

ಈ ಪ್ರಶ್ನೆಗಳಿಗೆ ಉತ್ತರವನ್ನು ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ಮನೋಗೊಂದಲಕ್ಕೀಡಾದ ಅರ್ಜುನನಿಗೆ ಸಮಂಜಸವಾಗಿ ನೀಡಿದ್ದಾನೆ.
ಅಥ ಕೇನ ಪ್ರಯುಕ್ತೋಯಂ ಪಾಪಂ ಚರತಿ ಪೂರುಷಃ |
ಅನಿಚ್ಛನ್ನಪಿ ವಾಷ್ಣೇಯ ಬಲಾದಿವ ನಿಯೋಜಿತಃ || 3.36 ||
‘ಕೃಷ್ಣ, ಮನುಷ್ಯನು ಇಚ್ಛಿಸದೆ ಇದ್ದರೂ ಯಾವುದರಿಂದ ಪ್ರೇರೇಪಿತನಾಗಿ ಬಲಾತ್ಕಾರದಿಂದ ದೂಡಲ್ಪಟ್ಟವನಂತೆ ಪಾಪವನ್ನು ಮಾಡುತ್ತಾನೆ?’
ಇದಕ್ಕೆ ಉತ್ತರವಾಗಿ ಶ್ರೀಕೃಷ್ಣನು, ‘ತನ್ನಲ್ಲಿಯೇ ಇರುವ ರಜೋ ಗುಣದಿಂದ ಪ್ರೇರೇಪಿಸಲ್ಪಟ್ಟ ಎಂದೆಂದೂ ಉಪಶಮನಗೊಳ್ಳದ ಕಾಮ ಹಾಗೂ ಅಹಂಕಾರ ಪೂರಿತವಾದ ಕ್ರೋಧಗಳಿಂದಾಗಿ ಮಾನವನು ಪಾಪಗಳನ್ನು ಮಾಡುತ್ತಾನೆ’ ಎಂದು ಹೇಳುತ್ತಾನೆ. ಇನ್ನೂ ಮುಂದುವರಿದು, ಮನುಷ್ಯನ ಅಂತರಂಗದಲ್ಲಿರುವ ಮೂರು ಗುಣಗಳೇ ಎಲ್ಲ ಕಾರ್ಯಗಳನ್ನು ಮಾಡುತ್ತವೆಯೆಂಬುದನ್ನು ತಿಳಿಸುತ್ತಾನೆ. ಈ ಮೂರು ಗುಣಗಳೇ ಸತ್ತ ್ವ ರಜಸ್ಸು ಹಾಗೂ ತಮಸ್ಸು. ಕರ್ಮಗಳನ್ನು ಮಾಡದೆ ಒಂದು ಕ್ಷಣವಾದರೂ ಸುಮ್ಮನಿರಲು ಈ ಗುಣಗಳು ಬಿಡುವುದಿಲ್ಲ. ಈ ರಹಸ್ಯವನ್ನರಿಯದ ಮಾನವನು ಅಹಂಕಾರದಿಂದಾಗಿ ತಾನೇ ಎಲ್ಲ ಕರ್ಮಗಳನ್ನು ಮಾಡುತ್ತಿರುವೆನೆಂದು ಭಾವಿಸುತ್ತಾನೆ.
ಪ್ರಕೃತೇಃ ಕ್ರಿಯಮಾಣಾನಿ ಗುಣೈಃ ಕರ್ವಣಿ ಸರ್ವಶಃ |
ಅಹಂಕಾರ ವಿಮೂಢಾತ್ಮಾ ಕರ್ತಾಹಮಿತಿ ಮನ್ಯತೇ || 3.27 ||
‘ಪ್ರಕೃತಿಯ ಗುಣಗಳೇ ಎಲ್ಲ ಕರ್ಮಗಳನ್ನು ಮಾಡುತ್ತಿವೆ. ಆದರೆ ಅಹಂಕಾರದಿಂದ ಮೂಢನಾದ ಮಾನವನು ಕರ್ಮಗಳನ್ನು ತಾನೇ ಮಾಡುತ್ತಿರುವೆನೆಂದು ಭಾವಿಸುತ್ತಿರುತ್ತಾನೆ’.
