ನಂಟಿಗೆ ಅಂಟಿಕೊಳ್ಳದೆ ಅರಿವಿನತ್ತ ಚಿತ್ತವಿಟ್ಟರೆ ಸತ್ಯದರ್ಶನ!

Friendship
Published on

ಎನಿತೆನಿತ್ತು ವಿಕಾರ ಪರಿಣಾಮಗಳ ನಮ್ಮ| ಮನಕಾಗಿಪುವೊ ಲೋಕರೂಪಕಶಕ್ತಿಗಳು|| ಅನಿತನಿತು ಸತ್ಯತೆಯವಕ್ಕುಂಟು ಜೀವಿತದಿ| ಅನುಭವವೆ ದಿಟದಳತೆ-ಮಂಕುತಿಮ್ಮ||393||

ಲೋಕ ರೂಪಕ ಶಕ್ತಿಗಳು ಎಷ್ಟೆಷ್ಟೋ ವಿಕಾರ ಪರಿಣಾಮಗಳನ್ನು ಮನಸ್ಸಿಗೆ ಉಂಟುಮಾಡುತ್ತವೆಯೋ, ಅಷ್ಟಷ್ಟೇ ಸತ್ಯತೆಯೂ ಆ ಅನುಭವಗಳಿಗೆ ಜೀವನದಲ್ಲಿದೆ. ಹಾಗಾಗಿ ಅನುಭವವೇ ನಿಜವಾದ ಅಳತೆ ಎನ್ನುತ್ತದೆ ಈ ಕಗ್ಗ.

ಜಗತ್ತಿನ ರುಚಿ, ಕಾಂತಿ, ಸೌಂದರ್ಯಗಳು ಮನುಷ್ಯನಲ್ಲಿ ವಿಧವಿಧದ ಆಸೆ-ವ್ಯಾಮೋಹಗಳನ್ನು ಉಂಟು ಮಾಡುತ್ತವೆ. ಲೋಕ ವ್ಯವಹಾರದಲ್ಲಿ ಬೆರೆತು ಬಾಳುವಾಗ ಹಲವು ಕರ್ತವ್ಯಗಳನ್ನು, ಕರ್ವಚರಣೆಗಳನ್ನು ಮಾಡಲೆಬೇಕಾಗುತ್ತದೆ. ಈ ಅವಸರದಲ್ಲಿ ಪಾಪಪುಣ್ಯಗಳ ಕ್ರಿಯೆಗಳೂ ನಡೆದು ಕರ್ಮಬಂಧನಕ್ಕೆ ಒಳಗಾಗುವುದೂ ಸಹಜ. ಲೋಕಜೀವನವು ಕಷ್ಟನಿಷ್ಠುರಗಳಿಂದ ಸಂಕಟವನ್ನು ಉಂಟುಮಾಡುವುದು. ಬಡತನ, ರೋಗ-ರುಜಿನಗಳಿಂದ ಅಸಹನೀಯವೆನ್ನಿಸುವುದು ಸುಳ್ಳಲ್ಲ.

ಹಾಗೆಯೇ ಮನುಷ್ಯರ ನಡುವಿನ ಸ್ನೇಹ-ಸಂಬಂಧಗಳು ನೀಡುವ ಭರವಸೆ, ಪ್ರೀತಿ- ಪ್ರೇಮ- ಪ್ರಣಯಗಳು ಹೃದಯದ ಕಾಠಿಣ್ಯತೆಯನ್ನು ನಯಗೊಳಿಸುತ್ತವೆ. ಜೀವಸ್ಪಂದನವು ಬಾಂಧವ್ಯ ವನ್ನು ಗಟ್ಟಿಗೊಳಿಸಿ ಬದುಕನ್ನು ಸಹ್ಯವಾಗಿಸುತ್ತದೆ. ಹಾಗೆಯೇ ಮೋಹ-ಕಾಮನೆಗಳ ಸೆಳೆತ, ಅದರಿಂದಾಗುವ ನೋವು- ಆಘಾತಗಳು ಬದುಕಿಗೆ ಪಾಠವಾಗುವುದೂ ಇದೆ. ಕುಟುಂಬ ಸಂಸಾರವು ಸ್ವಾರ್ಥ ನಾಶವನ್ನು ಮಾಡಿ ತ್ಯಾಗದಲ್ಲಿರುವ ಸುಖವನ್ನು ಪರಿಚಯಿಸುತ್ತದೆ. ಸಾಮಾಜಿಕ ಸಹಬಾಳ್ವೆಯು ಮನಸ್ಸಿನ ಕುಂದು ಕೊರತೆಗಳನ್ನು, ದೌರ್ಬಲ್ಯಗಳನ್ನು ಕಳಚಿಕೊಳ್ಳಲು, ಉದಾತ್ತಚಿತ್ತನಾಗಲು ಕಲಿಸುತ್ತದೆ. ಹಾಗಾಗಿ ಜೀವನವು ಒಂದು ಪ್ರಯೋಗ ಶಾಲೆ, ಇಲ್ಲಿ ನಿರಂತರ ಕಲಿಕೆ.

