ಆಯ್ಕೆಯ ಪ್ರಾಮುಖ್ಯ ಗೊತ್ತಿರಲಿ: ಮನೋಲ್ಲಾಸ

Manollasa
Published on
| ವಿದ್ಯಾ ಉಪೇಂದ್ರ ಜೋಶಿ

ಒಂದೂರಿನಲ್ಲಿ ಒಬ್ಬ ರಾಜನಿದ್ದ. ಸತ್ಯ, ನ್ಯಾಯ, ನಿಷ್ಠೆಯಿಂದ ರಾಜ್ಯವನ್ನಾಳುತ್ತಿದ್ದ. ಒಮ್ಮೆ ಆಸ್ಥಾನಕ್ಕೆ ದಿವಾನನನ್ನು ಆರಿಸುವ ಸಂದರ್ಭ ಬಂದಿತು. ಅವನು ತನಗೆ ಪರಿಚಯವಿದ್ದ ಒಬ್ಬ ಬಡ ನೇಯ್ಗೆಯವನನ್ನು ಆಯ್ಕೆ ಮಾಡಿದ. ಅಂತಹ ಪ್ರತಿಷ್ಠಿತ ಸ್ಥಾನಕ್ಕಾಗಿ ಹಂಬಲಿಸುತ್ತಿದ್ದ ಆಸ್ಥಾನದ ಅಧಿಕಾರಿಗಳಿಗೆ ಅಸಮಾಧಾನವಾಯಿತು. ಇದು ತಮಗೆ ಮಾಡಿದ ಅವಮಾನ ಎಂದು ಕೋಪಗೊಂಡರು. ಇಷ್ಟು ವರ್ಷಗಳ ಕಾಲ ಪ್ರಾಮಾಣಿಕತೆ, ಶ್ರದ್ಧೆಯಿಂದ ದುಡಿದರೂ ರಾಜ ತಮ್ಮನ್ನು ಕಡೆಗಣಿಸಿದ್ದಾನೆ ಎಂದು ವಿಷಾದ ವ್ಯಕ್ತಪಡಿಸಿದರು. ಧೈರ್ಯದಿಂದ ರಾಜನ ಆಜ್ಞೆಯನ್ನು ಬಹಿರಂಗವಾಗಿ ಪ್ರಶ್ನಿಸಿಯೇ ಬಿಟ್ಟರು. ‘ಮಹಾಪ್ರಭು, ತಾವು ತಿಳಿದವರು. ಆದರೂ ಏಕೆ ಇಂಥ ನಿರ್ಧಾರ ತೆಗೆದುಕೊಂಡಿರಿ, ನಾವು ವಿದ್ಯಾವಂತರು, ನಮ್ಮಲ್ಲಿಯೇ ಒಬ್ಬರನ್ನು ಆರಿಸುವ ಬದಲು ಅವನಿಗೆ ಅಂಥ ಉನ್ನತ ಸ್ಥಾನ ಕೊಡುವ ಅವಶ್ಯಕತೆ ಏನಿತ್ತು?’ ಎಂದು ವಾದಿಸಿದರು. ಅವನ ಅರ್ಹತೆಯನ್ನು ಆಸ್ಥಾನದಲ್ಲಿ ಪರೀಕ್ಷಿಸಲೇಬೇಕೆಂದು ಪಟ್ಟು ಹಿಡಿದರು. ರಾಜನಿಗೆ ತನ್ನ ಆಯ್ಕೆ ಮೇಲೆ ನಂಬಿಕೆಯಿತ್ತು, ಹೀಗಾಗಿ ಕೂಡಲೇ ದಿವಾನನನ್ನು ಆಸ್ಥಾನಕ್ಕೆ ಕರೆತರಲಾಯಿತು. ರಾಜನು