ಮಾನವನು ಮಾಡುವ ಎಲ್ಲ ಕರ್ಮಗಳಿಗೂ ಮೂಲವಾದ ಈ ಮೂರು ಗುಣಗಳ ಹಾಗೂ ಅವುಗಳ ಪರಿಣಾಮಗಳ ಬಗ್ಗೆ ಈ ಲೇಖನದಲ್ಲಿ ತಿಳಿದುಕೊಳ್ಳೋಣ. ಈ ಗುಣಗಳೇ ಒಬ್ಬ ಮಾನವನ ಸ್ವಭಾವವನ್ನು ರೂಪಿಸಿ ಅವನ ಎಲ್ಲ ಯೋಚನೆ ಹಾಗೂ ವರ್ತನೆಗಳಿಗೆ ಕಾರಣವಾಗುತ್ತವೆ. ಭಗವದ್ಗೀತೆಯ 14ನೇ ಅಧ್ಯಾಯ, ಗುಣತ್ರಯವಿಭಾಗಯೋಗದಲ್ಲಿ ಶ್ರೀಕೃಷ್ಣನು ಈ ಗುಣಗಳ ಬಗ್ಗೆ ವಿವರವಾಗಿ ತಿಳಿಸುತ್ತಾನೆ.
ಸತ್ತ ್ವ ರಜಸ್ತಮ ಇತಿ ಗುಣಾಃ ಪ್ರಕೃತಿಸಂಭವಾಃ |
ನಿಬಧ್ನಂತಿ ಮಹಾಬಾಹೋ ದೇಹೇ ದೇಹಿನಮವ್ಯಯಮ್ || 14.5 ||
‘ಅರ್ಜುನ, ಸತ್ತ ್ವ ರಜಸ್ಸು, ತಮಸ್ಸು ಎಂಬ ಪ್ರಕೃತಿಯಿಂದ ಹುಟ್ಟಿದ ಗುಣಗಳು ಅವ್ಯಯನಾದ ಆತ್ಮನನ್ನು ದೇಹದಲ್ಲಿ ಬಂಧಿಸುತ್ತವೆ’.
ಸತ್ತ ್ವುಣವೆಂದರೆ ಜ್ಞಾನದಿಂದ ಕೂಡಿದ ನಿಸ್ವಾರ್ಥ ಪ್ರಶಾಂತ ಸ್ಥಿತಿ; ರಜೋಗುಣವೆಂದರೆ ತೀವ್ರಕಾಮನೆಯಿಂದ ಪ್ರೇರೇಪಿಸಲ್ಪಡುವ ಸ್ವಾರ್ಥ ಕರ್ಮಗಳನ್ನು ಮಾಡುವ ಸ್ಥಿತಿ; ತಮಸ್ಸೆಂದರೆ ಅಜ್ಞಾನದಿಂದ ಕೂಡಿದ ಜಡತ್ವ ಹಾಗೂ ಮೂಲಪ್ರವೃತ್ತಿಗಳನ್ನು (Inertia and Instincts) ಅನುಸರಿಸುವ ಸ್ಥಿತಿ. ತಮಸ್ಸು ಕಬ್ಬಿಣದ; ರಜಸ್ಸು ಬೆಳ್ಳಿಯ ಹಾಗೂ ಸತ್ತ ್ವು ಬಂಗಾರದ ಸರಪಳಿಯಿದ್ದಂತೆ. ಈ ಮೂರು ಸರಪಳಿಗಳು ಬೇರೆಬೇರೆ ವಸ್ತುಗಳಿಂದ ಮಾಡಲ್ಪಟ್ಟಿದ್ದರೂ ಅವು ಮನುಷ್ಯನನ್ನು ಬಂಧಿಸುತ್ತವೆ. ಇವುಗಳ ಪೈಕಿ ಪರಿಶುದ್ಧ ಹಾಗೂ ಉದಾತ್ತ ಗುಣಗಳಿಗೆ ಮೂಲವಾದ ಸತ್ತ ್ವು ಉತ್ತಮವಾದದ್ದು. ಆದರೆ ಅದು ಕೂಡ ಮನುಷ್ಯನನ್ನು ಐಹಿಕ ಸುಖ ಹಾಗೂ ತಿಳಿವಳಿಕೆಗಳಿಂದ ಬಂಧಿಸುತ್ತದೆ. ರಜೋಗುಣವಾದರೋ ಮನುಷ್ಯನನ್ನು