ಕಡಿಮೆ ಖರ್ಚಿನಲ್ಲಿ ಮನೆಯ ಅಂದ ಹೆಚ್ಚಿಸಿ

Home
Published on

ಬೆಂಗಳೂರು: ಮನೆ ಸ್ವಂತದ್ದಿರಲಿ, ಬಾಡಿಗೆಯದಿರಲಿ ಅವರ ಆರ್ಥಿಕ ಸ್ಥಿತಿಗೆ ಅನುಗುಣವಾಗಿ ಮನೆಯನ್ನು ಹೊಂದಿರುತ್ತಾರೆ. ಹೀಗೆ ಮನೆ ಚಿಕ್ಕದಿರಲಿ ದೊಡ್ಡದಿರಲಿ ಅಂದವಾಗಿದ್ದರೆ ನೋಡಲು ಚೆಂದ. ಮನೆಯನ್ನು ಅಂದಗಾಣಿಸಲು ಒಂದು ಹೊಸ ಲುಕ್ ನೀಡಬೇಕಾದ ಅಗತ್ಯವಿದ್ದು, ಅದಕ್ಕೆಲ್ಲ ತುಂಬಾ ಹಣ ಖರ್ಚಾಗುತ್ತದೆ ಎಂಬುದೂ ನಿಜ. ಆದರೆ, ಸ್ವಲ್ಪ ಬುದ್ಧಿ ಉಪಯೋಗಿಸಿದರೆ ಸಣ್ಣ ಪುಟ್ಟ ಬದಲಾವಣೆಗಳ ಮೂಲಕ ಕಡಿಮೆ ಖರ್ಚಿನಲ್ಲಿ ಮನೆಯ ಅಂದ ಹೆಚ್ಚಿಸಲು ಸಾಧ್ಯ.

ಮನೆ ನೋಡಲು ಅಂದವಾಗಿ ಚೆಂದವಾಗಿ ಕಂಡರೆ ಮನಸ್ಸಿಗೂ ನೆಮ್ಮದಿ ಸಿಗುತ್ತದೆ. ಅದಕ್ಕಾಗಿ ಕಾಲಕಾಲಕ್ಕೆ ಮನೆಯನ್ನು ಸ್ವಚ್ಚಗೊಳಿಸುವುದರ ಜತೆಗೆ ಒಂದಷ್ಟು ಬದಲಾವಣೆಗಳನ್ನು ಮಾಡುತ್ತಿರಬೇಕು. ಇದು ಅಡುಗೆ ಮನೆಯಿಂದ ಆರಂಭವಾಗಿ ಮನೆಯ ಎಲ್ಲ ಭಾಗಗಳಿಗೂ ಅನ್ವಯಿಸಲಿದೆ.

ಅನಗತ್ಯ ವಸ್ತುಗಳನ್ನು ತುಂಬಿಕೊಳ್ಳಬೇಡಿ

ಅಡುಗೆ ಮನೆಯಲ್ಲಿ ಅನಗತ್ಯವಾಗಿ ಪಾತ್ರೆಗಳು ಹಾಗೂ ದಿನಸಿ ಡಬ್ಬಗಳನ್ನು ಇಡದೆ ಅಗತ್ಯಕ್ಕೆ ತಕ್ಕಷ್ಟು ಹೊಂದಿರಬೇಕು. ದಿನಸಿ ಪದಾರ್ಥಗಳ ಡಬ್ಬಿಗಳನ್ನು ಅದರ ಗಾತ್ರಕ್ಕೆ ಅನುಗುಣವಾಗಿ ಜೋಡಿಸಬೇಕು. ಪಾತ್ರೆಗಳ ಬಳಕೆಯಲ್ಲಿ ದೈನಂದಿನ ಅಗತ್ಯ ಎಷ್ಟು ಬೇಕೋ ಅಷ್ಟು ಇದ್ದರೆ ಒಳಿತು. ಅವುಗಳನ್ನು ಮನೆ ತುಂಬ ಹರಡಿಕೊಳ್ಳುವ ಬದಲು ಪಾತ್ರೆ ಸ್ಟಾ್ಯಂಡ್​ನಲ್ಲಿ ಜೋಡಿಸಬೇಕು. ಇದರಿಂದ ಜಾಗದ ಉಳಿತಾಯವೂ ಆಗಲಿದೆ. ನೋಡಲು ಚೆಂದ ಕಾಣಲಿದೆ. ನಂತರ ದೇವರ ಕೋಣೆ ಕಡಿಮೆ ಪ್ರಮಾಣದಲ್ಲಿ ಪೂಜಾ ಸಾಮಗ್ರಿಗಳು ಹಾಗೂ ಫೋಟೋಗಳು ಇದ್ದರೆ ಸಾಕು. ಹೋದಕಡೆಯಲ್ಲೆಲ್ಲ ದೇವರ ಫೋಟೋ ಹಾಗೂ ವಿಗ್ರಹಗಳನ್ನು ತಂದು ದೇವರ ಕೋಣೆಯಲ್ಲಿ ತುಂಬುವ ಬದಲು ನಿಮ್ಮ ಮನೆ ದೇವರ ಒಂದು ಫೋಟೋ, ಕಳಶ, ದೀಪ ಹೀಗೆ ಕಡಿಮೆ ವಸ್ತುಗಳಿದ್ದರೆ ಸ್ವಚ್ಛಗೊಳಿಸಲು ಸುಲಭ ನೋಡಲು ಚೆಂದ.

