ನಾಳಿನ ಆತಂಕದಲ್ಲಿ ಇಮ್ರಾನ್ ಖಾನ್

Imran Khan
Published on
ತಮ್ಮ ವಿರುದ್ಧ ಪಿತೂರಿ ನಡೆಸುತ್ತಿರುವ ವಿದೇಶೀ ಶಕ್ತಿ ಯಾವುದೆಂದು ಇಮ್ರಾನ್ ಖಾನ್ ಹೇಳಿಲ್ಲ. ಆದರೆ ಅದು ಅಮೆರಿಕ ಎಂದು ಪಾಕಿಸ್ತಾನೀ ಮತ್ತು ಇರಾನಿಯನ್ ಮಾಧ್ಯಮಗಳು ದೊಡ್ಡದಾಗಿ ಹೇಳಿವೆ. ವಿದೇಶೀ ಶಕ್ತಿಯ ಪ್ರಸ್ತಾಪದ ಜತೆ ಭುಟ್ಟೋರ ಹೆಸರನ್ನು ಇಮ್ರಾನ್ ಖಾನ್ ಎಳೆದು ತಂದದ್ದು ಪಾಕ್ ಮತ್ತು ಇರಾನೀ ಮಾಧ್ಯಮಗಳ ತರ್ಕ ಸರಿದಾರಿಯಲ್ಲೇ ಇದೆ.

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ನಿಯಾಜಿ ಈಗ ಅವಿಶ್ವಾಸ ಮತದ ಸವಾಲು ಎದುರಿಸುತ್ತಿದ್ದಾರೆ. ಸೇನೆಯ ಸಮ್ಮತಿ ಹಾಗೂ ತೆರೆಯ ಹಿಂದಿನ ಸಹಕಾರದೊಂದಿಗೆ ವಿರೋಧಪಕ್ಷಗಳೆಲ್ಲವೂ ಒಟ್ಟುಗೂಡಿ, ಜತೆಗೆ ಆಡಳಿತ ಪಕ್ಷದ ಸಾಕಷ್ಟು ಸಂಸದರನ್ನೂ ತಮ್ಮ ಕಡೆ ಸೆಳೆದುಕೊಂಡು ಭಾರಿ ತಯಾರಿಯೊಂದಿಗೆ ಇದೇ ಸೋಮವಾರ ನ್ಯಾಷನಲ್ ಅಸೆಂಬ್ಲಿಯಲ್ಲಿ ಅವಿಶ್ವಾಸ ಗೊತ್ತುವಳಿ ಮಂಡಿಸಿವೆ. ಈ ಬಗ್ಗೆ ಇದೇ ಗುರುವಾರದಿಂದ ಚರ್ಚೆ ನಡೆಯಲಿದೆ. ಏಪ್ರಿಲ್ 4ಕ್ಕೆ ಅಂತಿಮ ಚಿತ್ರಣ ದೊರೆಯಲಿದೆ. ಅದೇನೂ ನಮ್ಮಜ್ಜಿ ಹೇಳುತ್ತಿದ್ದ ಏಳು ಪರ್ವತಗಳಾಚೆಗಿನ ಆಳ ಕೊಳದ ತಳದಲ್ಲಿರುವ ಬಂಡೆಯೊಳಗಿನ ಹಿಡಿನೀರಿನಲ್ಲಿ ಅವಿತು ಕೂತಿರುವ ಪುಟಾಣಿ ಕಪ್ಪೆಯ ಹೊಟ್ಟೆಯೊಳಗೆ ಮಾಯಾವಿಯೊಬ್ಬ ಅಡಗಿಸಿಟ್ಟಿರುವ ರಹಸ್ಯವಲ್ಲ, ಅದನ್ನು ಹುಡುಕಿ ತರಲು ನಾವು ಅಪ್ರತಿಮ ಚತುರ ಸಾಹಸಿ ರಾಜಕುಮಾರನನ್ನೇನೂ ಕಳುಹಿಸಬೇಕಾಗಿಯೂ ಇಲ್ಲ. 342 ಸಂಸದರಿರುವ ನ್ಯಾಷನಲ್ ಅಸೆಂಬ್ಲಿಯಲ್ಲಿ ಇಮ್ರಾನ್ ಖಾನ್​ರ ಪಾಕಿಸ್ತಾನ್ ತ್ರೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಪಕ್ಷಕ್ಕೆ 177 ಸ್ಥಾನಗಳು ಅಂದರೆ ವಿಶ್ವಾಸಮತ ಗೆಲ್ಲಲು ಅಗತ್ಯವಾದ 172 ಮತಗಳಿಗಿಂತ ಐದು ಸ್ಥಾನಗಳು ಹೆಚ್ಚಿಗಿವೆ. ಆದರೆ ವಿರೋಧಪಕ್ಷಗಳು ಆಡಳಿತ ಪಕ್ಷದ 24ರಿಂದ 35 ಸಂಸದರನ್ನು ತಮ್ಮೆಡೆ ಸೆಳೆದುಕೊಂಡಿರುವುದರಿಂದ ಅಷ್ಟರ ಮಟ್ಟಿಗೆ ಇಮ್ರಾನ್ ಖಾನ್​ರಿಗೆ ನಷ್ಟವಾಗಿದೆ. ವಿರೋಧ ಪಕ್ಷಗಳ 162 ಸಂಸದರೊಂದಿಗೆ ಕನಿಷ್ಠ 24 ಪಿಟಿಐ ಸಂಸದರೂ ಸೇರಿಕೊಂಡರೆ ಅವಿಶ್ವಾಸ ಮತ ಭಾರಿ ಬೆಂಬಲದೊಂದಿಗೆ ಅಂಗೀಕೃತಗೊಳ್ಳುತ್ತದೆ. ಕ್ಯಾಪ್ಟನ್ ಇಮ್ರಾನ್ ಖಾನ್ ಕ್ಲೀನ್ ಬೌಲ್ಡ್ ಆಗುತ್ತಾರೆ.

ನಾವೀಗ ಗಮನ ಹರಿಸಬೇಕಾದ್ದು ಅವಿಶ್ವಾಸ ಗೊತ್ತುವಳಿ ಮಂಡನೆಯ ಹಿಂದಿನ ದಿನದ ಎರಡು ಬೆಳವಣಿಗೆಗಳನ್ನು. ಪಿಟಿಐ ಮತ್ತು ವಿರೋಧಪಕ್ಷಗಳ ನಡುವೆ ಕೊನೇಗಳೀಗೆಯಲ್ಲಿ ರಹಸ್ಯ ಒಪ್ಪಂದವೊಂದು ಉಂಟಾಗಿದೆ, ಆ ಪ್ರಕಾರ ಇಮ್ರಾನ್ ಖಾನ್ ಸರ್ಕಾರ ಇನ್ನೊಂದಿಷ್ಟು ದಿನ ಜೀವ ಹಿಡಿದುಕೊಂಡಿರುವಂತಾಗುತ್ತದೆ ಎಂಬ ಮಾತು ಭಾನುವಾರದ ಹೊತ್ತಿಗೆ ದಟ್ಟವಾಗಿ ಕೇಳಿಬರತೊಡಗಿತ್ತು. ಕ್ರಿಕೆಟ್ ಬೆಟಿಂಗ್​ನಲ್ಲಿ ಪರಿಣಿತರಾದ ಪಾಕಿಸ್ತಾನಿಯರಿಗೆ ಹೀಗೆ ಪೊಲಿಟಿಕಲ್ ಬೆಟಿಂಗ್ ನಡೆಸುವುದು ಕಷ್ಟವಲ್ಲವಾದರೂ ಎರಡೂ ಪಾರ್ಟಿಗಳು ಭಯಾನಕ ಷರತ್ತುಗಳನ್ನು ಹಾಕಿವೆಯೆಂದೂ, ಅದರಿಂದಾಗಿ ಈ ಬೆಟಿಂಗ್ ಇಮ್ರಾನ್ ಖಾನ್ ಪರ ವರ್ಕ್ ಔಟ್ ಆಗುವ ಸಾಧ್ಯತೆ ಇಲ್ಲವೆಂದೂ ಮಾತುಗಳು ಹರಿದಾಡಿದವು. ಹೇಗಿದ್ದರೂ ನಿಯಾಜಿ ಸಾಹೇಬರು ಪೂರ್ಣಾವಧಿ ಮುಗಿಸುವುದಿಲ್ಲ ಎನ್ನುವುದಂತೂ ಶತಸಿದ್ಧ. ಹೀಗಾಗಿ ಈ ಬೆಟಿಂಗ್ ಕಥೆಯನ್ನು ಪಕ್ಕಕ್ಕಿರಿಸಿ, ಅದೇ ಭಾನುವಾರ ಮಧ್ಯಾಹ್ನ ಪ್ರಧಾನಮಂತ್ರಿಗಳು ಇಸ್ಲಾಮಾಬಾದ್​ನ ಪರೇಡ್ ಗ್ರೌಂಡ್ಸ್​ನಲ್ಲಿ ಆಯೋಜಿಸಿದ ತಮ್ಮ ಪಕ್ಷದ ರ್ಯಾಲಿಯಲ್ಲಿ ಆಡಿದ ಮಾತುಗಳತ್ತ ಗಮನ ಹರಿಸೋಣ. ಪಾಕಿಸ್ತಾನದ ರಾಜಕೀಯದ ನಿನ್ನೆ, ಇಂದು, ನಾಳೆಗಳ ಬಗ್ಗೆ ಆ ಮಾತುಗಳು ಸಂಪುಟಗಟ್ಟಲೆ ಒಳನೋಟಗಳನ್ನು ನೀಡುತ್ತವೆ.

