ವಿಶ್ವಗುರು: ಚೀನಾದೊಂದಿಗೆ ಯುದ್ಧವಾದ್ರೆ ಯಾರ್ ಗೆಲ್ತಾರೆ?!

Edit page
Published on

ಭಾರತ ನಡೆಸುತ್ತಿದ್ದ ರಸ್ತೆ ಕಾಮಗಾರಿಗಳನ್ನು ಕಂಡು ಚೀನಾ ಉರಿದುಕೊಂಡಿದೆ ಎಂದು ಎಲ್ಲರೂ ಹೇಳುವಾಗಲೇ ಮೋದಿ ಹೆಲಿಕಾಪ್ಟರುಗಳಲ್ಲಿ ರಸ್ತೆ ಕೆಲಸಕ್ಕೆ ಬೇಕಾದ ಯಂತ್ರಗಳನ್ನು ತಲುಪಿಸಿ ಇನ್ನೂ ಹೆಚ್ಚು ರಸ್ತೆಯನ್ನು ವೇಗವಾಗಿ ಮಾಡಿಸುವ ಸಂಕಲ್ಪಕ್ಕೆ ತಾವು ಬದ್ಧ ಎಂಬುದನ್ನು ಎಲ್ಲರಿಗೂ ಕೇಳುವಂತೆಯೇ ಸಾರಿದ್ದಾರೆ!

ಊರಿಗೆ ಊರೇ ನಿಮ್ಮ ವಿರುದ್ಧ ತಿರುಗಿ ಬಿದ್ದಾಗ ನಿಮ್ಮೊಡನೆ ಎಂದಿಗೂ ಗಲಾಟೆಗಿಳಿಯದ ಆದರೆ ನಿಮ್ಮ ಪರವಾಗಿಯೂ ಮಾತನಾಡದ ನೆರೆಯವನೊಂದಿಗೆ ನಿಮ್ಮ ವರ್ತನೆ ಹೇಗಿರುತ್ತದೆ? ಪರಿಸ್ಥಿತಿ ತಿಳಿಯಾಗುವವರೆಗೆ ಆದಷ್ಟೂ ನೆರೆಯವನೊಡನೆ ಸಂಭಾಳಿಸಿಕೊಂಡು ಹೋಗಲು ಯತ್ನಿಸುವಿರಿ ತಾನೇ? ಊರೆಲ್ಲ ನಿಮ್ಮ ವಿರುದ್ಧ ಆಗಿರುವಾಗ ನಿಮ್ಮ ನೆರೆಯವನೊಂದಿಗೂ ಜಿದ್ದಿಗೆ ಬೀಳುವಿರೆಂದರೆ ಅದು ಮೂರ್ಖತನವೆಂದೇ ಅರ್ಥ. ಚೀನಾಕ್ಕೆ ಈಗ ಇಂಥದ್ದೇ ಸ್ಥಿತಿ. ಯುರೋಪಿನ ರಾಷ್ಟ್ರಗಳು ಚೀನಾದ ಪರವಾಗಿ ಮಾತನಾಡುತ್ತಿಲ್ಲ. ಆಸ್ಟ್ರೇಲಿಯಾ ತಿರುಗಿಬಿದ್ದಿದೆ. ಆಫ್ರಿಕಾ ರಾಷ್ಟ್ರಗಳಲ್ಲಿ ಬಹುತೇಕ ಮಾತನಾಡಲಾಗದ ಸ್ಥಿತಿಗೆ ಬಂದುಬಿಟ್ಟಿದ್ದಾರೆ. ಇನ್ನು ಏಷ್ಯಾದಲ್ಲಿ ಪಕ್ಕದಲ್ಲೇ ಇರುವ ಜಪಾನ್ ಚೀನಾದ ವಿರುದ್ಧ ಭುಸುಗುಟ್ಟುತ್ತಿದೆ. ರಷ್ಯಾಕ್ಕೂ ಚೀನಾದ ಗಡಿ ಕ್ಯಾತೆಗಳು ಸಾಕು ಸಾಕಾಗಿಹೋಗಿವೆ. ಈಗ ಚೀನಾದ ವಿರುದ್ಧವಾಗಿ ಮಾತನಾಡದೇ ತೀರಾ ಬಾಗಿ ಬೆಂಡಾಗದೇ ಇರುವ ಬಲಯುತ ರಾಷ್ಟ್ರ ಭಾರತ ಒಂದೇ!

