

ನಾಗಪುರದಲ್ಲಿ 2022ರಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ ತೃತೀಯ ವರ್ಷದ ಶಿಕ್ಷಣ ವರ್ಗ ಸಮಾರೋಪ ಕಾರ್ಯಕ್ರಮದಲ್ಲಿ ಸರಸಂಘಚಾಲಕರಾದ ಡಾ.ಮೋಹನ್ ಭಾಗವತ್ ಅವರು ಹೇಳಿದ ಮಾತು ಸಾಕಷ್ಟು ಚರ್ಚೆಯಾಗಿತ್ತು. ಅವರು ಹೇಳಿದ್ದಿಷ್ಟು:
ಆದರೆ ಮನಸ್ಸಿನಲ್ಲಿ ವಿಚಾರಗಳು ಏಳುತ್ತವೆ. ಇದು ಮುಸ್ಲಿಂರ ವಿರುದ್ಧ ಎಂದು ಮುಸ್ಲಿಮರು ಭಾವಿಸುವ ಅಗತ್ಯವಿಲ್ಲ. ಒಟ್ಟಿಗೆ ಕುಳಿತು ರ್ಚಚಿಸಿ ಪರಿಹಾರ ಕಂಡುಕೊಳ್ಳಬೇಕು. ಆದರೆ ಎಲ್ಲ ಸಮಯದಲ್ಲೂ ಮಾತುಕತೆಯಿಂದ ಪರಿಹಾರ ಸಿಗುವುದಿಲ್ಲ. ಆಗ ನ್ಯಾಯಾಲಯಕ್ಕೆ ಹೋಗಬೇಕು, ನ್ಯಾಯಾಲಯ ಏನು ಹೇಳುತ್ತದೆಯೋ ಅದನ್ನು ಪಾಲಿಸಬೇಕು. ಜ್ಞಾನವಾಪಿ ಕುರಿತು ಅನೇಕ ವರ್ಷಗಳಿಂದ ಚರ್ಚೆ ನಡೆಯುತ್ತಿದೆ, ಅದರಲ್ಲಿ ನಮ್ಮ ಶ್ರದ್ಧೆಯಿದೆ. ಆದರೆ ದಿನನಿತ್ಯವೂ ಒಂದೊಂದು ವಿಚಾರ ತೆಗೆಯಬಾರದು. ಜಗಳ ಏಕೆ ಬೆಳೆಸಬೇಕು? ಪ್ರತಿ ಮಸೀದಿಯಲ್ಲೂ ಶಿವಲಿಂಗವನ್ನು ಹುಡುಕುವ ಪ್ರಯತ್ನವೇಕೆ? ಆ ಪೂಜಾ ಪದ್ಧತಿ (ಇಸ್ಲಾಂ) ಹೊರಗಿನಿಂದ ಬಂದದ್ದಿರಬಹುದು, ಆದರೆ ಅದೂ ಒಂದು ಪೂಜಾಪದ್ಧತಿಯೇ ಅಲ್ಲವೇ? ಒಂದು ವಿಚಾರ ತಿಳಿಯಬೇಕಾದ್ದೆಂದರೆ, ಇಲ್ಲಿರುವ ಮುಸ್ಲಿಂರು ಹೊರಗಿನ ಜಗತ್ತಿನೊಂದಿಗೆ ಸಂಬಂಧ ಹೊಂದಿಲ್ಲ, ಅವರು ಹೊರಗಿನಿಂದ ಬಂದವರಲ್ಲ. ಅವರೆಲ್ಲರೂ ನಮ್ಮ ಋಷಿ, ಮುನಿ, ಕ್ಷತ್ರಿಯರ ವಂಶಜರೇ ಆಗಿದ್ದಾರೆ. ನಾವೆಲ್ಲರೂ ಸಮಾನ ಪೂರ್ವಜರ ವಂಶಜರು. ನಾವು ಯಾವುದೇ ಪೂಜಾಪದ್ಧತಿಯನ್ನು ವಿರೋಧಿಸುವುದಿಲ್ಲ, ಎಲ್ಲವನ್ನೂ ಗೌರವಿಸುತ್ತೇವೆ...’
ಹೀಗೆ ಅನೇಕ ವಿಚಾರಗಳನ್ನು ಮೋಹನ್ ಭಾಗವತ್ ಅವರು ರ್ಚಚಿಸಿದರಾದರೂ ಪ್ರಮುಖವಾದ ಭಾಗ ಇಷ್ಟು. ಒಟ್ಟು ಭಾಷಣದ ಸಾರಾಂಶವೇನು? ‘ಈ ದೇಶದಲ್ಲಿರುವ ಮಸೀದಿಗಳನ್ನು ಕೆಡವಿ ದೇವಸ್ಥಾನ ಕಟ್ಟುವುದೇ ಹಿಂದೂ ಪುನರುತ್ಥಾನದ ಕೆಲಸ ಎಂದು ಯಾರೂ ತಪ್ಪು ತಿಳಿಯಬಾರದು’ ಎನ್ನುವುದು. ಹೀಗೆ ಹೇಳಿದ ತಕ್ಷಣ ಯಾರಾದರೂ ಪ್ರಶ್ನೆ ಕೇಳಬಹುದು. ಹಾಗಾದರೆ ನಮ್ಮೂರಿನಲ್ಲಿ ಮಂದಿರವನ್ನು ಕೆಡವಿ ಕಟ್ಟಿರುವ ಮಸೀದಿಯಲ್ಲಿ ಮತ್ತೆ ದೇವರನ್ನು ಪ್ರತಿಷ್ಠಾಪಿಸಬಾರದೆ? ಪುನರುತ್ಥಾನದ ಕಾರ್ಯ ಅಯೋಧ್ಯೆಯಿಂದ ಆರಂಭವಾಗಿದ್ದು, ಎಲ್ಲ ಕಡೆಯೂ ನಡೆಯಬೇಕು ಎಂದು ಕೆಲವರು ವಾದಿಸುತ್ತಾರೆ. ಇರಲಿ, ಅವರೇನು ಕೆಟ್ಟ ಉದ್ದೇಶಕ್ಕೆ ಹೀಗೆ ಹೇಳುವವರಲ್ಲ. ದೇಶದ ಸಂಸ್ಕೃತಿ, ಇತಿಹಾಸ ಮತ್ತೆ ಅಪಾಯಕ್ಕೆ ಸಿಲುಕಬಾರದು ಎಂಬ ಕಾಳಜಿಯೇ ಅಂಥವರಲ್ಲಿರುವುದರಿಂದ ಅವರ ಹೇಳಿಕೆಯನ್ನು ವಿರೋಧಿಸುವ ಅಗತ್ಯವಿಲ್ಲ. ಆದರೆ ಡಾ. ಮೋಹನ್ ಭಾಗವತ್ ಅವರ ಮಾತಿನ ಸತ್ಯವನ್ನು ಅರಿಯಬೇಕು.
ಮುಖ್ಯವಾಗಿ ಅವರು ಅಯೋಧ್ಯೆ ರಾಮಮಂದಿರದ ಕುರಿತು ಹೇಳಿದ ಮಾತು. ‘ನಮ್ಮ ಸ್ವಭಾವಕ್ಕೆ ವ್ಯತಿರಿಕ್ತವಾಗಿ, ಕೆಲವು ಐತಿಹಾಸಿಕ ಕಾರಣಗಳಿಗೋಸ್ಕರ ಅಯೋಧ್ಯೆ ಹೋರಾಟಕ್ಕೆ ಇಳಿದೆವು, ಇನ್ನು ಯಾವುದೇ ಆಂದೋಲನ ಮಾಡುವುದಿಲ್ಲ’ ಎಂದಿದ್ದಾರೆ. ಹಾಗಾದರೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ನಿಜವಾದ ಸ್ವಭಾವ ಏನು? ಆರೆಸ್ಸೆಸ್ ಮುಖ್ಯ ಉದ್ದೇಶ ವ್ಯಕ್ತಿನಿರ್ವಣ. ಈ ದೇಶದಲ್ಲಿ ಪ್ರತಿ ವ್ಯಕ್ತಿಯಲ್ಲೂ ದೇಶಭಕ್ತಿ, ನೈತಿಕತೆ, ನಮ್ಮ ಪರಂಪರೆ ಕುರಿತು