

ದೊಡ್ಡ ದೊಡ್ಡ ಸಾಧಕರೊಂದಿಗೆ ಹೋಲಿಕೆ ಮಾಡಿ ಸಮಯ ವ್ಯರ್ಥ ಮಾಡುವ ಬದಲು, ಸಾಮರ್ಥ್ಯ, ಅನುಭವಕ್ಕೆ ಅನುಗುಣವಾಗಿ ಜೀವನದಲ್ಲಿ ಸಾಧನೆ ಮಾಡಲು ಕನಸು ಕಂಡರೆ ಅದು ಫಲಿಸುತ್ತದೆ. ವ್ಯಾಸಂಗ ಮಾಡಿರುವ, ಹೆಚ್ಚಿನ ಅನುಭವವಿರುವ ಕ್ಷೇತ್ರದಲ್ಲಿ ಹೊಸ ಸಾಧನೆ ಮಾಡುತ್ತೇವೆ ಎಂದರೆ ಅದಕ್ಕೆ ಹೆಚ್ಚಿನ ಮೌಲ್ಯವಿರುತ್ತದೆ.
ಬದಲಾವಣೆ ಎಂಬುದು ಪ್ರಕೃತಿಯ ನಿಯಮ. ಕಾಲ ಬದಲಾದಂತೆ ನಮ್ಮ ಜೀವನದ ಸ್ವರೂಪವೂ ಬದಲಾಗುತ್ತದೆ. ಸೋಲನ್ನು ಯಾವ ರೀತಿ ಪರಿಗಣಿಸುತ್ತೇವೆಯೋ ಅದರ ಮೇಲೆ ನಮ್ಮ ಜೀವನವೂ ನಿಂತಿರುತ್ತದೆ. ಸೋಲನ್ನು ಸವಾಲಾಗಿ ಸ್ವೀಕರಿಸಿದರೆ ಪ್ರತಿಯೊಬ್ಬರ ಜೀವನದಲ್ಲೂ ಯಶಸ್ಸು ಕಟ್ಟಿಟ್ಟ ಬುತ್ತಿ.
ಕಷ್ಟವಿಲ್ಲದೇ ಸಾಧನೆ ಅಸಾಧ್ಯ: ಜೀವನದಲ್ಲಿ ಎಂದಿಗೂ ದೊಡ್ಡ ಗುರಿ ಹೊಂದಿರಬೇಕು. ಸಣ್ಣ ಗುರಿ-ಸಾಧನೆಯಿಂದ ಅಲ್ಪ ಮಟ್ಟದ ಯಶಸ್ಸು ನಿರೀಕ್ಷಿಸಬಹುದು. ಆದರೆ, ದೊಡ್ಡ ಗುರಿಯೊಂದಿಗೆ ಅದಕ್ಕೆ ತಕ್ಕಂತೆ ಶ್ರಮ ಪಟ್ಟರೆ ಸಾಧಕರಾಗಲು ಸಾಧ್ಯ. ಒಬ್ಬ ತಪಸ್ವಿ ತನ್ನ ಗುರಿ ಮುಟ್ಟುವವರೆಗೂ ಏಕಾಗ್ರತೆ, ಶ್ರದ್ಧೆಯಿಂದ ಹೇಗೆ ತಪಸ್ಸು ಮಾಡುತ್ತಾನೋ ಅದೇ ರೀತಿಯಲ್ಲಿ ಸಾಧನೆ ಮಾಡುವ ವ್ಯಕ್ತಿಯೂ ತನ್ನ ಗುರಿಮುಟ್ಟಲು ಕಷ್ಟಪಡಬೇಕಾಗುತ್ತದೆ. ಕಷ್ಟವಿಲ್ಲದೇ ಸುಲಭವಾಗಿ ಸಾಧನೆ ಮಾಡುತ್ತೇನೆ ಎಂದರೆ ಅದು ಅಪಹಾಸ್ಯದ ಮಾತಾಗುತ್ತದೆ. ಸತತವಾಗಿ ಹಲವು ವರ್ಷಗಳು ಕಷ್ಟಪಟ್ಟರೆ ಒಂದು ದಿನ ಅದರ ಫಲ ನಿರೀಕ್ಷಿಸಬಹುದು. ಬಿಲ್ ಗೇಟ್ಸ್, ಸ್ಟೀವ್ ಜಾಬ್ಸ್ ನಂಥವರೂ ಜೀವನದಲ್ಲಿ ಸಾಕಷ್ಟು ವೈಫಲ್ಯಗಳನ್ನು ಕಂಡು ಸೋಲನ್ನು ಸವಾಲಾಗಿ ಸ್ವೀಕರಿಸಿಯೇ ಇಂದು ಜಗತ್ತೇ ತಮ್ಮತ್ತ ನೋಡುವಂಥ ದೈತ್ಯ ಸಂಸ್ಥೆಗಳನ್ನು ನಿರ್ವಿುಸಿ ಸಾಧನೆ ಮಾಡಲು ಸಾಧ್ಯವಾಗಿದೆ. ಸಾಧಕರು ಗುರಿ ಮುಟ್ಟಿರುವುದರ ಹಿಂದೆ ಪಟ್ಟ ಕಷ್ಟಗಳನ್ನೂ ಯುವಕರು ಗಮನಿಸಬೇಕು. ಒಬ್ಬ ವ್ಯಕ್ತಿ ದೊಡ್ಡ ಸಾಧನೆ ಮಾಡಿ ಉನ್ನತ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾನೆ ಎಂದರೆ ಆತ ಜೀವನದಲ್ಲಿ ಪಟ್ಟ ಕಷ್ಟದ ಫಲ ಎಂದರೆ ತಪ್ಪಾಗಲಾರದು.
ಜೀವನದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಸೋಲೆಂಬುದು ಇದ್ದೇ ಇದೆ. ಇದಕ್ಕೆ ಮನಸ್ಸನ್ನು ನೋಯಿಸಿಕೊಂಡು ಕುಗ್ಗಿದರೆ, ಅದು ಇನ್ನಷ್ಟು ದೊಡ್ಡ ಸೋಲಾಗಿ ಪರಿಣಮಿಸುತ್ತದೆ. ಹಳೆಯ ಗಾಯವನ್ನು ಕೆರೆದು ಇನ್ನಷ್ಟು ದೊಡ್ಡ ಗಾಯ ಮಾಡುವ ಬದಲು ಅ ಗಾಯವನ್ನು ಮುಟ್ಟದಿದ್ದರೆ ಉತ್ತಮ. ಇದರ ಅರ್ಥ ನಮ್ಮ ಜೀವನದಲ್ಲಿ ನಡೆದ ಕೆಟ್ಟ ಗಳಿಗೆಯನ್ನು ಮೆಲುಕು ಹಾಕದೇ ಈಗ ನಾವು ಏನು ಮಾಡಬಹುದು ಎಂಬುದನ್ನು ಅರಿತುಕೊಳ್ಳಬೇಕು. ಯುವಪೀಳಿಗೆ ಇಂದು ಮಾಡುವ ಕೆಲಸ, ಶ್ರಮಕ್ಕೆ ಅನುಗುಣವಾಗಿ ಭವಿಷ್ಯವನ್ನು ಕಂಡುಕೊಳ್ಳಬಹುದು.
