

ಹೃದಯದಲ್ಲಿ ನಿರ್ದಿಷ್ಟ ಭಾವನೆಗಳನ್ನು ಸ್ಪುರಿಸುವಂತೆ ಮಾಡಲು, ನಿರ್ದಿಷ್ಟ ಅನುಕ್ರಮದಲ್ಲಿ ಒಂದು ಸ್ವರಸಮೂಹವನ್ನು ಬಳಸುವ ಮಧುರ ರೂಪಿಕೆಗಳೇ ರಾಗಗಳು. ಪ್ರತಿಯೊಂದು ರಾಗವೂ ತನ್ನದೇ ಆದ ವಿಶಿಷ್ಟ ಸ್ವರಗಳ, ಆರೋಹಣ ಮತ್ತು ಅವರೋಹಣಗಳ ಚಲನಾ ವಿಧಾನಗಳನ್ನು ಹೊಂದಿದೆ.
ಸನಾತನ ಧರ್ಮದಲ್ಲಿ ಪರಮಾತ್ಮನನ್ನು ನಾದಸ್ವರೂಪನೆಂದು ವರ್ಣಿಸಲಾಗಿದೆ. ಆದ್ದರಿಂದಲೇ ನಾವು ಅವನನ್ನು ‘ನಾದಬ್ರಹ್ಮ’ನೆಂದು ಕರೆಯುತ್ತೇವೆ. ಸಂಗೀತದ ಉಗಮಕ್ಕೆ ಶಬ್ದ ಅಥವಾ ನಾದವೇ ಕಾರಣವೆಂಬುದು ನಮಗೆಲ್ಲ ತಿಳಿದಿರುವ ವಿಷಯ. ಆದರೆ ನಾದವೇ ಇಡೀ ಸೃಷ್ಟಿಯ ಉಗಮದ ಮೂಲವೆಂದು ಸನಾತನ ಧರ್ಮವು ಸಾರುತ್ತದೆ! ಇದಕ್ಕೆ ತರ್ಕಬದ್ಧ ಕಾರಣವೂ ಇದೆ.
ತೈತ್ತಿರೀಯ ಉಪನಿಷತ್ತು ವಿಶ್ವದ ಸೃಷ್ಟಿಯ ಪ್ರಕ್ರಿಯೆಯನ್ನು ಹೀಗೆ ವಿವರಿಸುತ್ತದೆ:
ಆದಿಯಲ್ಲಿ, ಆ ಪರಮೋಚ್ಛ ದಿವ್ಯತೆಯು ಮಾತ್ರವೇ ಇತ್ತು. ಇದನ್ನೇ ನಮ್ಮ ಶಾಸ್ತ್ರಗಳು ‘ಬ್ರಹ್ಮ’ ಅಥವಾ ‘ಆತ್ಮ’ನೆಂದು ಕರೆದಿವೆ. ಬ್ರಹ್ಮನು ವಿಶ್ವವನ್ನು ಸೃಷ್ಟಿಸಲು ಸಂಕಲ್ಪಿಸಿದಾಗ ಪ್ರಪ್ರಥಮವಾಗಿ ಹೊರಹೊಮ್ಮಿದ್ದು ‘ಆಕಾಶ’. ‘ತಸ್ಮಾದ್ವಾ ಏತಸ್ಮಾದಾತ್ಮನ್ ಆಕಾಶಃ ಸಂಭೂತಃ’ (ತೈತ್ತಿರೀಯ-2.1.1) ಅಲ್ಲಿಂದ ಮುಂದುವರಿದು, ಆಕಾಶದಿಂದ ವಾಯು, ವಾಯುವಿನಿಂದ ಅಗ್ನಿ, ಅಗ್ನಿಯಿಂದ ಜಲ, ಜಲದಿಂದ ಪೃಥ್ವಿ, ಪೃಥ್ವಿಯಿಂದ ಸಸ್ಯವರ್ಗ, ಸಸ್ಯವರ್ಗದಿಂದ ಆಹಾರ ಮತ್ತು ಆಹಾರದಿಂದ ಮಾನವನ ಉದಯವಾಯಿತು.