ಗೌರವಾದರಗಳನ್ನು ಮೂಡಿಸಿದರೆ ಸಾಕು, ಉಳಿದೆಲ್ಲ ಕೆಲಸವನ್ನೂ ಆ ವ್ಯಕ್ತಿಗಳ ಸಮೂಹವೇ ಮಾಡಿಕೊಂಡು ಹೋಗುತ್ತದೆ. ಅದಕ್ಕೆಂದೇ ಆರೆಸ್ಸೆಸ್ನಲ್ಲಿ ಶಾಖೆಯ ವ್ಯವಸ್ಥೆಯನ್ನು ರೂಪಿಸಲಾಗಿದೆ. ಆರೆಸ್ಸೆಸ್ನಲ್ಲಿ ಇನ್ನೊಂದು ಮಾತಿದೆ. ‘ಸಂಘ ಕುಛ್ ನಹೀ ಕರೇಗಾ, ಸ್ವಯಂಸೇವಕ ಸಬ್ಕುಛ್ ಕರೇಗಾ’. ಅಂದರೆ ‘ಸಂಘವು ಏನನ್ನೂ ಮಾಡುವುದಿಲ್ಲ, ಆದರೆ ಸ್ವಯಂಸೇವಕ ಎಲ್ಲವನ್ನೂ ಮಾಡುತ್ತಾನೆ’ ಎನ್ನುವುದು. ಇದೇ ಕಾರಣಕ್ಕೆ ಮೋಹನ್ ಭಾಗವತ್ ಅವರು, ‘ಸ್ವಭಾವಕ್ಕೆ ವಿರುದ್ಧವಾದದ್ದು’ ಎಂಬ ಪದಬಳಕೆ ಮಾಡಿದ್ದು. ಹೀಗೆಯೇ ಒಂದು ಸಂಘಟನೆ ಆಂದೋಲನಗಳ ನಂತರ ಆಂದೋಲನಗಳನ್ನು ಕೈಗೆತ್ತಿಕೊಂಡು ಹೊರಟರೆ, ಅತ್ಯಂತ ಮುಖ್ಯವಾದ ವ್ಯಕ್ತಿನಿರ್ವಣದ ಕೆಲಸವನ್ನು ಬೇರೆ ಯಾರೂ ಮಾಡುವುದಿಲ್ಲ. ಈ ಕೆಲಸವನ್ನು ಆರೆಸ್ಸೆಸ್ ಮಾತ್ರವೇ ಮಾಡಬೇಕು, ಅದೇ ಕಾರ್ಯಕ್ಕೆ ಸಂಘಟನೆಯನ್ನು ಸ್ಥಾಪಿಸಲಾಗಿದೆ. ಇಲ್ಲಿ ಇನ್ನೊಂದು ಅರ್ಥವೂ ಇದೆ. ಅಯೋಧ್ಯೆ ಎನ್ನುವುದು ಒಂದು ದೇವಸ್ಥಾನ ನಿರ್ವಣದ ಕಥೆಯಲ್ಲ.
ಅಯೋಧ್ಯೆಯಲ್ಲಿದ್ದ ದೇವಾಲಯವನ್ನು ಕೆಡವಿ ಮಸೀದಿ ನಿರ್ವಿುಸಿದ್ದು ಎನ್ನುವುದು ಸಾಬೀತಾಗಿರುವ ವಿಚಾರ. ಈ ಕುರಿತು ಕೆಲವು ಕಮ್ಯುನಿಸ್ಟ್ ಇತಿಹಾಸಕಾರರು 1989ರಿಂದಲೇ ಗೊಂದಲ ಮೂಡಿಸಿದರು, ಆದರೂ, ಸುಪ್ರೀಂಕೋರ್ಟ್ನಲ್ಲಿ ಅದನ್ನು ಸಾಬೀತುಪಡಿಸಲು ವಿಫಲವಾದರು. ಈಗಲೂ ಕೆಲ ಮುಸ್ಲಿಂ ಗುಂಪುಗಳ ನಡುವೆ ಅದೇ ಹಳೇ ಸುಳ್ಳನ್ನು ಬಿತ್ತಿ ಮತ್ತೆ ಮುಸ್ಲಿಂ ಸಮುದಾಯವನ್ನು ದಾರಿತಪ್ಪಿಸುವ ಕೆಲಸವನ್ನು ಕಮ್ಯುನಿಸ್ಟರು ಮಾಡಿದ್ದಾರೆ. ಇರಲಿ, ಅದು ಬೇರೆಯ ವಿಚಾರ.