ಹೋಲಿಕೆ ಮಾಡುವುದು ವ್ಯರ್ಥ: ದೊಡ್ಡ ದೊಡ್ಡ ಸಾಧಕರೊಂದಿಗೆ ಹೋಲಿಕೆ ಮಾಡಿ ಸಮಯ ವ್ಯರ್ಥ ಮಾಡುವ ಬದಲು, ನಮ್ಮ ಸಾಮರ್ಥ್ಯ, ಅನುಭವಕ್ಕೆ ಅನುಗುಣವಾಗಿ ಜೀವನದಲ್ಲಿ ಸಾಧನೆ ಮಾಡಲು ಕನಸು ಕಂಡರೆ ಅದು ಫಲಿಸುತ್ತದೆ. ನಾವು ವ್ಯಾಸಂಗ ಮಾಡಿರುವ, ಹೆಚ್ಚಿನ ಅನುಭವವಿರುವ ಕ್ಷೇತ್ರದಲ್ಲಿ ಹೊಸದಾಗಿ ಯಾವುದೋ ಸಾಧನೆ ಮಾಡುತ್ತೇವೆ ಎಂದರೆ ಅದಕ್ಕೆ ಹೆಚ್ಚಿನ ಮೌಲ್ಯವಿರುತ್ತದೆ. ತಾನು ಅನುಭವ ಹೊಂದಿರುವ ಕ್ಷೇತ್ರ ಬಿಟ್ಟು, ಮನಸ್ಸಿಗೆ ತೋಚಿದ ಇನ್ಯಾವುದೋ ಮಾರ್ಗದಲ್ಲಿ ಹೊಸ ಸಾಧನೆ ಮಾಡುತ್ತೇನೆ ಎಂದರೆ ಅದು ಕಷ್ಟಸಾಧ್ಯ. ಸಜ್ಜನರ ಸಹವಾಸದಿಂದ ಜೀವನದಲ್ಲಿ ಬದಲಾವಣೆ ಕಾಣಬಹುದು. ಏಕೆಂದರೆ, ಸಜ್ಜನರು ಮಾತ್ರ ನಮ್ಮನ್ನು ಸನ್ಮಾರ್ಗದಲ್ಲಿ ತೆಗೆದುಕೊಂಡು ಹೋಗುತ್ತಾರೆ. ಇದರಿಂದ ಕಾಲಕ್ರಮೇಣ ಚಿಂತನೆಗಳ ದಿಕ್ಕೂ ಬದಲಾಗುತ್ತದೆ. ದುರ್ಜನರ ಸಂಗದಿಂದ ಮನಸ್ಸು ಕೆಟ್ಟ ಹಾದಿ ತುಳಿಯುತ್ತದೆ.
ನಾನು ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಐಪಿಎಸ್ ಅಧಿಕಾರಿ ಆಗುತ್ತೇನೆ ಎಂಬುದನ್ನು ಊಹಿಸಿರಲಿಲ್ಲ. ಡಿಗ್ರಿಯಲ್ಲಿ ವ್ಯಾಸಂಗ ಮಾಡುವ ಸಜ್ಜನ ಸಹಪಾಠಿಗಳು ನನಗೆ ಒಳ್ಳೆಯ ಮಾರ್ಗದರ್ಶನ ಮಾಡುತ್ತಿದ್ದರು. ಅವರೇ, ಯುಪಿಎಸ್ ಸಿ ಪರೀಕ್ಷೆಯ ಬಗ್ಗೆ ಮಾಹಿತಿ ನೀಡಿದ್ದರು. ಮೊದಲು ನಾನು ನನ್ನ ಸ್ನೇಹಿತನ ಮಾತು ಕೇಳಿ ಐಪಿಎಸ್ ಗೆ ಪರೀಕ್ಷೆ ಬರೆಯಲು ಮುಂದಾದೆ. ಸ್ನೇಹಿತ 3 ವರ್ಷ ಸತತ ಅಧ್ಯಯನ ಮಾಡಿದ್ದರೆ, ನಾನು ಕೇವಲ 2 ತಿಂಗಳ ಕಾಲ ಇದಕ್ಕೆ ಸಿದ್ಧತೆ ಮಾಡಿಕೊಂಡಿದ್ದೆ. ಹೀಗಾಗಿ ಮೊದಲ ಪ್ರಯತ್ನದಲ್ಲಿ ನಾನು ನಿರೀಕ್ಷಿಸಿದಷ್ಟು ಅಂಕಗಳು ಸಿಗದೆ, ಅನುತ್ತೀರ್ಣ ಹೊಂದಿದೆ. ನಂತರ 1 ವರ್ಷಗಳ ಕಾಲ ನಿರಂತರವಾಗಿ ಅಧ್ಯಯನ ನಡೆಸಿ, ಐಪಿಎಸ್ ಪರೀಕ್ಷೆಗೆ ಬೇಕಾದ ಸಿದ್ಧತೆಗಳನ್ನು ಮಾಡಿ ಇದರಲ್ಲಿ ಯಶಸ್ಸು ಕಂಡಿದ್ದೇನೆ. ಇಂದು ಪೊಲೀಸ್ ಆಯುಕ್ತನಾಗಿ ಸೇವೆ ಸಲ್ಲಿಸುತ್ತಿರುವುದಕ್ಕೆ ಅಂದು ನಾನು ಸಜ್ಜನರ ಸಹವಾಸ ಮಾಡಿರುವುದೂ ಒಂದು ಕಾರಣ.
