ಮಾನವಸಹಿತ ಬಾಹ್ಯಾಕಾಶಯಾನಕ್ಕೆ ಸಜ್ಜಾಗಿದೆ ಭಾರತ; ಗಗನಕ್ಕೆ ನೆಗೆಯಲಿದ್ದಾನೆ ಮಾನವ...

GAGANA
Published on

ಇದೇ ಮೊದಲ ಬಾರಿಗೆ ಮಾನವಸಹಿತ ಬಾಹ್ಯಾಕಾಶಯಾನಕ್ಕೆ ಭಾರತ ಸಜ್ಜಾಗಿದೆ. ‘ಗಗನಯಾನ’ ಎಂಬ ಯೋಜನೆ ಅಡಿ ಒಬ್ಬರನ್ನು ನಭಕ್ಕೆ ಕಳುಹಿಸಲು ಆಯ್ಕೆ ಮಾಡಲಾಗಿದೆ. ಏನಿದು ಯೋಜನೆ? ಮಾನವ ಅಲ್ಲಿಗೆ ಹೋಗಲು ಇಲ್ಲಿಯವರೆಗೆ ಸಾಧ್ಯವಾಗದ್ದು ಏಕೆ? ಇಲ್ಲಿದೆ ಉತ್ತರ...

‘ಹಲೋ... ಹಲೋ... ಸುಮಾ ಎಲ್ಲಿಂದ ಮಾತಾಡ್ತಿರೋದು ನೀನು?’

‘ಅದೇ ಸುನೀತಾ, ನಾನೀಗ ಭೂಮಿಯಿಂದ ಮೇಲೆ 100 ಕಿಲೋ ಮೀಟರ್ ಇದ್ದೀನಿ , ಇನ್ನೊಂದು ಸ್ವಲ್ಪ ಹೊತ್ತು ಬಂದೆ...’

ಹೌದು... ಹೀಗೆಲ್ಲಾ ನೀವು ಸ್ನೇಹಿತರೊಡನೆ ಮಾತನಾಡುವ ಕಾಲ ದೂರವಿಲ್ಲ. ಬೆಂಗಳೂರು, ಮೈಸೂರು, ಕಲ್ಬುರ್ಗಿ , ಮುಂಬೈ , ಅಮೆರಿಕ ಎಂದು ಮಾತಾಡುವ ಹಾಗೆ ಇನ್ನು ಬಾಹ್ಯಾಕಾಶ ಅಥವಾ ಸ್ಪೇಸ್​ನಿಂದ ನಿಮ್ಮ ಗೆಳೆಯ, ಗೆಳತಿಯರಿಗೆ ಫೋನ್ ಮಾಡಬಹುದು. ಹೇಗೆ ? ಸ್ವಲ್ಪ ತಿಳಿದುಕೊಳ್ಳೋಣ ಬನ್ನಿ. ಮಂಗಳಯಾನ, ಚಂದ್ರಯಾನ ಯೋಜನೆಗಳ ಬಗ್ಗೆ ನೀವು ಕೇಳಿಯೇ ಇದ್ದೀರಿ.

ಈ ಯೋಜನೆಗಳ ಸಂದರ್ಭದಲ್ಲಿ ಗಗನಕ್ಕೆ ಹೋಗಿದ್ದು ಕೇವಲ ಸಲಕರಣೆಗಳೇ ವಿನಾ ಒಬ್ಬರೂ ಮನುಷ್ಯರು ಭಾರತದಿಂದ ಇದುವರೆಗೂ ಹೋಗಿಲ್ಲ. ಅಂದರೆ ಅವೆಲ್ಲವೂ ಮಾನವರಹಿತ ಯೋಜನೆಗಳಾಗಿದ್ದವು. ಆದರೆ ಒಬ್ಬ ಮನುಷ್ಯ ನಿಜವಾಗಿಯೂ ಅಲ್ಲಿ ಹೋದರೆ ಇಲ್ಲಿ ಏನಾಗುತ್ತದೆ?

