

ಮಹಿಳೆಯರು ಚಿಕ್ಕಪುಟ್ಟ ಉದ್ಯಮ ಸ್ಥಾಪಿಸುವ ಮೂಲಕ ಸ್ವಂತ ಕಾಲ ಮೇಲೆ ನಿಂತುಕೊಳ್ಳುವ ನಿಟ್ಟಿನಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು ಹಾಗೂ ಕೆಲವು ಬ್ಯಾಂಕ್ಗಳು ಈಗಾಗಲೇ ಹಲವಾರು ಯೋಜನೆಗಳನ್ನು ರೂಪಿಸಿದ್ದು, ಸಾಲ ಸೌಲಭ್ಯಗಳನ್ನು ಒದಗಿಸುತ್ತಿವೆ. ಆ ಪೈಕಿ ಕೆಲವು ಯೋಜನೆಗಳ ಮೇಲೆ ಇಲ್ಲಿ ಬೆಳಕು ಚೆಲ್ಲಲಾಗಿದೆ.
ಸ್ಟ್ಯಾಂಡ್ ಅಪ್ ಇಂಡಿಯಾ: ಇದು ಕೇಂದ್ರ ಸರ್ಕಾರದ ಯೋಜನೆ. 2016ರಿಂದ ಇದು ಜಾರಿಗೆ ಬಂದಿದೆ. ಹೊಸದಾಗಿ ಉದ್ಯಮ, ವ್ಯಾಪಾರ ವಹಿವಾಟು ಶುರು ಮಾಡುಮಾಡುವ ಮಹಿಳೆಯರಿಗೆಂದೇ ಇಂತಿಷ್ಟು ಪಾಲನ್ನು ಪ್ರತಿ ಬ್ಯಾಂಕುಗಳು ತೆಗೆದಿಡಬೇಕು ಎಂಬ ನಿಯಮವಿದೆ. ಈ ಯೋಜನೆ ಅಡಿ ರೂ. 10 ಲಕ್ಷದಿಂದ ರೂ.1 ಕೋಟಿಯವರೆಗೆ ಸಾಲವನ್ನು ನೀಡಲಾಗುತ್ತದೆ.
ಒಂದು ವೇಳೆ ಮಹಿಳೆಯರು ಪಾಲುದಾರಿಕೆಯ ಆಧಾರದ ಮೇಲೆ ಹೊಸ ವ್ಯಾಪಾರ, ವಹಿವಾಟು, ಉದ್ಯಮ ಶುರು ಮಾಡಬೇಕಿದ್ದರೆ, ಆ ಉದ್ಯಮದ ಶೇ. 51ರಷ್ಟು ಶೇರ್ ಸಾಲ ಪಡೆಯುವ ಮಹಿಳೆ ಹೊಂದಿರಬೇಕಾಗಿರುವುದು ಕಡ್ಡಾಯ. ಸಾಲವನ್ನು ವಾಪಸ್ ಮಾಡಲು 7 ವರ್ಷಗಳವರೆಗೆ ಕಾಲಾವಕಾಶವಿದೆ. ಅಷ್ಟರ ಒಳಗೆ ಬಡ್ಡಿ ಸಹಿತ ಸಂಪೂರ್ಣ ಸಾಲವನ್ನು ಮರುಪಾವತಿ ಮಾಡಬೇಕಾಗುತ್ತದೆ.
ಅನ್ನಪೂರ್ಣ: ಅಡುಗೆಯಲ್ಲಿ ನುರಿತರಾಗಿದ್ದು, ಅದನ್ನೇ ಉದ್ಯೋಗ ಮಾಡಿಕೊಂಡು ಚಿಕ್ಕದೊಂದು ಉದ್ಯಮ ಸ್ಥಾಪಿಸಬೇಕು ಎಂದು ಬಯಸುವ ಮಹಿಳೆಯರಿಗಾಗಿ ಇರುವ ಯೋಜನೆ ಇದು. ಅಂಥ ಮಹಿಳೆಯರಿಗೆ -ಠಿ; 50 ಸಾವಿರ ರೂಪಾಯಿಗಳವರೆಗೆ ಸಾಲ ಸೌಲಭ್ಯ ಸಿಗಲಿದೆ. ಈ ಸಾಲದ ಮೊತ್ತದಿಂದ ಗ್ಯಾಸ್ ಸಂಪರ್ಕ, ಮಿಕ್ಸರ್, ಅಡುಗೆ ಪಾತ್ರೆ, ವಾಟರ್ ಫಿಲ್ಟರ್ ಇತ್ಯಾದಿಗಳನ್ನು ಖರೀದಿಸಬಹುದು.