ನಿರೀಕ್ಷಿತ ಅಥವಾ ಅಪೇಕ್ಷಿತ ಮಟ್ಟಕ್ಕೆ ಜನಸಂದಣಿ ಸೇರದಿದ್ದರೂ ಇಮ್ರಾನ್ ಖಾನ್​ರ ಉತ್ಸಾಹವೇನೂ ಕಡಿಮೆಯಿರಲಿಲ್ಲ. ಅದಕ್ಕೆ ಕಾರಣವೂ ಇತ್ತು. ವಿರೋಧಪಕ್ಷಗಳನ್ನು ಕಂಗೆಡಿಸಿಬಿಡುವ ಟ್ರಂಪ್ ಕಾರ್ಡ್ ತಮ್ಮಲ್ಲಿದೆಯೆಂದೂ, ಸರಿಯಾದ ಸಮಯದಲ್ಲಿ ತಾವದನ್ನು ಹೊರಗೆಡಹುವುದಾಗಿಯೂ ಅವರು ರ್ಯಾಲಿಗೆ ಮುಂಚೆ ಹೇಳಿಕೊಂಡು ರಾಜಕೀಯ ವಲಯದಲ್ಲಿ ಸಂಚಲನೆ ಉಂಟುಮಾಡಿದ್ದರು. ಆ ಸಂಚಲನೆಯನ್ನು ತಮ್ಮ ಕ್ರಿಕೆಟ್ ಬದುಕಿನ ಡೆಡ್ಲಿ ಇನ್​ಸ್ವಿಂಗರ್ ಆಗಿ ಬೆಳೆಸುವ ಅವಕಾಶವನ್ನು ರ್ಯಾಲಿಯಲ್ಲಿ ಕಂಡುಕೊಂಡಿದ್ದುದು ಸಹಜವೇ ಆಗಿತ್ತು.

ಪರೇಡ್ ಗ್ರೌಂಡ್ಸ್ ರ್ಯಾಲಿಯಲ್ಲಿ ಇಮ್ರಾನ್ ಖಾನ್ ಹೇಳಿದ ಎರಡು ಮಾತುಗಳನ್ನು ಗಂಭೀರವಾಗಿ ತೆಗೆದುಕೊಳ್ಳೋಣ. ವಿದೇಶೀ ಶಕ್ತಿಯೊಂದು ಹಣ ಚೆಲ್ಲಿ ತಮ್ಮ ಸಂಸದರನ್ನು ತಮ್ಮಿಂದ ದೂರ ಒಯ್ದು ತಮ್ಮ ಸರ್ಕಾರವನ್ನು ಉರುಳಿಸಲು ಪಿತೂರಿ ನಡೆಸಿದೆಯೆಂದೂ, ಅದೇ ವಿದೇಶೀ ಶಕ್ತಿ ತಮ್ಮ ಸರ್ಕಾರದ ವಿದೇಶನೀತಿಯನ್ನು ಪ್ರಭಾವಿಸಲೂ ಪ್ರಯತ್ನಿಸಿದೆಯೆಂದೂ ಆಪಾದಿಸಿದ ಇಮ್ರಾನ್ ಖಾನ್, ‘ಜುಲ್ಪಿಕರ್ ಆಲಿ ಭುಟ್ಟೋರಿಗೆ ಆದಂತೆ ನನಗೆ ಆಗುವುದಿಲ್ಲ. ಈಗ ಕಾಲ ಬದಲಾಗಿದೆ. ಇದು ಭುಟ್ಟೋ ಕಾಲ ಅಲ್ಲ’ ಎಂದು ಘೊಷಿಸಿದರು. ಒಂದಕ್ಕೊಂದು ತಳುಕು ಹಾಕಿಕೊಂಡ ಅವರ ಈ ಮಾತುಗಳನ್ನೀಗ ನಾವು ವಿಶ್ಲೇಷಿಸೋಣ.

