ನಿತ್ಯಜೀವನದಲ್ಲಿ ಧ್ಯಾನ, ಸಹನಶೀಲತೆಯ ಅವಶ್ಯಕತೆ..

Column F
Published on
ಭಾರತದ ಸಹಸ್ರಾರು ವರ್ಷದ ಆಧ್ಯಾತ್ಮಿಕ ಸಂಸ್ಕೃತಿಯ ನಿಜವಾದ ತಿರುಳು ಧ್ಯಾನ. ನಿಜವಾದ ಧ್ಯಾನದ ಅನುಷ್ಠಾನದಿಂದ ಮಾತ್ರ ಒಬ್ಬ ಸಾಧಕನ ಜೀವನದಲ್ಲಿ ವಿಶ್ವಪ್ರೇಮ, ತ್ಯಾಗ ಮತ್ತು ಸೇವೆ ಯೋಗ್ಯ ರೀತಿಯಲ್ಲಿ ಅಭಿವ್ಯಕ್ತವಾಗುವುದು. ಭಾರತೀಯ ಆಧ್ಯಾತ್ಮಿಕ ಜೀವನದ ಆದರ್ಶಗಳನ್ನು ಅರಿಯಲು ಒಂದು ಪರಿಣಾಮಕಾರಿಯಾದ ಸಾಧನವೆಂದರೆ ಪ್ರಾರ್ಥನೆ ಮತ್ತು ಧ್ಯಾನ. ಧ್ಯಾನವನ್ನು ಸಾರ್ಥಕ ಬದುಕಿಗೆ ದಾರಿದೀಪ ಹಾಗೂ ಜೀವನ ಸಂಜೀವಿನಿ ಎನ್ನಬಹುದು.

ಬದುಕಿನ ಬೇರೆ-ಬೇರೆ ಕ್ಷೇತ್ರಗಳಲ್ಲಿ, ವಿವಿಧ ಹಂತದಲ್ಲಿರುವ ನಾವೆಲ್ಲರೂ ಧ್ಯಾನದ ಸದುಪಯೋಗವನ್ನು ಪಡೆಯಬಹುದು. ಎಲ್ಲರೂ ತಮ್ಮದೇ ಆದ ರೀತಿಯಲ್ಲಿ ಯೋಗ್ಯ ಮಾರ್ಗದರ್ಶನ ಪಡೆದು ಧ್ಯಾನ ಜೀವನವನ್ನು ಪ್ರಾರಂಭಿಸಬಹುದು. ಧ್ಯಾನ ಮಾಡಲು ಪ್ರಾಮಾಣಿಕವಾಗಿ ಪ್ರಯತ್ನಿಸುವುದು ಪ್ರತಿಯೊಬ್ಬ ಎಚ್ಚೆತ್ತ ಮಾನವನ ಜನ್ಮಸಿದ್ಧ ಹಕ್ಕು. ಎಲ್ಲ ಜಾಗತಿಕ ಧರ್ಮಗಳು ಧ್ಯಾನವೆಂಬ ಆಧ್ಯಾತ್ಮಿಕ ಕೇಂದ್ರದಲ್ಲಿ ಸಮ್ಮಿಲನಗೊಂಡಾಗ ಜಗತ್ತಿನಾದ್ಯಂತ ಧರ್ಮಸಾಮರಸ್ಯ ಮತ್ತು ಶಾಂತಿಯನ್ನು ಹೊಂದಲು ಸಾಧ್ಯವಾಗುವುದು.

