ಇಂದಿರಾ ಮತ್ತು ರಾಹುಲ್ ಸಾಮ್ಯತೆಗಳು ಹಾಗೂ ವೈರುಧ್ಯಗಳು

Indira
Published on
ಕಾಂಗ್ರೆಸ್​ನ 23 ಹಿರಿಯ ನಾಯಕರು ಪಕ್ಷದ ಪ್ರಸಕ್ತ ಸಂಘಟನಾತ್ಮಕ ಸ್ಥಿತಿಗತಿ ಬಗ್ಗೆ, ಪರಿಸ್ಥಿತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಗಾಂಧಿ ಪರಿವಾರ ಆಸಕ್ತಿ ತೋರದಿರುವ ಬಗ್ಗೆ ಪ್ರಶ್ನೆಗಳನ್ನೆತ್ತಿದ್ದು ಪಕ್ಷದೊಳಗೆ ಅಶಾಂತಿಯ ಸುಳಿಯನ್ನೆಬ್ಬಿಸಿದ್ದು ಈಗ ಹಳೆಯ ಕಥೆ. ಪಂಜಾಬ್​ನಲ್ಲಿ ಕಾಂಗ್ರೆಸ್ ಇಂದು ತಲುಪಿರುವ ಶೋಚನೀಯ ಸ್ಥಿತಿಯ ಬಗ್ಗೆ ದನಿಯೆತ್ತಿ, ಅಗತ್ಯ ಪರಿಹಾರಾತ್ಮಕ ಕಾರ್ಯಕ್ರಮಗಳ ಅಗತ್ಯದ ಬಗ್ಗೆ ಪಕ್ಷದ ನಾಯಕತ್ವಕ್ಕೆ ಕಿವಿಮಾತು ಹೇಳಹೊರಟ ಹಿರಿಯ ನಾಯಕ ಕಪಿಲ್ ಸಿಬಲ್ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಘೊಷಣೆ ಕೂಗಿ, ಅವರ ಮನೆಯ ಮೇಲೆ ದಾಳಿಯೆಸಗಿ, ವಾಹನವನ್ನು ಜಖಂಗೊಳಿಸಿದ್ದೂ ವಾರದ ಹಿಂದೆ ನಡೆದುಹೋಯಿತು. ಅದೇ ಸಮಯದಲ್ಲಿ ಭಾರತೀಯ ಕಮ್ಯೂನಿಸ್ಟ್ ಪಕ್ಷದಿಂದ ಕನ್ನೈಯಾ ಕುಮಾರ್ ಮತ್ತು ಎಡಪಂಥೀಯ ಮನೋಭಾವದ ಜಿಗ್ನೇಶ್ ಮೇವಾನಿಯವರನ್ನು ರಾಹುಲ್ ಗಾಂಧಿ ಪಕ್ಷಕ್ಕೆ ಬರಮಾಡಿಕೊಂಡದ್ದೂ ಆಯಿತು. ಈ ಎಲ್ಲ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಪಕ್ಷ ಐವತ್ತೆರಡು ವರ್ಷಗಳ ಹಿಂದಿದ್ದ ಸ್ಥಿತಿಗೆ ಮರಳುತ್ತಿರುವಂತೆ ಕಾಣುತ್ತದೆ. ಕಾಂಗ್ರೆಸ್​ನಲ್ಲಿ ಇತಿಹಾಸ ಮರುಕಳಿಸುತ್ತಿರುವ ಈ ಸ್ಥಿತಿಯ ವಿಶ್ಲೇಷಣೆಯೊಂದಿಗೆ, ಪಕ್ಷದ ಭವಿಷ್ಯದ ಬಗ್ಗೆ ಇಣುಕುನೋಟ ಹರಿಸುವುದು ಈ ಲೇಖನದ ವಸ್ತುವಿಷಯ.

