

ಅದು 1962ರ ನವೆಂಬರ್ 18ರ ಸಂಜೆ. ಪೂರ್ವ ಲಡಾಖ್ನ ಬೆಟ್ಟಗುಡ್ಡಗಳ ನಡುವೆ ಸೂರ್ಯ ಆಗಷ್ಟೇ ಮರೆಯಾಗುತ್ತಿದ್ದ. ಅಲ್ಲೊಂದು ಮಹಾಪರ್ವತ. ಹೆಸರು ರೆಸಾಂಗ್ ಲಾ. ಅದಕ್ಕೆ ತೀರಾ ಹತ್ತಿರದಲ್ಲಿ ಚುಶೂಲ್ ಎಂಬ ಪುಟ್ಟ ಹಳ್ಳಿ. ಸಮುದ್ರ ಮಟ್ಟದಿಂದ ಹದಿನಾರು ಸಾವಿರ ಅಡಿ ಎತ್ತರ. ತಾಪಮಾನ -250 ಸೆಂಟಿಗ್ರೇಡ್. ಕೊರೆಯುವ ಚಳಿ. ಬಿಟ್ಟೂ ಬಿಡದಂತೆ ಹಿಮ ಬೀಳುತ್ತಿತ್ತು. ಅಂದು ಭಾರತೀಯ ಸೈನ್ಯದ ಕುಮಾವ್ ರೆಜಿಮೆಂಟಿನ 123 ಮಂದಿ ಸೈನಿಕರು ಆ ಬಟಾಬಯಲಿನಲ್ಲಿ ನಿಂತಿದ್ದರು. ಅವರ ಬಳಿ ಬೆಚ್ಚನೆಯ ಉಡುಗೆಗಳಿರಲಿಲ್ಲ. ಕಾಲಿಗೆ ಸರಿಯಾದ ಬೂಟುಗಳಿರಲಿಲ್ಲ. ದೇಹದಲ್ಲಿ ರಕ್ತ ಹೆಪ್ಪುಗಟ್ಟುತ್ತಿತ್ತು. ಅವರಿದ್ದ ಸ್ಥಳದಿಂದ ಕೆಲವೇ ಅಡಿಗಳ ದೂರದಲ್ಲಿ ಚೀನಿ ಸೈನ್ಯ ಬೀಡುಬಿಟ್ಟಿತ್ತು. ದಂಚೋಕ್, ದೌಲತ್ ಬೇಗ್ ಓಲ್ದಿಯಲ್ಲಿದ್ದ ಭಾರತೀಯ ಸೇನಾನೆಲೆಗಳು ಒಂದೊಂದಾಗಿ ಚೀನಿ ಸೈನ್ಯದ ತೆಕ್ಕೆಗೆ ಬೀಳುತ್ತಿದ್ದವು. ಭಯಾನಕ ಶೆಲ್ ದಾಳಿ. ಸೈನಿಕರ ಬಂಕರ್ಗಳು ಛಿದ್ರಗೊಳ್ಳುತ್ತಿದ್ದವು. ಸೈನಿಕರು ಒಬ್ಬೊಬ್ಬರಾಗಿ ಪ್ರಾಣತ್ಯಾಗ ಮಾಡುತ್ತಿದ್ದರು. ಆ ದಿನ ಸಂಜೆಯ ವೇಳೆಗೆ ಉಳಿದಿದ್ದು 123 ಮಂದಿ ಸೈನಿಕರು ಮಾತ್ರ.