ಬದುಕಿನಲ್ಲಿ ನಾವು ಸಾಕ್ಷಿಯಾಗಿ ನಿಂತು ನಮ್ಮ ಸಾಮಾನ್ಯ ದೇಹೇಂದ್ರಿಯ ಸೀಮಿತ ವ್ಯಕ್ತಿತ್ವವನ್ನು ದಾಟಿ, ಮನೋವ್ಯಾಪಾರಗಳನ್ನು ನಿರ್ಲಿಪ್ತವಾಗಿ ಅರಿಯುವ ಮುಹೂರ್ತವೇ ನಿಜವಾದ ಧ್ಯಾನ ಜೀವನದ ಆರಂಭ. ಈ ಕ್ಷಣಿಕ ಬಾಳಿನ ಮರುಭೂಮಿಯಲ್ಲಿ ಕೀರ್ತಿ, ಸ್ಥಾನಮಾನ ಮತ್ತು ಸುಖಗಳನ್ನು ಮರೀಚಿಕೆಯಂತೆ ಬೆನ್ನಟ್ಟಿ ಹೋಗುತ್ತಿರುತ್ತೇವೆ. ಈ ಬದುಕು ಎಷ್ಟೊಂದು ಪೊಳ್ಳು. ಬರೀ ನಮ್ಮ ಇಂದ್ರಿಯಗಳನ್ನು ನೆಚ್ಚಿ ನಡೆದರೆ, ಅವು ಸುಖದುಃಖಗಳ ಸೆಳೆತಕ್ಕೆ ಸಿಕ್ಕಿಸುತ್ತವೆ ಎಂಬುದು ವಿವೇಕಜಾಗೃತಿಯಾದ ಎಲ್ಲ ಸಾಧಕರಿಗೆ ತಿಳಿದ ವಿಷಯ. ಸರಿಯಾಗಿ ವಿವೇಚಿಸಿ ನೋಡಿದರೆ ಬಾಳೆಂಬ ಪಾಠಶಾಲೆ ನಮಗೆ ಇದನ್ನು ಹಂತ-ಹಂತವಾಗಿ ಕ್ರಮೇಣ ತಿಳಿಸಿಕೊಡುತ್ತದೆ.

ದಿಕ್ಕುದೆಸೆ, ಗೊತ್ತು ಗುರಿಯಿಲ್ಲದೆ ಮನಸ್ಸಿನಲ್ಲಿ ಉದ್ಭವವಾಗುತ್ತಿರುವ ಆಲೋಚನೆ, ಭಾವನೆ, ಸಂವೇದನಗಳ ತರಂಗಗಳನ್ನು ಹೇಗೆ ಪರಿಷ್ಕೃತ ಗೊಳಿಸುವುದು ಎಂಬುದು ಎಲ್ಲರಿಗೂ ಜೀವನದುದ್ದಕ್ಕೂ ಕಾಡುವ ಒಂದು ಸಮಸ್ಯೆ. ಆಲೋಚನೆಗಳನ್ನು ನಿರ್ದಿಷ್ಟ ಗುರಿಯುಳ್ಳ ಪೂರ್ಣ ಅರಿವಿನಿಂದ ಕೂಡಿದ ಉಪಯುಕ್ತ ಆಲೋಚನೆಗಳಾಗಿ ಪರಿವರ್ತಿಸಲು ಪ್ರಯತ್ನ ಮಾಡಬೇಕು.

ಹೊರ ಜಗತ್ತಿನಂತೆಯೇ ಒಂದು ಒಳಜಗತ್ತು ಇದೆ. ಈ ಒಳಜಗತ್ತಿನಲ್ಲಿ ನಿಜವಾದ ಸ್ವಭಾವದ ಅಸ್ತಿತ್ವವೊಂದಿರುತ್ತದೆ. ಅದು ಬಾಹ್ಯ ಪ್ರಪಂಚಕ್ಕಿಂತಲೂ ವೈಭವಯುತವಾಗಿಯೂ ನಮ್ಮ ಹೃದಯಾಂತರಾಳದಲ್ಲಿ ಇರುವುದು. ಅದು ಯಾವುದರಿಂದಲೂ ಚಂಚಲವಾಗಲಾರದು. ಎತ್ತರದ ಪರ್ವತ- ಪ್ರದೇಶದಲ್ಲಿ ನಿಂತರೆ ಪ್ರವಾಹಗಳು ನಮ್ಮನ್ನು ಕೊಚ್ಚಿಕೊಂಡು ಹೋಗಲಾರವು. ಅದೇ ರೀತಿ ಮನಸ್ಸನ್ನು ಅರಿವಿನಿಂದ ಕೂಡಿರುವ ಎತ್ತರದ ಪ್ರಜ್ಞಾಪೂರ್ವಕ ಸ್ಥಿತಿಯಲ್ಲಿ ಇರಿಸಲು ಪ್ರಯತ್ನ ಮಾಡಿದರೆ ಜೀವನ ಸುಗಮವಾಗುವುದು. ಇದಕ್ಕೆ ಇರುವ ಏಕೈಕ ಮಾರ್ಗ ಎಂದರೆ ಧ್ಯಾನದ ಅಭ್ಯಾಸ.