ಲಡಾಖ್​ನಲ್ಲಿ ಚೀನಾ ನಡೆಸಿರುವ ಅಕ್ರಮ ನುಸುಳುವಿಕೆಯ ಪರಿಣಾಮ ಭಾರತ ಮುಕ್ತವಾಗಿಯೇ ಚೀನಾದ ವಿರುದ್ಧ ಮಾತನಾಡಲು ಪ್ರೇರೇಪಿಸುವಂತಿದೆ. ನಮ್ಮಲ್ಲನೇಕರಿಗೆ ಅದರಲ್ಲೂ ನೆಹರು ಕಾಲದಲ್ಲೇ ಚೀನಾದ ಬಳಿ ಬಾಸುಂಡೆ ಬರುವಂತೆ ಬಾರಿಸಿಕೊಂಡ ಕಾಂಗ್ರೆಸ್ಸಿಗರಿಗೆ ಚೀನಾದ ಹೆಸರು ಕೇಳಿದರೆ ನಿದ್ದೆಯಲ್ಲೂ ನಡುಕ. ಹೀಗಾಗಿ ಚೀನಾ ಗುಟುರು ಹಾಕಿದಾಗಲೆಲ್ಲ ಮರುಮಾತನಾಡದೆ ಶರಣಾಗಿಬಿಡುವ ಕೆಟ್ಟ ಚಾಳಿ ಅವರಿಗಿದ್ದೇ ಇತ್ತು. ಆದ್ದರಿಂದಲೇ ಕೊಬ್ಬಿ ಮೆರೆದಿತ್ತು ಚೀನಾ. ಈ ರೀತಿ ಉರಿಯುವ ಅಗ್ನಿಗೆ ತುಪ್ಪ ಸುರಿಯಲೆಂದು ಕಮ್ಯುನಿಸ್ಟರಿದ್ದೇ ಇದ್ದಾರಲ್ಲ, ಅವರು ‘ಚೀನಾದ ವಿರುದ್ಧ ಭಾರತ ಯುದ್ಧಕ್ಕೆಳಸಿದರೆ ಸೋತು ಸುಣ್ಣವಾಗುವುದು ಖಾತ್ರಿ’ ಎಂದು ಪದೇಪದೆ ಹೇಳುವ ಪ್ರಯತ್ನ ಮಾಡುತ್ತಿರುತ್ತಾರೆ. ಬಹುತೇಕ ಬಾರಿ ಚೀನಾದ ಸೈನಿಕರು ‘ಒಳ ನುಸುಳಿಬಿಟ್ಟಿದ್ದಾರೆ, ಭಾರತದ ಭೂಭಾಗ ವಶಪಡಿಸಿಕೊಂಡುಬಿಟ್ಟಿದ್ದಾರೆ’ ಎಂಬಂತಹ ಸುಳ್ಳು ಸುದ್ದಿಗಳನ್ನು ಹೇಳುತ್ತಲೇ ಕಾಲ ಕಳೆದುಬಿಡುತ್ತಾರೆ. ಆ ಮೂಲಕ ಭಾರತೀಯನೆದೆಯಲ್ಲಿ ಚೀನಾದ ಕುರಿತಂತೆ ಆತಂಕವನ್ನು ಸದಾ ಜೀವಂತವಾಗಿಡುವ ಪ್ರಯತ್ನ ಅದು. ಆದರೆ ಇತ್ತೀಚೆಗೆ ಸ್ಟಿಮ್ಸನ್ ಸೆಂಟರ್​ನ ಡಾ. ಫ್ರಾಂಕ್ ಒಡೊನಿಲ್ ಮತ್ತು ಸ್ವಿಸ್ ಫೆಡರಲ್ ಇನ್​ಸ್ಟಿಟ್ಯೂಟ್​ನ ಡಾ. ಅಲೆಕ್ಸಾಂಡರ್ ಬೊಲ್​ಫ್ರಾಸ್ ಎರಡೂ ರಾಷ್ಟ್ರಗಳನ್ನೂ ತುಲನೆ ಮಾಡುತ್ತ ಒಂದು ವರದಿ ಮಂಡಿಸಿದ್ದಾರೆ. ಭಾರತೀಯರ ಶಕ್ತಿಯನ್ನು ಭಾರತೀಯರಿಗೇ ಪರಿಚಯಿಸುವ ಶುದ್ಧ ಅಂತಮುಖಿ ಯಾತ್ರೆಯಂತಿದೆ ಆ ವರದಿ!

