

ಇದು ಭ್ರಷ್ಟಾಚಾರದ ಕತೆ. ಲಂಚತನವು ಬಹುತೇಕ ಕ್ಷೇತ್ರಗಳಲ್ಲಿ ಕ್ಯಾನ್ಸರ್ನಂತೆ ಹರಡಿ ಬಿಟ್ಟಿದೆ. ಸರ್ಕಾರಿ ವಲಯದಲ್ಲಂತೂ, ಲಂಚ ನೀಡದೆ ಯಾವ ಕೆಲಸವೂ ಆಗದು ಎಂಬ ಸ್ಥಿತಿ ನಿರ್ವಣವಾಗಿದೆ. ಲಂಚ ನೀಡೋದು ಹಾಗೂ ಸ್ವೀಕರಿಸುವುದು ಸಾಮಾಜಿಕವಾಗಿ ಅಂಗೀಕೃತವಾದ ಪದ್ಧತಿ ಎಂದು ಜನ ಒಪ್ಪಿಕೊಂಡಂತಿದೆ. ಯಾರಾದರೂ ಲಂಚ ಕೇಳಿದರೆ, ಯಾರಿಗೂ ಅಚ್ಚರಿಯೂ ಆಗೋದಿಲ್ಲ, ಬದಲಿಗೆ ಲಂಚ ಕೇಳದಿದ್ದರೆ ಪರಮಾಶ್ಚರ್ಯವೆನಿಸುತ್ತದೆ.
ಲಂಚ ತೆಗೆದುಕೊಳ್ಳುವ ಆಸೆ ಇದ್ದರೂ ವೃತ್ತಿಯಲ್ಲಿ ಅದಕ್ಕೆ ಅವಕಾಶವೇ ಇಲ್ಲದವರು, ಲಂಚ ತೆಗೆದುಕೊಳ್ಳುವ ಆಸೆ ಮತ್ತು ಅವಕಾಶವಿದ್ದವರೂ ಧೈರ್ಯವಿಲ್ಲದವರು ಕೂಡ ಭ್ರಷ್ಟರೇ. ಹೆಚ್ಚಿನ ಸಂಖ್ಯೆಯಲ್ಲಿದ್ದು ತುಂಬಾ ಜನಪ್ರಿಯರೂ ಆಗುವವರು ಆಸೆ ಅವಕಾಶಗಳೆರಡೂ ವಿಪುಲವಾಗಿದ್ದು ಸಾರಾಸಗಟಾಗಿ ಲಂಚ ಸ್ವೀಕರಿಸುವವರು. ‘ಲಂಚ ತಗೊಂಡಿದ್ದಾನೆ; ಆದರೆ ಪಾಪ ಒಳ್ಳೆಯ ಮನುಷ್ಯ, ನಿಯತ್ತಾಗಿ ನನ್ನ ಕೆಲಸ ಮಾಡಿಕೊಟ್ಟಿದ್ದಾನೆ’ ಎಂಬ ಜನರ ಮೆಚ್ಚುಗೆಗೆ ಪಾತ್ರರಾಗುತ್ತಾರೆ! ಪ್ರಾಮಾಣಿಕತೆ ಎಂದರೇನು ಎಂಬ ಪ್ರಶ್ನೆಗೆ ಲಂಚಕೋರ ‘ಲಂಚ ತೆಗೆದುಕೊಂಡವರ ಕೆಲಸವನ್ನು ನಿಯತ್ತಾಗಿ ಮಾಡಿಕೊಡಬೇಕು. ಅದುವೇ ಪ್ರಾಮಾಣಿಕತೆ’ ಎಂದು ಉತ್ತರಿಸುತ್ತಾನೆ. ಇನ್ನೊಂದೆಡೆ, ಲಂಚ ಮುಟ್ಟದೇ ಇರುವವರು ವಿರಳ ಮಾತ್ರವಲ್ಲದೇ ಯಾರಿಗೂ ಬೇಡದವರು. ‘ಮನುಷ್ಯ ಲಂಚಾನೂ ತಗೋತಿಲ್ಲ, ಕೆಲಸಾನೂ ಬೇಗ ಮಾಡಿ ಕೊಡ್ತಾ ಇಲ್ಲ’ ಎಂಬುದಾಗಿ ಜನ ಇವರಿಗೆ ಶಾಪ ಹಾಕುತ್ತಿರುತ್ತಾರೆ. ಇನ್ನು ಲಂಚ ತಗೊಂಡರೂ ಕೆಲಸ ಮಾಡಿಕೊಡದ ಮಹಾಪಾಪಿಗಳೂ ಇರುತ್ತಾರೆ.
ಒಟ್ಟಿನಲ್ಲಿ, ಭ್ರಷ್ಟಾಚಾರವೆಂಬ ಪೆಡಂಭೂತವನ್ನು ಹೊಡೆದೋಡಿಸಲು ಯಾವ ಮಂತ್ರವಾದಿಯಿಂದಲೂ ಸಾಧ್ಯವಿಲ್ಲ. ಈ ಭೂತ, ತನ್ನ ಕರಾಳ ಹಸ್ತವನ್ನು ಚಾಚದ ಕ್ಷೇತ್ರವೇ ಇಲ್ಲ. ಹಳ್ಳಿಯಿಂದ ಹಿಡಿದು ದಿಲ್ಲಿಯವರೆಗೆ, ಮನೆಯಿಂದ ಹಿಡಿದು ಮಂದಿರಗಳವರೆಗೆ, ಅನಕ್ಷರಸ್ಥರಿಂದ ಹಿಡಿದು ಅಕ್ಷರಸ್ಥರವರೆಗೆ, ಎಲ್ಲಾ ಕಡೆ ಲಂಚದ ಗೆದ್ದಲು ಹರಡಿಬಿಟ್ಟಿದೆ. ಪ್ರೇಯಸಿಗಳು ಮಧ್ಯವರ್ತಿಗಳಿಗೆ ಲಂಚದ ರೂಪದಲ್ಲಿ ಏನಾದರೂ ಕೊಟ್ಟು ತಮ್ಮ ಸಂದೇಶಗಳನ್ನೋ, ಪ್ರೇಮ ಪತ್ರಗಳನ್ನೂ ಪ್ರಿಯಕರ, ಪ್ರಿಯತಮೆಗೆ ರವಾನಿಸಿದ್ದುಂಟು. ಏಕಾಂತ ಬಯಸುವ ದಂಪತಿ ತಮ್ಮ ಮಕ್ಕಳಿಗೆ ತಿಂಡಿ, ಬಿಡಿಗಾಸುಗಳ ರೂಪದಲ್ಲಿ ಲಂಚವನ್ನಿತ್ತು ಕೆಲಹೊತ್ತು ಆಚೆ ಕಳುಹಿಸುವುದುಂಟು. ಸಂತೋಷದಿಂದ ನಾವೇ ನೀಡುವ ಇಲ್ಲವೇ ಕೇಳಿದ ಮೇಲೆ ನೀಡುವ ಟಿಪ್ಸ್, ಸಣ್ಣ ರೀತಿಯ ಲಂಚದ ಒಂದು ಅವತಾರವೇ ಸರಿ. ಕಾರಣ ಟಿಪ್ಸ್ ಪಡೆದು ಕೆಲಸ ಮಾಡುವಾತ ಮುಂದೆ ಅದಿಲ್ಲದೆ ಕೆಲಸವನ್ನೇ ಮಾಡದ ಸ್ಥಿತಿಗೆ ತಲುಪಿರುತ್ತಾನೆ. ಮಠ ಮಂದಿರಗಳಂತಹ ಪವಿತ್ರ ಜಾಗಗಳಲ್ಲಿ ಕೂಡ ದಕ್ಷಿಣೆಯ ರೂಪದಲ್ಲಿ ನೀಡುವ ನೋಟುಗಳು ಕೆಲಸ ಮಾಡುತ್ತವೆ. ಶಾಲಾ ಕಾಲೇಜುಗಳಲ್ಲಿ ಲಂಚ ಸ್ವೀಕರಿಸಿದ ಪರೀಕ್ಷಕರು ವಿದ್ಯಾರ್ಥಿಗಳಿಗೆ ಹೆಚ್ಚಿನ ಅಂಕಗಳನ್ನು ತುಂಬಿದ್ದುಂಟು. ಹೆಚ್ಚಿನ ಸರ್ಕಾರಿ ಕಚೇರಿಗಳಲ್ಲಿ ‘ಕೈ ಬಿಸಿ’ ಮಾಡದೆ ನಮ್ಮ ಕಡತ ಮುಂದೆ ಸಾಗದು. ರೆವೆನ್ಯೂ ಇಲಾಖೆ, ಭೂ ನೋಂದಣಿ, ಪಿ.ಡಬ್ಲ್ಯು ಇಲಾಖೆ, ಕೆಲವು ತಾಲ್ಲೂಕು ಕಚೇರಿಗಳಲ್ಲಿ ಲಂಚ ರಾಜಾರೋಷವಾಗಿ ನಡೆಯುತ್ತಿರುತ್ತವೆೆ. ರೈಲುಗಳಲ್ಲಿ ಸೀಟು ಬೇಕಾದರೂ ಕೆಲವು ಟಿ.ಸಿ ಜೇಬಿಗೆ ದುಡ್ಡು ಹಾಕಬೇಕಾಗುತ್ತದೆ. ಕೆಲವು ಸರ್ಕಾರಿ ಆಸ್ಪತ್ರೆಗಳಲ್ಲಿ ಮಂಚ ಸಿಗಬೇಕಾದರೆ ಕೊಂಚ ಲಂಚ ನೀಡಬೇಕಾಗುತ್ತದೆ. ಭೂತೆರಿಗೆ, ಮನೆ ತೆರಿಗೆ, ಇತ್ಯಾದಿ ತೆರಿಗೆಗಳನ್ನು ನಿಗದಿಪಡಿಸುವವರನ್ನು ಸ್ವಲ್ಪ ನೋಡಿಕೊಂಡರೆ ತೆರಿಗೆಯ ಮೊತ್ತ ತನ್ನಿಂದ ತಾನೇ ಕೆಳಗಿಳಿಯುತ್ತದೆ.
ಕೋಟ್ಯಂತರ ರೂಪಾಯಿಗಳ ಅವ್ಯವಹಾರವನ್ನೊಳಗೊಂಡಾಗ ಅದು ಒಂದು ಹಗರಣವೆಂದು ಕರೆಯಲ್ಪಡುತ್ತದೆ. ಇದುವರೆಗೆ ಇಂತಹ ಅನೇಕ ಹಗರಣಗಳು ದೇಶದಲ್ಲಿ ನಡೆದಿದ್ದರೂ, ಸುದೀರ್ಘ ಕಾಲದವರೆಗೆ ಅವುಗಳ ತನಿಖೆ ನಡೆದಿದ್ದರೂ, ಯಾರಿಗೂ ಇದುವರೆಗೆ ಶಿಕ್ಷೆ ಆಗಿಲ್ಲ. ಎಲ್ಲರೂ ಕೈಗೆ ಸಿಕ್ಕದ ಕಳ್ಳರಂತೆ ರಾಜಾರೋಷವಾಗಿ ತಿರುಗಾಡುತ್ತಿರುತ್ತಾರೆ. ಕೆಲವೊಮ್ಮೆ ಹಗರಣದಲ್ಲಿ ಸಿಕ್ಕಿ ಹಾಕಿಕೊಂಡವರು ಜೈಲಿನಿಂದ ಬೇಲ್ ಮೂಲಕ ಹೊರಗೆ ಬಂದಾಗ ಅವರಿಗೆ ಮೆರವಣಿಗೆಗಳನ್ನೊಳಗೊಂಡ ಅದ್ದೂರಿ ಸ್ವಾಗತವೇ ಕಾದಿರುತ್ತದೆ. ಇದು ವಿಚಿತ್ರ ಆದರೆ ಸತ್ಯ.
ಯಾರೂ ಲಂಚವನ್ನು ಸಂತೋಷದಿಂದ ನೀಡೋದಿಲ್ಲ. ಬೇರೆ ವಿಧಿ ಇಲ್ಲವೆ ಯಾವುದೋ ಲಾಭದ/ಲೋಭದ ದೃಷ್ಟಿಯಿಂದ ನೀಡುತ್ತಾರೆ ಹಾಗೂ ಒಳಗಿಂದೊಳಗೆ ಲಂಚ ತಗೊಂಡವನಿಗೆ ಹಿಡಿ ಶಾಪವನ್ನು ಹಾಕುತ್ತಾ ನೀಡುತ್ತಿರುತ್ತಾರೆ. ಅಕ್ರಮಗಳನ್ನು ಸಕ್ರಮಗೊಳಿಸುವ, ಶೀಘ್ರಗತಿಯಲ್ಲಿ ತಮ್ಮ ಕಡತಗಳ ವಿಲೇವಾರಿ ಮಾಡಿಸುವ, ಇಲ್ಲವೇ ತಮಗಾಗುವ ಲಾಭದ ದೃಷ್ಟಿಯಿಂದ ಲಂಚ ಕೊಡಲಾಗುತ್ತದೆ. ಲಂಚ ನೀಡಿದವರು ಮುಂದೆ ತಾವೂ ಲಂಚವನ್ನು ಪಡೆಯುವ ಪ್ರವೃತ್ತಿಗೆ ಮುಂದಾಗುತ್ತಾರೆ. ಕಳೆದುಕೊಂಡ ಹಣವನ್ನು ಮತ್ತೆ ಪಡೆದು ಕೊಳ್ಳಬೇಕಲ್ಲ! ಅಂತೆಯೇ ಜನ ಲಂಚ ಸ್ವೀಕರಿಸಲು ಕಾರಣ - ಅದು ಕಡಿಮೆ ವರಮಾನದಿಂದಾಗಿ ಉದ್ಭವಿಸಿದ ಬಡತನ ಒಂದು ಚಿಕ್ಕ ಕಾರಣವಾದರೆ, ಹಣದ ಮೇಲಿನ ದುರಾಸೆಯೆ ದೊಡ್ಡ ಕಾರಣ. ಸುಲಭದಲ್ಲಿ ಹಣ ಮಾಡುವ ಈ ವಿಧಾನ ಯಾರಿಗೆ ಬೇಕಿಲ್ಲ? ಒಮ್ಮೆ ಲಂಚ ಸ್ವೀಕರಿಸಲು ಪ್ರಾರಂಭಿಸಿದ ವ್ಯಕ್ತಿಯಲ್ಲಿ ಈ ಹವ್ಯಾಸ ತೊರೆಯಲಾರದ ಅಭ್ಯಾಸವಾಗಿ ಬೆಳೆದು, ಬಿಡಿಸಲಾರದ ಚಟವಾಗಿ ಬಿಡುತ್ತದೆ. ಕೆಲವರಿಗಂತೂ ಈ ಚಟ ಎಷ್ಟು ಬಲವಾಗಿ ಬೇರೂರಿರುತ್ತದೆ ಎಂದರೆ ತನ್ನದೇ ವೈಯುಕ್ತಿಕವಾದ ಕೆಲಸಕ್ಕೂ ಸ್ವಲ್ಪ ಹಣವನ್ನು ತನ್ನ ಒಂದು ಜೇಬಿನಿಂದ ತೆಗೆದು, ಲಂಚದ ಹಣ ತುಂಬುವ ಇನ್ನೊಂದು ಜೇಬಿನೊಳಗೆ ಹಾಕಬೇಕಾಗುತ್ತದೆಯಂತೆ: ಲಂಚಕೋರರ ಆಸೆಗಳಿಗೆ ಇತಿಮಿತಿಗಳಿರೋದಿಲ್ಲ. ಲಂಚವನ್ನು ಪಡೆಯದೆ ಯಾವ ಕೆಲಸವನ್ನೂ ಮಾಡದಂತಹ ವಿಷಮ ವಿಪರೀತ ಪರಿಸ್ಥಿತಿಗೆ ತಲುಪಿರುತ್ತಾನೆ ಈ ಲಂಚಕೋರ!