ಅಬ್ಬಬ್ಬಾ... ನೆನೆಸಿಕೊಂಡರೆ ಮೈ ರೋಮಾಂಚನವಾಗುತ್ತದೆಯಲ್ಲವೆ? ಇಂಥದ್ದೊಂದು ಸಾಹಸಕ್ಕೆ ಈಗ ಭಾರತ ಕೈಹಾಕಿದೆ. 2022ಕ್ಕೆ ಭಾರತದ ಧ್ವಜ ಹಿಡಿದುಕೊಂಡ ಭಾರತೀಯನೊಬ್ಬನನ್ನು ನಮ್ಮ ದೇಶ ಭೂಮಿಯಿಂದಾಚೆಗೆ ಆಕಾಶಕ್ಕೆ ಕಳುಹಿಸಲಿದೆ. ಈ ಯೋಜನೆಯ ಹೆಸರು ‘ಗಗನಯಾನ’. ಇದಕ್ಕಾಗಿ ಈಗಾಗಲೇ ಭರದ ಸಿದ್ಧತೆಯೂ ನಡೆದಿದೆ.

ಕಷ್ಟದ ಕೆಲಸ: ಈ ಯೋಜನೆಯಲ್ಲಿ ಎರಡು ಭಾಗಗಳಿವೆ. ಒಂದನೆಯದ್ದು, ಭೂಮಿಯ ವಾತಾವರಣವನ್ನು ಬಿಟ್ಟು ಹೋಗುವ ನೌಕೆ ಆರಾಮಾಗಿ ಭೂಮಿಯನ್ನು ಸುತ್ತು ಹೊಡೆಯಬೇಕು ಮತ್ತು ಇನ್ನೊಂದು ಕೆಲಸ ಮುಗಿದ ನಂತರ ಮತ್ತೆ ಭೂಮಿಯ ವಾತಾವರಣವನ್ನು ಪ್ರವೇಶ ಮಾಡಿ ‘ಸೇಫ್ ಲ್ಯಾಂಡಿಂಗ್’ ಮಾಡಬೇಕು.

ಮೊದಲನೆಯ ಕೆಲಸ ಇಸ್ರೋಗೆ ಸುಲಭದ ಕೆಲಸವೇ. ಏಕೆಂದರೆ ಅದಕ್ಕೆ ತುಂಬಾ ರಾಕೆಟ್​ಗಳನ್ನು ಉಡ್ಡಯಣ ಮಾಡಿರುವ ಅಭ್ಯಾಸವಿದೆ. ರಾಕೆಟ್​ಗಳನ್ನು ಬೇರೆ ದೇಶದವರಿಗೂ ಮಾಡಿಕೊಡುವ ಸಾಮರ್ಥ್ಯವೂ ಅದಕ್ಕಿದೆ. ಆದರೆ ಸ್ವಲ್ಪ ಕಷ್ಟವಿರುವುದು ಆ ರಾಕೆಟನ್ನು ಮತ್ತೆ ಸುರಕ್ಷಿತವಾಗಿ ಭೂಮಿಗೆ ವಾಪಸ್ ಕರೆತರುವುದು.

ಭಾರತದ ಹೆಮ್ಮೆಯ ಪುತ್ರಿ ಗಗನಯಾತ್ರಿ ಕಲ್ಪನಾ ಚಾವ್ಲಾ ಹೆಸರು ಕೇಳಿರಬೇಕಲ್ಲವೆ? 2003ರಲ್ಲಿ ವಾಪಸ್ ಬರುವ ಸಂದರ್ಭದಲ್ಲಿಯೇ ಅವರು ಸುಟ್ಟು ಹೋಗಿದ್ದರು. ಇದು ಏಕೆ? ಏಕೆಂದರೆ, ಸ್ಪೇಸ್ ವಾಹನಗಳು ಭೂಮಿಯ ವಾತಾವರಣ ಪ್ರವೇಶಿಸುವ ತನಕ ಇಂಧನವನ್ನು ಬಳಸುವುದಿಲ್ಲ. ಕೇವಲ ಭೂಮಿಯ ಗುರುತ್ವ ಬಲವನ್ನು ಬಳಸಿಕೊಂಡು ಭೂಮಿಯ ದಿಕ್ಕಿಗೆ ಧುಮುಕುತ್ತವೆ.

