ಸನಾತನ ಧರ್ಮದ ವಿಗ್ರಹಾರಾಧನೆ ಅವೈಜ್ಞಾನಿಕವೇ?

sanathan
Published on
ಅನ್ಯಮತೀಯರು ಮತ್ತು ನಮ್ಮಲ್ಲೇ ಕೆಲವರು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಬೇಕು. ವಿಗ್ರಹವೆಂಬುದು ನಿರ್ಗಣನೂ, ನಿರಾಕಾರನೂ, ಅನಂತನೂ ಆದ ಪರಮಾತ್ಮನನ್ನು ಸಾಕ್ಷಾತ್ಕರಿಸಿಕೊಳ್ಳಲು ಅರ್ಥಾತ್ ನೋಡಲು, ಮುಟ್ಟಲು, ವ್ಯವಹರಿಸುವಂತೆ ಸಾಧ್ಯವಾಗಲು ನಮ್ಮ ಧರ್ಮವೇ ನಿರ್ವಿುಸಿಕೊಟ್ಟ ಉಪಾಯ.

ಧಾರ್ವಿುಕ ಕ್ಷೇತ್ರ ಬಹಳ ಸೂಕ್ಷ್ಮವಾದದ್ದು. ಈ ಕ್ಷೇತ್ರದ ಒಳಗೆ ಸಿಕ್ಕಸಿಕ್ಕಿದವರೆಲ್ಲಾ ಕೈಯಾಡಿಸುವಂತಿಲ್ಲ. ಇದಕ್ಕಿಂತಲೂ ಕಡಿಮೆ ಸೂಕ್ಷ್ಮತೆಯುಳ್ಳ ವೈಜ್ಞಾನಿಕ ಕ್ಷೇತ್ರದಲ್ಲಿಯಾದರೂ ಎಲ್ಲರಿಗೂ ಪ್ರವೇಶವಿದೆಯೇ? ವೈಜ್ಞಾನಿಕ ಕ್ಷೇತ್ರ ಅಧ್ಯಯನ ಮಾಡುವುದು ಹೊರ ಜಗತ್ತಿನ, ಇಂದ್ರಿಯ ಗ್ರಹಿಕೆಗೆ ಸಿಗುವ ವಸ್ತುಗಳನ್ನು. ಇಲ್ಲಿ ಕೂಡ ಅಣು, ಪರಮಾಣು ಇತ್ಯಾದಿಗಳನ್ನು ಅಧ್ಯಯನ ಮಾಡಬೇಕಾದರೆ ಸೂಕ್ಷ್ಮವಾದ ಯಂತ್ರಗಳೇ ಬೇಕು; ಆ ಕ್ಷೇತ್ರದಲ್ಲಿ ಸಾಕಷ್ಟು ದೂರ ಕ್ರಮಿಸಿದವರೇ ಬೇಕು. ಹಾಗಿದ್ದಾಗ ಯಾವ ಇಂದ್ರಿಯ ಗ್ರಹಿಕೆಗೂ ಸಿಗದ, ಮನಸ್ಸಿಗೂ ಎಟುಕದ, ಕೊನೆ ಕೊನೆಯ ಹಂತಗಳಲ್ಲಿ ತರ್ಕ, ರ್ತಾಕ ವಿಶ್ಲೇಷಣೆಯನ್ನೂ ಮೀರಿದ ಆತ್ಮ ಇಲ್ಲವೇ ಪರಮಾತ್ಮನನ್ನು ಕುರಿತು ವೆಂಕ, ನಾಣಿ, ಕಿಟ್ಟ, ಸೀನ (Tom, Dick Harry) ತಮಗೆ ತೋಚಿದಂತೆ ಮಾತನಾಡುವುದನ್ನು, ಯಾವುದೋ ಕವಿಯ ವಿಶ್ಲೇಷಣೆ, ಪ್ರಶಸ್ತಿ ವಿಜೇತನ ಮಿದುಳಿನ ಸುರುಳಿಗಳನ್ನು ಆಧಾರವಾಗಿಟ್ಟುಕೊಂಡು ಧಾರ್ವಿುಕ ವಿಷಯಗಳ ಬಗ್ಗೆ ಖಂಡನೆ, ಮಂಡನೆ ಮಾಡುವುದನ್ನು ನೋಡಿದಾಗ ಅನ್ನಿಸುವುದು ಮೂಢನಂಬಿಕೆ ಎನ್ನುವುದು ಯಾರನ್ನೂ ಬಿಡಲಾರದು ಎಂದು.

