

ಮೈಸೂರಿನಲ್ಲಿ ಒಬ್ಬ ಶ್ರಮಜೀವಿಯಿದ್ದ. ಬೆಳಗ್ಗೆಯಿಂದ ಸಂಜೆವರೆಗೆ ದುಡಿಮೆ ಮಾಡಿ ಸಂಜೆ ವೇಳೆ ಸ್ನೇಹಿತರೊಂದಿಗೆ ಮದ್ಯಪಾನ ಮಾಡುವುದನ್ನು ಅಭ್ಯಾಸವನ್ನಾಗಿಸಿಕೊಂಡಿದ್ದ. ಅವನ ತರ್ಕವೆಂದರೆ ಮದ್ಯಕುಡಿದರೆ ಕೆಲಸ ಮಾಡಿದಾಗ ಆಗುವಂಥ ಮೈ-ಕೈ ನೋವುಗಳು ಮಾಯವಾಗುತ್ತವೆ. ಕೆಲಸ ಮಾಡಲು ಉಲ್ಲಾಸ ಬರುತ್ತದೆ ಎಂಬಿತ್ಯಾದಿ ಕಾರಣ ನೀಡುತ್ತಿದ್ದ. ನಾಟಕ, ಸಿನಿಮಾ, ಧಾರಾವಾಹಿಗಳಲ್ಲಿ ಕುಡುಕರ ಪಾತ್ರವನ್ನು ಹಾಸ್ಯದ ಸನ್ನಿವೇಶಗಳಲ್ಲಿ ಹೆಚ್ಚಾಗಿ ಕಾಣುತ್ತೇವೆ. ಅಂತಹ ದೃಶ್ಯಗಳಲ್ಲಿ ಕುಡುಕನನ್ನು ಕಂಡರೆ ಮದ್ಯಪಾನವನ್ನು ದೂರಮಾಡಬೇಕು ಎಂಬಂಥ ರೀತಿಯಲ್ಲಿ ಆತನನ್ನು ತೋರಿಸುತ್ತಾರೆ. ಆದರೆ ಯುವಕರಿಗೆ ಅದೇ ದೃಶ್ಯಗಳು ಮದ್ಯಪಾನಕ್ಕೆ ಉತ್ಸಾಹ ಮತ್ತು ಪ್ರೋತ್ಸಾಹ ಕೊಡುತ್ತವೆ. ಅದು ಅತೀ ಸಾಮಾನ್ಯ ವಿಷಯವೆಂದು ತೋರಿಸುತ್ತಾರೆ. ಈ ಯುವಕನೂ ಅನುಸರಿಸಿದ. ಈ ಕುಡಿತದ ಕಾರಣದಿಂದಾಗಿ ಮನೆಯಲ್ಲಿ, ಹೋದಲ್ಲಿ ಎಲ್ಲ ಕಡೆಗಳಲ್ಲಿ ಜಗಳಗಳು ಉಂಟಾದವು. ಆತನ ಹಾಗೂ ಮನೆಯವರ ನೆಮ್ಮದಿಯೂ ಹಾಳಾಯಿತು.
ಇನ್ನೊಂದು ಸಂದರ್ಭ ಹೇಳುವುದಾದರೆ ಗೋಕಾಕ್ನ ಒಬ್ಬ ವ್ಯಕ್ತಿ 24 ವರ್ಷಗಳಿಂದ ಅಂಚೆಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ. ಆತ ಮೋಜಿಗಾಗಿ ಮದ್ಯಪಾನ ಮಾಡುತ್ತ ಬಳಿಕ ಇಸ್ಪೀಟು, ಮಟ್ಕಾ ಅಭ್ಯಾಸ ಮಾಡಿಕೊಂಡ. ಒಳ್ಳೆಯ ಸಂಬಳವಿದ್ದರೂ ದುಂದುವೆಚ್ಚದ ಕಾರಣಗಳಿಂದ 10 ಲಕ್ಷದಷ್ಟು ಸಾಲ ಮಾಡಿಕೊಂಡ. ಸಾಲಗಾರರ ಒತ್ತಡದಿಂದಾಗಿ ಮತ್ತಷ್ಟು ಮದ್ಯ ಕುಡಿಯತೊಡಗಿದ. ಆತನಿಗೆ ಸಾಲ ನೀಡಿದವರು ಒಂದು ಬಾರಿ ಆತನನ್ನು ತಮ್ಮ ಬಂಧನದಲ್ಲಿ ಇರಿಸಿಕೊಂಡು ಆತನ ಹೆಂಡತಿ-ಮಕ್ಕಳಿಗೆ ಹಣ ಸಂದಾಯ ಮಾಡಲು ಗಡುವು ನೀಡಿದರು. ಇಂತಿಷ್ಟು ದಿನದೊಳಗೆ ಸಾಲ ತೀರಿಸದೇ ಹೋದರೆ ಕೊಂದು ಬಿಡುವುದಾಗಿ ಎಚ್ಚರಿಕೆ ನೀಡಿದರು. ಈ ವಿಷಯವನ್ನು ತಿಳಿದ ಆತನ ಪತ್ನಿ, ಚಿಕ್ಕಪ್ಪ ಮತ್ತು ಇತರ ಸಂಬಂಧಿಕರು ಮದ್ಯಪಾನ ಬಿಡಿಸುವ ಬಗೆಗಿನ ಜಾಹೀರಾತುಗಳನ್ನು ನೋಡಿ ನಾಟಿ ಔಷಧಗಳ ಮೂಲಕ ಮದ್ಯ ಬಿಡಿಸುವ ಪ್ರಯತ್ನಕ್ಕೆ ಮುಂದಾದರು. ಆಗ ರಕ್ತವಾಂತಿಯಾಯಿತು, ದನಿ ಉಡುಗಿ ಹೋಯಿತೇ ಹೊರತು ಆತ ಮದ್ಯಪಾನ ಮಾಡುವುದನ್ನು ಬಿಡಲಿಲ್ಲ. ಅದೇ ವೇಳೆ ಅವರ ಊರಿನಲ್ಲಿ ನಡೆಯುತ್ತಿದ್ದ ಜನಜಾಗೃತಿ ವೇದಿಕೆಯ ಮದ್ಯವರ್ಜನ ಶಿಬಿರಕ್ಕೆ ಆತನನ್ನು ದಾಖಲು ಮಾಡಿದರು.
ಒಬ್ಬ ವ್ಯಕ್ತಿ ಬಂದು ನನಗೆ ಗೌರವ ಸಮರ್ಪಿಸಿ ‘ಹೊಸ ಕಾರು ಖರೀದಿಸಿದ್ದೇನೆ. ವಾಹನದ ಬೀಗದ ಕೀ ಮುಟ್ಟಿ ಆಶೀರ್ವದಿಸಿ’ ಎಂದ. ‘ವಾಹನ ಬಾಡಿಗೆಗೆ ಬಳಸುತ್ತಿಯಾ’ ಎಂದಾಗ ಸಂಕೋಚದಿಂದ ಸ್ವಂತಕ್ಕಾಗಿ ಎಂದ. ಎಂಟು ವರ್ಷಕ್ಕೆ ಹಿಂದೆ ಶಿಬಿರಕ್ಕೆ ಸೇರಿ ದುಶ್ಚಟಮುಕ್ತನಾಗಿ ಇಂದು ಸ್ವಂತ ವಾಹನ ಬಳಸುವಷ್ಟು