ಆಸೆಗಳಿಂದ ಪ್ರೇರೇಪಿತವಾದ ಕರ್ಮಗಳಿಗೆ ದಾಸನನ್ನಾಗಿ ಮಾಡಿ ಬಂಧಿಸುತ್ತದೆ. ತಮೋಗುಣ ಆಲಸ್ಯ, ನಿದ್ರೆ ಹಾಗೂ ನಿರ್ಲಕ್ಷ ್ಯೆಗಳಿಂದ ಬಂಧಿಸುತ್ತದೆ. ಶ್ರೀಕೃಷ್ಣನು ಹೇಳುವಂತೆ- ‘ಅರ್ಜುನ, ಸತ್ತ ್ವುಣ ಸುಖದಲ್ಲಿ ಸಂಗವನ್ನು, ರಜೋಗುಣ ಕರ್ಮದಲ್ಲಿ ಸಂಗವನ್ನು, ತಮೋಗುಣ ಜ್ಞಾನವನ್ನು ಆವರಿಸಿ ಪ್ರಮಾದದಲ್ಲಿ ಸಂಗವನ್ನು ಉಂಟುಮಾಡುವುದು’.
ಮಹಾತ್ಮರಿಂದ ಹಿಡಿದು ಪಾಪಾತ್ಮರವರೆಗೆ ಎಲ್ಲರಲ್ಲಿಯೂ ಈ ಮೂರು ಗುಣಗಳೂ ಇದ್ದೇಇರುತ್ತವೆ. ಆದರೆ ಅವರ ಸ್ವಭಾವ ಹಾಗೂ ವರ್ತನೆಗಳು ಅವರಲ್ಲಿ ಯಾವ ಗುಣವು ಪ್ರಧಾನವಾಗಿದೆಯೆಂಬುದನ್ನು ಹೊಂದಿಕೊಂಡಿರುತ್ತವೆ. ಒಬ್ಬ ಉತ್ತಮ ವ್ಯಕ್ತಿಯಲ್ಲಿ ಸತ್ತ ್ವುಣ ಪ್ರಧಾನವಾಗಿದ್ದು, ಅದರಿಂದ ಪ್ರೇರೇಪಿತನಾಗಿ ಅವನು ಪರಿಶುದ್ಧ ಹಾಗೂ ಉತ್ತಮ ಯೋಚನೆಗಳನ್ನೇ ಮಾಡುತ್ತಾನೆ, ಉತ್ತಮ ಮಾತುಗಳನ್ನೇ ಆಡುತ್ತಾನೆ ಹಾಗೂ ಉತ್ತಮ ಕಾರ್ಯಗಳನ್ನೇ ಮಾಡುತ್ತಾನೆ. ಅದೇ ರೀತಿಯಲ್ಲಿ ಒಬ್ಬ ದುಷ್ಟ ವ್ಯಕ್ತಿಯಲ್ಲಿ ರಾಜಸಿಕ ಹಾಗೂ ತಮೋಗುಣಗಳು ಪ್ರಧಾನವಾಗಿದ್ದು ಅವನು ಸ್ವಾರ್ಥ ಹಾಗೂ ಅಹಂಕಾರಗಳಿಂದ ಇತರರ ಹಿತವನ್ನು ಪರಿಗಣಿಸದೆ ದುಷ್ಟ ಯೋಚನೆ ಹಾಗೂ ವರ್ತನೆಗಳಲ್ಲಿ ಮುಳುಗಿರುತ್ತಾನೆ. ಒಬ್ಬ ವ್ಯಕ್ತಿಯಲ್ಲಿ ಪ್ರಧಾನವಾದ ಗುಣ ಸದಾಕಾಲ ಇರುತ್ತದೆಯೆಂದು ಹೇಳುವಹಾಗಿಲ್ಲ. ಅವನಲ್ಲಿ ಈ ಮೂರೂ ಗುಣಗಳು ಸ್ವಲ್ಪ ಮಟ್ಟಿಗಾದರೂ ಆಗಾಗ ಬರುತ್ತಲೇ ಇರುತ್ತವೆ. ಆದ್ದರಿಂದಲೇ ಎಲ್ಲ ವ್ಯಕ್ತಿಗಳಲ್ಲಿಯೂ ಒಳ್ಳೆಯತನ ಹಾಗೂ ದುಷ್ಟತನಗಳು ಸ್ವಲ್ಪಮಟ್ಟಿಗಾದರೂ ಇದ್ದೇ ಇರುತ್ತವೆ.
