

ಕರೊನಾ ನಿಯಂತ್ರಣಕ್ಕೆಂದು 2020ರಲ್ಲಿ ಮೊದಲ ಸಲ ಲಾಕ್ಡೌನ್ ವಿಧಿಸಲಾಯಿತಷ್ಟೆ. ಆ ಸಮಯದಲ್ಲಿ ಬಹುತೇಕ ಎಲ್ಲರೂ ಕಷ್ಟನಷ್ಟ ಅನುಭವಿಸಿದರು. ಇದರಲ್ಲಿ ಪುರುಷ-ಮಹಿಳೆ ಎಂಬ ಭೇದವೇನಿರಲಿಲ್ಲ. ಅದರಲ್ಲೂ ಮಹಿಳೆಯರ ಕಷ್ಟ ಒಂಚೂರು ಹೆಚ್ಚೇ ಆಗಿತ್ತು. ಮನೆಯಲ್ಲಿ ಇರುವ ಗೃಹಿಣಿಯರದು ಒಂದು ತರಹದ ಸಮಸ್ಯೆಯಾದರೆ, ಉದ್ಯೋಗಸ್ಥ ಮಹಿಳೆಯರದು ಮತ್ತೊಂದು ರೀತಿಯ ಸಂಕಷ್ಟ. ಮೊದಲ ಲಾಕ್ಡೌನ್ನ ಒಂಬತ್ತು ತಿಂಗಳಲ್ಲಿ ಅಂದರೆ 2020ರ ಮಾರ್ಚ್ ನಿಂದ ನವೆಂಬರ್ ಅವಧಿಯಲ್ಲಿ ಒಟ್ಟಾರೆ ಜನಜೀವನದಲ್ಲಿ, ಕೌಟುಂಬಿಕವಾಗಿ ಏನೇನಾಯಿತು ಎಂಬ ಬಗ್ಗೆ ಡೆಲ್ಬರ್ಗ್ ಎಂಬ ಕನ್ಸಲ್ಟಿಂಗ್ ಸಂಸ್ಥೆ ಸಮೀಕ್ಷೆ ನಡೆಸಿದ್ದು, ಕಡಿಮೆ ಆದಾಯದ ಕುಟುಂಬಗಳ ಹೆಣ್ಣುಮಕ್ಕಳ ಕಥೆಯ ವ್ಯಥೆ ಹೇಳತೀರದಷ್ಟಿದೆ. ಈ ಹೊಡೆತ ಎಷ್ಟರಮಟ್ಟಿಗೆಂದರೆ, ಕಡಿಮೆ ಆದಾಯದ ಸುಮಾರು 3.2 ಕೋಟಿ ಕುಟುಂಬಗಳಲ್ಲಿನ ಮಹಿಳೆಯರು ಆಹಾರ ಸೇವನೆ ಪ್ರಮಾಣವನ್ನೇ ಕಡಿಮೆ ಮಾಡಿದ್ದರಂತೆ ಅಥವಾ ಮನೆಯಲ್ಲಿ ಆಹಾರ ಪೂರ್ತಿ ಖಾಲಿಯಾಗಿತ್ತಂತೆ. ಇನ್ನೂ ಸುಮಾರು 3 ಕೋಟಿ ಮಹಿಳೆಯರು ಮನೆಯಲ್ಲಿ ಆಹಾರ ಖಾಲಿಯಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಸರ್ಕಾರಗಳ ಬಗ್ಗೆ ನಾವು ಎಷ್ಟೇ ಟೀಕೆಟಿಪ್ಪಣಿ ಮಾಡಬಹುದು, ಆದರೆ ಅವು ಘೋಷಿಸಿದ ಹಲವು ಯೋಜನೆಗಳಿಂದ-ಕ್ರಮಗಳಿಂದ ಜನರಿಗೆ ಅನುಕೂಲವಾದದ್ದನ್ನು ಅಲ್ಲಗಳೆಯಲಾಗದು. ಕರೊನಾ ಸಾಂಕ್ರಾಮಿಕದ ಸಮಯದಲ್ಲಿ ಸರ್ಕಾರಗಳು ಘೋಷಿಸಿದ ನೆರವಿನಿಂದಾಗಿ ತಮಗೆ ತುಂಬಾ ಅನುಕೂಲವಾಯಿತು ಎಂದು ಬಡ ಕುಟುಂಬಗಳ ಮಹಿಳೆಯರು ಮೇಲೆ ಉಲ್ಲೇಖಿಸಿದ ಸಮೀಕ್ಷೆ ಸಂದರ್ಭದಲ್ಲಿ ಹೇಳಿದ್ದೇ ಈ ಮಾತಿಗೆ ಸಾಕ್ಷಿ. ನರೇಗಾ ಯೋಜನೆಯಿಂದ ಸುಮಾರು 1.2 ಕೋಟಿ ಮಹಿಳೆಯರು, ಜನಧನ ಯೋಜನೆಯಿಂದ 10 ಕೋಟಿ ಮತ್ತು ಸಾರ್ವಜನಿಕ ಪಡಿತರ ವಿತರಣಾ ಕಾರ್ಯಕ್ರಮದಿಂದ 18 ಕೋಟಿ ಮಹಿಳೆಯರಿಗೆ ಪ್ರಯೋಜನವಾಗಿದೆ ಎಂದು ವರದಿಗಳು ತಿಳಿಸಿವೆ. ನರೇಗಾ ಯೋಜನೆ ಮುಖಾಂತರ ಗ್ರಾಮೀಣ ಭಾಗದ ಬಡ ಕುಟಂಬಗಳಲ್ಲಿ ಶೇ.70 ಮಹಿಳೆಯರು ಕೆಲಸ ಪಡೆಯಲು ಸಾಧ್ಯವಾಯಿತು. ಈ ಯೋಜನೆಯಲ್ಲಿ ಪುರುಷರು ಮತ್ತು ಮಹಿಳೆಯರಿಗೆ ಸರಿಸಮಾನ ಕೆಲಸ ನೀಡಲಾಗುತ್ತದೆ. ಇನ್ನು, ಉದ್ಯೋಗದ ವಿಷಯದಲ್ಲಿ ಸಹ ಮಹಿಳೆಯರು ಹೆಚ್ಚು ನಷ್ಟ ಅನುಭವಿಸಿದ್ದಾರೆ. 2020ರ ಅಕ್ಟೋಬರ್ಗೆ ಹೋಲಿಸಿದರೆ ಇನ್ನೂ ಸುಮಾರು ಎಂಟೂವರೆ ಲಕ್ಷ ಮಹಿಳೆಯರಿಗೆ ಕೆಲಸವಿಲ್ಲ. ಕರೊನಾ ಕಾರಣದಿಂದಾಗಿ ಸುಮಾರು 4.3 ಕೋಟಿ ಮಹಿಳೆಯರಿಗೆ ಉದ್ಯೋಗನಷ್ಟ ಅಥವಾ ಆರ್ಥಿಕನಷ್ಟ ಆಗಿದೆ. ಈ ಪೈಕಿ ಒಂದೂವರೆ ಕೋಟಿ ಜನರು ಇನ್ನೂ ಇದರಿಂದ ಸರಿಯಾಗಿ ಚೇತರಿಸಿಕೊಂಡಿಲ್ಲ.
