ಕೂಡಿ ಬಾಳಿದರೆ ಸ್ವರ್ಗ ಸುಖ...

ವಿಜಯವಾಣಿ (7)
Published on
| ರೂಪಾ ಅಯ್ಯರ್

ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು... ಕನ್ನಡದ ಈ ಅರ್ಥಪೂರ್ಣ ಮಾತು ಇಡೀ ಕುಟುಂಬ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಂತಿದೆ. ಒಂದು ಮಗು ಅಥವಾ ಕುಟುಂಬ ಸದಸ್ಯನ ಬೆಳವಣಿಗೆಯಲ್ಲಿ ಮನೆ ಮಹತ್ವದ ಪಾತ್ರ ವಹಿಸುತ್ತದೆ. ಮನೆಯ ಸದಸ್ಯರು ಹೇಳಿಕೊಡುವ ಹಾಗೂ ನಡೆದುಕೊಳ್ಳುವ ರೀತಿ ಉಳಿದ ಸದಸ್ಯರ ಮೇಲೆ ಪ್ರಭಾವ ಬೀರುತ್ತದೆ. ಈ ಕಾರಣಕ್ಕಾಗಿ ಸಮಾಜದ ಬೆಳವಣಿಗೆಯಲ್ಲಿ ಮನೆಯ ಪಾತ್ರ ಹಿರಿದು. ಇನ್ನು, ಕೂಡು ಕುಟುಂಬವಿದ್ದರಂತೂ ಸ್ವರ್ಗ ಸುಖ. ಇಲ್ಲಿ ಅಮ್ಮ ಗುರುವಾಗಿರುತ್ತಾರೆ. ಅಮ್ಮ ಅಷ್ಟೇ ಅಲ್ಲ, ಮನೆಯ ಎಲ್ಲರೂ ಗುರುಗಳೇ.

ಒಂದು ವೇಳೆ ಅಮ್ಮ ಅಡುಗೆ ಮನೆಯಲ್ಲಿ ಬಿಜಿ ಇದ್ದಾಳೆ ಎಂದರೆ, ನಮಗೆ ಹೇಳಿಕೊಡಲು ಚಿಕ್ಕಮ್ಮ, ದೊಡ್ಡಮ್ಮ, ಅಜ್ಜಿ, ತಾತ, ಚಿಕ್ಕಪ್ಪ, ದೊಡ್ಡಪ್ಪ, ಮಾವ ಹೀಗೆ ಹಲವಾರು ಜನ ಇರುತ್ತಾರೆ. ಇಲ್ಲಿ ನಮಗೆ ಪ್ರೀತಿ, ವಿಶ್ವಾಸ ದೊರೆಯುವುದು ಒಂದು ಕಡೆಯಿಂದಲ್ಲ, ಹತ್ತು ಹಲವು ಕಡೆಯಿಂದ. ಇಂತಹ ವಾತಾವರಣದಲ್ಲಿ ಬೆಳೆದ ಮಗು ಬದುಕಿನಲ್ಲಿ ಎಂದಿಗೂ ಸೋಲುವ ಮಾತೇ ಇಲ್ಲ. ಆದರೆ, ಪ್ರಸ್ತುತ ಪರಿಸ್ಥಿತಿಯಲ್ಲಿ ವಾತಾವರಣ ಆ ರೀತಿ ಇಲ್ಲ. ಕೂಡು ಕುಟುಂಬಗಳು ಚದುರಿವೆ, ಚದುರುತ್ತಿವೆ. ಈಗಿನ ಯುವ ದಂಪತಿಗಳು ಸ್ವಾತಂತ್ರ್ಯ ಬಯಸುತ್ತಿದ್ದಾರೆ. ಹಾಗಾಗಿ ಕೇವಲ ತಂದೆ-ತಾಯಿ-ಮಕ್ಕಳು ಮಾತ್ರ ಇರುವ ಕುಟುಂಬಗಳೇ ಹೆಚ್ಚಾಗಿವೆ. ಈಗೀಗ ತುಂಬ ಜೋಡಿಗಳು ಒಂದೇ ಮಗು ಸಾಕು ಎನ್ನುತ್ತಿರುವುದರಿಂದ ತಂದೆ-ತಾಯಿ-ಮಗು ಮಾತ್ರ ಇರುವ ಮನೆಗಳೇ ಜಾಸ್ತಿ. ತಮ್ಮ ಒತ್ತಡದ ಬದುಕಿನ ನಡುವೆ ಮಗುವಿನೊಂದಿಗೆ/ ಮಕ್ಕಳೊಂದಿಗೆ ಕಾಲ ಕಳೆಯಲು ಪಾಲಕರ ಬಳಿ ಸಮಯವೇ ಇಲ್ಲ. ಇದರ ಪರಿಣಾಮ ಮಕ್ಕಳ ಮೂಲಕ ಇಡೀ ಸಮಾಜದ ಮೇಲೂ ಆಗುತ್ತಿದೆ.

