ವ್ಯಕ್ತಿ ಚಿನ್ನವೆಂದಾದರೆ ವ್ಯಕ್ತಿತ್ವ ಆಭರಣವಿದ್ದಂತೆ!

gold
Published on
ಚಿನ್ನ ಭೂಗರ್ಭದಡಿಯಲ್ಲಿ ದೊರಕುತ್ತದೆ. ಆದರೆ ಅದನ್ನು ಹಾಗೆಯೇ ಧರಿಸಲಾಗದು; ಕುಲುಮೆಯಲ್ಲಿ ಸುಟ್ಟು ಸಂಸ್ಕರಿಸಬೇಕು. ಸಂಸ್ಕರಿಸಿ ಅದಕ್ಕೆ ಆಕರ್ಷಣೀಯವಾದ ಆಕಾರ ರೂಪವನ್ನು ಕೊಡಬೇಕು. ಆಗ ಮಾತ್ರ ಅದು ಧರಿಸಲು ಯೋಗ್ಯ. ಅಂತೆಯೇ ಪ್ರತಿಯೊಬ್ಬ ವ್ಯಕ್ತಿಯೊಳಗೂ ಅಂತರ್ಗತವಾಗಿರುವ ದುರ್ಗಣ-ದೌರ್ಬಲ್ಯ, ಕೊರತೆ, ನ್ಯೂನತೆಗಳನ್ನು ಇನ್ನಷ್ಟು ದುರ್ಬಲಗೊಳಿಸಿ, ನಮ್ಮ ಅರಿವಿಗೇ ಬಾರದ ನಮ್ಮೊಳಗಿನ ಶಕ್ತಿ ಸಾಮರ್ಥ್ಯಗಳನ್ನು ಇನ್ನಷ್ಟು ಬೆಳೆಸಿಕೊಳ್ಳುವುದೇ ವ್ಯಕ್ತಿತ್ವ ವಿಕಸನದ ಸೂತ್ರ. ಇದನ್ನೇ ಜಗವ ತಿದ್ದುವುದಿರಲಿ ನಿನ್ನ ನೀ ತಿದ್ದಿಕೋ ಮಂಕುತಿಮ್ಮ ಎಂದರು ಡಿ.ವಿ.ಜಿ ಯವರು. ತನ್ನ ದೌರ್ಬಲ್ಯಗಳನ್ನು ದುರ್ಬಲಗೊಳಿಸುವವನೇ ಶಕ್ತಿವಂತ, ತನ್ನ ತಪ್ಪುಗಳನ್ನು ಒಪ್ಪಿಕೊಂಡು, ಅದರಿಂದ ಪಾಠ ಕಲಿತವನೇ ಬುದ್ಧಿವಂತ. ತನ್ನನ್ನು ತಾನೇ ಅರಿತುಕೊಂಡವನು ಜ್ಞಾನಿ. ಒಟ್ಟಿನಲ್ಲಿ ನಮ್ಮ ಸುಧಾರಣೆ ನಮ್ಮಿಂದಲೇ ಆರಂಭವಾಗಬೇಕು. ಜಗತ್ತಿನ ಮಹಾನ್ ಸಾಧಕರೆಲ್ಲಾ ತಮ್ಮ ಸುಧಾರಣೆಯನ್ನು ತಾವೇ ಮಾಡಿಕೊಂಡವರು. ಪ್ರತಿಯೊಬ್ಬ ವ್ಯಕ್ತಿಗೂ ತನ್ನಲ್ಲೇ ಅನೇಕ ಸುಧಾರಣೆಗಳನ್ನು ತಂದುಕೊಳ್ಳುವ ಆವಶ್ಯಕತೆ, ಅವಕಾಶಗಳು ಇದ್ದೇ ಇವೆೆ. ಇದು ವ್ಯಕ್ತಿತ್ವ ವಿಕಸನದಿಂದ ಮಾತ್ರ ಸಾಧ್ಯ. ನಾವು ಅನುಸರಿಸಬೇಕಾದ ಕೆಲವು ತತ್ವಗಳೆಂದರೆ...