1966 ಜನವರಿಯಲ್ಲಿ ‘ಸಾಂರ್ದಭಿಕ ಒತ್ತಡ’ಗಳಿಂದ ತತ್​ಕ್ಷಣದ ಪರಿಹಾರ ಹುಡುಕುವ ಮಾರ್ಗವಾಗಿ ಕಾಂಗ್ರೆಸ್ ಪಕ್ಷ ಇಂದಿರಾ ಗಾಂಧಿಯವರನ್ನು ಪ್ರಧಾನಮಂತ್ರಿಯಾಗಿ ಆಯ್ಕೆ ಮಾಡಿದರೂ ಅದನ್ನು ಮೊರಾರ್ಜಿ ದೇಸಾಯಿ, ಚರಣ್ ಸಿಂಗ್, ನೀಲಂ ಸಂಜೀವ ರೆಡ್ಡಿ ಮುಂತಾದ ಹಿರಿಯ ನಾಯಕರು ಮನಸಾರೆ ಒಪ್ಪಿಕೊಳ್ಳಲಿಲ್ಲ. ಅದರಲ್ಲೂ 1967ರ ಲೋಕಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಅಲ್ಲಿಯವರೆಗಿನ ಚುನಾವಣಾ ಇತಿಹಾಸದಲ್ಲಿ ಅತಿ ಕಡಿಮೆ ಬಹುಮತ ಪಡೆದದ್ದು ಮತ್ತು ಹಲವು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳನ್ನು ಸೋತು ಅಧಿಕಾರ ಕಳೆದುಕೊಂಡದ್ದು ನಡೆದುಹೋದ ಮೇಲಂತೂ ಅವರುಗಳ ಇಂದಿರಾ-ವಿರೋಧಿ ದನಿ ತಾರಕಕ್ಕೇರಿತು. ಇಂದಿರಾ ಬಗ್ಗೆ ಅವರುಗಳಲ್ಲಿ ಈಗಾಗಲೇ ಇದ್ದ ಅಸಹನೆ ಮತ್ತು ತಮಗೆ ಉನ್ನತ ಸ್ಥಾನ ಸಿಗಲಿಲ್ಲವೆಂಬ ನಿರಾಸೆಯ ಜತೆ, ಇಂದಿರಾ ‘ಗೆಲ್ಲುವ ಕುದುರೆ’ಯಲ್ಲ ಎಂಬ ‘ತೀರ್ವನ’ವೂ ಸೇರಿಕೊಂಡು ಪಕ್ಷದೊಳಗಿನ ಒಡಕು ಉಲ್ಬಣಗೊಳ್ಳುತ್ತ ಸಾಗಿತು. ಇಂದಿರಾ-ವಿರೋಧಿ ಹಿರಿಯ ನಾಯಕರುಗಳು ಪಕ್ಷದಲ್ಲಿ ತಮ್ಮದೇ ಮಾತು ನಡೆಯಬೇಕೆಂದು ಒತ್ತಾಯಿಸತೊಡಗಿದ್ದು, ಅವರ ಗುಂಪಿಗೆ ‘ಸಿಂಡಿಕೇಟ್’ ಎಂಬ ಹೆಸರೂ ಬಂದದ್ದು ಆ ದಿನಗಳ ಕಾಂಗ್ರೆಸ್​ನ ಆಸಕ್ತಿಕರ ಬೆಳವಣಿಗೆಗಳು. ಅದು ರಾಷ್ಟ್ರರಾಜಕಾರಣಕ್ಕೂ ವಿಸ್ತರಿಸಿದ್ದು 1969ರ ಆಗಸ್ಟ್​ನಲ್ಲಿ ದೇಶದ ನಾಲ್ಕನೆಯ ರಾಷ್ಟ್ರಪತಿಯ ಆಯ್ಕೆ ಪ್ರಕ್ರಿಯೆ ಆರಂಭವಾದಾಗ. ಪಕ್ಷದೊಳಗೆ ಇಂದಿರಾರ ಪ್ರಮುಖ ವಿರೋಧಿಗಳಲ್ಲೊಬ್ಬರಾಗಿದ್ದ ನೀಲಂ ಸಂಜೀವ ರೆಡ್ಡಿಯ ವರನ್ನು ರಾಷ್ಟ್ರಪತಿ ಸ್ಥಾನಕ್ಕೆ ಕಾಂಗ್ರೆಸ್​ನ ಉಮೇದುವಾರರನ್ನಾಗಿ ಸಿಂಡಿಕೇಟ್ ಸೂಚಿಸಿ ಇಂದಿರಾ ನಾಯಕತ್ವಕ್ಕೆ ಬಹಿರಂಗ ಸವಾಲೊಡ್ಡಿತು. ಸೋಲಲು ತಯಾರಿಲ್ಲದ ಇಂದಿರಾ ತಮಗೆ ನಿಷ್ಠರಾದ ವಿ.ವಿ.ಗಿರಿಯವರನ್ನು ಕಣಕ್ಕಿಳಿಸಿ, ‘ಮನಸ್ಸಾಕ್ಷಿ’ಗೆ ಅನುಗುಣವಾಗಿ ಮತ ಚಲಾಯಿಸುವಂತೆ ಪಕ್ಷದ ವಿಧಾಯಕರಿಗೆ ವಿನಂತಿಸಿಕೊಂಡರು. ಫಲಿತಾಂಶ ಅವರಿಗನುಕೂಲವಾಗುವಂತೇ ಬಂತು, ‘ಸಿಂಡಿ‘ಕೇಟ್’ ಸೋತು ‘ಇಂಡಿಕೇಟ್’ ಜಯಭೇರಿ ಬಾರಿಸಿತು (ಮಾಸ್ಟರ್ ಹಿರಣ್ಣಯ್ಯನ ವರ ‘ಸಿಂಡಿಕೇಟ್- ಇಂಡಿಕೇಟ್’ ನಾಟಕ ನಿಮಗೆ ನೆನಪಿರಬಹುದು).

