ಬೆಳಗಾವಿ ಅಂಚೆ ಕಚೇರಿಯ ಇಂಟರ್ ನ್ಯಾಷನಲ್ ಸೇವೆ!; ಜಗತ್ತಿನ 219 ದೇಶಗಳಿಗೆ 300ಕ್ಕೂ ಹೆಚ್ಚು ಪಾರ್ಸೆಲ್ ರವಾನೆ

Post Office
ಬೆಳಗಾವಿ ಪ್ರಧಾನ ಅಂಚೆ ಕಚೇರಿಯಲ್ಲಿ ವಿದೇಶಕ್ಕೆ ರಫ್ತು ಮಾಡಲು ಪ್ಯಾಕ್ ಮಾಡಲಾದ ವಸ್ತು ಸ್ವೀಕರಿಸುತ್ತಿರುವ ಅಂಚೆ ಇಲಾಖೆ ಸಿಬ್ಬಂದಿ.
Published on
ಹಿಂದೆ ಪೋಸ್ಟ್ ಆಫೀಸ್​ಗಳು ಜನ ಸಂಪರ್ಕದ ಪ್ರಮುಖ ಕೊಂಡಿಯಾಗಿದ್ದವು. ಹಣಕಾಸು, ಪತ್ರ ವ್ಯವಹಾರಗಳಿಗೆ ಅಂಚೆಯಣ್ಣನೇ ಆಧಾರವಾಗಿದ್ದ. ಆದರೆ ಆಧುನಿಕತೆ ಹೆಚ್ಚಿದಂತೆ ಫೋಸ್ಟ್ ಆಫೀಸ್​ಗಳ ಪ್ರಾಮುಖ್ಯತೆ ಕಡಿಮೆಯಾಗುತ್ತಾ ಬಂತು. ಆದರೆ ಬೆಳಗಾವಿ ಪ್ರಧಾನ ಅಂಚೆ ಕಚೇರಿ ಹೊರ ದೇಶಗಳಿಗೆ ವಾಣಿಜ್ಯಾತ್ಮಕ ಸೇವೆ ಒದಗಿಸುವ ಮೂಲಕ ಕ್ರಾಂತಿಕಾರಕ ಬದಲಾವಣೆಗೆ ಮುನ್ನುಡಿ ಬರೆದಿದೆ. ಅಂತಾರಾಷ್ಟ್ರೀಯವಾಗಿ ಸೇವೆ ಸಲ್ಲಿಸುತ್ತಾ ಗಮನ ಸೆಳೆದಿದೆ.

| ಜಗದೀಶ ಹೊಂಬಳಿ ಬೆಳಗಾವಿ

ಬೆಳಗಾವಿ ಪ್ರಧಾನ ಅಂಚೆ ಕಚೇರಿಯು ದೇಶದ ಗಡಿದಾಟಿ ಸೇವೆ ನೀಡುವ ಮೂಲಕ ಗಮನಸೆಳೆದಿದೆ. ಯುಎಸ್​ಎ, ಕೆನಡಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಹಾಂಕಾಂಗ್, ಸಿಂಗಾಪುರ, ಇಂಗ್ಲೆಂಡ್ ಸೇರಿ ಜಗತ್ತಿನ 219 ದೇಶಗಳಿಗೆ ಸೇವೆ ವಿಸ್ತರಿಸಿದ್ದು, ರಾಜ್ಯ ಹಾಗೂ ದೇಶದ ಕೀರ್ತಿ ಹೆಚ್ಚಿಸಿದೆ. ಸ್ಥಳೀಯವಾಗಿ ಸಣ್ಣ-ಪುಟ್ಟ ಉಳಿತಾಯ ಖಾತೆ ತೆರೆಯುವುದು ಸೇರಿ ಸಣ್ಣ ಪ್ರಮಾಣದ ಸಾಲ, ಜೀವವಿಮೆ ಸೇವೆ ನೀಡುತ್ತಿದ್ದ ಅಂಚೆ ಕಚೇರಿಯು ಈಗ ವಾಣಿಜ್ಯಾತ್ಮಕ ಸೇವೆಯಿಂದ ಜಗತ್ತಿನೆಲ್ಲೆಡೆಯಿಂದ ಜನರನ್ನು ಬೆಸೆಯುತ್ತಿದೆ. ಟಪಾಲು ಅಷ್ಟೇ ಅಲ್ಲ, ವಾಣಿಜ್ಯ ವಸ್ತುಗಳನ್ನು ರಫ್ತು ಮಾಡುವುದರಲ್ಲಿಯೂ ಬೆಳಗಾವಿ ಅಂಚೆ ಕಚೇರಿ ಈಗ ಖ್ಯಾತಿ ಪಡೆದಿದೆ. ಬೆಳಗಾವಿಯಿಂದ ಪ್ರಮುಖವಾಗಿ ಹೋಮಿಯೋಪಥಿಕ್, ಆಯುರ್ವೆದಿಕ್, ವಾಟರ್​ಕಲರ್ ಪೇಂಟ್ ಹೆಚ್ಚಾಗಿ ರಫ್ತು ಮಾಡಿದೆ. ಕಳೆದ ಆರು ತಿಂಗಳಲ್ಲಿ 300ಕ್ಕೂ ಹೆಚ್ಚು ಪಾರ್ಸೆಲ್​ಗಳನ್ನು ವಿದೇಶಗಳಿಗೆ ಕಳುಹಿಸಿ ದಾಖಲೆ ನಿರ್ವಿುಸಿದೆ.

