

ಸಚ್ಚಿದಾನಂದ ಹೆಗಡೆಯವರ ‘ಸ್ವರ ವಿನ್ಯಾಸ’ ಪುಸ್ತಕದಲ್ಲಿ ಮೂರು ಸೆಲೆಯ ಪ್ರಬಂಧಗಳಿವೆ - ಸ್ವರಕ್ಕೆ ಸಂಬಂಧಿಸಿದ್ದು, ವಿನ್ಯಾಸಕ್ಕೆ ಸಂಬಂಧಿಸಿದ್ದು ಮತ್ತು ಸಂಸ್ಕೃತಿಗೆ ಸಂಬಂಧಿಸಿದ್ದು. ಹೀಗೆ ನಾವು ಸೆಲೆಗಳನ್ನು ಬೇರ್ಪಡಿಸಿದಾಗಲೇ ಲೇಖಕರ ಒಟ್ಟಾರೆ ಧೋರಣೆಗೆ ಅನ್ಯಾಯ ಮಾಡುತ್ತಿದ್ದೇವೆ ಎನ್ನುವ ಕಾಳಜಿಯೊಂದಿಗೇ ಈ ಸೆಲೆಗಳನ್ನು ಗುರುತಿಸುವ ಪ್ರಯತ್ನ ಮಾಡುತ್ತಿದ್ದೇನೆ.
ಇದರಿಂದ ಒಂದು ಸಾಂಸ್ಕೃಕ ಕಾರ್ಯಕ್ರಮ, ಸಂಗೀತ, ಪ್ರದರ್ಶನ, ವಿನ್ಯಾಸವನ್ನು ಒಂದು ಪದ್ಧತಿಯ ಚೌಕಟ್ಟಿನಲ್ಲಿಟ್ಟು ರಸಾಸ್ವಾದನೆಯನ್ನು ಮಾಡುವ ರೀತಿಯನ್ನೂ, ಹಾಗೂ ಆ ರಸಾಸ್ವಾದನೆಯಿಂದ ತಮಗಾದ ಖುಷಿಯನ್ನು ಹಂಚಿಕೊಳ್ಳುವ ಎರಡೂ ಕೆಲಸಗಳನ್ನು ಈ ಲೇಖನಗುಚ್ಛ ಸಾಧಿಸುತ್ತದೆ. ತಾಂತ್ರಿಕತೆ, ಕಟ್ಟು, ಸೂತ್ರ, ಸಿದ್ಧಾಂತಗಳನ್ನು ಅರಿತ ವ್ಯಕ್ತಿ ಕಥೆಗಾರನೂ ಆಗಿದ್ದರೆ ಆ ವಿವರಗಳನ್ನು ಆಸಕ್ತಿಕರವಾಗಿ ನಿರೂಪಿಸಿ ದಕ್ಕಿಸಿಕೊಳ್ಳುವುದಕ್ಕೆ ಪೂರಕವಾಗಿ ಆತ ಕೆಲಸ ಮಾಡುತ್ತಾನೆ.
ಸಚ್ಚಿದಾನಂದ ಅವರ ಎರಡನೆಯ ಸೆಲೆ ವಿನ್ಯಾಸಕ್ಕೆ ಸಂಬಂಧಿಸಿದ್ದು. ತಾಂತ್ರಿಕವಾಗಿ ವಿನ್ಯಾಸವನ್ನು ಅಭ್ಯಾಸ ಮಾಡಿರುವುದರಿಂದ ಅದರ ಬಗ್ಗೆ ಅವರು ಒಂದು ಗಟ್ಟಿ ನೆಲೆಯಿಂದ ಮಾತಾಡಲು ಸಾಧ್ಯ. ಅದೇ ಕಾಲಕ್ಕೆ ಅವರ ಮನಸ್ಸಿನಲ್ಲಿರುವ ರಸಗ್ರಹಣವೂ ಕೆಲಸ ಮಾಡುತ್ತದೆ. ಸೃಜನಶೀಲತೆಯ ಲೇಪವೂ ಆಗುತ್ತದೆ.