ತಮ್ಮವಿರುದ್ಧ ಪಿತೂರಿ ನಡೆಸುತ್ತಿರುವ ವಿದೇಶೀ ಶಕ್ತಿ ಯಾವುದೆಂದು ಇಮ್ರಾನ್ ಖಾನ್ ಹೇಳಲಿಲ್ಲ. ಆದರೆ ಅದು ಅಮೆರಿಕ ಎಂದು ಪಾಕಿಸ್ತಾನೀ ಮತ್ತು ಇರಾನಿಯನ್ ಮಾಧ್ಯಮಗಳು ದೊಡ್ಡದಾಗಿ ಹೇಳಿವೆ. ವಿದೇಶೀ ಶಕ್ತಿಯ ಪ್ರಸ್ತಾಪದ ಜತೆ ಭುಟ್ಟೋರ ಹೆಸರನ್ನು ಇಮ್ರಾನ್ ಖಾನ್ ಎಳೆದು ತಂದದ್ದು ಪಾಕ್ ಮತ್ತು ಇರಾನೀ ಮಾಧ್ಯಮಗಳ ತರ್ಕ ಸರಿದಾರಿಯಲ್ಲೇ ಇದೆ ಎಂದು ಹೇಳುತ್ತದೆ. ಈ ಮಾತು ಅರ್ಥವಾಗಬೇಕಾದರೆ ಭುಟ್ಟೋರ ಕುರಿತಾಗಿ ಅಮೆರಿಕ ಅನುಸರಿಸಿದ ನೀತಿಗಳ ಕಿರುಪರಿಚಯ ಅಗತ್ಯ.

1958ರಿಂದ 1977ರವರೆಗೆ ವಿದೇಶಮಂತ್ರಿ, ನಾಗರಿಕ ಸೇನಾ ಆಡಳಿತಗಾರ, ಅಧ್ಯಕ್ಷ ಹಾಗೂ ಪ್ರಧಾನಮಂತ್ರಿಯ ಸ್ಥಾನಗಳಲ್ಲಿ ಕೂತು ಪಾಕ್ ಆಂತರಿಕ ರಾಜಕಾರಣ ಹಾಗೂ ವಿದೇಶನೀತಿಗಳನ್ನು ಗಣನೀಯವಾಗಿ ರೂಪಿಸಿದ ಭುಟ್ಟೊ ಚಾಣಾಕ್ಷ್ಯ ಹಾಗೂ ಚಾಲಾಕಿಯಾಗಿದ್ದರು. ಈ ಸ್ವಭಾವಗಳು ಅಗತ್ಯಕ್ಕಿಂತ ಹೆಚ್ಚಾಗಿದ್ದು ಅಂತಿಮವಾಗಿ ಭುಟ್ಟೋರನ್ನೇ ಬಲಿ ತೆಗೆದುಕೊಂಡರೂ ಆ ಸ್ವಭಾವಗಳನ್ನು ವಿಶ್ವವೇ ಗುರುತಿಸಿತ್ತು, ಒಂದು ಹಂತಕ್ಕೆ ಮೆಚ್ಚಿತ್ತು ಸಹಾ. ಭುಟ್ಟೋರ ಬುದ್ಧಿವಂತಿಕೆಯಿಂದ ಪ್ರಭಾವಿತರಾದ ಅಧ್ಯಕ್ಷ ಜಾನ್ ಎಫ್ ಕೆನಡಿ, ‘ನೀವು ಅಮೆರಿಕನ್ನರಾಗಿದ್ದರೆ ನನ್ನ ಮಂತ್ರಿಮಂಡಲದಲ್ಲಿರುತ್ತಿದ್ದಿರಿ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಕ್ಕೆ ಅತಿ ಬುದ್ಧಿವಂತ ಭುಟ್ಟೋ ಪ್ರತಿಕ್ರಿಯಿಸಿದ್ದು ಹೀಗೆ- ‘ಹಾಗಲ್ಲ ಅಧ್ಯಕ್ಷ ಮಹಾಶಯರೇ. ನಾನು ಅಮೆರಿಕನ್ನನಾಗಿದ್ದಿದ್ದರೆ ನೀವು ನನ್ನ ಮಂತ್ರಿಮಂಡಲದಲ್ಲಿರುತ್ತಿದ್ದಿರಿ!’