ಅಂದು ರಾತ್ರಿ ಕಂಪನಿ ಕಮಾಂಡರ್ ಮೇಜರ್ ಶೈತಾನ್ ಸಿಂಗ್ ಭಾಟಿ ಅವರು ಅಷ್ಟೂ ಸೈನಿಕರನ್ನು ಮುಂದೆ ನಿಲ್ಲಿಸಿಕೊಂಡು ಹೀಗೆಂದರು- ‘ಈ ಕ್ಷಣದಲ್ಲಿ ಮೂರು ಸಾವಿರ ಚೀನಿ ಸೈನಿಕರು ನಮ್ಮನ್ನು ಸುತ್ತುವರಿದಿದ್ದಾರೆ. ಎಲ್ಲರೂ ಹಿಂದೆ ಸರಿಯುವಂತೆ ಬ್ರಿಗೇಡ್ ಹೆಡ್ಕ್ವಾರ್ಟರ್ನಿಂದ ನನಗೆ ಆದೇಶ ಬಂದಿದೆ. ನಮಗೆ ಫಿರಂಗಿಗಳ ಸಹಾಯ ಮಾಡುವುದು ಅವರಿಗೆ ಸಾಧ್ಯವಿಲ್ಲವಂತೆ. ಕಾರಣ ಅವರಿಗೆ ನಾವು ಈ ಯುದ್ಧವನ್ನು ಗೆಲ್ಲುವುದು ಅಸಾಧ್ಯ ಎನ್ನುವುದು ಖಚಿತವಾಗಿದೆ. ಆದರೆ ನಾನೊಬ್ಬ ಭಾರತೀಯ ಸೈನಿಕ. ಶತ್ರುಗಳಿಗೆ ಬೆನ್ನು ತೋರಿಸಿ ಓಡಿ ಹೋಗುವ ಜಾಯಮಾನ ನನ್ನದಲ್ಲ. ಹಾಗಾಗಿ ನಾನು ಇಲ್ಲೇ ಇದ್ದು ಶತ್ರುಗಳನ್ನು ಎದುರಿಸುತ್ತೇನೆ. ಇದು ಸೈನಿಕನ ಗೌರವ ಮತ್ತು ಸ್ವಾಭಿಮಾನದ ಪ್ರಶ್ನೆ. ನಿಮ್ಮಲ್ಲಿ ಯಾರಿಗಾದರೂ ಹಿಂತಿರುಗಿ ಹೋಗಬೇಕು ಎನ್ನಿಸಿದರೆ ತಡೆಯುವುದಿಲ್ಲ. ಇಲ್ಲಿಂದ ವಾಪಸ್ ಹೋಗಬೇಕು ಅಥವಾ ಇಂದು ರಾತ್ರಿ ಹುತಾತ್ಮರಾಗಬೇಕು. ಆಯ್ಕೆ ನಿಮ್ಮದು!’. ಅಷ್ಟೂ ಸೈನಿಕರು ಒಕ್ಕೊರಲಿನಿಂದ ‘ನಾವು ನಿಮ್ಮೊಂದಿಗೆ ನಿಲ್ಲುತ್ತೇವೆ. ಶತ್ರುಗಳೊಂದಿಗೆ ಹೋರಾಡುತ್ತೇವೆ’ ಎಂದು ಘೋಷಿಸಿದರು. ಯಾರೊಬ್ಬರೂ ಅಲ್ಲಿಂದ ವಾಪಸ್ ಹೋಗಲು ಮನಸ್ಸು ಮಾಡಲಿಲ್ಲ.
ಮಧ್ಯರಾತ್ರಿ ವೇಳೆಗೆ ಚೀನಿ ಸೈನಿಕರು ಭೀಕರ ಆಕ್ರಮಣ ಪ್ರಾರಂಭಿಸಿಬಿಟ್ಟರು. ಭಾರತೀಯ ಸೈನ್ಯ ಅದಕ್ಕೆ ದಿಟ್ಟ ಉತ್ತರ ನೀಡಿತ್ತು. ಚೀನಾದ ಸೈನಿಕರು ಮುಗಿಬೀಳುತ್ತಲೇ ಇದ್ದರು. ಭಾರತೀಯ ಸೈನಿಕರು ಗುಂಡು ಮುಗಿದ ಮೇಲೆ ಚಾಕು, ಚೂರಿ, ಖಡ್ಗವನ್ನು ಕೈಗೆತ್ತಿಕೊಂಡು ಚೀನಿ ಸೈನಿಕರಿಗೆ ಇರಿಯಲಾರಂಭಿಸಿದರು. ಆದರೆ ಚೀನಿ ಸೈನಿಕರ ಮೈಮೇಲೆ ದಪ್ಪನೆಯ ಜಾಕೆಟ್ಗಳಿತ್ತು. ಹಾಗಾಗಿ ಇರಿತ ಪರಿಣಾಮ ಬೀರಲಿಲ್ಲ. ನಂತರ ಭಾರತೀಯ ಸೇನಾನಿಗಳು ಕಲ್ಲು, ಬಂಡೆಗಳೊಂದಿಗೆ ಕಾಳಗಕ್ಕೆ ಇಳಿದರು. ಬಳಿಕ ಬರಿಗೈನ ಮುಷ್ಟಿಯಲ್ಲಿ ದಾಳಿ ನಡೆಸಿದರು. ಹೋರಾಟ ಇಡೀ ರಾತ್ರಿ ಮುಂದುವರಿದಿತ್ತು. ಬೆಳಕು ಹರಿಯುವ ಹೊತ್ತಿಗೆ ಚೀನಿ ಸೈನಿಕನೊಬ್ಬ ಮೀಡಿಯಂ ಮಷಿನ್ ಗನ್ನಿಂದ ಮೇಜರ್ ಶೈತಾನ್ ಸಿಂಗ್ ಮೇಲೆ ದಾಳಿ ಮಾಡಿದ. ಮೇಜರ್ ಹೊಟ್ಟೆಗೆ ಬಲವಾದ ಪೆಟ್ಟು ಬಿತ್ತು. ಕೂಡಲೆ ಅವರು ಪಕ್ಕದಲ್ಲಿದ್ದ ತಮ್ಮ ‘ಬಡ್ಡಿ’ ರಾಮ್ ಚಂದರ್ಗೆ ತಾವು ಹಾಕಿದ್ದ ಬೆಲ್ಟ್ ತೆಗೆಯುವಂತೆ ಹೇಳಿದರು.