‘ಆಕಾಶಾತ್ ವಾಯುಃ, ವಾಯೋರಗ್ನಿಃ, ಅಗ್ನೇರಾಪಃ, ಅದ್ಭ್ಯಃ ಪೃಥಿವೀ, ಪೃಥಿವ್ಯಾ ಓಷಧಯಃ, ಓಷಧೀಭ್ಯೋ ಅನ್ನಂ, ಅನ್ನಾತ್ ಪುರುಷಃ’ (ತೈತ್ತಿರೀಯ ಉಪನಿಷತ್- 2.1.1)
ಪ್ರಶ್ನೋಪನಿಷತ್ತಿನ ಪ್ರಕಾರ, ಪಂಚಭೂತಗಳಲ್ಲಿ ಪ್ರತಿಯೊಂದಕ್ಕೂ ತನ್ನದೇ ಆದ ವಿಶಿಷ್ಟ ಗುಣಗಳಿವೆ. ಶಬ್ದವು ಆಕಾಶದ ಗುಣ; ಶಬ್ದ ಹಾಗೂ ಸ್ಪರ್ಶಗಳು ವಾಯುವಿನ ಗುಣಗಳು; ಹಾಗೆಯೇ, ಶಬ್ದ, ಸ್ಪರ್ಶ ಮತ್ತು ರೂಪಗಳು ಅಗ್ನಿಯ ಗುಣಗಳು; ಶಬ್ದ, ಸ್ಪರ್ಶ, ರೂಪ ಮತ್ತು ರಸಗಳು ಜಲದ ಗುಣಗಳು; ಕೊನೆಯದಾಗಿ ಪೃಥ್ವಿಯು ಶಬ್ದ, ಸ್ಪರ್ಶ, ರೂಪ, ರಸಗಳಲ್ಲದೆ ಗಂಧವನ್ನೂ ಹೊಂದಿದೆ. ಆದ್ದರಿಂದ, ಸೃಷ್ಟಿಯಲ್ಲಿ ಪಂಚಭೂತಗಳ ಪೈಕಿ ಮೊಟ್ಟಮೊದಲು ಉಗಮವಾದ ಆಕಾಶವು ಅತ್ಯಂತ ಸೂಕ್ಷ್ಮವಾದದ್ದಾದರೆ, ಕೊನೆಯಲ್ಲಿ ಬಂದ ಪೃಥ್ವಿಯು ಸ್ಥೂಲವಾದದ್ದು. (ಸೂಕ್ಷ್ಮಾತಿಸೂಕ್ಷ್ಮವಾದ ಆತ್ಮ ಅಥವಾ ಬ್ರಹ್ಮನಿಂದ ಆಕಾಶವು ಬಂದಿತು.) ಸೂಕ್ಷ್ಮತೆಯು ಹೆಚ್ಚಾದಷ್ಟೂ, ಅದರ ಪ್ರಭಾವವು ಸೃಷ್ಟಿಯಲ್ಲಿ ಹೆಚ್ಚು ಶಕ್ತಿಶಾಲಿ ಮತ್ತು ಪ್ರಭಾವಶಾಲಿ. ಹೀಗೆ, ಆಕಾಶದ ಗುಣವಾದ ಶಬ್ದವು ನಮ್ಮ ಅಸ್ತಿತ್ವದ ಕಣ ಕಣದ ಮೇಲೂ ಆಳವಾದ ಪ್ರಭಾವವನ್ನು ಬೀರುವ ಸಾಮರ್ಥ್ಯ ಹೊಂದಿದೆ. ಶಬ್ದವು ಮೂಲತಃ ‘ಕಂಪನ’ಗಳಿಂದ ಕೂಡಿರುವುದರಿಂದ, ಅದರ ಪ್ರಭಾವವು ಸೃಷ್ಟಿಯ ಎಲ್ಲ ವಸ್ತುಗಳ ಮೇಲೆ ಆಗಿಯೇ ಆಗುತ್ತದೆ. ಏಕೆಂದರೆ, ನಮ್ಮ ದೇಹವೂ ಸೇರಿ ಸೃಷ್ಟಿಯ ಪ್ರತಿ ವಸ್ತುವೂ ಯಾವುದೋ ಒಂದು ಆವರ್ತನದಲ್ಲಿ ಕಂಪಿಸುತ್ತದೆ ಮತ್ತು ಇತರ ಕಂಪನಗಳಿಗೆ ಪ್ರತಿಸ್ಪಂದಿಸುತ್ತದೆ. ಆದ್ದರಿಂದ, ಒಂದು ವೇಳೆ ನಾವು ಶಬ್ದವನ್ನು ಕೇಳದೇ ಇದ್ದರೂ, ಅದರ ಪ್ರಭಾವವು ನಮ್ಮ ಮೇಲೆ ಸದಾ ಇದ್ದೇ ಇರುತ್ತದೆ.
