

ಅದೊಮ್ಮೆ ಉಜ್ಜೈನಿಯ ಭೋಜರಾಜನ ಆಸ್ಥಾನಕ್ಕೆ ಅನಾಮಿಕನೊಬ್ಬ ಬಂದು ತನ್ನ ಪ್ರಶ್ನೆ ನಿವೇದಿಸಿಕೊಂಡ- ‘ಯಾವ ಬಾವಿಗೆ ಬಿದ್ದರೆ ಅಲ್ಲಿಂದ ಮೇಲೇಳಲಾಗದು?’ ಎಂಬ ಪ್ರಶ್ನೆಗೆ ಆಸ್ಥಾನ ಪಂಡಿತರಿಂದ ಉತ್ತರ ಬಯಸಿದ. ಈ ಪ್ರಶ್ನೆಗೆ ಉತ್ತರಿಸಲು ಅಲ್ಲಿದ್ದ ನವರತ್ನ ಪಂಡಿತರೂ ವಿಫಲರಾದರು. ಆಗ ರಾಜ ಅಲ್ಲಿದ್ದ ಮೇಧಾವಿ ಪಂಡಿತನಿಗೆ- ‘ಇದು ಆಸ್ಥಾನದ ಪ್ರತಿಷ್ಠೆಯ ಪ್ರಶ್ನೆ. ಒಂದು ವಾರದ ಗಡುವು ಕೊಡುತ್ತೇನೆ. ಈ ಪ್ರಶ್ನೆಗೆ ನೀನು ಉತ್ತರ ಕೊಡಲೇ ಬೇಕು. ಇಲ್ಲವಾದಲ್ಲಿ ಗಡಿಪಾರು ಮಾಡುತ್ತೇನೆ’ ಎಂದು ಎಚ್ಚರಿಸಿದ. ಚಿಂತಾಕ್ರಾಂತನಾದ ಪಂಡಿತ ಪರಿಹಾರದ ಆಲೋಚನೆಯಲ್ಲಿ ಮುಳುಗಿದನಾದರೂ ಉತ್ತರ ಹೊಳೆಯಲಿಲ್ಲ. ಗಡುವಿನ ಕೊನೆಯ ದಿನ ವಿಹಾರಕ್ಕೆಂದು ಹೊರಟ ಪಂಡಿತನನ್ನು ಕುರಿಗಾಹಿಯೊಬ್ಬ ಆತನ ಚಿಂತೆಗೆ ಕಾರಣ ಕೇಳಿ, ಈ ಪ್ರಶ್ನೆಗೆ ತನ್ನ ಬಳಿ ಉತ್ತರವಿದೆ ಎಂದ. ‘ಏನದು’ ಎಂದಾಗ ‘ನನ್ನ ಬಳಿ ಮಾಯಾಪಾತ್ರೆಯಿದೆ. ಒಂದೊಮ್ಮೆ ರಾಜ ನಿಮ್ಮಲ್ಲಿರುವ ಸಂಪತ್ತನ್ನು ಹಿಂಪಡೆದು ಗಡಿಪಾರು ಮಾಡಿದರೂ ಈ ಮಾಯಾಪಾತ್ರೆ ಮೂಲಕ ಬೇಕಾದಷ್ಟು ಬಂಗಾರ ಮಾಡಿಕೊಳ್ಳಬಹುದು. ನಿಮಗೆ ಅದನ್ನು ಕೊಡುತ್ತೇನೆ. ವಾರದ ಬಳಿಕ ಹಿಂದಿರುಗಿಸಿ’ ಎಂದ. ಉತ್ಸುಕನಾದ ಪಂಡಿತ ಆ ಮಾಯಾಪಾತ್ರೆಯನ್ನು ಬಯಸಿದ. ಕುರಿಗಾಹಿ ಆದಕ್ಕಾಗಿ, ‘ನೀವು ನನ್ನ ಶಿಷ್ಯರಾಗಬೇಕು’ ಎಂದ. ‘ನೀನು ಶತದಡ್ಡ. ನಾನು ನಿನ್ನ ಶಿಷ್ಯನಾಗುವುದೇ, ಸಾಧ್ಯವೇ ಇಲ್ಲ’ ಎಂದ ಪಂಡಿತ. ‘ಹಾಗಾದರೆ ನೀವಿನ್ನು ಹೊರಡಿ ಎಂದ’ ಕುರಿಗಾಹಿ. ಮನಸ್ಸು ಬದಲಿಸಿದ ಪಂಡಿತ ಶಿಷ್ಯನಾಗಲು ಒಪ್ಪಿದ. ಆದರೆ ಒಮ್ಮೆ ತಿರಸ್ಕರಿಸಿದವರಿಗೆ ಆ ಅವಕಾಶ ಇಲ್ಲ. ಹೊಸ ಷರತ್ತಿನೊಂದಿಗೆ ‘ನೀವು ಕುರಿಯ ಹಾಲು ಕುಡಿದರೆ ಆ ಮಾಯಾಪಾತ್ರೆ ಕೊಡುವೆ’ ಎಂದ. ‘ನಾನು ಸಾಯುತ್ತೇನೆಯೇ ಹೊರತು ಕುರಿಯ ಹಾಲು ಕುಡಿಯಲಾರೆ’ ಎಂದಾಗ, ‘ಸರಿ ಬೇಡ ಬಿಡಿ’ ಎಂದ ಕುರಿಗಾಹಿ. ಮನಸ್ಸು ಬದಲಿಸಿ ಕುರಿಹಾಲು ಕುಡಿಯುವೆನೆಂದ ಪಂಡಿತ. ಆ ಅವಕಾಶ ಈಗಿಲ್ಲ. ಕುರಿಯ ಹಾಲನ್ನು ನಾಯಿ ತಿನ್ನುವ ಮಡಕೆಯಲ್ಲಿ ಕುಡಿಯಬೇಕೆಂಬ ಹೊಸ ಷರತ್ತು. ಇದು ಸಾಧ್ಯವೇ ಇಲ್ಲ ಎಂದು ಪಂಡಿತ ಮುನ್ನಡೆದ. ಆದರೆ ಮಾಯಾಪಾತ್ರೆ ಅವನನ್ನು ಬಿಡಲಿಲ್ಲ. ಆತನ ಹೊಸ ಷರತ್ತುಗಳು ಮತ್ತಷ್ಟು ಕಠಿವಾಗುವ ಮೊದಲು ಇದನ್ನು ಒಪು್ಪವುದು ಉತ್ತಮ ಎಂದು ಭಾವಿಸಿ, ‘ಆ ಮಡಕೆಯಲ್ಲಿ ಹಾಕಿ ಕೊಟ್ಟ ಹಾಲು ಕುಡಿದು ನಿನ್ನ ಶಿಷ್ಯನಾಗುತ್ತೇನೆ’ ಎಂದ. ‘ನೀವು ನನ್ನ ಶಿಷ್ಯನಾಗುವ ಮಾತಿರಲಿ, ನಿಮಗೆ ರಾಜ ಬಯಸಿದ ಪ್ರಶ್ನೆಯ ಉತ್ತರ ಇನ್ನೂ ಹೊಳೆಯಲಿಲ್ಲವೇ? ಒಮ್ಮೆ ಬಿದ್ದರೆ, ಮೇಲೇಳಲಾಗದ ಬಾವಿ ಎಂದರೆ ಇದೇ. ಯಾವಾಗ ಆ ಮಾಯಾಪಾತ್ರೆ ಪಡೆಯುವ ಆಸೆಯಲ್ಲಿ ಬಿದ್ದಿರೋ ಅದನ್ನು ಪಡೆಯುವ ಧಾವಂತದಲ್ಲಿ ಹೊಸ ಷರತ್ತುಗಳನ್ನು ಸ್ವೀಕರಿಸುತ್ತಲೇ ಅಲ್ಲೇ ಒದ್ದಾಡುತ್ತಿದ್ದೀರಿ. ಇದೇ ಒಮ್ಮೆ ಬಿದ್ದರೆ ಮೇಲೇಳಲಾಗದ ಬಾವಿ’ ಎಂದ.
ಮಾನವ ಜೀವನದ ಬಂಧನವೂ ಹೀಗೆಯೇ. ಒಮ್ಮೆ ಬಯಸಿದ್ದನ್ನು ಪಡೆಯುವ ಪ್ರಯತ್ನಕ್ಕೆ ಬೀಳುತ್ತೇವೆ. ಸಿಕ್ಕಿದನ್ನು ಸ್ವೀಕರಿಸಿ ತೃಪ್ತಭಾವ ತಳೆಯದೆ ಮತ್ತೆ ಹೊಸದನ್ನು ಪಡೆಯುವ ಪ್ರಯತ್ನದಲ್ಲಿ ಮುಳುಗುತ್ತೇವೆ. ಹೊರಬಾರದ ಸ್ಥಿತಿಯಲ್ಲೇ ಜೀವನ ಮುಗಿಸುತ್ತೇವೆ.
(ಲೇಖಕರು ಅಧ್ಯಾಪಕರು, ಹವ್ಯಾಸಿ ಬರಹಗಾರರು)