ಪಾಕ್ ವಿರುದ್ಧ ಯುದ್ಧ ಮಾಡದೇ ಗೆದ್ದ ಭಾರತ!

ವಿಜಯವಾಣಿ (2)
Published on
(ಲೇಖಕರು ಬಿಜೆಪಿ ಹಿರಿಯ ವಕ್ತಾರರು)

ಪಹಲ್ಗಾಮ್ ಭಯೋತ್ಪಾದಕ ದಾಳಿ ಬಳಿಕ ಹತ್ತು ಹಲವು ಮುಖಗಳಲ್ಲಿ ಚರ್ಚೆಗಳು ನಡೆಯುತ್ತಿವೆ. ಮಹತ್ವದ ಅಥವಾ ಘನಘೊರ ಘಟನೆ ನಡೆದಾಗ ಒಂದು ಹಂತದ ಆರೋಗ್ಯಕರ ಚರ್ಚೆ ಸ್ವಾಗತಾರ್ಹ. ಆದರೆ ಮುಗ್ಧ ಜನರ ದಿಕ್ಕು ತಪ್ಪಿಸುವ ಚರ್ಚೆ ಅಥವಾ ಹೇಳಿಕೆಗಳು ದೇಶದ ಹಿತದ ದೃಷ್ಟಿಯಿಂದ ಅಪಾಯಕಾರಿ. ಆ ನಿಟ್ಟಿನಲ್ಲಿ ಸ್ಪಷ್ಟತೆ ಪಡೆಯುವ ಕಾರಣದಿಂದ ಕೆಲ ಪ್ರಶ್ನೆಗಳಿಗೆ ಉತ್ತರ ಪಡೆದುಕೊಳ್ಳೋಣ.

ಪಹಲ್ಗಾಮ್ ದಾಳಿ ಭದ್ರತಾ ಅಥವಾ ಗುಪ್ತಚರ ವೈಫಲ್ಯವೇ?

ಈ ರೀತಿಯ ಹೇಳಿಕೆಗಳನ್ನು ಕೇಳಿದಾಗ ಒಂದು ಕ್ಷಣ ಎಂಥವನಿಗಾದರೂ ಹಾಗೆ ಅನಿಸುವುದು ಸಹಜ. ಆದ ಕಾರಣ ಈ ವಿಚಾರದಲ್ಲಿ ಸ್ಪಷ್ಟತೆ ಬರುವ ದೃಷ್ಟಿಯಿಂದ ಒಂದಷ್ಟು ವಿಸõತ ಚರ್ಚೆ ಅವಶ್ಯಕ. ಭದ್ರತಾ ವೈಫಲ್ಯ, ಗುಪ್ತಚರ ವೈಫಲ್ಯ ಎಂದು ಆರೋಪಿಸುವವರು ಕಳೆದ ಹತ್ತು ವರ್ಷಗಳಲ್ಲಿ ದೇಶದ ಇತರ ಭಾಗಗಳಲ್ಲಿ ಒಂದೇ ಒಂದು ಭಯೋತ್ಪಾದಕ ದಾಳಿ ನಡೆದಿಲ್ಲ ಎಂಬುದನ್ನು ಗಮನಿಸಬೇಕು. ಹತ್ತು ವರ್ಷಗಳ ಹಿಂದೆ ದೇಶದ ನಾನಾ ಭಾಗಗಳಲ್ಲಿ ಅವ್ಯಾಹತವಾಗಿ ನಡೆಯುತ್ತಿದ್ದ ಭಯೋತ್ಪಾದಕ ದಾಳಿಗಳನ್ನು ಮತ್ತು ಕಳೆದ ಹತ್ತು ವರ್ಷಗಳ ಈಚೆಗೆ ಕಾಶ್ಮೀರದಲ್ಲಿ ಹಂತ ಹಂತವಾಗಿ ಕಡಿಮೆ ಆಗುತ್ತ ಬಂದಿರುವ ಭಯೋತ್ಪಾದಕ ದಾಳಿಗಳನ್ನು ತುಲನಾತ್ಮಕವಾಗಿ ನೋಡಬೇಕು. ಆಗ ಮಾತ್ರ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ದೇಶದಲ್ಲಿ ಭಯೋತ್ಪಾದಕ ದಾಳಿಗಳು ಶೇಕಡ 99.9ರಷ್ಟು ಕಡಿಮೆ ಆಗಿವೆ ಎಂಬುದು ಪ್ರಾಮಾಣಿಕವಾಗಿ ಮತ್ತು ದೇಶದ ಹಿತದೃಷ್ಟಿಯಿಂದ ಆಲೋಚನೆ ಮಾಡುವವರಿಗೆ ಮನವರಿಕೆ ಆಗುತ್ತದೆ.