ವ್ಯವಹಾರ ನಡೆಸುವ ಸ್ವತ್ತುಗಳನ್ನು ಭದ್ರತೆಯ ರೂಪದಲ್ಲಿ ಸಾಲ ಪಡೆಯುವ ಸಂದರ್ಭದಲ್ಲಿ ಇಡಬೇಕಾಗುತ್ತದೆ. ಈ ಸಾಲವನ್ನು 36 ಕಂತುಗಳಲ್ಲಿ ಮಹಿಳೆಯರು ಮರುಪಾವತಿ ಮಾಡಬೇಕಾಗುತ್ತದೆ. ಇದಕ್ಕೆ ವಿಧಿಸುವ ಬಡ್ಡಿಯು ಸಾಲ ಪಡೆಯುವ ಸಂದರ್ಭದಲ್ಲಿನ ಮಾರುಕಟ್ಟೆ ದರವನ್ನು ಅವಲಂಬಿಸಿ ಇರುತ್ತದೆ. ಸಾಲ ಪಡೆದ ಮೊದಲ ತಿಂಗಳ ಕಂತು (ಇಎಂಐ) ಕಟ್ಟಬೇಕೆಂದಿಲ್ಲ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಭಾರತೀಯ ಮಹಿಳಾ ಬ್ಯಾಂಕ್ಗಳಲ್ಲಿ ಸಾಲವನ್ನು ಸದ್ಯ ನೀಡಲಾಗುತ್ತಿದೆ.
ಉದ್ಯೋಗಿನಿ: ಟೈಲರಿಂಗ್, ಬೇಕರಿ, ಮೀನು ಮಾರಾಟ, ಕಿರಾಣಿ ಅಂಗಡಿ, ಕಾಫಿ ಟೀ ಸ್ಟಾಲ್, ಚಪ್ಪಲಿ, ಬ್ಯೂಟಿ ಪಾರ್ಲರ್ ಸೇರಿದಂತೆ 88 ಬಗೆಯ ಸಣ್ಣ ಉದ್ಯೋಮಕ್ಕೆ ಸಾಲವನ್ನು ಸಬ್ಸಿಡಿ ಮೂಲಕ ನೀಡುವ ಯೋಜನೆ ಇದು. 55 ವರ್ಷ ಒಳಗಿನ ಮಹಿಳೆಯರು ವಾರ್ಷಿಕವಾಗಿ 1.50 ಲಕ್ಷ ಆದಾಯವನ್ನು ಹೊಂದಿರುವಂಥವರು ಈ ಸಾಲ ಸೌಲಭ್ಯಕ್ಕೆ ಅರ್ಹರು. ಮೂರು ಲಕ್ಷ ರೂಪಾಯಿಗಳವರೆಗೆ ಸಾಲ ನೀಡಲಾಗುತ್ತಿದೆ.
ವಿಧವೆ, ವಿಚ್ಛೇದಿತೆ ಅಥವಾ ಅಂಗವಿಕಲೆಯಾಗಿದ್ದರೆ ಆದಾಯದಲ್ಲಿ ಮಿತಿ ಅನ್ವಯ ಆಗುವುದಿಲ್ಲ. ಸಾಲವನ್ನು ಪ್ರತಿ ಜಿಲ್ಲೆಯ ಖಾಸಗಿ ಬ್ಯಾಂಕ್ ಮತ್ತು ಸಹಕಾರಿ ಸಂಘಗಳಲ್ಲಿ ನೀಡಲಾಗುತ್ತದೆ. ಪ್ರತಿ ಜಿಲ್ಲೆಯಲ್ಲಿ ಮಹಿಳಾ ಅಭಿವೃದ್ಧಿ ನಿಗಮ ಇರುತ್ತದೆ. ಆಗಾಗಿ ನಿಮಗೆ ಸಂಬಂಧಪಟ್ಟ ಜಿಲ್ಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ನಿಗಮದ ನಿರೀಕ್ಷಕರು ಇರುತ್ತಾರೆ. ಅರ್ಜಿ ಸಂಗ್ರಹಿಸುವುದು ಇವರ ಕೆಲಸ.
ನಿಯಮಗಳಿಗೆ ಬದ್ಧ
ಮಹಿಳೆಯರು ಉದ್ಯಮ ಶುರು ಮಾಡಲು ಹಲವಾರು ಬ್ಯಾಂಕ್ಗಳು ಸಾಲ ಸೌಲಭ್ಯವನ್ನು ನೀಡುತ್ತಿವೆ. ಅವುಗಳ ಪೈಕಿ ಕೆಲವೊಂದನ್ನು ಮಾತ್ರ ಇಲ್ಲಿ ವಿವರಿಸಲಾಗಿದೆ. ಇನ್ನಿತರ ಬ್ಯಾಂಕ್ಗಳು ಕೂಡ ಮಹಿಳಾ ಉದ್ಯಮಿಗಳಿಗಾಗಿಯೇ ಕೆಲವೊಂದು ಯೋಜನೆಗಳನ್ನು ರೂಪಿಸಿವೆ. ಬ್ಯಾಂಕ್ಗಳಿಂದ ನೀಡುವ ಸಾಲಗಳು ಹಾಗೂ ಬಡ್ಡಿದರ ಇತ್ಯಾದಿ ಆಯಾ ಬ್ಯಾಂಕ್ಗಳ ನಿಯಮಕ್ಕೆ ಬದ್ಧವಾಗಿರುತ್ತವೆ ಹಾಗೂ ಬಡ್ಡಿದರಗಳಲ್ಲಿ ಕಾಲಕಾಲಕ್ಕೆ ವ್ಯತ್ಯಾಸವೂ ಆಗುತ್ತಿರುತ್ತವೆ.
