

ಹಣವನ್ನು ಹೂಡಿಕೆ ಅಥವಾ ಉಳಿತಾಯ ಮಾಡಬೇಕೆಂದಾಗ ಎಲ್ಲರಿಗೂ ಬರುವ ಒಂದೇ ಆಲೋಚನೆ ಬ್ಯಾಂಕ್ನಲ್ಲಿ ಡೆಪಾಸಿಟ್ ಅಥವಾ ಠೇವಣಿ ಮಾಡುವುದು. ಒಂದು ನಿರ್ದಿಷ್ಟ ಮೊತ್ತವನ್ನು ನಿಗದಿತ ಅವಧಿಗೆ, ಖಚಿತ ದರದ ಬಡ್ಡಿಯೊಂದಿಗೆ ಡೆಪಾಸಿಟ್ ಮಾಡಿದಾಗ ಅವಧಿ ನಂತರ ಬರುವ ಹಣ ಅಸಲು ಮತ್ತು ಬಡ್ಡಿ ಸೇರಿ ಠೇವಣಿದಾರರಿಗೆ ದೊರೆಯುತ್ತದೆ. ಹೀಗೆ ಈ ಬಡ್ಡಿ ದರವು ಕಾಲಕಾಲಕ್ಕೆ ದೇಶದ ಆರ್ಥಿಕತೆ ಹಾಗೂ ಜಾಗತಿಕ ವಿದ್ಯಮಾನಗಳ ಮೇಲೆ ಅವಲಂಬಿತವಾಗಿರುತ್ತದೆ. ಕೆಲವೊಮ್ಮೆ ನಮಗೆ ಸಿಗುವ ಬಡ್ಡಿ ದರ ಕಡಿಮೆಯೂ ಆಗಬಹುದು, ಹೆಚ್ಚಳವೂ ಆಗಬಹುದು. ಅದು ಹೂಡಿಕೆ ಸಂದರ್ಭದ ಆರ್ಥಿಕತೆ ಅವಲಂಭಿಸಿರುತ್ತದೆ. ಹಾಗಾಗಿ ಬಡ್ಡಿ ದರಗಳ ಮೇಲೆ ಪ್ರಭಾವ ಬೀರುವ ಅಂಖ ಯಾವ್ಯಾವು ಎಂದು ಗಮನಿಸೋಣ.
ಹಣದ ಬೇಡಿಕೆ: ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಹಣದ ಬೇಡಿಕೆ ಹೆಚ್ಚಾಗಿರುತ್ತದೆ. ಉತ್ಪಾದನಾ ವಲಯ ಅಥವಾ ಕೈಗಾರಿಕೆಗಳಿಗೆ ವಸ್ತುಗಳನ್ನು ಉತ್ಪಾದಿಸಲು ಅಲ್ಪಾವಧಿ ಹಾಗೂ ದೀರ್ಘಾವಧಿ ಅವಶ್ಯಕತೆಗಾಗಿ ಹಣವನ್ನು ಸಾಲವಾಗಿ ಪಡೆಯಬೇಕಾಗುತ್ತದೆ. ಅದೇ ರೀತಿ ಸಾರ್ವಜನಿಕರಿಗೆ ಮನೆ, ಕಾರು ಖರೀದಿ ಹಾಗೂ ಇತರ ಅವಶ್ಯಕತೆಗಳಿಗಾಗಿ ಹಣವನ್ನು ಸಾಲ ರೂಪದಲ್ಲಿ ಪಡೆಯುವ ಅವಶ್ಯಕತೆ ಇರುತ್ತದೆ. ಆದರೆ, ಆರ್ಥಿಕತೆ ಸರಿಯಾಗಿಲ್ಲದಿದ್ದರೆ ಉತ್ಪನ್ನಗಳಿಗೆ ಬೇಡಿಕೆ ಇಲ್ಲದಿರುವ ಕಾರಣ ಕಂಪನಿಗಳಿಗೆ ಸಾಲದ ಅವಶ್ಯಕತೆ ಇರುವುದಿಲ್ಲ. ಹಾಗಾಗಿ ಸಾಲವನ್ನು ಎಷ್ಟಕ್ಕೆ ಬೇಕೋ ಅಷ್ಟಕ್ಕೆ ಪಡೆಯುತ್ತವೆ. ಹಾಗೆಯೇ ಮಂದಗತಿ ಆರ್ಥಿಕತೆಯ ಕಾರಣ ಉದ್ಯೋಗಾವಕಾಶಗಳೂ ಇಲ್ಲದಂತಾಗುತ್ತವೆ ಮತ್ತು ಗ್ರಾಹಕರೂ ಸಹಿತ ಕಡಿಮೆ ಖರ್ಚು ಮಾಡುತ್ತಾರೆ. ಹೀಗೆ ಹಣದ ಬೇಡಿಕೆ ಹೆಚ್ಚಾದಾಗ ಬಡ್ಡಿ ದರಗಳೂ ಏರಿಕೆಯಾಗುತ್ತವೆ.