ಈ ಸಂಶೋಧನೆಯಂತೆ ಲಡಾಖ್​ನ ಭಾಗದಲ್ಲಿ ಚೀನಾದ 2ರಿಂದ 2.30 ಲಕ್ಷ ಸೈನಿಕರ ಎದುರಾಗಿ ಭಾರತ ಸುಮಾರು 2.25 ಲಕ್ಷ ಸೈನಿಕರನ್ನು ನಿಲ್ಲಿಸುವ ಸಾಮರ್ಥ್ಯ ಹೊಂದಿದೆ. ಅಷ್ಟೇ ಅಲ್ಲ, ಅಧ್ಯಯನದ ಪ್ರಕಾರ ಈ ಗಡಿಯಲ್ಲಿ ಚೀನಾಕ್ಕೆ 2 ಲಕ್ಷದಷ್ಟು ಸೈನಿಕರನ್ನು ನಿಲ್ಲಿಸುವ ಸಾಮರ್ಥ್ಯವೇ ಇಲ್ಲ. ರಷ್ಯಾದೊಂದಿಗಿನ ಚೀನಾದ ಕಿರಿಕಿರಿಯೂ ಅಗಾಧವೇ ಇರುವುದರಿಂದ ಮತ್ತು ಷಿಂಜಿಯಾನ್, ಟಿಬೆಟ್​ಗಳ ಕ್ರಾಂತಿಯನ್ನು ದಮನ ಮಾಡಲಿಕ್ಕಾಗಿ ಬಹುತೇಕ ಸೈನಿಕರನ್ನು ಬಳಸಿಕೊಳ್ಳಬೇಕಾಗುತ್ತದೆ. ಸ್ಪಷ್ಟವಾಗಿ ಹೇಳಬೇಕೆಂದರೆ ಭಾರತದ ಗಡಿಯಲ್ಲಿ ಚೀನಾದ ಬಹುತೇಕ ಸೈನಿಕರು ಗಡಿಯಿಂದ ದೂರದಲ್ಲೇ ಕೆಲಸ ನಿರ್ವಹಿಸಬೇಕಾದರೆ ಭಾರತ ಏಕಮುಖಿಯಾಗಿ ಚೀನಾದ ವಿರುದ್ಧ ತನ್ನ ದೃಷ್ಟಿಯನ್ನು ಕೇಂದ್ರೀಕರಿಸುತ್ತದೆ. ಭಾರತದ ಈ ಬದಿಯ ಗಡಿಗಳಲ್ಲಿ ಎದುರಾಳಿಯಾಗಿ ನಿಲ್ಲುವ ಸಾಮರ್ಥ್ಯವುಳ್ಳ ರಾಷ್ಟ್ರ ಯಾವುದೂ ಇಲ್ಲದಿರುವುದರಿಂದ ಭಾರತ ತನ್ನ ಅಷ್ಟೂ ದೃಷ್ಟಿಯನ್ನು ಚೀನಾದ ವಿರುದ್ಧವೇ ಕೇಂದ್ರೀಕರಿಸುವುದು ಸಾಧ್ಯವಾಗುತ್ತದೆ. ಇದು ಅರ್ಥವಾಗಿರುವುದರಿಂದಲೇ ಕಮ್ಯುನಿಸ್ಟ್ ರಾಷ್ಟ್ರವಾಗಿರುವ ನೇಪಾಳವನ್ನು ಚೀನಾ ಎತ್ತಿಕಟ್ಟುವ ಪ್ರಯತ್ನ ಮಾಡಿರೋದು. ಆದರೆ ಭಾರತಕ್ಕೆ ಸರಿಸಮವಾಗಿ ನಿಲ್ಲುವ ಯಾವ ಸಾಮರ್ಥ್ಯವೂ ನೇಪಾಳಕ್ಕೆ ಇಲ್ಲದಿರುವುದರಿಂದ ಅದನ್ನು ತೆಪ್ಪಗೆ ಕೂರಿಸುವಂತೆ ಮಾಡುವುದು ನಮಗೇನೂ ಕಷ್ಟವಾಗಲಾರದು. ಹೇಗಾದರೂ ಮಾಡಿ ಚೀನಾದ ಗಡಿಯಿಂದ ಭಾರತವನ್ನು ಹಿಂದೆ ಸೆಳೆಯಲೇಬೇಕು ಎಂಬ ಧಾವಂತಕ್ಕೆ ಬಿದ್ದ ನೇಪಾಳ ಬಿಹಾರ ಗಡಿಯಲ್ಲಿ ತನ್ನ ಕರಾಮತ್ತು ತೋರಿಸುವ ಯತ್ನ ಮಾಡಿದ್ದನ್ನು ನಾವು ಓದಿದ್ದೇವೆ. ಭಾರತ ಅದನ್ನು ಶಾಂತವಾಗಿಯೇ ನಿರ್ವಹಿಸಿತಲ್ಲದೆ ಈ ಕ್ಷಣಕ್ಕೆ ಅದಕ್ಕೆ ಪ್ರತಿಕ್ರಿಯೆ ಕೊಡಬಾರದೆಂದು ಸ್ಪಷ್ಟ ನಿರ್ಧಾರ ಕೈಗೊಂಡಿತು. ಮೋದಿ ಸರಿಯಾದ ಸಮಯಕ್ಕೆ ಸರಿಯಾದ ಕೆನ್ನೆಗೇ ಗುರಿಯಿಟ್ಟು ಹೊಡೆಯುತ್ತಾರೆ ಎಂಬುದು ಸರ್ಜಿಕಲ್​ಸ್ಟ್ರೈಕ್ ಮತ್ತು ಏರ್​ಸ್ಟ್ರೈಕ್​ಗಳ ಹೊತ್ತಲ್ಲೇ ಜಗತ್ತಿಗೆ ಅರಿವಾಗಿದೆ. ನೇಪಾಳದ ಕಾಲವೂ ನಿಸ್ಸಂಶಯವಾಗಿ ಬರಲಿದೆ.

ಚೀನಾದ ವಾಯುರಕ್ಷಣಾ ವ್ಯವಸ್ಥೆಯು ರಷ್ಯಾ ಕೇಂದ್ರಿತ ಆಲೋಚನೆಯಲ್ಲಿಯೇ ಮುಳುಗಿದೆ. ಫೋರ್ತ್ ಜನರೇಶನ್ನಿನ 101 ವಿಮಾನಗಳಲ್ಲಿ ಬಹುಪಾಲು ರಷ್ಯಾದತ್ತ ಮುಖಮಾಡಿವೆ. ಅದಕ್ಕೆ ಎದುರಾಗಿ ಭಾರತದ 122 ವಿಮಾನಗಳು ಚೀನಾವನ್ನೇ ಗುರಿಯಾಗಿ ಇರಿಸಿಕೊಂಡಿವೆ. ಇದಕ್ಕೂ ಕೆಟ್ಟ ಸಂಗತಿ ಎಂದರೆ ಚೀನಾದ ಪೈಲಟ್ಟುಗಳಿಗೆ ಯುದ್ಧದಲ್ಲಿ ಭಾಗವಹಿಸಿದ ಅನುಭವವೇ ಇಲ್ಲ. ಭಾರತಕ್ಕೆ ಪಾಕಿಸ್ತಾನದೊಂದಿಗೆ ಕಾದಾಡಿದ ಅನುಭವವಲ್ಲದೆ ಗಡಿಯೊಳಕ್ಕೆ ನುಗ್ಗಿ ಬಡಿದು ಬಂದ ವಿಶ್ವಾಸವೂ ಇದೆ. ಮಿಸೈಲ್​ಗಳ ವಿಚಾರಕ್ಕೆ ಬಂದರೆ ಸಾವಿರಕ್ಕೂ ಮಿಕ್ಕಿ ಮೀಡಿಯಮ್ ಮತ್ತು ಶಾರ್ಟ್​ರೇಂಜ್ ಮಿಸೈಲ್​ಗಳನ್ನು ಹೊಂದಿರುವ ಚೀನಾ ಹೆಚ್ಚೆಂದರೆ ಆ ದಿಕ್ಕಿನಿಂದ ಭಾರತದ ಮೂರು ಏರ್​ಫೀಲ್ಡ್​ಗಳ ಮೇಲೆ ದಾಳಿ ಮಾಡಬಹುದು. ಆದರೆ ಭಾರತ ಈ ಸಂದರ್ಭದಲ್ಲಿ ತನ್ನ ಶಕ್ತಿಯನ್ನು ಅಭಿವೃದ್ಧಿ ಪಡಿಸಿಕೊಂಡು ಚೀನಾಕ್ಕೆ ಸ್ಪಷ್ಟ ಉತ್ತರ ನೀಡಬಲ್ಲದು.