ಆಗ ಅದರ ವೇಗವು ಸೆಕೆಂಡಿಗೆ ಸುಮಾರು ಐದೂವರೆ ಕಿ.ಮೀ. ಇರುತ್ತದೆ. ಇಂಥ ಸಂದರ್ಭದಲ್ಲಿ ವಾತಾವರಣರಹಿತ ಪ್ರದೇಶದಲ್ಲಿ ಆತ್ಯಂತ ವೇಗವಾಗಿ ಸಾಗುವಾಗ ತೊಂದರೆಗಳಿರುವುದಿಲ್ಲ. ಆದರೆ ಭೂವಾತಾವರಣವನ್ನು ಪ್ರವೇಶಿಸುವಾಗ ಗಾಳಿಯ ಪದರಗಳೊಡನೆ ಗುದ್ದಾಡುವುದರಿಂದ ಆ ವಾಹನದ ಹೊರಮೈನ ತಾಪಮಾನವು 1,650 ಡಿಗ್ರಿ ಸೆಲ್ಸಿಯಸ್ ತನಕ ತೀವ್ರಗತಿಯಲ್ಲಿ ಏರುತ್ತದೆ. ವಾಹನದ ಮುಂದಿನ ತುದಿಗೆ ಅಂಥ ತಾಪಮಾನವನ್ನು ತಡೆದುಕೊಳ್ಳುವ ಕವಚವನ್ನು ಕೊಡುವ ಮೂಲಕ ರಕ್ಷಣೆಯನ್ನು ಪಡೆಯಬಹುದು.

ಕಲ್ಪನಾ ಚಾವ್ಲಾ ಇದ್ದ ವಾಹನದಲ್ಲಿ ಶಾಖ ನಿರೋಧಕ ವ್ಯವಸ್ಥೆ ಸರಿಯಾಗಿ ಕಾರ್ಯ ನಿರ್ವಹಿಸದ ಕಾರಣ ಭೂವಾತಾವರಣವನ್ನು ಪ್ರವೇಶಿಸುವಾಗ ಕೊಲಂಬಿಯಾ ಷಟಲ್ ವಾಹನ ದಹಿಸಿಹೋಯಿತು.

2014ರಿಂದ ಪ್ರಯೋಗ

2022ರ ಹೊತ್ತಿಗೆ ಭಾರತೀಯ ಷಟಲ್ ನಮ್ಮ ಗಗನಯಾನಿಗಳನ್ನು (ವ್ಯೋಮಾನಾಟ್) ಬಾಹ್ಯಾಕಾಶಕ್ಕೆ ಕರೆದೊಯ್ಯುವುದಕ್ಕೆ ಸಿದ್ಧತೆ 2014ರಲ್ಲಿಯೇ ಮಾಡಿದೆ. ಭೂವಾತಾವರಣಕ್ಕೆ ಮರುಪ್ರವೇಶಮಾಡುವ ಸಾಮರ್ಥ್ಯವಿರುವ ಸಂಪುಟ ಅಂದರೆ Crew module atmospheric re entry equipment ಅನ್ನು ಬಾಹ್ಯಾಕಾಶಕ್ಕೆ ಕೊಂಡೊಯ್ದು ಕರೆತರುವ ಒಂದು ಪ್ರಯೋಗವನ್ನು ಮಾಡಿತ್ತು. ಜಿ ಎಸ್ ಎಲ್ ವಿ ವಾಹನವು ಭೂಮಿಯಿಂದ 126 ಕಿ.ಮಿ ಎತ್ತರದಿಂದ 3775 ಕಿಲೊ ಗ್ರಾಂ ತೂಕದ ಈ ಸಂಪುಟವನ್ನು ಬಿಡುಗಡೆ ಮಾಡಿತ್ತು. ಭೂಮಿಯ ವಾತಾವರಣವನ್ನು ಯಶಸ್ವಿಯಾಗಿ ಪ್ರವೇಶಿಸಿದ ಸಂಪುಟವು ಬಂಗಾಳ ಕೊಲ್ಲಿಯಲ್ಲಿ ಅಂಡಮಾನ್ ಸಮೀಪ ಇಳಿಯಿತು. ಅದನ್ನು ಬಂಧಿಸಿದ್ದ ಪ್ಯಾರಾಚೂಟ್​ಗಳು ಈ ಇಳಿಯುವಿಕೆಯನ್ನು ಸರಾಗಗೊಳಿಸಿತು.