ಇದಕ್ಕೆಲ್ಲ ಕಾರಣ ಏನು ಗೊತ್ತಾ?

ಬೇರೇನೂ ಅಲ್ಲ, ನಕ್ಸಲ್ ಹಿಂಸಾಚಾರದಿಂದ ಹಿಡಿದು ಇಸ್ಲಾಮಿಕ್ ಮೂಲಭೂತವಾದಿ ಭಯೋತ್ಪಾದಕತೆವರೆಗೆ ಎಲ್ಲ ತೆರನಾದ ಹಿಂಸಾಚಾರವನ್ನು, ದೇಶವಿರೋಧಿ ಚಟುವಟಿಕೆಯನ್ನು ಕೊನೆಗಾಣಿಸಬೇಕೆಂದು ಹತ್ತು ವರ್ಷಗಳ ಹಿಂದೆ ನರೇಂದ್ರ ಮೋದಿ ಸರ್ಕಾರ ಮಾಡಿದ ದೃಢ ಸಂಕಲ್ಪ ಕಾರಣ. ಅದು ಕೆಲ ಬಾಹ್ಯ ಮತ್ತು ಆಂತರಿಕ ಶತ್ರುಗಳ ಒಳಬೇಗುದಿಗೆ ಕಾರಣ. ಅದರ ಪರಿಣಾಮ ದೇಶದ ಮೇಲೆ ಬಾಹ್ಯ ಶತ್ರುಗಳು ಎರಗಿದಾಗಲೂ ಈ ತೆರನಾದ ವಾದಗಳನ್ನು ಕೆಲವರು ಮುಂದಿಡುತ್ತಾರೆ.

ವಿಧಿ 370 ಹಿಂಪಡೆದಿದ್ದು ಭಯೋತ್ಪಾದಕ ದಾಳಿಗೆ ಕಾರಣವೇ?

ಇಂಥ ಒಂದು ವಾದವನ್ನು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಮುಂದಿಟ್ಟಿದ್ದಾರೆ. ಇನ್ನು ಕೆಲವರು ಅದನ್ನು ಮೌನವಾಗಿ ಅನುಮೋದಿಸಿದ್ದಾರೆ. ವಾಸ್ತವ ಏನು? ಆರ್ಟಿಕಲ್ 370 ಕಾಶ್ಮೀರಕ್ಕೆ ಪ್ರತ್ಯೇಕ ವಿಶೇಷ ಸ್ಥಾನಮಾನವನ್ನು ಕಲ್ಪಿಸಿತ್ತು. ಒಂದು ಸ್ವತಂತ್ರ ದೇಶದೊಳಗೆ ಮತ್ತೊಂದು ದೇಶ, ಮತ್ತೊಂದು ಸಂವಿಧಾನ, ರಾಷ್ಟ್ರಧ್ವಜ, ಪ್ರಧಾನಿ ಇದನ್ನೆಲ್ಲ ಕಾಂಗ್ರೆಸ್ ಪಕ್ಷ ಅಥವಾ ಬೇರೆ ಯಾರೋ ಸಹಿಸಿಕೊಳ್ಳಬಹುದು. ಆದರೆ ಸ್ವಾಭಿಮಾನಿ ಭಾರತೀಯರು ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ. ಇನ್ನು ಭಯೋತ್ಪಾದಕ ಹಿಂಸಾಚಾರದ ವಿಚಾರ. ಆರ್ಟಿಕಲ್ 370 ಜಾರಿಯಲ್ಲಿದ್ದಾಗ ಕಾಶ್ಮೀರ ಶಾಂತಿಯಿಂದ ಕೂಡಿತ್ತೇ? ಇಲ್ಲವಲ್ಲ. ಆರ್ಟಿಕಲ್ 370 ಜಾರಿಯಲ್ಲಿದ್ದ ಕಾಲಘಟ್ಟದ ಉದ್ದಕ್ಕೂ ಕಾಶ್ಮೀರ ಅತಿ ಹೆಚ್ಚು ಪ್ರಕ್ಷುಬ್ಧತೆಗೆ ಸಿಲುಕಿ ನರಳುತ್ತಲೇ ಇತ್ತಲ್ಲವೇ? ಅದನ್ನು ಮೆಹಬೂಬಾ ಮತ್ತು ಅವರ ಪಟಾಲಂ ಮರೆಯುವುದು ಹೇಗೆ? ಅವರ ಲೆಕ್ಕದಲ್ಲಿ ಕಾಶ್ಮೀರ ಸಂಪೂರ್ಣ ಸ್ವತಂತ್ರವಾದಾಗ ಮಾತ್ರ ಶಾಂತಿ ನೆಲೆಸಲು ಸಾಧ್ಯ. ಹಾಗಾದರೆ ಕಾಶ್ಮೀರ ಭಾರತದಿಂದ ಪ್ರತ್ಯೇಕವಾಗಲು ಬಿಡಬೇಕಿತ್ತೆ? ಅದು ಅಸಾಧ್ಯದ ಮಾತು. ಆರ್ಟಿಕಲ್ 370 ರದ್ದತಿ ನಂತರ ಭಯೋತ್ಪಾದನೆಯೂ ಸಂಪೂರ್ಣ ಹತೋಟಿಗೆ ಬರುತ್ತದೆ. ಅಲ್ಲಿಯವರೆಗೆ ಕಾಯಬೇಕು.

ಪಾಕಿಸ್ತಾನಕ್ಕೆ ಭಾರತ ತಕ್ಕ ಪ್ರತ್ಯುತ್ತರ ಕೊಡಲಿಲ್ಲವೇ?

ಒಂದು ಪಹಲ್ಗಾಮ್ ದಾಳಿಯ ಹಿನ್ನೆಲೆಯಲ್ಲಿ ಭಾರತ ನೇರವಾಗಿ ಪಾಕಿಸ್ತಾನದ ಭಯೋತ್ಪಾದಕ ಹುತ್ತಕ್ಕೇ ಕೈ ಹಾಕಿದೆ. ರಾಜತಾಂತ್ರಿಕವಾಗಿ ಮತ್ತು ಸೇನೆಯ ಮೂಲಕ ತಕ್ಕ ಪ್ರತ್ಯುತ್ತರ ಕೊಟ್ಟಿದೆ. ಸಿಂಧು ಜಲ ಒಪ್ಪಂದ ರದ್ದತಿ, ವಾಯುಪ್ರದೇಶ ನಿರ್ಬಂಧ ಮತ್ತು ದೂತಾವಾಸ ಸಂಬಂಧ ಕಡಿದುಕೊಳ್ಳುವ ಮೂಲಕ ಪಾಕಿಸ್ತಾನಕ್ಕೆ ರಾಜತಾಂತ್ರಿಕ ಉತ್ತರ ನೀಡಿದರೆ, ಸೈನಿಕ ಕಾರ್ಯಾಚರಣೆ ಮೂಲಕ ಪಾಕಿಸ್ತಾನದ ಒಳಗೆ ನುಗ್ಗಿ ಪಾಕಿಸ್ತಾನವ ಬಗ್ಗುಬಡಿದು ತಾನು ಏನೆಂಬುದನ್ನು ಅತ್ಯಂತ ದಿಟ್ಟವಾಗಿ ತೋರಿಸಿದೆ.

ಭಾರತ ಅಮೆರಿಕದ ಮಾತು ಕೇಳಿ ಯುದ್ಧ ನಿಲ್ಲಿಸಿತೇ?