ಇನ್ನು, ಕರೊನಾ ಸಾಂಕ್ರಾಮಿಕದ ಮೊದಲಿನ ಸ್ಥಿತಿಗೆ ಹೋಲಿಸಿದರೆ ಹೆಂಗಸರ ಆದಾಯದಲ್ಲಿ ಸಹ ಶೇ.27 ಇಳಿಕೆಯಾಗಿದೆ. ಕರೊನಾ ಕಾರಣದಿಂದಾಗಿ ಮಹಿಳೆಯರು ಎದುರಿಸುವ ಪ್ರಮುಖ ಏಳು ಸಮಸ್ಯೆ ಅಥವಾ ತೊಂದರೆಗಳನ್ನು ತಜ್ಞರು ಮತ್ತು ಸ್ವಯಂಸೇವಾ ಸಂಸ್ಥೆಗಳವರು ಹೀಗೆ ಪಟ್ಟಿಮಾಡುತ್ತಾರೆ: 1-ಅಧಿಕ ಉದ್ಯೋಗನಷ್ಟ. 2-ಮನೆಗೆಲಸ ಪ್ರಮಾಣದಲ್ಲಿ ಹೆಚ್ಚಳ. 3-ತಗ್ಗಿದ ಆರ್ಥಿಕ ಸ್ವಾತಂತ್ರ್ಯ ಮತ್ತು ಭವಿಷ್ಯದ ಅವಕಾಶಗಳು. 4-ಗರ್ಭಧಾರಣೆ ಅವಧಿಯಲ್ಲಿ ಮರಣ ಅಪಾಯ ಹೆಚ್ಚು ಮತ್ತು ಅಪ್ರಾಪ್ತರು ಗರ್ಭಧರಿಸುವ ಸಾಧ್ಯತೆ ಹೆಚ್ಚಳ. 5-ಕರೊನಾ ಮುಂಚೂಣಿ ವಾರಿಯರ್ಗಳಲ್ಲಿ ಸೇರಿರುವುದರಿಂದ ಆರೋಗ್ಯ ಅಪಾಯದ ಸಾಧ್ಯತೆ.
6- ದೈಹಿಕ, ಲೈಂಗಿಕ, ಕೌಟುಂಬಿಕ ದೌರ್ಜನ್ಯ ಹೆಚ್ಚಳ ಸಾಧ್ಯತೆ. 7-ಆರೋಗ್ಯ ಸೇವೆಯ ಲಭ್ಯತೆ ಅವಕಾಶ ಕಡಿಮೆ.
ಜೀವಿತಾವಧಿ ಅಂದರೆ, ಆಯುಷ್ಯದ ವಿಚಾರದಲ್ಲಿ ಪುರುಷರಿಗಿಂತ ಮಹಿಳೆಯರು ಹೆಚ್ಚು ಕಾಲ ಬದುಕುತ್ತಾರೆ. ಆದರೆ ಅದು ಅಷ್ಟು ಆರೋಗ್ಯಕರ ಆಗಿರುವುದಿಲ್ಲ ಎಂದು ವಿಶ್ವ ಆರೋಗ್ಯ ಅಂಕಿಅಂಶ (ಡಬ್ಲ್ಯುಎಚ್ಎಸ್) ವರದಿ ಹೇಳಿರುವುದು ಕೂಡ ಇಲ್ಲಿ ಉಲ್ಲೇಖನೀಯ. ಜಾಗತಿಕವಾಗಿ, ಮಹಿಳೆಯರು ಪುರುಷರಿಗಿಂತ ಐದು ವರ್ಷ ಹೆಚ್ಚು ಆಯುಷ್ಯ ಹೊಂದಿರುತ್ತಾರೆ. ಆದರೆ, ಆರೋಗ್ಯಕರ ಆಯುಷ್ಯ ಎಂದು ಪರಿಗಣಿಸಿದಾಗ, ಈ ಪ್ರಮಾಣ 2.4 ವರ್ಷಕ್ಕೆ ತಗ್ಗುತ್ತದೆ ಎಂದು ಡಬ್ಲ್ಯುಎಚ್ಎಸ್ ವರದಿ ಬೊಟ್ಟುಮಾಡಿದೆ. ಇದಕ್ಕೆ ಕಾರಣಗಳು ಹಲವು. ಆರೋಗ್ಯದ ವಿಷಯದಲ್ಲಿ ಮಹಿಳೆಗೆ ನಿರ್ಣಯ ತೆಗೆದುಕೊಳ್ಳುವ ಅವಕಾಶ ಕಡಿಮೆ ಎಂಬುದು ಒಂದು ಕಾರಣವಾದರೆ, ಕೆಲವೊಮ್ಮೆ ಇವರೇ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷ್ಯ ಮಾಡುತ್ತಾರೆ. ಮನೆಯಲ್ಲಿ ಇತರ ಸದಸ್ಯರಿಗೆ ಆರಾಮಿಲ್ಲವಾದರೆ ಆಸ್ಪತ್ರೆಗೆ ಹೋಗಿ ಎಂದು ಒತ್ತಾಯಿಸುವ ಮಹಿಳೆ, ತನ್ನ ಆರೋಗ್ಯದ ಬಗ್ಗೆ ಇದೇ ಕಾಳಜಿ ವಹಿಸುವುದಿಲ್ಲ ಎಂಬುದು ವಿಪರ್ಯಾಸವೇ ಸರಿ. ಅಥವಾ ಇದು ಮಹಿಳೆಯ ಗುಣ ಎಂಬುದೇ ಹೆಚ್ಚು ಸರಿಯಾದೀತು. ‘ಪತ್ನಿ ಎಂದರೆ, ಯೌವನದಲ್ಲಿ ಇನಿಯೆ, ನಡುಗಾಲದಲ್ಲಿ ಸಂಗಾತಿ ಮತ್ತು ವೃದ್ಧಾಪ್ಯದಲ್ಲಿ ದಾದಿ’ಎಂದು ಬ್ರಿಟಿಷ್ ತತ್ತ್ವಜ್ಞಾನಿ, ಮುತ್ಸದ್ದಿ ಫ್ರಾನ್ಸಿಸ್ ಬೇಕನ್ ಹೇಳಿದ್ದು ಇದಕ್ಕೇ ಇರಬೇಕು.
ಈಗೇನೋ ಕರೊನಾ ಎರಡನೆಯ ಅಲೆ ಕ್ಷೀಣವಾಗಿರುವ ಹಿನ್ನೆಲೆಯಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ನಿರ್ಬಂಧಗಳನ್ನು ತೆಗೆಯಲಾಗಿದೆ. ಹೀಗಾಗಿ ಆರ್ಥಿಕ ಚಟುವಟಿಕೆಗಳೂ ಮರಳಿ ಹಳಿಗೆ ಬರತೊಡಗಿದೆ. ಆದರೆ ಪುರುಷರಿಗೆ ಹೋಲಿಸಿದರೆ ಮಹಿಳೆಯರು ಉದ್ಯೋಗವಿಷಯದಲ್ಲಿ ಚೇತರಿಕೆ ಕಾಣುವ ಸಾಧ್ಯತೆ ಕಡಿಮೆ ಎಂದು ಸಮೀಕ್ಷೆಗಳು ಹೇಳುತ್ತವೆ. ಕುಟುಂಬದಲ್ಲಿ ಪುರುಷ-ಮಹಿಳೆ ಇಬ್ಬರೂ ದುಡಿಯುವವರಾದರೆ ಹೇಗೋ ಜೀವನ ಸಾಗಿಸಬಹುದು. ಆದರೆ ಮಹಿಳೆಯೇ ಆಧಾರವಾಗಿರುವ ಕುಟುಂಬಕ್ಕೆ ಕಷ್ಟ ಕಷ್ಟ...
