ದಾನ ಮಾಡಬೇಕೆಂದಿದ್ದರೆ, ವಿಳಂಬ ಮಾಡಬಾರದು!

Untitled design (1)
Published on
ದ್ವಾಪರಯುಗದಲ್ಲಿ ಶ್ರೀಕೃಷ್ಣ ಪರಮಾತ್ಮ ಒಂದು ದಿನ ಮುಂಜಾನೆಯೇ ಕರ್ಣನ ಮನೆಗೆ ಹೋದ. ಅಷ್ಟು ಹೊತ್ತಿನಲ್ಲಿ ಕರ್ಣ ಅಭ್ಯಂಜನ ಸ್ನಾನಕ್ಕೆ ಸಿದ್ಧನಾಗುತ್ತಿದ್ದ. ಅವನ ಎಡ ಕೈಯಲ್ಲಿ ರತ್ನಖಚಿತ ಚಿನ್ನದ ಎಣ್ಣೆಯ ಬಟ್ಟಲಿತ್ತು. ಅದರಿಂದ ಎಣ್ಣೆಯನ್ನು ತೆಗೆದು ತನ್ನ ತಲೆಗೆ ಹಚ್ಚಿಕೊಳ್ಳುತ್ತಿದ್ದ. ಇದನ್ನು ನೋಡಿದ ಕೃಷ್ಣ ‘ನಿನ್ನ ಕೈಯಲ್ಲಿರುವ ಎಣ್ಣೆಯ ಬಟ್ಟಲು ತುಂಬಾ ಚೆನ್ನಾಗಿದೆ. ನನಗೆ ನೀಡುವೆಯಾ?’ ಎಂದು ಕೇಳಿದ.

ಆತನೋ ದಾನಶೂರ ಕರ್ಣ. ತಕ್ಷಣವೇ ತನ್ನ ಎಡಕೈಯಿಂದಲೇ ಆ ಎಣ್ಣೆ ಬಟ್ಟಲನ್ನು ಕೃಷ್ಣನಿಗೆ ಕೊಟ್ಟುಬಿಟ್ಟ. ಆಗ ಕೃಷ್ಣ ‘ಅಲ್ಲಯ್ಯಾ ಕರ್ಣ, ದಾನ ಮಾಡುವಾಗ, ಯಾವಾಗಲೂ ಬಲ ಕೈಯಿಂದ ಮಾಡಬೇಕಲ್ಲವೇ? ಮತ್ತೇಕೆ ನೀನು ನಿನ್ನ ಎಡಕೈಯಿಂದಲೇ ಕೊಟ್ಟುಬಿಟ್ಟೆ?’ ಎಂದು ಪ್ರಶ್ನಿಸಿದ. ಉತ್ತರವಾಗಿ ಕರ್ಣ ಹೇಳಿದ: ‘ಹೌದು ಕೃಷ್ಣ, ದಾನವನ್ನು ಬಲಗೈಯಿಂದಲೇ ನೀಡಬೇಕೆಂಬ ವಿಚಾರ ನನಗೂ ಗೊತ್ತಿದೆ. ಆದರೆ ನನ್ನ ಎಡಗೈಯಲ್ಲಿದ್ದ ಆ ಚಿನ್ನದ ಬಟ್ಟಲನ್ನು ಬಲಗೈಗೆ ಹಸ್ತಾಂತರಿಸುವ ಅವಧಿಯಲ್ಲಿ ಎಲ್ಲಿ ನನ್ನ ಮನಸ್ಸೇ ಬದಲಾದೀತೋ ಎಂಬ ಭಯದಿಂದ ತಕ್ಷಣ ಎಡಕೈಯಿಂದಲೇ ಕೊಟ್ಟುಬಿಟ್ಟೆ. ಎಷ್ಟಾದರೂ ಮನುಷ್ಯನ ಮನಸ್ಸು ಚಂಚಲ ಸ್ವಭಾವವುಳ್ಳದ್ದಲ್ಲವೇ ಕೃಷ್ಣ’ ಎಂದ.