ಇದು ಕೂಡ ಒಂದು ಹುಸಿ ವಾದ. ಹಾಗೆ ನೋಡಿದರೆ ಪಾಕ್ ವಿರುದ್ಧ ಭಾರತ ಯುದ್ಧ ಘೊಷಿಸಿರಲಿಲ್ಲ. ನಡೆಸಿದ್ದು ಕಾರ್ಯಾಚರಣೆ ಅಷ್ಟೇ. ಅದೇ ಯುದ್ಧಕ್ಕಿಂತ ಮಿಗಿಲಾಗಿ, ಪಾಕ್ ಮುಟ್ಟಿ ನೋಡಿಕೊಳ್ಳುವಂತಿತ್ತು. ಭಾರತ ಯುದ್ಧಪಿಪಾಸು ದೇಶವಲ್ಲ, ಹಾಗಂತ ವೈರಿಗೆ ಶರಣಾಗುವ ಹೇಡಿ ರಾಷ್ಟ್ರವೂ ಅಲ್ಲ. ಪಾಕಿಸ್ತಾನ ಸತತವಾಗಿ ಮಾಡುತ್ತಿರುವ ಕಿತಾಪತಿಗೆ ಒಂದು ದಿಟ್ಟ ಉತ್ತರ ಕೊಡಬೇಕಿತ್ತು, ನೀಡಿಯಾಗಿದೆ. ಪಾಕಿಸ್ತಾನದ ಸೈನಿಕ ಬಲದಿಂದ ಹಿಡಿದು, ಪೊಳ್ಳು ಅಣ್ವಸ್ತ್ರ ಬೆದರಿಕೆಯವರೆಗೆ ಎಲ್ಲವನ್ನೂ ಒಳಹೊಕ್ಕು ಜಾಲಾಡಿ ಅಲ್ಲಿನ ಸೇನಾ ಮುಖ್ಯಸ್ಥರು ಅಂಗಲಾಚಿದ ಬಳಿಕ ಒಂದು ರಾಜತಾಂತ್ರಿಕ ಜಾಣ್ಮೆಯನ್ನು ಮೆರೆದಿದೆ. ಅದು ಯುದ್ಧ ವಿರಾಮವಲ್ಲ, ಪಾಕಿಸ್ತಾನಕ್ಕೆ ಕೊಟ್ಟಿರುವ ಕಟ್ಟ ಕಡೆಯ ಕ್ಷಮೆ ಎಂದು ಭಾವಿಸಬೇಕು. ಭಾರತದ ನೇತೃತ್ವ ಸೇನೆಗೆ ಕೊಟ್ಟ ಫ್ರೀ ಹ್ಯಾಂಡ್, ಅದರ ಮುಂದಿನ ಪರಿಣಾಮವನ್ನು ಎದುರಿಸಲು ನಡೆಸಿರುವ ಪೂರ್ವ ಸಿದ್ಧತೆ ಎಂದು ಭಾವಿಸಬೇಕು.

ಮುಂದೆ ನಡೆಯುವ ಒಂದೇ ಒಂದು ಭಯೋತ್ಪಾದಕ ದಾಳಿಯೂ ಯುದ್ಧಾಹ್ವಾನ ಎಂಬುದರ ಅರ್ಥ ಏನು? ಅದರ ಅರ್ಥ ಇಷ್ಟೇ, ಪಹಲ್ಗಾಮ್ ದಾಳಿಯ ನಂತರ ಭಾರತೀಯ ಸೇನೆ ಪಾಕಿಸ್ತಾನಕ್ಕೆ ತೋರಿಸಿದ್ದು ಟ್ರೇಲರ್ ಮಾತ್ರ, ಪೂರ್ತಿ ಸಿನಿಮಾ ನೋಡಬೇಕೆಂದರೆ ಇನ್ನೊಂದು ಬಾರಿ ಭಾರತದ ವಿರುದ್ಧ ಪಾಕಿಸ್ತಾನ ಒಂದು ಸಣ್ಣ ದುಸ್ಸಾಹಸಕ್ಕೆ ಕೈಹಾಕಬೇಕು.

ಅಮೆರಿಕಕ್ಕೆ ಭಾರತ ಶರಣಾಯಿತೆ?

ಪ್ರಚಾರಪ್ರಿಯ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡಿದ ಒಂದು ಕಿತಾಪತಿ ಕೆಲವು ದೇಶವಿರೋಧಿ ಪ್ರಭೃತಿಗಳ ಬಾಯಿಗೆ ಗ್ರಾಸ ಆಗಿರುವುದು ನಿಜ. ಇಂಥ ಒಂದು ಮಿಥ್ಯೆಗೆ ಉತ್ತರ ಸಿಗಬೇಕಾದರೆ ಪಾಕಿಸ್ತಾನದ ವಿರುದ್ಧ ಭಾರತ ನಡೆಸಿದ ಮಿಲಿಟರಿ ಕಾರ್ಯಾಚರಣೆ ನಂತರ ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ದೇಶವನ್ನುದ್ದೇಶಿಸಿ ಮಾಡಿದ ಪ್ರಸಾರ ಭಾಷಣವನ್ನು ಶಾಂತವಾಗಿ ಆಲಿಸಬೇಕು. ಆ ಭಾಷಣದ ಸಂದರ್ಭದಲ್ಲಿ ಪ್ರಧಾನಿ ಮೋದಿ ಒಂದು ಮಾತನ್ನು ಹೇಳುತ್ತಾರೆ, ‘ದೇಶದ ಸಾರ್ವಭೌಮತೆ ರಕ್ಷಣೆ ವಿಚಾರದಲ್ಲಿ ಭಾರತವು ಜಗತ್ತಿನ ಯಾವುದೇ ಶಕ್ತಿಯೊಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ’ ಎಂಬುದು ಆ ಮಾತು. ಇದನ್ನು ಅಮೆರಿಕದ ಅಧ್ಯಕ್ಷರ ಉದ್ಧಟತನಕ್ಕೆ ಕೊಟ್ಟ ಉತ್ತರ ಎಂದು ಬೇರೆ ಹೇಳಬೇಕೆ? ‘ನಾನು ಮಧ್ಯಸ್ಥಿಕೆ ವಹಿಸಿರಲಿಲ್ಲ’ ಎಂದು ಸ್ವತಃ ಡೊನಾಲ್ಡ್ ಟ್ರಂಪ್ ಹೇಳಿದ್ದನ್ನು ಯಾರೂ ಮರೆಯಬಾರದು. ಭಾರತದ ವಿದೇಶಾಂಗ ಇಲಾಖೆಯೂ ಇದನ್ನು ಹೇಳಿದೆ.

ಪಿಒಕೆ ವಶಪಡಿಸಿಕೊಳ್ಳಬೇಕಿತ್ತು: ಹೌದು, ಅಂತಹ ಸುವರ್ಣಾವಕಾಶ 70ರ ದಶಕದಲ್ಲೇ ಭಾರತಕ್ಕೆ ಲಭಿಸಿತ್ತು. 1971ರ ಭಾರತ- ಪಾಕ್ ಯುದ್ಧದ ಸಂದರ್ಭದಲ್ಲಿ ಅಂತಹ ಸುವರ್ಣಾವಕಾಶವನ್ನು ಭಾರತಕ್ಕೆ ನಮ್ಮ ಹೆಮ್ಮೆಯ ಸೇನೆ ಮತ್ತು ಸೈನಿಕರು ತಂದುಕೊಟ್ಟಿದ್ದರು. 93 ಸಾವಿರ ಪಾಕ್ ಸೈನಿಕರನ್ನು ಭಾರತ ಸೇನೆ ಸೆರೆ ಹಿಡಿದು ತಂದರೆ ಆಗಿನ ಪ್ರಧಾನಿ ಇಂದಿರಾ ಗಾಂಧಿ ಸುಖಾಸುಮ್ಮನೆ ಅದೇ ಸೈನಿಕರನ್ನು ಪಾಕಿಸ್ತಾನಕ್ಕೆ ಬಿಟ್ಟುಕೊಟ್ಟು ಮಹಾಪ್ರಮಾದ ಮಾಡಿಬಿಟ್ಟರು. ಪಿಒಕೆ ವಾಪಸ್ ಪಡೆಯಲು ಅದು ಸುವರ್ಣಾವಕಾಶ ಆಗಿತ್ತು. ಇಂದಿರಾ ವೃಥಾ ಕೈಚೆಲ್ಲಿದರು. ಭಾರತ ಇಂದು ಎದುರಿಸುತ್ತಿರುವ ಎಲ್ಲ ಭಯೋತ್ಪಾದಕ ಸವಾಲುಗಳಿಗೆ ಅದೇ ಮೂಲ ಕಾರಣ.