ಇಂಥ ನಿರಾಶೆಯ, ಸಂಕಷ್ಟದ ಹೊತ್ತಿನಲ್ಲಿ ಸ್ವಲ್ಪ ಸಮಾಧಾನದ ಸುದ್ದಿಯೊಂದು ಬಂದಿದೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮಂತ್ರಿಮಂಡಳ ಮೊನ್ನೆಯಷ್ಟೆ ಪುನಾರಚನೆಯಾಯಿತಲ್ಲ, ಆ ಸಮಯದಲ್ಲಿ ಏಳು ಮಹಿಳೆಯರಿಗೆ ಸಚಿವ ಸ್ಥಾನ ನೀಡಲಾಗಿದೆ. ಅನುಪ್ರಿಯಾ ಸಿಂಗ್ ಪಟೇಲ್, ಮೀನಾಕ್ಷಿ ಲೇಖಿ, ಶೋಭಾ ಕರಂದ್ಲಾಜೆ, ಪ್ರತಿಮಾ ಭೌಮಿಕ್, ದರ್ಶನಾ ವಿಕ್ರಮ್ ಜದೋಷ್, ಅನ್ನಪೂರ್ಣಾದೇವಿ ಮತ್ತು ಡಾ.ಭಾರತಿ ಪ್ರವಿಣ್ ಪವಾರ್ ಇವರೇ ಆ ಸಪ್ತ ಸಚಿವೆಯರು. ನಿರ್ಮಲಾ ಸೀತಾರಾಮನ್ ಮತ್ತು ಸ್ಮೃತಿ ಇರಾನಿ ಈಗಾಗಲೇ ಸಂಪುಟ ದರ್ಜೆ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದರೊಂದಿಗೆ ಮೋದಿ ಸಂಪುಟದಲ್ಲಿ ಮಹಿಳೆಯರ ಸಂಖ್ಯೆ 11 ಆದಂತಾಗಿದೆ. ಹೊಸ ಸಚಿವರಲ್ಲಿ ಕರ್ನಾಟಕದವರೇ ಆದ ಶೋಭಾ ಕರಂದ್ಲಾಜೆ ಅವರು ಒಬ್ಬರು. ಒಂದುರೀತಿಯಲ್ಲಿ ಫೈರ್ಬ್ರಾಂಡ್ ರಾಜಕಾರಣಿ. ಬಿಜೆಪಿ ಮತ್ತು ಸಂಘಪರಿವಾರದ ನೀತಿನಿಲುವುಗಳನ್ನು ಗಟ್ಟಿಗಂಟಲಿನಲ್ಲಿ ಸಾರಬಲ್ಲ ನಾಯಕಿ. ಹಾಗೇ ಮೀನಾಕ್ಷಿ ಲೇಖಿ. ಬಿಜೆಪಿ ವಕ್ತಾರೆಯಾಗಿ, ವಿವಿಧ ವೇದಿಕೆಗಳಲ್ಲಿ ಪಕ್ಷದ ಸಿದ್ಧಾಂತ, ನಿಲುವುಗಳನ್ನು ಸಮರ್ಥಿಸಿಕೊಳ್ಳುತ್ತಿದ್ದರು. ಸುಪ್ರೀಂ ಕೋರ್ಟ್ ನ್ಯಾಯವಾದಿಯಾಗಿಯೂ ಕಾರ್ಯನಿರ್ವಹಿಸಿದವರು. ಕೇಂದ್ರ ಹಣಕಾಸು ಸಚಿವೆ ಎಂಬ ನೆಲೆಯಲ್ಲಿ, ಈಗಿನ ಕರೊನಾ ಸಂಕದಷ್ಟಲ್ಲಿ ಆರ್ಥಿಕ ನೆರವಿನ ಪ್ಯಾಕೇಜುಗಳನ್ನು ಘೋಷಿಸಿದವರು ನಿರ್ಮಲಾ ಸೀತಾರಾಮನ್.