ಜೀವನವು ಅನುಭವಗಳಿಗೆ ತೆರೆದುಕೊಳ್ಳುತ್ತ ಹೋಗಬೇಕು. ಆಗ ಸಹಜವಾದ ಬದಲಾವಣೆಯು ಸಾಧ್ಯ. ಹಾಗಾಗಿಯೇ ವ್ಯಕ್ತಿಯು ಇಂದು ಇದ್ದಂತೆಯೇ ಮುಂದೆಯೂ ಇರುವುದಿಲ್ಲ. ಜೀವನದ ಪ್ರತಿಕ್ಷಣವನ್ನೂ ಒಂದು ಅನುಭವವೆಂದು, ಪಾಠವೆಂದು ಸ್ವೀಕರಿಸುತ್ತಾ ಹೋದವನು ಪರಿಪಕ್ವನಾಗುತ್ತಾನೆ. ಪ್ರತಿನಿತ್ಯವೂ ಮನ ವನ್ನು ಶೋಧಿಸುತ್ತಾ ದೌರ್ಬಲ್ಯಗಳನ್ನು ತೊಡೆದುಕೊಳ್ಳುತ್ತಾನೆ. ಹಾಗಲ್ಲದೆ ಪ್ರತಿಯೊಂದು ಏಳು-ಬೀಳುಗಳನ್ನು ಲೋಕಾನುಭವ ಕ್ಕಷ್ಟೇ ಸೀಮಿತಗೊಳಿಸಿಕೊಂಡರೆ ಕೋಪ, ಅಸಹನೆ, ದ್ವೇಷ, ಅಸೂಯೆಯೇ ಮುಂತಾದ ನಕಾರಾತ್ಮಕ ಭಾವಗಳಿಂದ ಬಳಲಬೇಕಾಗುತ್ತದೆ.