ಆಕಾಶವಿಲ್ಲದೆ ಶಬ್ದವಿರಲು ಸಾಧ್ಯವಿಲ್ಲ. ಆಕಾಶದಲ್ಲಿ ತೇಲಿ ಬಂದ ಶಬ್ದಕಂಪನಗಳು ನಮ್ಮ ಕಿವಿತಮಟೆ (ಛಿಚ್ಟಛ್ಟ್ಠ) ಗಳಿಗೆ ಬಡಿದಾಗ ಅವುಗಳಲ್ಲಿಯೂ ಕಂಪನವುಂಟಾಗಿ ಶಬ್ದದ ಉತ್ಪತ್ತಿಯಾಗುತ್ತದೆ. ನಮ್ಮ ಕಂಠದ ವಾಕ್ತಂತು (ಡಟ್ಚಚ್ಝ ್ಚ್ಟಠ) ಗಳಲ್ಲಾಗಲೀ ಅಥವಾ ಯಾವುದೇ ವಾದ್ಯದಲ್ಲಾಗಲೀ ಉತ್ಪತ್ತಿಯಾಗುವ ಎಲ್ಲ ಶಬ್ದಗಳೂ ಕಂಪನದಿಂದಲೇ ಆಗಿವೆ.
ಸನಾತನ ಧರ್ಮವು ತಿಳಿಸುವಂತೆ, ಸೃಷ್ಟಿಯಲ್ಲಿ ಬ್ರಹ್ಮನ ಪ್ರಥಮ ಅಭಿವ್ಯಕ್ತ ರೂಪವೇ ಶಬ್ದ. ಆ ಪ್ರಥಮ ಶಬ್ದವೇ ‘ಓಂ’ಕಾರ. ಬ್ರಹ್ಮನಿಗೆ ನಿಕಟವಾದ ಓಂಕಾರವು ಬ್ರಹ್ಮನೇ ಎಂದು ಮಾಂಡೂಕ್ಯ ಉಪನಿಷತ್ತು ಹೇಳುತ್ತದೆ:
ಓಮಿತ್ಯೇತದಕ್ಷರಮಿದಂ ಸರ್ವ ತಸ್ಯೋಪವ್ಯಾಖ್ಯಾನಂ ಭೂತಂ ಭವದ್ವಿಷ್ಯದಿತಿ ಸರ್ವಮೋಂಕಾರ ಏವ |
ಯಚ್ಛಾನ್ಯತ್ತಿ ›ಕಾಲಾತೀತಂ ತದಪ್ಯೋಂಕಾರ ಏವ ||
‘ಓಂ ಎಂಬ ಅಕ್ಷರವು ಸರ್ವವನ್ನೂ ತಿಳಿಸುವ ಶಬ್ದವಾಗಿದೆ. ಭೂತ, ವರ್ತಮಾನ ಹಾಗೂ ಭವಿಷ್ಯ- ಎಲ್ಲವೂ ಇದೇ ಆಗಿದೆ. ತ್ರಿಕಾಲಾತೀತವಾದ ಆ ಬ್ರಹ್ಮವೂ ಈ ‘ಓಂ’ಕಾರವೇ ಆಗಿದೆ’.
ಸಂಗೀತವು ಮೂಲವಾಗಿ ನಾದ ಅಥವಾ ಶಬ್ದವೇ ಆಗಿರುವುದರಿಂದ, ಸಂಗೀತವು ಸೃಷ್ಟಿಯಲ್ಲಿ ಬ್ರಹ್ಮನ ಪ್ರಥಮ ಅಭಿವ್ಯಕ್ತ ರೂಪವಾದ ಓಂಕಾರದಿಂದಲೇ ಉಗಮವಾಗಿದೆಯೆಂದು ಹೇಳಬಹುದು. ಹೀಗೆ ಸಂಗೀತವು ಬ್ರಹ್ಮನ ಅಥವಾ ಪರಮ ದಿವ್ಯತೆಯ ಪ್ರತಿರೂಪವೇ ಆಗಿದೆ.