ಮುದ್ರಾ ಯೋಜನೆ
ಶಿಶು ಯೋಜನೆ: ಉದ್ಯಮದ ಆರಂಭಿಕ ಹಂತದಲ್ಲಿ ಇರುವವರಿಗೆ 50 ಸಾವಿರ ರೂಪಾಯಿದಿಂದ 5ಲಕ್ಷ ರೂಪಾಯಿವರೆಗೆ ಧನಸಹಾಯ ನೀಡುವ ಯೋಜನೆ ಇದು. ಇದಕ್ಕೆ ಶೇ.1 ರಷ್ಟು ಮಾಸಿಕ ಬಡ್ಡಿದರ/ ಶೇ. 12 ವಾರ್ಷಿಕ ಬಡ್ಡಿದರವಿರುತ್ತದೆ. ಐದು ವರ್ಷಗಳ ಒಳಗೆ ಸಾಲವನ್ನು ಮರುಪಾತಿಸಬೇಕು.
ಕಿಶೋರ್ ಯೋಜನೆ: ಈ ಯೋಜನೆ ಅಡಿ 50 ಸಾವಿರ ರೂಪಾಯಿಯಿಂದ 5 ಲಕ್ಷ ರೂಪಾಯಿ ತನಕ ಸಾಲ ನೀಡಲಾಗುವುದು. ಆಯಾ ಬ್ಯಾಂಕ್ನ ನಿಯಮದ ಆಧಾರದ ಮೇಲೆ ಬಡ್ಡಿದರ ಹಾಗೂ ಸಾಲ ಮರುಪಾವತಿ ಅವಧಿ ನಿಗದಿ ಮಾಡಲಾಗುತ್ತದೆ.
ತರುಣ್: ರೂ. 5 ಲಕ್ಷದಿಂದ - ರೂ.10 ಲಕ್ಷದವರೆಗೆ ಸಾಲ ಸಿಗುತ್ತದೆ. ಬಡ್ಡಿ ಹಾಗೂ ಸಾಲ ಮರುಪಾವತಿ ಬ್ಯಾಂಕ್ಗಳ ನಿಯಮಕ್ಕೆ ಅವಲಂಬಿಸಿವೆ. ಈ ಸಾಲಗಳನ್ನು ನೀಡಲು 27 ಪಬ್ಲಿಕ್ ಸೆಕ್ಟರ್, 31 ಪ್ರಾದೇಶಿಕ ಗ್ರಾಮೀಣ ಬ್ಯಾಂಕ್, 17 ಖಾಸಗಿ ಬ್ಯಾಂಕ್, 36 ಚಿಕ್ಕ ಹಣಕಾಸು ಸಂಸ್ಥೆ, 25 ನಾನ್ ಬ್ಯಾಂಕಿಂಗ್ ಫೈನಾನ್ಷಿಯಲ್ ಇನ್ಸ್ಟಿಟ್ಯೂಷನ್ ಹಾಗೂ 4 ಸಹಕಾರಿ ಬ್ಯಾಂಕ್ಗಳನ್ನು ಗುರುತಿಸಲಾಗಿದೆ.
ಮಹಿಳಾ ಉದ್ಯಮ ನಿಧಿ
ಸಣ್ಣ ಉದ್ಯಮ ಶುರು ಮಾಡುವವರಿಗೆ ಹಾಗೂ ಈಗಿರುವ ಉದ್ಯಮವನ್ನು ವಿಸ್ತರಣೆ ಮಾಡುವವರಿಗೆ ಪಂಜಾಬ್ ನ್ಯಾಷನಲ್ ಬ್ಯಾಂಕ್ನಿಂದ ಈ ಯೋಜನೆ ಅಡಿ 10 ಲಕ್ಷ ರೂಪಾಯಿ ತನಕ ಸಾಲ ಸಿಗಲಿದೆ. ಸಾಲವನ್ನು 10 ವರ್ಷಗಳ ಒಳಗೆ ಮರುಪಾವತಿ ಮಾಡಬೇಕು.