10 ಲಕ್ಷ ರೂ. ಅಧಿಕ ಆದಾಯ: ಬೆಳಗಾವಿಯಿಂದ ಪ್ರಮುಖವಾಗಿ ಯುಎಸ್​ಎ, ಕೆನಡಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಹಾಂಕಾಂಗ್, ಸಿಂಗಾಪುರ, ಇಂಗ್ಲೆಂಡ್ ದೇಶಗಳಿಗೆ ವಾಣಿಜ್ಯ ವಸ್ತುಗಳನ್ನು ರಪ್ತು ಮಾಡಿರುವ ಅಂಚೆ ಕಚೇರಿ ಆರು ತಿಂಗಳಲ್ಲಿ 10 ಲಕ್ಷ ರೂ.ಗೂ ಅಧಿಕ ಆದಾಯ ಸಂಗ್ರಹಿಸಿದೆ. ಬೆಳಗಾವಿ ಮೂಲದ ಕೆಲ ಆಹಾರ ಪದಾರ್ಥಗಳು ವಿದೇಶದಲ್ಲಿಯೂ ಬಹುಬೇಡಿಕೆ ಹೊಂದಿವೆ. ಶುಂಠಿ, ಅರಿಶಿಣ, ಧಾನ್ಯಗಳು, ಬಟ್ಟೆಗಳು ಹೆಚ್ಚಿನ ಪ್ರಮಾಣದಲ್ಲಿ ರಫ್ತು ಆಗುತ್ತಿವೆ. ಜತೆಗೆ ಬೆಳಗಾವಿಯಲ್ಲಿ ತಯಾರಿಸಲಾಗುತ್ತಿರುವ ಸಾವಯವ ಬೆಲ್ಲ, ಸಿರಿಧಾನ್ಯಗಳ ರಫ್ತು ಮಾಡುವುದಕ್ಕೂ ಅಂಚೆ ಅಧಿಕಾರಿಗಳು ಯೋಜನೆ ರೂಪಿಸಿದ್ದಾರೆ. ಬೆಳಗಾವಿಯ ಪ್ರಧಾನ ಅಂಚೆ ಕಚೇರಿ ಜತೆಗೆ ಈಗ ಬೆಳಗಾವಿ ಟಿಳಕವಾಡಿ, ಶಿವಾಜಿನಗರ ಅಂಚೆ ಕಚೇರಿಗಳಿಂದಲೂ ವಾಣಿಜ್ಯ ವಸ್ತುಗಳನ್ನು ರಫ್ತು ಮಾಡಲಾಗುತ್ತಿದೆ.

ಬೆಳಗಾವಿ ಪ್ರಧಾನ ಅಂಚೆ ಕಚೇರಿಯು ವಿದೇಶಗಳಿಗೆ ವಾಣಿಜ್ಯ ವಸ್ತುಗಳ ರಫ್ತು ಮಾಡುವ ಸೇವೆ ಆರಂಭಿಸಿದೆ. 6 ತಿಂಗಳಲ್ಲಿ ನೂರಾರು ಪಾರ್ಸೆಲ್ ಕಳುಹಿಸಿದೆ. ಮುಂದಿನ ದಿನಗಳಲ್ಲಿ ಸಣ್ಣ ಕೈಗಾರಿಕೋದ್ಯಮಿಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಬೇರೆ ವಸ್ತುಗಳನ್ನೂ ರಫ್ತು ಮಾಡಲು ಯೋಜನೆ ಹಾಕಿಕೊಳ್ಳಲಾಗಿದೆ. | ವಿಜಯ ವಾಧೋನಿ, ಅಧೀಕ್ಷಕರು, ಬೆಳಗಾವಿ ಅಂಚೆ ವಿಭಾಗ