ಪ್ರಾಣಿಪ್ರಪಂಚವನ್ನು ಪ್ರಧಾನವಾಗಿ ತಮೋಗುಣ ಆಳುತ್ತದೆ, ಆದ್ದರಿಂದಲೇ ಪ್ರಾಣಿಗಳಲ್ಲಿ ಬದುಕುಳಿಯುವ ಪ್ರವೃತ್ತಿಯೇ ಎಲ್ಲ ಕ್ರಿಯೆಗಳಿಗೆ ಪ್ರೇರಕವಾಗಿರುತ್ತದೆ. ಮಾನವರ ಜೀವನದಲ್ಲಿ ಪ್ರಧಾನವಾಗಿ ಕಾಣುವುದು ರಜೋಗುಣ; ಅದು ನಿರಂತರ ಸ್ವಾರ್ಥಪರ ಕರ್ಮಗಳಲ್ಲಿ ವ್ಯಕ್ತವಾಗುತ್ತದೆ; ಸತ್ತ ್ವುಣವೇ ಪ್ರಧಾನವಾಗಿರುವ ದೇವಮಾನವರೂ ಅಲ್ಲಲ್ಲಿ ಆಗಾಗ ಕಾಣಿಸಿಕೊಳ್ಳುವುದುಂಟು. ಜನ್ಮತಃ ಮಾನವನಾಗಿ ಹುಟ್ಟಿದ್ದರೂ ಕೇವಲ ತಮೋಗುಣದ ಪ್ರಭಾವಕ್ಕೊಳಗಾದವರು ಪಶುಜೀವನವನ್ನೇ ಅನುಸರಿಸುತ್ತಾರೆ. ಸತತ ಸಾಧನೆ-ಪ್ರಯತ್ನಗಳಿಂದ ಸತ್ತ ್ವುಣ ವನ್ನು ಆಶ್ರಯಿಸಿ ದೈವತ್ವಕ್ಕೇರುವ ಮಾನವರೂ ಇಲ್ಲದಿಲ್ಲ. ಬಹುತೇಕ ಮಂದಿ ರಜೋಗುಣದಿಂದ ಕೂಡಿದ್ದು ಜೀವನದಲ್ಲಿ ಕಾಮನೆಗಳಿಂದ ಪ್ರೇರಿತವಾದ ತಮ್ಮ ಸ್ವಾರ್ಥಪರ ಲಾಭ-ನಷ್ಟಗಳ ತೂಗುಯ್ಯಾಲೆಯಲ್ಲೇ ಓಲಾಡುತ್ತಿರುತ್ತಾರೆ.