ಭಾರತಕ್ಕೆ ಸ್ವಾತಂತ್ರ್ಯ ಏಕೆ ಬೇಕಾಗಿತ್ತು? ಉತ್ತಮ ಜೀವನ ನಡೆಸಲೆಂದೇ? ಕಟ್ಟಡಗಳ ನಿರ್ಮಾಣ ಆಗಲೆಂದೆ? ಇಷ್ಟೇ ವಿಚಾರ ಆಗಿದ್ದರೆ ಇದೆಲ್ಲವನ್ನೂ ಬ್ರಿಟಿಷರೂ ಕೊಡುತ್ತಿದ್ದರಲ್ಲವೇ? ಅವರನ್ನು ಓಡಿಸಿ ನಮ್ಮವರನ್ನು ಕೂರಿಸುವ ಅಗತ್ಯವಾದರೂ ಏನಿತ್ತು? ಹಾಗಾಗಿ, ಇಲ್ಲಿ ಮುಖ್ಯವಾದದ್ದು ಆತ್ಮಾಭಿಮಾನದ ಪ್ರಶ್ನೆ. ನಮ್ಮನ್ನು ಯಾರು ಆಳುತ್ತಿದ್ದಾರೆ ಎನ್ನುವುದು ಯಾವಾಗಲೂ ನಮ್ಮನ್ನು ಕಾಡುವ ವಿಚಾರ. ಇಲ್ಲಿ ಭಾವಜಾಗರಣೆಯೇ ಮಹತ್ವದ ವಿಚಾರ. ‘ರೋಟಿ, ಕಪಡಾ ಔರ್ ಮಕಾನ್’ ಅಂದರೆ ‘ಆಹಾರ, ಬಟ್ಟೆ, ನೆಲೆಸಲು ಮನೆಯಿದ್ದರೆ ಸಾಕು’ ಎಂದು ಈ ಹಿಂದೆ ಕಾಂಗ್ರೆಸ್ ಪಕ್ಷ ಘೊಷಣೆ ಮಾಡುತ್ತಿತ್ತು. ಅದು ಸರಿಯಾದರೂ ಅಪೂರ್ಣ. ‘ಹಸಿದ ವ್ಯಕ್ತಿಗೆ ಧರ್ಮಬೋಧನೆ ಮಾಡಬಾರದು’ ಎನ್ನುವ ವಿವೇಕಾನಂದರ ಮಾತು ಪೂರ್ಣವಾದದ್ದು. ಅಂದರೆ, ಎಲ್ಲ ವ್ಯಕ್ತಿಗೂ ಧರ್ಮ, ಅಧ್ಯಾತ್ಮ, ಕರ್ಮ, ಮೋಕ್ಷದ ಕುರಿತು ಜ್ಞಾನವೇ ಅಂತಿಮವಾದದ್ದು. ರೋಟಿ, ಕಪಡಾ, ಔರ್ ಮಕಾನ್ ಆಗಲೇಬೇಕು. ಜತೆಜತೆಗೇ ಧರ್ಮ, ಸ್ವಾಭಿಮಾನವೂ ಮೂಡಬೇಕು. ಇದರ ಅರಿವು ಭಾರತೀಯರಿಗಿಂತಲೂ ವಿದೇಶಿಯರಿಗೆ, ಅದರಲ್ಲೂ ಮುಸ್ಲಿಂ ಆಕ್ರಮಣಕಾರರಿಗೆ ಚೆನ್ನಾಗಿ ತಿಳಿದಿತ್ತು.
