ಇರಾನ್ ಸಮಸ್ಯೆ ಅಮೆರಿಕದೊಂದಿಗಿನದು ಮಾತ್ರವಲ್ಲ...

sakalika jan 13 2020
Published on

ಇರಾನಿನ ಸವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿಯ ಅತ್ಯಂತ ಆಪ್ತ ಮತ್ತು ಇರಾನ್ ಸೇನೆಯ ವಿಶೇಷ ವಿಭಾಗವಾದ ರೆವಲೂಷನರಿ ಗಾರ್ಡ್ಸ್ ಕೋರ್​ಗೆ ಸೇರಿದ ಖುದ್ಸ್ ಪಡೆಯ ಮುಖ್ಯಸ್ಥ ಮೇಜರ್ ಜನರಲ್ ಖಾಸಿಂ ಸುಲೇಮಾನಿಯನ್ನು ಅಮೆರಿಕ ಡ್ರೋನ್ ದಾಳಿ ಮುಖಾಂತರ ಹೊಡೆದುರುಳಿಸಿದ್ದು ಈಗಾಗಲೇ ಗೊತ್ತಿರುವ ಸಂಗತಿ. ಇದರಿಂದಾಗಿ ಅಮೆರಿಕ ಮತ್ತು ಇರಾನ್ ನಡುವೆ ಉದ್ವಿಗ್ನ ಸ್ಥಿತಿ ಉಂಟಾಗಿದ್ದು, ಒಬ್ಬರಿಗೊಬ್ಬರ ಮೇಲೆ ಸಣ್ಣ ಪ್ರಮಾಣದ ದಾಳಿಯನ್ನೂ ನಡೆಸಿಕೊಳ್ಳುತ್ತಿದ್ದಾರೆ. ಈ ಜಟಾಪಟಿ ಎಲ್ಲಿ ಯುದ್ಧಕ್ಕೇ ತಿರುಗಿಬಿಡುತ್ತದೆಯೋ ಎಂಬ ಭೀತಿಯೂ ಮೂಡಿರುವುದು ಸುಳ್ಳಲ್ಲ. ಸದ್ಯಕ್ಕೆ ಅಂತಹ ಭೀತಿ ಸ್ವಲ್ಪ ದೂರಾದಂತೆ ಕಂಡರೂ, ಪೂರ್ತಿಯಾಗಿ ನಿರಾಳರಾಗುವಂತಿಲ್ಲ. ಏಕೆಂದರೆ ಎರಡೂ ದೇಶಗಳಿಗೆ ಇದು ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಎಷ್ಟರಮಟ್ಟಿಗೆ ಎಂದರೆ, ಇರಾನ್ ಸಂಸತ್ತು ಇಡೀ ಅಮೆರಿಕ ಸೇನೆಯನ್ನೇ ‘ಭಯೋತ್ಪಾದಕ’ ಎಂದು ಘೋಷಿಸಿಬಿಟ್ಟಿದೆ! ಇನ್ನೊಂದೆಡೆ, ಅಮೆರಿಕ ಇರಾನ್ ಮೇಲಣ ನಿರ್ಬಂಧಗಳನ್ನು ಇನ್ನಷ್ಟು ಬಿಗಿಗೊಳಿಸುವುದಾಗಿ ಎಚ್ಚರಿಸಿದೆ. ಹಾಗೇನಾದರೂ ಆದಲ್ಲಿ, ಮೊದಲೇ ಬಸವಳಿದಿರುವ ಇರಾನ್ ಮತ್ತಷ್ಟು ತೊಂದರೆ, ಸಮಸ್ಯೆ ಎದುರಿಸುವುದು ಗ್ಯಾರಂಟಿ. ಈ ಮಧ್ಯೆ, ಟೆಹರಾನ್ ವಿಮಾನನಿಲ್ದಾಣದಿಂದ ಹೊರಟ ಕೆಲವೇ ಸೆಕೆಂಡುಗಳಲ್ಲಿ ಉಕ್ರೇನ್ ವಿಮಾನ ಅಪಘಾತಕ್ಕೀಡಾದಾಗ ಅಮೆರಿಕ ಮತ್ತು ಕೆಲ ದೇಶಗಳು ಇದು ಇರಾನ್ ಕಿತಾಪತಿಯೇ ಇರಬೇಕೆಂಬ ಸಂಶಯ ವ್ಯಕ್ತಪಡಿಸಿದ್ದವು. ಅದು ನಿಜವಾಗಿದೆ. ಆ ವಿಮಾನ ತನ್ನ ಸೇನಾನೆಲೆಯ ಅತಿ ಸಮೀಪ ಬಂದುದರಿಂದ ಹೊಡೆದಿದ್ದಾಗಿ ಇರಾನ್ ಸೇನೆ ಹೇಳಿದೆ. ಆದರೆ ಸಂದೇಹಗಳು ಅಷ್ಟಕ್ಕೇ ಮುಗಿದಿಲ್ಲ. ನಾಗರಿಕ ವಿಮಾನ ಮತ್ತು ಸೇನಾ ವಿಮಾನಗಳ ನಡುವೆ ವ್ಯತ್ಯಾಸ ಗುರುತಿಸುವಂಥ ತಂತ್ರಜ್ಞಾನ ಇರಾನ್ ಸೇನೆ ಬಳಿ ಇಲ್ಲವೆ? ಅಷ್ಟಕ್ಕೂ ಆ ವಿಮಾನ ಸೇನಾನೆಲೆ ಸನಿಹಕ್ಕೆ ಹೋಗಿದ್ದಾದರೂ ಹೇಗೆ ಎಂಬೆಲ್ಲ ಪ್ರಶ್ನೆಗಳಿಗೆ ಉತ್ತರಿಸುವವರಿಲ್ಲ. ಇದೊಂದು ‘ಅಚಾತುರ್ಯ’ ಎಂದು ಹೇಳಿ ಇರಾನ್ ಸರ್ಕಾರ ಕ್ಷಮೆ ಕೋರಿದೆ. ಆದರೆ ಅಲ್ಲಿನ ಜನ ಸರ್ಕಾರವನ್ನು ಅಷ್ಟು ಸುಲಭದಲ್ಲಿ ಕ್ಷಮಿಸಲು ಸಿದ್ಧರಿಲ್ಲ. ‘ಅಧಿಕಾರ ತ್ಯಜಿಸಿ, ರಾಜೀನಾಮೆ ಕೊಡಿ’ ಎಂದು ಆಗ್ರಹಿಸಿ ಜನರು ಬೀದಿಗಿಳಿದಿದ್ದಾರೆ. ಈ ವಿಮಾನಾಪಘಾತ ಪ್ರಕರಣ ಜಾಗತಿಕ ಮಟ್ಟದಲ್ಲಿ ಇರಾನ್​ಗೆ ದೊಡ್ಡ ಮುಜುಗರವನ್ನೇ ತಂದಿಟ್ಟಿದೆ. ಮತ್ತಿನ್ನೇನು? ಆ ವಿಮಾನದಲ್ಲಿ ಇರಾನಿನದೇ 70ಕ್ಕೂ ಅಧಿಕ ಪ್ರಯಾಣಿಕರಿದ್ದರು!

ಇವೆಲ್ಲ ಇರಾನ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಎದುರಿಸುತ್ತಿರುವ ಮುಜುಗರ, ಸಮಸ್ಯೆಗಳಾದರೆ ಆಂತರಿಕವಾಗಿಯೂ ಅಲ್ಲಿ ಕುದಿವಾತಾವರಣವಿದೆ. ಇದೆಲ್ಲ ಆರಂಭವಾದದ್ದು ಕಳೆದ ನವೆಂಬರ್​ನಲ್ಲಿ. ಅಮೆರಿಕದ ಅಂದಿನ ಅಧ್ಯಕ್ಷ ಬರಾಕ್ ಒಬಾಮಾ ಅವರು 2015ರ ಜುಲೈ 15ರಂದು ಸಹಿಹಾಕಿದ್ದ ಇರಾನ್ ಪರಮಾಣು ಒಪ್ಪಂದ(ಜಂಟಿ ಸಮಗ್ರ ಕ್ರಿಯಾಯೋಜನೆ)ದಿಂದ ಹಿಂದೆಸರಿಯುವುದಾಗಿ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 2019ರ ಮೇ 8ರಂದು ಘೋಷಿಸಿದರು. ಒಪ್ಪಂದದನ್ವಯ ಇರಾನ್ ಪರಮಾಣು ಕಾರ್ಯಕ್ರಮಗಳನ್ನು ಪೂರ್ತಿಯಾಗಿ ಸ್ಥಗಿತಗೊಳಿಸಿಲ್ಲ ಎಂಬ ಕಾರಣಕ್ಕೆ ಹೀಗೆ ಮಾಡುವುದು ಅಮೆರಿಕಕ್ಕೆ ಅನಿವಾರ್ಯ ಎಂದು ಟ್ರಂಪ್ ಸಮರ್ಥಿಸಿಕೊಂಡರು. ಅದರ ಬೆನ್ನಲ್ಲೆ ಇರಾನ್ ಮೇಲೆ ಕಠಿಣ ನಿರ್ಬಂಧಗಳನ್ನು ವಿಧಿಸಿದರು. ಹೀಗಾಗಿ ಇರಾನ್ ಆರ್ಥಿಕ ಸ್ಥಿತಿ ಹದಗೆಟ್ಟಿದೆ; ಆ ದೇಶ ಅನೇಕ ತೊಂದರೆಗಳನ್ನು ಅನುಭವಿಸುತ್ತಿದೆ. ಅದರ ಆಮದು ಮತ್ತು ರಫ್ತು ಅರ್ಧದಷ್ಟು ತಗ್ಗಿದೆ. ಅಮೆರಿಕದ ಆಗ್ರಹದ ಪರಿಣಾಮವಾಗಿ, ಭಾರತದಂತಹ ದೇಶ ಕೂಡ ಇರಾನಿನಿಂದ ತೈಲ ತರಿಸುವುದನ್ನು ಸದ್ಯಕ್ಕೆ ನಿಲ್ಲಿಸಿದೆ. ಇರಾನ್ ತನ್ನಲ್ಲಿರುವ ಅಪಾರ ತೈಲಭಂಡಾರದಿಂದಾಗಿ ಹೇಗೋ ಪರಿಸ್ಥಿತಿಯನ್ನು ನಿಭಾಯಿಸುತ್ತಿದೆಯಾದರೂ ತಮ್ಮ ಬಾಳು ಗೋಳು ಎಂಬುದು ಜನರ ಮಾತು. ಇರಾನಿಗರ ಭಾವನೆಗೆ ಇಂಬುಕೊಡುವಂತೆ ಅಮೆರಿಕ ಅಧ್ಯಕ್ಷ ಟ್ರಂಪ್ ಕೂಡ, 1979ರ ಇಸ್ಲಾಮಿಕ್ ಕ್ರಾಂತಿಗಿಂತ ಮೊದಲು ಶಾ ನೇತೃತ್ವದಲ್ಲಿನ ಇರಾನ್​ನ ಸಮೃದ್ಧ ಪಾಶ್ಚಿಮಾತ್ಯಪರ ಆರ್ಥಿಕತೆಯನ್ನು ಮುಲ್ಲಾಗಳು ಇಂದಿನ ದುಸ್ಥಿತಿಗೆ ಇಳಿಸಿದ್ದಾರೆ ಎಂದು ಟೀಕಿಸಿದ್ದರು. ಜೀವನಾವಶ್ಯಕ ವಸ್ತುಗಳು ಮತ್ತು ಗ್ಯಾಸೋಲಿನ್ ಬೆಲೆ ಗಗನಕ್ಕೇರಿದ್ದು ಜನಾಕ್ರೋಶ ಸ್ಪೋಟಗೊಳ್ಳಲು ನಿಮಿತ್ತವಾಯಿತು. ಬೀದಿಗಿಳಿದ ಜನರು ಕಟ್ಟಡಗಳು, ಬ್ಯಾಂಕ್​ಗಳು, ಕಾರುಗಳಿಗೆ ಬೆಂಕಿಹಚ್ಚಿ ಸಿಟ್ಟು ವ್ಯಕ್ತಪಡಿಸಿದರು. ಅಲ್ಲಿನ ಸರ್ಕಾರ ಬಿಗಿಮುಷ್ಟಿಯಿಂದ ವ್ಯವಹರಿಸಿ ಜನರ ಪ್ರತಿರೋಧವನ್ನು ಹತ್ತಿಕ್ಕುತ್ತದೆ ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಈಚಿನ ಬೆಳವಣಿಗೆಗಳು ಜನರಲ್ಲಿ ಮತ್ತೆ ಆಕ್ರೋಶ ಹೆಚ್ಚಿಸಿದ್ದು, ದೊಡ್ಡ ಮಟ್ಟದ ಪ್ರತಿಭಟನೆಗಳು ಶುರುವಾಗಿವೆ. ಇರಾನ್ ಜನರಿಗೆ ಅಮೆರಿಕದ ಮೇಲೂ ಆಕ್ರೋಶ ಇದೆಯಾದರೂ, ದೇಶದಲ್ಲಿ ಮುಲ್ಲಾಗಳು ಆರ್ಥಿಕ ಸ್ಥಿತಿಯನ್ನು ಸರಿಯಾಗಿ ನಿಭಾಯಿಸುತ್ತಿಲ್ಲ ಎಂಬ ಅಸಮಾಧಾನವನ್ನೂ ಹೊಂದಿದ್ದಾರೆ. ನವೆಂಬರ್​ನಲ್ಲಿ ಆರಂಭವಾದ ಜನಾಂದೋಲನ ಎಂಥ ವಾತಾವರಣ ಸೃಷ್ಟಿಸಿತ್ತೆಂದರೆ, ಮಧ್ಯಪ್ರಾಚ್ಯದ ಅನೇಕ ಇಸ್ಲಾಮಿಕ್ ದೇಶಗಳನ್ನು ಪ್ರಭಾವಿಸಿದ ‘ಅರಬ್ ವಸಂತ’ವನ್ನು ನೆನಪಿಸಿತು. ಅರಬ್ ವಸಂತ ಸೃಷ್ಟಿಸಿದ ಸಂಚಲನ ಇನ್ನೂ ಮರೆಯಾಗಿಲ್ಲ. ಟ್ಯುನೀಷಿಯಾದಲ್ಲಿ ಚಿಕ್ಕದಾಗಿ ಆರಂಭವಾಗಿ ಕ್ರಮೇಣ ವ್ಯಾಪಕವಾಗಿ ಪಸರಿಸಿ, ನೆರೆದೇಶಗಳಲ್ಲೂ ಹರಡಿದ ಜನಾಂದೋಲನ ಅದು. ಅದರಲ್ಲೂ ವಿಶೇಷವಾಗಿ ಯುವಜನರು ಈ ಹೋರಾಟದ ಮುಂಚೂಣಿಯಲ್ಲಿದ್ದರು. ಆಡಳಿತಗಳ ಸರ್ವಾಧಿಕಾರಿ-ದಮನಕಾರಿ ಪ್ರವೃತ್ತಿ, ಸಹಜಜೀವನ ನಡೆಸಲೂ ಸಮಸ್ಯೆಗಳು ಎದುರಾಗಿರುವುದು, ನಿರುದ್ಯೋಗ, ರಾಜಕೀಯ ಭ್ರಷ್ಟಾಚಾರ, ಮಾನವ ಹಕ್ಕುಗಳ ಉಲ್ಲಂಘನೆ, ಪ್ರಜಾಪ್ರಭುತ್ವಪರ ಚಿಂತನೆ- ಮುಂತಾದ ಆಯಾಮಗಳು ಈ ಹೋರಾಟಕ್ಕಿದ್ದವು. 2010ರ ಡಿಸೆಂಬರ್​ನಲ್ಲಿ ಮೊದಲಾಗಿ ಟ್ಯುನಿಷಿಯಾ ಜನರು ಬೀದಿಗಿಳಿದರು. ಈ ಜನಾಂದೋಲನ ಕ್ರಮೇಣ ಲಿಬಿಯಾ, ಈಜಿಪ್ಟ್, ಯೆಮೆನ್, ಸಿರಿಯಾ ಮತ್ತು ಬಹರೇನ್​ಗಳಿಗೂ ವಿಸ್ತರಿಸಿತು. ನಂತರದಲ್ಲಿ ಸುಡಾನ್, ಕುವೈತ್, ಸೌದಿಅರೇಬಿಯಾ ಮುಂತಾದ ಕಡೆಗಳಲ್ಲಿಯೂ ಇದರ ಪ್ರಭಾವ ಗೋಚರಿಸಿತು. ಈ ಜನಾಭಿಯಾನದ ಫಲವಾಗಿ ಟ್ಯುನೀಷಿಯಾ, ಲಿಬಿಯಾ, ಯೆಮೆನ್,

ಈಜಿಪ್ಟ್​ಗಳಲ್ಲಿ ಆಡಳಿತಾರೂಢ ಸರ್ಕಾರಗಳು ಕೆಳಕ್ಕುರುಳಿದವು; ಇನ್ನು ಕೆಲವೆಡೆಗಳಲ್ಲಿ ಸರ್ಕಾರಗಳು ಬಲಪ್ರಯೋಗದಿಂದ ಆಂದೋಲನವನ್ನು ಹತ್ತಿಕ್ಕಿದವು.