25 ಕೆಜಿಯಿಂದ 30 ಕೆಜಿವರೆಗೆ ಮಾತ್ರ ಅವಕಾಶ: ಅಂಚೆ ಕಚೇರಿ ಮೂಲಕ ವಿದೇಶಗಳಿಗೆ 35 ಕೆಜಿವರೆಗೆ ಮಾತ್ರ ವಾಣಿಜ್ಯ ವಸ್ತುಗಳನ್ನು ರಫ್ತು ಮಾಡಬಹುದು. ಕೆಲ ದೇಶಗಳಲ್ಲಿ 25 ಕೆಜಿ ಹಾಗೂ 30 ಕೆಜಿವರೆಗೆ ಮಾತ್ರ ವಸ್ತುಗಳನ್ನು ರಫ್ತು ಮಾಡಲು ಅವಕಾಶವಿದೆ. ಅಂಚೆ ಮೂಲಕ ವಿದೇಶಗಳಿಗೆ ವಾಣಿಜ್ಯ ವಸ್ತುಗಳು ರಫ್ತು ಮಾಡುವುದಕ್ಕೆ ಒಂದು ಸಾವಿರ ಜನರು ಬುಕ್ಕಿಂಗ್ ಮಾಡಿದ್ದಾರೆ. ಅಂಚೆ ಇಲಾಖೆಯಿಂದ ‘ಜಾಯಿಂಟ್ ಪಾರ್ಸಲ್ ಪ್ರೊಡಕ್ಟ್’ ಸೇವೆಯನ್ನೂ ಆರಂಭಿಸಿದ್ದು, ರೈಲ್ವೆ ಇಲಾಖೆಯೊಂದಿಗೆ ಸಹಯೋಗ ಪಡೆದಿದೆ. ಈ ಸೇವೆಯಲ್ಲಿ ತೂಕದ ವಸ್ತುಗಳನ್ನು ರಫ್ತು ಮಾಡಲು ಅವಕಾಶ ಕಲ್ಪಿಸಲಾಗಿದೆ. ಸಣ್ಣ ರಫ್ತುದಾರರಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆ ಕಲ್ಪಿಸುವ ದೃಷ್ಟಿಯಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಪರಿಕಲ್ಪನೆಯ ‘ಡಾಕ್ ಘರ್ ನಿರ್ಯಾಯತ ಕೇಂದ್ರ’ ಸೇವೆ ಶುರು ಮಾಡಲಾಗಿದೆ. 6 ತಿಂಗಳಿಂದ ಅಂಚೆ ಕಚೇರಿಯಿಂದ 1 ಕೆಜಿಯಿಂದ 35 ಕೆ.ಜಿ. ವರೆಗೆ ವಾಣಿಜ್ಯ ವಸ್ತುಗಳನ್ನು ವಿದೇಶಗಳಿಗೂ ರಫ್ತು ಮಾಡಲಾಗುತ್ತಿದೆ. ಇದರಿಂದ ಭಾರತದಿಂದ ರಫ್ತು ಪ್ರಮಾಣವೂ ಹೆಚ್ಚಳವಾದಂತಾಗಿದೆ.

ಜಗತ್ತಿನ ಮೂಲೆ, ಮೂಲೆಗೆ ಸಂಪರ್ಕ: ಜಗತ್ತಿನ ಯಾವುದೇ ಮೂಲೆಗೆ ಪೋಸ್ಟ್ ಮಾಡುವ ಅಥವಾ ಕೊರಿಯರ್ ಕಳುಹಿಸುವುದಕ್ಕೆ ‘ಅಂಚೆ ಜನಸಂಪರ್ಕ ಅಭಿಯಾನ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸ್ಥಳೀಯ ಪ್ರದೇಶದಿಂದ ಹಿಡಿದು ನಗರ, ರಾಜ್ಯ, ಅಂತಾರಾಜ್ಯ, ದೇಶ-ವಿದೇಶದಲ್ಲಿ್ಲುವ ಎಲ್ಲರನ್ನೂ ಬೆಸೆಯುವ ಕಾರ್ಯವನ್ನು ಅಂಚೆ ಇಲಾಖೆ ಮಾಡುತ್ತಿದೆ. ಯಾವುದೋ ಹಳ್ಳಿಯಿಂದ ಬೇರೆ ದೇಶಕ್ಕೆ ದುಡಿಯಲು ವಲಸೆ ಹೋದ ಕುಟುಂಬದ ಸದಸ್ಯರಿಗೆ ದಿನಬಳಕೆ ವಸ್ತುಗಳನ್ನು ಅಂಚೆ ಮೂಲಕ ತಲುಪಿಸುವ ವ್ಯವಸ್ಥೆಯನ್ನು ಮಾಡುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net