ಇದೇ ಕಾರಣಕ್ಕೆ ದೇಶದಲ್ಲಿ 336 ಸಾವಿರಕ್ಕೂ ಹೆಚ್ಚು ದೇವಾಲಯಗಳನ್ನು ನಾಶ ಮಾಡಿದ ದಾಖಲೆಯಿದೆ. ಎಷ್ಟು ದೇವಸ್ಥಾನ ನಾಶ ಮಾಡಿದರು ಎನ್ನುವುದಕ್ಕಿಂತಲೂ, ದೇವಸ್ಥಾನಗಳನ್ನೇ, ಗ್ರಂಥಾಲಯಗಳನ್ನೇ ಏಕೆ ನಾಶ ಮಾಡಿದರು ಎನ್ನುವುದು ಮುಖ್ಯ. ಗ್ರಂಥಾಲಯಗಳನ್ನು ನಾಶ ಮಾಡುವ ಮೂಲಕ ಇಲ್ಲಿನ ಜ್ಞಾನಭಂಡಾರವನ್ನು ನಾಶ ಮಾಡಿದೆವು ಎಂದುಕೊಂಡರು. ದೇವಾಲಯಗಳನ್ನು ಕೆಡವುವ ಮೂಲಕ ಸ್ವಾಭಿಮಾನವನ್ನು ನುಚ್ಚುನೂರು ಮಾಡಲಾಯಿತು. ಸ್ವಾಭಿಮಾನಹೀನ ಮಾನವ ನಮ್ಮ ಗುಲಾಮರಾಗಿರಲು ಯಾವ ಸಮಸ್ಯೆಯೂ ಆಗದು ಎಂದು ಭಾವಿಸಿದರು. ಇದೇ ಕಾರಣಕ್ಕೆ 500 ವರ್ಷಗಳ ಕಾಲ ಶ್ರೀರಾಮ ಮಂದಿರ ನಿರ್ವಣಕ್ಕೆ ಪ್ರಯತ್ನಗಳು ನಡೆದವು. 76 ಬಾರಿ ಅಲ್ಲಿ ಮಂದಿರ ನಿರ್ವಿುಸುವ ಪ್ರಯತ್ನಗಳು ನಡೆದಿವೆ.
ಅಯೋಧ್ಯೆ ರಾಮಮಂದಿರ ನಿರ್ಮಾಣ ಎನ್ನುವುದು ಸ್ವಾಭಿಮಾನದ, ಗೌರವದ, ಆತ್ಮಾಭಿಮಾನದ ಜಾಗೃತಿಯ ಪ್ರತೀಕ. ಈಗ ನಿರ್ವಣವಾಗುತ್ತಿರುವ ಮಂದಿರವು ದೇಶಕ್ಕೆಲ್ಲ ಬೆಳಕು ನೀಡುವಷ್ಟು ಪ್ರಖರವಾಗಿದೆ. ಮನುಷ್ಯರ ಮನಸ್ಸು ಕೆಟ್ಟದ್ದನ್ನು ಯೋಚಿಸದೆ ಧರ್ಮದತ್ತ ಕೇಂದ್ರೀಕೃತವಾಗುತ್ತಿದೆ. ಇಷ್ಟಾದರೆ ಸಾಕಲ್ಲವೇ, ದೇಶ ತನ್ನಿಂತಾನೇ ಅಭಿವೃದ್ಧಿಯೆಡೆಗೆ ಸಾಗುತ್ತದೆ. ಈಗ ಆಗಬೇಕಾದ್ದೂ ಅದೆ. ಇಂತಹ ವಿವಾದಗಳನ್ನು ಬೆಳೆಸುವುದು ಬೇಡ, ಈಗಾಗಲೆ ಹಿಂದೂಗಳು ಕೇಳಿರುವ ಮಥುರಾ, ಕಾಶಿಯಂತಹ ದೇವಸ್ಥಾನಗಳಲ್ಲಿ ತಮ್ಮ ಹಿಡಿತವನ್ನು ಬಿಟ್ಟುಕೊಟುವುದೇ ಸರಿ ಎಂದು ಇನ್ನೊಂದು ಸಮುದಾಯಕ್ಕೆ ಅನ್ನಿಸಿದರೆ ಅದಕ್ಕಿಂತ ಆದರ್ಶ ಪರಿಹಾರ ಇನ್ನೊಂದಿಲ್ಲ. ಅದಾಗದಿದ್ದರೆ, ಕೆಲವು