ಕರ್ಣನ ಮಾತಿನಿಂದ ಸಂತುಷ್ಟನಾದ ಕೃಷ್ಣ, ‘ನಿನ್ನ ಮಾತುಗಳಿಂದ ನಾನು ತೃಪ್ತನಾಗಿರುವೆ. ಏನಾದರೂ ವರವನ್ನು ಕೇಳಿಕೋ’ ಎಂದು ಹೇಳಿದ. ಆಗ ಕರ್ಣ ಹೇಳಿದ ಮಾತು ಗಮನಾರ್ಹ. ‘ಶ್ರೀಕೃಷ್ಣ, ಭಿಕ್ಷೆ ಬೇಡುವುದು ಎಷ್ಟು ಕಷ್ಟವೋ, ಬೇಡಿದವರಿಗೆ ಇಲ್ಲ ಎಂದು ಹೇಳುವುದೂ ಅಷ್ಟೇ ಕಷ್ಟ. ಆದುದರಿಂದ ದೇಹಿ (ಭಿಕ್ಷಾಟನೆ) ಮತ್ತು ನಾಸ್ತಿ (ಇಲ್ಲ) ಎಂಬ ಪದಗಳು ನನ್ನ ಬಾಯಿಯಿಂದ ಎಂದೂ ಬರದಂತೆ ಆಶೀರ್ವದಿಸು’

ಎಂತಹ ಅದ್ಭುತವಾದ ಬೇಡಿಕೆ!: ತಾತ್ಪರ್ಯ ಇಷ್ಟೆ: ಪ್ರಕೃತಿ ನಮಗೆ ಕೊಟ್ಟಿರುವುದು ಎರಡೇ ಆಯ್ಕೆ- ಒಂದೋ ಕೊಟ್ಟು ಹೋಗುವುದು, ಇಲ್ಲವೇ ಬಿಟ್ಟು ಹೋಗುವುದು. ಈ ಜಗತ್ತನ್ನೇ ಬಿಟ್ಟುಹೋಗುವಾಗ ಜೊತೆಯಲ್ಲಿ ಕಟ್ಟಿಕೊಂಡು ಹೋಗುವ ಯಾವ ಆಯ್ಕೆಯೂ ಇಲ್ಲ. ಆದುದರಿಂದಲೇ ‘ದಾನಂ ಹಸ್ತಸ್ಯ ಭೂಷಣಂ’ ಎಂಬುದಾಗಿ ಸುಭಾಷಿತವು ಹೇಳಿದರೆ ‘ಬಿಟ್ಟು ಹೋಗುವುದಕ್ಕಿಂತ ಕೊಟ್ಟು ಹೋಗುವುದೇ ಲೇಸು’ ಎಂಬುದಾಗಿ ಪುರಂದರದಾಸರು ಹಾಡಿದರು.