ಈ ಮೂರು ಗುಣಗಳ ಪ್ರಭಾವವನ್ನು ರಾಮಾಯಣದಲ್ಲಿ ಖಳನಾಯಕನಾದ ರಾವಣನ ಕುಟುಂಬದಲ್ಲಿ ನೋಡಬಹುದು. ಮೂರು ಮಂದಿ ಸಹೋದರರು ಒಂದೇ ಕುಟುಂಬದಲ್ಲಿ ಜನಿಸಿದರೂ ಈ ಮೂರು ಮೂಲಗುಣಗಳ ಪ್ರಭಾವಕ್ಕೆ ನಿದರ್ಶನವಾಗಿ ನಿಂತಿದ್ದಾರೆ. ಕಿರಿಯನಾದ ವಿಭೀಷಣನು ಸತ್ತ ್ವುಣದ ಪ್ರಭಾವದಿಂದ ತನ್ನ ಅಣ್ಣನಾದ ರಾವಣನ ದುಷ್ಟತನದಿಂದ ಬೇಸತ್ತು ಔನ್ನತ್ಯ-ಔದಾರ್ಯಗಳ ಪ್ರತಿಮೂರ್ತಿಯಾದ ಶ್ರೀರಾಮನಲ್ಲಿ ಶರಣು ಹೋದ. ಹಿರಿಯನಾದ ರಾವಣನಾದರೋ ರಜೋಗುಣದ ಪ್ರಭಾವಕ್ಕೊಳಗಾಗಿ, ಕಾಮಪೀಡಿತನಾಗಿ ಶ್ರೀರಾಮನ ಧರ್ಮಪತ್ನಿಯನ್ನು ಅಪಹರಿಸಿ ಅವನತಿಯ ದಾರಿಯನ್ನು ಹಿಡಿದ. ಮಧ್ಯಮನಾದ ಕುಂಭಕರ್ಣನು ತಮೋಗುಣದಿಂದ ಕೂಡಿದ್ದು, ವರ್ಷದಲ್ಲಿ ಆರು ತಿಂಗಳು ನಿದ್ದೆಯಲ್ಲೇ ಕಳೆಯುತ್ತಿದ್ದ ಹಾಗೂ ಉಳಿದ ಆರು ತಿಂಗಳುಗಳಲ್ಲಿ ಜಾಗೃತನಾಗಿದ್ದಾಗ ಕೇವಲ ಹೊಟ್ಟೆ ತುಂಬಿಸಿಕೊಳ್ಳುವುದರಲ್ಲಿಯೇ ಸಮಯ ಕಳೆಯುತ್ತಿದ್ದ. ಹೀಗೆ ಈ ಮೂರು ಮೂಲ ಗುಣಗಳ ಪ್ರಭಾವದಿಂದಾಗಿಯೇ ಮಾನವರು ಪಶುಪ್ರವರ್ತನೆಯಿಂದ ಹಿಡಿದು ದೈವೀ ಸಹಜ ನಿಸ್ವಾರ್ಥ ಕ್ರಿಯೆಗಳವರೆಗೆ ವಿವಿಧ ರೀತಿಯ ಸ್ವಭಾವವುಳ್ಳವರಾಗಿರುತ್ತಾರೆ.
ಹಾಗಾದರೆ ಈ ಮೂರು ಮೂಲಗುಣಗಳ ಪ್ರಭಾವದಿಂದ ಸ್ವತಂತ್ರರಾಗಲು ಮಾನವರು ಏನು ಮಾಡಬೇಕು? ಈ ಎಲ್ಲ ಗುಣಗಳನ್ನು ಬಿಟ್ಟು ಬಿಡಲು ಯಾವ ಮಾನವನಿಗಾದರೂ ಸಾಧ್ಯವಿದೆಯೇ? ತಮೋಗುಣವನ್ನು ಸಂಪೂರ್ಣವಾಗಿ ತ್ಯಜಿಸಿದರೆ ನಿದ್ರಾಹೀನತೆ ಅವನನ್ನು ಕಾಡುತ್ತದೆ; ಮಿತಿಮೀರಿದ ಅತಿಕ್ರಿಯಾವಂತಿಕೆಯಿಂದಾಗಿ (Hyperactivity) ಸಂಕಷ್ಟಕ್ಕೀಡಾಗುತ್ತಾನೆ. ಅದೇ ರೀತಿಯಲ್ಲಿ ಮಾನವನು ಪೂರ್ಣವಾಗಿ ರಜೋಗುಣವನ್ನು ತ್ಯಜಿಸಿದರೆ ಸಮಾಜದ ಕೃಷಿ, ಉದ್ಯಮ, ವ್ಯಾಪಾರ ಇತ್ಯಾದಿ ಎಲ್ಲ ಚಟುವಟಿಕೆಗಳು ನಿಂತುಹೋಗುತ್ತವೆ. ಸತ್ತ ್ವುಣವೂ ಬಂಧನಕ್ಕೆ ದೂಡುತ್ತದೆಯೆಂಬ ಕಾರಣದಿಂದ ಅದನ್ನು ಬಿಟ್ಟು ಬಿಟ್ಟರೆ ಪರಹಿತಕಾರ್ಯಗಳನ್ನು ಮಾಡುವವರೇ ಇಲ್ಲವಾಗಿ ಸಮಾಜ ಅಧಃಪತನ ಹೊಂದುತ್ತದೆ.
ಸನಾತನ ಧರ್ಮ ಈ ಕುರಿತಾಗಿ ಏನು ಹೇಳುತ್ತದೆ, ಯಾವ ಪರಿಹಾರ ಕೊಡುತ್ತದೆ, ಈ ಮೂರು ಮೂಲಗುಣಗಳನ್ನು ಜೀವನದಲ್ಲಿ ಉಪಯೋಗಕರವಾಗಿ ಬಳಸಿಕೊಂಡು ಬದುಕುತ್ತ, ಅವುಗಳ ಬಂಧನಕ್ಕೊಳಗಾಗದೇ ಉಳಿಯಲು ಮಾನವರಿಗೆ ಸಾಧ್ಯವೇ? ಈ ಪ್ರಶ್ನೆಗೆ ಸಹಜವಾಗಿ ಬರುವ ಉತ್ತರವೆಂದರೆ, ಈ ಮೂರೂ ಗುಣಗಳಿಗೆ ಅತೀತನಾಗಿ ದಿವ್ಯತೆಯ ಜೀವನವನ್ನು ಮಾನವನು ನಡೆಸಬೇಕು ಹಾಗೂ ಇಹಲೋಕಸಹಜವಾದ ಸುಖ-ದುಃಖ, ಲಾಭ-ನಷ್ಟಗಳೆಂಬ ದ್ವಂದ್ವಗಳಿಂದ ಮುಕ್ತನಾಗಬೇಕು. ಆದರೆ ಇದನ್ನು ಸಾಧಿಸಲು ಬಹುತೇಕ ಮಂದಿ ಮಾನವರಿಗೆ ಸಾಧ್ಯವೇ ಇಲ್ಲ. ಹೀಗಿರುವಾಗ ಈ ಮೂರು ಗುಣಗಳ ಮೇಲೆ ಸಂಯಮವನ್ನು ಸಾಧಿಸಲು ಎಲ್ಲಿ ಪ್ರಾರಂಭಿಸಬೇಕು? ಈ ಪ್ರಶ್ನೆಗೆ ಭಗವದ್ಗೀತೆಯಲ್ಲಿ ಉತ್ತರವಿದೆ.
ಯುಕ್ತಾಹಾರವಿಹಾರಸ್ಯ ಯುಕ್ತ ಚೇಷ್ಟಸ್ಯ ಕರ್ಮಸು |
ಯುಕ್ತಸ್ವಪ್ನಾವಬೋಧಸ್ಯ ಯೋಗೋ ಭವತಿ ದುಃಖಹಾ || 6.17 ||
‘ಆಹಾರ, ವಿಹಾರ, ಕರ್ಮ ಹಾಗೂ ನಿದ್ರೆಗಳಲ್ಲಿ ಹಿತಮಿತವಾದ ಮಧ್ಯಮಾರ್ಗವನ್ನು ಆಶ್ರಯಿಸಿ, ಮಾನವನು ಯೋಗದ ಮೂಲಕ ದುಃಖವನ್ನು ಗೆಲ್ಲಬಹುದು’.