ಸನಾತನ ಧರ್ಮದ ಎಲ್ಲ ವೇದಮಂತ್ರಗಳ ಪಠಣವು ‘ಸ್ವರಿತ’, ‘ಉದಾತ್ತ’ ಮತ್ತು ‘ಅನುದಾತ್ತ’ (ಮಧ್ಯಮ, ಏರು ಮತ್ತು ಇಳಿ) ಶೃತಿಗಳಲ್ಲಿ ಒಂದು ಗೀತೆಯ ಸ್ವರೂಪದಲ್ಲಿಯೇ ನಡೆಯುತ್ತದೆ. ಅದರಲ್ಲೂ, ನಾಲ್ಕು ವೇದಗಳ ಪೈಕಿ ಮೂರನೆಯದಾದ ಸಾಮವೇದದಲ್ಲಿ ಮಂತ್ರವು ಗೀತೆಯಂತೆಯೇ ಹಾಡಲ್ಪಡುತ್ತದೆ. ಹೀಗೆ, ಸನಾತನ ಧರ್ಮದಲ್ಲಿ ಸಾಮವೇದವು ಸಂಗೀತದ ಮೂಲವಾಗಿದೆ. ಹಾಡಲು ಸಾಧ್ಯವಾಗುವಂತೆ ಅಳವಡಿಸಲ್ಪಟ್ಟ ಋಗ್ವೇದದ ಮಂತ್ರಗಳನ್ನು ನಾವು ಸಾಮವೇದದಲ್ಲಿ ಕಾಣಬಹುದು. ಈ ಮಂತ್ರಗಳನ್ನು ಯಜ್ಞ-ಯಾಗಾದಿಗಳಲ್ಲಿ ಮೂರರಿಂದ ಏಳು ಸಂಗೀತದ ಸ್ವರಗಳನ್ನು ಉಪಯೋಗಿಸಿಕೊಂಡು ಋತ್ವಿಜರು ಹಾಡುತ್ತಿದ್ದರು. ಸಂಗೀತದ ಮೊದಲ ರಾಗವು ಸಾಮವೇದದಿಂದ ಉಗಮವಾಯಿತೆಂದು ನಂಬಲಾಗಿದೆ. ವೈದಿಕ ಯುಗದ ಉತ್ತರಾರ್ಧ ಕಾಲದಲ್ಲಿ, ಸಂಗೀತವು ವೇದಮಂತ್ರಗಳನ್ನು ವಿವಿಧ ರಾಗಗಳಲ್ಲಿ ಹಾಡುವುದಕ್ಕೆ ಸೀಮಿತವಾಗಿತ್ತು.
ಭಗವದ್ಗೀತೆಯ ವಿಭೂತಿ ಯೋಗದಲ್ಲಿ ಭಗವಾನ್ ಶ್ರೀಕೃಷ್ಣನು ಘೊಷಿಸಿರುವಂತೆ, ‘ವೇದಾನಾಂ ಸಾಮವೇದೋಸ್ಮಿ’ (10.22) - ‘ವೇದಗಳ ಪೈಕಿ ನಾನು ಸಾಮವೇದವಾಗಿದ್ದೇನೆ’. ಎಂದರೆ, ಸಾಮವೇದದಲ್ಲಿ ಮಧುರವಾಗಿ ಹಾಡಲ್ಪಡುವ ಮಂತ್ರಗಳು ದಿವ್ಯತೆಯ ಅತ್ಯುನ್ನತ ನಿರೂಪಣೆಯೆಂಬುದು ಇದರ ಅರ್ಥ. ವೇದಮಂತ್ರಗಳನ್ನು ಹಾಡುವ ವಿಧಾನದ ಕುರಿತು ಆಳವಾದ ವಿವರಣೆಯನ್ನು ನಾವು ಸಾಮವೇದದಲ್ಲಿ ಕಾಣಬಹುದು. ಇದೇ ರೀತಿಯ ವಿವರಣೆಗಳು ಗಾನಯೋಗಿಯೆಂದು ಕರೆಯಲ್ಪಡುವ ನಾರದ ಮಹರ್ಷಿಯ ವ್ಯಾಖ್ಯಾನಗಳಲ್ಲಿಯೂ ಇವೆ. ವೇದಮಂತ್ರಗಳನ್ನು ಜಗತ್ತಿಗೆ ನೀಡಿದ ಋಷಿಗಳು ತಮ್ಮ ಅಂತರಂಗದಲ್ಲಿ ಕಂಡುಕೊಂಡ ಆಳವಾದ ತಾತ್ವಿಕ ಸತ್ಯಗಳ ಜೊತೆಗೆ ಸಂಗೀತ, ಛಂದಸ್ಸು ಮತ್ತು ಭಾಷಾಶಾಸ್ತ್ರಗಳು ಮೇಳೈಸಿರುವುದನ್ನು ಸಾಮವೇದದಲ್ಲಿ ನೋಡಬಹುದು. ಅಂದಿನ ಕಾಲದ ಋಷಿಗಳು ‘ಆರ್ಷ’ ಭಾಷೆಯನ್ನು ಬಳಸುತ್ತಿದ್ದರು. ‘ಆರ್ಷ’ವು ‘ಗೀರ್ವಾಣ’ ಭಾಷೆಗೆ ಪೂರ್ವಗಾಮಿಯಾದ ಭಾಷೆ. ಮುಂದೆ ‘ಗೀರ್ವಾಣ’ವೇ ‘ಸಂಸ್ಕೃತ’ ಭಾಷೆಯಾಗಿ ವಿಕಸನಗೊಂಡಿತು.
ಮೊದಲು ಕೇವಲ ಮೂರು ಸ್ವರಗಳನ್ನು ಹೊಂದಿದ್ದು, ಕಾಲಕ್ರಮೇಣ ಸಪ್ತಸ್ವರಗಳಾಗಿ ಬೆಳೆದುಬಂದ ಸಾಮವೇದದ ಮೂಲ ಗಾಯನದಿಂದ ಭಾರತೀಯ ಸಂಗೀತದ ರಾಗಪದ್ಧತಿಯ ಉಗಮವಾಯಿತು. ಈ ಸಪ್ತಸ್ವರಗಳೆಂದರೆ, ಷಡ್ಜ (‘ಸ’), ಋಷಭ (‘ರಿ’), ಗಾಂಧಾರ (‘ಗ’), ಮಧ್ಯಮ (‘ಮ’), ಪಂಚಮ (‘ಪ’), ಧೈವತ (‘ದ’) ಮತ್ತು ನಿಷಾದ (‘ನಿ’). ಸಾಂಪ್ರದಾಯಿಕವಾಗಿ ನಂಬಿರುವಂತೆ, ಈ ಪ್ರತಿಯೊಂದು ಶುದ್ಧಸ್ವರವು ಒಂದೊಂದು ಪ್ರಾಣಿಯ ಶಬ್ದದಿಂದ ಉಗಮವಾಗಿದೆ. (ಅಲ್ಲದೆ, ಕೆಲವು ಸ್ವರಗಳು ತಮ್ಮದೇ ಆದ ಹೆಚ್ಚುವರಿ ಮೂಲಾರ್ಥಗಳನ್ನೂ ಹೊಂದಿವೆ.) ‘ಸ’ ಸ್ವರಕ್ಕೆ ಮೂಲ- ನವಿಲಿನ ಶಬ್ದ; ‘ರಿ’ ಸ್ವರಕ್ಕೆ - ಗೂಳಿ ಅಥವಾ ಬಾನಾಡಿಯ ಶಬ್ದ; ‘ಗ’ ಸ್ವರಕ್ಕೆ- ಆಡಿನ ಶಬ್ದ; ‘ಮ’ ಸ್ವರಕ್ಕೆ- ಪಾರಿವಾಳ ಅಥವಾ ಕ್ರೌಂಚ ಪಕ್ಷಿಯ ಶಬ್ದ; ‘ಪ’ ಸ್ವರಕ್ಕೆ- ಕೋಗಿಲೆಯ ಶಬ್ದ: ‘ದ’ ಸ್ವರಕ್ಕೆ- ಕುದುರೆಯ ಶಬ್ದ ಹಾಗೂ ‘ನಿ’ ಸ್ವರಕ್ಕೆ-ಆನೆಯ ಶಬ್ದ.
