

((ಕರೊನಾದಿಂದಾಗಿ ಉಂಟಾಗಿರುವ ಇಂದಿನ ವಿಷಮ ಪರಿಸ್ಥಿತಿಯಲ್ಲಿ ಎಷ್ಟೋ ಜನ ಕೂಲಿ ಕಾರ್ವಿುಕರು, ವಲಸಿಗರು, ನಿರ್ಗತಿಕರು ಅನ್ನವಿಲ್ಲದೆ ಕಂಗೆಡುತ್ತಿದ್ದಾರೆ. ಸರ್ಕಾರಗಳು, ಉಳ್ಳವರು, ಉದಾರಿಗಳು ತಮ್ಮ ಶಕ್ತಿ ಮೀರಿ ಈಗ ದಾಸೋಹ ಕೈಂಕರ್ಯದಲ್ಲಿ ಸಹಕರಿಸುತ್ತಿದ್ದಾರೆ. ಇದರಲ್ಲಿ ಧರ್ಮಪೀಠಗಳು, ಸಂಘ-ಸಂಸ್ಥೆಗಳು ಕೂಡ ತೊಡಗಿಸಿಕೊಂಡಿವೆ. ಭಾರತೀಯ ಸಂಸ್ಕೃತಿಯಲ್ಲಿ ಈ ಅನ್ನದಾನದ ಮಹತ್ವ ಏನು ಎಂಬುದನ್ನು ತಿಳಿಯುವುದು ಇಂದಿನ ಈ ಕಲುಷಿತ ವಾತಾವರಣದಲ್ಲಿ ಪ್ರಾಸಂಗಿಕವೇ ಆಗಿದೆ.))
| ಪ್ರೊ. ಸುಬ್ರಾಯ ವಿ. ಭಟ್ಟ
ಸುಖ ಹೊಂದಬೇಕು ಎಂಬುದು ಮನುಷ್ಯ ಸಹಜ ಇಚ್ಛೆ. ದುಃಖವನ್ನು ಯಾರೂ ಬಯಸಲಾರರು. ಅನುಭವಿಸಲೇಬೇಕಾಗಿ ಬಂದರೆ ಅನಿವಾರ್ಯವಾಗಿ ಸ್ವೀಕರಿಸುತ್ತಾರಷ್ಟೆ. ಭಾರತೀಯ ಸಂಸ್ಕೃತಿಯ ಮೂಲವಾದ ವೇದಗಳು, ಶಾಸ್ತ್ರಗಳು, ಸ್ಮೃ, ಪುರಾಣಗಳೆಲ್ಲವೂ ಮಾನವನ ಇಹ ಹಾಗೂ ಪರಲೋಕದ ಸುಖವನ್ನು ಹೊಂದಲು ಅನೇಕ ಮಾರ್ಗಗಳನ್ನು ತಿಳಿಸಿಕೊಟ್ಟಿವೆ. ಅವುಗಳಲ್ಲಿ ಎಲ್ಲಾ ಜನರಿಗೂ ಎಟಕುವ ಸಾಧನಗಳಲ್ಲಿ ಮುಖ್ಯವಾದದ್ದು ‘ದಾನ’. ಇದನ್ನೇ ವೇದವು ‘ದಾನೇ ಸರ್ವಂ ಪ್ರತಿಷ್ಠಿತಂ, ತಸ್ಮಾದ್ದಾನಂ ಪರಮಂ ವದಂತಿ’ ಎಂದಿದೆ.
ಉಪನಿಷತ್ತಿನ ಇನ್ನೂ ಅನೇಕ ವಚನಗಳೂ ಅನ್ನದಾನದ ಮಹತ್ವವನ್ನು ತಿಳಿಸುತ್ತವೆ. ಪರಾಶರ ಸ್ಮೃಯಲ್ಲಿಯೂ ಬೇರೆ ಬೇರೆ ಯುಗದಲ್ಲಿ ತಪಸ್ಸು, ಜ್ಞಾನ, ಯಜ್ಞ ಇವು ಶ್ರೇಯ ಸಾಧನಗಳು ಎಂದು ತಿಳಿಸಿ, ‘ದಾನಮೇವ ಕಲೌ ಯುಗೆ’ (ಪರಾಶರ ಸ್ಮೃ 1-23) ಎಂಬುದಾಗಿ ಸ್ಪಷ್ಟಪಡಿಸಿದ್ದಾರೆ. ಅಂದರೆ, ಕಲಿಯುಗದಲ್ಲಿ ದಾನವೇ ಶ್ರೇಯ ಸಾಧನೆಗೆ ಪ್ರಧಾನ ಮಾರ್ಗ ಎಂದಿದ್ದಾರೆ.
ಶಿವಮಹಾಪುರಾಣದ 11ನೇ ಅಧ್ಯಾಯದಲ್ಲಿ ಅನ್ನದಾನದ ಮಹತ್ವವನ್ನು ವಿವರಿಸಿದ್ದಾರೆ. ಮೊದಲಿಗೆ ಗೋದಾನ, ಭೂದಾನ, ಸುವರ್ಣದಾನ ಹೀಗೆ ಅನೇಕ ದಾನಗಳನ್ನು ತಿಳಿಸಿ ಕೊನೆಯಲ್ಲಿ ‘ಸರ್ವೆಷಾಮೇವ ದಾನಾನಾಮನ್ನದಾನಂ ಪರಂ ಸ್ಮೃಂ’ (ಎಲ್ಲಾ ದಾನಗಳಲ್ಲೂ ಅನ್ನದಾನವೇ ಶ್ರೇಷ್ಠ) ಎಂದು ಹೇಳಿ ಅದಕ್ಕೆ ಕಾರಣಗಳನ್ನೂ ತಿಳಿಸಿದ್ದಾರೆ.
ಉಳಿದೆಲ್ಲ ದಾನಗಳಲ್ಲೂ ಮನುಷ್ಯನನ್ನು ತೃಪ್ತಿಪಡಿಸುವುದು ತುಂಬಾ ಕಷ್ಟ. ಇನ್ನೂ ಸ್ವಲ್ಪ ಕೊಡಬಹುದಿತ್ತು ಎಂಬ ಭಾವನೆ ಬರಬಹುದು. ಅಥವಾ ಇನ್ನೂ ಸ್ವಲ್ಪ ಕೊಟ್ಟರೆ ಬೇಡ ಎನ್ನುವುದಿಲ್ಲ. ಆದರೆ ಅನ್ನದಾನದಲ್ಲಿ ಮಾತ್ರ ಒಂದು ಹಂತಕ್ಕೆ ತೃಪ್ತಿ ಎಂಬುದಿದೆ. ಸಾಕು ಎಂಬ ಶಬ್ದ ಆತ್ಮಸಾಕ್ಷಿಯಾಗಿ ಹೊರಬರುತ್ತದೆ.
ಅನ್ನ ಎಂದರೆ ‘ತಿನ್ನುವ ಎಲ್ಲಾ ವಸ್ತುಗಳೂ’ ಎಂದರ್ಥ. ಗರ್ಭಸ್ಥ ಶಿಶುಗಳು, ಬಾಲರು, ವೃದ್ಧರು ಎಲ್ಲರೂ ಅನ್ನವನ್ನು ಬಯಸುತ್ತಾರೆ. ಹಸಿವಿಗೆ ಸಮನಾದ ದುಃಖ, ರೋಗ ಇಲ್ಲ. ಅನ್ನವು ಪ್ರಾಣವನ್ನು ಉಳಿಸುವುದರಿಂದ ಅನ್ನದಾನವು ಪ್ರಾಣದಾನಕ್ಕೆ ಸಮಾನ. ಪ್ರಾಣವಿದ್ದರೆ ತಾನೆ ಪುಣ್ಯಕಾರ್ಯ ಅನುಷ್ಠಾನ. ಹಾಗಾಗಿಯೇ ಅನ್ನದಾನವು ಎಲ್ಲಾ ದಾನದ ಫಲವನ್ನೂ ಕೊಡುವಂತಹದು. ಒಬ್ಬ ವ್ಯಕ್ತಿ ಮಾಡಿದ ಅನ್ನದಾನದಿಂದ ಯಾರಾದರೂ ಹಸಿವೆಯನ್ನು ಇಂಗಿಸಿಕೊಂಡು ಬದುಕಿ ಪುಣ್ಯಕಾರ್ಯ ಮಾಡಿದರೆ ಅದರಲ್ಲಿ ಅರ್ಧ ಪುಣ್ಯವು ಮಾಡಿದವನಿಗೆ, ಉಳಿದರ್ಧವು ಅನ್ನದಾನಿಗೆ. ವ್ಯಾಸ-ವಾಲ್ಮೀಕಿ ಮೊದಲಾದ ಮಹರ್ಷಿಗಳು ದಾರ್ಶನಿಕರಾದ ಆಚಾರ್ಯರು, ತತ್ವಜ್ಞಾನಿಗಳು, ದಾಸಶ್ರೇಷ್ಠರುಗಳು ಉಪದೇಶಿಸಿ/ಬೋಧಿಸಿ ಹಾಡಿ ಹೊಗಳಿದ ಈ ಅನ್ನದಾನವನ್ನು ನಡೆಸುವುದು ಉಳ್ಳವರಿಗೆ ಸದವಕಾಶ ಹಾಗೂ ಕರ್ತವ್ಯ.
ಅದು ಇಂದಿನ ಸ್ಥಿತಿಯಲ್ಲಿ ಅನಿವಾರ್ಯವೂ ಹೌದು. ಪ್ರತಿಫಲಾಪೇಕ್ಷೆ ಇಲ್ಲದೆ ಅನ್ನದಾನ ಮಾಡಿದರೂ, ಅದರ ಪುಣ್ಯದ ಫಲ ಅವರಿಗೆ ಸಲ್ಲುತ್ತದೆ ಎಂಬುದು ಭಾರತೀಯ ದರ್ಶನ ಶಾಸ್ತ್ರಗಳ ನಿಲುವು.
- ಯಾರ್ಯಾರಿಗೆಲ್ಲ ಅನ್ನದಾನದ ಪುಣ್ಯ?
ಅನ್ನದಾನವೆಂದರೆ ಸಾಕ್ಷಾತ್ತಾಗಿ ಹಣವನ್ನು ಕೊಡುವುದು, ದವಸ ಧಾನ್ಯಗಳನ್ನು ಕೊಡುವುದು ಮಾತ್ರವಲ್ಲ. ಅನ್ನವನ್ನು ಸಿದ್ಧ ಪಡಿಸುವುದು, ವಿತರಿಸುವುದು, ಇವುಗಳಿಗೆ ಸಹಾಯ ಸಲ್ಲಿಸುವುದು- ಹೀಗೆ ಯಾವುದಾದರೂ ಒಂದು ಬಗೆಯಲ್ಲಿ ಈ ಅನ್ನದಾನ ಯಜ್ಞದಲ್ಲಿ ಪ್ರಾಮಾಣಿಕವಾಗಿ ಸಹಕರಿಸುವುದು ಕೂಡ ಅನ್ನದಾನವೇ. ಅವರವರ ಸೇವೆಗನುಗುಣವಾಗಿ ಅವರೆಲ್ಲ ಅದರ ಫಲವನ್ನು ಅರ್ಥಾತ್ ಪುಣ್ಯವನ್ನು ಪಡೆಯುತ್ತಾರೆ.
- ಯಾರಿಗೆ ದಾನ ಮಾಡ್ಬೇಕು?
ಈ ವಿಷಯದಲ್ಲೂ ಸ್ಪಷ್ಟತೆ ಇದೆ. ‘ಅನ್ನಸ್ಯ ಕ್ಷುಧಿತಂ ಪಾತ್ರಂ’ - ಹಸಿದವನೇ ಅನ್ನದಾನಕ್ಕೆ ಪಾತ್ರನು ಎಂದಿದೆ ಉಪ ನಿಷತ್ತು. ಅನ್ನವನ್ನು ದಾನ ಮಾಡುವಾಗ ಜಾತಿ, ಮತ, ಧರ್ಮ, ಪಂಥ, ವಿದ್ಯೆ, ವಯಸ್ಸು, ಲಿಂಗ, ಸ್ವಕೀಯ, ಪರಕೀಯ, ಬಂಧುತ್ವ ಯಾವುದನ್ನೂ ನೋಡಬಾರದು. ಕೇವಲ ಹಸಿದವನು ಎಂದಾದರೆ ಅವನಿಗೆ ದಾನ ಮಾಡಬೇಕು.ಇದು ಶಾಸ್ತ್ರದ ವಿಧಿ.