ಧ್ಯಾನದಲ್ಲಿ ನಿರತವಾದಾಗ ಆಲೋಚನೆಗಳೆಲ್ಲ ನಿಯಂತ್ರಿಸಲ್ಪಟ್ಟು ಮನಸ್ಸಿನಲ್ಲಿ ಹೊಸ ಅರಿವು ಮೂಡಲು ಸಹಾಯವಾಗುತ್ತದೆ. ಈ ಧ್ಯಾನದಿಂದ ಉತ್ಪನ್ನವಾದ ಹೊಸ ಅರಿವಿನ ಜಾಗೃತಿಯ ಬೆಳಕಿನಲ್ಲಿ ನಿತ್ಯಜೀವನದ ಕರ್ತವ್ಯಗಳನ್ನು ಪ್ರಜ್ಞಾಪೂರ್ವಕವಾಗಿ ಭಗವತಾರ್ಪಣ ಭಾವದಿಂದ ಮತ್ತು ಪರಿಪೂರ್ಣತೆಯಿಂದ ನಿರ್ವಹಿಸಲು ಸಾಧ್ಯವಾಗುವುದು. ಧ್ಯಾನದ ಅಭ್ಯಾಸ ಮತ್ತು ಆಧ್ಯಾತ್ಮಿಕ ವಿಜ್ಞಾನ ಮನೆಮನೆಗಳಲ್ಲಿ ಮತ್ತು ಶಾಲಾ-ಕಾಲೇಜುಗಳಲ್ಲಿ ಶಿಕ್ಷಣದ ಅವಿಭಾಜ್ಯ ಅಂಗವಾದಲ್ಲಿ ಪ್ರತಿಯೊಬ್ಬರ ವ್ಯಕ್ತಿಗತ ಜೀವನ ಮತ್ತು ಸಮಾಜದಲ್ಲಿ ಕಂಡು ಬರುವ ಅನೇಕ ಸಮಸ್ಯೆಗಳನ್ನು ಪರಿಹರಿಸುವ ಆಂತರಿಕ ಶಕ್ತಿ ಮತ್ತು ಜ್ಞಾನ ನಮ್ಮದಾಗುವುದು.

ಈ ಹೊಸ ಅರಿವಿನ ಬೆಳಕಿನಲ್ಲಿ ಜೀವನದ ಅನುಭವಗಳನ್ನು ಚೆನ್ನಾಗಿ ಆಳವಾಗಿ ಚಿಂತಿಸಿ ಮಂಥಿಸಬೇಕು. ಮಾತ್ರವಲ್ಲದೆ ತದನಂತರವೂ ಬದುಕಲ್ಲಿ ಹೊಸ ನಿಲುವೂ ಹೊಸ ರೀತಿಯ ಕಾರ್ಯಾಚರಣೆ, ಹೊಸ ಜಾಗೃತಿ ಮತ್ತು ಹೊಸ ಸಂಕಲ್ಪಗಳ ಸೃಜನೆಯಾಗಬೇಕು. ಈ ಅಂತರಾತ್ಮನ ಬೆಳಕಿನಿಂದ ಬುದ್ಧಿ ಬೆಳಗುವುದು ಹಾಗೂ ವಿವೇಕ ಜಾಗೃತಿಯಾಗುವುದು. ಈ ವಿವೇಕ ಜಾಗೃತಿಯ ಬೆಳಕಿನಲ್ಲಿ ಉತ್ಪತ್ತಿಯಾದ ಆಲೋಚನೆಗಳು ಮಾತ್ರ ಜೀವನವನ್ನು ಪರಿವರ್ತಿಸಿ ಶ್ರೇಯಸ್ಸು ಮತ್ತು ಪರಮಶಾಂತಿಯನ್ನು ಕೊಡಬಲ್ಲವು. ಇದನ್ನೇ ಶ್ರೀಕೃಷ್ಣನು ಗೀತೆಯಲ್ಲಿ ವ್ಯವಸಾಯತ್ಮಿಕಾ ಬುದ್ಧಿ, ನಿಶ್ಚಯಾತ್ಮಿಕಾ ಬುದ್ಧಿ ಮತ್ತು ಅಧ್ಯಾತ್ಮ ಚೇತಸಾ ಎಂದು ಹೇಳಿದ್ದಾನೆ.

ನಮ್ಮ ಪ್ರತಿಯೊಂದು ಆಲೋಚನೆಯನ್ನೂ, ಅನುಭವವನ್ನೂ ವಿವೇಕದ ಬೆಳಕಿನಲ್ಲಿ ಪರಿಷ್ಕರಿಸಲು ಸಾಧ್ಯವಾದಲ್ಲಿ ಜೀವನ ಎಷ್ಟೊಂದು ಆನಂದ, ಶಾಂತಿ ಮತ್ತು ಪರಿಪೂರ್ಣತೆಯಿಂದ ತುಂಬುವುದು. ಆಗ ಜೀವನದ ಪ್ರತಿಯೊಂದು ಕ್ಷಣವನ್ನು, ಪ್ರತಿಯೊಂದು ಕರ್ಮವನ್ನೂ ಸಹಜ ಸಂಯಮದಿಂದ ಪರಿವರ್ತಿಸಿ ಬದುಕನ್ನು ಸಾರ್ಥಕಗೊಳಿಸಬಹುದು. ಧ್ಯಾನದಲ್ಲಿ ನಮಗೆ ಬರುವ ಸದ್ಭಾವನೆಗಳ ಅಮೃತಸಿಂಚನವನ್ನು ಜಗತ್ತೆಂಬ ಮರುಭೂಮಿಯ ಯಾತ್ರೆಯಲ್ಲಿ ಸಂಗಾತಿಯನ್ನಾಗಿ ಮಾಡಿಕೊಂಡರೆ ಜೀವನವನ್ನು ಶಾಂತಿ ಮತ್ತು ಆನಂದಮಯವಾಗಿ ಪರಿವರ್ತಿಸಬಹುದು.

ಸಹನಶೀಲತೆ: ದಿನದಿಂದ ದಿನಕ್ಕೆ ಮಾನಸಿಕವಾಗಿ ಕ್ಲಿಷ್ಟವಾಗುತ್ತಿರುವ ಆಧುನಿಕ ಯಾಂತ್ರಿಕ ಜೀವನದಲ್ಲಿ ಸಹನೆ ಮತ್ತು ತಾಳ್ಮೆಯ ಪ್ರಾಮುಖ್ಯವನ್ನು ಗಂಭೀರವಾಗಿ ಅರಿತುಕೊಳ್ಳಬೇಕಾಗಿದೆ. ಸಾಮರಸ್ಯ ಮತ್ತು ಶಾಂತಿಯಿಂದ ಕೂಡಿದ ಜೀವನ ನಡೆಸಬೇಕಾದರೆ, ತಾಳ್ಮೆ ಮತ್ತು ಸಹನೆ ಅತ್ಯವಶ್ಯಕ. ಸುವ್ಯವಸ್ಥಿತ, ಕ್ಲೇಶರಹಿತ ಸಾಮಾಜಿಕ ಜೀವನ ಸಾಧ್ಯವಾಗಬೇಕಾದರೆ ತಾಳ್ಮೆ ಮತ್ತು ಸೇವಾಮನೋಭಾವನೆಯನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು.

ವ್ಯಕ್ತಿಯ ಸ್ವಭಾವ ಸಮಾಜದಲ್ಲಿ ಮತ್ತು ಸಮಾಜದ ಚಿಂತನೆಯ - ಪ್ರಭಾವ ರಾಷ್ಟ್ರಮಟ್ಟದಲ್ಲಿ, ಸ್ವಾಭಾವಿಕವಾಗಿ ಅಭಿವ್ಯಕ್ತಗೊಳ್ಳುತ್ತದೆ. ಒಂದು ವೇಳೆ ವ್ಯಕ್ತಿಯೇ ಅಶಾಂತಿ, ಅಸಹನೆ, ಉದ್ವೇಗಗಳಿಂದ ನರಳುತ್ತಿದ್ದರೆ, ವಾತಾವರಣದಲ್ಲಿಯೂ ಅದೇ ಭಾವತರಂಗಗಳನ್ನು ತನಗೆ ಅರಿವಿದ್ದು ಅಥವಾ ಅರಿವಿಲ್ಲದೆಯೋ ಹರಡುತ್ತಾನೆ. ಇದರಿಂದ ಸಮಾಜದ ಸ್ವಾಸ್ಥ್ಯ ಕುಂದುತ್ತದೆ. ರಾಷ್ಟ್ರೀಯ ಸಾಮರಸ್ಯ ಹದಗೆಡುತ್ತದೆ.

