ತನ್ನವರ ವಿಶ್ವಾಸ ಗೆದ್ದರೆ, ಶತ್ರುಗಳನ್ನು ಸೋಲಿಸುವುದು ಸುಲಭ

Column F
Published on
ಯುದ್ಧ ಗೆಲ್ಲಬೇಕಾದರೆ ಹಿಂದಿರುವ ಸೈನ್ಯ ಎಷ್ಟು ದೊಡ್ಡದಿದೆ ಎನ್ನುವುದು ಮುಖ್ಯವಲ್ಲ. ಮುಂದೆ ನಿಂತ ನಾಯಕ ಎಷ್ಟು ಗಟ್ಟಿಗ, ಆತ್ಮವಿಶ್ವಾಸ ಯಾವ ಮಟ್ಟದಲ್ಲಿದೆ ಎನ್ನುವುದು ಮುಖ್ಯವಾಗುತ್ತದೆ.

ಕೌರವರ ಬಳಿ ಹನ್ನೊಂದು ಅಕ್ಷೋಹಿಣಿ ಸೈನ್ಯವಿತ್ತು. ಪಾಂಡವರ ಬಳಿ ಇದ್ದಿದ್ದು ಏಳು ಅಕ್ಷೋಹಿಣಿ ಮಾತ್ರ. ಜಗತ್ತಿನ ಆ ಕಾಲದ ಎಲ್ಲ ಶ್ರೇಷ್ಠ ಅತಿರಥ ಮಹಾರಥರು ದುರ್ಯೋಧನನ ಪರವಾಗಿದ್ದರು. ಭೀಷ್ಮ, ದ್ರೋಣ, ಕರ್ಣ, ಅಶ್ವತ್ಥಾಮ, ಶಲ್ಯ ಜತೆಗೆ ನೂರು ಸೋದರರ ಬಲ ದುರ್ಯೋಧನನಿಗಿತ್ತು. ಆದರೂ, ಆತ್ಮವಿಶ್ವಾಸ ಅವನ ಬಳಿ ಇರಲಿಲ್ಲ. ‘ಭೀಷ್ಮರಿಗೆ ವಯಸ್ಸಾಯಿತು. ದ್ರೋಣರು ಅರ್ಜುನನ ಪಕ್ಷಪಾತಿ. ಕರ್ಣ ದಾನಶೂರನಾಗಲು ಹೊರಟ ಹುಂಬ. ಯಾರಿಗೆ ಏನು ಭಾಷೆ ಕೊಟ್ಟು ಸಿಕ್ಕಿಬೀಳುತ್ತಾನೋ ತಿಳಿಯದು. ಅಶ್ವತ್ಥಾಮನಿಗೆ ಆವೇಶ ಜಾಸ್ತಿ, ವಿವೇಕ ಕಮ್ಮಿ. ತಮ್ಮಂದಿರ ಪೈಕಿ ದುಶ್ಶಾಸನ ಓರ್ವನೇ ವೀರ. ಉಳಿದವರು ಲೆಕ್ಕಕ್ಕುಂಟು ಆಟಕ್ಕಿಲ್ಲ... ಪಾಂಡವರ ಸೈನ್ಯಕ್ಕೆ ಕೃಷ್ಣನ ಶ್ರೀರಕ್ಷೆ ಇದೆ. ಈ ಹದಿಮೂರು ವರ್ಷಗಳಲ್ಲಿ ನಾವೆಲ್ಲರೂ ಅರಮನೆಯ ಸುಖ, ಸುಪ್ಪತ್ತಿಗೆಯಲ್ಲಿ ಮೈಮರೆತಿದ್ದರೆ, ಪಾಂಡವರು ಕಾಡುಮೇಡು ಅಲೆದು, ನಿರಂತರ ಶಸ್ತ್ರಾಭ್ಯಾಸ ಮಾಡಿ ಸಮರ ಸನ್ನದ್ಧರಾಗಿದ್ದಾರೆ. ಪಾಂಡವ ಸೈನ್ಯದಲ್ಲಿ ಒಬ್ಬೊಬ್ಬರೂ ನನಗೆ ಅರ್ಜುನನಂತೆಯೇ ಕಾಣುತ್ತಿದ್ದಾರೆ’ ಎಂದು ದುರ್ಯೋಧನ ಯುದ್ಧ ಆರಂಭಕ್ಕೆ ಮುನ್ನವೇ ಧೃತಿಗೆಡುತ್ತಾನೆ. ಇನ್ನೊಂದೆಡೆ, ‘ಯುದ್ಧಕ್ಕೆ ನಿಂತವರೆಲ್ಲರೂ ನನ್ನ ರಕ್ತಸಂಬಂಧಿಗಳು, ನೆಂಟರಿಷ್ಟರು. ಇವರೆಲ್ಲರನ್ನು ಕೊಂದು ನಾವು ರಾಜ್ಯ ಆಳಬೇಕೇ?’ ಎಂದು ಅರ್ಜುನನಿಗೆ ಗ್ಲಾನಿಯಾದಾಗ ಜತೆಯಲ್ಲಿದ್ದ ಕೃಷ್ಣ ಗೀತೋಪದೇಶ ಬೋಧಿಸಿ ಯುದ್ಧಸನ್ನದ್ಧಗೊಳಿಸಿದ. ಆದರೆ, ದುರ್ಯೋಧನನ ಮತಿಭ್ರಾಂತಿ ದೂರ ಮಾಡುವುದಕ್ಕಾದರೂ ಯಾರಿದ್ದರು? ತನ್ನ ಸಾಮರ್ಥ್ಯದ ಮೇಲೆ, ಸೈನ್ಯದ ಬಲದ ಮೇಲೆ, ತನ್ನವರ ವೀರತ್ವದ ಮೇಲೆ ವಿಶ್ವಾಸವಿಲ್ಲದ ದುರ್ಯೋಧನ ಆ ಹದಿನೆಂಟು ದಿನಗಳಲ್ಲಿ ಹದಿನೆಂಟು ಅಕ್ಷೋಹಿಣಿ ಸೈನ್ಯ ಹೊಡೆದಾಡಿ ಸಾಯಲು ಕಾರಣನಾದ. ತಾನೂ ನಾಶವಾದ.