ಶ್ರದ್ಧಾಕೇಂದ್ರಗಳ ಕುರಿತು ನ್ಯಾಯಾಲಯ ತೀರ್ಪ, ರಾಜಿಸಂಧಾನದ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದು. ಇದನ್ನು ಬಿಟ್ಟು, ‘ನಮ್ಮೂರಿನಲ್ಲೊಂದು ಮಸೀದಿಯಿದೆ, ಅಲ್ಲಿ ಬಗೆದು ನೋಡೋಣ, ದೇವಾಲಯ ಇದ್ದರೂ ಇರಬಹುದು’ ಎಂದು ಆಲೋಚಿಸುತ್ತ ಹೋದರೆ ಸಮಾಜ ಮುಂದೆ ಸಾಗುವುದು ಹೇಗೆ? ಇದನ್ನೇ ಡಾ. ಮೋಹನ್ ಭಾಗವತ್ ಅವರು ಹೇಳಿದ್ದು. ಸಮಾಜದಲ್ಲಿ ದಿನೇದನೆ ಹೊಸ ಸಮಸ್ಯೆಗಳು ಎದುರಾಗುತ್ತಿವೆ. ವಿಶ್ವದಲ್ಲೆ ಅತಿ ದೊಡ್ಡ ಯುವಕರ ಸಂಖ್ಯೆಯನ್ನು ಈ ಸಮಯದಲ್ಲಿ ಭಾರತ ಹೊಂದಿದೆ. ಇದು ಸಂತಸದ ವಿಚಾರ. ಆದರೆ, ಇನ್ನು 25-30 ವರ್ಷದಲ್ಲಿ ಇದೇ ಯುವಸಮೂಹ ಪ್ರೌಢಸಮೂಹವಾಗಿರುತ್ತದೆ.
ಈಗ 25-30 ವರ್ಷದವರಲ್ಲಿ ಅನೇಕರು ನಿವೃತ್ತರಾಗಿರುತ್ತಾರೆ ಅಥವಾ ಇನ್ನೇನು ಮೂರ್ನಾಲ್ಕು ವರ್ಷದಲ್ಲಿ ನಿವೃತ್ತರಾಗುವವರಿರುತ್ತಾರೆ. ಆಗ ಇಡೀ ದೇಶ ವಯಸ್ಕರ ದೇಶವಾಗಿರುತ್ತದೆ. ಈಗ ಬಿಸಿರಕ್ತದ ಯುವಕರು ದೇಶದ ಆಹಾರೋತ್ಪಾದನೆ, ಉತ್ಪನ್ನ ತಯಾರಿಕೆ, ರಫ್ತು, ತಂತ್ರಜ್ಞಾನದಲ್ಲಿ ಉನ್ನತಿಯಂತಹ ಕ್ಷೇತ್ರಗಳಲ್ಲಿ ಕಟಿಬದ್ಧರಾಗಿ ದುಡಿಯಬೇಕು. ಆಗ ಮಾತ್ರವೇ ಮುಂದಿನ ಮೂರ್ನಾಲ್ಕು ದಶಕದ ನಂತರ ನಿವೃತ್ತರಾಗುವವರು ಜೀವನ ನಡೆಸಲು, ವೈದ್ಯಕೀಯ ಸೌಲಭ್ಯ ಪಡೆಯಲು ಹಣವಿರುತ್ತದೆ. ಇಲ್ಲದಿದ್ದರೆ ಆಗಿನ ಯುವಪೀಳಿಗೆಯ ಮೇಲೆ ಅಗಾಧ ಹೊರೆ ಬೀಳುತ್ತದೆ. ಹಾಗಾಗಿಯೇ, ಈಗಿನ ಯುವಪೀಳಿಗೆ ಈಗ ತನ್ನ ಸಾಮರ್ಥ್ಯವನ್ನು ದೇಶದ ಆರ್ಥಿಕ ಸ್ಥಿತಿ ಉತ್ತಮಪಡಿಸುವತ್ತ ದುಡಿಯುವಲ್ಲಿ ವ್ಯಯಿಸಬೇಕು.