ಹೀಗೆ ಅತ್ಯಾವಶ್ಯಕ ಗುಣವಾದ ಸಹನೆ ನಮ್ಮ ಬಾಳಿನ ಮುಖ್ಯಲಕ್ಷಣ ಮತ್ತು ಸ್ವಭಾವವಾಗಿ ಏಕೆ ಬೇರುಬಿಟ್ಟಿಲ್ಲ? ಇದರ ಮೂಲಕಾರಣವನ್ನು ಪರಾಮಶಿಸಬೇಕು. ಪ್ರಾಯಶಃ ಇದರ ಮೂಲ ಕಾರಣ ನಮ್ಮ ‘ಅಹಂ’ ಕೇಂದ್ರಿತ ವ್ಯಕ್ತಿತ್ವ ಮತ್ತು ಬಾಲ್ಯದಿಂದ ಬೆಳೆಸಿಕೊಂಡ ಪ್ರಬಲವಾದ ಸಂಕುಚಿತ ಸ್ವಾರ್ಥ ಮನೋಭಾವ. ಸುತ್ತಮುತ್ತಲಿರುವ ವ್ಯಕ್ತಿಗಳಿಂದ, ಸುತ್ತಲಿನ ಸಮಾಜ, ಪರಿಸರದಿಂದ ತಾನು ಬೇರೆ ಎಂಬ ಪ್ರತ್ಯೇಕತಾಭಾವನೆ ಬೆಳೆದು, ಅಸಹನೆಗೆ ಕಾರಣವಾಗುತ್ತದೆ. ಇತರರ ಅವಶ್ಯಕತೆಗಳನ್ನು, ಹಿತವನ್ನು ಲೆಕ್ಕಿಸದೆ ಸ್ವಾರ್ಥಪರ ದೃಷ್ಟಿಯಿಂದ ಮಾತ್ರವೇ ಚಿಂತಿಸುವ, ನೋಡುವ ಅಭ್ಯಾಸವನ್ನು ರೂಢಿಮಾಡಿಕೊಂಡಿದ್ದರಿಂದ ಜೀವನ ಹಾಗೂ ಸಮಾಜವು ಗೊಂದಲಮಯ ಮತ್ತು ಸಂಘರ್ಷಮಯವಾಗುತ್ತದೆ.

ಮೊತ್ತಮೊದಲು ವ್ಯಕ್ತಿಗತವಾಗಿ ಶಾಂತಿಯಿಂದ ಕೂಡಿದ ಸಹಬಾಳ್ವೆಯನ್ನು ನಡೆಸಬೇಕೆಂದು ಹಂಬಲಿಸಿದರೆ, ಸಹನೆಯ ಪ್ರಮುಖ ಪಾತ್ರವು ನಮಗೆ ಸುಲಭವಾಗಿ ಕಂಡುಬರುವುದು. ಇತರರ ಬಗ್ಗೆ ಔದಾರ್ಯ, ನಮ್ಮ ಅಲ್ಪತೆಯ ತ್ಯಾಗ ಮತ್ತು ನಿಸ್ವಾರ್ಥತೆಯ ಬದುಕು ಇವುಗಳ ಮೂಲಕ ಸಹನೆಯನ್ನು ಮೈಗೂಡಿಸಿಕೊಳ್ಳಬಹುದು. ಮನಸ್ಸು, ಬುದ್ಧಿಗಳಲ್ಲಿ ದೈವಭಕ್ತಿ ನೆಲೆಸಿದರೆ, ಯಾವುದಕ್ಕೂ ಉದ್ವಿಗ್ನರಾಗದೆ, ತಾಳ್ಮೆಯಿಂದ ಬಾಳುವ ಗುಣವನ್ನು ಬೆಳೆಸಿಕೊಳ್ಳಬಹುದು. ಈ ಸಂದರ್ಭದಲ್ಲಿ ‘ತಾಳ್ಮೆಯ ತಪಸ್ಸು’ ಎಂಬ ದಾಸವಾಣಿಯನ್ನು ನೆನಪಿಸಿಕೊಳ್ಳಬಹುದು.

‘ತಾಳುವಿಕೆಗಿಂತನ್ಯ ತಪವು ಬೇರೊಂದಿಲ್ಲ

ದುಷ್ಟಮನುಜರು ಪೇಶ್ವ ನಿಷ್ಠುರದ

ನುಡಿಯನ್ನು ತಾಳು.

ಕಷ್ಟ ಬಂದರೆ ತಾಳು, ಕಣ್ಣೆಡದೆ ತಾಳು

ಕಟ್ಟು ಬುತ್ತಿಯ ಮುಂದೆ ಉಣಲುಂಟು ತಾಳು

ಹಲಧರಾನುಜನನ್ನು ಹೃದಯದಲಿ ತಾಳು’.

ಆದ್ದರಿಂದ ಈ ಕಲಿಯುಗದಲ್ಲಿ ತಾಳ್ಮೆಯಿಂದ ಬಾಳುವುದು ದೊಡ್ಡ ತಪಸ್ಸು. ಇದು ವ್ಯಕ್ತಿಗತ ಆಧ್ಯಾತ್ಮಿಕ ಜೀವನಕ್ಕೂ ಅವಶ್ಯಕ. ಮನಸ್ಸಿನ ಚಾಂಚಲ್ಯ, ಚಪಲತೆಗಳನ್ನು ಹೋಗಲಾಡಿಸಬೇಕಾದರೆ ಸಹನಶಕ್ತಿಯನ್ನು, ಧ್ಯಾನದ ಅಭ್ಯಾಸದಿಂದ ಬೆಳೆಸಿಕೊಳ್ಳುವುದು ಸುಲಭ. ಧರ್ಮದ ಹೆಸರಿನಲ್ಲಿ, ರಾಜಕೀಯದ ಹೆಸರಿನಲ್ಲಿ, ವೈಯಕ್ತಿಕ ಆಕಾಂಕ್ಷೆಗಳ ಕಾರಣದಿಂದ, ಮಾನವಸಮಾಜದಲ್ಲಿ ಉಂಟಾಗುತ್ತಿರುವ ಹಿಂಸೆ, ಕ್ರೌರ್ಯ ಮತ್ತು ನಷ್ಟ ಅಪಾರ. ನಮ್ಮೊಳಗೆ ಉದ್ಭವವಾಗುವ ತೀವ್ರವಾದ ಕ್ಲೇಶ ಭಾವನೆಗಳನ್ನು ಮನಬಂದಂತೆ ಹರಿಯಬಿಡದೆ, ವಿವೇಕದಿಂದ ಅವುಗಳನ್ನು ಪರಿವರ್ತಿಸಿಕೊಳ್ಳಬೇಕು. ನಮ್ಮಿಂದಾಗುವ ಅನಾಹುತಗಳನ್ನು ಮನಗಂಡು ವ್ಯಕ್ತಿತ್ವದಲ್ಲಿ ಪ್ರಜ್ಞಾಪೂರ್ವಕವಾಗಿ ಬದಲಾವಣೆ ತಂದುಕೊಳ್ಳಬೇಕು.

ಸತ್ಸಂಗ, ಉತ್ತಮ ಗ್ರಂಥಗಳ ಅಧ್ಯಯನದಿಂದ, ಸದ್​ವಿಚಾರಗಳ ಚಿಂತನೆ ಮತ್ತು ಸತ್ಕರ್ಮಗಳನ್ನು ಮಾಡುವುದರಿಂದ, ಮನಸ್ಸಿನಲ್ಲಿ ಒಳ್ಳೆಯ ಸಂಸ್ಕಾರಗಳು ಸ್ಥಾಪಿತವಾಗುವುವು. ಇದರಿಂದ ವಿಶಾಲಮನೋಭಾವದಿಂದ ಕೂಡಿದ ಜೀವನವನ್ನು ನಡೆಸಬಹುದು.

(ಲೇಖಕರು ಮೈಸೂರು ಶ್ರೀರಾಮಕೃಷ್ಣ ಆಶ್ರಮದ ಅಧ್ಯಕ್ಷರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net