿದ ತಪು್ಪಗಳು ಒಂದೆರಡಲ್ಲ.

ಪ್ಯಾಲೆಸೆôನ್​ನ ‘ವಿಮೋಚನೆ’ಗಾಗಿ ಹೋರಾಡುತ್ತಿದ್ದ ವಿವಿಧ ಪ್ಯಾಲೆಸೆôನ್ ಸಂಘಟನೆಗಳು 1964ರಲ್ಲಿ ಒಂದುಗೂಡಿ ‘ಪ್ಯಾಲೆಸೆôನ್ ಲಿಬರೇಷನ್ ಆರ್ಗನೈಜೇಶನ್ (ಪಿಎಲ್​ಓ)’ ಸ್ಥಾಪಿಸಿಕೊಂಡಾಗ ಅದಕ್ಕೆ ಆಶ್ರಯ ನೀಡಿದ್ದು ಜೋರ್ಡಾನ್. ಆದರೆ ಅದಕ್ಕಾಗಿ ಆ ಅರಬ್ ದೇಶ ತೆತ್ತ ಬೆಲೆ ಅಪಾರ. ತನಗೆ ಆಶ್ರಯ ನೀಡಿದ ಮನೆಯ ಮಾಲೀಕನನ್ನೇ ಕೊಂದು ಮನೆಯನ್ನು ಸುಪರ್ದಿಗೆ ತೆಗೆದುಕೊಳ್ಳುವಂತಹ ಅತೀವ ಕೃತಘ್ನತಾ ಹಾಗೂ ದುರುಳ ಮಾರ್ಗಕ್ಕಿಳಿದ ಪಿಎಲ್​ಓ ಗೆರಿಲ್ಲಾಗಳು ಸೆಪ್ಟೆಂಬರ್ 1970ರಲ್ಲಿ ಅರಸ ಹುಸೇನ್​ರನ್ನೇ ಕೊಂದು ಜೋರ್ಡಾನ್ ದೇಶವನ್ನೇ ತಮ್ಮ ಕೈಗೆ ತೆಗೆದುಕೊಳ್ಳಲು ಪಿತೂರಿ ಎಸಗಿದರು! ಇದು ಅರಬ್ಬರು ಯೆಹೂದಿಗಳಿಗಿರಲಿ, ಸಹಅರಬ್ಬರಿಗೇ ತೋರಿದ ಸಹೋದರ ಪ್ರೀತಿ! ಪಾಕಿಸ್ತಾನದ ಬಂಗಾಲಿ ಪ್ರಧಾನಿ ಎಚ್. ಎಸ್. ಸುಹ್ರವರ್ದಿ ಇವರನ್ನು ಅದೆಷ್ಟು ಚೆನ್ನಾಗಿ ಅರ್ಥಮಾಡಿಕೊಂಡಿದ್ದರು!

ಇದು ಇಲ್ಲಿಗೇ ನಿಲ್ಲಲಿಲ್ಲ. ಪಿಎಲ್​ಓ ಗೆರಿಲ್ಲಾಗಳ ಘಾತಕ ಯೋಜನೆಯನ್ನು ಅರಿತ ಜೋರ್ಡಾನ್ ಅರಸ ಹುಸೇನ್ ಮತ್ತು ಪ್ರಧಾನಮಂತ್ರಿ ವಾಸ್ಪಿ ತಾಲ್ ಸೇನಾ ಕಾರ್ಯಾಚರಣೆ ಕೈಗೊಂಡು ಸಾವಿರಕ್ಕೂ ಅಧಿಕ ಪಿಎಲ್​ಓ ಗೆರಿಲ್ಲಾಗಳನ್ನು ಕೊಂದರು ಮತ್ತು ಪಿಎಲ್​ಓ ಅನ್ನು ರಾಜಧಾನಿ ಅಮ್ಮಾನ್​ನಿಂದ ಒದ್ದೋಡಿಸಿದರು. ಪ್ರತಿಯಾಗಿ ಕೆಲ ಪ್ಯಾಲೆಸ್ತೀನಿಯರು ‘ಬ್ಲಾ್ಯಕ್ ಸೆಪ್ಟೆಂಬರ್’ ಎಂಬ ಭಯೋತ್ಪಾದಕ ಸಂಘಟನೆ ಕಟ್ಟಿಕೊಂಡು ದಾಂಧಲೆಗೆ ತೊಡಗಿದರು. 1971ರಲ್ಲಿ ಜೋರ್ಡಾನ್ ಪ್ರಧಾನಿ ವಾಸ್ಪಿ ತಾಲ್​ರನ್ನು ಕೈರೋದಲ್ಲಿ ಕೊಂದದ್ದು, ಮರುವರ್ಷ ಮ್ಯೂನಿಕ್ ಒಲಿಂಪಿಕ್ಸ್ ಪಂದ್ಯಾವಳಿಗಳಲ್ಲಿ ಭಾಗವಹಿಸುತ್ತಿದ್ದ ಹನ್ನೊಂದು ಇಸ್ರೇಲಿ ಅಟಗಾರರು ಮತ್ತು ಕೋಚ್​ಗಳನ್ನು ಅಪಹರಿಸಿ ಕೊಂದದ್ದು ಇವರ ‘ಹೆಗ್ಗಳಿಕೆ’ಗಳಲ್ಲಿ ಕೆಲವು. ಪರಿಣಾಮವಾಗಿ ಪ್ಯಾಲೆಸೆôನ್ ರಾಷ್ಟ್ರ ಸ್ಥಾಪನೆಗೆ ಪಶ್ಚಿಮ ಯುರೋಪಿನಲ್ಲಿದ್ದ ಅಳಿದುಳಿದ ಸಮರ್ಥನೆಯೂ ಗಾಳಿಯಲ್ಲಿ ತೂರಿಹೋಯಿತು. ತನ್ನ ಕಾಲಿನ ಮೇಲೆ ತಾನೇ ಕಲ್ಲು ಹಾಕಿಕೊಳ್ಳುವುದು ಅಂದರೆ ಇದು! ಬಹುಪಾಲು ಪಶ್ಚಿಮ ಯುರೋಪಿಯನ್ ರಾಷ್ಟ್ರಗಳು ಭಯೋತ್ಪಾದನಾ-ನಿಗ್ರಹ ದಳಗಳನ್ನು ಸ್ಥಾಪಿಸಿದ್ದೇ ಆಗ.

1967ರಲ್ಲಿ ಸ್ಥಾಪಿತವಾಗಿ, ಪಿಎಲ್​ಓನ ಭಾಗವಾದ ಎಡಪಂಥೀಯ ‘ಪಾಪ್ಯುಲರ್ ಫ್ರಂಟ್ ಫಾರ್ ದ ಲಿಬರೇಶನ್ ಆಫ್ ಪ್ಯಾಲೆಸೆôನ್(ಪಿಎಫ್​ಎಲ್​ಪಿ)’ನದು ಇನ್ನೊಂದು ದೊಡ್ಡ ಕಥೆ. ಆ ದಿನಗಳ ಕುಖ್ಯಾತ ಅಂತಾರಾಷ್ಟ್ರೀಯ ಮಾರ್ಕಿಸ್ಟ್-ಲೆನಿನಿಸ್ಟ್ ಭಯೋತ್ಪಾದಕ, ‘ಕಾಲೋಸ್ ದ ಜಕಾಲ್’ ಎಂಬ ಅಡ್ಡಹೆಸರಿನ ವೆನೆಜ್ಯೂಯೇಲಾ ಮೂಲದ ಇಲ್ಯಿಚ್ ರ್ಯಾಮಿರೆಜ್ ಸ್ಯಾಂಚೆಜ ಅನ್ನು ತನ್ನೊಂದಿಗೆ ಸೇರಿಸಿಕೊಂಡ ಈ ಪಿಎಫ್​ಎಲ್​ಪಿ ವಿವಿಧ ಅರಬ್ ಮತ್ತು ಪಶ್ಚಿಮ ಯುರೋಪಿಯನ್ ರಾಜಧಾನಿಗಳಲ್ಲಿ ಎಸಗಿದ ಭಯೋತ್ಪಾದಕ ಕೃತ್ಯಗಳಿಗೆ ಲೆಕ್ಕವಿಲ್ಲ. ಹೀಗೆ ಅಂತಾರಾಷ್ಟ್ರೀಯ ರಂಗದಲ್ಲಿ ಪ್ಯಾಲೆಸ್ತೀನಿಯರ ಬಗ್ಗೆ ಅನುಕಂಪ, ಪ್ರೀತಿ ಕುಗ್ಗಿಹೋಗಲು ಬ್ಲಾ್ಯಕ್ ಸೆಪ್ಟೆಂಬರ್ ಮತ್ತು ಪಿಎಫ್​ಎಲ್​ಪಿಗಳ ಕೊಡುಗೆ ಅಪಾರ. ಕೊನೆಗೆ ಪಿಎಲ್​ಓ ಭಯೋತ್ಪಾದನೆ ತೊರೆದು