ಹಾಗಾದರೆ ಮಹಿಳೆಯರು ಮಂತ್ರಿಗಳಾದಾಕ್ಷಣ ಸ್ತ್ರೀ ಸಂಕುಲದ ಸಮಸ್ಯೆಗಳೆಲ್ಲ ಬಗೆಹರಿದುಬಿಡುತ್ತವಾ? ಅವರ ಕಷ್ಟಗಳೆಲ್ಲ ಕರಗಿಹೋಗುತ್ತವಾ? ಹಾಗಾಗಲ್ಲ ನಿಜ. ಆದರೆ ಸ್ತ್ರೀಯರು ಉನ್ನತ ಸ್ಥಾನಗಳಿಗೆ ಹೋದಾಗ, ವಿರಳ ಎತ್ತರವನ್ನು ಏರಿದಾಗ ಉಳಿದವರಿಗೂ ಅದೊಂದು ಪ್ರೇರಣೆಯಾಗುತ್ತದೆ; ಉತ್ಸಾಹ ಉಕ್ಕಿಸುತ್ತದೆ. ಒಂದು ಉದಾಹರಣೆ ನೋಡುವುದಾದರೆ- ಇಂದಿರಾ ಗಾಂಧಿ ಆಡಳಿತದ ಬಗ್ಗೆ ಬೇರೆ ಬೇರೆ ಅಭಿಪ್ರಾಯಗಳು ಇರಬಹುದು. ಆದರೆ ಅವರೊಬ್ಬ ಗಟ್ಟಿಗಿತ್ತಿ ಎಂಬುದನ್ನು ಯಾರೂ ಅಲ್ಲಗಳೆಯಲಾಗದು. ಬಾಂಗ್ಲಾ ವಿಮೋಚನಾ ಸಮರ ಮುಂತಾದ ಸಂದರ್ಭಗಳೇ ಇದಕ್ಕೆ ಪುರಾವೆ. ಒಂದೊಮ್ಮೆ ಇಂದಿರಾ ದೇಶದ ಮೇಲೆ ತುರ್ತು ಪರಿಸ್ಥಿತಿಯನ್ನು ಹೇರದಿದ್ದಿದ್ದರೆ ಅವರ ಇಮೇಜ್ ಹೇಗಿರಬಹುದಿತ್ತಲ್ಲವೆ? ಪ್ರಜಾಪ್ರಭುತ್ವದ ಚಾಂಪಿಯನ್ ಎಂದು ಬೀಗುವ ಅಮೆರಿಕದಂತಹ ಅಮೆರಿಕ ಸಹ ಈವರೆಗೆ ಒಬ್ಬ ಮಹಿಳೆಗೆ ದೇಶದ ಚುಕ್ಕಾಣಿಯನ್ನು ನೀಡಲು ಸಾಧ್ಯವಾಗಿಲ್ಲ. ನಮ್ಮಲ್ಲಿ ಅದು ಆಗಿದೆ. ರಾಜಕೀಯಕ್ಕೆ ಪ್ರವೇಶಿಸಬೇಕು ಎಂದು ಬಯಸುವ ಹೆಣ್ಮಕ್ಕಳು ಇಂದಿರಾ ಜೀವನವನ್ನು ಖಂಡಿತಾ ಅವಲೋಕಿಸುತ್ತಾರೆ. ಮೌಂಟ್ ಎವರೆಸ್ಟ್ ಏರಿದ ಮೊದಲ ಭಾರತೀಯ ಮಹಿಳೆ ಎಂಬ ದಾಖಲೆ ನಿರ್ವಿುಸಿದವರು ಬಚೇಂದ್ರಿ ಪಾಲ್. ಪರ್ವತಾರೋಹಣದ ಆಸಕ್ತಿ ಇರುವ ಎಲ್ಲ ಹೆಣ್ಮಕ್ಕಳಿಗೂ ಇವರಂತೆ ಎವರೆಸ್ಟ್ ಏರಲಾಗಲಿಕ್ಕಿಲ್ಲ; ಆದರೆ ಬದುಕಿನಲ್ಲಿ ಎದುರಾಗುವ ಅಡೆತಡೆಗಳನ್ನು ಮೀರಿ ಮುಂದೆ ಸಾಗುವ, ಜೀವನದಲ್ಲಿ ಎತ್ತರಕ್ಕೇರುವ ಸ್ಪೂರ್ತಿಯನ್ನು ಅವರಿಂದ ಪಡೆಯಬಹುದುದಲ್ಲ? ಬಾಹ್ಯಾಕಾಶ ಯಾತ್ರೆ ಮುಗಿಸಿ ಕೊಲಂಬಿಯಾ ಗಗನನೌಕೆಯಲ್ಲಿ ವಾಪಸ್ ಬರುವಾಗ, ತಾಂತ್ರಿಕ ದೋಷದಿಂದಾಗಿ ನೌಕೆ ಉರಿದುಹೋದಾಗ ಸಹ-ಗಗನಯಾತ್ರಿಗಳೊಂದಿಗೆ ಮಡಿದ ಕಲ್ಪನಾ ಚಾವ್ಲಾ ಅದೆಷ್ಟೋ ಗಗನಾಸಕ್ತರಿಗೆ ಇಂದಿಗೂ ದೊಡ್ಡ ಸ್ಪೂರ್ತಿಚಿಲುಮೆ. ಹಾಗೆ, ಈಗ ಸಂಪುಟ ಸೇರಿರುವ ನಾಯಕಿಯರು ಸಹ ಒಂದಷ್ಟು ಹೆಣ್ಮಕ್ಕಳಲ್ಲಿ ರಾಜಕೀಯ ಪ್ರವೇಶದ ಕನಸು ಮೂಡಿಸಿ, ಉತ್ತಮ ಆಡಳಿತದ ಪ್ರೇರಣೆ ನೀಡಿದಲ್ಲಿ ಅದು ಸಹ ಒಂದು ಸಕಾರಾತ್ಮಕ ಬೆಳವಣಿಗೆಯೇ ಅಲ್ಲವೆ? ಹಾಗಂತ ಆಡಳಿತಾತ್ಮಕ ವಿಚಾರದಲ್ಲಿ ಇವರು ಶಕ್ಯತಃ ಶ್ರಮ ಹಾಕಲೇಬೇಕಾಗುತ್ತದೆ;ತಮಗೆ ವಹಿಸಿದ ಖಾತೆಗಳಲ್ಲಿ ಸಾಧನೆ ಮಾಡುವತ್ತ ಕೆಲಸ ಮಾಡಲೇಬೇಕಾಗುತ್ತದೆ. ಏಕೆಂದರೆ ಅಧಿಕಾರಸ್ಥಾನ ಅವಕಾಶವೇ ಹೊರತು ಮೆರವಣಿಗೆಯ ಸಾಧನವಲ್ಲ. ‘ಅಧಿಕಾರ ಸಿಕ್ಕಾಗ ಮಾನವ ಹೇಗೆ ವರ್ತಿಸುತ್ತಾನೆ ಮತ್ತು ಸಾಧಿಸುತ್ತಾನೆ ಎಂಬುದರ ಮೇಲೆ ಆತನ ಯೋಗ್ಯತೆ ಅಳೆಯಬಹುದು’ ಎನ್ನುತ್ತಾನೆ ತತ್ತ್ವಜ್ಞಾನಿ ಪ್ಲೇಟೊ.