ದೇನಾ ಶಕ್ತಿ ಯೋಜನೆ
ಕೃಷಿ ಸೇರಿದಂತೆ ಯಾವುದೇ ಕ್ಷೇತ್ರಗಳಲ್ಲಿ ಸ್ವಯಂ ಉದ್ಯಮ ಕೈಗೊಳ್ಳುವ ಹಾಗೂ ಈಗಾಗಲೇ ಹೊಂದಿರುವ ಉದ್ಯಮವನ್ನು ವಿಸ್ತರಿಸುವ ನಿಟ್ಟಿನಲ್ಲಿ ದೇನಾ ಬ್ಯಾಂಕ್ ಮೂಲಕ ನೀಡಲಾಗುವ ಸಾಲದ ಯೋಜನೆ ಇದು. ಕೃಷಿ ಹಾಗೂ ಇತರ ವ್ಯಾಪಾರ ವಹಿವಾಟು ನಡೆಸುವವರಿಗೆ - ರೂ. 20 ಲಕ್ಷದವರೆಗೆ ಹಾಗೂ ಚಿಲ್ಲರೆ ವ್ಯಾಪಾರಿಗಳಿಗೆ - ರೂ. 50 ಸಾವಿರದವರೆಗೆ ಸಾಲವನ್ನು ನೀಡಲಾಗುವುದು. ಇದಕ್ಕೆ ಇರುವ ಬಡ್ಡಿ ದರವು ಶೇ. 0.25. ದೇನಾ ಬ್ಯಾಂಕ್ನಲ್ಲಿ ಬ್ಯಾಂಕ್ ಖಾತೆ ಹೊಂದಿರುವವರು ತಮ್ಮ ಉದ್ಯೋಗದ ಅಂದಾಜು ವೆಚ್ಚ ಪಟ್ಟಿ, ಯಾವುದೇ ಚಿರಾಸ್ತಿ ಪ್ರಮಾಣ ಹಾಗೂ ಸಂಬಂಧಿತ ದಾಖಲೆಗಳನ್ನು ಹೊಂದಿರಬೇಕು. ಏಳು ವರ್ಷಗಳಲ್ಲಿ ಸಾಲವನ್ನು ಮರುಪಾವತಿಸಬೇಕು.
ಸೆಂಟ್ ಕಲ್ಯಾಣಿ ಯೋಜನೆ
ಸ್ತ್ರೀಶಕ್ತಿ ಯೋಜನೆ
ಮಹಿಳೆಯರು ಸ್ವಂತ ಉದ್ಯಮ ಸ್ಥಾಪಿಸುವ ನಿಟ್ಟಿನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ನೀಡುವ ಸಾಲ ಸೌಲಭ್ಯವೇ ‘ಸ್ತ್ರೀ ಶಕ್ತಿ ಯೋಜನೆ’. ಈ ಯೋಜನೆ ಅಡಿ 5 ಲಕ್ಷ ರೂಪಾಯಿವರೆಗೆ ಸಾಲ ನೀಡಲಾಗುತ್ತದೆ. ಸಾಲದ ಮೊತ್ತವು 2 ಲಕ್ಷ ರೂಪಾಯಿ ಮೀರಿದ್ದರೆ ಶೇ.0.50 ರಷ್ಟು ಬಡ್ಡಿದರದಲ್ಲಿ ರಿಯಾಯಿತಿಯೂ ಇದೆ.
ಓರಿಯಂಟಲ್ ಮಹಿಳಾ ವಿಕಾಸ್ ಯೋಜನಾ ಸ್ಕೀಮ್
ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ನೀಡುವ ಯೋಜನೆ ಇದು. ಸಣ್ಣ ಉದ್ಯಮ ಪ್ರಾರಂಭಿಸಲು 25 ಲಕ್ಷ ರೂಪಾಯಿ ವರೆಗೂ ಸಾಲ ಸೌಲಭ್ಯ ಸಿಗುತ್ತದೆ. ಈ ಸಾಲವನ್ನು ಏಳು ವರ್ಷಗಳ ವರೆಗೆ ಮರು ಪಾವತಿ ಮಾಡಲಾಗುತ್ತದೆ. ಪಾಲುದಾರಿಕೆಯಲ್ಲಿ ಉದ್ಯಮವನ್ನು ಶುರು ಮಾಡಿದ್ದರೆ ಸಾಲಕ್ಕೆ ಅರ್ಜಿ ಹಾಕುವ ಮಹಿಳೆಯರು ಆ ಉದ್ಯಮದಲ್ಲಿ ಕನಿಷ್ಠ ಶೇ.51ರಷ್ಟು ಪಾಲನ್ನು (ಶೇರ್) ಹೊಂದಿರಬೇಕಾಗುತ್ತದೆ.
| ಸುಚೇತನಾ