1. ವೈಯಕ್ತಿಕ ಶಿಸ್ತು: ನಮ್ಮ ಸ್ವಂತ ಇಚ್ಛಾಶಕ್ತಿಯಿಂದ ನಮಗೆ ನಾವೇ ಹೇರಿಕೊಂಡು, ಪಾಲಿಸುವ ಶಿಸ್ತನ್ನು ವೈಯಕ್ತಿಕ ಶಿಸ್ತು ಎನ್ನಬಹುದು. ಹಲವರ ಬದುಕಿನ ವೈಫಲ್ಯಕ್ಕೆ ವೈಯಕ್ತಿಕ ಶಿಸ್ತು ಇಲ್ಲದಿರುವುದೇ ಕಾರಣ. ಮನಬಂದಂತೆ ಬದುಕುವುದರಿಂದ ಜೀವನದಲ್ಲಿ ಮಹತ್ತರವಾದದನ್ನು ಸಾಧಿಸಲಾಗದು. ಈ ವೈಯಕ್ತಿಕ ಶಿಸ್ತು 3 ವಿಧವಾಗಿದೆ. ದೈಹಿಕ-ಮಾನಸಿಕ ಮತ್ತು ಆಧ್ಯಾತ್ಮಿಕ. ನಿರ್ಧಿಷ್ಟವಾದ ದಿನಚರಿಯ ಪಾಲನೆ, ಸಮಯಾನುಸಾರ ಆಹಾರ ಸೇವನೆ, ನಿದ್ರೆ, ವ್ಯಾಯಾಮ, ಸಮಯ ಪಾಲನೆ, ಶ್ರದ್ಧೆಯಿಂದ ತಮ್ಮ ಕೆಲಸ ಕಾರ್ಯಗಳ ನಿರ್ವಹಣೆ, ನಮ್ಮ ನಡೆನುಡಿಯಲ್ಲಿ ಶಿಸ್ತು ಎಲ್ಲವೂ ವೈಯಕ್ತಿಕ ಶಿಸ್ತಿನ ಅಂಶಗಳು. ಈ ಶಿಸ್ತನ್ನು ಪರಿಪಾಲಿಸುವ ವ್ಯಕ್ತಿ ಆಂತರಿಕ ಶಕ್ತಿಯನ್ನು ಪಡೆಯುತ್ತಾನೆ ಹಾಗೂ ಜವಾಬ್ದಾರಿಯುತವಾಗಿ, ತನ್ನ ಪಾಲಿಗೆ ಬಂದ ಕರ್ತವ್ಯವನ್ನು ನಿಭಾಯಿಸಲು ಸಮರ್ಥನಾಗುತ್ತಾನೆ. ಇಲ್ಲದವರು ತಮಗೆ ತಾವೇ ಮಾರಕವಾಗುವುದರ ಜೊತೆ, ಸಂಸಾರಕ್ಕೂ, ಸಮಾಜಕ್ಕೂ ಕಂಟಕಪ್ರಾಯರಾಗುತ್ತಾರೆ.

2. ಆತ್ಮನಿರ್ಭರತೆ ಇಲ್ಲವೇ ಆತ್ಮವಿಶ್ವಾಸವೆಂದರೆ ತನ್ನ ಶಕ್ತಿ ಸಾಮರ್ಥ್ಯಗಳ ಬಗ್ಗೆ ತಾನೇ ತಿಳಿದುಕೊಂಡು ಸಕಾರಾತ್ಮಕ ಭಾವನೆಗಳನ್ನು ಹೊಂದಿರುವುದು. ನಮ್ಮ ಅಂತರ್​ಶಕ್ತಿಯ ಬಗ್ಗೆ ನಿಖರವಾದ ಅರಿವು ನಮಗೇ ಇದ್ದಲ್ಲಿ ಅದು ನಮ್ಮ ಆತ್ಮವಿಶ್ವಾಸವನ್ನು ಭದ್ರಗೊಳಿಸುತ್ತದೆ. ನಾವು ಏನು ಆಗಿಲ್ಲವೋ, ಅದರ ಬಗ್ಗೆ ಅರಿತುಕೊಂಡು ಏನಾಗಬೇಕೆಂದಿರುವೆಯೋ ಅದರ ಬಗ್ಗೆ ಕಾರ್ಯಪ್ರವೃತ್ತರಾರುವುದು ವ್ಯಕ್ತಿತ್ವ ನಿರ್ವಣದ ಸೂತ್ರ. ಆತ್ಮಾಭಿಮಾನವನ್ನು ಬೆಳೆಸಿಕೊಂಡು, ಜೀವನವನ್ನು ಪ್ರೀತಿಸೋದೇ ಆತ್ಮಗೌರವ. ಇದನ್ನು ಹೆಚ್ಚಿಸಿಕೊಂಡಷ್ಟು ವ್ಯಕ್ತಿತ್ವ ವಿಕಸನ ಸುಲಭ ಸಾಧ್ಯವೆನಿಸುತ್ತದೆ.