ಸಂಪಾದಿಸಿದ್ದೇನೆಂದ. ದುಶ್ಚಟ-ಪಾನಮುಕ್ತರಾಗಿ ಹತ್ತು ವರ್ಷವಾದವರು ಹೊಸಮನೆ ನಿರ್ವಿುಸಿಕೊಂಡಿದ್ದಾರೆ. ಪತ್ನಿಗೆ ಚಿನ್ನದ ತಾಳಿ ಅಥವಾ ಆಭರಣ ಮಾಡಿಸಿ ಧನ್ಯರಾಗಿದ್ದಾರೆ. ಕುಟುಂಬ ದುಶ್ಚಟಮುಕ್ತವಾದರೆ ಮಹಿಳೆಯರು ಶಾಪಮುಕ್ತರಾದಂತೆ ನಿರಾಳತೆ ಅನುಭವಿಸುತ್ತಾರೆ. ಮದ್ಯಪಾನ ತ್ಯಜಿಸಿದ ತಂದೆಯೊಬ್ಬ ಮಗನಿಗೆ ಡಿಗ್ರಿ ತನಕ ಓದಿಸಿ ನಗರದಲ್ಲಿ ಉದ್ಯೋಗ ಕೊಡಿಸಿದ್ದಾನೆ. ಮಗಳು ಇಂಜಿನಿಯರಿಂಗ್ ಓದಿ ಉದ್ಯೋಗ ಪಡೆದು, ಮದುವೆಯಾಗಿ ಒಳ್ಳೆಯ ಮನೆ ಸೇರಿದ್ದಾಳೆ. ಅಂದರೆ ಮದ್ಯಪಾನಿಗೆ ಭವಿಷ್ಯದ ಬಗ್ಗೆ ಚಿಂತನೆಯಿಲ್ಲ. ಮದ್ಯ ಚಟದಿಂದ ಮುಕ್ತನಾದವನಿಗೆ ಮನೆ, ಮಕ್ಕಳ ಶಿಕ್ಷಣ, ವಾಹನ ಇತ್ಯಾದಿ ಅವಶ್ಯಕತೆಗಳ ಬಗ್ಗೆ ಅರಿವು ಉಂಟಾಗುತ್ತದೆ. ಸಾಮಾಜಿಕ ಹಾಗೂ ಆರ್ಥಿಕ ಸಬಲೀಕರಣವಾದಾಗ ಸಂಸಾರದಲ್ಲೂ ಉನ್ನತಿಯಾಗುತ್ತದೆ. ಪಂಚಾಯತ್ ಸದಸ್ಯರಾಗಿ, ತಾಲ್ಲೂಕು, ಜಿಲ್ಲಾ ಮಟ್ಟದ ರಾಜಕೀಯ ವ್ಯಕ್ತಿತ್ವವನ್ನೂ ಪಡೆದವರಿದ್ದಾರೆ.
ನವಲಗುಂದ ತಾಲೂಕಿನಲ್ಲಿ ಹದಿಹರೆಯದ ಹುಡುಗನೊಬ್ಬ ಕುಡಿತದ ದಾಸನಾಗಿದ್ದ. ಎಳೆ ವಯಸ್ಸಿನಲ್ಲೇ ತಂದೆಯ ಕಾರಣದಿಂದಲೇ ಕುಡಿಯುವ ಚಾಳಿ ಬೆಳೆಸಿಕೊಂಡಿದ್ದ. ಆತ 10-12 ವರ್ಷದವನಾಗಿದ್ದಾಗ ಆತನ ತಂದೆ ಆತನಿಂದಲೇ ಮದ್ಯವನ್ನು ತರಿಸಿಕೊಂಡು ಕುಡಿಯುತ್ತಿದ್ದ. ಅಪ್ಪ ಅದೇನು ಕುಡಿಯುತ್ತಾನೆ ಎಂದು ಆಸಕ್ತಿ ಹೊಂದಿ, ಆತ ಕುಡಿದ ಬಳಿಕ ಉಳಿದುದನ್ನು ತಾನು ಕುಡಿದು ರುಚಿ ಹತ್ತಿಸಿಕೊಂಡಿದ್ದ. ಕ್ರಮೇಣ ಇದು ಪರಿಪಾಠವಾಗಿ ಬೆಳೆದು ತಂದೆಯಂತೆಯೇ ಕುಡುಕನಾಗಿದ್ದ. ಆತನೂ ಶಿಬಿರಕ್ಕೆ ಬಂದು ಪರಿವರ್ತನೆಯಾಗಿ ಉತ್ತಮ ಬದುಕು ನಡೆಸುತ್ತಿದ್ದಾನೆ.
ಹತ್ತು ವರ್ಷಗಳ ಹಿಂದೆ ಶಿಬಿರಗಳಲ್ಲಿ ಭಾಗವಹಿಸುವ ಶೇಕಡ 78-80ರಷ್ಟು ಮದ್ಯವ್ಯಸನಿಗಳನ್ನು ಒತ್ತಾಯದಿಂದ ಕರೆದುಕೊಂಡು ಬರುತ್ತಿದ್ದರು. ಹೇಗೆಂದರೆ, ‘ಅಲ್ಲಿ ಕುರಿ ಕೊಳ್ಳಲು ಸಾಲ ನೀಡುತ್ತಾರೆ. ಹೋಗಿ ಇಸ್ಕೊಂಡು ಬರುವ’ ಎಂದು ಪುಸಲಾಯಿಸಿ ಕರೆದುಕೊಂಡು ಬರುತ್ತಿದ್ದರು. ಒಂದಷ್ಟು ಹಣಸಿಕ್ಕರೆ ಇನ್ನಷ್ಟು ದಿನ ಆರಾಮಾಗಿ ಕುಡ್ಕೊಂಡು ಇರಬಹುದೆಂದು ಜನ ಬರುತ್ತಿದ್ದರು. ಅಲ್ಲಿ ಬಂದ ಮೇಲೆಯೇ ಅದು ಮದ್ಯವರ್ಜನ ಶಿಬಿರ ಎಂದು ತಿಳಿಯುತ್ತಿದ್ದುದು. ಹೀಗೆ ಬಂದು ಪರಿವರ್ತನೆಗೊಂಡ ಕೆಲವರು ಲಕ್ಷ ಲಕ್ಷದಷ್ಟು ಸಂಪಾದಿಸಿ ಒಳ್ಳೆಯ ವಹಿವಾಟನ್ನು ನಡೆಸುತ್ತಿದ್ದಾರೆ. ಈಗೀಗ ಹೆಚ್ಚಿನವರು ಸ್ವಯಂಪ್ರೇರಣೆಯಿಂದಲೇ ಶಿಬಿರಕ್ಕೆ ಆಗಮಿಸುತ್ತಾರೆ. ಅದಕ್ಕೆ ಮುಖ್ಯ ಕಾರಣವೆಂದರೆ ಶಿಬಿರದಲ್ಲಿ ಪಾಲ್ಗೊಂಡ ಅನೇಕರು ಇತರರಲ್ಲಿ ತಮ್ಮ ಅನುಭವಗಳನ್ನು ಹೇಳಿ ಮನವೊಲಿಸುತ್ತಾರೆ. ಅವರಲ್ಲಿನ ಭಯವನ್ನು ಹೋಗಲಾಡಿಸಿ ಶಿಬಿರದಲ್ಲಿ ಪಾಲ್ಗೊಳ್ಳುವಂತೆ ಪ್ರೇರಣೆ ನೀಡುತ್ತಾರೆ.
