ಮೂಲಸೌಕರ್ಯವೂ ಬೇಕು: ರಾಜಸ್ವ ಸೋರಿಕೆ ತಡೆಗಟ್ಟಲು ಹೊಸ ಕ್ರಮ ಸಹಕಾರಿ

Money
Published on

ವಿಧಾನಸಭೆ ಚುನಾವಣೆಗೆ ಮುನ್ನ ನೀಡಿರುವ ಐದು ಗ್ಯಾರಂಟಿಗಳ ಅನುಷ್ಠಾನಕ್ಕಾಗಿ ರಾಜ್ಯ ಸರ್ಕಾರಕ್ಕೆ ಅನುದಾನ ಹೊಂದಿಸುವುದು ಸವಾಲಿನ ಕೆಲಸವಾಗಿದೆ. ಆದ್ದರಿಂದ ಪ್ರತಿಯೊಂದು ಇಲಾಖೆಯಲ್ಲೂ ಹೊಸ ಆದಾಯದ ಮೂಲಗಳನ್ನು ಹುಡುಕುತ್ತಿದೆ ಮತ್ತು ತೆರಿಗೆ ಸೋರಿಕೆ ತಡೆಗಟ್ಟಲು ಮಾಸ್ಟರ್ ಪ್ಲಾ್ಯನ್​ಗಳನ್ನು ಮಾಡುತ್ತಿದೆ. ಅದೇ ರೀತಿ, ರಾಜ್ಯದ ಖಜಾನೆ ತುಂಬಿಸುವ ಪ್ರಮುಖ ಇಲಾಖೆಗಳಲ್ಲಿ ಒಂದಾಗಿರುವ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ರಾಜಸ್ವ ಸೋರಿಕೆ ತಪ್ಪಿಸಲು ಕಾವೇರಿ 2.0 ತಂತ್ರಾಂಶಕ್ಕೆ ‘ದಸ್ತಾವೇಜುಗಳ ನೋಂದಣಿ ಪೂರ್ವ ಸ್ವಯಂಚಾಲಿತ ಪರಿಶೀಲನೆ’ ಪದ್ಧತಿಯನ್ನು ಈಗ ಅಳವಡಿಸಲಾಗಿದೆ. ಇದು ಫೆ. 1ರಿಂದ 256 ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಜಾರಿಗೆ ಬರಲಿದೆ.

ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಪ್ರತಿ ವರ್ಷ ಅಂದಾಜು 24 ಲಕ್ಷ ದಸ್ತಾವೇಜುಗಳು ನೋಂದಣಿ ಆಗುತ್ತಿದ್ದು, 18 ಸಾವಿರ ಕೋಟಿ ರೂ. ರಾಜಸ್ವ ಸಂಗ್ರಹವಾಗುತ್ತಿದೆ. ಇದರ ಮಧ್ಯೆ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಸಂಗ್ರಹದಲ್ಲಿ ಅಧಿಕಾರಿಗಳ ಕಣ್ತಪ್ಪಿನಿಂದ ಅಥವಾ ಇನ್ನಿತರ ಲೋಪಗಳಿಂದ ಸೋರಿಕೆ ಆಗುತ್ತಿರುವ ತೆರಿಗೆ ಕುರಿತು ಪ್ರತಿ ವರ್ಷವೂ ಮಹಾಲೇಖಪಾಲರು ತಮ್ಮ ವರದಿಯಲ್ಲಿ ಸರ್ಕಾರದ ಗಮನವನು ಸೆಳೆಯುತ್ತಿರುತ್ತಾರೆ. ಈ ಸೋರಿಕೆಯನ್ನು ತಡೆಗಟ್ಟಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ, ನೋಂದಣಿಗೆ ಮುನ್ನವೇ ದಸ್ತಾವೇಜುಗಳನ್ನು ಸ್ವಯಂಚಾಲಿತವಾಗಿ ಪರಿಶೀಲನೆ ಮಾಡುವ ಅಥವಾ ಆಡಿಟ್ ನಡೆಸುವ ಪದ್ಧತಿ ಜಾರಿಗೊಳಿಸಲು ಕಂದಾಯ ಇಲಾಖೆ ತೀರ್ವನಿಸಿದೆ. ಪಕ್ಷಗಾರರು ಕಾವೇರಿ 2.0 ತಂತ್ರಾಂಶದಲ್ಲಿ ನೋಂದಣಿಗೆ ದಸ್ತಾವೇಜುಗಳನ್ನು ಅಪ್​ಲೋಡ್ ಮಾಡಿದ ನಂತರ ಸಂಬಂಧಪಟ್ಟ ಸಬ್ ರಿಜಿಸ್ಟ್ರಾರ್, ಆ ಆಸ್ತಿಯ ಮಾರ್ಗಸೂಚಿ ದರಕ್ಕೆ ನೋಂದಣಿ ಮತ್ತು ಮುದ್ರಾಂಕ ಶುಲ್ಕ ವಿಧಿಸುತ್ತಾರೆ. ಇದಾದ ಬಳಿಕ ಈ ದಸ್ತಾವೇಜು ಆನ್​ಲೈನ್​ನಲ್ಲಿ ಸ್ವಯಂಚಾಲಿತವಾಗಿ ರಾಜ್ಯದ ಮತ್ತೊಬ್ಬ ಸಬ್ ರಿಜಿಸ್ಟ್ರಾರ್ ಕಚೇರಿಗೆ ರವಾನೆ ಆಗಲಿದ್ದು, ಮೂಲ ಅಧಿಕಾರಿ ವಿಧಿಸಿರುವ ರಾಜಸ್ವ ಸರಿಯಾಗಿದೆಯೇ ಎಂದು ಪರಿಶೀಲನೆ ನಡೆಸುತ್ತಾರೆ. ಇದರಿಂದ ಆದಾಯ ಸೋರಿಕೆ ಆಗುವುದನ್ನು ತಪ್ಪಿಸಬಹುದು.