ಅನುಭವದಲ್ಲಿ ಹೇಳುವುದಾದರೆ, ನಮಗೆ ಚಿಕ್ಕವರಿರುವಾಗ ಅಜ್ಜ-ಅಜ್ಜಿ, ಮಾವಂದಿರು ನೀತಿಪಾಠ, ಪಂಚತಂತ್ರ ಕಥೆಗಳು, ರಾಮನಾಮ, ಪೌರಾಣಿಕ ಕಥೆಗಳನ್ನು ಹೇಳುತ್ತಿದ್ದರು. ಆಗ ಕೇಳುವುದು ಸ್ವಲ್ಪ ಬೋರ್ ಎನಿಸುತ್ತಿತ್ತು. ಅದರ ಬೆಲೆ ಈಗ ಗೊತ್ತಾಗುತ್ತಿದೆ. ಅಂದು ಅವರು ಹೇಳಿದ ಕಥೆಗಳೇ ಇಂದಿನ ನಮ್ಮ ಜೀವನಕ್ಕೆ ದಾರಿದೀಪವಾಗಿವೆ. ಬಿತ್ತಿದ ಬೀಜ ಮರವಾಗಿ ಬೆಳೆದಾಗಲೇ ನಮಗೆ ಬೀಜದ ಬೆಲೆ ಗೊತ್ತಾಗುವುದು.

ಮನುಷ್ಯನಿಗೆ ತನ್ನ ಕಷ್ಟಗಳನ್ನು ಹಂಚಿಕೊಳ್ಳಲು ಇಂದು ಆಪ್ತರೇ ಇಲ್ಲದಂತಾಗಿದೆ. ಅವರವರ ಬದುಕಿನ ಜಂಜಾಟದಲ್ಲಿ ಅವರವರು ಬಿಜಿ ಇದ್ದಾರೆ. ಹೀಗಾಗಿ, ಮನುಷ್ಯ ಒಂಟಿತನ ಅನುಭವಿಸಿ, ಕೊನೆಗೆ ಮದ್ಯವ್ಯಸನದಂತಹ ಚಟಗಳಿಗೆ ಬಲಿಯಾಗುತ್ತಿದ್ದಾನೆ. ಅವಿಭಕ್ತ ಕುಟುಂಬದಲ್ಲಿ ಹಾಗಲ್ಲ. ಮನೆಯ ವಿಚಾರ ಬೀದಿಗೆ ಹೋಗಬಾರದು ಎಂದು ಮನೆಯವರೇ ಒಟ್ಟಿಗೆ ಸೇರಿ ಒಂದು ನಿರ್ಧಾರ ಮಾಡಿ, ನಮ್ಮ ಕಷ್ಟ-ಸಮಸ್ಯೆಗಳಿಗೆ ಪರಿಹಾರ ನೀಡುತ್ತಿದ್ದರು. ಇಂತಹ ಸಾಕಷ್ಟು ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ.