ಮುರುಕು ಧರ್ಮ ಶಾಲೆಯಲ್ಲಿ ಮಲಗಿದ್ದ ತಿರುಕನು ಕಂಡ ಕನಸು ನಿಜವಲ್ಲದೆ ಇದ್ದರೂ ಅದು ನೀಡಿದ ಹರುಷ, ಆನಂದದ ಅನುಭವವು ಸುಳ್ಳಲ್ಲ. ಕನಸಿನ ಮೋಡಿಗೆ ಒಳಗಾಗಿ ಭಿಕ್ಷೆ ಬೇಡಿ ತಂದಿದ್ದ ಹಿಟ್ಟನ್ನು ತುಳಿದು ಕಳೆದುಕೊಂಡದ್ದೂ ಸುಳ್ಳಲ್ಲ. ಮಕ್ಕಳ ಮೇಲಿನ ಮೋಹವು ಭ್ರಮೆ ಎಂದು, ಕನಸು-ನಿರೀಕ್ಷೆಗಳು ಪೊಳ್ಳೆಂದು ಅತಿ ಮಮತೆಯಿಂದ ಮಕ್ಕಳನ್ನು ಬೆಳೆಸಿದ ಹೆತ್ತವರಿಗೆ ಅರ್ಥವಾಗುವುದಿದೆ. ಆದರೆ ಮಕ್ಕಳ ಶ್ರೇಯಸ್ಸಿಗಾಗಿ ಅವರು ಮಾಡಿದ ಪ್ರಯತ್ನ, ಪಡೆದ ಆನಂದ, ಬೆಳೆದ ವಿಶ್ವಾಸ ಮುಂತಾದ ಅನುಭವಗಳು ಖಂಡಿತಾ ಸುಳ್ಳಲ್ಲ. ಮನೋವಿಕಾರವೋ, ಮೋಹ ವಿಭ್ರಮೆಯೋ ಮನಸ್ಸು ಭಾವದ ಕಡಲು. ಹೊಯ್ದಾಟ, ಮಥನ, ಘರ್ಷಣೆ, ತಲ್ಲಣ, ಸಂಕಟ, ಭಯ, ಬೆರಗು, ಅಸಹ್ಯ, ಪ್ರೇಮವೇ ಮೊದಲಾದ ಸಮ್ಮಿಶ್ರ ಭಾವಗಳು ಸ್ಥಿರವಾಗಿ ಉಳಿಯುವುದಿಲ್ಲ. ಆದರೂ ಮಾಡುವ ಪರಿಣಾಮ, ಬೆಳೆವ ಅರಿವು ದಿಟವಾದುದು.

ಸಂಸಾರವೆನ್ನುವ ನದಿಯಲ್ಲಿ ಮುಳುಗೇಳುವ, ಆಕಸ್ಮಿಕ ತಿರುವುಗಳಲ್ಲಿ ಇನ್ನೆಲ್ಲಿಗೋ ಸರಿಯುವ ಜೀವನ ಪಯಣವು ಕೊನೆಯಾಗುವುದು ಅನಂತ ಸಾಗರವನ್ನು ಸೇರಿದಾಗ. ಮಡುವಿನಲ್ಲಿ ನಿಂತ ನೀರಾಗಿರುವ ಹನಿಯೂ ಒಂದಲ್ಲ ಒಂದು ದಿನ ಸಾಗರದೊಡಲನ್ನು ಸೇರುತ್ತದೆ. ಕಸವನ್ನೆಲ್ಲಾ ಬದಿಗೊತ್ತಿ ನೀರನ್ನಷ್ಟೆ ತನ್ನೊಳಗೆ ಸೇರಿಸಿಕೊಳ್ಳುವ ಸಿಂಧುವಿನಲ್ಲಿ ಬಿಂದುವಾಗುವುದೇ ಜೀವನದ ಸಾರ್ಥಕತೆ. ಇದಕ್ಕೆ ಅರ್ಹರಾಗಲು ಬದುಕೆನುವ ವೇದಿಕೆ ಬೇಕು, ವಿವಿಧ ಭೂಮಿಕೆಗಳಲ್ಲಿ ಒಳಗೊಳ್ಳಬೇಕು. ಎಲ್ಲವನ್ನೂ ಸಾಕ್ಷಿ ಪ್ರಜ್ಞೆಯಿಂದ ಗಮನಿಸುತ್ತ, ಯಾವ ನಂಟಿಗೂ ಅಂಟಿಕೊಳ್ಳದೆ ಅರಿವಿನತ್ತ ಚಿತ್ತವಿಟ್ಟರೆ ಸತ್ಯ ದರ್ಶನದ ಅನುಭವ. ಸತ್ಯದ ಅಂಶವಿನಿತು ಅರಿವಾದರೂ ಸಾಕು ಜೀವನು ಮನೋವಿಕಾರಗಳಿಂದ ಸ್ವತಂತ್ರನಾಗುತ್ತಾನೆ. ಭಾವ ಮುಕ್ತನಾದರೆ ಭವ ಮುಕ್ತನಾಗುವುದು ಕಷ್ಟವಲ್ಲ.

(ಲೇಖಕರು ಉಪನ್ಯಾಸಕರು, ಕವಯತ್ರಿ) (ಪ್ರತಿಕ್ರಿಯಿಸಿ: vvsudina@gmail.com, kaviadoor@gmail.com)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net