ರಾಮ್ ಚಂದರ್ ತಮ್ಮ ನಾಯಕನ ಹೊಟ್ಟೆಗೆ ಕೈಹಾಕಿ ನೋಡಿದರೆ ಕರುಳು ಸಂಪೂರ್ಣ ಹೊರಗೆ ಬಂದಿತ್ತು. ಅದಾಗಲೇ ಮೇಜರ್ ಏದುಸಿರು ಬಿಡುತ್ತಿದ್ದರು. ರಾಮ್ ಚಂದರ್ ಬೆಲ್ಟ್ ತೆಗೆಯಲಿಲ್ಲ. ಶೈತಾನ್ ಸಿಂಗ್ರನ್ನು ಅನಾಮತ್ತಾಗಿ ಹೊತ್ತುಕೊಂಡು ಎಂಟು ನೂರು ಮೀಟರ್ ದೂರಕ್ಕೆ ಓಡಿ ಬಂದರು. ತನ್ನನ್ನು ಹೀಗೆ ಹೊತ್ತು ಓಡುತ್ತಿದ್ದರೆ ಈ ಸೈನಿಕನೂ ಉಳಿಯುವುದಿಲ್ಲ ಎನ್ನುವುದು ಶೈತಾನ್ ಸಿಂಗ್ಗೆ ಖಚಿತವಾಗಿ, ‘ನಿನ್ನ ಜೀವ ಉಳಿಸಿಕೋ. ನಿಮ್ಮಲ್ಲಿ ಯಾರಾದರೂ ಒಬ್ಬರು ವಾಪಸ್ ಹೋಗಿ ನಾವೆಂತಹ ಹೋರಾಟ ಮಾಡಿದೆವು ಎಂಬುದನ್ನು ಸೈನ್ಯಕ್ಕೆ ಹೇಳಿ. ಇದು ನಾನು ಮುನ್ನಡೆಸುತ್ತಿರುವ ವೀರ ಸೈನಿಕರ ಪಡೆ. ಇಲ್ಲೇ ಪ್ರಾಣಬಿಡಲು ಇಚ್ಛಿಸುತ್ತೇನೆ. ನನ್ನನ್ನು ಕೆಳಗಿಳಿಸು. ಇದು ನನ್ನ ಆದೇಶ’. ಅವರ ಧ್ವನಿ ಕ್ಷೀಣಿಸಿತು. ಮೇಜರ್ ದೇಹತ್ಯಾಗ ಮಾಡಿದರು. ರಾಮ್ ಚಂದರ್ ಅಲ್ಲೇ ಪಕ್ಕದಲ್ಲಿದ್ದ ಬಂಡೆಯ ಕೊರಕಲಿನಲ್ಲಿ ಕಮಾಂಡರ್ನ ಮೃತದೇಹವನ್ನು ಬಚ್ಚಿಟ್ಟರು. ಅನಂತರ ರಾಮ್ ಚಂದರ್ ಸಹ ಶತ್ರುಗಳ ಗುಂಡಿಗೆ ಬಲಿಯಾದರು. ಮಾರನೆಯ ದಿನ ಬೆಳಗಿನ ಜಾವ 8.15ರ ವೇಳೆಗೆ ಇನ್ನೂ ಹಿಮ ಬೀಳುತ್ತಲೇ ಇತ್ತು. ಅದಾಗಲೇ ಚುಶೂಲ್ ಅಕ್ಷರಶಃ ಸ್ಮಶಾನವಾಗಿತ್ತು.