ಶಾಂತಿಮಾರ್ಗಕ್ಕಿಳಿದರೂ ಹಮಾಸ್ ಮತ್ತಷ್ಟು ಉಗ್ರ ಭಯೋತ್ಪಾದನಾ ಮಾರ್ಗವನ್ನು ಅನುಸರಿಸತೊಡಗಿದೆ. ಪ್ಯಾಲೆಸೆôನ್ ರಾಷ್ಟ್ರಕ್ಕಾಗಿ ಇಸ್ರೇಲ್ ಗಾಜಾವನ್ನು ಬಿಟ್ಟುಕೊಟ್ಟದ್ದು, ನಂತರ ತನಗೆ ಅಲ್ಲಿ ಅಧಿಕಾರ ಸಿಕ್ಕಿದ್ದು ಪಿಎಲ್​ಓ ಅನುಸರಿಸಿದ ಶಾಂತಿಮಾರ್ಗದಿಂದಲೇ ಹೊರತು ಭಯೋತ್ಪಾದನೆಯಿಂದ ಅಲ್ಲ, ಭಯೋತ್ಪಾ ದನಾ ಮಾರ್ಗದಲ್ಲೇ ಮುಂದುವರಿದರೆ ಈಗ ಸಿಕ್ಕಿರುವುದನ್ನೂ ಕಳೆದುಕೊಳ್ಳ ಬೇಕಾಗಬಹುದು ಎನ್ನುವುದು ಹಮಾಸ್​ಗೆ ಅರ್ಥವಾಗಲು ಇನ್ನೆಷ್ಟು ಕಾಲ ಬೇಕು?

2. ಸ್ವಾರ್ಥಿ ವಿದೇಶಗಳು

ಇರಾನ್​ನ ಹಿಂದಿನ ಅರಸ ರೆಜಾ ಶಾ ಪಹ್ಲವಿಗೆ ಇಸ್ರೇಲ್ ಬಗ್ಗೆ ಅಂತಹ ತಕರಾರೇನೂ ಇರಲಿಲ್ಲ. ಆದರೆ 1979ರಲ್ಲಿ ಆತನನ್ನು ಇಸ್ಲಾಮಿಕ್ ಕ್ರಾಂತಿಯ ಮೂಲಕ ಕೆಳಗಿಳಿಸಿ ಅಧಿಕಾರಕ್ಕೆ ಬಂದು ಮೂಲಭೂತವಾದಿ ಸರ್ಕಾರವನ್ನು ಸ್ಥಾಪಿಸಿದ ಆಯಾತೊಲ್ಲಾ ಖೊಮೇನಿ ಮತ್ತವರ ಉತ್ತರಾಧಿಕಾರಿ ಆಯತೊಲ್ಲಾ ಖಮೇನಿ ತಮ್ಮ ದೇಶವನ್ನು ಮುಸ್ಲಿಂ ಜಗತ್ತಿನ ನಾಯಕನನ್ನಾಗಿಸಲು ಇನ್ನಿಲ್ಲದ ಬಗೆಯಲ್ಲಿ ಹೆಣಗುತ್ತಿದ್ದಾರೆ. ಆದರೆ ಸುನ್ನಿ ಬಹುಸಂಖ್ಯಾತ ಮುಸ್ಲಿಂ ಜಗತ್ತು ಸುನ್ನಿ ಸೌದಿ ಅರೇಬಿಯಾವನ್ನು ತೊರೆದು ಶಿಯಾ ಇರಾನ್ ಅನ್ನು ನಾಯಕನನ್ನಾಗಿ ಎಂದಿಗೂ ಸ್ವೀಕರಿಸಲಾರವು ಎಂಬ ಸತ್ಯದ ಅರಿವೇ ಅವರಿಗಿಲ್ಲ. ಇಸ್ರೇಲನ್ನು ವಿರೋಧಿಸುವುದರ ಮೂಲಕ ತಾನು ಮುಸ್ಲಿಂ ಜಗತ್ತಿನ ಮನಗೆಲ್ಲಬಹುದು ಎಂದು ತಪ್ಪಾಗಿ ಭಾವಿಸುವ ಇರಾನ್ ಆ ನೀತಿಗೆ ಕಟ್ಟುಬಿದ್ದು ಲೆಬನಾನ್​ನ ಹೆಜ್ಬೊಲ್ಲಾ ಮತ್ತು ಪ್ಯಾಲೆಸೆôನ್​ನ ಹಮಾಸ್​ನ ಬೆನ್ನಿಗೆ ನಿಂತಿದೆ. ಸುನ್ನಿ ಸಂಘಟನೆಯಾದ ಹಮಾಸ್ ಶಿಯಾ ಇರಾನ್ ಪರವಾಗಿ ಕತ್ತಿ ಬೀಸುವುದರಿಂದಾಗಿಯೇ ಸುನ್ನಿ ಜಗತ್ತಿನ ಬೆಂಬಲವನ್ನು ಕಳೆದುಕೊಂಡಿದೆ. ಈಗ ಸುನ್ನಿ-ಪ್ರಧಾನ ಅರಬ್ ಜಗತ್ತು ಪ್ಯಾಲೆಸ್ತೈನ್ ಪರವಾಗಿದ್ದರೂ ಅದು ಹಮಾಸ್ ಪರವಾಗಿ ಅಲ್ಲ. ಇದನ್ನು ಎರಡನೆಯ ಅತಿ ಬಲಾಢ್ಯ ಅರಬ್ ರಾಷ್ಟ್ರ ಯುಎಇ ಬಹಿರಂಗವಾಗಿಯೇ ವ್ಯಕ್ತಪಡಿಸಿದೆ ಮತ್ತು ಹಮಾಸ್​ಗೆೆ ಎಚ್ಚರಿಕೆಯನ್ನೂ ನೀಡಿದೆ, ಅದೂ ಹಮಾಸ್ ಇಸ್ರೇಲ್ ವಿರುದ್ಧ ಕಾದಾಡುತ್ತಿದ್ದಾಗಲೇ! ಕಳೆದ ವರ್ಷಾಂತ್ಯದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆಯಲ್ಲಿ ಮೊದಲಿಗೆ ಯುಎಇ ಮತ್ತು ಬಹರೈನ್​ಗಳು, ನಂತರ ಸುಡಾನ್ ಇಸ್ರೇಲ್ ಜತೆ ಸಂಬಂಧ ಸುಧಾರಿಸಿಕೊಂಡದ್ದು ಮತ್ತು ಈ ‘ಅಬ್ರಹಾಂ ಒಪ್ಪಂದ’ಗಳಿಗೆ ಸೌದಿ ಅರೇಬಿಯಾದ ಬೆಂಬಲವಿದ್ದದ್ದು ಹಮಾಸ್​ನ ಕಣ್ಣು ತೆರೆಸಬೇಕು.

3. ಬುದ್ಧಿ ಹೇಳದ ವಿಶ್ವಸಮುದಾಯ

ಶೀತಲಸಮರ ಯುಗದಲ್ಲಿ ಇಸ್ರೇಲ್​ಗೆ ಅಮೆರಿಕದ ಬೆಂಬಲವಿದ್ದದ್ದನ್ನೇ ನೆಪ ಮಾಡಿಕೊಂಡು ಸೋವಿಯತ್ ಯೂನಿಯನ್ ಪಿಎಲ್​ಓ ಪರ ನಿಂತಿತು. ಆ ದಿನಗಳಲ್ಲಿ ಹೊಸದಾಗಿ ಸ್ವಾತಂತ್ರ್ಯ ಗಳಿಸಿದ ತೃತೀಯ ಜಗತ್ತಿನ ರಾಷ್ಟ್ರಗಳಲ್ಲಿ ಸೋವಿಯತ್-ಪೋಷಿತ ಎಡ ವಿಚಾರಧಾರೆ ಪ್ರಭಾವಶಾಲಿಯಾಗಿತ್ತು. ಅಲಿಪ್ತ ಚಳವಳಿಯಲ್ಲಿ ಭಾಗಿಯಾಗಿದ್ದವು ಈ ದೇಶಗಳೇ. ಅಲಿಪ್ತ ಹಣೆಪಟ್ಟಿ ಹಚ್ಚಿಕೊಂಡ ಈ ದೇಶಗಳು ಯಾವ ವಿಷಯದಲ್ಲೂ ನಿಜವಾದ ಅಲಿಪ್ತತೆಯನ್ನು ಪ್ರದರ್ಶಿಸಲೇ ಇಲ್ಲ. ಇವು ಸೋವಿಯತ್-ಪರ, ಅಮೆರಿಕ-ವಿರೋಧಿ; ಪ್ಯಾಲೆಸೆôನ್-ಪರ, ಇಸ್ರೇಲ್-ವಿರೋಧಿ! ನೂರಕ್ಕೂ ಮಿಕ್ಕಿದ ಸಂಖ್ಯೆಯ ಅಲಿಪ್ತ ದೇಶಗಳು ಇಸ್ರೇಲ್ ಮತ್ತು ಪ್ಯಾಲೆಸೆôನ್ ಎರಡರ ಹಿತಾಸಕ್ತಿಗಳನ್ನೂ ಬೆಂಬಲಿಸಿ, ಇಸ್ರೇಲ್ ಜತೆ ಹೊಂದಾಣಿಕೆ ಮಾಡಿಕೊಂಡು ಸಹಬಾಳ್ವೆ ನಡೆಸುವಂತಹ ಸರಿದಾರಿಯನ್ನು ಪ್ಯಾಲೆಸ್ತೀನಿಯರಿಗೆ ತೋರದೆ, ಆ ಯೆಹೂದಿ ರಾಷ್ಟ್ರದ ವಿರುದ್ಧವಾಗಿ ನಿಂತವು. ಇದರಿಂದಾಗಿ ಇಸ್ರೇಲ್ ವಿರುದ್ಧದ ತನ್ನ ಎಲ್ಲ ಕೃತ್ಯಗಳಿಗೂ ಜಗತ್ತಿನ ಒಂದು ದೊಡ್ಡ ಭಾಗದ ಬೆಂಬಲವಿದೆಯೆಂದು ಅರ್ಥೈಸಿದ ಪಿಎಲ್​ಓ ತನ್ನ ಋಣಾತ್ಮಕ ಹಾದಿಯಲ್ಲಿ ಎಗ್ಗಿಲ್ಲದೇ ಸಾಗಿತು. ಕೊನೆಗೂ ಪಿಎಲ್​ಓನ ಕಣ್ಣು ತೆರೆದಾಗ ಅದು ಶಾಂತಿಗಾಗಿ ಅವಲಂಬಿಸಿದ್ದು ನ್ಯಾಟೋ ದೇಶಗಳಾದ ನಾರ್ವೆ ಮತ್ತು ಅಮೆರಿಕಗಳನ್ನು, ಅಲಿಪ್ತ ದೇಶಗಳನ್ನಲ್ಲ. ಉಪಸಂಹಾರ

ಯೆಹೂದಿಯರ ಹಾಗೂ ಕ್ರಿಶ್ಚಿಯನ್ನರ ಪವಿತ್ರ ಗ್ರಂಥವಾದ ಬೈಬಲ್​ನ ‘ಓಲ್ಡ್ ಟೆಸ್ಟ್​ಮೆಂಟ್(ಹಳೇ ಒಡಂಬಡಿಕೆ)ನ ಕೆಲವು ಅಧ್ಯಾಯಗಳಲ್ಲಿ ಇಸ್ರಾಯ್ಯೇಲರು ಪಾಪ ಮಾಡಿದ, ಅದಕ್ಕಾಗಿ ಯೆಹೋವ ದೇವರು ಶಾಪ ನೀಡಿದ ವಿವರಗಳಿವೆ. ‘ರಿವಿಲೇಶನ್ಸ್ 2:14’ ಮತ್ತು ‘ನಂಬರ್ಸ್ 31:16’ನಲ್ಲಿರುವ ಪ್ರಕಾರ, ದೇವರು ನಿಷೇಧಿಸಿದ್ದ ಲೈಂಗಿಕ ದುರಾಚಾರ ಮತ್ತು ವಿಗ್ರಹಾರಾಧನೆಗಳಲ್ಲಿ ತೊಡಗಿ ಆ ಮೂಲಕ ಪಾಪಮಾಡುವಂತೆ ಇಸ್ರಾಯ್ಯೇಲರನ್ನು ಪ್ರೇರೇಪಿಸುವ ವಿಧಾನಗಳನ್ನು ಅರಸ ಬಲಾಕ್​ನಿಗೆ ಎಡೋಮ್ ಅರಸನಾದ, ಇಸ್ರಾಯ್ಯೇಲನಲ್ಲದ ಬಿಯೋರ್​ನ ಮಗ ಬಲಾಮ್ ಹೇಳಿಕೊಡುತ್ತಾನೆ. ಅದರಂತೆ ಇಸ್ರಾಯ್ಯೇಲರು ಪಾಪಮಾಡಿದಾಗ ಅವರನ್ನು ಶಿಕ್ಷಿಸಲು