ಒಂದು ಆಸ್ಪತ್ರೆಯಲ್ಲಿ ನಡೆದ ಘಟನೆ ಇಲ್ಲಿ ನೆನಪಾಗುತ್ತಿದೆ. ತೀವ್ರ ಅನಾರೋಗ್ಯದಿಂದಾಗಿ ಆ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯೊಬ್ಬರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದರು. ಮೃತರ ಸಂಬಂಧಿಕರು ಕೆಲವರು ಆ ವಾರ್ಡ್ ಹತ್ತಿರ ಸೇರಿದ್ದರು. ಆಗ ಅಲ್ಲಿ ಡ್ಯೂಟಿಯಲ್ಲಿದ್ದ ನರ್ಸ್ ಒಬ್ಬಾಕೆ, ‘ಇಲ್ಲಿ ಏನು ಮಾಡ್ತೀರಾ? ಆಚೆ ಹೋಗಿ ಕೂತ್ಕೊಳ್ರಿ’ಎಂದು ಏರಿದ ದನಿಯಲ್ಲಿ ಹೇಳಿದ್ದಳು. ಕೆಲ ಸಮಯದ ನಂತರದಲ್ಲಿ ಹಿರಿಯ ನರ್ಸ್ ಈಕೆಗೆ ದಾದಿಯರು ಇರಬೇಕಾದ ರೀತಿಯ ಬಗ್ಗೆ ಮೃದುಮಾತಿನಲ್ಲೇ ಪಾಠಮಾಡಿದಳು: ‘ನೋಡಮ್ಮಾ, ಆಸ್ಪತ್ರೆಗೆ ಬರುವವರು ಮೊದಲೇ ನೊಂದಿರುತ್ತಾರೆ. ಅವರ ಕಷ್ಟಗಳು ಏನಿರುತ್ತವೋ? ಆ ಟೆನ್ಷನ್ನಲ್ಲಿ ಅವರು ಒಂದು ಮಾತು ಹೆಚ್ಚು ಆಡಬಹುದು, ನಮ್ಮ ಮೇಲೆ ರೇಗಲೂಬಹುದು. ಅದರಲ್ಲೂ ಸಾವು ಎಂದರೆ ಎಲ್ಲರಿಗೂ ಒಂದೇ ತಾನೇ. ಯಾವುದೇ ಸಂದರ್ಭದಲ್ಲಿಯೂ ನಾವು ತಾಳ್ಮೆ ಕಳೆದುಕೊಳ್ಳಬಾರದು. ರೋಗಿಗಳು ಮತ್ತು ಅವರ ಸಂಬಂಧಿಗಳ ಬಳಿ ಸಮಾಧಾನದಿಂದ, ವಿನಯದಿಂದ ಮಾತನಾಡಬೇಕು’. ಇದು ಹೆಣ್ಣಿನ ಹೃದಯ; ಮಾತೃ ಮಮತೆ. ಮಹಿಳೆ ಆಡಳಿತದ ಉನ್ನತ ಹಂತಕ್ಕೆ ಹೋದಾಗ ಅವಳಲ್ಲಿನ ಇಂಥ ಗುಣ ಪ್ರಕಟವಾಗುತ್ತದೆ ಎಂಬ ಮಾತಿದೆ.
‘ಮಹಿಳೆಯರು ಎಷ್ಟು ಪ್ರಗತಿ ಸಾಧಿಸಿದ್ದಾರೆ ಎಂಬುದರ ಆಧಾರದ ಮೇಲೆ ನಾನು ಒಂದು ಸಮುದಾಯದ ಏಳಿಗೆಯನ್ನು ಅಳೆಯುತ್ತೇನೆ’ ಎಂದು ಬಾಬಾಸಾಹೇಬ್ ಅಂಬೇಡ್ಕರ್ ಹೇಳಿದ್ದರು. ಈ ಕರೊನಾ ಉಪಟಳ ಆದಷ್ಟು ಬೇಗ ಕೊನೆಯಾಗಲಿ. ಮಹಿಳೆಯರ ಕಷ್ಟಗಳೂ ನೀಗಲಿ. ಮನೆಯ ಗೃಹಿಣಿ ನಗುನಗುತ್ತ ಇದ್ದರೆ ಆ ಮನೆಯಲ್ಲೂ ನಗು ಪಸರಿಸುತ್ತದೆ. ಇಲ್ಲವಾದಲ್ಲಿ ವಿಷಾದವೇ.
(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)