ಗ್ರಾಮದಲ್ಲಿ ಗಣ್ಯರಾಗಿದ್ದ, ಜ್ಯೋತಿಷಿಯಾಗಿದ್ದ ವ್ಯಕ್ತಿಯೋರ್ವರು ಇತ್ತೀಚೆಗೆ ನಡೆದ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಆರಂಭದಲ್ಲಿ ಅವರಿಗೆ ಮುಜುಗರವಾದರೂ ನಾಲ್ಕು ದಿನಗಳಾದಾಗ ಅವರು ತಮ್ಮಲ್ಲಿದ್ದ ದೋಷಗಳನ್ನು ಮುಕ್ತವಾಗಿ ಹಂಚಿಕೊಳ್ಳುವಷ್ಟು ಬದಲಾದರು. ತಮ್ಮ ದೋಷಗಳನ್ನು ಹೇಳಿಕೊಂಡು ಹಗುರವಾದರು ಹಾಗೂ ಇನ್ನು ಮುಂದೆ ವ್ಯಸನ ಮಾಡುವುದಿಲ್ಲವೆಂದರು. ಅವರು ತಮ್ಮ ಜೀವನದಲ್ಲಿ ಅನೇಕರಿಗೆ ಜ್ಯೋತಿಷಿಯಾಗಿ ಮಾರ್ಗದರ್ಶನ ನೀಡಿದ್ದಾರೆ. ಅನೇಕರ ಬದುಕನ್ನು ಸರಿಮಾರ್ಗದಲ್ಲಿ ನಡೆಸಿದ್ದಾರೆ. ಆದರೆ ಅವರಿಗೆ ತಾನು ಯಾರಿಗೂ ಗೊತ್ತಿಲ್ಲದಂತೆ ಮದ್ಯಪಾನ ಮಾಡುತ್ತಿದ್ದ ಬಗ್ಗೆ ತಪ್ಪಿತಸ್ಥ ಭಾವನೆಯಿತ್ತು. ಇದು ಸರಿಯಲ್ಲವೆಂದು ಅನಿಸಿತ್ತು. ಹಾಗಾಗಿ ಸ್ವಪ್ರೇರಣೆಯಿಂದಲೇ ಬಂದು ವ್ಯಸನ ತ್ಯಜಿಸಿದ್ದಾರೆ.
ಹಿಂದೆ ಕುಡಿತದ ಅಭ್ಯಾಸವಿದ್ದು ಪರಿವರ್ತನೆಯಾದವರು ಶಿಬಿರಕ್ಕೆ ಬಂದು ತಮ್ಮ ಹಿಂದಿನ ಜೀವನ ಹಾಗೂ ಶಿಬಿರಕ್ಕೆ ಸೇರಿದ ಮೇಲೆ ಆದ ಪರಿವರ್ತನೆಯನ್ನು ವಿವರಿಸುತ್ತಾರೆ. ಅವರ ಮಾತುಗಳು ‘ಆತ್ಮನಿವೇದನೆ’ಯಾಗಿರುತ್ತಿತ್ತು. ಅದನ್ನು ಕೇಳಿ ತನ್ನ ಬದುಕು ಹೇಗಿದೆ ಮತ್ತು ತಾನು ದುಶ್ಚಟದಿಂದ ಎಷ್ಟು ಕಳೆದುಕೊಂಡಿದ್ದೇನೆಂದು ಪಶ್ಚಾತ್ತಾಪ ಪಟ್ಟುಕೊಂಡವರು, ಪರಿವರ್ತನೆಯಾಗಿ ನವಜೀವನ ಪ್ರಾರಂಭಿಸಿದ್ದಾರೆ.