ಭಾರತ ನೇತೃತ್ವದ ಪಣ ಏನು ಗೊತ್ತಾ?

ದೇಶವನ್ನುದ್ದೇಶಿಸಿ ಪ್ರಸಾರ ಭಾಷಣ ಮಾಡುವ ವೇಳೆ ಪ್ರಧಾನಿ ನರೇಂದ್ರ ಮೋದಿ ಇನ್ನೂ ಒಂದು ಸಂಗತಿ ಪ್ರಸ್ತಾಪಿಸಿದರು. ‘ಇನ್ನು ಮುಂದೆ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಯುವುದಾದರೆ ಅದು ಎರಡೇ ಎರಡು ವಿಷಯಗಳ ಕುರಿತು. ಒಂದು, ಭಯೋತ್ಪಾದನೆ ಮಟ್ಟಹಾಕುವ ಕುರಿತು. ಎರಡನೆಯದು, ಪಾಕ್ ಆಕ್ರಮಿತ ಕಾಶ್ಮೀರವನ್ನು ಭಾರತಕ್ಕೆ ಬಿಟ್ಟುಕೊಡುವ ಕುರಿತಾದ್ದು’. ಈ ಮಾತಿನಲ್ಲಿ ಪಾಕಿಸ್ತಾನಕ್ಕೆ ಮತ್ತು ಅಮೆರಿಕ ಅಧ್ಯಕ್ಷರಿಬ್ಬರಿಗೂ ಖಡಕ್ ಸಂದೇಶವಿದೆ ಎಂಬುದನ್ನು ಎಲ್ಲರೂ ಅರಿಯಬೇಕಿದೆ. ಅಂಥ ಕ್ಷಣಗಳಿಗೆ ಎದುರು ನೋಡೋಣ. ಭಾರತ-ಪಾಕಿಸ್ತಾನ ನಡುವಿನ ಯುದ್ಧದ ಸನ್ನಿವೇಶದ ನಡುವೆ ಏರ್ ಮಾರ್ಷಲ್ ಎ.ಕೆ. ಭಾರ್ತಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುವಾಗ ಕೆಲ ಪತ್ರಕರ್ತರು, ‘ಪಾಕಿಸ್ತಾನದ ಕಡೆ ಎಷ್ಟು ಸಾವು ನೋವು ಆಗಿದೆ’ ಎಂದು ಕೇಳಿದರು. ಆಗ ಅವರು ಕೊಟ್ಟ ಉತ್ತರ ಚೆನ್ನಾಗಿತ್ತು, ‘ನಮ್ಮ ಕೆಲಸ ವೈರಿಯ (ಪಾಕ್) ಮೇಲೆ ಎರಗುವುದು ಮಾತ್ರ, ಹೆಣದ ಬ್ಯಾಗ್ ಎಣಿಸುವುದಲ್ಲ’ ಎಂದಿದ್ದರು.

ಈಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತ-ಪಾಕ್ ಯುದ್ಧದ ವೇಳೆ ಭಾರತದ ಎಷ್ಟು ವಿಮಾನಗಳು ಪತನವಾಗಿವೆ ಎಂಬುದರ ಲೆಕ್ಕ ಕೊಡಿ ಅಂತ ರಚ್ಚೆ ಹಿಡಿದಿದ್ದಾರೆ. ಇವರಿಗೇನು ಉತ್ತರ ಕೊಡುವುದು?! ಇವರು ಭಾರತದ ಪರ ಮಾತನಾಡುತ್ತಿದ್ದಾರಾ, ಇಲ್ಲ, ಪಾಕಿಸ್ತಾನದ ಪರ ಮಾತನ್ನು ಆಡುತ್ತಿದ್ದಾರಾ? ಅಷ್ಟು ಮಾತ್ರವಲ್ಲ ಪಾಕಿಸ್ತಾನದ ಶೆಲ್ ದಾಳಿಯಿಂದ ಕಾಶ್ಮೀರದ ಪೂಂಚ್ ಪ್ರದೇಶಕ್ಕೆ ಆದ ಹಾನಿಯ ಸ್ಥಳ ಸಮೀಕ್ಷೆಗೆ ರಾಹುಲ್ ಹೊರಟಿದ್ದಾರೆ. ಅಲ್ಲಿಗೆ ಕಾಂಗ್ರೆಸ್ ಮತ್ತೆ ಯಥಾಸ್ಥಿತಿಗೆ ಮರಳಿತು ಎಂಬುದನ್ನು ಅವರು ಖಚಿತಪಡಿಸಲು ಹೊರಟಿದ್ದಾರೆ. ಇದು ಎಂದೂ ಗುಣವಾಗದ ಕಾಯಿಲೆ ಎಂಬುದು ಮತ್ತೊಮ್ಮೆ ಖಚಿತವಾಯಿತು.

ಭಾರತಕ್ಕೆ ಇಸ್ರೇಲ್ ಮಾತ್ರ ಮಾದರಿ: ಇಡೀ ಜಗತ್ತಿನ ವಿರೋಧ ಎದುರಿಸಿ ಇಸ್ರೇಲ್ ತನ್ನ ಶಕ್ತಿ ಸಾಮರ್ಥ್ಯವನ್ನು ಮಾತ್ರ ನೆಚ್ಚಿಕೊಂಡು ಬದುಕುತ್ತಿದೆ. ಭಾರತಕ್ಕೂ ಈಗ ಅದೇ ಮಾದರಿ. ಪಾಕ್ ಭಯೋತ್ಪಾದಕರಿಗೆ ಪಾಕಿಸ್ತಾನ ಸರ್ಕಾರ ಮಾತ್ರವಲ್ಲ, ಭಾರತದಲ್ಲಿ ಕೆಲ ಕುಲ ಬಾಂಧವರು ಮತ್ತು ವೋಟ್​ಬ್ಯಾಂಕ್ ನೆಚ್ಚಿಕೊಂಡ ಪಕ್ಷಗಳಿಂದ ಹಿಡಿದು, ದೂರದ ಟರ್ಕಿವರೆಗೆ ಎಲ್ಲೂ ತಮ್ಮ ಮೂಲಗುಣ ತೋರ್ಪಡಿಸಿದ್ದಾರೆ. ಭಾರತವೂ ಈಗ ತನ್ನ ಶಕ್ತಿ ಸಾಮರ್ಥ್ಯವನ್ನು ಬಲಪಡಿಸಿಕೊಂಡು ಬದುಕುವ ಸಂಕಲ್ಪ ಮಾಡಿ ಮುಂದಡಿ ಇಡುತ್ತಿದೆ.

ಸ್ಥಳೀಯರ ಬೆಂಬಲ ಕಾರಣ!: ಈ ಹಿಂದೆ ಭಾರತದಲ್ಲಿ ನಡೆಯುತ್ತಿದ್ದ ಭಯೋತ್ಪಾದಕ ದಾಳಿಯಿಂದ ಹಿಡಿದು, ಇತ್ತೀಚೆಗೆ ಕಾಶ್ಮೀರದ ಪಹಲ್ಗಾಮ್ಲ್ಲಿ ಭಯೋತ್ಪಾದಕರು ನಡೆಸಿದ ನರಮೇಧದವರೆಗೆ ಎಲ್ಲೆಡೆಯೂ ಭಯೋತ್ಪಾದಕರಿಗೆ ಬೆಂಬಲ ಕೊಡುತ್ತಿದ್ದದ್ದು ಸ್ಥಳೀಯ ಸಮಾಜ ಬಾಂಧವರು ಮತ್ತು ಅವರಿಗೆ ಒತ್ತಾಸೆಯಾಗಿ ನಿಲ್ಲುವ ಓಲೈಕೆ ನೀತಿಯ ರಾಜಕೀಯ ನೇತೃತ್ವ. ಅದು ನಿಲ್ಲುವವರೆಗೆ ಭಾರತದಲ್ಲಿ ಭಯೋತ್ಪಾದಕ ಅಥವಾ ಮತೀಯ ಶಕ್ತಿಗಳಿಗೆ ಕಡಿವಾಣ ಹಾಕುವುದು ಕಷ್ಟಸಾಧ್ಯದ ಕೆಲಸ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net