ಇಬ್ಬರೂ ಲೇಖಕರು ಒಂದು ಮಾತನ್ನಂತೂ ಒಪ್ಪುತ್ತಾರೆ. ಚೀನಾ ಗಡಿಯ ಭಾಗದಲ್ಲಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಸೇನಾ ಜಮಾವಣೆ ನಡೆಸುತ್ತಿದ್ದುದು ಅಮೆರಿಕಾಕ್ಕಾಗಲೀ ಭಾರತಕ್ಕಾಗಲೀ ತಿಳಿಯದೇ ಹೋಗಿದ್ದು ಅಚ್ಚರಿ ಅಂತ. ಯಾವುದೇ ಗಡಿಗಳಲ್ಲಾಗುವ ಸಣ್ಣ ಬದಲಾವಣೆಗಳನ್ನೂ ದಾಖಲಿಸುವ ಅಮೆರಿಕದ ಗೂಢಚಾರರು ಈ ಹೊತ್ತಿನಲ್ಲಿ ಸೋತಿದ್ದು ಅಚ್ಚರಿಯೇ ಸರಿ. ಈ ಸೋಲಿಗೆ ಭಾರತವೂ ಹೊರತಲ್ಲ. ಬಹುಶಃ ಸಹಜ ಸೇನಾ ಜಮಾವಣೆಯಂತೆ ಬಿಂಬಿಸಿ ಏಕಾಕಿ ಅದು ನುಗ್ಗಿದೆ ಎಂದೇ ಅನೇಕರು ಈಗಲೂ ನಂಬುತ್ತಾರೆ. ಚೀನಾದ ಇಂದಿನ ಪರಿಸ್ಥಿತಿ ನೋಡಿದರೆ ಭಾರತದೊಡನೆ ಗೆಲ್ಲುವುದಿರಲಿ ಯುದ್ಧಕ್ಕೆ ಆಲೋಚಿಸುವ ಸಾಮರ್ಥ್ಯವೂ ಅದಕ್ಕಿಲ್ಲ. ಆದರೆ ಚೀನಾ ಹೀಗೆ ಕಣ್ತಪ್ಪಿಸಿ ಒಳನುಸುಳಲು ಸಾಧ್ಯವಾಗಿದ್ದು ಹೇಗೆ ಎಂಬುದರ ಕುರಿತಂತೆ ಸೂಕ್ತವಾದ ಅಧ್ಯಯನ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಬೇಕಾದ ಅಗತ್ಯವಿದೆ. ಹಾಗಂತ ಲೇಖಕರಿಬ್ಬರೂ ಒಪ್ಪುತ್ತಾರೆ.

ಚೀನಾದ ಸೈನಿಕರಿಗೆ ಯುದ್ಧದ ಅನುಭವ ಖಂಡಿತ ಇಲ್ಲ ಎನ್ನುವುದು ಕಳೆದ ಒಂದು ದಶಕದಲ್ಲಿ ಎಲ್ಲರಿಗೂ ಅರಿವಾಗಿದೆ. 2016ರ ಮಧ್ಯಭಾಗದಲ್ಲಿ ನಡೆದ ಒಂದು ಘಟನೆ ಇದನ್ನು ಪುಷ್ಟೀಕರಿಸುತ್ತದೆ. ಚೀನಾದ ಸೈನಿಕರೊಂದಷ್ಟು ಜನ ವಿಶ್ವಸಂಸ್ಥೆಯ ಶಾಂತಿಪಡೆಯ ಸದಸ್ಯರಾಗಿ ಸುಡಾನಿನಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಅಲ್ಲಿ ಆಂತರಿಕ ದಂಗೆಗಳು ನಡೆಯುತ್ತಿದ್ದ ಕಾಲ ಅದು. ಚೀನೀ ಸೈನಿಕರಿಗೆ ಸುಡಾನಿನ ಜನರ ರಕ್ಷಣೆ ಮಾಡುವ ಒಂದು