ಇಲ್ಲಿ ಯೋಗವೆಂದರೆ ಮೂರು ಮೂಲಗುಣಗಳ ಮಧ್ಯೆ ಜೀವನದಲ್ಲಿ ಸಮತೋಲನವನ್ನು ಸಾಧಿಸುವುದು. ಯೋಗಮಾರ್ಗ ಅನುಸರಿಸಲು ಸತ್ತ ್ವುಣವನ್ನು ಆಶ್ರಯಿಸಬೇಕು. ಆಹಾರ-ವಿಹಾರ ಹಾಗೂ ಕರ್ಮಗಳ ಮಧ್ಯೆ ಸಮತೋಲನ ಸಾಧಿಸಲು ತಮಸ್ಸು ಹಾಗೂ ರಜಸ್ಸುಗಳನ್ನು ಹಿತಮಿತವಾಗಿ ಬಳಸಿಕೊಳ್ಳಬೇಕು. ಇದು ಎಲ್ಲ ಮಾನವರಿಗೆ ಸಾಧ್ಯವಾದ ಮಧ್ಯಮಾರ್ಗ.
ಪ್ರತಿದಿನದ 24 ಗಂಟೆಗಳನ್ನು ಈ ಗುಣಗಳ ಆಧಾರದಲ್ಲಿ ಮೂರು ಭಾಗಗಳಾಗಿ ವಿಭಾಗಿಸಬಹುದು. ಪ್ರಾತಃಕಾಲ 4 ಗಂಟೆಯಿಂದ ಹಿಡಿದು 8 ಗಂಟೆಯವರೆಗೆ ಹಾಗೂ ಸಾಯಂಕಾಲ 4 ಗಂಟೆಯಿಂದ ಹಿಡಿದು 8 ಗಂಟೆಯವರೆಗೆ ಒಟ್ಟು 8 ಗಂಟೆಗಳ ಸಮಯ ಸತ್ತ ್ವ್ರಧಾನವಾಗಿರುತ್ತದೆ. ಆದ್ದರಿಂದ ಈ ಸಮಯವನ್ನು ಪ್ರಾರ್ಥನೆ, ಧ್ಯಾನ, ಯೋಗಾಭ್ಯಾಸ ಇತ್ಯಾದಿ ಆಧ್ಯಾತ್ಮಿಕ ಸಾಧನೆಗಳಿಗೆ ಉಪಯೋಗಿಸಬೇಕು. ಪ್ರಾತಃಕಾಲ 8 ಗಂಟೆಯಿಂದ ಸಾಯಂಕಾಲ 4 ಗಂಟೆಯವರೆಗಿನ 8 ಗಂಟೆಗಳ ಸಮಯ ರಜೋಗುಣ ಪ್ರಧಾನವಾಗಿದ್ದು, ಈ ಕಾಲವನ್ನು ಮಾನವನು ಜೀವನೋಪಾಧಿಗಾಗಿ ತನ್ನ ಉದ್ಯೋಗ ಹಾಗೂ ಕರ್ತವ್ಯಾಚರಣೆಯಲ್ಲಿ ತೊಡಗಿಸಬೇಕು. ಸಾಯಂಕಾಲ 8 ಗಂಟೆಯಿಂದ ಪ್ರಾತಃಕಾಲ 4 ಗಂಟೆಯವರೆಗಿನ ಉಳಿದ 8 ಗಂಟೆಗಳ ಸಮಯ ತಮೋಗುಣಪ್ರಧಾನವಾಗಿದ್ದು ಅದನ್ನು ನಿದ್ರೆ, ವಿಶ್ರಾಂತಿಗಳಲ್ಲಿ ಕಳೆಯಬೇಕು. ಇದರಿಂದಾಗಿ ದೇಹದ ಆಯಾಸ ಪರಿಹಾರವಾಗಿ ಮನಸ್ಸು ಕೂಡ ಪ್ರಫುಲ್ಲವಾಗುತ್ತದೆ. ಇದು ಸನಾತನ ಧರ್ಮ ತೋರುವ ಮೂರು ಮೂಲಗುಣಗಳ ಸಮತೋಲಿತ ಜೀವನ.