ಯೆಹೋವ ದೇವರು ಭಯಂಕರ ಪ್ಲೇಗ್ ಮಾರಿಯನ್ನು ಕಳುಹಿಸುತ್ತಾನೆ. ‘ಡ್ಯೂಟೆರಾನಮಿ 28’ರಲ್ಲಿ ಉಲ್ಲೇಖಿತವಾಗಿರುವ ಪ್ರಕಾರ ದೇವರು ನೀಡುವ ಶಾಪ ಹೀಗಿದೆ: ‘ನೀವು ನಗರಗಳಲ್ಲಿ ಶಾಪಗ್ರಸ್ತರಾಗಿರುತ್ತೀರಿ, ಹಳ್ಳಿಗಳಲ್ಲಿ ಶಾಪಗ್ರಸ್ತರಾಗಿರುತ್ತೀರಿ. ನಿಮ್ಮ ಬುಟ್ಟಿ ಮತ್ತು ನೀವು ನಾದುವ ಬೋಗುಣಿ ಶಾಪಗ್ರಸ್ತವಾಗುತ್ತವೆ. ನಿಮ್ಮ ಗರ್ಭಾಶಯದ ಫಲವು ಶಾಪಗ್ರಸ್ತವಾಗುತ್ತದೆ, ನಿಮ್ಮ ನೆಲದ ಫಸಲು, ನಿಮ್ಮ ತುರುಮಂದೆಯ ಕರುಗಳು, ಕುರಿಮಂದೆಯ ಕುರಿಮರಿಗಳು ಶಾಪಕ್ಕೊಳಗಾಗುತ್ತವೆ. ನೀವು ಒಳಗೆ ಬಂದಾಗ ಶಾಪಕ್ಕೊಳಗಾಗುತ್ತೀರಿ, ಹೊರಗೆ ಹೋದಾಗ ಶಾಪಕ್ಕೊಳಗಾಗುತ್ತೀರಿ.’

ಇಂದಿನ ಇಸ್ರೇಲಿಗಳು ಮತ್ತು ಪ್ಯಾಲೆಸ್ತೀನಿಯರು ಮೂಲತಃ ದೇವರಿಂದ ಹೀಗೆ ಶಾಪಕ್ಕೊಳಗಾದ ಇಸ್ರಾಯ್ಯೇಲರೇ. ಆ ನೆಲದಲ್ಲಿನ ನಿಲ್ಲದ ಅಶಾಂತಿಗೆ, ರಕ್ತಪಾತಕ್ಕೆ ಮೂಲ ಇದಿರಬಹುದೇ ಎಂಬ ಜಿಜ್ಞಾಸೆ ಆಗಾಗ ವ್ಯಕ್ತವಾಗುವುದುಂಟು. ಇದನ್ನು ನಿರಾಕರಿಸಿ, ರಾಜಕೀಯ ಬೆಳವಣಿಗೆಗಳನ್ನೇ ಅಶಾಂತಿಯ ಮೂಲವಾಗಿ ಗುರುತಿಸುವವರು ಗಟ್ಟಿ ಗಂಟಲಿನಲ್ಲಿ ಕೂಗುವುದು ಮಧ್ಯಪ್ರಾಚ್ಯದಲ್ಲಿ ಇಸ್ರೇಲ್ ಕಠಾರಿಯಂತೆ ನೆಟ್ಟುನಿಂತಿರುವುದೇ ಎಲ್ಲ ಸಮಸ್ಯೆಗಳ ಮೂಲ ಎಂದು. ಈ ವಾದವನ್ನೇ ಮುಂದುವರಿಸಿದರೆ ಯೆಹೂದೀ ನೆಲ ಇಸ್ರೇಲ್​ನಲ್ಲಿ ಇಸ್ಲಾಮನ್ನೂ, ಅದಕ್ಕೂ ಹಿಂದೆ ಹೋದರೆ ಕ್ರಿಶ್ಚಿಯಾನಿಟಿಯನ್ನೂ ನೆಟ್ಟದ್ದೇ ಸಮಸ್ಯೆಯ ನಿಜವಾದ ಮೂಲ ಎಂದು ಹೇಳಬೇಕಾಗುತ್ತದೆ.

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net