ಸಂಪ್ರದಾಯಸ್ಥ ಮತ್ತು ಅವರ ಮಾರ್ಗದಲ್ಲಿ ಪ್ರವರ್ತಿಸುವ ಕೆಲವು ವರ್ಗಗಳನ್ನು ಬಿಟ್ಟರೆ ಎಲ್ಲರಿಗೂ ಕಾಣುವುದು ವಿಗ್ರಹಾರಾಧನೆ ಬಹಳ ಅವೈಜ್ಞಾನಿಕ, ಅರ್ತಾಕ ಎಂದು. ಕೆಲ ಪಟ್ಟಭದ್ರರು ಅದಕ್ಕೆ ದೊಡ್ಡ ಮೌಢ್ಯದ ಪಟ್ಟ ಕಟ್ಟಿದ್ದರೆ ಮತ್ತೆ ಕೆಲವರು ಪುರೋಹಿತಶಾಹಿಯು ಶೋಷಣೆಗೆ ಬಳಸಿಕೊಂಡ ಬ್ರಹ್ಮಾಸ್ತ್ರಗಳಲ್ಲಿ ಅದೂ ಒಂದು; ಜ್ಯೋತಿಷ್ಯವಿದ್ದಂತೆ; ಹೋಮ ಹವನಾದಿಗಳಿದ್ದಂತೆ. ಬುದ್ಧ ಇವುಗಳ ವಿರುದ್ಧ ಸೆಟೆದು ನಿಂತ; ಪುರೋಹಿತಶಾಹಿಗಳು ಅವನ, ಅವನ ಅನುಯಾಯಿಗಳ ವಿರೋಧವನ್ನು ನಿರ್ದಯೆಯಿಂದ ಹತ್ತಿಕ್ಕಿದರು... ಇತ್ಯಾದಿ ರೀತಿಯಲ್ಲಿ ‘ಅದ್ಭುತ ವೈಜ್ಞಾನಿಕ ವಿಶ್ಲೇಷಣೆ’ಗಳನ್ನೇ ಹರಿಯಬಿಡುತ್ತಾರೆ. ಆದರೆ, ಪಾಪ, ವಿಶ್ಲೇಷಣೆಗಳನ್ನು ಹಂಗಿಸುವಂತೆ ಇಂದು ಬುದ್ಧಗಯೆಯಲ್ಲಿಯೇ ಯಾವ ಅಶ್ವತ್ಥವೃಕ್ಷದ ಅಡಿಯಲ್ಲಿ ಆ ಮಹಾತ್ಮನಿಗೆ ಜ್ಞಾನೋದಯವಾಯಿತೋ ಅದಕ್ಕೆ ಅಂಟಿಕೊಂಡಂತೆಯೇ ಅವನಿಗೆ ಭವ್ಯವಾದ ದೇವಾಲಯ ಕಟ್ಟಿಸಿದ್ದೂ ಆಯಿತು. ಅದರೊಳಗೆ ಅವನ ಭವ್ಯವಾದ ಮೂರ್ತಿಯನ್ನು ಕೂಡಿಸಿದ್ದೂ ಆಯಿತು! ವಿಗ್ರಹಾರಾಧನೆ ಅವೈಜ್ಞಾನಿಕವೇ?

ವೈಯಕ್ತಿಕತೆ (Individuality), ವ್ಯಕ್ತಿಗತ ದೃಷ್ಟಿ (Subjectivity), ಸೀಮಿತತೆ (Selectivity) ವಿಜ್ಞಾನದ ಪ್ರಥಮ ಶತ್ರುಗಳು. ಕೇವಲ ಇಷ್ಟೇ ಅಲ್ಲ, ಕೆಲವನ್ನು ಬಿಟ್ಟರೆ ಪ್ರಪಂಚದ ಬೃಹತ್ ವಿಗ್ರಹಗಳಿರುವುದೆಲ್ಲಾ ಬುದ್ಧನ ಹೆಸರಲ್ಲೇ. ಆದರೆ, ಅವೆಲ್ಲಾ ಬಯಲಿನಲ್ಲಿವೆ. ಒಂದು ಘನವಸ್ತುವು ವಿಶೇಷವಾಗಿ ಮೂರ್ತಿಯ ರೂಪದಲ್ಲಿರುವ ಘನವಸ್ತುವು ಕಟ್ಟಡದ ಒಳಗೆ ಮತ್ತು ಹೊರಗೆ ಇದ್ದಾಗ ಅದು ತನ್ನ ಮೂಲಭೂತ ಲಕ್ಷಣಗಳನ್ನು ಬದಲಾಯಿಸಿಕೊಂಡು ಬಿಡುತ್ತದೆ ಎಂಬ ಅದ್ಭುತ ವೈಜ್ಞಾನಿಕ ಸತ್ಯವೊಂದನ್ನು ನಮ್ಮ ಚಿಂತನವಲಯ ಕಂಡುಹಿಡಿದಂತಿದೆ!

ಬುದ್ಧನ ಭಕ್ತರು ಅವನಿಗೊಂದು ದೇವಾಲಯವನ್ನು ಕಟ್ಟುವ, ಅಲ್ಲಿ ಅವನ ಮೂರ್ತಿ ಪ್ರತಿಷ್ಠಾಪಿಸುವ ಮನೋಚಾಪಲ್ಯವನ್ನು ಹತ್ತಿಕ್ಕಲಾರದೆ ಹೋದದ್ದು ಅವರ ತಪ್ಪೇನಲ್ಲ. ಅದು ಮಾನುಷ ಸಹಜ ಪ್ರವೃತ್ತಿ.

ಇಲ್ಲಿಯೇ ಸನಾತನಧರ್ಮದ ಹೆಗ್ಗಳಿಕೆ ಇರುವುದು. ಎಲ್ಲ ಹಂತದವರಿಗೂ ಎಟುಕುವಂತೆ, ವಿವಿಧ ರುಚಿಗಳಿಗೆ ಒಪ್ಪಿಗೆಯಾಗುವಂತೆ ಅದು ಅಳವಡಿಸಿಕೊಂಡ ಸಮಗ್ರ ದೃಷ್ಟಿ, ವೈಶಾಲ್ಯ, ವೈಜ್ಞಾನಿಕತೆ ಎಲ್ಲಕ್ಕಿಂತ ಹೆಚ್ಚಾಗಿ ಮನುಷ್ಯ ಸ್ವಭಾವದೊಂದಿಗೆ ಹೊಂದಿಕೊಂಡೇ ಹೋಗುವ ಅದರ ಅನುಷ್ಠಾನಶೀಲತೆ (Practicality) ಸಾರ್ವಕಾಲಿಕ ಪ್ರಶಂಸಾರ್ಹ.

ಮಹತ್ತನ್ನು ಗೌರವಿಸುವುದು, ಮಹಾತ್ಮನನ್ನು ಆರಾಧಿಸುವುದು ಮನುಷ್ಯನ ಸ್ವಭಾವದಲ್ಲೇ ಇದೆ. ಮಹಾತ್ಮನ ರೂಪ, ಸ್ಮೃಯನ್ನು ನಿರಂತರ ತನ್ನ ಮನಸ್ಸಿನಲ್ಲಿ ಇಟ್ಟುಕೊಳ್ಳಲು ಮನುಷ್ಯ ಬಯಸುತ್ತಾನೆ. ಏಕೆಂದರೆ ಸ್ಮೃ ಅವನನ್ನೇ ತಂದು ಮುಂದೆ ಇರಿಸುತ್ತದೆ. ಅವನಿಗೆ ಸಂಬಂಧಿಸಿದ ಯಾವುದೇ ವಸ್ತುವೂ ಆ ಸ್ಮೃಯನ್ನು ನೀಡಬಲ್ಲದು ಮತ್ತು ಆ ಸ್ಮೃಯಾದರೋ ಎಷ್ಟು ಮಧುರ! ವಿವೇಕಾನಂದರ ಧ್ವನಿ ಇರಬೇಕಾಗಿತ್ತು ಎಂದು ಭಾವಿಸುವ, ಇಲ್ಲವಲ್ಲ ಎಂದು ಧಾವಂತಿಸುವ ಜನರಿಗೆ ಲೆಕ್ಕವಿಲ್ಲ. ಶ್ರೀಲಂಕಾದ ಅನುರಾಧ ಪುರಂನಲ್ಲಿರುವ ಬುದ್ಧನ ಹಲ್ಲು ನೋಡಲು ಕಾತರಿಸುವವರಿಗೆ ಲೆಕ್ಕವುಂಟೇ?! ಸಂತನೊಬ್ಬನ ಕೂದಲು ನೋಡಲು ಧಾವಿಸುವವರು ಕಡಿಮೆಯೇ. ಕ್ರಿಸ್ತನ ವಾಣಿ ಇರುವುದರಿಂದ ಬೈಬಲ್ ಒಂದು ಸಾಮಾನ್ಯ ಪುಸ್ತಕವಾಗಿ ಉಳಿದಿಲ್ಲ. ಅದು ಬೇರೆಲ್ಲಾ ಪುಸ್ತಕಗಳಂತೆ ಕಾಗದದಲ್ಲಿ ಮಾಡಲ್ಪಟ್ಟಿದ್ದೇ, ಆದರೂ ಅದು ಕಾಗದವಲ್ಲ. ಹಾಗೆಯೇ ವಿಗ್ರಹವೂ ಕಲ್ಲಿನಿಂದ ಮಾಡಲ್ಪಟ್ಟಿದ್ದೇ. ಆದರೆ ಕೇವಲ ಅದೊಂದು ಕಲ್ಲಲ್ಲ. ಸಾವಿರ ರೂಪಾಯಿಯ ನೋಟು ಕೇವಲ ಒಂದು ಹಾಳೆಯಾದೀತೆ? ಹಾಗಾದರೆ ವಿಗ್ರಹ ಕೇವಲ ಕಲ್ಲೋ ಮರವೋ ಆಗಿಬಿಡುವುದೆಂತು? ಇಂಥ ಅರೆಬರೆ ವೈಜ್ಞಾನಿಕ ದೃಷ್ಟಿಕೋನವನ್ನು ಹೊಂದಿದ ಜನರಿಗೆ ಚಿಂತಕರೊಬ್ಬರು ಸರಿಯಾಗಿಯೇ ಚಾಟಿ ಬೀಸಿದ್ದಾರೆ. My dear Rationalists, you be completely Rational ಎಂದು. ಮತ್ತೂ ಒಂದು ಮುಖ್ಯ ವಿಚಾರವೆಂದರೆ ವಿಗ್ರಹವೇನೋ ಕಲ್ಲಿನಿಂದ ಮಾಡಲ್ಪಟ್ಟಿದೆ. ಆದರೆ, ಕಲ್ಲೇ ಮೂಲವಸ್ತುವೇನೂ ಅಲ್ಲ ಎನ್ನುವುದು ವಿಜ್ಞಾನದ ವಿದ್ಯಾರ್ಥಿಗಳಾದ ಯಾರಿಗಾದರೂ ತಿಳಿಯಬಲ್ಲದು. ಕಲ್ಲೇ ಮೂಲವಲ್ಲ; ಅದು ಸಹ ಸೂಕ್ಷ್ಮವಾದ ಇನ್ನೊಂದು ವಸ್ತುವಿನ ಕೇವಲ ಒಂದು ರೂಪ. ಆ ವಸ್ತುವೇ Electromagnetic field ಅಥವಾ Quantum field ಅಥವಾ consciousness ಅರ್ಥಾತ್ ಪ್ರಜ್ಞೆ. ಈ ಪ್ರಜ್ಞೆಯೇ ವಿಶ್ವದ ಮೂಲವಸ್ತು, ಇದರಿಂದಲೇ ಕಲ್ಲು ಸಹ ಆಗಿರುವುದು, ಆಧುನಿಕ ವಿಜ್ಞಾನದ ಪ್ರಕಾರ ಜಡವಸ್ತು ಎನ್ನುವುದೇ ಇಲ್ಲ.

The Intelligent Universe ಎನ್ನುವ ವಿಶ್ವವಿಖ್ಯಾತ ಪುಸ್ತಕವೇ ಒಂದು ಪ್ರಚುರದಲ್ಲಿದೆ ಎನ್ನುವುದಂತೂ ಹಳೆಯ ಮಾತು. ಕಲ್ಲಿನಂತೆ ಕಾಣುವ ವಸ್ತು ಕೂಡ ಆಧುನಿಕ ವಿಜ್ಞಾನ ಮತ್ತು ಸನಾತನ ಧರ್ಮದ ಪ್ರಕಾರ ಏಕಮೇವ ಅದ್ವಿತೀಯವಾದ ಚೈತನ್ಯ ವಸ್ತುವಿನಿಂದಲೇ ಮಾಡಲ್ಪಟ್ಟಿದೆ. Intelligent Universe ಎಂದರೆ ಸ್ಪಂದನಶೀಲ ವಿಶ್ವ; ಗ್ರಹಿಸಬಲ್ಲ, ತಿಳಿಯಬಲ್ಲ ವಿಶ್ವ; ಅರ್ಥಾತ್ ಚೈತನಪೂರ್ಣವಾದ ವಿಶ್ವ ಎಂದು. ಆದ್ದರಿಂದ ವಿಗ್ರಹ ಕೂಡ ಮತ್ತಾವುದೇ ಭಗವತ್ ಸ್ವರೂಪದಂತೆ ಚೈತನ್ಯವೇ. ಶ್ರೀರಾಮಕೃಷ್ಣರು ದಕ್ಷಿಣೇಶ್ವರದ ಕಾಳಿಮೂರ್ತಿಯನ್ನು ಚಿನ್ಮಯಮೂರ್ತಿಯಾಗೇ ಕಂಡಿದ್ದು, ಶಿಲಾಮೂರ್ತಿಯಂತಲ್ಲ. ಈ ವಿಷಯದಲ್ಲಿ ನಡೆದ ಘಟನೆ ಇಲ್ಲಿ ಪ್ರಸ್ತುತ. ತಂದೆಯ ಹಠಾತ್ ನಿಧನದ ನಂತರ ಬಡತನದ ಬೇಗೆಯಲ್ಲಿ ಬೆಂದ ನರೇಂದ್ರನಾಥ ಕನಿಷ್ಠಮಟ್ಟದ ಊಟ ಬಟ್ಟೆಗಳಿಗೆ ತೊಂದರೆಯಾಗದಂತೆ ಅನುಗ್ರಹಿಸಬೇಕೆಂದು ಜಗನ್ಮಾತೆಯನ್ನು ತನ್ನ ಪರವಾಗಿ ಕೇಳಿಕೊಳ್ಳಿ ಎಂದು ಗುರು ಶ್ರೀರಾಮಕೃಷ್ಣರಲ್ಲಿ ಪ್ರಾರ್ಥಿಸಿದ. ‘ಇಂದು ಮಂಗಳವಾರ. ಇಂದು ರಾತ್ರಿ ನೀನೇ ಹೋಗಿ ಬೇಡಿಕೋ. ಅವಳು ಯಾರ ಪ್ರಾರ್ಥನೆಯನ್ನೂ ಈಡೇರಿಸಬಲ್ಲಳು’ ಎಂದು ಆಗ್ರಹಿಸಲ್ಪಟ್ಟ ನರೇಂದ್ರ ದಕ್ಷಿಣೇಶ್ವರದ ಕಾಳಿಯ ದೇವಾಲಯದೆಡೆಗೆ ಹೆಜ್ಜೆಹಾಕಿದ. ಕಾಳಿಯ ಮುಂದೆ ಕೈಜೋಡಿಸಿ ನಿಂತ ಅವನಿಗೆ ಕಂಡಿದ್ದೇನು? ಗರ್ಭಗುಡಿಯಲ್ಲಿ ಭವತಾರಿಣಿ ಸಾಕ್ಷಾತ್ ಚಿನ್ಮಯಿ, ಚೈತನ್ಯಮಯಿಯಾಗಿ ಅರ್ಥಾತ್ ಜೀವಂತ ಸ್ತ್ರೀಯಾಗಿ, ದಿವ್ಯ ಸೌಂದರ್ಯದಿಂದ ಶೋಭಾಯಮಾನವಾಗಿ ನಿಂತಿದ್ದಾಳೆ. ಭಾವಭರಿತನಾಗಿ ನರೇಂದ್ರ ಬಂದ ಉದ್ದೇಶವನ್ನೇ ಮರೆತು ‘ಅಮ್ಮ ಜ್ಞಾನ ಕೊಡು, ಭಕ್ತಿ ಕೊಡು, ವೈರಾಗ್ಯವನ್ನು ಕೊಡು’ ಎಂದು ಬೇಡಿ ಹೊರಬಂದ. ಇನ್ನೂ ಎರಡು ಸಲ ಅನ್ನಬಟ್ಟೆಗಳಿಗಾಗಿ ಅವಳನ್ನು ಬೇಡಲು ಬಂದವನಿಗೆ ಇದೇ ಸ್ಥಿತಿ ಕಾದಿತ್ತು. ಅಷ್ಟರ ಮಟ್ಟಿಗೆ ಮನಸ್ಸು ಸೂರೆಗೊಂಡಿತ್ತು ದೇವಿಯ ಭವ್ಯತೆ ದಿವ್ಯತೆಯ ಮುಂದೆ. ಆದರೆ, ಲೌಕಿಕ ದೃಷ್ಟಿಕೋನಕ್ಕೆ ಅದು ಕಲ್ಲಿನ ಮೂರ್ತಿಯೇ. ನಮ್ಮ ಭಾವನೆಯ ತೀವ್ರತೆ ಮುಂದಿರುವ ವಸ್ತುಗಳನ್ನು ಸಂಪೂರ್ಣವಾಗಿ ಬದಲಾಯಿಸಬಲ್ಲದು. ‘ಯದ್ಭಾವಂ ತದ್ಭವತಿ’. ಆಧುನಿಕ ವಿಜ್ಞಾನವೇ ಘಂಟಾಘೊಷವಾಗಿ ಸಾರಿದೆ ಇದನ್ನು. ಎರ್ವಿನ್ ಷ್ರೋಡಿಂಗರ್ - ಕ್ವಾಂಟಂ ವಿಜ್ಞಾನದ ಪಿತ- ಜಗತ್ತಿನ ಮೂಲ ವಸ್ತು ಪ್ರಜ್ಞೆ (Consciousness) ಎಂದು ಸಾರಿ ನೂರು ವರ್ಷಗಳಾಗುತ್ತಾ ಬಂತು. ಇರುವ ಪ್ರಜ್ಞೆಯ ವ್ಯಕ್ತತೆ ಬಹಳ ಮಂದವಾದಾಗ ಅದು ಜಡದಂತೆ ಕಾಣುತ್ತದೆ ಅಷ್ಟೇ. ತೀವ್ರವಾದಾಗ ಚೈತನ್ಯದಂತೆ ಕಾಣುತ್ತದೆ. ಅದರ ಮಂದತ್ವ ಇಲ್ಲವೇ ಚೈತನ್ಯತ್ವ ನೋಡುವ, ಗ್ರಹಿಸುವ ವ್ಯಕ್ತಿಯ ಪ್ರಜ್ಞಾಸ್ತರ (Level of Consciousness) ವನ್ನು ಅವಲಂಬಿಸಿದೆ ಅಷ್ಟೇ. ನರೇಂದ್ರನಿಗೆ ಜೀವಂತ ಕಾಳಿಯಾಗಿ ಕಂಡವಳು ನಮಗೆ ನಿಮಗೆಲ್ಲಾ ಶಿಲಾಮೂರ್ತಿಯಾಗೇ ಕಾಣಿಸುವುದು. ಏಕೆಂದರೆ, ನಮ್ಮ ಪ್ರಜ್ಞಾಸ್ತರ ಆ ಮಟ್ಟದ್ದು. ಇಡೀ ಆಧ್ಯಾತ್ಮಿಕ ಅಥವಾ ಧಾರ್ವಿುಕ ಜೀವನದ ಏಕಮೇವ ಗುರಿಯೇ ನಮ್ಮ ಪ್ರಜ್ಞಾಸ್ತರವನ್ನು ಉನ್ನತ ಮಟ್ಟಕ್ಕೆ ಏರಿಸಿಕೊಳ್ಳುವುದು ಎಂದು ಸಾರಿಹೇಳುತ್ತದೆ ಸನಾತನ ಧರ್ಮ.

ಅನ್ಯಮತೀಯರು ಮತ್ತು ನಮ್ಮಲ್ಲೇ ಕೆಲವರು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಬೇಕು. ವಿಗ್ರಹವೆಂಬುದು ನಿರ್ಗಣನೂ, ನಿರಾಕಾರನೂ, ಅನಂತನೂ ಆದ ಪರಮಾತ್ಮನನ್ನು ಸಾಕ್ಷಾತ್ಕರಿಸಿಕೊಳ್ಳಲು ಅರ್ಥಾತ್ ನೋಡಲು, ಮುಟ್ಟಲು, ವ್ಯವಹರಿಸುವಂತೆ ಸಾಧ್ಯವಾಗಲು ನಮ್ಮ ಧರ್ಮವೇ ನಿರ್ವಿುಸಿಕೊಟ್ಟ ಉಪಾಯ. ವಿಗ್ರಹವೆಂದರೂ ಒಂದೇ ಚಿತ್ರಪಟವೆಂದರೂ ಒಂದೇ. ಒಂದು 3 dimensional ಮತ್ತೊಂದು 2 dimensional ಮಾತ್ರ ಮತ್ತು ವೇದಗಳು ಇಲ್ಲವೇ ಸನಾತನಧರ್ಮವೂ ಭಗವಂತನನ್ನು ವರ್ಣಿಸುವುದು ಅವನು ನಿರ್ಗಣ ನಿರಾಕಾರನೆಂದೇ. ಸೌಂದರ್ಯ, ಮಹಿಮೆ ಇವುಗಳಿಗೆ ಸುಲಭವಾಗಿ ಆಕರ್ಷಿಸಲ್ಪಡುವ ಮನುಷ್ಯನ ಮನಸ್ಸನ್ನು ತನ್ನೆಡೆಗೆ ಸೆಳೆಯಲು ಈ ನಿರ್ಗಣ, ನಿರಾಕಾರ ಭಗವಂತನೇ ಸಕಲ ಸದ್ಗುಣಗಳ, ಸಾಮರ್ಥ್ಯಗಳ, ಸೌಂದರ್ಯದ ಖನಿಯಾಗಿ ಮಹಿಮೆ, ಲೀಲೆಗಳನ್ನು ಮೆರೆದು ಆಕರ್ಷಿಸುತ್ತಾನೆ; ಆರಾಧಿಸುವಂತೆ ಮಾಡುತ್ತಾನೆ. ಶ್ರೀರಾಮಕೃಷ್ಣರು ಹೇಳುತ್ತಿದ್ದರು, ‘ರಾಮಾವತಾರ ಆಗಿದ್ದು ಹನುಮಂತನ ಧ್ಯಾನಕ್ಕೆ ಒಂದು ವಸ್ತು ಬೇಕೆಂದು, ರಾವಣ ವಧೆ ಇತ್ಯಾದಿಗಳೆಲ್ಲಾ ಗೌಣ’ ಎಂಬುದಾಗಿ. ಇನ್ನು ನಿರಾಕಾರವನ್ನೇ ಕುರಿತು ಧ್ಯಾನಿಸಬಹುದಲ್ಲ ಎಂದರೆ ಅದೆಷ್ಟು ಕಷ್ಟ ಎನ್ನುವುದು ಪ್ರಯತ್ನಿಸಿದವರಿಗೇ ಗೊತ್ತು. ಧ್ಯಾನಿಸುತ್ತಿರುವ ಧ್ಯಾತೃ ಮತ್ತು ಧ್ಯೇಯವಸ್ತುಗಳು ಪರಸ್ಪರ ಲೀನವಾಗದೇ ನಿರಾಕಾರ ಪೂರ್ಣ ಪ್ರಮಾಣದಲ್ಲಿ ಮೂಡುವುದಿಲ್ಲ. ಅದು ಅತ್ಯುನ್ನತ ಅವಸ್ಥೆ. ಕೆಳಗಿನ ಅವಸ್ಥೆಗಳಲ್ಲಿ ನಿರಾಕಾರವನ್ನು ಧ್ಯಾನಿಸುವುದಕ್ಕೆ ಇರುವ ಏಕಮೇವ ಮಾರ್ಗ ಸಾಕಾರವಸ್ತುಗಳನ್ನು ನಿರಾಕರಿಸುವುದು (Negation) ಅರ್ಥಾತ್ ನೇತಿ, ನೇತಿ ಮಾರ್ಗ; ಜ್ಞಾನಮಾರ್ಗಿಗಳು ಅವಲಂಬಿಸುವ ಮಾರ್ಗ. ನಿರಾಕಾರಧ್ಯಾನಕ್ಕೆ ಕುಳಿತಿರುವ ಮನಸ್ಸಿನಲ್ಲಿ ಮೂಡುವುದೂ ಚಿತ್ರವೇ; ಸಾಕಾರವೇ. ಆಕಾಶವೋ, ಸಾಗರವೋ, ದಿಗಂತವೋ, ಸೂರ್ಯೋದಯ ಸೂರ್ಯಾಸ್ತಮಾನಗಳೋ; ನೀಲಾಕಾಶದಲ್ಲಿ ಹಾರುವ ಹಕ್ಕಿ, ಸಾಗರದಲ್ಲಿ ಈಜುವ ಮೀನು ಇಂಥದ್ದೇ. ಇವೆಲ್ಲಾ ಸಾಕಾರಗಳೇ ಅಥವಾ ವಿಗ್ರಹದ ಇನ್ನೊಂದು ರೂಪವೇ. ಎಲ್ಲಿಯವರೆಗೆ ಮನಸ್ಸಿನ ಮೂಲಕ ಧ್ಯಾನವನ್ನು ಮಾಡುತ್ತೇವೆಯೋ, ಮನಸ್ಸಿನೊಳಗೆಯೇ ಸತ್ಯವನ್ನು ಕಾಣಲು ಪ್ರಯತ್ನಿಸುತ್ತೇವೆಯೋ ಅಲ್ಲಿಯವರೆಗೆ ಅದು ಆಕಾರವನ್ನು ಪಡೆಯಲೇಬೇಕು. ಕಾರಣ ಮನಸ್ಸೇ ಕಾಲ, ದೇಶ, ನಿಮಿತ್ತಗಳಿಗೆ ಒಳಪಟ್ಟ ಸೂಕ್ಷ್ಮ ದ್ರವ್ಯ.

ವಿಗ್ರಹದ ಬಳಕೆಯನ್ನು ಕ್ರಮೇಣ ಮೀರಬೇಕೆಂತಲೇ ಮನುಸ್ಮೃ ಸ್ಪಷ್ಟವಾಗಿ ಹೇಳುತ್ತದೆ. ಮೊದಲು ವಿಗ್ರಹ, ನಂತರ ಸ್ತುತಿ ಜಪ ಇತ್ಯಾದಿಗಳು; ನಂತರ ಧ್ಯಾನ ಮತ್ತು ಕೊನೆಯಲ್ಲಿ ಬ್ರಹ್ಮಭಾವ. ಗುರಿ ಎತ್ತರದಲ್ಲಿದ್ದಾಗ ಹಂತಗಳು ಬೇಕೇ ಬೇಕು. ಒಮ್ಮೆಲೇ ಜಿಗಿದರೆ ಕಾಲು ಮುರಿದೀತು. ಸನಾತನ ಧರ್ಮ ಇದನ್ನೆಲ್ಲಾ ತಿಳಿದೇ ಮಾರ್ಗಗಳನ್ನು ನಿರ್ವಿುಸುತ್ತೆ. ಅದೇ ಅದರ ವೈಶಿಷ್ಟ್ಯ;ಹೆಗ್ಗಳಿಕೆ.

(ಲೇಖಕರು ಖ್ಯಾತ ಪ್ರವಚನಕಾರರು, ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net