ಹೀಗೆ ಈ ಮೂರು ಗುಣಗಳ ಸಮತೋಲನವನ್ನು ಪ್ರಾರಂಭದಲ್ಲಿ ಸಾಧಿಸಿ ತದನಂತರ ಗುಣಾತೀತನಾಗಿ ದಿವ್ಯತೆಯನ್ನು ಅನುಭವಿಸಿ ಎಲ್ಲ ದ್ವಂದ್ವಗಳಿಂದ ಮುಕ್ತನಾಗಬೇಕು. ಇಂತಹ ದಿವ್ಯಸ್ಥಿತಿಯಲ್ಲಿ ಮಾನವನು ತಾನು ಕೇವಲ ದೇಹ-ಮನಸ್ಸುಗಳ ಸಂಕೀರ್ಣವಲ್ಲ, ದಿವ್ಯಸ್ವರೂಪನಾದ ಬ್ರಹ್ಮನೇ ಎಂಬ ಸತ್ಯವನ್ನು ಸಾಕ್ಷಾತ್ಕಾರ ಮಾಡಿಕೊಳ್ಳುತ್ತಾನೆ. ಇಂತಹ ಗುಣಾತೀತನಾದ ದಿವ್ಯಜ್ಞಿಯ ಲಕ್ಷಣಗಳನ್ನು ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ವಿವರಿಸಿದ್ದಾನೆ.
‘ಗುಣಾತೀತನಾದ ಮಾನವನ ಚರ್ಯುಗಳು ಹೀಗಿರುತ್ತವೆ: ಸದಾ ಆತ್ಮದ ಆನಂದದಲ್ಲಿಯೇ ನಿರತನಾಗಿರುವುದರಿಂದ ಸುಖದುಃಖಗಳಿಂದ ಅವನು ವಿಚಲಿತನಾಗವುದಿಲ್ಲ; ಅವನಿಗೆ ಚಿನ್ನ ಮತ್ತು ಮಣ್ಣು ಇವುಗಳ ಮಧ್ಯೆ ಯಾವುದೇ ವ್ಯತ್ಯಾಸ ಕಾಣಿಸುವುದಿಲ್ಲ. ಜೀವನದಲ್ಲಿ ಸಹಜವಾಗಿ ಬರುವ ಪ್ರಿಯವಾದ ಅಥವಾ ಅಪ್ರಿಯವಾದ ಅನುಭವಗಳಲ್ಲಿ ಹಾಗೂ ಸ್ತುತಿ-ನಿಂದೆಗಳಲ್ಲಿ ಅವನು ಸಮತ್ವವನ್ನು ವಹಿಸುತ್ತಾನೆ. ಅವನು ಶತ್ರುಗಳನ್ನೂ, ಮಿತ್ರರನ್ನೂ ಸಮವಾಗಿ ಕಾಣುತ್ತಾನೆ, ಮಾನ-ಅಪಮಾನಗಳಿಂದ ವಿಚಲಿತನಾಗುವುದಿಲ್ಲ. ಅವನು ಎಲ್ಲ ಸ್ವಾರ್ಥಪರ ಕರ್ಮಗಳನ್ನು ತ್ಯಜಿಸಿ ನಿಸ್ವಾರ್ಥ ಪರನಾಗಿರುತ್ತಾನೆ.’
ಮಾನವನು ಪ್ರಾರಂಭದಲ್ಲಿ ಮೂರು ಮೂಲಗುಣಗಳ ಮಧ್ಯೆ ಜೀವನದಲ್ಲಿ ಸಮತೋಲನ ಸಾಧಿಸಿ, ಅಂತ್ಯದಲ್ಲಿ ಗುಣಾತೀತನಾಗಿ ಬೆಳಗಬೇಕೆಂಬುದೇ ಸನಾತನ ಧರ್ಮ ತೋರುವ ಅತ್ಯುನ್ನತ ಪರಿಹಾರವಾಗಿದೆ.
(ಲೇಖಕರು ಸಾಮಾಜಿಕ ಹಾಗೂ ಆಧ್ಯಾತ್ಮಿಕ ಗುರುಗಳು)