ಚೀನಿ ಸೈನ್ಯ ಬಹುತೇಕ ಎಲ್ಲರನ್ನೂ ಕೊಂದುಹಾಕಿತ್ತು. ಕೆಲವರನ್ನು ಸೆರೆಹಿಡಿದಿತ್ತು. ಅಂದು ಸಂಜೆ ನಿಹಾಲ್ ಎಂಬ ಸೈನಿಕ ಹೇಗೋ ಶತ್ರುಗಳ ಬಂಧನದಿಂದ ಬಿಡಿಸಿಕೊಂಡು ಬ್ರಿಗೇಡ್ ಹೆಡ್ಕ್ವಾರ್ಟರ್ ತಲುಪಿದ. ಆತನ ಮೈಯೆಲ್ಲಾ ರಕ್ತಸಿಕ್ತವಾಗಿತ್ತು. ತೀರಾ ನಿತ್ರಾಣಗೊಂಡಿದ್ದ. ಕೂಡಲೆ ಆತನಿಗೆ ಚಿಕಿತ್ಸೆ ನೀಡಿ ನೇರವಾಗಿ ದೆಹಲಿಗೆ ಕಳಿಸಲಾಯಿತು. ದೆಹಲಿಯ ರಕ್ಷಣಾ ಮಂತ್ರಾಲಯದ ಮುಂದೆ ರೆಸಾಂಗ್ ಲಾನಲ್ಲಿ ನಡೆದ ಇಡೀ ಘಟನೆಯನ್ನು ನಿಹಾಲ್ ಎಳೆ ಎಳೆಯಾಗಿ ಬಿಚ್ಚಿಟ್ಟ. ಆದರೆ ರಕ್ಷಣಾ ಮಂತ್ರಾಲಯ ತನ್ನದೇ ಸೈನಿಕನ ಮಾತುಗಳನ್ನು ನಂಬಲಿಲ್ಲ. ‘ನೀನು ಅಸತ್ಯ ಹೇಳುತ್ತಿರುವೆ. ಹಾಗಾಗಿ ನಿನ್ನನ್ನು ಕೋರ್ಟ್ ಮಾರ್ಷಲ್ ಮಾಡುತ್ತೇವೆ’ ಎಂದು ಬೆದರಿಕೆ ಹಾಕಿತು. ನಿಹಾಲ್ ‘ನಾನು ಹೇಳಿದ ಮಾತುಗಳಲ್ಲಿ ಅಸತ್ಯ ಏನಿದೆ?’ ಎಂದು ಪ್ರಶ್ನಿಸಿದ. ಆಗ ಅಧಿಕಾರಿಗಳು ‘123 ಮಂದಿ ಭಾರತೀಯ ಸೈನಿಕರ ತಂಡ 3000 ಮಂದಿ ಚೀನಿ ಸೈನಿಕರ ವಿರುದ್ಧ ಸೆಣೆಸಾಡಲು ಹೇಗೆ ಸಾಧ್ಯ?’ ಎಂದು ಕೇಳಿದರು.
ಅಂತಿಮವಾಗಿ ರಕ್ಷಣಾ ಇಲಾಖೆ ವಿಶೇಷ ಸತ್ಯಶೋಧನಾ ತಂಡವನ್ನು ರೆಸಾಂಗ್ ಲಾಗೆ ಕಳುಹಿಸಿತು. ಆ ಕದನ ಭೂಮಿಯಲ್ಲಿ ನಿಂತು ಯುದ್ಧದ ಕುರುಹುಗಳನ್ನು ವೀಕ್ಷಿಸಿದ ತಂಡ ಅಕ್ಷರಶಃ ಬೆಚ್ಚಿಬಿದ್ದಿತ್ತು. ಅಲ್ಲಿ 114 ಮಂದಿ ಭಾರತೀಯ ಸೈನಿಕರ ಶವಗಳು ಬಿದ್ದಿದ್ದವು. ಪ್ರತಿಯೊಬ್ಬರ ದೇಹದಲ್ಲೂ ಹತ್ತಾರು ಗುಂಡುಗಳು, ಲೋಹದ ಚೂರುಗಳು. ಒಂದು ಗುಂಡೂ ಬೆನ್ನಿಗೆ ಬಿದ್ದಿರಲಿಲ್ಲ. ಎಲ್ಲವೂ ಎದೆಗೆ ಬಿದ್ದಿತ್ತು. ಕಂಪನಿ ಕಮಾಂಡರ್ ಶೈತಾನ್ ಸಿಂಗ್ರ ಮೃತದೇಹವೂ ಸಿಕ್ಕಿತು. 123 ಸೈನಿಕ ಪಡೆ ಆ ಒಂದೇ ರಾತ್ರಿಯಲ್ಲಿ 1300 ಚೀನಿ ಸೈನಿಕರನ್ನು ಕೊಂದು ಹಾಕಿತ್ತು! ಈ ಹೋರಾಟ ನಡೆದ ಮರುದಿನವೇ ಚೀನಿ ಸೈನ್ಯ ಬೆದರಿ ಏಕಪಕ್ಷೀಯವಾಗಿ ಕದನ ವಿರಾಮ ಘೊಷಿಸಿತು. ನಂತರದ ದಿನಗಳಲ್ಲಿ ಚೀನಿ ಸೈನ್ಯ 60 ಸೇನಾಟ್ರಕ್ಗಳಲ್ಲಿ ತನ್ನ ಸೈನಿಕರ ಶವಗಳನ್ನು ಹೊತ್ತೊಯ್ದಿತ್ತು. 1962ರ ಸೋಲು ಭಾರತೀಯ ಸೈನಿಕರ ಸೋಲೇನು? ಅಲ್ಲ! ಅದು ದೆಹಲಿಯ ದೊರೆಗಳ ಸೋಲು. ಆ ಮಹಾನ್ ಹೋರಾಟಕ್ಕೆ ಮೇಜರ್ ಶೈತಾನ್ ಸಿಂಗ್ಗೆ ಭಾರತ ಸರ್ಕಾರ ‘ಪರಮವೀರ ಚಕ್ರ’ ನೀಡಿ ಗೌರವಿಸಿತು.