ಹಳೆಯ ಕಾಲದ ಸಂಸ್ಕೃತಿ, ಸಂಪ್ರದಾಯ ಹಾಗೂ ಜೀವನ ಪದ್ಧತಿಗಳು ಇಂದು ನಶಿಸುತ್ತಿರುವುದು ತೀವ್ರ ಕಳವಳಕಾರಿ. ‘ಅತಿಥಿ ದೇವೋಭವ’ ಎಂಬ ಉದಾರ ಭಾವವನ್ನು ನಾವ್ಯಾರೂ ಅನುಸರಿಸುತ್ತಿಲ್ಲ. ನಮ್ಮ ಸಂಸ್ಕೃತಿಯ ಬೇರುಗಳನ್ನು ಕಾಪಿಟ್ಟುಕೊಳ್ಳಬೇಕಾದರೆ, ನಮ್ಮಲ್ಲಿ ತಾಳ್ಮೆ, ಸಂಯಮ ಮುಖ್ಯ ಎನಿಸುತ್ತದೆ.

ಇಂದು ಬಹುತೇಕರು ಅವಿಭಕ್ತ ಕುಟುಂಬ ತೊರೆದು, ಸ್ವತಂತ್ರವಾಗಿ ಬದುಕಲು ಮುಂದಾಗುತ್ತಿದ್ದಾರೆ. ಭವಿಷ್ಯದಲ್ಲಿ ಎದುರಾಗುವ ಸವಾಲುಗಳನ್ನು ಧೈರ್ಯದಿಂದ ಎದುರಿಸಲು ಆಗದೆ, ವಿಚ್ಛೇದನಕ್ಕೆ ಮುಂದಾಗುತ್ತಿದ್ದಾರೆ. ಇದನ್ನು ತಡೆಯಬೇಕಾದರೆ ಕೂಡು ಕುಟುಂಬವನ್ನು ತೊರೆಯುತ್ತಿರುವವರನ್ನು ಮನೆಯಲ್ಲಿ ಉಳಿಸಿಕೊಂಡು ಆ ದಂಪತಿಗೆ ಸ್ವಾತಂತ್ರ್ಯ ನೀಡುವ ಪ್ರಯತ್ನವಾಗಬೇಕು. ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡುವುದು ಹಾಗೂ ಮಾತನಾಡುವ ಶ್ರದ್ಧೆಯನ್ನು ಬೆಳೆಸಿಕೊಳ್ಳಬೇಕು. ಇದರಿಂದ ಒಬ್ಬರ ಮನಸ್ಸು ಅರಿಯಲು ಹಾಗೂ ಕುಟುಂಬದ ಸಂತೋಷ, ತೃಪ್ತಿ, ನೆಮ್ಮದಿ ಕಂಡುಕೊಳ್ಳಲು ಸಾಧ್ಯ.