ಮತ್ತೆ ಇರಾನ್ ವಿಷಯಕ್ಕೆ ಬರುವುದಾದರೆ, ಅಲ್ಲಿ ಜನರ ಪ್ರತಿಭಟನೆ-ಹೋರಾಟ ಹೊಸದೇನಲ್ಲ. ಹಸನ್ ರೌಹಾನಿ ಸರ್ಕಾರದ ಕಠಿಣ ಬಜೆಟ್ ಪ್ರಸ್ತಾವನೆಗಳನ್ನು ವಿರೋಧಿಸಿ 2018ರ ಆರಂಭದಲ್ಲಿ ಜನರು ಬೀದಿಗಿಳಿದಿದ್ದರು. ಸರ್ಕಾರ ಆಗ ಬಿಗಿಯಾಗಿ ವ್ಯವಹರಿಸಿತ್ತು. ದೇಶಾದ್ಯಂತ ಸುಮಾರು 4 ಸಾವಿರ ಜನರು ಬಂಧನಕ್ಕೀಡಾಗಿದ್ದರು ಮರತ್ತು 30 ಜನರು ಭದ್ರತಾ ಪಡೆಗಳಿಂದ ಕೊಲ್ಲಲ್ಪಟ್ಟರು. 2009ರಲ್ಲಿ ಮಹಮ್ಮದ್ ಅಹ್ಮದಿನೆಜಾದ್ ಅವರು ಅಧ್ಯಕ್ಷರಾಗಿ ಆಯ್ಕೆಯಾದಾಗ ಜನರು ಪ್ರತಿಭಟನೆ ನಡೆಸಿದ್ದರು. ಆಗ ಚುನಾವಣೆಯಲ್ಲಿ ವ್ಯಾಪಕ ಅಕ್ರಮಗಳಾಗಿವೆ ಎಂಬ ಆರೋಪ ಕೇಳಿಬಂದಿತ್ತು.

ಇದೀಗ ಇರಾನ್​ನಲ್ಲಿ ಮತ್ತೊಂದು ಸುತ್ತಿನ ಜನಾಂದೋಲನ ಶುರುವಾದಂತಿದೆ. ಅಮೆರಿಕದೊಂದಿಗಿನ ಬಿಕ್ಕಟ್ಟು ಪರಿಸ್ಥಿತಿಯನ್ನು ಇನ್ನಷ್ಟು ಕಾವೇರಿಸಿದೆ. ಜನರ ಹೋರಾಟಕ್ಕೆ ಅಮೆರಿಕವೇನಾದರೂ ಪರೋಕ್ಷ ಕುಮ್ಮಕ್ಕು ಮತ್ತು ಬೆಂಬಲ ನೀಡಿದಲ್ಲಿ ಪರಿಸ್ಥಿತಿ ಇನ್ನಷ್ಟು ವಿಷಮಿಸುತ್ತದೆ. ಅಂತಿಮವಾಗಿ ಅಲ್ಲಿನ ಸರ್ಕಾರ ಈ ಪ್ರತಿಭಟನೆಯನ್ನು ನಿಗ್ರಹಿಸಲು ಯಶಸ್ವಿಯಾಗಬಹುದು. ಏಕೆಂದರೆ ಅಲ್ಲಿನ ಆಡಳಿತ ವ್ಯವಸ್ಥೆಯೇ ಹಾಗಿದೆ. ಅಲ್ಲಿನ ಆಡಳಿತಸೂತ್ರ ಹಿಡಿದವರು ಶೀಘ್ರದಲ್ಲಿ ಆರ್ಥಿಕ-ಸಾಮಾಜಿಕ ಪರಿಸ್ಥಿತಿಯನ್ನು ಸುಧಾರಿಸಲು ತುರ್ತು ಕ್ರಮ ಕೈಗೊಳ್ಳದಿದ್ದಲ್ಲಿ ಮುಂದೇನಾಗಬಹುದೆಂಬುದು ಅನೂಹ್ಯ. ಇದೇನೇ ಇದ್ದರೂ, ಜನಭಾವನೆಯನ್ನು ಎಷ್ಟು ಕಾಲ ಅದುಮಬಹುದು ಎಂಬುದು ಮಾತ್ರ ಪ್ರಶ್ನಾರ್ಥಕವೇ ಸರಿ...

(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net