ರಾಮಮಂದಿರ ನಿರ್ವಣದಿಂದಾಗಿ ದೇಶದ ಯುವಕರಲ್ಲಿ ಸ್ವಾಭಿಮಾನ ಜಾಗೃತವಾಗಿದೆ. ಈ ಸ್ವಾಭಿಮಾನ ಜಾಗೃತವಾಗಿರುವಂತೆ ಕಾಯ್ದುಕೊಳ್ಳಬೇಕಾದ್ದು ಸಮಾಜದ ಕರ್ತವ್ಯ. ಅದಕ್ಕೆ ದಿನಕ್ಕೊಂದು ಮಂದಿರ ಕಟ್ಟಬೇಕಿಲ್ಲ. ಈಗಾಗಲೇ ಇರುವ ಮಂದಿರಗಳಿಗೆ ಯುವಕರು ಬರುವಂತೆ ಮಾಡುವ, ಭಜನೆ, ಸೇವೆಯಂಥ ಕಾರ್ಯಗಳಲ್ಲಿ ತೊಡಗಿಸುವಂತಹ ಪ್ರಯತ್ನ ಮಾಡಬೇಕು. ದೇಶದ ಪ್ರತಿ ಪ್ರಜೆಯೂ ಈ ರೀತಿಯ ಮನೋಭಾವ ಬೆಳೆಸಿಕೊಂಡಾಗ ಅದು ತನ್ನಿಂತಾನೇ ರಾಮರಾಜ್ಯವಾಗುತ್ತದೆ. ಕೇವಲ ರಾಜ ಒಳ್ಳೆಯವನಾಗಿದ್ದರೆ ಸಾಲದು. ಪ್ರಜೆಗಳಲ್ಲೂ ಅದೇ ರೀತಿಯ ಸದಾಚಾರ, ಸದ್ಭಾವನೆ, ಸಹಬಾಳ್ವೆ ಇದ್ದರೆ ಮಾತ್ರ ಅದು ರಾಮರಾಜ್ಯವಾಗುತ್ತದೆ.
ರಾಮಮಂದಿರ ನಿರ್ವಣಕ್ಕಿಂತಲೂ ಅಲ್ಲಿ ಆಸ್ಪತ್ರೆ ಕಟ್ಟಬೇಕಿತ್ತು, ಶಾಲೆ ಕಟ್ಟಬೇಕಿತ್ತು ಎಂದು ಕಮ್ಯುನಿಸ್ಟರು ಬಿಟ್ಟಿ ಉಪದೇಶ ನೀಡುವುದನ್ನು ಮತ್ತೂ ಮುಂದುವರಿಸಿದ್ದಾರೆ. ಅವರೆಲ್ಲರ ಮಾಹಿತಿಗಾಗಿ. 2014-2024ರವರೆಗೆ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರ 315 ಮೆಡಿಕಲ್ ಕಾಲೇಜು ನಿರ್ಮಾಣ ಮಾಡಿದೆ. 1 ಅಐಐMಖ ಇದ್ದದ್ದು ಈಗ 25ಕ್ಕೆ ಏರಿದೆ. ಐಐಟಿಗಳು ಮೂರು ಪಟ್ಟು ಹೆಚ್ಚಿವೆ. ವೈದ್ಯಕೀಯ ಸೀಟುಗಳ ಸಂಖ್ಯೆ ದುಪ್ಪಟ್ಟಾಗಿದೆ. 70 ಸಾವಿರ ಕಿಲೋಮೀಟರ್ನಷ್ಟು ರಾಷ್ಟ್ರೀಯ ಹೆದ್ದಾರಿ ನಿರ್ವಣವಾಗಿದೆ. 