ಎಲ್ಲ ಯುದ್ಧಗಳನ್ನು ರಣರಂಗದಲ್ಲೇ ಗೆಲ್ಲಲು ಸಾಧ್ಯವಿಲ್ಲ. ‘ಜಗತ್ತನ್ನು ಗೆಲ್ಲುವ ಮುನ್ನ ನಿನ್ನ ಮನಸ್ಸನ್ನು ಗೆಲ್ಲು’ ಎಂದರು ತಿಳಿದವರು. ಮೊದಲು ನಮ್ಮವರನ್ನು ವಿಶ್ವಾಸದಿಂದ ಗೆಲ್ಲಬೇಕು. ಅದಾದ ಬಳಿಕ ಶತ್ರುಗಳನ್ನು ಹೋರಾಡಿ ಗೆಲ್ಲಬೇಕು. ಪ್ರೀತಿ-ವಿಶ್ವಾಸ ಇರಬೇಕಾದ ಜಾಗದಲ್ಲಿ ಅಸೂಯೆ, ಅಪನಂಬಿಕೆ, ಪೈಪೋಟಿ, ಅಹಂಭಾವ ತುಂಬಿಕೊಂಡರೆ ಅಂಥ ಜಾಗದಲ್ಲಿ ತಂಡಸ್ಪೂರ್ತಿ ಮೂಡಲು ಸಾಧ್ಯವೇ? ಎದುರಾಳಿಯ ಜತೆ ಸ್ಪರ್ಧೆ ಹಾಗಿರಲಿ, ತಮ್ಮ ತಮ್ಮಲ್ಲೇ ಸ್ಪರ್ಧೆ ಏರ್ಪಟ್ಟರೆ ಅದೊಂದು ತಂಡವೆನಿಸೀತೇ? ಹನ್ನೊಂದು ಆಟಗಾರರ ಒಂದು ತಂಡ ಇರಬೇಕಾದ ಜಾಗದಲ್ಲಿ ತಲೆ ತುಂಬ ಅಹಂ ತುಂಬಿಕೊಂಡ ಸೂಪರ್​ಸ್ಟಾರ್​ಗಳ ಪರಸ್ಪರ ಪೈಪೋಟಿ ಹತ್ತಿಕ್ಕುವ ಸನ್ನಿವೇಶ ಯಾರಿಗೂ ಬರಬಾರದು. ನೂತನ ಕೋಚ್ ರಾಹುಲ್ ದ್ರಾವಿಡ್ ದುರದೃಷ್ಟವೋ, ಭಾರತೀಯ ಕ್ರಿಕೆಟ್​ನ ಗ್ರಹಚಾರವೋ ದಕ್ಷಿಣ ಆಫ್ರಿಕಾ ಪ್ರವಾಸದಂತಹ ಸಿಂಹಸವಾಲಿಗೆ ಮುನ್ನ ತಮ್ಮ ತಂಡದ ಹುಲಿಗಳನ್ನು ದ್ರಾವಿಡ್ ಪಳಗಿಸುವಂತಾಗಿದೆ.