ಹುಚ್ಚು ಮನಸ್ಸಿಗೆ ಲಗಾಮು ಹಾಕಿ: ಜೀವನದಲ್ಲಿ ಸ್ವಯಂ ನಿಯಂತ್ರಣ ಎಂಬುದು ಪ್ರಮುಖ ಪಾತ್ರ ವಹಿಸುತ್ತದೆ. ನಮ್ಮ ಮನಸ್ಸು ಹುಚ್ಚು ಕುದುರೆಯಿದ್ದಂತೆ. ಅದಕ್ಕೆ ಲಗಾಮು ಹಾಕಿ ನಿಯಂತ್ರಣದಲ್ಲಿ ಇಟ್ಟುಕೊಳ್ಳದಿದ್ದರೆ ಅದು ಸಿಕ್ಕ-ಸಿಕ್ಕಲ್ಲಿ ಓಡುತ್ತದೆ. ಮನಸ್ಸನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಶಿಸ್ತು, ಸಮತೋಲನವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಪ್ರತಿಯೊಬ್ಬರಿಗೂ ದಿನಕ್ಕೆ 24 ಗಂಟೆ ಸಮಯವಿರುತ್ತದೆ. ಆ ಸಮಯವನ್ನು ಹೇಗೆ ಸದ್ಬಳಕೆ ಮಾಡಿಕೊಳ್ಳುತ್ತೇವೆ ಎಂಬುದು ಬಹಳ ಮುಖ್ಯ. ಹೆಚ್ಚಿನ ಸಮಯವನ್ನು ಸಾಧನೆಗೆ ಮೀಸಲಿಟ್ಟರೆ ನಮ್ಮ ಕನಸನ್ನು ಬೇಗ ನನಸು ಮಾಡಿಕೊಳ್ಳಬಹುದು.
ಬೆಳಕು ತೋರಿಸುವವನೇ ನಿಜವಾದ ಗುರು: ಜೀವನದಲ್ಲಿ ಸೋಲನ್ನು ಮೆಟ್ಟಿ ನಿಂತು ಮೇಲೆ ಬರಲು ಆತ್ಮವಿಶ್ವಾಸ ಪ್ರಮುಖ ಪಾತ್ರ ವಹಿಸುತ್ತದೆ. ಮತ್ತೊಬ್ಬರೊಂದಿಗೆ ಹೋಲಿಕೆ ಮಾಡಿಕೊಂಡು ಕೀಳರಿಮೆ ಪಡುವ ಬದಲು ನಮ್ಮನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವವರ ಜತೆಗೆ ಮನಸ್ಸಿನ ದುಗುಡಗಳನ್ನು ಹಂಚಿಕೊಳ್ಳಬೇಕು. ಜೀವನದಲ್ಲಿ ಕತ್ತಲಲ್ಲಿ ಬೆಳಕು ತೋರಿಸುವವನೇ ನಿಜವಾದ ಗುರು. ಜೀವನದ ಎಲ್ಲ ಹಂತದಲ್ಲೂ ಭಯ ಎಂಬುದನ್ನು ಶತ್ರುವಾಗಿಯೇ ಪರಿಗಣಿಸಬೇಕು. ‘ಧೈರ್ಯಂ ಸರ್ವತ್ರ ಸಾಧನಂ’ ಎಂಬಂತೆ ಪ್ರತಿ ಕೆಲಸದಲ್ಲೂ ಶ್ರದ್ಧೆ, ಶ್ರಮದೊಂದಿಗೆ ಧೈರ್ಯವೂ ಇರಬೇಕು. ಎಲ್ಲಿ ಭಯವಿರುವುದಿಲ್ಲವೋ ಅಲ್ಲಿ, ಆತ್ಮವಿಶ್ವಾಸ ಹೆಚ್ಚಾಗಿರುತ್ತದೆ. ಕೆಲಸ ಮಾಡುತ್ತಿರುವ ವಿಷಯದಲ್ಲಿ ಜ್ಞಾನದ ಕೊರತೆ ಇದ್ದರೆ ಅಲ್ಲಿ ಆತ್ಮವಿಶ್ವಾಸವೂ ಕುಗ್ಗುತ್ತದೆ. ಹೀಗಾಗಿ ಪ್ರತಿ ವ್ಯಕ್ತಿ ಜ್ಞಾನ ಸಂಪಾದನೆಗೆ ಹೆಚ್ಚಿನ ಸಮಯ ಮೀಸಲಿಡಬೇಕು. ಆತ್ಮವಿಶ್ವಾಸವಿದ್ದ ವ್ಯಕ್ತಿ ಎಂದಿಗೂ ಜೀವನದಲ್ಲಿ ಕೆಳಗೆ ಬೀಳುವುದಿಲ್ಲ. ನಮ್ಮನ್ನು ಅಪಹಾಸ್ಯ ಮಾಡುವವರನ್ನು ನಿರ್ಲಕ್ಷಿಸಿ ಮುಂದೆ ಹೋಗಬೇಕು. ನಕಾರಾತ್ಮಕ ಚಿಂತನೆ, ಸದಾ ಕೊರಗುವವರ ಸಹವಾಸ ಮಾಡಿದರೆ, ನಮಗೂ ಆ ಬೇಡದ ಯೋಚನೆಗಳೇ ಹರಡುವ ಸಾಧ್ಯತೆಗಳಿರುತ್ತವೆ. ಜತೆಗೆ ನಮ್ಮಲ್ಲಿ ಆತ್ಮವಿಶ್ವಾಸ ಕಡಿಮೆಯಾಗುತ್ತದೆ. ಅಂಥ ವ್ಯಕ್ತಿಗಳ ಸಹವಾಸದಿಂದ ದೂರವಿದ್ದು, ಸದಾ ಸಕಾರಾತ್ಮಕ ಚಿಂತನೆ ಮಾಡಿ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಬೇಕಾದ ಅಗತ್ಯತೆಯಿದೆ.
ಅವಕಾಶ ಸದ್ಬಳಕೆ ಮಾಡಿಕೊಳ್ಳಿ: ದೇವರು ನಮಗೆ ಕೊಟ್ಟಿರುವ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡರೆ ಬದುಕಿನಲ್ಲಿ ಸಾರ್ಥಕತೆ ಕಾಣಬಹುದು. ಇಂದಿನ ಯುವಪೀಳಿಗೆಗೆ ಜಗತ್ತಿನಲ್ಲಿ ಒಂದಿಲ್ಲೊಂದು ಅವಕಾಶಗಳು ಇದ್ದೇ ಇವೆ. ಆದರೆ, ಅದನ್ನು ಎಷ್ಟರ ಮಟ್ಟಿಗೆ ಅವರು ಬಳಸಿಕೊಳ್ಳುತ್ತಿದ್ದಾರೆ ಎಂಬುದರ ಮೇಲೆ ಅವರ ಜೀವನದ ಯಶಸ್ಸು ಅವಲಂಬಿತವಾಗಿರುತ್ತದೆ. ಬದುಕನ್ನು ಒಂದೇ ಕೆಲಸಕ್ಕೆ ಸೀಮಿತಗೊಳಿಸದೆ ಹೆಚ್ಚೆಚ್ಚು ಅವಕಾಶಗಳನ್ನು ಸದ್ಬಳಕೆ ಮಾಡುವತ್ತ ಗಮನಹರಿಸಬೇಕು. ವಿವಿಧ ಚಟುವಟಿಕೆಗಳಲ್ಲಿ ನಮ್ಮನ್ನು ನಾವು ಸದಾ ತೊಡಗಿಸಿಕೊಳ್ಳಬೇಕು. ಅದರಿಂದ ಹೊಸ ಹೊಸ ಚಿಂತನೆಗಳನ್ನು ಕಾಣಲು ಸಾಧ್ಯ.
(ಲೇಖಕರು ಬೆಂಗಳೂರು ನಗರ ಪೊಲೀಸ್ ಆಯುಕ್ತರು)