ಈ ಗಗನಯಾನ ಸಂಪುಟ ಭೂಮಿಯಿಂದ 400 ಕಿಲೋಮೀಟರ್ ಎತ್ತರದ ಕಕ್ಷೆಗೆ ಕರೆದೊಯ್ದು ಭೂಮಿಯನ್ನು ಸುತ್ತಿಸಿ , ನಿರ್ದಿಷ್ಟ ಸುತ್ತಾಟದ ನಂತರ ಕಕ್ಷೆಯಿಂದ ಜಾರಿ, ಭೂವಾತಾವರಣವನ್ನು ದಾಟಿ ಸಮುದ್ರದ ಮೇಲೆ ಬೀಳಬೇಕು. ಒಂದು ವಾರದ ಅವಧಿಯ ಈ ಪರ್ಯಟನೆಯ ಯಶಸ್ವಿ ನಿರ್ವಹಣೆಗೆ ‘ಬಾಹ್ಯಾಕಾಶದಾಳದ ಸಂಪರ್ಕಜಾಲ - ಡೀಪ್ ಸ್ಪೇಸ್ ನೆಟ್ವರ್ಕ್’ ನೆರವು ಬೇಕು. ಚಂದ್ರಯಾನಕ್ಕೆ ಬಾಹ್ಯಕಾಶದಾಳದ ಸಂಪರ್ಕ ಲಭ್ಯವಾಗಿತ್ತು.

ಮಂಗಳಯಾನದ ಆಂಟೆನಾ ಸುಗಮವಾಗಿಸಿತ್ತು. ಇದು ಗಗನಯಾನಕ್ಕೂ ನೆರವಾಗಲಿದೆ. ಬಾಹ್ಯಾಕಾಶ ಬೆರಗಿನಂಗಳ. ಮನುಷ್ಯ ಅಲ್ಲಿ ಓಡಾಡಿದ ಮೇಲೆ, ಅವನನ್ನು ಚಂದ್ರನ ಮೇಲೋ, ಮಂಗಳನ ಮೇಲೋ ಇಳಿಸಿ ಅಲ್ಲಿ ಬದುಕಬಹುದಾ ಎಂಬ ಆಸೆ ಇಲ್ಲ. ಇಲ್ಲಿಂದ ರಜೆಗೆ ಮೈಸೂರಿಗೆ ಹೋದ ಹಾಗೆ ಮಂಗಳಕ್ಕೆ ಹೋಗಿ ಬರುತ್ತೀನಿ ಅಮ್ಮ ಬೈ ಎಂದು ಹೇಳುವ ಕಾಲ ದೂರವಿಲ್ಲ.

ಪ್ರಾಣಿಗಳು ಇಳಿದಿವೆ

ರಷ್ಯಾ, ಅಮೆರಿಕ ಮತ್ತು ಚೀನಾ ದೇಶಗಳು ಮನುಷ್ಯರನ್ನು ಕಳುಹಿಸುವ ಮೊದಲು ಒಂದು ಪ್ರಾಣಿಯನ್ನು ಕಳುಹಿಸಿ ಪ್ರಯೋಗ ಮಾಡಲಾಗಿತ್ತು. ಆ ಪ್ರಾಣಿಗಳು ಆ ವಾತಾವರಣದ ವ್ಯತ್ಯಾಸಗಳನ್ನು ಹೇಗೆ ತಡೆದುಕೊಳ್ಳುತ್ತವೆಂದು ಪ್ರಯೋಗ ಮಾಡಲಾಗಿತ್ತು. ಫೂ›ಟ್ ಫ್ಲೈ, ಕೋತಿ, ನಾಯಿ ಮತ್ತು ಇಲಿಗಳು ಮನುಷ್ಯರಿಗಿಂತ ಮೊದಲು ಬಾಹ್ಯಾಕಾಶದ ಅಂಗಳಕ್ಕೆ ಇಳಿದಿವೆ. 1947ರಲ್ಲೇ ಅಮೆರಿಕ ಫೂ›ಟ್ ಫ್ಲೈಗಳನ್ನು ಕಳುಹಿಸಿ ಅದನ್ನು ಕ್ಷೇಮವಾಗಿ ಭೂಮಿಗೆ ಕರೆತರುವಲ್ಲಿ ಯಶಸ್ವಿಯಾಯಿತು.