ಭಾರತೀಯ ಸಂಗೀತದ ಬಗ್ಗೆ ಮೊದಲ ಉಲ್ಲೇಖವನ್ನು ಮಾಡಿದ ಖ್ಯಾತಿ ಪಾಣಿನಿಗೆ (ಕ್ರಿ.ಪೂ. 500) ಸಲ್ಲುತ್ತದೆ. ಭಾರತದ ಹಲವಾರು ಶಾಸ್ತ್ರೀಯ ಸಂಗೀತ ಮತ್ತು ನಾಟ್ಯ ಸಂಪ್ರದಾಯಗಳಿಗೆ ಅಡಿಪಾಯವಾಗಿರುವ, ಕ್ರಿ. ಶ. 400ರಲ್ಲಿ ರಚಿತವಾದ ಭರತ ಮುನಿಯ ‘ನಾಟ್ಯಶಾಸ್ತ್ರ’ವು ಸಂಗೀತದ ಬಗ್ಗೆ ಪ್ರಥಮ ಲಿಖಿತ ಗ್ರಂಥ. ‘ನಾಟ್ಯಶಾಸ್ತ್ರ’ವು ಸಂಗೀತವನ್ನು ಸ್ಥಾಯಿಗಳಾಗಿ ಮತ್ತು 22 ಶ್ರುತಿಗಳಾಗಿ ವಿಂಗಡಿಸಿದೆ.
ಭಾರತೀಯ ಶಾಸ್ತ್ರೀಯ ಸಂಗೀತವು ಮೂಲತಃ ಭಕ್ತಿ ಪ್ರಧಾನವಾಗಿದ್ದು, ಭಗವಂತನ ಮಹಿಮೆಗಳನ್ನು ಹಾಡಿ ಕೊಂಡಾಡುವುದು ಅದರ ಮುಖ್ಯ ಉದ್ದೇಶ. ದೇವಾಲಯ ಗಳಲ್ಲಿ ಅಥವಾ ಇತರ ಸಾಮೂಹಿಕ ವೇದಿಕೆಗಳಲ್ಲಿ ಪ್ರದರ್ಶನ ಕಲೆಯಾಗಿ ಹಾಡಲ್ಪಡುತ್ತಿದ್ದ ಸಂಗೀತವನ್ನು ಮಾರ್ಗೀಯ ಸಂಗೀತವೆಂದು ಕರೆದರೆ, ದೇವಾಲಯಗಳ ಹೊರಗೆ ಸಾಮಾನ್ಯ ಜನಜೀವನದಲ್ಲಿ ಹಾಡಲ್ಪಡುತ್ತಿದ್ದ ಸಂಗೀತವನ್ನು ದೇಶೀ ಸಂಗೀತವೆಂದು ಕರೆಯುತ್ತಿದ್ದರು. ನಮ್ಮ ದೇಶದಲ್ಲಿ ಕಾಲಕ್ರಮೇಣ ಜನಪ್ರಿಯತೆಯನ್ನು ಗಳಿಸಿ ಪ್ರಸಿದ್ಧಿ ಪಡೆದ ಎರಡು ಪ್ರಧಾನ ಸಂಗೀತ ಸಂಪ್ರದಾಯಗಳೆಂದರೆ, ದಕ್ಷಿಣ ಭಾರತದಲ್ಲಿ ‘ಕರ್ನಾಟಕ ಶಾಸ್ತ್ರೀಯ ಸಂಗೀತ’ ಹಾಗೂ ಉತ್ತರ ಭಾರತದಲ್ಲಿ ‘ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ’.
15ನೇ ಶತಮಾನದಲ್ಲಿ ಇಂದಿನ ಕರ್ನಾಟಕ ಪ್ರದೇಶದಲ್ಲಿ ಹುಟ್ಟಿ ಬೆಳೆದ ಮಹಾನ್ ಸಂತ ಪುರಂದರದಾಸರನ್ನು ‘ಕರ್ನಾಟಕ ಶಾಸ್ತ್ರೀಯ ಸಂಗೀತದ ಪಿತಾಮಹ’ರೆಂದು ಪರಿಗಣಿಸಲಾಗಿದ್ದು, ರಾಗಗಳ ಒಂದು ಸಂಘಟಿತ ವ್ಯವಸ್ಥೆಯನ್ನು ರಚಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅಂತೆಯೇ, 18ನೇ ಶತಮಾನದಲ್ಲಿ ‘ಕರ್ನಾಟಕ ಶಾಸ್ತ್ರೀಯ ಸಂಗೀತದ ತ್ರಿಮೂರ್ತಿ’ಗಳೆಂದೇ ಪ್ರಸಿದ್ಧರಾದ ತ್ಯಾಗರಾಜ, ಮುತ್ತುಸ್ವಾಮಿ ದೀಕ್ಷಿತ ಮತ್ತು ಶ್ಯಾಮಾ ಶಾಸ್ತ್ರಿಗಳು, ಕರ್ನಾಟಕ ಸಂಗೀತ ಪರಂಪರೆಗೆ ನೂತನ ರಾಗಗಳನ್ನು ನೀಡುವಲ್ಲಿ ಮತ್ತು ಸಂಗೀತವನ್ನು ಜನಪ್ರಿಯಗೊಳಿಸುವಲ್ಲಿ ವಿಶಿಷ್ಟ ಕೊಡುಗೆಯನ್ನು ನೀಡಿದ್ದಾರೆ.