ಅಮೆರಿಕದ ಜತೆ ಘನಿಷ್ಟ ಸಖ್ಯ ಪಾಕಿಸ್ತಾನಕ್ಕೆ ಅತ್ಯಗತ್ಯ ಎಂದು ರ್ತಸಿ ಅದಕ್ಕಾಗಿ ಆ ದೇಶದ ಸೃಷ್ಟಿಗೂ ಮೊದಲೇ ಅಸ್ತಿಭಾರ ಹಾಕಿದ್ದ ಮಹಮದ್ ಆಲಿ ಜಿನ್ನಾರ ನೀತಿಯನ್ನು ಅಯೂಬ್ ಖಾನ್​ರವರೆಗೆ ಎಲ್ಲ ಪಾಕ್ ನೇತಾರರೂ ನಿಷ್ಠೆಯಿಂದ ಪಾಲಿಸಿಕೊಂಡು ಬಂದಿದ್ದರು. ಪಾಕಿಸ್ತಾನೀ ಸಮಾಜದ ಊಳಿಗಮಾನ್ಯ ಮೌಲ್ಯಗಳನ್ನು ವಿದೇಶನೀತಿಗೂ ಅನ್ವಯಿಸಿದ ಅವರುಗಳು ಮೇಲಿದ್ದ ಅಮೆರಿಕದ ಮುಂದೆ ನಡುಬಾಗಿಸಿ ನಿಂತು, ಕೆಳಗಿದ್ದ ಅಫ್ಘಾನಿಸ್ತಾನ ಹಾಗೂ ತಮ್ಮದೇ ಪೂರ್ವ ಪಾಕಿಸ್ತಾನದ ನಡುವಿನ ಮೇಲೆ ಬಾರಿಸುವುದನ್ನು ಕರಗತ ಮಾಡಿಕೊಂಡಿದ್ದರು. ಈ ನೀತಿಯನ್ನು ಬದಲಾಯಿಸಿ, ಅಮೆರಿಕ ಮೇಲೆ ಪಾಕಿಸ್ತಾನದ ಪೂರ್ಣ ಅವಲಂಬನೆಯನ್ನು ತಪ್ಪಿಸಿದ್ದು, ಹೊಸಮಿತ್ರರನ್ನು ಹುಡುಕಿದ್ದು, ಆ ಮೂಲಕ ಒಂದು ಮಟ್ಟಕ್ಕೆ ಸ್ವತಂತ್ರ ವಿದೇಶನೀತಿಯನ್ನು ರೂಪಿಸಲು ಹೊರಟಿದ್ದು ಭುಟ್ಟೋರ ಹೆಗ್ಗಳಿಕೆ. ಅಮೆರಿಕ ಬಗ್ಗೆ ಭುಟ್ಟೋರಿಗಿದ್ದ ತಿರಸ್ಕಾರಕ್ಕೆ ಕಾರಣ ಅವರಿಗಾದ ಅವಮಾನದಲ್ಲಿ ಎಂದು ನನಗನಿಸುತ್ತದೆ. ಪಾಕಿಸ್ತಾನ ಮತ್ತು ಅಮೆರಿಕಗಳ ನಡುವೆ ಸೇನಾ ಸಹಕಾರದ ಒಪ್ಪಂದ 1954ರಲ್ಲೇ ಆಯಿತಷ್ಟೇ. ಆ ನಂತರ ಪೇಶಾವರ್ ನಗರದ ಹೊರವಲಯದಲ್ಲಿ ಅಮೆರಿಕದ ರಹಸ್ಯ ಸೇನಾನೆಲೆಯೊಂದು ಅಸ್ತಿತ್ವಕ್ಕೆ ಬಂತು. ಅದೆಷ್ಟು ರಹಸ್ಯವಾಗಿತ್ತೆಂದರೆ ಅದರ ಬಗ್ಗೆ ಸೇನಾ ಸರ್ವಾಧಿಕಾರಿ ಜನರಲ್ ಅಯೂಬ್ ಖಾನ್ ಮತ್ತು ಬೆರಳೆಣಿಕೆಯಷ್ಟು ಉನ್ನತ ಸೇನಾಧಿಕಾರಿಗಳ ಹೊರತಾಗಿ ಮತ್ತಾರಿಗೂ ಮಾಹಿತಿ ಇರಲಿಲ್ಲ. ಹೇಗೋ ಅದರ ಬಗ್ಗೆ ಅರಿತ ವಿದೇಶಮಂತ್ರಿ ಭುಟ್ಟೋ ಅಲ್ಲಿಗೆ ಭೇಟಿ ನೀಡಲು ಪ್ರಯತ್ನಿಸಿದರು. ಆ ಪ್ರಯತ್ನಕ್ಕೆ ಸೇನಾನೆಲೆಯ ಅಮೆರಿಕನ್ ಮುಖ್ಯಸ್ಥರಿಂದ ಬಂದ ಉತ್ತರ ಹೀಗಿತ್ತು- ‘ಮಾನ್ಯ ಮಂತ್ರಿಗಳು ಸೇನಾನೆಲೆಯ ಸ್ವಾಗತ ವಿಭಾಗಕ್ಕೆ ಬರಬಹುದು. ಅಲ್ಲಿ ಚಹಾ ಮತ್ತು ಬಿಸ್ಕೆಟ್​ಗಳನ್ನು ಸೇವಿಸಬಹುದು. ಅಲ್ಲಿಂದಾಚೆಗೆ ಅವರಿಗೆ ಪ್ರವೇಶವಿಲ್ಲ’.