1950-60ರ ದಶಕದಲ್ಲಿ ಅಮೆರಿಕ ಕೋತಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಿತು. ಅವುಗಳ ದೇಹದಲ್ಲಿ ಸೆನ್ಸರುಗಳನ್ನು ಅಳವಡಿಸಿ, ಅರವಳಿಕೆ ಮದ್ದು ನೀಡಿ ಅವುಗಳನ್ನು ಬಾಹ್ಯಾಕಾಶಕ್ಕೆ ಲಾಂಚ್ ಮಾಡಲಾಯಿತು. ಕೆಲವು ಭೂಮಿಯ ವಾತಾವರಣಕ್ಕೆ ಬರುವಾಗ ಸಾವನ್ನಪ್ಪಿದವು. ಸೋವಿಯತ್ ರಷ್ಯಾ ಸಹ 1950- 60 ರ ಸಮಯದಲ್ಲಿ ನಾಯಿಗಳನ್ನು ವಾಹನದಲ್ಲಿ ಇಟ್ಟು ಉಡ್ಡಯಣ ಮಾಡಿತ್ತು.

ಲೈಕಾ ಎಂಬ ನಾಯಿಯೂ ಸಹ ಭೂಮಿಯ ವಾತಾವರಣಕ್ಕೆ ಬಂದಾಗ ಸಾವನ್ನಪ್ಪಿತ್ತು. ಚೀನಾ ಹಂದಿಗಳನ್ನು ಲಾಂಚ್ ಮಾಡಿತ್ತು. ಅದಾದ ಮೇಲೆ ಫ್ರಾನ್ಸ್, ಅರ್ಜೆಂಟೀನಾ ಇನ್ನೆಷ್ಟೋ ದೇಶಗಳು ಅಳಿಲು, ಹಂದಿ, ಆಮೆಗಳನ್ನೆಲ್ಲಾ ಬಾಹ್ಯಾಕಾಶಕ್ಕೆ ಕಳುಹಿಸಿ ಮನುಷ್ಯನನ್ನು ಕಳಿಸಲು ಯೋಗ್ಯವಾ ಅಲ್ಲವಾ ಎಂಬ ಅಧ್ಯಯನ ಮಾಡುವ ಸಲುವಾಗಿ ಕಷ್ಟ ಪಟ್ಟಿವೆ.

ಜಿಗಿಯಲಿದ್ದಾನೆ ರೋಬೋಟ್

ಭಾರತ ಯಾವ ಪ್ರಾಣಿಯ ಮೇಲೂ ಪ್ರಯೋಗ ಮಾಡದೇ ಇರಲು ನಿರ್ಧರಿಸಿದೆ. ಅದರ ಬದಲು ಒಮ್ಮೆ ಹುಮಾನಾಯಿಡ್ ರೊಬಾಟ್​ಗಳನ್ನು (ಮನುಷ್ಯನ ಗುಣ ಲಕ್ಷಣಗಳನ್ನು ಹೊಂದಿರುವ ರೊಬಾಟ್) ಕಳುಹಿಸಿ ಒಂದಷ್ಟು ಪ್ರಯೋಗಗಳನ್ನು ಮಾಡಲು ನಿರ್ಧರಿಸಿದೆ. ನಂತರ ಮನುಷ್ಯ, ಮತ್ತು ಅವನ ಹೊಸ ಪ್ರಯೋಗಗಳು. ಈ ವ್ಯೋಮಾನಾಟ್ ಅಥವಾ ಗಗನಯಾನಿಗಳನ್ನು ಅಗಲೇ ಗುರುತಿಸಿ ಅವರನ್ನು ತರಬೇತಿಗೊಳಿಸಲಾಗುತ್ತಿದೆ.