ಆದರೆ ರಾಜಿಗೆ ತಯಾರಿಲ್ಲದಿದ್ದ ಸಿಂಡಿಕೇಟ್ ನವೆಂಬರ್ 12ರಂದು ಇಂದಿರಾರನ್ನೇ ಪಕ್ಷದಿಂದ ಉಚ್ಚಾಟಿಸಿತು. ಮರುಪ್ರಹಾರಕ್ಕೆ ಸಿದ್ಧರೇ ಆಗಿದ್ದ ಇಂದಿರಾ ತಕ್ಷಣ ಹೊಸ ಪಕ್ಷವನ್ನೇ ಕಟ್ಟಿ, ಕಾಂಗ್ರೆಸ್​ನ ಎಲ್ಲ ವಿರಾಸತ್​ಗೂ ತಮ್ಮ ಹೊಸ ಪಕ್ಷವೇ ವಾರಸುದಾರ ಎಂದು ಘೊಷಿಸಿದರು. ಆ ಕಾರಣದಿಂದಲೇ ಅವರ ಪಕ್ಷಕ್ಕೆ ‘Congress (Requisition)‘, ಚಿಕ್ಕದಾಗಿ ‘Congress (R)‘ ಎಂದು ಹೆಸರು ಬಂತು. ತಮ್ಮದೇ ನಿಜವಾದ ಪಕ್ಷ ಎಂದು ಹೇಳಿಕೊಂಡ ಹಿರಿಯರ ಗುಂಪು ‘Congress (Organisation), ಚಿಕ್ಕದಾಗಿ ‘Congress (O)‘ ಎಂದಾಯಿತು. ಆದರೆ ಅಲ್ಲಿದ್ದವರೆಲ್ಲ ಹಳಬರು ಎಂಬ ಕಾರಣಕ್ಕಾಗಿ ‘O‘ ಅಕ್ಷರ ‘Old‘ ಎಂದು ದೀರ್ಘಗೊಂಡು, ಆ ಪಕ್ಷಕ್ಕೆ ‘Congress (Old) ಎಂಬ ಅಡ್ಡಹೆಸರು ಬಂದು ಜನಸಾಮಾನ್ಯರಲ್ಲಿ ನಗೆ ಮೂಡಿಸಿತು.

ಆಗ ಇಂದಿರಾರಿಗೆ 52 ವರ್ಷಗಳು, ಅದಾಗಿ 52 ವರ್ಷಗಳಾಗುತ್ತಿವೆ, ಅವರ ಮೊಮ್ಮಗ, ಇಂದಿನ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ 52ನೇ ವರ್ಷ ನಡೆಯುತ್ತಾ ಇದೆ. ಇದರಾಚೆಗೆ ಎರಡೂ ಸನ್ನಿವೇಶಗಳಲ್ಲಿ ಬೇರೇನೇನು ಸಾಮ್ಯತೆಗಳಿವೆ ಎಂದು ಈಗ ನೋಡೋಣ. ಹಾಗೆ ನೋಡುವಾಗ ಭಿನ್ನತೆಗಳೂ ನಮಗೆ ಎದುರಾಗುವುದು ಸಹಜವೇ.