ಪಾಕಿಸ್ತಾನಿ ನೆಲದ ಒಂದು ಭಾಗಕ್ಕೆ ಅಲ್ಲಿನ ವಿದೇಶಮಂತ್ರಿಗೇ ಪ್ರವೇಶವಿಲ್ಲ ಎನ್ನುವುದು ಯಾವುದೇ ಸ್ವಾಭಿಮಾನಿ ಪಾಕಿಸ್ತಾನೀಯನನ್ನು ಕೆರಳಿಸುವುದು ಸಹಜ. ತನ್ನ ದೇಶವನ್ನು ಅಮೆರಿಕದ ಅಡಿಯಾಳಿನ ಸ್ಥಾನದಿಂದ ದೂರ ಒಯ್ಯಲು ಲೆಕ್ಕಹಾಕತೊಡಗಿದ ಭುಟ್ಟೋರಿಗೆ 1962ರ ಯುದ್ಧದಲ್ಲಿ ಭಾರತವನ್ನು ಅವಮಾನಿಸಿದ ಚೀನಾ ಆಪ್ಯಾಯಮಾನವಾಗಿ ಕಂಡಿತು. ತ್ವರಿತ ಗತಿಯಲ್ಲಿ ಪ್ರಯತ್ನವನ್ನಾರಂಭಿಸಿದ ಭುಟ್ಟೋ ಜನವರಿ 1963ರಲ್ಲೇ ಚೀನಾ ಜತೆ ಸ್ನೇಹಸೌಹಾರ್ದಕ್ಕೆ ನಾಂದಿ ಹಾಡಿದರು. 1965ರ ಯುದ್ಧದ ಸಮಯದಲ್ಲಿ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಪೂರೈಕೆ ನಿಲ್ಲಿಸಿದ ಅಮೆರಿಕ ನಂಬಿಕೆಗೆ ಅನರ್ಹ ಎಂಬ ಭಾವನೆಯನ್ನು ಭುಟ್ಟೋರ ಮನಸ್ಸಿನಲ್ಲಿ ಮೂಡಿಸಿದರೆ, ಪಾಕಿಸ್ತಾನದ ಪರವಾಗಿ ನಿಂತು ಭಾರತವನ್ನು ಹೆದರಿಸಲು ನೋಡಿದ ಚೀನಾ ನಂಬಿಗಸ್ತ ಮಿತ್ರನಂತೆ ಕಂಡಿತು. ಮುಂದೆ 1971ರ ಯುದ್ಧದ ನಂತರ ರಾಷ್ಟ್ರಾಧ್ಯಕ್ಷರಾದ ಭುಟ್ಟೋ ತಮ್ಮ ದೇಶವನ್ನು ಅಮೆರಿಕದಿಂದ ಮತ್ತಷ್ಟು ದೂರ ಒಯ್ದರು, ಚೀನಾಗೆ ಇನ್ನಷ್ಟು ಹತ್ತಿರವಾಗಿಸಿದರು. ಪಾಕ್ ಆಕ್ರಮಿತ ಕಾಶ್ಮೀರದ ಮೂಲಕ ಎರಡೂ ದೇಶಗಳನ್ನು ಸಂರ್ಪಸುವ ಕಾರಾಕೊರಂ ರಸ್ತೆ ನಿರ್ವಣವಾದದ್ದು ಭುಟ್ಟೋರ ಕಾಲದಲ್ಲೇ. ಶೀತಲಸಮರದ ದಿನಗಳಲ್ಲಿ ಏಷ್ಯಾ ವಲಯದಲ್ಲಿ ವಾಷಿಂಗ್ಟನ್ ಸೋವಿಯತ್-ವಿರೋಧಿ ಸಾಮರಿಕ ಯೋಜನೆಯಲ್ಲಿ ಪ್ರಮುಖ ಪಾತ್ರಧಾರಿಯಾಗಿದ್ದ ಪಾಕಿಸ್ತಾನ ಹೀಗೆ ಅಮೆರಿಕದಿಂದ ದೂರ ಹೋಗತೊಡಗಿದ್ದು ನಿಕ್ಸನ್ ಸರ್ಕಾರಕ್ಕೆ ಸಮ್ಮತವಾಗಲಿಲ್ಲ. ಈ ಕುರಿತಾಗಿ ವಿದೇಶಾಂಗ ಕಾರ್ಯದರ್ಶಿ ಹೆನ್ರಿ ಕಿಸಿಂಜರ್ ಪ್ರಧಾನಿ ಭುಟ್ಟೋರಿಗೆ ಧಮಕಿ ಹಾಕಿದ ಸುದ್ದಿಯಿದೆ. ಆ ಧಮ್ಕಿ ಭುಟ್ಟೋರನ್ನು ಮತ್ತಷ್ಟು ಕೆರಳಿಸಿತೇ ವಿನಃ ಅವರ ನೀತಿಯಲ್ಲಿ ಬದಲಾವಣೆಯನ್ನೇನೂ ತರಲಿಲ್ಲ.

ತನ್ನ ಯೋಜನೆಗೆ ಸಹಕಾರಿಯಾಗದ ಸರ್ಕಾರಗಳನ್ನು ಉರುಳಿಸುವುದು ಅಮೆರಿಕದ ಶೀತಲಸಮರ ರಾಜಕಾರಣದ ಒಂದು ಅವಿಭಾಜ್ಯ ಅಂಗ. ಅದರಂತೆ ಭುಟ್ಟೋ ವಿರುದ್ಧ ಪಿತೂರಿ ಹೂಡಿದ ಅಮೆರಿಕದ ಸಿಐಎ ಸೇನಾ ದಂಡನಾಯಕ ಜಿಯಾ-ಉಲ್-ಹಖ್​ರಿಗೆ ಕುಮ್ಮಕ್ಕು ಕೊಟ್ಟು ಭುಟ್ಟೋ ಸರ್ಕಾರ ಉರುಳುವಂತೆ ಮಾಡಿತು. ಅಧಿಕಾರ ಗಟ್ಟಿಗೊಳಿಸಿಕೊಂಡ ಜಿಯಾ ಸಾಹೇಬರು ಭುಟ್ಟೋರನ್ನು ಗಲ್ಲಿಗೇರಿಸಿದ್ದೂ ಆಯಿತು. ಈ ಕ್ರೂರ ಕ್ರಮಕ್ಕೆ ಕಾರಣ ಅಮೆರಿಕ ಅಲ್ಲ. ಅದರ ಹಿಂದಿದ್ದದ್ದು ಪಾಕ್ ಸೇನೆ ಮತ್ತು ಸ್ವತಃ ಜಿಯಾಗೆ ಭುಟ್ಟೋ ಮೇಲಿದ್ದ ಅಸಾಧ್ಯ ಸಿಟ್ಟು. ಪಾಕ್ ಸೇನೆ ಭಾರತದ ವಿರುದ್ಧ ಸೋತು ಜನಮಾನ್ಯತೆ ಕಳೆದುಕೊಂಡರೆ ತಾನು ಗದ್ದುಗೇರಲು ಅನುಕೂಲವಾಗುತ್ತದೆ ಎಂದು ಲೆಕ್ಕಹಾಕಿ 1965ರ ಯುದ್ಧಕ್ಕೆ ಪ್ರಚೋದನೆ ನೀಡಿದ್ದು ಭುಟ್ಟೋ. 1971ರ ಯುದ್ಧಕ್ಕೂ ಆ ಅತಿ ಬುದ್ಧಿವಂತನೇ ಪ್ರಮುಖ ಕಾರಣ. ಇನ್ನು ವೈಯಕ್ತಿಕ ಅವಮಾನದ ಬಗ್ಗೆ ಹೇಳುವುದಾದರೆ, ‘ಅವನಿಗೆ ಫ್ರಾಕ್ ತೊಡಿಸಿ ಪಾಕಿಸ್ತಾನೀ ನಗರಗಳ ಬೀದಿಬೀದಿಗಳಲ್ಲಿ ಕುಣಿಸುತ್ತೇನೆ’ ಎಂದು ಸಾರ್ವಜನಿಕವಾಗಿ ಹೇಳಿ ಪಾಕ್ ಸೇನಾ ದಂಡನಾಯಕ ಮಹಮದ್ ಮೂಸಾ ಅವರನ್ನು ಭುಟ್ಟೋ ಅವಮಾನಿಸಿದ್ದರು. ಸ್ವತಃ ಜಿಯಾ ಬಗ್ಗೆ, ‘ಅವನೊಬ್ಬ ಜನರನ್ನು ರಂಜಿಸಲು ಕುಣಿಯುವ ಕೋತಿ’ ಎಂದು ಲೇವಡಿ ಮಾಡಿದ್ದರು. ಒಮ್ಮೆ ಭುಟ್ಟೋ ಮರೆಯಾಗುತ್ತಿದ್ದಂತೆ ಅಮೆರಿಕ ಬಯಸಿದ್ದೆಲ್ಲವನ್ನೂ ಜಿಯಾ ಒದಗಿಸತೊಡಗಿದರು, ಅಫ್ಘಾನಿಸ್ತಾನದಲ್ಲಿ ಸೋವಿಯತ್ ಸೇನೆಯ ವಿರುದ್ಧ ಅಮೆರಿಕದ ಸಿಐಎ ಮತ್ತು ಪಾಕಿಸ್ತಾನದ ಐಎಸ್​ಐ ಒಟ್ಟಿಗೆ ವ್ಯೂಹ ರಚಿಸಿದವು.