3. ಸ್ವಾಭಿಮಾನೀ, ಸ್ವಾವಲಂಬೀ ಜೀವನ, ವ್ಯಕ್ತಿತ್ವ ವಿಕಸನದ ಪ್ರತಿಫಲ. ನಮ್ಮ ಭವಿಷ್ಯ ನಮ್ಮ ಹಣೆ ಬರಹದ ಮೇಲೆ ಅವಲಂಬಿತವಾಗಿಲ್ಲ; ಹಣೆಯ ಬೆೆವರಿನ ಮೇಲೆ ಅವಲಂಬಿತವಾಗಿದೆ. ಭಗವಂತ ನಮಗೆ ಹಣೆಯನ್ನಷ್ಟೇ ಕೊಟ್ಟ; ನಮ್ಮ ಹಣೆ ಬರಹವನ್ನು ನಾವು ನಾವೇ ಬರೆದುಕೊಳ್ಳಬೇಕು. ದೇವರು ನಮಗೆ ಜೀವವನ್ನಷ್ಟೇ ಕೊಟ್ಟ; ಜೀವಿಸುವ ಬಗೆಯನ್ನ ನಮಗೇ ಬಿಟ್ಟು ಬಿಟ್ಟ. ಜೀವನವೆಂದರೆ ಒಂದು ಪುಸ್ತಕವಿದ್ದಂತೆ- ಮೊದಲ ಪುಟ ಜನನವಾದರೆ, ಕೊನೆಯ ಪುಟ ಮರಣ. ಮಧ್ಯದ ಹಾಳೆಗಳನ್ನು ನಾವೇ ತುಂಬಬೇಕು.

4. ವ್ಯಕ್ತಿತ್ವ ನಿರ್ವಣದ ಇನ್ನೊಂದು ಕಾರ್ಯಸೂಚಿಯೆಂದರೆ ಜೀವನದಲ್ಲಿ ನಾವು ಏನಾಗಬೇಕು, ಏನನ್ನು ಮಾಡಬೇಕು ಎಂಬುದರ ಬಗ್ಗೆ ಕನಸು ಕಾಣುವುದು. ತದನಂತರ ಕಂಡ ಕನಸನ್ನು ಸಾಕಾರಗೊಳಿಸುವುದು. ಇದಕ್ಕೆ ಆತ್ಮವಿಶ್ವಾಸ-ಬದ್ಧತೆ, ದೃಢತೆ, ಶಿಸ್ತು, ತಾಳ್ಮೆ ಕಾರ್ಯಸೂಚಿ ಹಾಗೂ ಕಾರ್ಯತಂತ್ರ ಬೇಕು. ಅಡ್ಡಿ ಆತಂಕಗಳು ಏಳು ಬೀಳುಗಳು ಏನೇ ಇರಲಿ, ಗುರಿ ತಲುಪುವ ಛಲ ಮಾತ್ರ ಸದಾ ಜಾಗೃತವಾಗಿರಲಿ.

5. ಪರಿಶ್ರಮ, ಪ್ರಾಮಾಣಿಕತೆ, ಪಾರದರ್ಶಕತೆ, ಮೌಲ್ಯಗಳು, ಸೃಜನಶೀಲತೆ, ಮುಕ್ತ ಮನಸ್ಸು, ನಾಯಕತ್ವ, ಸಂವಹನ, ಸಾಮರ್ಥ್ಯ ಇತ್ಯಾದಿ ಗುಣಗಳು ವ್ಯಕ್ತಿತ್ವ ನಿರ್ವಣಕ್ಕೆ ಅವಶ್ಯವಾದ ಅವಿಭಾಜ್ಯ ಅಂಶಗಳು. ವ್ಯಕ್ತಿಯ ಚರಿತ್ರೆಗಿಂತಲೂ ಆತನ ಚಾರಿತ್ರ್ಯ ಮುಖ್ಯ; ನೋಟಕ್ಕಿಂತಲೂ ನಡತೆ ಮುಖ್ಯ. ನಮ್ಮ ಆಚಾರ ಆಚರಣೆಗಿಂತಲೂ ನಮ್ಮ ವಿಚಾರಧಾರೆಗಳು ಮುಖ್ಯ. ಅವು ಉನ್ನತವಾಗಿರಬೇಕು; ವಿಶಾಲವಾಗಿರಬೇಕು. ಉತ್ತಮ ಯೋಚನೆಗಳು ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತವೆ; ಉತ್ತಮ ವ್ಯಕ್ತಿತ್ವ ಇನ್ನಷ್ಟು ಉತ್ತಮ ಯೋಚನೆಗಳನ್ನು ಹುಟ್ಟು ಹಾಕುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net