10 ಸಾವಿರ ಪಂಚಾಯಿತಿ ಕಟ್ಟಡಗಳು ನಿರ್ವಣವಾಗಿವೆ, 50 ಕೋಟಿ ಜನರಿಗೆ ಬ್ಯಾಂಕ್ ಖಾತೆ ಲಭಿಸಿದೆ, 10 ಕೋಟಿ ಜನರಿಗೆ ಎಲ್ಪಿಜಿ ಸಿಕ್ಕಿದೆ, 4 ಕೋಟಿ ಜನರಿಗೆ ಪಕ್ಕಾ ಮನೆ ಸಿಕ್ಕಿದೆ, ವಿಮಾನ ನಿಲ್ದಾಣಗಳ ಸಂಖ್ಯೆ ಬಹುತೇಕ ಮೂರು ಪಟ್ಟು ಹೆಚ್ಚಾಗಿದೆ. ಒಂದೆಡೆ ಅಭಿವೃದ್ಧಿ ಕಾರ್ಯಗಳೂ ನಡೆಯುತ್ತಿವೆ, ರಾಮಮಂದಿರವೂ ನಿರ್ವಣವಾಗುತ್ತಿದೆ. ಹಾಗಾಗಿ, ದೇಶದ ಅಭಿವೃದ್ಧಿ, ಶ್ರದ್ಧೆಯ ಕುರಿತು ಯಾವುದೇ ಸಂಬಂಧವಿಲ್ಲದ ಕಮ್ಯುನಿಸ್ಟರ ಹೇಳಿಕೆಗಳಿಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ.
ಕಡೆ ಮಾತು: ಹಾಗೆ ನೋಡಿದರೆ, ರಾಮಮಂದಿರ ವಿಷಯ ಬಿಜೆಪಿಗೆ ಚುನಾವಣಾ ರಾಜಕೀಯದ ವಿಷಯ ಎಂದು ಕಮ್ಯುನಿಸ್ಟ್ ಬುದ್ಧಿಜೀವಿಗಳು ಮೂಗುಮುರಿಯುತ್ತಲೇ ಇದ್ದಾರೆ. ಆದರೆ, ಆಡ್ವಾಣಿ ನೇತೃತ್ವದಲ್ಲಿ ಬಿಜೆಪಿ ಈ ವಿಷಯ ಕೈಗೆತ್ತಿಕೊಂಡಾಗ, ಆ ಪಕ್ಷಕ್ಕೆ ಬಹುಮತ ಬಂದಿಲ್ಲ. 2014 ಮತ್ತು 2019ರಲ್ಲಿ ಬಿಜೆಪಿಗೆ ಬಹುಮತ ಬಂದಾಗ, ಅಯೋಧ್ಯೆ ರಾಮಮಂದಿರದ ವಿಷಯ ಸದ್ದುಮಾಡಿರಲಿಲ್ಲ. ಈಗಲೂ ಅಷ್ಟೆ, ರಾಮಮಂದಿರ ನಿರ್ವಣವಾಗದಿದ್ದರೂ 2024 ಬಿಜೆಪಿಯದ್ದೆ ಎನ್ನುತ್ತಿವೆ ಸಮೀಕ್ಷೆಗಳು. ಈ ಅರ್ಥದಲ್ಲಿ ಮಂದಿರ ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿರುವುದು ಬಿಜೆಪಿಯಲ್ಲ, ಅದು ಕಾಂಗ್ರೆಸ್ ಮತ್ತಿತರ ಪ್ರತಿಪಕ್ಷಗಳು! ಮಂದಿರ ಭೀತಿ ಅಲ್ಪಸಂಖ್ಯಾತರ ಮತ ತರಬಹುದು ಎಂಬುದು ಈ ಪಕ್ಷಗಳ ಲೆಕ್ಕಾಚಾರ. ಆದರೆ ಸತ್ಯ ಏನೆಂದರೆ, ಕೆಲವು ಅಲ್ಪಸಂಖ್ಯಾತರೇ ರಾಮನಾಮ ಜಪದಲ್ಲಿದ್ದಾರೆ!
(ಲೇಖಕರು ಬಿಜೆಪಿಯ ಹಿರಿಯ ವಕ್ತಾರರು)