ಕ್ಷೇತ್ರವನ್ನು ಗುರುತಿಸಿ ಸುಪರ್ದಿಗೆ ಒಪ್ಪಿಸಲಾಯ್ತು. ಇದ್ದಕ್ಕಿದ್ದಂತೆ ಸುಡಾನಿನ ಭಯೋತ್ಪಾದಕರು ಭಯಾನಕವಾದ ದಾಳಿಗೈದುಬಿಟ್ಟರು. ಸಾವಿರಾರು ಜನ ನಾಗರಿಕರು ಚೀನೀ ಸೈನಿಕರ ಕಾವಲಿನಲ್ಲಿದ್ದ ಸ್ಥಳದತ್ತ ಧಾವಿಸಿದರು. ಆದರೆ ಯಾವೊಬ್ಬ ಸೈನಿಕನೂ ಅವರ ರಕ್ಷಣೆಗೆ ಬರಲಿಲ್ಲ. ಮುಖ್ಯಕಚೇರಿಯಲ್ಲಿ ತಮ್ಮ ಪಾಡಿಗೆ ತಾವು ಇದ್ದುಬಿಟ್ಟರು. ಚೀನೀ ಸೈನಿಕರಿಗಿಂತ ಹೆಚ್ಚು ಧೈರ್ಯದಿಂದ ಕೆಲಸ ನಿರ್ವಹಿಸಿದ್ದು ಇಥಿಯೋಪಿಯಾದವರು ಎನ್ನುವುದು ಅಚ್ಚರಿಯ ಸಂಗತಿ! ಈ ಕದನದ ಕೊನೆಯ ದಿನ ನೂರು ಜನ ಸರ್ಕಾರಿ ಸೈನಿಕರೇ ಸ್ಥಳೀಯರ ಮೇಲೆ ಮುಗಿಬಿದ್ದು ಕೆಲವು ಹೆಣ್ಣುಮಕ್ಕಳ ಅತ್ಯಾಚಾರವನ್ನೂ ಮಾಡಿದರು. ಚೀನಾದ ಸೈನಿಕರು ಇವೆಲ್ಲಕ್ಕೂ ಮೂಕಪ್ರೇಕ್ಷಕರಾಗಿದ್ದರೇ ವಿನಃ ತಮ್ಮ ಬಳಿಯಿದ್ದ ಶಸ್ತ್ರವನ್ನು ಚಲಾಯಿಸಲೇ ಇಲ್ಲ. ತಮ್ಮ ಬೇಸ್​ಕ್ಯಾಂಪಿನ ರಕ್ಷಣೆ ಮಾಡಿಕೊಳ್ಳುವುದಷ್ಟೇ ಅವರ ಗುರಿಯಾಗಿತ್ತು. ಒಮ್ಮೆಯಂತೂ ಎದುರಾಳಿಗಳ ದಾಳಿಗೆ ತಮ್ಮ ಸೈನಿಕನೊಬ್ಬ ಮೃತಪಟ್ಟಾಗ ಚೀನೀ ಸೈನಿಕರೆಲ್ಲ ತಮ್ಮ ಪೋಸ್ಟನ್ನು ಬಿಟ್ಟು ಓಡಿಹೋಗಿಬಿಟ್ಟಿದ್ದರು. ಡೆಲ್ಲಿ ಡಿಫೆನ್ಸ್ ರಿವ್ಯೂ ಹೇಳುವ ಪ್ರಕಾರ ತಾವು ಓಡುವುದಿರಲಿ ಈ ಚೀನಿಯರು ತಮ್ಮ ಶಸ್ತ್ರಗಳನ್ನೂ ಬಿಟ್ಟು ಓಡಿದ್ದರಂತೆ! ಈ ಹೊತ್ತಿನಲ್ಲಿ ಭಾರತವು ಕುಮಾವ್ ರೆಜಿಮೆಂಟಿನ ಏಳನೇ ಬೆಟಾಲಿಯನ್ನಿನ ಸೈನಿಕರ ಮೂಲಕ ಆಕ್ರಮಣಕಾರಿಗಳನ್ನು ಹಿಮ್ಮೆಟ್ಟಿಸಿ ಅವರು ವಶಪಡಿಸಿಕೊಂಡಿದ್ದ ಭಾಗಗಳನ್ನೆಲ್ಲ ಕಿತ್ತುಕೊಂಡು ಚೀನೀ ಸೈನಿಕರನ್ನು ರಕ್ಷಿಸಿತಂತೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಚೀನಾದ ಬಳಿ ಆಧುನಿಕ ಶಸ್ತ್ರಾಸ್ತ್ರಗಳಿವೆ. ಆದರೆ ಅದನ್ನು ಹಿಡಿಯುವವನ ಬಳಿ ಛಾತಿಯಿಲ್ಲ ಅಷ್ಟೇ! ಇದು ಇಂದಿನ ಕಥೆಯಲ್ಲ. 1962ರಲ್ಲೂ ಆಳುವ ನಾಯಕರು ಎಚ್ಚರಿಕೆಯಿಂದ ಇದ್ದಿದ್ದರೆ ಚೀನಿಯರಿಗೆ ಮುಟ್ಟಿ ನೋಡಿಕೊಳ್ಳುವ ಹೊಡೆತ ಕೊಡುವುದು ಸಾಧ್ಯವಿತ್ತು. ತುಷ್ಟೀಕರಣದ ತುದಿಯಲ್ಲಿ ಕುಳಿತಿರುವ ಕಾಂಗ್ರೆಸ್ಸಿನ ನಾಯಕರಿಗೆ ಐಷಾರಾಮಿ ಬದುಕೇ ದೊಡ್ಡದಾಗಿತ್ತು. ತಮ್ಮ ತಪ್ಪಿಗೆ ಅವರು ಸೈನಿಕರನ್ನೇ ಬಲಿಕೊಟ್ಟುಬಿಟ್ಟರು. ಮೋದಿ ಹಾಗಲ್ಲ. ಅವರು ಎಚ್ಚರಿಕೆಯಿಂದಲೇ ಹೆಜ್ಜೆ ಇಡುತ್ತಿದ್ದಾರೆ. ಭಾರತ ನಡೆಸುತ್ತಿದ್ದ ರಸ್ತೆ ಕಾಮಗಾರಿಗಳನ್ನು ಕಂಡು ಚೀನಾ ಉರಿದುಕೊಂಡಿದೆ ಎಂದು ಎಲ್ಲರೂ ಹೇಳುವಾಗಲೇ ಮೋದಿ ಹೆಲಿಕಾಪ್ಟರುಗಳಲ್ಲಿ ರಸ್ತೆ ಕೆಲಸಕ್ಕೆ ಬೇಕಾದ ಯಂತ್ರಗಳನ್ನು ತಲುಪಿಸಿ ಇನ್ನೂ ಹೆಚ್ಚು ರಸ್ತೆಯನ್ನು ವೇಗವಾಗಿ ಮಾಡಿಸುವ ಸಂಕಲ್ಪಕ್ಕೆ ತಾವು ಬದ್ಧ ಎಂಬುದನ್ನು ಎಲ್ಲರಿಗೂ ಕೇಳುವಂತೆಯೇ ಸಾರಿದ್ದಾರೆ!

ಅನೇಕರು ಈ ವೇಳೆಗೆ ಮೋದಿಯವರ ರಾಜತಾಂತ್ರಿಕ ನಡೆಯ ಕುರಿತಂತೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಭಾರತ ಅಮೆರಿಕಕ್ಕೆ ಹತ್ತಿರವಾಗುತ್ತಿರುವುದನ್ನು ಚೀನಾ ಸಹಿಸುತ್ತಿಲ್ಲ. ಹೀಗಾಗಿಯೇ ಅದು ಆಕ್ರಮಣ ಮಾಡುತ್ತಿದೆ ಎಂಬುದು ಅವರ ವಾದ. ಇದು ಅಕ್ಷರಶಃ ಸುಳ್ಳು. ಚೀನಾಕ್ಕೆ ಮಿತ್ರರೆಂಬುವವರು ಯಾರೂ ಇಲ್ಲ. ಪ್ರತಿಯೊಬ್ಬರನ್ನೂ ಶತ್ರುವಾಗಿಯೇ ಅದು ಕಾಣುತ್ತದೆ. ಇಂಡೋನೇಷ್ಯಾದೊಂದಿಗೆ ದಕ್ಷಿಣಚೀನಾ ಸಮುದ್ರದಲ್ಲಿ ಜಗಳಕ್ಕೆ ಹೋಗುವ ಚೀನಾವನ್ನು ಮಾತಿನಿಂದಲೇ ಒಲಿಸಿಕೊಳ್ಳಬೇಕೆಂದು ನಿರ್ಧರಿಸಿದ್ದ ಇಂಡೋನೇಷ್ಯಾ ಅಮೆರಿಕದೊಂದಿಗಿನ ಸಂಬಂಧವನ್ನು ಕಡಿದುಕೊಳ್ಳಲೂ ಸಿದ್ಧವಾಗಿತ್ತು. ಆದರೇನು? ಚೀನಾದಿಂದ 1500 ಕಿ.