ಅವರಿಗೆ ಮೈಸೂರಿನ ಲ್ಯಾಬ್​ಗಳಲ್ಲಿ ಬೇಕಾಗುವ ಸಂಸ್ಕರಿಸಿದ ಆಹಾರಗಳ ಬಗ್ಗೆ ಸಂಶೋಧನೆಯೂ ನಡೆಯುತ್ತಿದೆ. 2018ರಲ್ಲಿ ಪ್ಯಾಡ್ ಅಬಾರ್ಟ್ ಟೆಸ್ಟ್ (ನೌಕೆಯಿಂದ ಎಸ್ಕೇಪ್ ಆಗುವ ವ್ಯವಸ್ಥೆ) ಸಹ ಯಶಸ್ವಿಯಾಗಿ ಪೂರೈಸಿರುವುದರ ಫಲವಾಗಿ 2022ಕ್ಕೆ ಭಾರತದ ಗಗನಯಾನ ಪೂರ್ಣ ತಯಾರಿಯಲ್ಲಿದೆ. 124 ಬಿಲಿಯನ್ ರಷ್ಟು ಖರ್ಚು ಇರುವ ಈ ಪ್ರಾಜೆಕ್ಟ್ ಅಂತಾರಾಷ್ಟ್ರೀಯ ಸ್ಪೇಸ್ ಸ್ಟೇಷನ್ ಸೇರುವುದಿಲ್ಲ.

ತನ್ನದೇ ಇನ್ನೂ ಕೆಳಮಟ್ಟದಲ್ಲಿ ಹೊಸ ಸ್ಪೇಸ್ ಸ್ಟೇಷನ್ ಹುಟ್ಟು ಹಾಕುವ ಪ್ರಯತ್ನ ಮಾಡುತ್ತದೆ. ರಷ್ಯಾದಿಂದ ಅಗಾಧ ನೆರವು ವ್ರೋಮಾನಾಟ್​ಗಳ ಆಯ್ಕೆಯಲ್ಲಿ ನಡೆಯಲಿದೆ. ಗಗನಯಾನಿಗಳ ಫಿಟ್ನೆಸ್, ಆರೋಗ್ಯ , ದೇಹದ ತೂಕ, ಇವೆಲ್ಲದರ ತುಲನೆ ಮತ್ತು ಅದನ್ನು ಉತ್ತಮಗೊಳಿಸುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಇಷ್ಟೊಂದು ಖರ್ಚು ಮಾಡುವ ಈ ಯಾನ ಭಾರತಕ್ಕೆ ಅವಶ್ಯಕ. ಏಕೆಂದರೆ ಹದಿನೈದು ಸಹಸ್ರ ಜನರಿಗೆ ಉದ್ಯೋಗ ಲಭಿಸಲಿದೆ. ಯೋಜನೆಗೆ ಅಗತ್ಯವಾದ ಉಪಕರಣಗಳು, ಯಂತ್ರಗಳು, ಕಂಪ್ಯೂಟರಿಗೆ ಬೇಕಾದ ತಂತ್ರಾಂಶಗಳು , ಪರೀಕ್ಷಾ ಉಪಕರಣಗಳ ಹೊಸ ಟೆಕ್ನಾಲಜಿ ಮತ್ತು ಮಾಡುವ ಸಂಸ್ಥೆಗಳು ಹುಟ್ಟುತ್ತದೆ.

ಭಾರತದ ಹೆಗ್ಗಳಿಕೆ

ಇದುವರೆಗೂ ಬಾಹ್ಯಾಕಾಶಕ್ಕೆ ಮನುಷ್ಯರನ್ನು ಕಳುಹಿಸಿದ ದೇಶಗಳು ರಷ್ಯಾ (ಸೋವಿಯತ್ ಒಕ್ಕೂಟ), ಅಮೆರಿಕ ಮತ್ತು ಚೀನಾ. ಭಾರತ ಇಡೀ ವಿಶ್ವದಲ್ಲಿ ನಾಲ್ಕನೇ ರಾಷ್ಟ್ರವಾಗುತ್ತದೆ.

| ಮೇಘನಾ ಸುಧೀಂದ್ರ 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net