ಮನುಷ್ಯನಲ್ಲಿ ತಾಳ್ಮೆ ಕಡಿಮೆಯಾಗುತ್ತಿದೆ. ಮೂರನೇ ವ್ಯಕ್ತಿಯೊಂದಿಗೆ ಕಾಲ ಕಳೆಯುವಷ್ಟು ಸಹನೆ ಇಲ್ಲದಂತಾಗಿದೆ. ಇದೇ ಕೆಲವರ ಖಿನ್ನತೆಗೆ ಕಾರಣವಾಗುತ್ತಿದೆ. ಮನುಷ್ಯನ ಆಸೆಗಳಿಗೆ ಕೊನೆಯಿಲ್ಲದಂತಾಗಿದೆ. ಇಡೀ ವಾರ ಕೆಲಸದಲ್ಲಿ ಕಳೆದುಹೋಗುವ ಆತ ಸಂಬಂಧಗಳನ್ನು ಮರೆಯುತ್ತಿದ್ದಾನೆ. ವಾರದ ಕೊನೆಗೆ ಸಂತೋಷಕ್ಕಾಗಿ ಪಾರ್ಟಿ, ಪಬ್​ಗೆ ಹೋಗುತ್ತಾನೆ. ಆದರೆ, ಯಾವಾಗ ನಾವು ಮನೆಯವರ ಹತ್ತಿರ ಒಂದು ತಾಸು ಕುಳಿತು ನಿರಾಳವಾಗಿ ಮಾತನಾಡುತ್ತೇವೋ, ಅಲ್ಲಿಯೇ ನಾವು ನಿಜವಾದ ಸಂತೋಷ ಕಂಡುಕೊಳ್ಳಬಹುದು. ಇವೆಲ್ಲವನ್ನೂ ಸರಿದೂಗಿಸುವ ಸಮಯ ನಿರ್ವಹಣೆಯನ್ನು ನಾವು ಕಲಿಯಬೇಕು.

ಅವಿಭಕ್ತ ಕುಟುಂಬದಲ್ಲಿ ತಪ್ಪು ತಿದ್ದಿಕೊಳ್ಳಲು ಅವಕಾಶ ಇರುತ್ತದೆ. ಇಲ್ಲಿ ಮನೆಯ ಯಾರೋ ಒಬ್ಬರು ತಪು್ಪ ಮಾಡಿದರೆ, ಅದು ಮುಂದಿನ ವ್ಯಕ್ತಿಗೆ ಪಾಠವಾಗಿರುತ್ತಿತ್ತು. ಮುಂದೆ ಇದನ್ನು ನಾವು ಮಾಡಬಾರದು ಎಂಬ ಸಂದೇಶ ನಮಗೆ ತಲುಪಿರುತ್ತಿತ್ತು. ಇನ್ನು ಮನೆಯ ರಸಹ್ಯಗಳು ಮನೆಯಲ್ಲಿಯೇ ಇರುತ್ತಿದ್ದವು. ಆದರೆ, ಈಗ ಕುಟುಂಬಗಳು ವಿಘಟನೆಯಾಗುತ್ತಿದ್ದು, ಮನೆಯ ಎಷ್ಟೋ ವಿಷಯಗಳು ಬೀದಿಗೆ ಬರುತ್ತಿವೆ. ಕೋರ್ಟ್, ಪೊಲೀಸ್ ಸ್ಟೇಷನ್ ಮೆಟ್ಟಿಲು ಏರುತ್ತಿರುವುದು ನಿಜಕ್ಕೂ ಕಳವಳಕಾರಿಯಾದ ಸಂಗತಿ.

ಕುಟುಂಬಗಳಿಂದಲೇ ದೇಶ ಹಾಗೂ ಸಮಾಜ. ಕುಟುಂಬಗಳು ಎಷ್ಟು ಆರ್ಥಿಕವಾಗಿ ಸದೃಢವಾಗಿರುತ್ತವೆಯೋ ಆ ದೇಶವು ಕೂಡ ಅಷ್ಟೇ ಬಲಿಷ್ಠವಾಗಿರುತ್ತದೆ. ಕುಟುಂಬದ ಒಬ್ಬ ಸದಸ್ಯ ಎಷ್ಟು ಪ್ರಮಾಣದಲ್ಲಿ ಕೊಡುಗೆ ನೀಡುತ್ತಾನೆ, ನೈತಿಕವಾಗಿ ಹೇಗೆ ಬದುಕು ಸಾಗಿಸುತ್ತಾನೆ ಎಂಬುದರ ಮೇಲೆ ಆ ದೇಶದ ಅಭಿವೃದ್ಧಿ ನಿಂತಿದೆ. (ಲೇಖಕರು ಕನ್ನಡ ಚಿತ್ರರಂಗದ ಖ್ಯಾತ ನಟಿನಿರ್ದೇಶಕಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net