ಮೀ.ನಷ್ಟು ದೂರವಿರುವ ಇಂಡೋನೇಷ್ಯಾದ ದ್ವೀಪವೊಂದರ ಮೇಲೂ ಚೀನಾ ಕಣ್ಣು ಹಾಕಿದಾಗ ಆ ರಾಷ್ಟ್ರ ಸಿಡಿದೇಳಬೇಕಾಯ್ತು. ಫಿಲಿಪಿನ್ಸ್​ನ ಕಥೆಯೂ ಭಿನ್ನವೇನಲ್ಲ. ರೊಡ್ರಿಗೊ ಡ್ಯುಟೆರ್ಟೆ ಅಧ್ಯಕ್ಷ ಪದವಿಗೆ ಏರಿದೊಡನೆ ಚೀನಾದೊಂದಿಗಿನ ಗಡಿಕದನಗಳನ್ನು ನಿವಾರಿಸಿಕೊಳ್ಳಲೆಂದೆ ಅಮೆರಿಕದ ಸಂಪರ್ಕವನ್ನು ಕಡಿಮೆ ಮಾಡಿಕೊಂಡು ಚೀನಾದೊಂದಿಗೆ ಬೆಸೆಯುವ ಪ್ರಯತ್ನ ಮಾಡಿತು. ಆದರೆ ತನ್ನಮೇಲೆ ಏರಿ ಬರುವ ಚೀನಾದ ಹಠವನ್ನು ಕಂಡು ತಡೆಯಲಾಗದೆ ಅಮೆರಿಕದೊಂದಿಗೆ ಸ್ನೇಹ ಮುಂದುವರಿಸಿತು.

ಈ ಹಿಂದೆಯೂ ಹೇಳಿದಂತೆ ಪ್ರಜಾಪ್ರಭುತ್ವವಿಲ್ಲದ ಚೀನಾ ನಂಬಲು ಯೋಗ್ಯವಂತೂ ಅಲ್ಲವೇ ಅಲ್ಲ. ಅಮೆರಿಕ ಕೂಡ ಸಾರ್ವಕಾಲಿಕ ಮಿತ್ರನಲ್ಲದೇ ಹೋದರೂ ಆ ರಾಷ್ಟ್ರವನ್ನು ಕಟ್ಟಲು ಭಾರತೀಯರ ಸಹಕಾರ ಅತ್ಯಗತ್ಯವಾಗಿರುವುದರಿಂದ ಅವರು ನಮ್ಮೊಂದಿಗೆ ಕೆಟ್ಟದ್ದಾಗಿ ನಡೆದುಕೊಳ್ಳಲಾರರು ಎಂಬ ಭರವಸೆ ಅಷ್ಟೇ! ಆದರೆ ಒಂದಂತೂ ಸತ್ಯ. ಇದು 1962 ಅಲ್ಲ, 2020. ಈಗ ಪ್ರಧಾನಿಯಾಗಿರುವುದು ಭ್ರಮಾಲೋಕದಲ್ಲೇ ವಿಹರಿಸುತ್ತಿದ್ದ ಜವಾಹರ್​ಲಾಲ್ ನೆಹರು ಅಲ್ಲ. ರಾಷ್ಟ್ರಕ್ಕೆ ಅಗತ್ಯ ಇರುವುದನ್ನು ಮುಲಾಜಿಲ್ಲದೆ ಮಾಡುವ ನರೇಂದ್ರ ಮೋದಿ. ಯುದ್ಧ ನಡೆದೇ ಹೋದರೆ ಇಡಿಯ ಜಗತ್ತು ಭಾರತದ ಪರವಾಗಿ ನಿಲ್ಲುವುದರಲ್ಲಿ ಸಂಶಯವೇ ಇಲ್ಲ. ಜಿ7 ಶೃಂಗಸಭೆಯಲ್ಲಿ ಈ ಬಾರಿ ಉತ್ಪಾತವೇ ಆಗಲಿದೆ. ಗಮನಿಸುತ್ತಿರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net