ಹಿಂದೆಲ್ಲ ಮಹತ್ವದ ಪ್ರವಾಸಕ್ಕೆ ಮುನ್ನ ಕನಿಷ್ಠ ಹದಿನೈದು ದಿನಗಳ ತಯಾರಿ ಶಿಬಿರ ನಡೆಯುತ್ತಿತ್ತು. ಆ ಸಂದರ್ಭದಲ್ಲಿ ತಂಡದ ವಿಶ್ವಾಸವರ್ಧನೆ ಆಗುತ್ತಿತ್ತು. ಆಟಗಾರರ ನಡುವೆ ಬಾಂಧವ್ಯ ಬೆಳೆಯುತ್ತಿತ್ತು. ಆದರೆ, ಕರೊನಾ ಕಾಲಿಟ್ಟ ಬಳಿಕ ಆಟಗಾರರ ನಡುವೆಯೇ ಬಯೋಬಬಲ್ ಗೋಡೆ ಎದ್ದುನಿಂತಿದೆ. ಭಾರತ ತಂಡ ಮಹತ್ವದ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ವಿಮಾನ ಹತ್ತುವವರೆಗೂ ಆತ್ಮವಿಶ್ವಾಸದ ಏಳು ಹೆಜ್ಜೆಗಳನ್ನು ಜತೆಯಲ್ಲಿ ಹಾಕುವುದು ಸಾಧ್ಯವಾಗಿಲ್ಲ. ಪೂರ್ವ ಸಿದ್ಧತೆ ಇಲ್ಲದೆ, ತಂಡಸ್ಪೂರ್ತಿ ಇಲ್ಲದೆ ಅಫ್ಘಾನಿಸ್ತಾನ ತಂಡವನ್ನೂ ಸೋಲಿಸುವುದು ಸಾಧ್ಯವಿಲ್ಲ. ಹಾಗಿರುವಾಗ ದಕ್ಷಿಣ ಆಫ್ರಿಕಾದಂಥ ಸಿಂಹದ ಗುಹೆ ಪ್ರವೇಶಿಸುವ ಮುನ್ನ ಭಾರತದ ಸಿದ್ಧತೆ ಹೇಗಿರಬೇಕಿತ್ತು? ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಮನೆಯೊಳಗಿನ ಅವಾಂತರವೇ ದೊಡ್ಡದಾಗಿ, ಎದುರಾಳಿಗಳ ಬಗ್ಗೆ ಯೋಚಿಸುವುದಕ್ಕೂ ವ್ಯವಧಾನ ಇಲ್ಲವಾಗಿದೆ.

ಭಾರತ ತಂಡವನ್ನು ಪ್ರತಿನಿಧಿಸುವುದು ಹೆಮ್ಮೆ. ಭಾರತ ತಂಡದ ಪರ ಆಡುವುದು ದೊಡ್ಡ ಗೌರವ ಎಂದೆಲ್ಲ ಕ್ಯಾಮೆರಾಗಳ ಮುಂದೆ, ಯೂಟ್ಯೂಬ್, ಇನ್​ಸ್ಟಾಗ್ರಾಂ ವಿಡಿಯೋಗಳಲ್ಲಿ ಹೇಳಿಕೊಳ್ಳುವ ಆಟಗಾರರು ಒಂದು

ನಾಯಕತ್ವ ಪಡೆದುಕೊಳ್ಳಲು, ಬಿಟ್ಟುಕೊಡಲು, ಉಳಿಸಿಕೊಳ್ಳಲು ಇಷ್ಟೆಲ್ಲ ರಣರಂಪ ಮಾಡುವ ಅಗತ್ಯ ಇದೆಯೇ? ಈ ಜಗತ್ತಿನಲ್ಲೆ ಯಾರೂ ಶಾಶ್ವತರಲ್ಲ. ಯಾವ ಅಪಘಾತ, ಯಾವ ಅನಾಹುತ, ಯಾವ ದುರಂತ ಯಾರನ್ನು ಬಲಿ ಪಡೆಯುವುದೋ ಯಾರಿಗೂ ಗೊತ್ತಿಲ್ಲ. ಹಾಗಿರುವಾಗ ನಾವು ಮಾತ್ರ ಶಾಶ್ವತ ಎಂಬ ಭ್ರಮೆ ಬೇಕೇ?

ಟೆಸ್ಟ್ ಕ್ರಿಕೆಟ್​ನಲ್ಲಿ 99.94 ಸರಾಸರಿ ಹೊಂದಿರುವ ಡಾನ್ ಬ್ರಾಡ್ಮನ್​ಗಿಂತ ಶ್ರೇಷ್ಠ ಕ್ರಿಕೆಟಿಗ ಮುಂದೆ ಬರಲಾರ ಎಂಬ ಭಾವನೆ ಇತ್ತು. ಅದೇ ರೀತಿ ಒಬ್ಬೊಬ್ಬ ಹ್ಯಾಡ್ಲಿ, ಸೋಬರ್ಸ್, ರಿಚರ್ಡ್ಸ್, ಗಾವಸ್ಕರ್, ಲಾರಾ, ತೆಂಡುಲ್ಕರ್ ಅವತರಿಸಿದಾಗಲೂ ಇವರೇ ಸರ್ವಶ್ರೇಷ್ಠ ಎಂಬ ಪ್ರಶಂಸೆ ಸಕಾಲಿಕವಾಗಿತ್ತು. ಆದರೆ, ಶ್ರೇಷ್ಠತೆ ಎನ್ನುವುದು ಒಬ್ಬ ವ್ಯಕ್ತಿಯೊಂದಿಗೆ ನಿಂತು ಹೋಗುವುದಿಲ್ಲ. ತೆಂಡುಲ್ಕರ್ ನೂರು ಶತಕ ಹೊಡೆದಾಗ ಈ ದಾಖಲೆ ಚಿರಂಜೀವಿ ಅನ್ನಿಸಿತ್ತು. ಆದರೆ, ವಿರಾಟ್ ಕೊಹ್ಲಿ ಅತ್ಯಂತ ಕಡಿಮೆ ಅವಧಿ, ವಯಸ್ಸಿನಲ್ಲಿ 70 ಶತಕ ಬಾರಿಸಿದಾಗ ನೂರು ನೂರು ಕೊಹ್ಲಿಯಿಂದಲೂ ಸಾಧ್ಯ ಎಂಬ ಆಸೆ ಚಿಗುರಿಸಿತು. ಮುಂದೆ ಕೊಹ್ಲಿಯನ್ನೂ ಮೀರಿಸುವ ಇನ್ನೂ ನೂರು ಆಟಗಾರರು ಬಂದೇ ಬರುತ್ತಾರೆ. ಅದು ಕಾಲದ ಮಹಿಮೆ.

‘ಏಕದಿನ ಮತ್ತು ಟಿ20 ತಂಡಕ್ಕೆ ಒಬ್ಬನೇ ನಾಯಕನನ್ನು ನೇಮಿಸುವ ಬಗ್ಗೆ ಮುಂಚಿತವಾಗಿ ಖುದ್ದಾಗಿ ಕೊಹ್ಲಿ ಜತೆ ಮಾತನಾಡಿದ್ದೇನೆ. ಟಿ20 ನಾಯಕತ್ವವನ್ನೂ ಬಿಡಬೇಡಿ ಎಂದು ಮನವಿ ಮಾಡಿದ್ದೆ’ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿಕೆ ನೀಡಿದ್ದರು. ಗಂಗೂಲಿ ಹೇಳಿದ್ದು ನಿಜವೋ ಸುಳ್ಳೋ ಎಂಬುದು ಅವರಿಬ್ಬರಿಗೆ ಮಾತ್ರ ತಿಳಿದಿದ್ದ ಸತ್ಯ. ಅದನ್ನು ಅವರಿಬ್ಬರೇ ಕುಳಿತು ಬಗೆಹರಿಸಿಕೊಳ್ಳಬಹುದಿತ್ತು. ಅದರ ಬದಲು ಸಾರ್ವಜನಿಕವಾಗಿ ಬಿಸಿಸಿಐ ಅಧ್ಯಕ್ಷ ಸುಳ್ಳು ಹೇಳಿದರು ಎಂದು ನಿರೂಪಿಸುವುದರಿಂದ ಏನು ಸಾಧಿಸಿದಂತಾಯಿತು? ಭಾರತೀಯ ಕ್ರಿಕೆಟ್​ಗೆ ಯಾವ ರೀತಿಯಲ್ಲಾದರೂ ಒಳಿತಾದೀತೇ? ಮನೆಜಗಳ ಬೀದಿಗೆ ಬಂದಿದ್ದು, ಅದೇ ಮನಸ್ಥಿತಿಯಲ್ಲಿ ದಕ್ಷಿಣ ಆಫ್ರಿಕಾಕ್ಕೆ ತೆರಳಿ ದಿಟ್ಟವಾಗಿ ಆಡುವುದು ಸಾಧ್ಯವೇ?

ಕಳೆದ ಮೂವತ್ತು ವರ್ಷಗಳಲ್ಲಿ ಹಲವು ಬಾರಿ ಆಫ್ರಿಕಾ ಪ್ರವಾಸ ಮಾಡಿ ಇಪ್ಪತ್ತು ಟೆಸ್ಟ್ ಆಡಿರುವ ಭಾರತ ಅಲ್ಲಿ ಗೆದ್ದಿರುವುದು ಕೇವಲ ಮೂರು ಟೆಸ್ಟ್ ಮಾತ್ರ. ಸರಣಿ ಗೆದ್ದೇ ಇಲ್ಲ. ಹೀಗಿರುವಾಗ ಈ ಬಾರಿ ಹೊಸ ಕೋಚ್ ದ್ರಾವಿಡ್ ಜೊತೆ ಹೊಸ ಉತ್ಸಾಹದಿಂದ ಐತಿಹಾಸಿಕ ಸರಣಿ ಗೆಲ್ಲುವತ್ತ ತಂಡದ ಗಮನ ಇರಬೇಕಿತ್ತು. ಆದರೆ, ತಂಡದೊಳಗೆ ನಾಯಕನ ವಿಶ್ವಾಸಿಕರು ಯಾರು ಎಂಬುದೇ ಪ್ರಶ್ನಾರ್ಹ. ಸದ್ಯ ಕೊಹ್ಲಿಯ ಆಪ್ತರು ಮೊಹಮ್ಮದ್ ಸಿರಾಜ್ ಮತ್ತು ಕೆ.ಎಲ್. ರಾಹುಲ್ ಮಾತ್ರ. ಸಚಿನ್, ಲಕ್ಷ್ಮಣ್, ದ್ರಾವಿಡ್ ನಿವೃತ್ತಿ ಬಳಿಕ ಮಧ್ಯಮ ಕ್ರಮಾಂಕದಲ್ಲಿ ಬೆನ್ನೆಲುಬು ಎನಿಸಿದ್ದ ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯ ರಹಾನೆ ನಾಯಕನ ವಿಶ್ವಾಸ ಕಳೆದುಕೊಂಡು, ಫಾಮ್ರ್ ಕಳೆದುಕೊಂಡು, ತಂಡದಲ್ಲಿ ಸ್ಥಾನವನ್ನೂ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಕುಂಬ್ಳೆ ನಂತರದ ಅತ್ಯಂತ ಯಶಸ್ವಿ ಸ್ಪಿನ್ನರ್ ಅಶ್ವಿನ್ ಜತೆಗೂ ಕೊಹ್ಲಿ ಸಂಬಂಧ ಹಳಸಿದೆ. ಗ್ರೆಗ್ ಚಾಪೆಲ್ ಜತೆ ಕಿತ್ತಾಟದಿಂದ ಗಂಗೂಲಿ ನಾಯಕತ್ವ ಕಳೆದುಕೊಂಡಿದ್ದಾಗ ಸೆಹ್ವಾಗ್, ಯುವರಾಜ್, ಹರ್ಭಜನ್, ಜಹೀರ್ ಹೀಗೆ ಅನೇಕರು ತಮ್ಮ ನೆಚ್ಚಿನ ನಾಯಕನ ಪರ ಹೇಳಿಕೆ ನೀಡಿದ್ದರು. ಸದ್ಯ ಕೊಹ್ಲಿ ಏಕದಿನ ನಾಯಕತ್ವ ಕಳೆದುಕೊಂಡ ಸಂದರ್ಭದಲ್ಲಿ ಒಬ್ಬನೇ ಒಬ್ಬ ಆಟಗಾರ ಅವರ ಪರ ಧ್ವನಿ ಎತ್ತಿಲ್ಲ. ಅಂದರೆ, ಕೊಹ್ಲಿ ಆತ್ಮಾವಲೋಕನ ಮಾಡಿಕೊಳ್ಳಬೇಕಲ್ಲವೇ?

ಕೊಹ್ಲಿ ಶ್ರೇಷ್ಠ ಆಟಗಾರ. ದೈವದತ್ತ ಪ್ರತಿಭೆ. ಅವರ ಆಕ್ರಮಣಶೀಲತೆ, ದಾಖಲೆಗಳನ್ನು ಮುರಿದು ಮುನ್ನುಗ್ಗುವ ನಾಗಾಲೋಟ ಎಲ್ಲವೂ ಸ್ತುತ್ಯರ್ಹ. ಇನ್ನಷ್ಟು ವರ್ಷ ಅವರು ಭಾರತೀಯ ಕ್ರಿಕೆಟ್​ನ ಧ್ವಜಧಾರಿ ಆಗಲಿ ಎಂದು ಎಲ್ಲರೂ ಬಯಸುತ್ತಾರೆ. ಆದರೆ, ಆ ಹಾದಿಯಲ್ಲಿ ಒಂಟಿ ಸಲಗವಾಗದೆ, ಸಚಿನ್ ತೆಂಡುಲ್ಕರ್​ರಂತೆ ಸಹ ಆಟಗಾರರ ಪ್ರೀತಿ, ಗೌರವ ಸಂಪಾದಿಸುವ ದಿಕ್ಕಿನಲ್ಲೂ ಹೆಜ್ಜೆ ಇಡಬೇಕಿದೆ.

ಗಂಗೂಲಿ ನಾಯಕರಾಗಿದ್ದ ಅವಧಿಯುದ್ದಕ್ಕೂ ದ್ರಾವಿಡ್ ಉಪನಾಯಕರಾಗಿದ್ದರು. ಅವರಿಬ್ಬರ ನಡುವೆ ಪರಸ್ಪರ ವಿಶ್ವಾಸ ಇತ್ತೇ ಹೊರತು ಅಸೂಯೆ, ಪೈಪೋಟಿ ಇರಲಿಲ್ಲ. ಗಂಗೂಲಿ ನಾಯಕತ್ವ ಕಳೆದುಕೊಂಡು ದ್ರಾವಿಡ್ ಪೂರ್ಣ ಪ್ರಮಾಣದ ನಾಯಕರಾದ ಮೇಲೂ ಅವರಿಗೆ ಚಾಪೆಲ್ ಬಗ್ಗೆ ಸಿಟ್ಟಿತ್ತೇ ಹೊರತು ದ್ರಾವಿಡ್ ಬಗ್ಗೆ ಬೇಸರ ಇರಲಿಲ್ಲ. ಸದ್ಯ ಭಾರತೀಯ ಕ್ರಿಕೆಟ್​ನ ಪ್ರಮುಖ ಹುದ್ದೆಗಳಲ್ಲಿ ಗಂಗೂಲಿ, ದ್ರಾವಿಡ್, ಲಕ್ಷ್ಮಣ್ ಮೊದಲಾದವರು ಒಟ್ಟಾಗಿರುವುದಕ್ಕೆ ಅವರ ನಡುವಿನ ಪರಸ್ಪರ ವಿಶ್ವಾಸ, ಗೌರವ, ಅನುಬಂಧವೇ ಕಾರಣ. ಎಂತಹ ಸನ್ನಿವೇಶದಲ್ಲೂ ಅವರು ಒಬ್ಬರನ್ನೊಬ್ಬರು ಬಿಟ್ಟುಕೊಡುವುದಿಲ್ಲ. ಇಂತಹ ಸ್ನೇಹ-ಸಂಬಂಧಗಳು ಮಾದರಿ ಆಗಬೇಕು.

ಅಭಿಮಾನಿಗಳು ಕೂಡ ಕಲಿಯುವುದಿದೆ. ಸಚಿನ್ ನೂರು ಶತಕ ಹೊಡೆದಿದ್ದಾರೆ, ದ್ರಾವಿಡ್, ಗಂಗೂಲಿ, ಲಕ್ಷ್ಮಣ್ ಹೊಡೆದಿಲ್ಲ ಎಂದು ಆ ಕಾಲದಲ್ಲಿ ಯಾರೂ ಹೋಲಿಕೆ ಮಾಡುತ್ತಿರಲಿಲ್ಲ. ಆದರೆ, ಈಗ ಹಾಗಿಲ್ಲ. ರೋಹಿತ್ ಮೂರು ಏಕದಿನ ದ್ವಿಶತಕ ಬಾರಿಸಿದ್ದಾರೆ ಕೊಹ್ಲಿ ಬಾರಿಸಿಲ್ಲ. ಕೊಹ್ಲಿ ದಶಕದ ಐಸಿಸಿ ಆಟಗಾರ ಎನಿಸಿದ್ದಾರೆ. ರೋಹಿತ್ ಆಗಿಲ್ಲ... ಇತ್ಯಾದಿ ಒಂದೇ ತಂಡದ ಆಟಗಾರರಲ್ಲೇ ಒಬ್ಬರನ್ನು ತೆಗಳಿ ಇನ್ನೊಬ್ಬರನ್ನು ಅಟ್ಟಕ್ಕೇರಿಸುವ ಅಭಿಮಾನಿಗಳ ವರ್ತನೆ ಅನವಶ್ಯಕ ಗೊಂದಲ, ಗಾಸಿಪ್, ಮನಸ್ತಾಪಗಳಿಗೆ ಕಾರಣವಾಗುತ್ತಿವೆ. ಕ್ರಿಕೆಟ್ ಒಂದು ಸಾಂಘಿಕ ಆಟ. ಕೊಹ್ಲಿ ಶತಕ ಬಾರಿಸಿದಾಗ ಅವರ ನೂರು ರನ್​ಗಳಿಗೆ ಇನ್ನೊಂದು ತುದಿಯಲ್ಲಿರುವ ನಾನ್ ಸ್ಟ್ರೆ ೖಕರ್ ಆಟಗಾರರೂ ಓಡಿರುತ್ತಾರೆ ಎನ್ನುವುದನ್ನು ಅಭಿಮಾನಿಗಳು ಮರೆಯಬಾರದು.

ಏಕದಿನ ನಾಯಕತ್ವ ಬದಲಾವಣೆ ವಿಚಾರ ಟೆಸ್ಟ್ ತಂಡದ ಆಯ್ಕೆ ಸಭೆಗಿಂತ ಒಂದೂವರೆ ಗಂಟೆ ಮುನ್ನವಷ್ಟೇ ತಮಗೆ ತಿಳಿಯಿತು ಎಂದು ಕೊಹ್ಲಿ ಹೇಳಿದ್ದಾರೆ. ಅದರಲ್ಲಿ ಬೇಸರ ಪಡುವಂಥದ್ದೇನಿದೆ? ಆಯ್ಕೆಗಾರರು ಮತ್ತು ಮಂಡಳಿ ಅದೇ ದಿನ ಅಂತಿಮ ನಿರ್ಧಾರ ತೆಗೆದುಕೊಂಡು ಕೊಹ್ಲಿಗೆ ಹೇಳಿರಬಹುದು. ಒಂದು ವೇಳೆ ಕೊಹ್ಲಿಗೆ ವಿಷಯವನ್ನೇ ತಿಳಿಸದೆ ಏಕಾಏಕಿ ಘೊಷಣೆ ಮಾಡಿದ್ದರೆ, ಮಾಧ್ಯಮಗಳು ಹಾಗೂ ಟಿವಿ ಬ್ರೇಕಿಂಗ್ ಮೂಲಕ ಕೊಹ್ಲಿಗೆ ವಿಚಾರ ತಿಳಿದಿದ್ದರೆ ಅದು ಅಪಚಾರ ಆಗುತ್ತಿತ್ತು. 1997ರಲ್ಲಿ ಶ್ರೀಲಂಕಾ ವಿರುದ್ಧದ ಡ್ರಾ ಸರಣಿ ಬಳಿಕ ಬಿಸಿಸಿಐ ಸಚಿನ್ ತೆಂಡುಲ್ಕರ್​ರನ್ನು ನಾಯಕತ್ವದಿಂದ ಕಿತ್ತೊಗೆದಿತ್ತು. ಈ ವಿಚಾರ ಮಾಧ್ಯಮಗಳ ಮೂಲಕ ಸಚಿನ್​ಗೆ ಗೊತ್ತಾಗಿತ್ತೇ ಹೊರತು ಬಿಸಿಸಿಐ ಖುದ್ದು ಹೇಳಿರಲಿಲ್ಲ. ಆದರೆ, ಸಚಿನ್ ಈ ವಿಚಾರವನ್ನು ತಮ್ಮ ಆತ್ಮಕಥೆಯಲ್ಲಿ ಉಲ್ಲೇಖಿಸುವವರೆಗೂ ಯಾರಿಗೂ ತಿಳಿದಿರಲಿಲ್ಲ. ವಿವಾದವೂ ಆಗಿರಲಿಲ್ಲ. ಈ ಕಾಲದಲ್ಲಿ ವಿಮಾನ ಹತ್ತಿ ಇಳಿಯುವ ಒಳಗೆ ಮುಖ್ಯಮಂತ್ರಿಗಳೇ ಬದಲಾಗುತ್ತಾರೆ. ಮಂತ್ರಿಗಳು ಸ್ಥಾನ ಕಳೆದುಕೊಂಡಿದ್ದು ಟ್ವಿಟರ್ ಅಪ್​ಡೇಟ್ ಮೂಲಕ ಗೊತ್ತಾಗುತ್ತದೆ. ಕೊಹ್ಲಿ ವಿಚಾರದಲ್ಲಿ ಹಾಗಾಗಿಲ್ಲ. ಹಾಗೆ ನೋಡಿದರೆ, ಬಿಸಿಸಿಐ ಒಂದು ದಿನ ತಡವಾಗಿಯಾದರೂ ಕೊಹ್ಲಿ ಏಕದಿನ ನಾಯಕತ್ವ ಕೊಂಡಾಡಿ ಥ್ಯಾಂಕ್ಸ್ ಹೇಳಿತು. ಆದರೆ, ಕೊಹ್ಲಿ ತಮಗೆ ನಾಲ್ಕು ವರ್ಷಕಾಲ ಏಕದಿನ ನಾಯಕತ್ವದ ಅವಕಾಶ ಕೊಟ್ಟಿದ್ದಕ್ಕೆ ಸುದ್ದಿಗೋಷ್ಠಿಯಲ್ಲೂ ಬಿಸಿಸಿಐಗೊಂದು ಥ್ಯಾಂಕ್ಸ್ ಹೇಳಲಿಲ್ಲ. ಅಂದರೆ, ತಪ್ಪುಗಳು ಎಲ್ಲರಿಂದಲೂ ಆಗಿದೆಯಲ್ಲವೇ...

ದುರ್ಯೋಧನನ ಅಪನಂಬಿಕೆಗೆ ಮದ್ದಿಲ್ಲ. ಹಾಗೆಂದು, ನಾಯಕತ್ವ ಕಾರಣಕ್ಕೆ ಭಾರತೀಯ ಕ್ರಿಕೆಟ್​ನಲ್ಲಿ ಕುರುಕ್ಷೇತ್ರ ಕದನ ನಡೆಯುವುದು ಬೇಡ. ಎಲ್ಲರೂ ಅವರವರ ಪಾತ್ರವನ್ನು, ಕರ್ತವ್ಯವನ್ನು ಅರಿತು ಪಾಲಿಸಿದರೆ ಸುಖ ಎಂಬ ಕೃಷ್ಣವಾಣಿ ಎಲ್ಲರಿಗೂ ಶ್ರೇಯಸ್ಕರ. ಕ್ರಿಕೆಟ್​ಗೂ, ಬದುಕಿಗೂ...

(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net