ಉತ್ತರ ಭಾರತದ ಸಂಗೀತ ಪರಂಪರೆಯಲ್ಲಿ, ಮಾರ್ಗೀಯ ಸಂಗೀತದ ಮುಖ್ಯಭಾಗವಾದ ‘ಧ್ರುಪದ್’ ಅಥವಾ ‘ಧ್ರುವಪದ’ಗಳನ್ನು ದೇವಾಲಯಗಳಲ್ಲಿ ದೇವರ ಸ್ತುತಿಗಳನ್ನು ಹಾಡಲು ಬಳಸುತ್ತಿದ್ದರು. ಕಾಲಕ್ರಮೇಣ, ಅದುವೇ ಕರ್ನಾಟಕ ಶಾಸ್ತ್ರೀಯ ಸಂಗೀತ ಪರಂಪರೆಯಿಂದ ಸ್ವಲ್ಪ ಭಿನ್ನವಾದ ಶೈಲಿಯಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವಾಗಿ ವಿಕಸನಗೊಂಡಿತು.
13ನೇ ಶತಮಾನದಿಂದ 17ನೇ ಶತಮಾನದವರೆಗೆ ದೇಶವನ್ನು ವ್ಯಾಪಿಸಿದ ಭಕ್ತಿ ಚಳವಳಿ ಸಂಗೀತವನ್ನು ಜನಸಾಮಾನ್ಯರಲ್ಲಿ ಸರಳ ಭಜನೆಗಳ ಸಾಮೂಹಿಕ ಗಾಯನದ ಮೂಲಕ ವ್ಯಾಪಕವಾಗಿ ಜನಪ್ರಿಯಗೊಳಿಸಿತು. ಅಲ್ಲದೆ, ಮರಾಠಿ ಸಂತರ ‘ಅಭಂಗ’ಗಳು, ಉತ್ತರ ಭಾರತದ ಸಂತ-ಕವಿಗಳ ‘ದೋಹ’ಗಳು ಮತ್ತು ‘ಚೌಪಾಯಿ’ಗಳು, ದಕ್ಷಿಣ ಭಾರತದ ಸಂತರ ಕೀರ್ತನೆಗಳು, ಅತ್ಯುನ್ನತ ಆಧ್ಯಾತ್ಮಿಕ ಜ್ಞಾನವನ್ನು ಸಂಗೀತ ಮಾಧ್ಯಮದ ಮೂಲಕ ಸುಲಭ ರೂಪದಲ್ಲಿ ಜನಸಾಮಾನ್ಯರಿಗೆ ತಲುಪಿಸುವಲ್ಲಿ ಯಶಸ್ವಿಯಾದವು.