ನಾನು ಮದ್ಯವರ್ಜನದ ಶಿಬಿರಗಳಲ್ಲಿ ಪ್ರೇರಣೆ ನೀಡಲು ಪಾಲ್ಗೊಳ್ಳುತ್ತೇನೆ. ಆಗ ನನಗೆ ಇಂತಹ ಅನೇಕ ಅನುಭವ ಕಥನಗಳು ಶಿಬಿರಗಳಲ್ಲಿ ಕಾಣಸಿಗುತ್ತವೆ. ನಾನು ಕಂಡಂತೆ ವ್ಯಸನಿಗಳಲ್ಲಿ ಒಂದು ರೀತಿಯ ಸಮಾನತೆ ಕಾಣಬಹುದು. ಅದೇನೆಂದರೆ ಅವರು ಯಾವುದೇ ಜಾತಿ, ಧರ್ಮ, ಹಣ, ಅಂತಸ್ತುವುಳ್ಳವರಾಗಿರಲಿ ಕುಡಿಯುವಾಗ ಅಥವಾ ಗಾಂಜಾ, ಅಫೀಮು ಸೇವಿಸುವಾಗ ಅವರಲ್ಲಿ ಭೇದಭಾವ ಇರುವುದಿಲ್ಲ. ಹಾಗೂ ಅವರಿಗೆ ಕುಡಿತ ಅಥವಾ ಇನ್ನಾವುದೇ ಡ್ರಗ್ಸ್ ಬೇಕೆಂದೆನಿಸಿದಾಗ ಎಂತಹ ಕೀಳುಮಟ್ಟಕ್ಕೆ ಇಳಿಯಲೂ ಸಿದ್ಧರಿರುತ್ತಾರೆ. ವಿದೇಶಗಳಲ್ಲಿ ಮಾದಕ ವ್ಯಸನಿಗಳು ತಮ್ಮ ಖರ್ಚಿಗೆ ಅವಶ್ಯಕತೆ ಇದ್ದಾಗ ಮಾನ ಬಿಟ್ಟು ವರ್ತಿಸುತ್ತಾರೆ. ದಾರಿಹೋಕರ ಬಳಿ ಹಣ ಕೊಡುವಂತೆ ಪೀಡಿಸುತ್ತಾರೆ, ಕೊಡದೇ ಇದ್ದಾಗ ಹಲ್ಲೆ ಹಾಗೂ ಕೊಲೆಯನ್ನೂ ಮಾಡುತ್ತಾರೆ. ನಮ್ಮಲ್ಲೂ ಅಲ್ಲಲ್ಲಿ ಇಂತಹ ಘಟನೆಗಳು ನಡೆಯುತ್ತಿವೆ. ಅವರಿಗೆ ಮಾದಕವಸ್ತು ಬೇಕೆನಿಸಿದಾಗ ಏನು ಬೇಕಾದರೂ ಮಾಡುತ್ತಾರೆ. ಸಿಗದೇ ಇದ್ದಾಗ ಹತಾಶರಾಗುತ್ತಾರೆ, ಸಿಟ್ಟಿಗೇಳುತ್ತಾರೆ. ಈ ಸಂದರ್ಭದಲ್ಲಿ ಅವರಲ್ಲಿ ಮಾನವೀಯ ಗುಣಗಳು ಮರೆಯಾಗಿ ಬಿಡುತ್ತವೆ. ಕುಡಿತದ ಅಥವಾ ಅಮಲು ಪದಾರ್ಥ ಸೇವಿಸಿದಾಗ ತಾನು ಎಲ್ಲಿದ್ದೆ, ಏನೆಲ್ಲ ಮಾಡಿದೆ? ಎಂದು ನೆನಪಿರುವುದಿಲ್ಲ ಅಮಲು ಇಳಿದಾಗ ಸಾಮಾನ್ಯರಂತೆ ಇರುತ್ತಾರೆ. ‘ನೀನು ಕುಡಿದು ರೋಡಲ್ಲಿ ಬಿದ್ದಿದ್ದೆ, ಕೆಟ್ಟದಾಗಿ ಮಾತನಾಡಿದ್ದೆ’ ಎಂದರೆ ‘ಹೌದೇ? ಎಲ್ಲಿ ಏನು?’ ಎಂದೆನ್ನುತ್ತಾರೆ.