ಲಂಚಕೋರರನ್ನು ಅವರ ಮುಖದಿಂದಲೂ, ಮಾತಿನಿಂದಲೂ, ವರ್ತನೆಯಿಂದಲೂ, ತಕ್ಷಣ ಕಂಡು ಹಿಡಿಯಬಹುದು. ಇಂಥವರು ಗುಳ್ಳೆನರಿಗಳಂತಿರುತ್ತಾರೆ. ಹಸಿದ ತೋಳಗಳಂತಿರುತ್ತಾರೆ. ಲಂಚಕೋರರು ತಾತ್ಕಾಲಿಕವಾಗಿ ಒಂದಿಷ್ಟು ಹಣವನ್ನು ಸಂಪಾದಿಸಿಕೊಳ್ಳಬಹುದು, ಆದರೆ ಜೀವನಾಂತ್ಯದಲ್ಲಿ ಒಂದಲ್ಲ ಒಂದು ರೀತಿಯ ಕಷ್ಟ ನಷ್ಟಗಳಿಗೆ ವ್ಯಾಧಿಗಳಿಗೆ ಬಲಿಯಾಗುತ್ತಾರೆ. ಇಲ್ಲವೇ ತಮ್ಮ ಮಕ್ಕಳ ಅಭ್ಯುದಯವನ್ನು ಕಾಣುವಲ್ಲಿ ವಿಫಲರಾಗುತ್ತಾರೆ. ಲಂಚ ಪಡೆದವರು, ನೀಡಿದವರು ಇಬ್ಬರೂ ಅಪರಾಧಿಗಳೆ. ಏಕೆಂದ್ರೆ ಲಂಚ ನೀಡುವವರೇ ಇಲ್ಲವಾದರೆ, ಲಂಚಕೋರರು ಎಲ್ಲಿ ಸೃಷ್ಟಿಯಾಗುತ್ತಾರೆ? ಭ್ರಷ್ಟಾಚಾರವು ಪ್ರತಿಭೆಗೆ ತಕ್ಕ ಪುರಸ್ಕಾರ, ಪರಿಶ್ರಮಕ್ಕೆ ತಕ್ಕ ಪ್ರತಿಫಲವನ್ನು ಕೊಡುವಲ್ಲಿ ಅಡ್ಡಿಯಾಗಿ ಪ್ರತಿಭೆ- ಪರಿಶ್ರಮ ಪ್ರಾ›ಮಾಣಿಕತೆ- ನ್ಯಾಯ- ಧರ್ಮಗಳಿಗೆ ಅಪಚಾರವನ್ನು ಎಸಗುತ್ತಿರುತ್ತದೆ. ಇದು ಸುಸಂಕೃತ ಸಮಾಜಕ್ಕೆ ಶೋಭೆ ಎನಿಸದು.
ಯಾವ ಕಾನೂನಿಂದಲೂ ಭ್ರಷ್ಟಾಚಾರವನ್ನು ನಿಲ್ಲಿಸಲಾಗದು. ಹೆತ್ತವರು ಮಕ್ಕಳಿಗೆ ನೀಡಬೇಕಾದ ಸಂಸ್ಕಾರ ಹಾಗೂ ಶಿಕ್ಷಕರ ನೈತಿಕ ಮಾರ್ಗದರ್ಶನ ಈ ದಿಸೆಯಲ್ಲಿ ಬಹಳ ಅವಶ್ಯ. ರಾಜಕಾರಣಿಗಳು ಭ್ರಷ್ಟಾಚಾರ ಮುಕ್ತ ಭಾರತವನ್ನು ನಿರ್ವಿುಸಲು ಪ್ರಯತ್ನಿಸಬೆಕು. ‘ನಾನೊಬ್ಬನೇ ಲಂಚ ಪಡೆಯುವುದನ್ನು ನಿಲ್ಲಿಸಿದರೆ ಲಂಚಾವತಾರ ಅಂತ್ಯವಾದೀತೇ?’ ಎಂದು ಪ್ರತಿಯೊಬ್ಬ ಲಂಚಕೋರ ಯೋಚಿಸಿದರೆ, ಭ್ರಷ್ಟಾಚಾರ ಕೊನೆಯಾಗೋದು ಎಂದು? ಆದುದರಿಂದ ಭ್ರಷ್ಟಾಚಾರವನ್ನು ಬುಡದಿಂದ ಕಿತ್ತು ಹಾಕುವ ಪ್ರಯತ್ನ ಎಲ್ಲರಿಂದಲೂ, ಎಲ್ಲಾ ಕ್ಷೇತ್ರದಲ್ಲೂ ಈಗಿಂದಲೇ ಆರಂಭವಾಗಬೇಕು.