  • ದೇಹದ ತೂಕ ಇಳಿಸಲು ವ್ಯಾಯಾಮ ಮಾಡಬೇಕು; ಮನಸ್ಸಿನ ಭಾರ ಇಳಿಸಲು ‘ಧ್ಯಾನ’ ಮಾಡಬೇಕು. ಅಂತೆಯೇ ಕೂಡಿಟ್ಟ ಧನದ ತೂಕ ಇಳಿಸಲು ದಾನ ಮಾಡಬೇಕು.
  • ದಾನ ಮಾಡುವುದು ಮತ್ತು ಸ್ನಾನ ಮಾಡುವುದು ಯಾರಿಗೂ ಕಾಣಬಾರದು. ಇವೆರಡೂ ರಹಸ್ಯವಾಗಿರಬೇಕು.
  • ಸತ್ಪಾತ್ರರಿಗೆ, ಸಕಾಲದಲ್ಲಿ ಸಮಪ್ರಮಾಣದಲ್ಲಿ ಸಂತೋಷದಿಂದ ಯಾವುದೇ ಪ್ರತಿಫಲಾಪೇಕ್ಷೆ, ಪ್ರಚಾರವಿಲ್ಲದೆ ಮಾಡುವ ದಾನವೇ ಶ್ರೇಷ್ಠವಾದವು. ದುಡಿಯುವಾಗ ಕಷ್ಟಪಟ್ಟು ದುಡಿಯಬೇಕು. ದಾನ ಮಾಡುವಾಗ ಇಷ್ಟಪಟ್ಟು ಮಾಡಬೇಕು. ದಾನ ನೀಡಿದ ಮೇಲೆ ಮರುಗಬಾರದು, ಕೊರಗಬಾರದು.
  • ನೀಡಿದ ವಸ್ತುವಿನ ಬೆಲೆ ಅರಿತವನಿಗೆ ಮತ್ತು ಅದನ್ನು ಉಳಿಸಿಕೊಳ್ಳುವವನಿಗೆ ಮಾತ್ರ ದಾನ ಮಾಡಬೇಕು. ಇಲ್ಲವಾದರೆ ನಾವು ನೀಡಿದ ವಸ್ತುವಿಗೆ ಬೆಲೆಯೇ ಇಲ್ಲವಾದೀತು.
  • ಮಿಕ್ಕಿದ್ದನ್ನು ಕೊಡಬಾರದು; ಮಿಗಿಸಿಕೊಡಬೇಕು; ಉಳಿದುದನ್ನು ಕೊಡಬಾರದು; ಉಳಿಸಿ ಕೊಡಬೇಕು. ಹಾಗೂ ಉಪಯೋಗೀ ವಸ್ತುವನ್ನೇ ಕೊಡಬೇಕು; ಗೊಡ್ಡೆಮ್ಮೆಯನ್ನು ಕೊಟ್ಟು ಗೋದಾನ ಮಾಡಿದೆ ಎಂದು ಹೇಳಬಾರದು.
  • ಕೊಟ್ಟರೆ ದೇವರು ಕೊಟ್ಟಂತೆ ಕೊಡಬೇಕು-ಯಾವುದೇ ಪ್ರತಿಫಲಾಪೇಕ್ಷೆಯ, ಪ್ರಚಾರದ ಆಸೆ ಇಲ್ಲದೆ.
  • ನಾನು ಶ್ರೀಮಂತನಾದ ಮೇಲೆ ದಾನ ಮಾಡುತ್ತೇನೆ ಎನ್ನುವವರು ಎಂದೂ ದಾನ ಮಾಡುವುದಿಲ್ಲ. ಏಕೆಂದರೆ, ದಾನ ಮಾಡಲು, ಆರ್ಥಿಕ ಶ್ರೀಮಂತಿಕೆಯೊಂದೆ ಸಾಲದು, ಹೃದಯ ಶ್ರೀಮಂತಿಕೆಯೂ ಬೇಕು.
  • ಅಂತೆಯೇ ದಾನ ಮಾಡಬೇಕೆಂಬ ಇಚ್ಚೆಯುಂಟಾದಾಗ, ವಿಳಂಬ ಮಾಡದೆ ತಕ್ಷಣ ಮಾಡಿಬಿಡಬೇಕು. ತಡಮಾಡಿದರೆ ಆಗಬಹುದಾದ ತೊಂದರೆಗಳೆಂದರೆ:

(ಅ) ಮನಸ್ಸು ಬದಲಾಗಬಹುದು. ಏಕೆಂದರೆ ಮಾನವನ ಮನಸ್ಸು ಚಂಚಲ.

(ಆ) ನಾಳೆಯ ದಿನ, ನೀವು ಯಾರಿಗೆ ದಾನ ಮಾಡಬೇಕೆಂದಿರುವಿರೋ, ಅವರೇ ಇಲ್ಲವಾಗಬಹುದು, ಇಲ್ಲವೇ ನೀವೇ ಇಲ್ಲವಾಗಬಹುದು. ಕಾರಣ ಯಾರ ಜೀವನವೂ ಸ್ಥಿರವಲ್ಲ.

(ಇ) ನಾಳೆಯ ದಿನ ಯಾರಿಗೆ ಯಾವ ವಸ್ತು ಬೇಕಿತ್ತೋ ಆ ವಸ್ತು ನಿಮ್ಮಲ್ಲೇ ಇಲ್ಲವಾಗಬಹುದು. ಇಲ್ಲವೇ ಅದು ಅವರಿಗೇ ಬೇಡವಾಗಬಹುದು.

ಇದೇರೀತಿ, ಏನಾದರೂ ಒಳ್ಳೆಯ ಕೆಲಸವನ್ನು ಮಾಡಬೇಕೆಂದಿದ್ದಲ್ಲಿ, ತಡ ಮಾಡದೆ ತಕ್ಷಣ ಮಾಡಿಬಿಡೋಣ. ಮನುಷ್ಯ ಮುಹೂರ್ತವಿಲ್ಲದೇ ಹುಟ್ಟುತ್ತಾನೆ; ಮುಹೂರ್ತವಿಲ್ಲದೇ ಸಾಯುತ್ತಾನೆ. ಆದರೆ ಒಳ್ಳೆಯ ಕೆಲಸ ಮಾಡಲು, ಶುಭಮುಹೂರ್ತಕ್ಕಾಗಿ ಕಾಯುತ್ತಿರುತ್ತಾನೆ. ಇದು ತರವಲ್ಲ; ‘ಶುಭಸ್ಯ ಶೀಘ್ರಂ’ ಅಲ್ಲವೇ!

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net