ದಿವಾನನನ್ನು ಕುರಿತು, ‘ನಿನ್ನಲ್ಲಿ ನನ್ನದೊಂದು ಕೋರಿಕೆ ಇದೆ. ನನಗೋಸ್ಕರ ನವಿರಾದ ಜೇಡರ ಬಲೆಯ ನೂಲಿನಿಂದ ಒಂದು ಹೊಸವಸ್ತ್ರವನ್ನು ನೇಯ್ದು ಕೊಡಬೇಕು, ಇದು ನಿನ್ನಿಂದ ಸಾಧ್ಯವಾಗದಿದ್ದರೆ ನಿನ್ನನ್ನು ಗಡಿಪಾರು ಮಾಡಲಾಗುವುದು’ ಎಂದ. ಇಂಥ ಅಸಾಧ್ಯ ಬೇಡಿಕೆ ಹಿಂದೆ ಯಾರದೋ ಕೈವಾಡ ಇದೆ ಎಂದು ಆತನಿಗೆ ಖಚಿತವಾಯಿತು, ಇದನ್ನು ಪತ್ತೆ ಹಚ್ಚಲೇಬೇಕೆಂದು ನಿರ್ಧಾರ ಮಾಡಿದ. ‘ಮಹಾರಾಜರೇ ಜೇಡರ ನೂಲಿನೆಳೆಯಿಂದ ವಸ್ತ್ರ ತಯಾರಿಸುವುದೇನು ಅಂತಹ ಕಷ್ಟದ ಕೆಲಸವಲ್ಲ, ಆದರೆ ಅದನ್ನು ತಯಾರಿಸಲು ಮುಖ್ಯವಾದ ಪದಾರ್ಥದ ಅವಶ್ಯಕತೆ ಇದೆ. ಅದನ್ನು ಒದಗಿಸಿ ಕೊಡಬೇಕು’ ಎಂದ. ರಾಜನು, ‘ಅದೇನು ಹೇಳು’ ಎಂದಾಗ, ‘ಅರಮನೆಯಲ್ಲಿಯೇ ಸರೋವರಕ್ಕೆ ಬೆಂಕಿ ಹಚ್ಚಿ, ನೀರಿನಿಂದ ಬೂದಿಯನ್ನು ತಂದುಕೊಡುವಂತೆ ನಿಮ್ಮ ಆಸ್ಥಾನದ ಅಧಿಕಾರಿಗಳಿಗೆ ಹೇಳಿ’ ಎಂದು ನುಡಿದ. ಇದನ್ನು ಕೇಳಿ ಅಧಿಕಾರಿ ಗಳಲ್ಲೊಬ್ಬ ಸಿಡಿಮಿಡಿಗೊಂಡು ಉದ್ವೇಗದಿಂದ ನೀರಿಗೆ ಬೆಂಕಿ ಹಚ್ಚುವುದು ಹೇಗೆ ಸಾಧ್ಯ ಎಂದು ಕೂಗಾಡತೊಡಗಿದ. ಜೊತೆಗೆ ಎಲ್ಲ ಅಧಿಕಾರಿಗಳು ಕೂಡ ದನಿಗೂಡಿಸಿ ಆರ್ಭಟಿಸತೊಡಗಿದರು. ಅದಕ್ಕೆ ದಿವಾನನು, ‘ಮಹಾರಾಜರೇ ಜೇಡರ ಬಲೆಯ ನೂಲಿನಿಂದ ವಸ್ತ್ರ ನೇಯಬಹುದಾದರೆ ನೀರಿಗೆ ಬೆಂಕಿ ಹಚ್ಚುವುದು ಖಂಡಿತ ಸಾಧ್ಯ’ ಎಂದಾಗ ರಾಜನು ಸಂತೋಷಗೊಂಡು ‘ಭೇಷ್’ ಎಂದ. ಅವನ ಬುದ್ಧಿವಂತಿಕೆ, ತೀಕ್ಷ್ಣತೆಗೆ ಅಧಿಕಾರಿಗಳೆಲ್ಲರೂ ತಲೆ ತಗ್ಗಿಸಿ ನಿಂತರು. ಅಜ್ಞಾನದ ಫಲ ಅಹಂಕಾರ, ಅಹಂಕಾರದ ಫಲ ದ್ವೇಷ, ದ್ವೇಷದ ಫಲವೇ ಸರ್ವನಾಶ. ಅಹಂಕಾರವಿಲ್ಲದ ಮನುಷ್ಯ ಯಾವ ಧರ್ಮಗ್ರಂಥವನ್ನೂ ಓದದೇ, ಯಾವುದೇ ಮಂದಿರವನ್ನೂ ಪ್ರವೇಶಿಸದೆ ಮೋಕ್ಷವನ್ನು ಪಡೆಯುತ್ತಾನೆ. ಹಿರಿಯರ ಅನುಭವ ಪುಸ್ತಕ ಜ್ಞಾನಕಿಂತ ಹೆಚ್ಚಿನದು. ನಮ್ಮ ವ್ಯಕ್ತಿತ್ವ ಮಹಾರಾಜನಂತಿರಬೇಕು, ಅಹಂಕಾರ ಸೇವಕನಂತಿರಬೇಕು. ‘ನಾನು’ ಎಂಬುದನ್ನು ಮರೆತು, ‘ನನ್ನಿಂದ’ ಎನ್ನುವುದನ್ನು ತೊರೆದು, ‘ನಾವು’ ಎಂಬುದು ನೆನೆದು, ‘ನಮ್ಮಿಂದ’ ಎಂಬುದು ಮನಸ್ಸಿಟ್ಟು ಎಲ್ಲರೊಳಗೊಂದಾಗಿ ಬದುಕಿದರೆ ಅವನೇ ನಿಜವಾದ ಸಾಧಕ.

(ಲೇಖಕರು ಹವ್ಯಾಸಿ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net