ತಡವಾಗಿಯಾದರೂ, ಅಂದಿನಂತೆ ಇಂದೂ ಗಾಂಧಿ ಪರಿವಾರದ ನಾಯಕತ್ವಕ್ಕೆ ಹಿರಿಯ ನಾಯಕರು ಅಸಮ್ಮತಿ ವ್ಯಕ್ತಪಡಿಸತೊಡಗಿದ್ದಾರೆ. ಹಿಂದಿನ ಇಂದಿರಾ-ವಿರೋಧಿ ಗುಂಪಿಗೆ ‘ಸಿಂಡಿಕೇಟ್’ ಎಂದು ಹೆಸರಿದ್ದರೆ, ಇಂದು ರಾಹುಲ್-ವಿರೋಧಿ ಗುಂಪಿನಲ್ಲಿರುವ ಹಿರಿಯರ ಸಂಖ್ಯೆ 23 ಆಗಿರುವುದರಿಂದ ಅವರನ್ನು ಅಂತಾರಾಷ್ಟ್ರೀಯ ರಂಗದಲ್ಲಿ ಪ್ರಮುಖ ದೇಶಗಳ ಆರ್ಥಿಕ ಗುಂಪುಗಳಾದ ‘Group of Seven, (G7), (ಎ7)‘ಅಥವಾ ‘Group of Twenty, G20‘ ಮಾದರಿಯಲ್ಲಿ ‘Group of Twenty Three, G23‘ ಎಂದು ಮಾಧ್ಯಮಗಳು ಹೆಸರಿಸಿವೆ. ಅಂದಿನಂತೆ ಇಂದೂ ಕಾಂಗ್ರೆಸ್ ಒಂದು ರಾಜಕೀಯ ಪಕ್ಷವಾಗಿ ಕ್ಷೀಣಗೊಳ್ಳುತ್ತಿದೆ, ಹಲವು ರಾಜ್ಯಗಳ ವಿಧಾನಸಭಾ ಚುನಾವಣೆಗಳನ್ನು ಸೋತಿದೆ. ಲೋಕಸಭಾ ಚುನಾವಣೆಗಳಲ್ಲೂ ಸತತ ಎರಡು ಬಾರಿ ವೈಫಲ್ಯ ಅನುಭವಿಸಿದೆ. ಇಂತಹ ಸನ್ನಿವೇಶದಲ್ಲಿ ರಾಹುಲ್ ಗಾಂಧಿಯವರ ಒಟ್ಟಾರೆ ಗಾಂಧಿ ಪರಿವಾರದ ವಿರುದ್ಧವೇ ಹಿರಿಯ ನಾಯಕರಲ್ಲಿ ಅಸಮ್ಮತಿ ಎದ್ದಿದೆೆ. ಹಿಂದೆ ಚರಣ್ ಸಿಂಗ್ ಹಾಗೂ ಮತ್ತೆ ಕೆಲವರು ಪಕ್ಷ ಬಿಟ್ಟುಹೋದಂತೆ ಇಂದು ಜ್ಯೋತಿರಾದಿತ್ಯ ಸಿಂಧಿಯಾ, ಜಿತೇಂದ್ರ ಪ್ರಸಾದ ಮುಂತಾದವವರು ಪಕ್ಷ ತೊರೆದಿದ್ದಾರೆ.

ರಾಹುಲ್ ಗಾಂಧಿ ಪರವಾಗಿ, ಕಪಿಲ್ ಸಿಬಲ್ ವಿರುದ್ಧವಾಗಿ ನಡೆದ ಪ್ರತಿಭಟನೆ-ದಾಳಿಯ ಕುರಿತು ಹಲವು ನಾಯಕರು ಖೇದ, ಖಂಡನೆ ವ್ಯಕ್ತಪಡಿಸಿದ್ದಾರೆ. ಇವರಲ್ಲಿ ಆನಂದ್ ಶರ್ವ, ಮನೀಷ್ ತಿವಾರಿ ಮತ್ತು ಪಿ. ಚಿದಂಬರಂ ಸಹ ಇರುವುದು ವಿಶೇಷ. ಇಂತಹ ಸನ್ನಿವೇಶದಲ್ಲಿ ರಾಹುಲ್ ಗಾಂಧಿ ವಿರುದ್ಧದ ಅಲೆ ಇನ್ನಷ್ಟು ಉಗ್ರವಾಗಿ, ಜಿ-23 ಅವರನ್ನು ಪಕ್ಷದಿಂದ ಉಚ್ಚಾಟಿಸುತ್ತದೆಯೇ, ಆ ಮೂಲಕ ಪಕ್ಷದ ಮೇಲಿನ ಗಾಂಧಿ ಪರಿವಾರದ ಹಿಡಿತವನ್ನು ಕಿತ್ತೊಗೆಯುತ್ತದೆಯೇ ಎಂದು ಈಗಲೇ ಹೇಳಲಾಗುವುದಿಲ್ಲ. ಆದರೆ ಗಾಂಧಿ ಪರಿವಾರದ ವಿರುದ್ಧ ಅಸಹನೆ, ಅಸಂತೃಪ್ತಿ ದಿನೇದಿನೇ ಉಲ್ಬಣಗೊಳ್ಳುತ್ತಿದೆ ಎನ್ನುವುದಂತೂ ನಿಜ.

ಇಂತಹ ಆಂತರಿಕ ವಿರೋಧವನ್ನು ಹಿಂದೆ ಇಂದಿರಾ ಈಗ ರಾಹುಲ್ ನಿಭಾಯಿಸುತ್ತಿರುವ ಬಗೆಯತ್ತ ಈಗ ಗಮನ ಹರಿಸೋಣ. ತಮಗೆ ವಿರೋಧ ಉಲ್ಬಣಗೊಳ್ಳುತ್ತಿದೆಯೆಂದೂ, ಆ ವಿರೋಧಿಗಳನ್ನು ತಮ್ಮತ್ತ ತಿರುಗಿಸಿಕೊಳ್ಳಲು ಸಾಧ್ಯವೇ ಇಲ್ಲವೆಂದೂ ತಿಳಿದೊಡನೇ ಇಂದಿರಾ ಎರಡು ಕಾರ್ಯಕ್ರಮಗಳನ್ನು ರೂಪಿಸಿಕೊಂಡರು. ವಿರೋಧಿಗಳನ್ನು ಅಪ್ರಸ್ತುತಗೊಳಿಸುವ ಮೊದಲ ಕಾರ್ಯಯೋಜನೆಯಲ್ಲಿ ಅವರು ಸಮಾಜವಾದದ ಬಗ್ಗೆ ದೊಡ್ಡದಾಗಿ ಮಾತಾಡತೊಡಗಿದರು. ಜತೆಗೆ, ಈ ‘ಹಳಬರು’ ಬಂಡವಾಳಶಾಹಿಗಳೆಂದೂ, ಬಡಜನರ ಬಗ್ಗೆ ಇವರಿಗೆ ಕಾಳಜಿ ಇಲ್ಲವೆಂದೂ ಹೇಳಿ ಬಡಜನರೇ ತುಂಬಿದ್ದ ಈ ದೇಶದಲ್ಲಿ ಆ ಹಿರಿಯ ನಾಯಕರು ಜನಮಾನ್ಯತೆ ಕಳೆದುಕೊಳ್ಳುವಂತೆ ವ್ಯವಸ್ಥಿತವಾಗಿ ಪ್ರಯತ್ನ ವನ್ನಾರಂಭಿಸಿದರು, ಯಶಸ್ವಿಯೂ ಆದರು. ಅವರ ‘ಗರೀಬಿ ಹಠಾವೋ’ ಘೊಷಣೆ, ಬ್ಯಾಂಕ್ ರಾಷ್ಟ್ರೀಕರಣ, ರಾಜಧನ ರದ್ದತಿ ಮುಂತಾದ, ತಮ್ಮ ಬಡಜನರ ಪರವಾದ ಯೋಜನೆಗಳು ಎಂದವರು ಬಿಂಬಿಸಿದ, ಕೆಲಸಗಳನ್ನು ಇಲ್ಲಿ ನೆನಪಿಸಿಕೊಳ್ಳುವುದು ಸೂಕ್ತ.

ಸಮಾಜವಾದಿ ನಿಲುವುಗಳಿಗೆ ಇಂದಿರಾ ಹೊರಗಿನಿಂದ ಬೆಂಬಲವನ್ನು ‘ಆಮದು’ ಮಾಡಿಕೊಳ್ಳಲು ಹಂಚಿಕೆ ಹಾಕಿದರು. ಆ ಮೂಲಕ ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) ಜತೆ ಘನಿಷ್ಟ ಸಂಬಂಧ ಸ್ಥಾಪಿಸಿಕೊಂಡರು. ಈ ಮೈತ್ರಿ 1969ರಲ್ಲಿ ಪಕ್ಷ ಹೋಳಾಗಿ ಲೋಕಸಭೆಯಲ್ಲಿ ಇಂದಿರಾರ ಬಲ ಕ್ಷೀಣಗೊಂಡ ಸಂದರ್ಭದಲ್ಲಿ ಅವರಿಗೆ ತುಂಬ ಸಹಕಾರಿಯಾಯಿತು. ಮುಂದೆ ಬಹುಕಾಲದವರೆಗೆ ಸಿಪಿಐ ಇಂದಿರಾ ಪರವಾಗಿ ನಿಂತಿತು, ತುರ್ತು ಪರಿಸ್ಥಿತಿಯಲ್ಲೂ ಕೂಡ. ಇಂದಿರಾರ ಸಮಾಜವಾದಿ ಸಖ್ಯ ಸಿಪಿಐ ಜತೆ ಮೈತ್ರಿಗಷ್ಟೇ ಸೀಮಿತವಾಗಲಿಲ್ಲ, ಹಲವು ಸಮಾಜವಾದಿಗಳು ಮತ್ತು ಕಮ್ಯೂನಿಸ್ಟರನ್ನು ತಮ್ಮ ಕಾಂಗ್ರೆಸ್​ನತ್ತ ಆಕರ್ಷಿಸಿಕೊಂಡರು. ವರ್ಚಸ್ವಿ ಸಿಪಿಐ ನಾಯಕ ಮೋಹನ್ ಕುಮಾರಮಂಗಲಂ ಕಾಂಗ್ರೆಸ್ ಪಾಳಯ ಸೇರಿದ್ದನ್ನು ನೆನಪಿಸಿಕೊಳ್ಳಿ. ಅದಕ್ಕಿಂತಲೂ ಮುಖ್ಯವಾದದ್ದು ಪ್ರೊ. ನೂರುಲ್ ಹಸನ್ ಇಂದಿರಾರ ಜತೆಗೂಡಿದ್ದು. ನೂರುಲ್ ಹಸನ್ ಮತ್ತು ಇಂದಿರಾ ನಡುವೆ ಬಾಲ್ಯದಿಂದಲೂ ಸ್ನೇಹ-ಒಡನಾಟಗಳಿದ್ದವು. ಬಾಲಕಿ ಇಂದಿರಾ ‘ಮಂಕಿ ಬ್ರಿಗೇಡ್’ (ವಾನರ ಸೇನಾ) ಎಂಬ ಮಕ್ಕಳ ಸೈನ್ಯ ಕಟ್ಟಿ ಬ್ರಿಟಿಷರ ವಿರುದ್ಧ ಅಲ್ಲಲ್ಲಿ ಕೂಗಾಡಿದಾಗ ಬಾಲಕ ನೂರುಲ್ ಹಸನ್ ಅವರ ಜತೆಗಿದ್ದರು. ದೆಹಲಿ ಯೂನಿವರ್ಸಿಟಿಯಲ್ಲಿ ನಮಗೆ ಪಾಠದ ಮಧ್ಯೆ, ಇಂದಿರಾ ಕೀರಲು ಕಂಠದಲ್ಲಿ ಘೊಷಣೆ ಕೂಗುತ್ತಿದ್ದುದನ್ನು, ತಾವದನ್ನು ಅನುಕರಿಸಿ ಪುನರುಚ್ಚರಿಸುತ್ತಿದ್ದುದನ್ನೂ ನೆನಪಿಸಿಕೊಂಡು ಹೇಳಿ ಪ್ರೊ.ಹಸನ್ ನಮ್ಮನ್ನು ನಗಿಸಿದ್ದರು. ಯೌವನಾವಸ್ಥೆಗೆ ತಲುಪಿದಂತೇ ನೂರುಲ್ ಹಸನ್ ಎಡ ವಿಚಾರಧಾರೆಯತ್ತ ವಾಲಿಕೊಂಡರು. ಒಮ್ಮೆ ಅವರು ಇಂದಿರಾ ಪಾಳಯ ಸೇರಿ ಶಿಕ್ಷಣ ಮತ್ತು ಸಂಸ್ಕೃತಿ ರಾಜ್ಯ ಸಚಿವ (ಸ್ವತಂತ್ರ ಜವಾಬ್ದಾರಿ) ಆಗಿ ಇಂದಿರಾ ಮಂತ್ರಿಮಂಡಲ ಸೇರಿದೊಡನೇ ಭಾರತದ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ವಲಯವನ್ನು ಸಂಪೂರ್ಣವಾಗಿ ಎಡಮಯಗೊಳಿಸಿಬಿಟ್ಟರು. ಇಂಡಿಯನ್ ಕೌನ್ಸಿಲ್ ಆಫ್ ಹಿಸ್ಟಾರಿಕಲ್ ರೀಸರ್ಚ್ (ಐಸಿಎಚ್​ಆರ್) ಸ್ಥಾಪಿಸಿ ಅದರ ತುಂಬ ಎಡಪಂಥೀಯ ಇತಿಹಾಸಕಾರರನ್ನು ತುಂಬಿದರು. ಇಂಡಿಯನ್ ಕೌನ್ಸಿಲ್ ಆಫ್ ಸೋಶಿಯಲ್ ಸೈನ್ಸ್ ರೀಸರ್ಚ್ (ಐಸಿಎಸ್​ಎಸ್​ಆರ್) ಅಡಿಯಲ್ಲಿ ದೇಶದಾದ್ಯಂತ ಇಪ್ಪತೆôದಕ್ಕಿಂತಲೂ ಹೆಚ್ಚು ಅಂಗಸಂಸ್ಥೆಗಳನ್ನು ಸ್ಥಾಪಿಸಿ ಅಲ್ಲೂ ಎಡಪಂಥೀಯರನ್ನೇ ತುಂಬಿ ರಾಷ್ಟ್ರದ ಸಮಾಜವಿಜ್ಞಾನ ಕ್ಷೇತ್ರದಲ್ಲಿನ ಅಧ್ಯಯನ, ಸಂಶೋಧನೆ ಮತ್ತು ಶಿಕ್ಷಣವನ್ನು ಎಡಪಂಥದ ಹಿಡಿತದಲ್ಲಿರಿಸಿಬಿಟ್ಟರು. ಪಠ್ಯಪುಸ್ತಕಗಳಲ್ಲಿ ಇತಿಹಾಸ ಉಗ್ರವಾಗಿ ತಿರುಚಲ್ಪಡತೊಡಗಿದ್ದು ಮತ್ತು ವರ್ತಮಾನ ವಿರೂಪಗೊಳ್ಳಲ್ಪಡತೊಡಗಿದ್ದು ಆಗ. ನೂರುಲ್ ಹಸನ್​ರ ಈ ಎಲ್ಲ ಯೋಜನೆಗಳ ಫಲವಾಗಿ ಅಂದಿನಿಂದ ಪ್ರತಿ ತಲೆಮಾರಿನ ಒಂದು ದೊಡ್ಡ ವರ್ಗ ಸುಳ್ಳು ಇತಿಹಾಸವನ್ನು ಕಲಿಯುತ್ತ ಬಂದಿದೆ, ತನ್ನದೇ ಪರಂಪರೆಯ ಬಗ್ಗೆ ತಪು್ಪ ಕಲ್ಪನೆಗಳನ್ನು ನಿಜದಂತೆ ಮಿದುಳಿನಲ್ಲಿ ತುಂಬಿಕೊಂಡು ಕೀಳರಿಮೆಯನ್ನು ಉಗ್ರವಾಗಿಸಿಕೊಳ್ಳುತ್ತಿದೆ, ವಾಸ್ತವವನ್ನು ನಿರಾಕರಿಸಿ ಕಲ್ಪಿತ ಶತ್ರುಗಳ ವಿರುದ್ಧ ಹೋರಾಡುವ ಭ್ರಮೆಯಲ್ಲಿ ಬದುಕನ್ನು ವ್ಯರ್ಥಗೊಳಿಸಿಕೊಳ್ಳುತ್ತಿದೆ, ಆ ಮೂಲಕ ರಾಷ್ಟ್ರದ ಬೆಳವಣಿಗೆಗೆ ಋಣಾತ್ಮಕ ಕೊಡುಗೆ ನೀಡುತ್ತಿದೆ.

ಇದನ್ನೆಲ್ಲ ನೂರುಲ್ ಹಸನ್ ಮಾಡಿದ್ದು ತಣ್ಣಗೆ, ಸದ್ದುಗದ್ದಲವಿಲ್ಲದೇ. ಬೌದ್ಧಿಕವಾಗಿ ತಾನು ಎಂತಹ ವಿಷವರ್ತಲದೊಳಗೆ ಸಿಲುಕಿಹೋಗುತ್ತಿದ್ದೇನೆಂದು ಆಗ ದೇಶಕ್ಕೆ ತಿಳಿಯಲೇ ಇಲ್ಲ. ಇಷ್ಟಾಗಿಯೂ, ಇಂದಿರಾ ಮಾತ್ರ ತಮ್ಮ ಯಾವ ನಡೆನುಡಿಯಲ್ಲೂ ತಾವು ಒಂದು ನಿರ್ದಿಷ್ಟ ಕೋಮಿನ ಹಿತಚಿಂತಕರು ಅಥವಾ ವಿರೋಧಿಗಳು ಎಂದು ಬಿಂಬಿಸಿಕೊಳ್ಳಲಿಲ್ಲ. ಹೀಗೆ ರಾಜಕೀಯ ನಾಯಕಿಯಾಗಿ, ಪ್ರಧಾನಮಂತ್ರಿಯಾಗಿ ಇಂದಿರಾ ಜವಾಬ್ದಾರಿಯುತವಾಗಿ ನಡೆದುಕೊಂಡರು. ಈ ಎಲ್ಲ ನಡೆಗಳೇ ಅವರಿಗೆ 1971ರ ಚುನಾವಣೆಗಳಲ್ಲಿ ಅದ್ಭುತ ಯಶಸ್ಸು ತಂದು ಅವರನ್ನು ಕಾಂಗ್ರೆಸ್​ನ ಅನಭಿಷಿಕ್ತ ಸಮ್ರಾಜ್ಞಿಯಾಗಿಸಿದವು.

