

ಮಾಡೋದಕ್ಕೆ ನೂರಾರು ಕೆಲಸವಿರುತ್ತವೆ. ಆದರೆ ಅದನ್ನು ಆಸಕ್ತಿ ಇಟ್ಟು ಮಾಡುವ ಶಕ್ತಿ ಇರುವುದು ಕೆಲವರಲ್ಲಿ ಮಾತ್ರ. ಯಾಂತ್ರಿಕ ಬದುಕಿನ ಹೊರಗೆ ನಿಂತು ವಿಭಿನ್ನ ರೀತಿಯಲ್ಲಿ ಆಲೋಚಿಸಿ, ಕಾರ್ಯರೂಪಕ್ಕೆ ತರುವವರು ಅನೇಕರಿದ್ದಾರೆ. ನನ್ನ ಭಾಷೆ, ನನ್ನ ರಾಜ್ಯ, ನಮ್ಮ ಜನ, ನಮ್ಮ ಕಲೆ ಎಂಬ ಅಭಿಮಾನ ಇಟ್ಟುಕೊಂಡು ಸಮಾಜಕ್ಕೆ ಕೊಡುಗೆ ನೀಡುತ್ತಿರುವ ಕೆಲ ಯುವ ಸಾಧಕರ ಕಿರು ಪರಿಚಯ ಇಲ್ಲಿದೆ. ಇದರಲ್ಲಿ ಕೆಲವರು ಅದನ್ನೇ ತಮ್ಮ ವೃತ್ತಿಯನ್ನಾಗಿಯೂ ಮಾಡಿಕೊಂಡು ಕೈತುಂಬ ಕಾಸನ್ನೂ ಗಳಿಸುತ್ತಿದ್ದಾರೆ.
ಕನ್ನಡಿಗರಲ್ಲಿ ಕನ್ನಡಾಭಿಮಾನಕ್ಕೇನೂ ಕೊರತೆ ಇಲ್ಲ. ಅದನ್ನೇ ಒಂದು ಟ್ರೆಂಡ್ ಆಗಿ ಸೆಟ್ ಮಾಡಿದ್ದು ‘ಇರುವೆ ಡಾಟ್ ಇನ್’ ಹೆಸರಿನ ಒಂದು ಸಣ್ಣ ಸಂಸ್ಥೆ. ಕನ್ನಡಿಗರ ಅಭಿಮಾನವನ್ನು ಗಮನದಲ್ಲಿಟ್ಟುಕೊಂಡು, ನಿತ್ಯ ಬಳಕೆಯ ಟಿ ಶರ್ಟ್‌ಗಳ ಮೇಲೆ ಕನ್ನಡದ ಬರಹಗಳನ್ನು ಆಕರ್ಷಕ ರೀತಿಯಲ್ಲಿ ಪ್ರಿಂಟ್ ಮಾಡಿ ಯುವಜನತೆಯನ್ನು ಆಕರ್ಷಿಸಿದ ಸಂಸ್ಥೆಯಿದು. ಇವರ ಟಿಶರ್ಟ್‌ಗಳ ಮೇಲಿನ ಕನ್ನಡ ಬರಹಗಳೇ ಅತ್ಯಂತ ಆಕರ್ಷಕವಾಗಿರುತ್ತವೆ.