ಕಳೆದ ಆಗಸ್ಟ್ನಲ್ಲಿ ಭಾರತ-ಚೀನಾ ನಡುವೆ 1962ರಲ್ಲಿ ನಡೆದ ಆ ಇಡೀ ಯುದ್ಧಭೂಮಿಗೆ ಹೋಗಿದ್ದೆ. ಕಣ್ಮುಂದೆ 114 ಮಂದಿ ಪ್ರಾಣತ್ಯಾಗ ಮಾಡಿದ್ದ ರಣಭೂಮಿ ರೆಸಾಂಗ್ ಲಾ, ಚುಶೂಲ್. ಕೆಲವೇ ಅಡಿಗಳ ದೂರದಲ್ಲಿ ಎದುರು ಬದುರಿಗಿದ್ದ ಎರಡು ಹಸಿರು ಟೆಂಟ್ಗಳು. ಅದು ಭಾರತ-ಚೀನಾ ಗಡಿ, ಬಾರ್ಡರ್ ಮೀಟಿಂಗ್ ಪಾಯಿಂಟ್. ಪತ್ರಿಕೆಗಳಲ್ಲಿ ಓದುತ್ತಿದ್ದ ಫಿಂಗರ್-2, ಫಿಂಗರ್-4 ಕಣ್ಣೆದುರಿಗಿತ್ತು. ಅಲ್ಲಿಂದ ತುಸು ದೂರದಲ್ಲಿ ಮೇಜರ್ ಶೈತಾನ್ ಸಿಂಗ್ ಭಾಟಿ ಸ್ಮಾರಕ. ನಮ್ಮ ಇಂದಿನ ಮಕ್ಕಳಿಗೆ ನ್ಯೂಯಾರ್ಕ್, ಸಿಡ್ನಿ, ಲಂಡನ್ ಎಲ್ಲಿದೆ ಎನ್ನುವುದು ಚೆನ್ನಾಗಿ ಗೊತ್ತು. ಆದರೆ ಭಾರತೀಯ ಸೈನಿಕ ಬಡಿದಾಡುತ್ತಿರುವ ಸಿಯಾಚಿನ್ ಎಲ್ಲಿದೆ ಗೊತ್ತಿದೆಯಾ? ಇಂದಿನ ಪೀಳಿಗೆಗೆ ಸಿಯಾಚಿನ್, ರೆಸಾಂಗ್ ಲಾ, ಜಲಿಯನ್ವಾಲಾ ಬಾಗ್ನಂತಹ ತ್ಯಾಗ, ಬಲಿದಾನದ ಭೂಮಿಯನ್ನು ಪರಿಚಯಿಸದಿದ್ದರೆ ಅದು ಮಹಾ ಅಪರಾಧವಾದೀತು. ಯುವಪೀಳಿಗೆಗೆ ಭಾರತೀಯ ಸೈನಿಕರ ಧೈರ್ಯ, ಶೌರ್ಯ ಮತ್ತು ತ್ಯಾಗ, ಬಲಿದಾನದ ಪರಿಚಯವಾಗಬೇಕು. ಇದರಿಂದ ಅವರಲ್ಲಿ ದೇಶಭಕ್ತಿಯ ಕಿಡಿ ಹೊತ್ತಿಕೊಳ್ಳುವುದರಲ್ಲಿ ಅನುಮಾನವಿಲ್ಲ.
(ಲೇಖಕರು ಹವ್ಯಾಸಿ ಬರಹಗಾರರು)