ಈಗ ಇಮ್ರಾನ್ ಖಾನ್ ನಮಗೆ ನೆನಪಿಸುತ್ತಿರುವುದು ಇದೆಲ್ಲವನ್ನೂ. ಅವರೂ ಪಾಕಿಸ್ತಾನವನ್ನು ಅಮೆರಿಕದಿಂದ, ಅಮೆರಿಕದ ಮಿತ್ರರಾದ ಪಶ್ಚಿಮ ಯೂರೋಪ್ ಮತ್ತು ಪಶ್ಚಿಮ ಏಷ್ಯಾ ದೇಶಗಳಿಂದ ದೂರ ಒಯ್ಯುತ್ತಿದ್ದಾರೆ. ರಷ್ಯಾಗೆ, ಚೀನಾಗೆ ಹತ್ತಿರವಾಗಿಸುತ್ತಿದ್ದಾರೆ. ಇಸ್ಲಾಮಿಕ್ ಜಗತ್ತಿನಲ್ಲೂ ಅಮೆರಿಕದ ಮಿತ್ರರಾದ ಸೌದಿ ಅರೇಬಿಯಾ ಮತ್ತು ಯುಎಇಗಳಿಗೆ ಪಥ್ಯವಾಗದಂತೆ ಟರ್ಕಿ ಮತ್ತು ಇರಾನ್ ಜತೆ ಸಂಬಂಧವೃದ್ಧಿ ಮಾಡಿಕೊಳ್ಳುತ್ತಿದ್ದಾರೆ.

ಈ ಎಲ್ಲ ಕಾರಣಗಳಿಂದಾಗಿ ಅಮೆರಿಕ ಪಿತೂರಿ ನಡೆಸಿ ತಮ್ಮ ಸರ್ಕಾರವನ್ನು ಉರುಳಿಸಲು ಪ್ರಯತ್ನಿಸುತ್ತಿದೆ ಎಂದವರು ಆಪಾದಿಸುತ್ತಿದ್ದಾರೆ. ಹಿಂದೆ ಜಿಯಾ-ಉಲ್-ಹಖ್ ವಹಿಸಿದ ಪಾತ್ರವನ್ನು ಇಂದು ಸೇನಾ ದಂಡನಾಯಕ ಕಮರ್ ಜಾವೆದ್ ಬಾಜ್ವಾ ವಹಿಸುತ್ತಿದ್ದಾರೆ ಎಂದವರು ಪಾಕ್ ಜನತೆಗೆ ಹೇಳುತ್ತಿದ್ದಾರೆ. ಒಟ್ಟಿನಲ್ಲಿ ದುರಂತ ನಾಯಕ ಭುಟ್ಟೋರಂತೆ ತಮ್ಮನ್ನು ಬಿಂಬಿಸಿಕೊಂಡು ಪಾಕ್ ಜನತೆಯ ಪ್ರೀತಿ, ಅನುಕಂಪ ಗಳಿಸಿಕೊಳ್ಳಲು ಹೆಣಗುತ್ತಿದ್ದಾರೆ. ತಾವೀಗ ವಿಶ್ವಾತಮತ ಗಳಿಸುವಲ್ಲಿ ಸೋತು ಮತ್ತೆ ಚುನಾವಣೆ ಎದುರಿಸಬೇಕಾದರೆ ಈ ಎಲ್ಲ ತಯಾರಿಯ ಅಗತ್ಯವಿದೆ ಎಂದವರು ತಿಳಿದಿದ್ದಾರೆ.

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net