‘ಶೂಟ್ ಮಾಡ್ಲಾ’, ‘ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ’, ‘ನೋಡಿ ಸ್ವಾಮಿ ನಾವು ಇರೋದೆ ಹೀಗೆ’, ‘ನನ್ನ ದೇಶ ಭಾರತ ನನ್ನ ಬೇರು ಕನ್ನಡ’... ಹೀಗೆ ಹಲವು ಅತ್ಯಾಕರ್ಷಕ ಸಾಲುಗಳನ್ನು ಟಿಶರ್ಟ್ ಮೇಲೆ ಮುದ್ರಿಸಿದ್ದಾರೆ. ವರನಟ ಡಾ. ರಾಜ್ಕುಮಾರ್ ಸೇರಿದಂತೆ ಕನ್ನಡದ ಮೇರು ನಟರ ಫೋಟೋಗಳನ್ನೂ ಪ್ರಿಂಟ್ ಮಾಡಿದ್ದಾರೆ. ಪ್ರಸಿದ್ಧ ಕವಿಗಳು, ಲೇಖಕರ ಎಂದೂ ಮರೆಯಲಾಗದ ಸಾಲುಗಳನ್ನು ಟಿಶರ್ಟ್‌ಗಳ ಮೇಲೆ ಮುದ್ರಿಸಿ ಜನರಿಗೆ ನೆನಪಿಸುತ್ತಿದ್ದಾರೆ. ಕರೊನಾ ಬಂದ ನಂತರ ಮಾಸ್ಕ್‌ಗಳಲ್ಲೂ ಕನ್ನಡದ ಸಾಲುಗಳನ್ನು ಪ್ರಿಂಟ್ ಮಾಡಿಸಿ ಜನಪ್ರಿಯಗೊಳಿಸುವಲ್ಲಿ ಸಂಸ್ಥೆ ಯಶಸ್ವಿಯಾಗಿದೆ. ಚುನಾವಣೆ ಬಂದಾಗ ‘ವೋಟ್ ಮಾಡಿ’ ಎಂಬ ಬರಹವುಳ್ಳ ಟಿಶರ್ಟ್ ಮುದ್ರಿಸಿ ತನ್ನ ಸಾಮಾಜಿಕ ಹೊಣೆಗಾರಿಕೆಯನ್ನೂ ಸಂಸ್ಥೆ ಪ್ರದರ್ಶಿಸಿತ್ತು.
ಯಾವುದೇ ರಾಜ್ಯ, ದೇಶಕ್ಕೆ ಹೋದರೂ ಕನ್ನಡ ಎಲ್ಲೆಲ್ಲಿಯೂ ಮಿಂಚುತ್ತಿರುವಂತೆ ಮಾಡುವಲ್ಲಿ ಈ ಸಂಸ್ಥೆಯ ಕೊಡುಗೆ ಇದೆ. ಮೂಲತಃ ಚಿಕ್ಕಮಗಳೂರಿನ ಜೆ.ಸಿ. ಕೃಷ್ಣಕಾಂತ ಅವರು ಸುಜಿತ್, ಕಾರ್ತಿಕ್, ರಾಜೀವ್, ಅಲೋಕ್ ಮುಂತಾದವರ ಜತೆ ಸೇರಿ ಸ್ಥಾಪಿಸಿದ ಸಂಸ್ಥೆ ಇದು. ಕರ್ನಾಟಕದಲ್ಲಿ ಕನ್ನಡ ಬಳಕೆ ಕಡಿಮೆಯಾಗುತ್ತಿದೆ ಎಂಬ ಕೂಗು ಕೇಳಿಬರುತ್ತಿರುವ ಈ ದಿನಗಳಲ್ಲಿ ಕನ್ನಡವನ್ನು ಕನ್ನಡಿಗರು ಮತ್ತು ಕನ್ನಡೇತರರಲ್ಲೂ ಜನಪ್ರಿಯಗೊಳಿಸುವಲ್ಲಿ ಈ ಸಂಸ್ಥೆ ಯಶಸ್ವಿಯಾಗಿದೆ. ಐಟಿ ಮತ್ತಿತರ ಕ್ಷೇತ್ರಗಳ ಕಂಪನಿಗಳು ತಮಗಿಷ್ಟವಾದ ಸ್ಲೋಗನ್ ಹೊಂದಿರುವ ಟಿಶರ್ಟ್‌ಗಳಿಗೆ ನೂರು-ಸಾವಿರ ಸಂಖ್ಯೆಯಲ್ಲಿ ಆರ್ಡರ್ ಮಾಡುತ್ತಿರುವುದೇ ಇದಕ್ಕೆ ಸಾಕ್ಷಿ.
- ಮಂದಾರ ಸಾಗರ