ಅಕರ್ಷಕ ಲೈಟಿಂಗ್

ಮನೆಯ ಅಂದಕ್ಕೆ ಮತ್ತಷ್ಟು ಮೆರುಗನ್ನು ನೀಡುತ್ತವುದು ಲೈಟಿಂಗ್. ಇತ್ತೀಚೆಗೆ ಒಳಾಂಗಣ ವಿನ್ಯಾದಲ್ಲಿ ಪಿಒಪಿ ಬಾರಿ ಸದ್ದು ಮಾಡುತ್ತಿದ್ದು, ನಿಮ್ಮ ಆರ್ಥಿಕತೆಗೆ ಅನುಗುಣವಾಗಿ ಮೇಲ್ಛಾವಣಿಗೆ ಪಿಒಪಿ ಅಳವಿಡಿಸಿ ಅದಕ್ಕೆ ಬಣ್ಣ ಬಣ್ಣದ ಲೈಟ್ ಹಾಕುವುದರಿಂದ ಮನೆಗೆ ರಿಚ್ ಲುಕ್ ನೀಡುತ್ತದೆ. ಇದೂ ದುಬಾರಿ ಎನ್ನಿಸಿದರೆ ತಮ್ಮ ಅಭಿರುಚಿಗೆ ತಕ್ಕಂತೆ ಹ್ಯಾಂಗಿಂಗ್ ಲೈಟ್​ಗಳನ್ನು ಬಳಸಬಹುದು ಮೇಲ್ಛಾವಣಿಯನ್ನು ಅಂದಗಾಣಿಸಬಹುದು.

ಕರ್ಟನ್ ಮತ್ತು ಕಾರ್ಪೆಟ್​ಗಳ ಬಳಕೆ

ಮನೆಯ ಕಿಟಕಿ ಹಾಗೂ ಬಾಗಿಲುಗಳಿಗೆ ಗೋಡೆಯ ಬಣ್ಣಕ್ಕೆ ಹೊಂದುವಂತೆ ಕರ್ಟನ್​ಗಳನ್ನು ಅಳವಡಿಸುವುದು, ಕಾರ್ಪೆಟ್​ಗಳನ್ನು ಬಳಕೆ ಮಾಡುವುದು, ಇರುವ ಸೋಫಾಗೆ ಹೊಸ ಕುಷನ್ ಮತ್ತು ಕವರ್​ಗಳನ್ನು ಬಳಸುವುದು, ಬಾಗಿಲಿಗೆ ಆಕರ್ಷಕ ಮ್ಯಾಟ್ ಹಾಕುವುದು ಹೀಗೆ ಸಣ್ಣ ಪುಟ್ಟ ಬದಲಾವಣೆಗಳ ಮೂಲಕವೇ ಮನೆಯ ಅಂದ ಹೆಚ್ಚಿಸಬಹುದು. ವೆಂಟಿಲೇಟರ್​ಗಳಲ್ಲಿ ಮನಿ ಪ್ಲಾಂಟ್ ಸೇರಿ ಮನೆಯ ಒಳಗೆ ಬೆಳೆಸಬಹುದಾದ ಚಿಕ್ಕಚಿಕ್ಕ ಗಿಡಗಳಿಂದ ಗ್ರೀನ್ ಟನ್ ನೀಡಬಹುದು. ಹೀಗೆ ಸಣ್ಣ ಪುಟ್ಟ ಬದಲಾವಣೆಗಳ ಮೂಲಕ ಮನೆಯ ಹೆಚ್ಚು ಖರ್ಚಿಲ್ಲದೆ ಮನೆಯ ಅಂದ ಹೆಚ್ಚಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net