ಇಂದು ವ್ಯಸನಗಳ ಕಾರಣದಿಂದಾಗಿ ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ. ಮನೆ ಬೆಳಗಲು ಹಣತೆ ಹೇಗೆ ಕಾರಣವೋ ಹಾಗೇ ಮನೆ ಸುಡಲು ವ್ಯಸನವೆಂಬ ಬೆಂಕಿಕಡ್ಡಿಯೂ ಸಾಕು. ಮನೆಯು ಒಂದು ಕಡೆ ಸುಟ್ಟರೆ ಅದು ನಿಧಾನವಾಗಿ ಎಲ್ಲೆಡೆ ವ್ಯಾಪಿಸಿ ಮನೆ, ಅಕ್ಕ-ಪಕ್ಕದ ಮನೆ ಅಥವಾ ಇಡೀ ಊರನ್ನೇ ಸುಡಬಹುದು. ಹಾಗಾಗಿ ವ್ಯಸನ ಸಣ್ಣದಿರಲಿ, ದೊಡ್ಡದಿರಲಿ, ಸ್ವಲ್ಪ ಇರಲಿ, ಹೆಚ್ಚೇ ಇರಲಿ ಅದು ಯಾವತ್ತೂ ವ್ಯಸನವೇ. ಅಂಥ ವ್ಯಸನಗಳನ್ನು ಸಮಾಜದಿಂದ ದೂರ ಮಾಡಬೇಕು. ಸಮಾಜದಲ್ಲಿರುವ ಎಲ್ಲ ಕುಟುಂಬಗಳು ಉತ್ತಮ ರೀತಿಯಲ್ಲಿ ಗೌರವಯುತ ಬದುಕನ್ನು ನಡೆಸಬೇಕೆಂಬ ಆಶಯ ನಮ್ಮದು. ಈ ಕಾರಣಕ್ಕಾಗಿ ನಿರಂತರವಾಗಿ ಮದ್ಯವರ್ಜನ ಶಿಬಿರಗಳನ್ನು ನಡೆಸುತ್ತಿದ್ದೇವೆ. ಜೊತೆಗೆ ಇತರ ದುಶ್ಚಟಗಳ ಬಗ್ಗೆಯೂ ಜನರಲ್ಲಿ, ಶಾಲಾ-ಕಾಲೇಜಿನ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ.
ಡ್ರಗ್ಸ್ನಿಂದಾಗುವ ಕೆಡುಕುಗಳ ಬಗ್ಗೆ ಕಿರುಚಿತ್ರ ತಯಾರಿಸಿ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ತೋರಿಸಲಾಗುತ್ತದೆ. ‘ಸ್ವಾಸ್ಥ್ಯ ಸಂಕಲ್ಪ’ವೆಂಬ ಹೆಸರಿನ ಈ ಕಾರ್ಯಕ್ರಮದಡಿಯಲ್ಲಿ ತರಬೇತಿ ಪಡೆದ ಅಧ್ಯಾಪಕರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಇಂಥ ದುಶ್ಚಟ, ಕೆಡುಕುಗಳ ಬಗ್ಗೆ ಮಕ್ಕಳ ಮನಮುಟ್ಟುವಂತೆ ವಿವರಿಸುತ್ತಾರೆ. ಈ ಕಾರ್ಯದಲ್ಲಿ ಸರ್ಕಾರ ಹಾಗೂ ಅನೇಕ ಸಂಘ-ಸಂಸ್ಥೆಗಳೂ ತೊಡಗಿಕೊಂಡಿವೆ. ಸರ್ಕಾರ ದೊಡ್ಡ ಮಟ್ಟದಲ್ಲಿ ಶಾಲಾ-ಕಾಲೇಜುಗಳಲ್ಲಿ ಡ್ರಗ್ಸ್ ಮತ್ತಿತರ ದುಶ್ಚಟಗಳ ವಿರುದ್ಧ ಜಾಗೃತಿ ಮೂಡಿಸಬೇಕಾಗಿದೆ. ಸಮಾಜದಿಂದ ದುಶ್ಚಟಗಳು ದೂರವಾದಾಗ ಮಾತ್ರ ನಮ್ಮನಾಡು ಸರ್ವರೀತಿಯಲ್ಲೂ ಸಂಪದ್ಭರಿತವಾಗಲು ಸಾಧ್ಯ.
(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು)