

ನವದೆಹಲಿ: ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಈ ವರ್ಷದ ನವೆಂಬರ್ ಹೊತ್ತಿಗೆ ಅಂತಿಮಗೊಳ್ಳಲಿದೆ ಎಂಬ ಆಶಾಭಾವನೆಯನ್ನು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಮಂಗಳವಾರ ವ್ಯಕ್ತಪಡಿಸಿದ್ದಾರೆ.
ಮುಂಬೈಯಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಮಾತನಾಡಿದ ಅವರು, ಭೌಗೋಳಿಕ ರಾಜಕೀಯ ಸಮಸ್ಯೆಗಳು ಉಭಯ ದೇಶಗಳ ವ್ಯಾಪಾರ ಮಾತುಕತೆಗಳ ಮೇಲೆ ಪರಿಣಾಮ ಉಂಟುಮಾಡಿವೆ. ಆದರೂ ಶೀಘ್ರದಲ್ಲೇ ಮಾತುಕತೆ ಪುನರಾರಂಭವಾಗಿ, ಸರಿಯಾದ ಹಾದಿಯಲ್ಲಿ ಮುಂದುವರೆಯಲಿದೆ. ಫೆಬ್ರವರಿಯಲ್ಲಿ ಆಗಿರುವ ಮಾತುಕತೆಯ ಪ್ರಕಾರ, ನವೆಂಬರ್ ವೇಳೆಗೆ ಒಪ್ಪಂದ ಅಂತಿಮಗೊಳ್ಳಬಹುದು. ಭಾರತದ ಸರಬರಾಜು ಸರಪಳಿಗಳು ಬಲವಾಗಿವೆ, ಯಾವ ದೇಶದ ಮೇಲೆಯೂ ಭಾರತ ಅವಲಂಬಿತವಲ್ಲ. ಇದು ಆತ್ಮನಿರ್ಭರ ಭಾರತದ ಭರವಸೆಯನ್ನು ತೋರಿಸುತ್ತದೆ ಎಂದು ಹೇಳಿದರು.
ಅಮೆರಿಕ ಜೊತೆಗಿನ ಮಾತುಕತೆಗಳಲ್ಲಿ ಈಗಾಗಲೇ ಐದು ಸುತ್ತುಗಳು ಪೂರ್ಣಗೊಂಡಿವೆ. ಆ. 25ರಂದು ಆರನೇ ಸುತ್ತಿಗೆ ಅಮೆರಿಕ ತಂಡ ಭಾರತಕ್ಕೆ ಬರಬೇಕಿತ್ತು. ಆದರೆ ಅಷ್ಟರಲ್ಲೇ ಅಮೆರಿಕ ಅಧ್ಯಕ್ಷ ಟ್ರಂಪ್ ಆ. 27ರಿಂದ ಅನ್ವಯವಾಗುವಂತೆ ಭಾರತೀಯ ವಸ್ತುಗಳ ಮೇಲೆ ಶೇ. 50ರಷ್ಟು ಸುಂಕ ವಿಧಿಸಿದ್ದರಿಂದ ಉಂಟಾದ ಉದ್ವಿಗ್ನತೆ ಗಮನಿಸಿ ಅಮೆರಿಕ ತಂಡ ತನ್ನ ಭೇಟಿಯನ್ನು ಮುಂದೂಡಿತು. ಹೊಸ ದಿನಾಂಕ ಇನ್ನೂ ಘೊಷಣೆಯಾಗಿಲ್ಲ. ಪ್ರಸ್ತುತ ಭಾರತ- ಅಮೆರಿಕ ವ್ಯಾಪಾರ ಮೌಲ್ಯ 191 ಬಿಲಿಯನ್ ಡಾಲರ್ (15.8 ಲಕ್ಷ ಕೋಟಿ ರೂ.) ಇದೆ. 2030ರೊಳಗೆ ಇದನ್ನು 500 ಬಿಲಿಯನ್ ಡಾಲರ್ (41.3 ಲಕ್ಷ ಕೋಟಿ ರೂ.) ಮಾಡುವ ಗುರಿ ಇದೆ. ಇದಲ್ಲದೆ, ಯೂರೋಪಿಯನ್ ಯೂನಿಯನ್ ಜೊತೆ ನಡೆಯುತ್ತಿರುವ ಸ್ವತಂತ್ರ ವ್ಯಾಪಾರ ಒಪ್ಪಂದ ಮಾತುಕತೆಗಳು ಅಂತಿಮ ಹಂತದಲ್ಲಿದ್ದು, 13ನೇ ಸುತ್ತು ಸೆ. 8ರಂದು ನವದೆಹಲಿಯಲ್ಲಿ ಆರಂಭವಾಗಲಿದೆ. ಈ ವರ್ಷದ ಅಂತ್ಯದೊಳಗೆ ಒಪ್ಪಂದವನ್ನು ಪೂರ್ಣಗೊಳಿಸುವ ನಿರೀಕ್ಷೆ ಇದೆ.