ತಾಯಿಯ ಜೋಗುಳ ಹಾಡಿನಿಂದ ಹಿಡಿದು ಒಬ್ಬ ವಿದ್ವಾಂಸನ ಕಛೇರಿಯವರೆಗೆ ಸಂಗೀತವು ನಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿ ಬೆರೆತು, ಬೆಳೆದು ಬಂದಿದೆ. ಮನರಂಜನೆಗಾಗಿ ಮಾತ್ರವಲ್ಲದೆ, ಸೃಷ್ಟಿಮೂಲನಾದ ‘ನಾದಬ್ರಹ್ಮ’ನಿಂದ ಉಗಮವಾದ ಸಂಗೀತದ ಶ್ರವಣವೇ ನಮ್ಮ ಹೃದಯಗಳಲ್ಲಿ ಭಕ್ತಿಭಾವ ತರಂಗಗಳನ್ನು ಮೂಡಿಸಿ, ನಮ್ಮನ್ನು ಅತ್ಯುನ್ನತ ಆಧ್ಯಾತ್ಮಿಕ ಹಂತಕ್ಕೆ ಕೊಂಡುಹೋಗುವ ಸಾಮರ್ಥ್ಯವನ್ನು ಪಡೆದಿದೆ. ಇದನ್ನೇ, ಸಂತಕವಿ ತ್ಯಾಗರಾಜರು ತೆಲುಗು ಭಾಷೆಯಲ್ಲಿ, ‘ನಾದಲೋಲುಡೈ ಬ್ರಹ್ಮಾನಂದಮೊಂದವೇ ಓ ಮನಸಾ!’ ಎಂದು ಹಾಡಿದ್ದಾರೆ (ಓ ಮನವೇ! ನಾದಲೋಲನಾಗಿ ಬ್ರಹ್ಮಾನಂದವನ್ನು ಅನುಭವಿಸು!).
ಇಂತಹ ಭವ್ಯ-ದಿವ್ಯವಾದ ಸಂಗೀತ ಪರಂಪರೆಯನ್ನು ಉಳಿಸಿಕೊಂಡು ಬೆಳೆಸಲು ನಾವು ಮಾಡಲೇಬೇಕಾದ ಎರಡು ಮುಖ್ಯ ಕಾರ್ಯಗಳಿವೆ. ಮೊದಲನೆಯದು, ಇಂದಿನ ಯುವ ಪೀಳಿಗೆಯಲ್ಲಿ ಶಾಸ್ತ್ರೀಯ ಸಂಗೀತದಲ್ಲಿ ಅಭಿರುಚಿಯನ್ನು ಬೆಳೆಸಿ, ಅದನ್ನು ಅವರು ಮೆಚ್ಚಿ ಆಸ್ವಾದಿಸುವಂತೆ ಮಾಡುವುದು. ಎರಡನೆಯದು, ಈಗಾಗಲೇ ಭಾರತೀಯ ಶಾಸ್ತ್ರೀಯ ಸಂಗೀತ ಪರಂಪರೆಗೆ ತಮ್ಮನ್ನು ತಾವು ಸಮರ್ಪಿಸಿಕೊಂಡಿರುವ ಹಿರಿಯರಿಗೆ ಹಾಗೂ ಕಿರಿಯರಿಗೆ ಪ್ರೋತ್ಸಾಹ-ಪೋಷಣೆಗಳನ್ನು ಒದಗಿಸುವುದು.
ನಮ್ಮ ಶ್ರೀಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದಲ್ಲಿ ಯಾವುದೇ ಶುಲ್ಕವಿಲ್ಲದೆ ಸಂಗೀತ ಮತ್ತು ಕಲೆಗಳ ಪದವಿ ಹಾಗೂ ಸ್ನಾತಕೋತ್ತರ ಪದವಿಗಳನ್ನು ಪಡೆಯಲು ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಅವಕಾಶವನ್ನು ಕಲ್ಪಿಸಿದ್ದೇವೆ. ಅವರಿಗೆ ಶಿಕ್ಷಣವನ್ನು ಉಚಿತವಾಗಿ ನೀಡುವುದಲ್ಲದೆ, ಶಿಕ್ಷಣದ ನಂತರ ಅವರಿಗೆ ಜೀವನೋಪಾಧಿಯನ್ನು ಕಲ್ಪಿಸಲು ಸಂಕಲ್ಪಿಸಿದ್ದೇವೆ.
ಮಾನವ ಜನಾಂಗವನ್ನು ಸುಲಭ ಪಥದಲ್ಲಿ ಅನಂತತೆಯೆಡೆಗೆ ನಡೆಯಿಸುವ ನಮ್ಮ ದೇಶದ ಸಂಗೀತ ಪರಂಪರೆಯು ಚಿರಂತನವಾಗಿ ಉಳಿಯಲಿ, ಬೆಳೆಯಲಿ!
(ಲೇಖಕರು ಸಾಮಾಜಿಕ ಹಾಗೂ ಆಧ್ಯಾತ್ಮಿಕ ಗುರುಗಳು)