ಮೂಲತಃ ಸೃಜನಶೀಲವಾದ ಕ್ರಿಯೆಯಲ್ಲಿರುವ ಪದ್ಧತಿಯನ್ನು ಅವರು ಪದರಪದರವಾಗಿ ಬಿಡಿಸಿ ತೋರಿಸುತ್ತಾರೆ. ಅದರ ಹಿಂದಿರುವ ಪದ್ಧತಿ, ಅದು ಯಾವ ಚೌಕಟ್ಟಿನಲ್ಲಿ ಕಟ್ಟಲ್ಪಟ್ಟಿದೆ ಮತ್ತು ಹೇಗೆ ಅದನ್ನು ಆಸ್ವಾದಿಸಬೇಕು ಎನ್ನುವ ವಿಚಾರಗಳು ಸೂಕ್ಷ್ಮವಾಗಿ ನಮಗೆ ತಿಳಿದು ಬರುತ್ತವೆ. ಘನ ಗಂಭೀರ ತಾಂತ್ರಿಕವೂ ಅಲ್ಲದ - ಲಘುವೂ ಆಗದ ಮುಖ್ಯ ಬರಹಗಳನ್ನು ಸಚ್ಚಿದಾನಂದ ಅವರು ನಮಗೆ ಕೊಡುತ್ತಿದ್ದಾರೆ. ಯಶವಂತ ಚಿತ್ತಾಲ, ಬಿಜಿಎಲ್ ಸ್ವಾಮಿ, ಎಸ್. ದಿವಾಕರ್, ವಸ್ತಾರೆ, ಕೆವಿ ಅಕ್ಷರ, ಹೀಗೆ ತಮ್ಮ ತಮ್ಮ ಪರಿಣತಿ ಮತ್ತು ಓದಿನ ಆಳ ಅಗಲವನ್ನು ಉಪಯೋಗಿಸಿ ಪ್ರಬಂಧಗಳನ್ನು ಬರೆದ ಕನ್ನಡ ಕಥೆಗಾರರ (ನಾಟಕಕಾರರ) ಸಾಲಿಗೆ ಸಚ್ಚಿದಾನಂದ ಸೇರುತ್ತಾರೆ.
ಅವರ ಈ ಪುಸ್ತಕ ಮೌಲಿಕವಾಗಿದೆ. ಕನ್ನಡದಲ್ಲಿ ಅಷ್ಟು ಪ್ರಚಲಿತವಿಲ್ಲದ ಲಾಂಗ್ ಫಾಮ್ರ್ ಎಸ್ಸೇಗೆ (ಉದ್ದಕ್ಕೆ ವಿಸ್ತಾರವಾಗಿ ಬರೆಯುವ ಪ್ರಬಂಧ) ನಾಂದಿಯಾಗಿರುವಂತೆ ಈ ಪ್ರಬಂಧಗಳು ಕಾಣುತ್ತವೆ. ಅಷ್ಟೇ ಅಲ್ಲ, ಇವುಗಳಲ್ಲಿ ವಿಸ್ತರಿಸಬಹುದಾದ ಅನೇಕ ವಿಚಾರಗಳಿವೆ ಎಂದೆನಿಸುತ್ತದೆ.
ಇಂದು ಲೋಕಾರ್ಪಣೆ
ಕತೆಗಾರ ಸಚ್ಚಿದಾನಂದ ಹೆಗಡೆ ಅವರು ಸಂಗೀತ ಮತ್ತು ವಿನ್ಯಾಸ ಕುರಿತು ಬರೆದ ಲೇಖನಗಳ ಸಂಕಲನ ‘ಸ್ವರ ವಿನ್ಯಾಸ’ ಫೆಬ್ರವರಿ 2ರಂದು ಬೆಳಗ್ಗೆ ಬೆಂಗಳೂರಿನ ಬಸವನಗುಡಿಯ ಬಿ.ಪಿ. ವಾಡಿಯಾ ಸಭಾಂಗಣದಲ್ಲಿ ಬಿಡುಗಡೆ ಆಗಲಿದೆ. ಸಾಹಿತಿಗಳು, ಚಿಂತಕರಾದ ಲಕ್ಷ್ಮೀಶ ತೋಳ್ಪಾಡಿ, ಟಿ.ಪಿ. ಅಶೋಕ, ಪ್ರಸಿದ್ಧ ತಬಲಾ ವಾದಕ ಗೋಪಾಲಕೃಷ್ಣ ಹೆಗಡೆ ಮುಂತಾದವರು ಭಾಗವಹಿಸಲಿದ್ದಾರೆ. ಪುಸ್ತಕವನ್ನು ಅಂಕಿತ ಪ್ರಕಾಶನ ಪ್ರಕಟಿಸಿದೆ.
| ಎಂ.ಎಸ್.ಶ್ರೀರಾಮ್ (ಲೇಖಕರು ಕನ್ನಡದ ಹಿರಿಯ ಕತೆಗಾರರು, ಚಿಂತಕರು)