ಇಂದಿರಾರ ಇತರ ನಡೆಗಳನ್ನೂ ರಾಹುಲ್​ರ ಇಂದಿನ ನಡೆ ಗಳಿಗೆ ಹೋಲಿಸಿದರೆ ನಿರಾಸೆ ಎದುರಾಗುತ್ತದೆ. ಸಮಾಜವಾದಕ್ಕೆ ಇಂದಿರಾಯೇನೋ ನಿಷ್ಠೆ ತೋರಿದರು. ಆದರೆ, ರಾಹುಲರಲ್ಲಿ ಈ ನಿಷ್ಠೆಯ ಲವಲೇಶವೂ ಇಲ್ಲ, ಸಮಾಜವಾದಿಗಳನ್ನು ಹತ್ತಿರದ ಒಡನಾಡಿಗಳನ್ನಾಗಿಯೂ ಆದರಿಸುತ್ತಿಲ್ಲ. ಕನ್ನೆ ೖಯಾ ಕುಮಾರ್​ರನ್ನು ಸಿಪಿಐನಿಂದ ಸೆಳೆದು ತಮ್ಮ ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ ನಿಜ. ಆದರೆ ಬರೀ ಬಾಯಿಮಾತಿನ ಇವರನ್ನು ಮೋಹನ ಕುಮಾರಮಂಗಲಂಗೆ ಹೋಲಿಸಲಾಗುವುದಿಲ್ಲ. ಈಗಾಗಲೇ ‘ಗಾಳಿ ಬೀಸುವ ದಿಕ್ಕಿಗೆ ತೂರಿಕೊಳ್ಳುವ’ ಸ್ವಭಾವವನ್ನು ಮತ್ತೆಮತ್ತೆ ಪ್ರದರ್ಶಿಸಿ ವಿಶ್ವಾಸಾರ್ಹತೆ ಕಳೆದುಕೊಂಡಿರುವ ಈ ಮಾಜಿ ವಿದ್ಯಾರ್ಥಿ ನಾಯಕನಿಂದ ಕಾಂಗ್ರೆಸ್​ಗೆ ಉಪಯೋಗವೇನೂ ಆಗುವುದಿಲ್ಲ. ಜಿಗ್ನೇಶ್ ಮೇವಾನಿ ಬಗ್ಗೆಯೂ ಇದೇ ಮಾತು ಹೇಳಬಹುದು. ನೂರುಲ್ ಹಸನ್​ರಂತೆ ತಣ್ಣಗೆ ಕಾರ್ಯ ಸಾಧಿಸುವ ಚಾಕಚಕ್ಯತೆ, ಬೌದ್ಧಿಕ ಸ್ಪಷ್ಟತೆ ಇಲ್ಲದ ಇವರು ಬರೀ ಅನಗತ್ಯ ಮಾತಿನಲ್ಲೇ ಕಾಲ ಕಳೆದುಬಿಡುವ, ಆ ಮೂಲಕ ರಾಹುಲ್​ರ ಕೊರಳಿಗೆ ಒಂದು ಭಾರದ ಕಬ್ಬಿಣದ ಪದಕವಾಗುವ ಸಾಧ್ಯತೆಯೇ ಹೆಚ್ಚು. ಜತೆಗೆ, ಇಂದಿರಾರ ನಡವಳಿಕೆಗೆ ವಿರುದ್ಧವಾಗಿ ಧಾರ್ವಿುಕ ವಿಷಯಗಳಲ್ಲಿ ರಾಹುಲ್ ಗಾಂಧಿ ಮತ್ತೆಮತ್ತೆ ನಗೆಪಾಟಲಿಗೀಡಾಗಿ, ರಾಜಕೀಯವಾಗಿ ಬೆಲೆ ಕಳೆದುಕೊಳ್ಳುತ್ತಿರುವುದನ್ನು ನೋಡುತ್ತಲೇ ಇದ್ದೇವೆ. ಒಟ್ಟಿನಲ್ಲಿ ಇಂದಿರಾ ಜಯಿಸಿದೆಡೆ ರಾಹುಲ್ ಸೋಲುವ ಸಾಧ್ಯತೆಯೇ ಹೆಚ್ಚಾಗಿದೆ.

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net