10 ಕೋಟಿ ರೂ. ಮೇಲ್ಪಟ್ಟ ಶುದ್ಧ ಕ್ರಯಪತ್ರ, ಜನರಲ್ ಪವರ್ ಆಫ್ ಅಟಾರ್ನಿ (ಜಿಪಿಎ), ದಾನಪತ್ರ, ಹಕ್ಕು ಬಿಡುಗಡೆ ಪತ್ರ, ಮಾರ್ಟ್​ಗೇಜ್, ಭೋಗ್ಯ, ಶುದ್ಧ ಕ್ರಯ ರದ್ದತಿ ಪತ್ರ, ಕಂಪನಿ ನೋಂದಣಿ, ಟ್ರಸ್ಟ್ ನೋಂದಣಿ, ವರ್ಗಾವಣೆ ಪತ್ರ, ವಿಭಾಗ ಪತ್ರಗಳ ನೋಂದಣಿಗೂ ಇದು ಅನ್ವಯ ಆಗಲಿದೆ. ಈ ಪ್ರಕ್ರಿಯೆ 24 ಗಂಟೆ ಒಳಗಾಗಿ ಮುಗಿಸಬೇಕಾಗಿದೆ. ಆದರೆ, ಇದನ್ನು ಮೀರಿ ಕಾನೂನು ಉಲ್ಲಂಘಿಸಿ ಸರ್ಕಾರಕ್ಕೆ ನಷ್ಟ ಉಂಟು ಮಾಡುವಂತಹ ಕೆಲ ಅಧಿಕಾರಿಗಳು ಸಹ ಇದ್ದಾರೆ. ಅಂಥವರ ಮೇಲೆ ನಿಗಾ ವಹಿಸಿ ಶಿಸ್ತು ಕ್ರಮ ಕೈಗೊಳ್ಳುವುದು ಮುಖ್ಯವಾಗಿದೆ. ಒಂದೆಡೆ ರಾಜಸ್ವ ಸೋರಿಕೆ ತಡೆಗಟ್ಟಲು ಈ ಯೋಜನೆ ಅನುಕೂಲ ಆಗುವ ನಿರೀಕ್ಷೆ ಇದ್ದರೆ, ಮತ್ತೊಂದೆಡೆ ಅಧಿಕಾರಿ, ಸಿಬ್ಬಂದಿ ಕೊರತೆಯಿಂದ ಕೆಲಸದ ಒತ್ತಡ ಹೆಚ್ಚಾಗುವ ಎಲ್ಲ ಲಕ್ಷಣಗಳು ಇವೆ. ಪರಿಣಾಮ, ದಸ್ತಾವೇಜುಗಳ ನೋಂದಣಿ ಪ್ರಕ್ರಿಯೆಯೂ ಸಹಜವಾಗಿ ವಿಳಂಬವಾಗುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ. ಸಾರ್ವಜನಿಕರಿಗೆ ತೊಂದರೆ ಆಗದಂತೆ ಸಬ್ ರಿಜಿಸ್ಟ್ರಾರ್ ಕಚೇರಿಗಳಿಗೆ ಮೂಲಸೌಕರ್ಯ ಒದಗಿಸುವ ಬಗ್ಗೆಯೂ ಸರ್ಕಾರ ಎಚ್ಚರ ವಹಿಸಬೇಕಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net