ಹಣದ ಪೂರೈಕೆ: ಅರ್ಥ ವ್ಯವಸ್ಥೆಯಲ್ಲಿ ಹಣದ ಪೂರೈಕೆ ಹೆಚ್ಚಾದಾಗ ಹಾಗೂ ಆರ್ಥಿಕ ಹಿನ್ನೆಡೆ ಇರುವಾಗ ಬಡ್ಡಿದರಗಳು ಇಳಿಕೆಯಾಗುತ್ತವೆ. ನೋಟು ಅಮಾನ್ಯೀಕರಣ (ಡಿಮಾನಿಟೈಜೇಶನ್) ಸಮಯದಲ್ಲಿ ಸಾರ್ವಜನಿಕರು ತಮ್ಮಲ್ಲಿದ್ದ ಹಣವನ್ನು ಬ್ಯಾಂಕ್ಗಳಿಗೆ ಜಮೆ ಮಾಡಿದರು. ಪ್ರವಾಹ ರೂಪದಲ್ಲಿ ಬ್ಯಾಂಕಿಗೆ ಬಂದ ಎಲ್ಲ ಹಣವನ್ನು ಸಾಲವಾಗಿ ನೀಡಲು ಸಾಧ್ಯವಾಗಲಿಲ್ಲ. ಹೀಗೆ ಬಂದ ಹಣವನ್ನು ಸರ್ಕಾರದ ಭದ್ರತಾ ಪತ್ರಗಳಲ್ಲಿ ಹೂಡಿಕೆ ಮಾಡಲಾಯಿತು. ಹಾಗಾಗಿ ಬಡ್ಡಿದರ ಇಳಿಕೆಯಾಯಿತು.
ಹಣದುಬ್ಬರ: ಎಲ್ಲ ಸರಕು ಹಾಗೂ ಸೇವೆಗಳ ದರಗಳು ಹೆಚ್ಚಾದಾಗ ಆರ್ಥಿಕತೆಯಲ್ಲಿ ಹಣದುಬ್ಬರ ಉಂಟಾಗುತ್ತದೆ. ಈ ಸಂದರ್ಭಗಳಲ್ಲಿ ಸಾರ್ವಜನಿಕರು ದಿನನಿತ್ಯದ ಅವಶ್ಯಕತೆಗಳಿಗಾಗಿ ಹೆಚ್ಚಿನ ಹಣ ಖರ್ಚು ಮಾಡುವ ಪರಿಸ್ಥಿತಿ ನಿರ್ವಣವಾಗುತ್ತದೆ. ಇದನ್ನು ನಿಯಂತ್ರಿಸಲು ಸರ್ಕಾರ ಹಣದ ಪೂರೈಕೆ ಹೆಚ್ಚು ಮಾಡಬೇಕಾಗುತ್ತದೆ. ಹೀಗೆ ಹಣದ ಬೇಡಿಕೆಯನ್ನು ನಿಭಾಯಿಸಲು ಬಡ್ಡಿದರಗಳನ್ನು ಏರಿಕೆ ಮಾಡುವುದು ಅನಿವಾರ್ಯವಾಗುತ್ತದೆ.
ಜಾಗತಿಕ ಬಡ್ಡಿದರಗಳು ಹಾಗೂ ವಿದೇಶಿ ವಿನಿಮಯ ದರಗಳು: ಇಂದಿನ ಆರ್ಥಿಕತೆ ಜಾಗತೀಕರಣದಲ್ಲಿರುವ ಕಾರಣ, ನಮ್ಮ ಬಡ್ಡಿದರಗಳೂ ಸಹಿತ ಜಾಗತಿಕ ಮಟ್ಟದ ಬಡ್ಡಿದರಗಳ ಆಸುಪಾಸಿನಲ್ಲಿರಬೇಕಾಗುತ್ತದೆ. ಆಕರ್ಷಕ ಬಡ್ಡಿದರಗಳು ಬಂಡವಾಳವನ್ನು ಆಕರ್ಷಿಸುವುದರ ಜತೆಗೆ ವಿದೇಶಿ ವಿನಿಮಯ ದರಕ್ಕೆ ಸಹಾಯಕವಾಗುತ್ತದೆ, ರಿಸರ್ವ್ ಬ್ಯಾಂಕ್ ರೆಪೋ ದರಗಳನ್ನು ಹೆಚ್ಚಿಸುವ ಮೂಲಕ ಬಡ್ಡಿದರ ಹೆಚ್ಚಳಕ್ಕೆ ಕಾರಣವಾಗಲಿದೆ. ಇದರಿಂದ ವಿದೇಶಿ ಹೂಡಿಕೆದಾರರಿಗೆ ಆಕರ್ಷಿಸಲು ಸಹಕಾರಿಯಾಗಲಿದೆ.
ಕೇಂದ್ರಿಯ ಬ್ಯಾಂಕ್: ನಮ್ಮ ದೇಶದಲ್ಲಿ ರಿಸರ್ವ್ ಬ್ಯಾಂಕ್ ಹಣ ಪೂರೈಕೆ ಹಾಗೂ ಹಣಕಾಸು ವ್ಯವಹಾರಗಳನ್ನು ನಿಯಂತ್ರಿಸುವ ದೇಶದ ಸ್ವಾಯತ್ತ ಸಂಸ್ಥೆಯಾಗಿದೆ. ಆರ್ಬಿಐ ಆರ್ಥಿಕ ನೀತಿಯನ್ನು ತಯಾರಿಸುವಾಗ ವಿವಿಧ ಉದ್ದೇಶಗಳನ್ನು ಗಮನದಲ್ಲಿರಿಸಿ, ಬಡ್ಡಿದರ ಹೆಚ್ಚು ಕಡಿಮೆ ಮಾಡುವ ನಿರ್ಧಾರ ಕೈಗೊಳ್ಳುತ್ತದೆ. ಹಾಗೆಯೇ ಹಣದುಬ್ಬರ ನಿಯಂತ್ರಿಸಲು ಬಡ್ಡಿದರಗಳನ್ನು ಏರಿಕೆ ಮಾಡುತ್ತದೆ. ಅಲ್ಲದೆ, ಆರ್ಥಿಕ ಹಿನ್ನೆಡೆ ಇರುವಾಗ ಬಡ್ಡಿದರ ಇಳಿಕೆಯಾಗುತ್ತವೆ. ಸುಮಾರು 25ವರ್ಷಗಳಿಂದ ಬಡ್ಡಿದರ ಇಳಿಕೆ ದಾರಿಯನ್ನೇ ಕಂಡಿವೆ. ಆಯಾ ಸಮಯದ ಆರ್ಥಿಕ ನಿರ್ಧಾರಗಳಿಗಾಗಿ ಅಲ್ಪಸ್ವಲ್ಪ ಏರಿಕೆಯಾಗಿರಬಹುದು. ಆದರೆ ಇದು ಶಾಶ್ವತವಲ್ಲ. ಇಂದಿನ ಜಾಗತಿಕ ಬಡ್ಡಿದರಗಳನ್ನು ಗಮನಿಸಿದಾಗ ಜಪಾನ್: -0.1 (-0.1), ಸ್ವಿಡ್ಜರ್ಲೆಂಡ್: -0.5(-0.5), ಯುರೋಪ್: 2(1.25), ಸಿಂಗಪೂರ್: 2.65(2.84), ಯುಕೆ: 3(2.25), ಆಸ್ಟ್ರೇಲಿಯಾ: 3.1(2.85), ಚೀನಾ: 3.65(3.65), ಕೆನಡಾ: 3.75(3.25), ಅಮೆರಿಕ: 4 (3.25), ಭಾರತ: 6.25(5.9), ಸೌಥ್ಆಫ್ರಿಕಾ: 7(6.25), ರಷ್ಯಾ: 7.5(7.5) (ಆವರಣದಲ್ಲಿ ಈ ಹಿಂದೆ ಇದ್ದ ಬಡ್ಡಿದರಗಳು) ಹೀಗೆ ಈ ಹಿಂದೆ ಕಡಿಮೆ ಇದ್ದು ಪ್ರಸ್ತುತ ದಲ್ಲಿ ಅಲ್ಪ ಏರಿಕೆಯಯಾಗಿದ್ದು ಕಂಡುಬರುತ್ತದೆ. ಈಗ ಏರಿಕೆಯಾದ ಕಾರಣಗಳೇನೆಂದರೆ ಹಣದುಬ್ಬರ ಹಾಗೂ ಜಾಗತಿಕವಾಗಿ ಬದಲಾಗುತ್ತಿರುವ ವಿದ್ಯಮಾನಗಳು. ಮುಂದಿನ ದಿನಗಳಲ್ಲಿ ಬಡ್ಡಿದರಗಳು ನಮ್ಮ ದೇಶದಲ್ಲಿ ಇಳಿಕೆ ದಾರಿ ಕಾಣುತ್ತವೆ.
ಸರ್ಕಾರಕ್ಕೆ ಸಾಲದ ಅವಶ್ಯಕತೆ: ವಿತ್ತೀಯ ಕೊರತೆ ಎಂದರೆ ಸರ್ಕಾರದ ಆದಾಯಕ್ಕಿಂತ ಹೆಚ್ಚಿನ ಖರ್ಚು. ಈ ಅಸಮತೋಲನ ನಿಭಾಯಿಸಲು ಸರ್ಕಾರ ಹಣವನ್ನು ಸಾಲದ ರೂಪದಲ್ಲಿ ಪಡೆಯುತ್ತದೆ. ಹೀಗೆ ಸರ್ಕಾರವು ಆರ್ಥಿಕತೆಯಲ್ಲಿ ಹೆಚ್ಚಿನ ಸಾಲ ಪಡೆಯುವುದರಿಂದ ಬಡ್ಡಿದರಗಳು ಏರಿಕೆಯಾಗುತ್ತವೆ.
(ಲೇಖಕರು- ಹವ್ಯಾಸಿ ಬರಹಗಾರರು)